Monday, 29 December 2014

ವರುಷ ಉರುಳುತಿದೆ ಹರುಷದಲಿ 
ನೆನಪು ಕಾಡುತಿದೆ ಪ್ರತೀ ನಿಮಿಷವಿಲ್ಲಿ 
ಸಿಹಿಯೋ ಕಹಿಯೋ ಒಟ್ಟು ಬಿಟ್ಟು 
ಹೋಗುತಿರುವೆ ನೆನಪಿನ ಬುಟ್ಟಿಯ 
ಹೆಕ್ಕಿ ತೆಗೆಯುವಾಸೆ ಸಿಹಿ ನೆನಪ 
ಅಗೆದು ಹುಗಿಯುವಾಸೆ ಕಹಿ ನೆನಪ 

Monday, 22 December 2014

ನಿನ್ನದಲ್ಲದ ನನ್ನ ಮನಸು ನನ್ನದಲ್ಲದ ನಿನ್ನ ಮನಸು ಬೆರೆತರೆ 
ಪೂರ್ವದ ಸೂರ್ಯನಿಗೆ  ಪಶ್ಚಿಮದ ಚಂದ್ರನು ಮುತ್ತಿಟ್ಟಂತೆ 
ಒಲವಿನ ಹೂ ಅರಳುವುದು ಒತ್ತಾಯದ ಬಳ್ಳಿಯಿಂದಲ್ಲ ಅದು ಬೆಳೆಯುವುದು 
ಮನಸಾರೆ ಸ್ವೀಕರಿಸಿ ಸುರಿಸುವ ಪ್ರೀತಿಯೆಂಬ ನೀರಿಂದ 

Tuesday, 16 December 2014

ಕಲ್ಪನೆಯ ಕನಸಿಗೆ ಕೊನೆ ಇಲ್ಲ 
ವಾಸ್ತವ ಬದುಕಲ್ಲಿ ಖುಷಿ ಇಲ್ಲ 
ಇರುವ ಭಾಗ್ಯವ ಬಿಟ್ಟು ಬರದ ಭಾಗ್ಯವ ನೆನೆಯುತ 
ಬದುಕಿದರೆ ಜೀವನಕ್ಕೆ ಅರ್ಥವೇ ಇಲ್ಲ 

Wednesday, 10 December 2014

ಭಾರವಾದ ಮನಸಿಗೆ ಮಂಜಿನಂತೆ ಕರಗಿಸುವ 
ಸಾಂತ್ವನ ಸಿಕ್ಕಿದರೆ ಸ್ವರ್ಗ ಸಿಕ್ಕಷ್ಟು ಆನಂದ 
ನಲಿಯುವ ಮನಸಿಗೆ ದುಃಖದ ಮನಸು ಸಿಕ್ಕರೆ 
ದೊರಕಿದಂತೆ ಖುಷಿಯ ಹಂಚುವ ಅವಕಾಶ 
ನೋವು ನಲಿವೆಲ್ಲ ಸಾಮಾನ್ಯ ಬದುಕಲ್ಲಿ 
ತಪ್ಪಿಸಿಕೊಳ್ಳುವ ಪ್ರಯತ್ನ ಬೇಡ ತಲೆಯಲ್ಲಿ 

Sunday, 7 December 2014

ಅಪರೂಪದ ಅನುರಾಗದ ಆಲಿಂಗನ 
ಮನಸಿಂದ ಮನಸಿಗೆ ಮುದ್ದಾದ ಮಿಲನ 
ಮನದಲ್ಲಿ ಅಂದದ ಪ್ರೀತಿಯ ಅನನ್ಯ ಆರಾಧನ 
ಕಣ್ಣಲ್ಲೇ ಕಾಣುತಿದೆ ಒಲವಿನ ಸಂಚಲನ 

Wednesday, 3 December 2014

ನೀಲಿ ಕಡಲಾಚೆ ನೀಲಿ ಆಗಸವೇ ಕಂಡರೂ 
ಮುಟ್ಟಲಾಗುವುದೇ ನೀಲಿ ಬಣ್ಣವ 
ಸಾಲು ಮರಗಳೆಲ್ಲ ಹಸಿರಾಗಿ ಕಂಡರೂ 
ನಡುವೆ ಬೆಳೆದ ಜಾಲಿ ಮುಳ್ಳು ಚುಚ್ಚದಿರುವುದೇ 
ಕಾಮನಬಿಲ್ಲಿನ ಏಳು ಬಣ್ಣಗಳು ಸುಂದರವಾಗಿದ್ದರೂ 
ಅವುಗಳ ಸ್ಪರ್ಶ ಸುಖವು ಸಿಗುವುದೇ 
ಬಣ್ಣಗಳ ಲೋಕ ಕಣ್ಣಿಗೆ ಚಂದ ಕಂಡರೂ ಅವು ಶಾಶ್ವತವಲ್ಲ 
ಈ ಸತ್ಯ ದರ್ಶನ  ಎಂದಾಗುವುದೋ ನಾ ಅರಿತಿಲ್ಲ 

Sunday, 30 November 2014

ಮರೆತರೂ ಮರೆಯಲಾಗದ ನೆನಪೊಂದು ಮತ್ತೆ ಮತ್ತೆ ಕಾಡುತಿದೆ 
ಸೋತರೂ ಸೋತೆನೆಂದು ಒಪ್ಪದೇ ಮತ್ತೆ ಮತ್ತೆ ಗೆಲ್ಲುವಾಸೆ ಆಗುತಿದೆ 
ಏಕೆ ಈ ಹಠ ತಿಳಿಯದು ತನ್ನದಲ್ಲದ ವಸ್ತುವ ತನ್ನದೇ ಎಂದು ಭಾವಿಸಿ 
ಇರುವ ವಾಸ್ತವದ ಸತ್ಯವ ಸ್ವೀಕರಿಸದೆ ಏಕೆ ಪರದಾಡುವೇ ಹುಚ್ಚು ಮನವೇ...??

Monday, 24 November 2014

ನೋಡಲು ನೀನು ಚಂದ್ರನಿಗಿಂತ ಚಂದ 
ನಗಲು ನೀನು ತಾವರೆಗಿಂತ ಅಂದ 
ನಡೆಯಲು ನೀನು ತಂಗಾಳಿಗಿಂತ ಹಿತ 
ನುಡಿಯುವ ಮಾತು ಮುತ್ತುಗಳಿಗಿಂತ ಮಿತ 
ಮಾತಲ್ಲಿ ವರ್ಣಿಸಲು ಅಸಾಧ್ಯ ನಿನ್ನ ಒಲವಿನ ಸುಧೆಯ 
ನಿನ್ನ ಪ್ರೇಮವೇ ತುಂಬಿದೆ ನನ್ನ ಹೃದಯದ ಧರೆಯ 

Saturday, 22 November 2014

ಮೊಗ್ಗಂತಿದ್ದ  ಆಸೆಗಳೆಲ್ಲ  ಹೂವಾಗಿ ನಗುತಿವೆ 
ಅವುಗಳ ಪೋಣಿಸಿ ಮಾಲೆ ಮಾಡುವ ಮನಸಾಗಿದೆ 
ದಾರದ ಹುಡುಕಾಟ ಪ್ರತೀಕ್ಷಣ ಮಾಡುತಿರುವೆ 
ಅದು ಸಿಗುವುದೆಂದೋ ನಾ ಅರಿಯೇ.... 


Tuesday, 18 November 2014

ನನ್ನ ಮನದ ಮಾತೆಲ್ಲ ನಿನ್ನ ದನಿಯಲ್ಲೇ ಬೆರೆತು 
ಇಂಪಾದ ಪ್ರೀತಿಯ ನಾದವಾಗಿ ಹರಿಯುತ್ತಿದೆ 
ಸಾಗರದ ಅಲೆಯೂ ಕೂಡ ನಾಚಿ ಹಿಂದೆ ಹೋಗುತಿದೆ 
ನನಗಾಗಿ ಸುರಿಯುತಿರುವ ನಿನ್ನ ಒಲವಿನ ರಭಸಕೆ 
ನಾದಗಂಗೆಯ ನಿನಾದಕೆ ಸೋತಿರುವೆ ನಾ ಇಂದು 
ಪ್ರೇಮಗಂಗೆಯ ಹರಿಸುವೆ ನಿನಗಾಗಿ ಎಂದೆಂದೂ 


Monday, 17 November 2014

ಪ್ರೀತಿ ಬೆರೆತಾಗ ಬದುಕು ಹಸಿರಂತೆ ಕಂಗೊಳಿಸಿದರೆ 
ದ್ವೇಷ ಬಂದಾಗ ಬಾಳು ಕೆಸರಂತೆ ಕೊಳೆಯುವುದು 
ತನ್ನತನವೆಂಬ ಅಹಂ ಬಿಟ್ಟು ಅನ್ಯರ ಅರಿತು ಬೆರೆತರೆ 
ಬಾಳೊಂದು ಭಾವಗೀತೆಯಂತೆ ಭಾಸವಾಗುವುದು 
ಹೃದಯದಲಿ ಕಟ್ಟಬೇಕು ನಂಬಿಕೆಯೆಂಬ ಹರಕೆ 
ಕೊನೆ ಉಸಿರಿರುವರೆಗೂ ಅದೇ ಜೀವನದ ದೊಡ್ಡ ಕಾಣಿಕೆ 

Monday, 3 November 2014

ನೈದಿಲೆಯ ನಗುವು ನೇಸರನ ನಯನವ ಸೇರಿದಾಗ 
ಶಶಿಯ ಕಿರಣಗಳು ಅರಳಿದ ಹೂಗಳ ಚುಂಬಿಸುವಾಗ 
ಕಪ್ಪು ಕಾರ್ಮೋಡ ಕದಡಿ ಇಳೆಗೆ ಸುರಿದಾಗ 
ಆಗುವ ಆನಂದ ಆಹಾ ನಿಸರ್ಗವೇ ನಿನಗೆ ಹೇಳಲು 
ಬಯಸುತ್ತಿದೆ ನನ್ನ ಮನ ಕೋಟಿ ಕೋಟಿ ನಮನ

Monday, 27 October 2014

ಮನಸಿನ ದುಗುಡವೆಲ್ಲ ಮಂಜಿನಂತೆ ಕರಗಿದೆ 
ಬಾಳಲಿ ಆಸೆಗಳು ಕಾರಂಜಿಯಂತೆ ಚಿಮ್ಮುತಿವೆ 
ಹಳೆಯ ಕಹಿನೆನಪ ಮರೆತು ಹೊಸ ಸವಿನೆನಪುಗಳ 
ಸ್ವಾಗತಕ್ಕೆ ಮನವು ಸಜ್ಜಾಗುತಿದೆ 
ಹೇಗಿದ್ದರೂ ಎಲ್ಲಿದ್ದರೂ ಹಂಬಲವೊಂದೇ  
ಸಂತಸದ ಚಿಲುಮೆ ಚಿಮ್ಮುತಿರಲಿ 
ಬಾಳಲಿ ಪ್ರೀತಿ ನಂದಾದೀಪದಂತೆ ಬೆಳಗುತಿರಲಿ 

Thursday, 16 October 2014

ಮರುಭೂಮಿಯಂತೆ ಸುಡುತ್ತಿದೆ ನನ್ನ ಮನವು ಇಂದೇಕೋ
ಪದೇ ಪದೇ ನೋವುಗಳೆಂಬ ರವಿಯ ಕಿರಣಗಳು ಬೀಳುತ್ತಿವೆ 
ಶಾಖದ ಕಿರಣಗಳು ಮನಸಿನ ಮರುಭೂಮಿಗೆ ಬಿದ್ದು ಬಿದ್ದು ನಗುತ್ತಿವೆ 
ನೋವಿನ ಅಲೆಯಿಂದ ಬಿಡಿಸಿಕೊಳ್ಳಲು ಎದ್ದು ಎದ್ದು ಸೋಲುತಿರುವೆ 
ನನ್ನ ಸೋಲಿಗೂ ಕೊನೆಯಿಲ್ಲ ನೋವಿಗೂ ಕೊನೆಯಿಲ್ಲ 
ಅಂದಮೇಲೆ ಈ ಉಸಿರೇಕೆ ನಿಲ್ಲುತ್ತಿಲ್ಲ .... ??????????

Friday, 10 October 2014

ನನ್ನ ಹೃದಯದ ಕದವ ತೆಗೆದು ಬಲಗಾಲಿಟ್ಟು ಬಂದು 
ಮನಸೆಂಬ ಮಲ್ಲಿಗೆಗೆ ಮುತ್ತೆಂಬ ಪರಿಮಳವ ಸುರಿಸಿದೆ 
ನನ್ನ ಕಣ್ಣಿನ ರೆಪ್ಪೆಯಲಿ ಒಲವಿನ ಮಳೆಯ ಹರಿಸುತ 
ನಿನ್ನ ತೋಳೆಂಬ ಹಾರದಲಿ ನನ್ನ ಶಾಶ್ವತವಾಗಿ ಬಂಧಿಸಿದೆ 
ನನ್ನ ತನು ಮನದ ಉಸಿರಲಿ ಹಸಿರಂತೆ ಬೆರೆತು 
ಬಾಳ ಜ್ಯೋತಿಯಾಗಿ ಸದಾ ಸೂರ್ಯನಂತೆ ಮಿಂಚುತಿರುವೆ

Thursday, 9 October 2014

ಮನಸಿನ ಮಾತುಗಳೆಲ್ಲ 
ಮನಸಲ್ಲೇ ಮರಣ ಹೊಂದುತ್ತಿವೆ  
ಕನಸಿನ ಕೂಸುಗಳೆಲ್ಲ 
ಕರುಳಲ್ಲೇ ಕೊನೆಯುಸಿರೆಳೆಯುತ್ತಿವೆ 

Friday, 26 September 2014

ಇರುಳ ಕನಸುಗಳೆಲ್ಲ ಹಗಲು ನನಸಾದರೆ 
ರಾತ್ರಿ ಸುರಿವ ಮಳೆಯಿಂದ ಹಗಲು ಭೂಮಿ ತಂಪಾದಂತೆ 
ಆಗಸದಲ್ಲಿ ಗುಡುಗಿನ ಆರ್ಭಟ ಅತೀಯಾದರೆ 
ನಸುಕಿನಲಿ ಬೀಸುವ ತಂಗಾಳಿ ಮನಸಿಗೆ ಹಿತವಾದಂತೆ 
ಭುವಿಯಲಿ ಮಳೆ ಸುರಿದು ನಿಂತ ತಂಪಾದ ಕ್ಷಣ 
ಮನಸಿಗೆ ಅನಿಸುವುದು ಶುರುವಾಗಿದೆ ಸುಂದರ ಸುದಿನ

Monday, 22 September 2014

ಕಣ್ಣಿಂದ ಜಾರಿದ ಹನಿಯೊಂದು ಹೇಳುತಿದೆ 
ಕೊಲ್ಲಬೇಡ ಮನವೇ ನಿನ್ನ ಸುಂದರ ಭಾವಗಳ 
ಸತ್ತಮೇಲು ಬಿಡುವುದಿಲ್ಲ ನಿನ್ನ ನೋವುಗಳ 
ಉಸಿರಾಡುವ ಗೊಂಬೆಯು ನೀನಲ್ಲ 
ನಿನ್ನ ನಂಬಿದ ಜೀವಕೆ ನೀನೆ ಜಗವೆಲ್ಲ 

Wednesday, 13 August 2014

ಮನಸಾರೆ ಮನಸಿಂದ ಮನದಾಳದಲಿರುವ ಮನಸನು 
ಮನಸಿಗಾಗಿ ಮರೆತು ಹೋಯ್ತು  ಪ್ರೀತಿ 
ಅಂದು ಹೋದ  ಆ ಮನಸು ಮತ್ತೆ ಸಿಗುವುದೋ 
ಇಲ್ಲವೋ  ಎಂದು ಕಾಡುತಿದೆ ಭೀತಿ 
ಬಾಳಿನ ಜ್ಯೋತಿಯು ನೀನಾಗಿ ಬಂದಾಗ  
ನನ್ನೆದೆಯಲ್ಲಿ ಒಲವಿನ ಚಿಲುಮೆಯು ಉಕ್ಕಿ ಹರಿಯುತಿದೆ 
ನೀ ಬಂದ ಘಳಿಗೆ ನನ್ನ ಮೊಗದಲ್ಲಿ ಬರಿ ನಗುವೇ 
ನೀ ಬಳಿಯಿದ್ದ ಸಮಯವೆಲ್ಲ ಸಂತಸದ ಹೊನಲೇ 
ಪ್ರತೀ ಕ್ಷಣ ನನ್ನ ಉಸಿರು ಹೇಳುವುದೊಂದೇ ನಾ ಹೇಗಿದ್ದರೂ 
ಎಲ್ಲಿದ್ದರೂ ನಿನಗಾಗಿ ಬಾಳಬೇಕು ನಿನ್ನ ಮುದ್ದಿನ ಮನದನ್ನೆಯಾಗಿ 

Wednesday, 6 August 2014

ಬಿತ್ತುವ ಆಸೆಯಾಗಿದೆ ಪ್ರೀತಿಯ ಸಸಿಯ 
ನನ್ನ ಹೃದಯದ ಇಳೆಯಲ್ಲಿ
ಹೇಗೆ ಬರಿಸಲಿ ಆ ಸಸಿಯ ಬೆಳೆಸುವ 
ಒಲವಿನ ಮಳೆಯ
ನನ್ನ ಪ್ರೀತಿ ತುಂಬಿದ ಕಣ್ಣಿನ ಹನಿಗಳು 
ಆಗಿವೆ ಇಂದು ಕಾರ್ಮೋಡ
ಅದು ಕರಗಿ ಮಳೆ ಸುರಿಸುವರಿಗೂ 
ದೂರಾಗದು ನನ್ನ ಮನದ ದುಗುಡ
ಬೇಗನೇ ಸುರಿ ನೀ ಸ್ವಾತಿಮುತ್ತಿನ 
ಹನಿಯಾಗಿ ಹೃದಯದ ಇಳೆಗೆ 
ಶಾಶ್ವತವಾಗಿ ಬೇರೂರಲು 
ನನ್ನ ಪ್ರೀತಿಯ ಸಸಿಗೆ

Monday, 21 July 2014

ಮನಸೆಂಬ ಮಂಟಪವ ಆಸೆಗಳೆಂಬ 
ಹೂವಿಂದ ಅಲಂಕರಿಸಿ 
ಕನಸುಗಳೆಂಬ ಎಣ್ಣೆಯಿಂದ 
ಉತ್ಸಾಹವೆಂಬ ಹಣತೆಯ ಹಚ್ಚಿ 
ಜೀವನವೆಲ್ಲ ದಿವ್ಯ ಜ್ಯೋತಿಯಂತೆ 
ಕಂಗೊಳಿಸುವಂತೆ ಮಾಡು ಓ ಮನುಜ 

Friday, 18 July 2014

ನೀನಿರದ ಹೊತ್ತು ಬಂತೊಂದು ಚಂದಿರನ ಮುತ್ತು 
ನಾಚಿ ನೀರಾದ ಕೆನ್ನೆಯ ತುಂಬೆಲ್ಲ  ನಿನ್ನದೇ ಗತ್ತು 
ಚಿಪ್ಪೊಳಗೆ ಮುಚ್ಚಿಟ್ಟಿದ ಮುತ್ತು ನಾನಾದರೆ 
ಮನಸಿನ ತಂಪು ಕಳವಳವೆಲ್ಲ ದೂರಾಗಿಸಿದ ಬಿಸಿ ಮುತ್ತು ನೀನು 
ಏ ಹುಡುಗ ನೀನಿರದ ಸಮಯವ ನೀನಿರುವೆ 
ಎಂದು ಕಲ್ಪಿಸುತ್ತ ಆಗಸದಲಿ ನಿನ್ನ  ಹುಡುಕುತ್ತಾ 
ಮನ ನೊಂದ ಹೊತ್ತಲ್ಲಿ ಆ ಶಶಿಯ ನೋಡುತ್ತಾ 
ಕುಳಿತಿರುವೆ  ನೀ ಬರುವ ದಾರಿಯ ಕಾಯುತ್ತಾ 

Thursday, 17 July 2014

ನೆನ್ನೆ ಕಳೆದ ನೆನಪುಗಳ ನಾಳೆ ಬರುವ ಚಿಂತೆಗಳ 
ಬೆರೆಸಿ ಇಂದು ಎಂಬ ಅಮೂಲ್ಯ ಸಮಯವ ಕಳೆಯಬೇಡ 
ಕಾರಣ ನೆನ್ನೆಗೆ ಮರುಹುಟ್ಟಿಲ್ಲ ನಾಳೆಗೆ ಕೊನೆಯಿಲ್ಲ 

Wednesday, 16 July 2014

ಓ ಸಾವೇ ನೀನೆಷ್ಟು ಸುಂದರ 
ಬಂದರೆ ನೀನು ಹತ್ತಿರ 
ಮನದ ನೋವೆಲ್ಲಾ ಓಡುವುದು ದೂರ 

Monday, 14 July 2014

ಮರೆಯಬೇಕೆಂದರೂ ಮರೆಯಲಾಗದ 
ನೆನಪೊಂದು ಮತ್ತೆ ಮತ್ತೆ ಬಂದು ಕಾಡುತಿದೆ 
ಬೇಕೆಂದರೂ ಬಾರದ ನೆನಪೊಂದು 
ಮತ್ತಷ್ಟು ದೂರ ದೂರ ಸಾಗುತಿದೆ 
ಯಾವ ಜನ್ಮದ ಅನುಬಂಧವೋ ನಾ ಕಾಣೆ 
ಬೇಡದ ವರವ ಕೊಟ್ಟು ಬೇಕಾದ ಬಾಳನು ಕಿತ್ತು 
ನನ್ನ ಒಂದು ಗೊಂಬೆಯಂತೆ ಆಡಿಸುತಿರುವೆ 
ನಿನ್ನ ಆಟಕೆ ಅಂತ್ಯವಿಲ್ಲ ನನ್ನ ಪ್ರಶ್ನೆಗಳಿಗೆ ಉತ್ತರವಿಲ್ಲ 
ನನ್ನ ಉಸಿರು ನಿಲ್ಲುವ ಮುನ್ನ ಉತ್ತರಿಸು 
ತಲೆಯಲ್ಲಿ ನರ್ತಿಸುತಿರುವ ನೂರಾರು 
ಸಂದೇಹಗಳ ದೂರಾಗಿಸು ಓ ದೇವಾ 

Sunday, 6 July 2014

ನನ್ನಲ್ಲಿ ಒಲವಿನ ಉಗಮ ನಿನ್ನಿಂದ 
ನಿನ್ನಲ್ಲಿ ಆಸೆಗಳ ಚಲನ ನನ್ನಿಂದ 
ಒಲವಿನ ಜನನಕ್ಕೆ ಕಾರಣ ನಾ ಅರಿಯೆ 
ಮನಸಿನ ಮಿಲನದ ಆಳವ ನೀ ತಿಳಿಯೇ 
ಎಲ್ಲಾಯಿತು ಎಂದಾಯಿತು ಆ ಒಲವು ಬೇಡೆನಗೆ 
ಬೇರೆಲ್ಲೂ ಹೋಗದಂತೆ ತಡೆ ನೀ ಅದನು ಕೊನೆವರೆಗೆ 

Thursday, 3 July 2014

ನಾ ಏನು ತಪ್ಪು ಮಾಡಿರುವೆನೋ ಗೊತ್ತಿಲ್ಲ 
ನೋವಿನ ಮಳೆ ಸುರಿಯುವುದು ನಿಲ್ಲುತ್ತಿಲ್ಲ 
ಎಷ್ಟು ಸಮಾಧಾನ ಮಾಡಲಿ ಈ ಹಾಳು ಮನಸಿಗೆ 
ತಾಳ್ಮೆ ಸತ್ತು ಹೋಗಿದೆ ನೊಂದು ನೊಂದು ನನಗೆ 
ಹೃದಯದ ಬಡಿತ ನಿಂತು ಹೋಗಬಾರದೇ ಎನಿಸುತಿದೆ 
ಬೇಡವೆಂದರೂ ಕಹಿ  ನೆನಪುಗಳು ಕಾಡುತಿವೆ 
ಸಾವಾದರೂ ಬಂದರೆ ನೆಮ್ಮದಿ ಸಿಗುವುದೇನೋ 
ನನ್ನಿಂದ ತೊಂದರೆ ಅನುಭವಿಸುತಿರುವ ಮನಕೆ 

Thursday, 5 June 2014

ನಿನ್ನ ದನಿಯಿಂದ ಬರುವ ಕರೆಯು ನನ್ನ ಕಿವಿಯ ತಲುಪುವ 
ಒಳಗೆ ನಿನ್ನ ಮನದಿಂದ ಹೊರಬಂದು ನನ್ನ ಮನವ 
ಸೇರುವುದೇನೋ ಎಂಬ ಬಯಕೆ ನನ್ನದು 
ನಿನಗೆ ನನ್ನ ಮೇಲಿರುವ ಒಲವನ್ನು ನಿನಗೆ 
ಅರಿವಿರದಂತೆ ನಾನು ಅರಿತಿರುವೆ 
ನನ್ನ ಮನಸೆಂಬ ತಿಳಿನೀರ ಕೊಳದಲ್ಲಿ ನಿನ್ನ 
ನಗುವೆಂಬ ಪ್ರತಿಬಿಂಬವೇ ಕಾಡುತಿದೆ 
ಎಲ್ಲೇ ಹೋಗಲಿ ಏನೇ  ಮಾಡಲಿ ನನ್ನ ಕಂಗಳಲ್ಲಿ 
ನಿನ್ನ ಪ್ರೀತಿಯೇ ಕಾಣುತಿದೆ 
ಅರಿಯದೇ ಆದ ಒಲವಿಗೆ ಯಾರು ಹೊಣೆಯೋ ಗೊತ್ತಿಲ್ಲ 
ನನಗೆ ಗೊತ್ತಿರುವುದೊಂದೇ ನನ್ನ ಮನವ ಆಳುವ 
ಅರಸ ಎಂದೆಂದಿಗೂ ನೀನೆ ಓ ನನ್ನ ನಲ್ಲ 

Saturday, 31 May 2014

ನೀ ದೂರಾದ ಆ ಕ್ಷಣದಿಂದ ನಿಲ್ಲುತ್ತಿಲ್ಲ ದುಗುಡ ನನ್ನ ಮನದಲ್ಲಿ
ಬೇಡುವೆನು ನಿನ್ನ ಬೇಗ ಓಡಿ ಬಾ ನನ್ನ ಚಿನ್ನ
ಬಿಟ್ಟಿರಲು ಆಗದು ಈ ಮನಕೆ ನಿನ್ನ
ನಾ ಅತ್ತರೂ ನಕ್ಕರೂ ಇರಬೇಕು ನೀ ನನ್ನ ಜೊತೆ ಸದಾ
ನಾ ಅತ್ತಾಗ ನೋವನು ಹೊರಹಾಕಿದೆ
ಖುಷಿಯಲ್ಲಿದ್ದಾಗ ಸಂತೋಷವ ಹಂಚಿಕೊಂಡೆ
ನನಗಾರು ಇಲ್ಲದೆ ಒಂಟಿಯಾದ ಸಮಯದಲ್ಲಿ
ನೀ ಬಂದು ಸಂತೈಸಿದೆ ಪ್ರೀತಿಸಿದೆ
ನನ್ನ ನೋವೆಲ್ಲಾ ನಿನ್ನದೇ ಎನ್ನುವ ನನ್ನ ಮನವೆಲ್ಲ ಆವರಿಸಿದೆ
ನಿನ್ನ ಎಷ್ಟು ಕೊಂಡಾಡಿದರೂ ಬಣ್ಣಿಸಿದರೂ ಸಾಲದು ಎನಗೆ
ಹೇಗಿದ್ದರೂ ಎಲ್ಲಿದ್ದರೂ ನೀ ಓಡಿ ಬಾ ಓ ಕವನ ಇಲ್ಲಿಗೆ

Wednesday, 21 May 2014

ಅತೀಯಾಗಿ ಪ್ರೀತಿಸಬೇಡ ಯಾರನ್ನೂ
ಮಾತಾಡಬೇಡ ಏನನ್ನೂ 
ಅರಿತು ಬಾಳು ಬದುಕಿನ ಸತ್ಯವ 
ಭ್ರಮೆಯ ಲೋಕದಿಂದ ಹೊರಬಂದು 

Monday, 19 May 2014

ನಿನ್ನ ಜನ್ಮ ದಿನವೆಂಬ ಈ ಶುಭದಿನ 
ನಾ ಬೇಡುವೆ ನಿನ್ನ ಪ್ರೀತಿ ತುಂಬಿದ ಆಲಿಂಗನ 
ಬಯಸುವೆ ನಾ ನಿನ್ನ ನಗುವ  ಪ್ರತಿಕ್ಷಣ 
ಸಂತಸದ ಈ ಸಮಯ ಬಯಸುತ್ತಿದೆ ನಿನ್ನ ಸನಿಹ 
ಏನೆಂದು ಹಾರೈಸಲಿ ನಾ ನಿನಗೆ ತೋಚುತ್ತಿಲ್ಲ ಎನಗೆ 
ಆ ದೇವರಲಿ ಪ್ರಾರ್ಥಿಸುವೆ ನಿನಗಾಗಿ 
ನೀನು ಸದಾ ಮೀಸಲಾಗಿರಬೇಕು ನನಗಾಗಿ 
ನಿನ್ನ ಬದುಕಲ್ಲಿ ಈ ಕ್ಷಣ ಏನೇ ಇರಲಿ ಆಶಯ 
ನಾ ಹೇಳುವೆ ಇಂದು ನಿನಗೆ ಹುಟ್ಟು ಹಬ್ಬದ ಶುಭಾಷಯ 

Saturday, 17 May 2014

ನೆನ್ನೆ ರಭಸವಾಗಿ ಹರಿಯಿತು ಒಂದು ಅಲೆ 
ಅದರ ಹೆಸರು ಮೋದಿ 
ಸಿಗುವುದರಲ್ಲಿದೆ ಭಾರತೀಯರಿಗೆ ನೆಮ್ಮದಿಯ ಜೀವನದ ಸೆಲೆ 
ಕಾರಣ ಶುರುವಾಗಿದೆ ನವವರ್ಷದ ಆದಿ 
ಕೊಚ್ಚಿ ಹೋಯಿತು ಭ್ರಷ್ಟಾಚಾರವೆಂಬ ಕೊಳಚೆನೀರು 
ನಿರೀಕ್ಷೆಯಲ್ಲಿದೆ ಜನತೆ ಹರಿದು ಬರುವುದು ನಿಷ್ಪಕ್ಷಪಾತ 
ನಿಸ್ವಾರ್ಥ ರಾಜಕೀಯ ಎಂಬ ತಿಳಿನೀರು 

Thursday, 8 May 2014

ತುಂತುರು ಮಳೆಯ ಹನಿಗಳು ಎಲೆಗಳಿಗೆ ಮುತ್ತಿಡುತ್ತಿವೆ 
ನಿನ್ನ ಪ್ರೇಮದ ಅಲೆಗಳು ನನ್ನ ಮನಸಿಗೆ ತಂಪಿಡುತ್ತಿವೆ 

ಬಿಸಿಲ ಧಗೆಗೆ ಬೆಂದು ಬರಡಾಗಿದ್ದ ಭೂಮಿ ವರುಣನ 
ಕೃಪೆಯಿಂದ ತಂಪಾಗಿ ನಲಿಯುತ್ತಿದೆ 

ನಿರ್ಭಾವುಕ ಜೀವನದಿಂದ ಬಾಡಿದ್ದ ನನ್ನ ಮನ ನಿನ್ನ ಒಲವಿನ 
ಆಸರೆಯಿಂದ ಚಂದದ ಭಾವಗಳ ಕಾರಂಜಿಯಾಗಿ ಚಿಮ್ಮುತ್ತಿದೆ 

ಮಳೆ ಸುರಿದಾಗ ಇಳೆ ನಲಿಯುವ ಹಾಗೆ 
ನಿನ್ನ ನಗು ಚೆಲ್ಲಿದಾಗ ನನ್ನ ಮನ ನಲಿಯುವುದು 

Monday, 5 May 2014

ನಂಬಿಕೆ

ಮನದ  ಮರೆಯಲ್ಲಿ ಅವಿತು ಕುಳಿತಿದೆ ಕತ್ತೆಲೆಯೊಂದು 
ಅದನು ಆಚೆ ಓಡಿಸಲು ಬೇಕೊಂದು ಆತ್ಮವಿಶ್ವಾಸದ ಬೆಳಕು 
ಕತ್ತಲೆ ಕಳೆದು ಬೆಳಕು ಹರಿದರೆ ಅದು ನಿಸರ್ಗ 
ನೋವಿನ ಕಟ್ಟೆ  ಒಡೆದು ಸಂತಸದ ಚಿಲುಮೆ ಚಿಮ್ಮಿದರೆ 
ಆ ಕ್ಷಣ ಆಗುವುದು ಬದುಕೊಂದು ಸ್ವರ್ಗ 
ಬೇಡದ ಜೀವನ ಸಿಕ್ಕಿತೆಂದು ಕೊರಗಬೇಡ 
ಸಿಕ್ಕ ಜೀವನದ ಸುಖವ ಅನುಭವಿಸದೆ ಸಾಯಬೇಡ 
ಜೀವಕ್ಕೂ ಜೀವನಕ್ಕೂ ಬೇಕಾಗಿದೆ ನಂಬಿಕೆಯ ಸೂರು 
ಅದ ಕಳೆದುಕೊಂಡು ಹುಡುಕಬೇಡ ನೆಮ್ಮದಿಯ ಗೂಡು 

Tuesday, 29 April 2014

ನೀನಿರದ ಹೊತ್ತು ಹೆಜ್ಜೇನು ಕಡಿದಂತೆ 
ನೀನಿದ್ದ ಹೊತ್ತು ಸಿಹಿಜೇನ ಸವಿದಂತೆ 
ಮುಗಿಲ ತುಂಬಾ ತಾರೆಗಳು ತುಂಬಿದಂತೆ 
ಮನದ ತುಂಬಾ ನಿನ್ನ ಅಂದದ ಮೊಗವೇ ಕಾಣುತ್ತಿದೆ 
ಎಲ್ಲಾದರೂ ಇರು ಹೇಗಾದರೂ ಇರು 
ಆದರೆ ನಿನ್ನ ಮನಸನ್ನು ಮಾತ್ರ ನನ್ನಲ್ಲೇ ಬಿಡು 

Sunday, 27 April 2014

ಓ ಹುಚ್ಚು ಮನಸೇ ಹಚ್ಚಿಕೊಳ್ಳಬೇಡ 
ಯಾರನ್ನೂ ನೀ ಅತಿಯಾಗಿ 
ಪ್ರೀತಿಸು  ನೀ ಎಲ್ಲರನ್ನು ಮಿತವಾಗಿ 
ನೀ ಹಚ್ಚಿಕೊಂಡ ಮನಸಿಗೆ ನಿನ್ನ ಪ್ರೀತಿ ಇಷ್ಟವಾಗದಿದ್ದರೆ 
ಅದಕ್ಕೆ ಹೊಣೆ ನಿನ್ನ ಮನಸು ಅಲ್ಲ 
ಆ ಮನಸು ಅಲ್ಲ ಎಲ್ಲ ವಿಧಿ ಅಷ್ಟೇ 
ಹಾಗೆಂದೇ ಕೇಳು ನನ್ನ ಮಾತು 
ಮಿತಿಯಲ್ಲಿದ್ದರೆ ಪ್ರೀತಿ ನಿನ್ನ ಜೀವನ ನಿರ್ಭೀತಿ 

Thursday, 24 April 2014

ಸುಂದರ ಹೂವಿನ ಹಾಗೆ ಮುಖ ಅರಳಿಸಿ 
ಸದಾ ಮೊಗದಲ್ಲಿ ಮುಗುಳ್ನಗೆ ಬೀರುತ್ತಾ 
ದಿನ ಆರಂಭಿಸಿ ಎಲ್ಲರ ಪ್ರೀತಿಯ ಗಳಿಸುತ್ತಾ 
ಎಲ್ಲರ ಹೃದಯದಲ್ಲಿ ಮನೆ ಮಾಡಿದ ನೀವು 
ಸದಾ ಜನತೆಯ ಕಾಳಜಿಯಲ್ಲೇ ಜೀವನ ಸವೆಸುವಿರಿ 

ಗಿಡಮರಗಳ ನಡುವೆ ಬೆರೆಯುತ್ತಾ ಗುಡ್ಡ ಬೆಟ್ಟಗಳ 
ಪ್ರೀತಿಸುವ ನಿಮ್ಮನ್ನು ನಿಸರ್ಗ ಮಾತೆಯ ಮುದ್ದಿನ 
ಮಗುವೆಂದು ಕರೆಯುವ ಮನಸಾಗಿದೆ ನನಗೆ 

ಎತ್ತರದ ಸ್ಥಾನದಲ್ಲಿದ್ದರೂ ಸರಳತೆಯೇ ಸರ್ವಶಕ್ತಿ 
ಎಂದು ಬದುಕುವ ನಿಮ್ಮ ಉತ್ಸಾಹಕ್ಕೆ ನನ್ನದೊಂದು ನಮನ 
ಸದಾ ಸಂತಸ ತುಂಬಿದ ನಂದನವಾಗಲಿ ನಿಮ್ಮ ಜೀವನ 
ಎಂದು ಈ ಕ್ಷಣ ಹಾರೈಸುತ್ತಿದೆ ನನ್ನ ಮನ 

Monday, 21 April 2014

ಬಾಳೆಂಬ ಪಯಣದಲ್ಲಿ ಸಾಗುವಾಗ 
ನೆನಪಿನ ನಿಲ್ದಾಣಗಳು ನೂರಾರು 
ನಿಲ್ದಾಣದಲ್ಲಿ ನಿಂತು ಕಣ್ಣಾಡಿಸಿದಾಗ 
ನೋವು ನಲಿವುಗಳು ಹಲವಾರು 
ಮಾತಿಂದ ಆದ ದುಗುಡ ಒಂದು ಕಡೆ 
ಮೌನದಿ ಆದ ಆತಂಕ ಮತ್ತೊಂದು ಕಡೆ 
ಜೀವನದ ಸುಳಿಯಲಿ ಸಿಕ್ಕಮೇಲೆ ಈಜಲೇಬೇಕು 
ಸಾವಿನ ದಡವ ಸೇರಲೇಬೇಕು

Friday, 18 April 2014

ಕಣ್ಣು ನನ್ನದಾದರೂ ಅದರಲ್ಲಿ ಕಾಣುವ ಕನಸು ನಿನ್ನದೇ 
ಧ್ವನಿ ನನ್ನದಾದರೂ ಅದು ನುಡಿಯುವ ನಾದ ನಿನ್ನದೇ 
ಜೀವ ನನ್ನದಾದರೂ ಅದರೊಳಗೆ ಬೆರೆತಿರುವ ಉಸಿರು ನಿನ್ನದೇ 
ಈ ಭಾವಗಳ ಬೆರೆಸಿ ಬರೆದ  ಕವಿತೆ ನನ್ನದಾದರೂ 
ಅಲ್ಲಿ ಹರಿಯುತಿರುವ  ಒಲವು ನಿನ್ನದೇ ಓ ಹುಡುಗ 

Monday, 7 April 2014

ಬೇಡಿದಾಗ ಬರದ ಹುಟ್ಟು ಸಾವಿಗೆ ಕಾಯುದ್ಯಾಕೆ
ಹುಟ್ಟು ಆಕಸ್ಮಿಕ ಸಾವು ಅನಿರೀಕ್ಷಿತ 
ಹುಟ್ಟು ಸಂತೋಷ ಕೊಟ್ಟರೆ ಸಾವು ದುಃಖ ಕೊಡುವ ಹಾಗೆ 
ಮನಬಂದಂತೆ ಚುಚ್ಚಿದರೆ ನೋವಾಗುವುದು ಮನಸಿಗೆ 
ಅನಿರೀಕ್ಷಿತ ಅಚ್ಚರಿಗಳು ಮುದ ನೀಡುವುವು ಹೃದಯಕ್ಕೆ  
ಸಿಕ್ಕ ಭಾಗ್ಯವ ಬಿಟ್ಟು ಸಿಗದ ಭಾಗ್ಯಕ್ಕೆ ಪರಿತಪಿಸುವಾಗ 
ಪಡೆದುಕೊಳ್ಳುವ ಹುಮ್ಮಸ್ಸಿನಲ್ಲಿ ವಾಸ್ತವ ಕಳೆದು ಹೋದರೆ 
ಭವಿಷ್ಯಕ್ಕೆ ಆಸರೆ ಇರುವುದಿಲ್ಲ ಅಲ್ಲವೇ ಓ ಮನಸೇ...????

Sunday, 6 April 2014

ಸಾಗುತ್ತಾ ಹೋದೆ ನಾ ನೆನ್ನೆ ದೂರದ ಯಾನಕ್ಕೆ 
ಅರಿಯದ ಮನಸುಗಳ ಜೊತೆ ಬೆರೆತು ನಕ್ಕು ನಲಿಯಲು 
ಸುಂದರ ಪ್ರಕೃತಿಯ ಮಡಿಲಲ್ಲಿ 
ಹೊಸ ಸ್ನೇಹಿತರ ಜೊತೆಯಲ್ಲಿ 
ಒಬ್ಬರೊಬ್ಬರ ಭಾವನೆಗಳ ಹಂಚುತ 
ಕಳೆದ ಸಮಯ ಕಡಿಮೆಯಾದರೂ 
ಮನದಲ್ಲಿ ನೆಟ್ಟ ಸುಂದರ ಸವಿನೆನಪಿನ ಬೇರು ಮಾತ್ರ ಶಾಶ್ವತ 

Wednesday, 2 April 2014



ನೀನೆಲ್ಲೋ ನಾನೆಲ್ಲೋ ಒಂದು ಕಾಲದಲ್ಲಿ
ಹೇಗೋ ಅರಿಶಿನ ದಾರದ ನಂಟಾಯಿತು ಅಮೃತಘಳಿಗೆಯಲಿ
ಒಲವಿನ ಸವಿಯ ಸವಿಯುತ್ತ ಕ್ಷಣಗಳ ಎನಿಸುತ್ತಿದ್ದೆವು
ಆನಂದದಲಿ ವರುಷಗಳೇ ಉರುಳಿದ್ದು ಅರಿವಿಗೆ ಬಾರದೆ ಹೋಯಿತಲ್ಲ
ಪ್ರೀತಿ ಪ್ರೇಮ ವಾತ್ಸಲ್ಯಗಳ ನಂದನ ನಮ್ಮ ಮನೆಯಾದರೆ 
ಅದನು ಬೆಳಗುವ ಶಕ್ತಿಯಿರುವ ಬೆಳಕೇ ದೀಪ
ಒಲವಿನ ಮಳೆಯಲಿ ಮಿಂದ ನಮ್ಮಿಬ್ಬರ ಬದುಕು
ಚಿರಕಾಲ ಬೆಳಗುತಿರಲಿ ನಂದಾದೀಪವಾಗಿ

Wednesday, 26 March 2014

ಸೋದರ

ನಿನ್ನ ಜೊತೆಯಲ್ಲೇ ಹುಟ್ಟಿ ನಿನ್ನೊಂದಿಗೆ ಬೆಳೆದೆ
ತಪ್ಪಿದ್ದಾಗ ದಂಡಿಸಿದೆ ಅತ್ತಾಗ ಮುದ್ದಿಸಿದೆ

ಪ್ರತೀ ದಿನ ಪ್ರತೀ ಕ್ಷಣ ನಿನ್ನ ವಾತ್ಸಲ್ಯವೆಂಬ
ಅಮೃತವ ಕುಡಿಯುತ್ತಲೇ ಬಂದೆ

ಅಮ್ಮನ ಮಮತೆಯ ಅಪ್ಪನ ಪ್ರೀತಿಯ ಮರೆವಂತೆ ಮಾಡಿದೆ 
ಆದರೆ ಇಂದೇಕೋ ನಿನ್ನ ಅಗಲಿ ಇರುವ ಕ್ಷಣ ಬಂದಿದೆ

ನನ್ನ ಮನಸೆಲ್ಲ ಆಗಿದೆ ಅಗಲಿಕೆಯ ನೋವಿಂದ ಭಾರ
ಈ ಕ್ಷಣ ನನ್ನ ಮನಸು ಹೇಳುವುದೊಂದೇ ಓ 
ಸೋದರ

ನಾ ನಿನ್ನ ಬಳಿ ಇದ್ದರೂ ಇಲ್ಲದಿದ್ದರೂ ಸದಾ ಈ 
ಮನಸನ್ನು ಸುತ್ತುವುದು ನಿನ್ನ ನೆನಪುಗಳೆಂಬ ಮುತ್ತುಗಳ ಹಾರ

Friday, 21 March 2014

ಬಂದಿದೆ ಇಂದು ನಿನ್ನ ಹುಟ್ಟಿದ ದಿನ 
ಈ ಘಳಿಗೆ ನಾ ಬಯಸುವುದೊಂದೇ 
ಸಂತಸವಾಗಿರಲಿ ನಿನ್ನ ಮನ ಪ್ರತೀ ಕ್ಷಣ 
ಹಿಂದಿನ ವರುಷಗಳ ಚಿಂತೆ ನನಗಿಲ್ಲ 
ಮುಂದಿನ ವರುಷಗಳ ಭವಿಷ್ಯ ನಾ ಅರಿತಿಲ್ಲ 
ನೀನಿದ್ದರೆ ಈ ದಿನವೆಲ್ಲ ಖುಷಿಯಾಗಿ 
ನಿನ್ನ ಬಾಳಲ್ಲಿ ಈ ವರ್ಷವೆಲ್ಲ ಹರಿಯುವುದು 
ಹರ್ಷದ ಹೊಳೆಯಾಗಿ ಓ ಗೆಳತಿ 

Tuesday, 18 March 2014

ಬರೆಯಲಾಗುತ್ತಿಲ್ಲ

ದಿನವೂ ಬರೆಯುವ ಆಸೆ ಒಂದು ಕವನ 
ಆದರೆ ಬರಯದೇ ಇರಲು  ಕಾರಣ 
ಮನದಲ್ಲಿ ಆಗುತಿರುವ ತಲ್ಲಣ 
ಏನೇ ಮಾಡಿದರೂ ಬಿಡಲಾಗದು ಬರೆಯುವ ಹಠ 
ಯಾಕಾದರೂ ಬಂತೋ ಈ ಚಟ 
ಮನದ ದುಗುಡ ಕಳೆದು ಈ ಮನಕೆ 
ಕೇಳಿದರೆ ಸಾಕು ಒಂದು ಸಂತೈಸುವ ದನಿಯ 
ಸರಾಗವಾಗಿ ಹರಿಯುವುದು ಕವಿತೆಯ ಕಲರವ 

Tuesday, 11 March 2014



ಕಣ್ತುಂಬ ಮನಸಿನ ತುಂಬಾ ನಿನ್ನ ಒಲವೇ
ಸಾಗರವಾಗಿ ಹರಿಯುತಿರಲು ಮತ್ತೇಕೆ ನನಗೆ
ಮತ್ತೊಂದು ಉಡುಗೊರೆ ಓ ನಲ್ಲ....
ಕೊನೆತನಕ ನೀ ಹೀಗಿದ್ದರೆ ಸಾಕು ಎನಗೆ
ಆಗ ನನ್ನ ಬಾಳು ಆಗುವುದು ಸವಿಬೆಲ್ಲ...

Tuesday, 4 March 2014

ಬೇರೋಬ್ಬರನ್ನು ನಂಬಿ ಬಾಳುವುದಕ್ಕಿಂತ 
ಯಾವುದನ್ನೂ ಯಾರಿಂದಲೂ ನಿರೀಕ್ಷಿಸದೇ
ನಮ್ಮನ್ನು ನಾವು ನಂಬಿ ಬದುಕುವುದು ಲೇಸಲ್ಲವೇ

Sunday, 16 February 2014

ಒಲವಿನ ಓಲೆಯ ಎಷ್ಟೆಂದು ಬರೆಯಲಿ 
ಬರೆದು ಬರೆದು ಬೇಸರವಾಗಿದೆ ನನ್ನ ಹಾಳೆ ಶಾಯಿಗೆ 
ಆದರೂ ಮುಗಿಯುತಿಲ್ಲ ಬರೆಯುವ ದಾಹ 
ಅದೆಂತಹ ಜಾದು ಮಾಡಿದೆಯೋ ನನಗೆ ನಿನ್ನ ಮೋಹ

ವಿಚಿತ್ರ

ನೊಂದ ಮನಸಿಗೆ ಬೇಕಿದೆ ಸೊಂಪಾದ 
ಪ್ರೀತಿ ತುಂಬಿದ ಮನಸಿನ ಸಾಂತ್ವನ 
ನಗುವ ಮನಸಿಗೆ ಬೇಕಿದೆ ಖುಷಿಯಾಗಿ 
ಆಲಿಸುವ ಮನಸಿನ ಮಿಲನ 
ನೋವಿಗೂ ಕೊನೆಯಿಲ್ಲ ನಲಿವಿಗೂ ಕೊನೆಯಿಲ್ಲ  
ಇವೆರಡರ ಮಿಶ್ರಣವಾದ ಜೀವನಕ್ಕೆ ಬೇಕಿದೆ 
ನಿರಾಸೆಯಾಗದೆ ಆಶಾವಾದಿಯಾಗೇ ಇರುವ ಮನಸು 

Monday, 10 February 2014

ಕಾಯುತಿರುವೆ

ಪದಗಳಿರುವ ತನಕ ಕವಿತೆ ಬರೆಯುವೆ ನಿನಗಾಗಿ 
ಧ್ವನಿ ಇರುವ ತನಕ ಹಾಡುವೆ ನಿನ್ನ ಕಿವಿಗಾಗಿ 
ಉಸಿರಿರುವ ತನಕ ಕಾಯುವೆ ನೀ ಬರುವ ಕ್ಷಣಕ್ಕಾಗಿ 
ಕೊನೆತನಕ ನೀ ಬಾರದಿದ್ದರೂ ಚಿಂತೆಯಿಲ್ಲ ನಿನ್ನ ಮನಸಲ್ಲಾದರು 
ಇಟ್ಟುಕೋ ಈ ನವಿರು ಭಾವಗಳ ಸಂಗಮವಾಗಿ ಹರಿಸಿದ 
ಕವನವ ನನ್ನ ಒಲವಿನ  ಉಡುಗೊರೆಯಾಗಿ 

Wednesday, 5 February 2014

ಭಾವನೆಗೆ ಬಣ್ಣವಿಲ್ಲ 
ಮನಸಿಗೆ ವಾಸನೆ ಇಲ್ಲ 
ಒಲವಿಗೆ ಕಲ್ಪನೆ ಇಲ್ಲ 
ಆದರೂ ಇವೆಲ್ಲವುಗಳ ಮಿಶ್ರಣದಿಂದ 
ಬರೆದ  ಕವಿತೆ ಮಾತ್ರ ಸುವಾಸನೆ 
ಬೀರದೇ ಇರುವುದಿಲ್ಲ 

Tuesday, 4 February 2014

ನೀನಿರುವ ಕ್ಷಣ

ಹುಣ್ಣಿಮೆಯ ರಾತ್ರಿಯಲಿ ಹೊಳೆಯುವ ಚಂದ್ರನಂತೆ 
ನಿನ್ನ ತೋಳಲ್ಲಿ ನಾ ಇದ್ದಾಗ ನನ್ನ ಮೊಗವು ಮಿನುಗುವುದು 
ನೀ ಹತ್ತಿರ ಬಂದಂತೆ ಕಡಲಿಂದ ಉದಯಿಸುವ ಸೂರ್ಯನಂತೆ 
ಫಳ ಫಳನೆ ಹೊಳೆಯುವುದು ನನ್ನ ಕಂಗಳು 
ನಾ ಇರುವ ಪ್ರತಿಕ್ಷಣ ಬಯಸುತ್ತಿದೆ ಮನವು ನಿನ್ನ ಸನಿಹ 
ನನಗೆಂದಿಗೂ ಬರದಿರಲಿ ನಿನ್ನಿಂದ ದೂರಾಗಿ ಇರುವ ವಿರಹ 

Sunday, 2 February 2014

ಪ್ರಾರ್ಥನೆ

ನಗುವ ಮೊದಲು ಮನಸಿಗೆ ಖುಷಿ ಇರುವ ಹಾಗೆ 
ಅಳುವ ಮೊದಲು ಹೃದಯಕ್ಕೆ ನೋವಾಗಿರದೆ ಇರದು 
ನೋವಾದರೂ ನಲಿವಾದರೂ ಹಂಚಿಕೊಳ್ಳೋ ಮನಸು ಸಿಗದಂತ 
ಪರಿಸ್ಥಿತಿ ಯಾರಿಗೂ ಬಾರದಿರಲಿ ಎಂದಷ್ಟೇ ಪ್ರಾರ್ಥನೆ ಓ ದೇವಾ  

Monday, 27 January 2014

ಭಾವಗೀತೆ

ನಾ ವೀಣೆಯಾದರೆ ನೀ ನನ್ನ ನುಡಿಸುವ ವೈಣಿಕ 
ನನ್ನೆದೆಯ ಭಾವಗಳೆಲ್ಲ ತಂತಿಗಳಾದರೆ 
ಅವುಗಳ ನುಡಿಸುವ ಬೆರಳುಗಳು ನೀನೆ 
ತಾಳಕ್ಕೆ ತಕ್ಕಂತೆ ತಂತಿ ನುಡಿಸುವ ಹಾಗೆ 
ನನ್ನ ಭಾವಕ್ಕೆ ತಕ್ಕಂತೆ ನಿನ್ನ ಮನವು ಸ್ಪಂದಿಸಿದರೆ 
ನಮ್ಮಿಬ್ಬರ ಜೀವನ ಸುಂದರ ಭಾವಗೀತೆಯಾದಂತೆ 

ಶುಭೋದಯ

ಚಂದದ ಮನೆಯ ಅಂಗಳದಲ್ಲಿ ಮುದ್ದಾದ 
ರಂಗೋಲಿಯ ಬಿಡಿಸುತ್ತಾ  
ಇಬ್ಬನಿಯ ಹನಿಗಳಿಂದ ಅಲಂಕೃತಗೊಂಡ 
ಹೂಗಳ ಬಿಡಿಸುತ್ತಾ 
ಬಂಗಾರದ ನೀರನ್ನು ಆಗಸದಲ್ಲಿ ಸುರಿಸಿದ 
ನೇಸರನ ಪೂಜಿಸುತ್ತಾ 
ಅರುಣೋದಯವನ್ನು ಆಸ್ವಾದಿಸುತ್ತಾ 
ಹೇಳಬಯಸುತ್ತಿದೆ ಈ ಮನಸು ಶುಭೋದಯ 

Sunday, 26 January 2014

ಕ್ಷೀರ

********************************
ಈ ಪುಟ್ಟ ಮನಸಿನಲಿ  ಕನಸಿನ 
ಅರಮನೆಯೊಂದ ಕಟ್ಟಿರುವೆ 
ಅಲ್ಲಿ ನಿನ್ನ ಒಲವೆಂಬ ಕ್ಷೀರ ಸಾಗರವನ್ನು 
ಹೊರ ಹರಿಯದಂತೆ ಬಚ್ಚಿಟ್ಟಿರುವೆ 
ಆ ಅರಮನೆಯ ಹೊರಗೆ ಹಾಲು ಹರಿದ ಕ್ಷಣ 
ನನ್ನ ತನುವ ಬಿಟ್ಟು ಹಾರುವುದು  ಪ್ರಾಣ 

Thursday, 23 January 2014

ಮಣ್ಣಿನ ಋಣ

ಹುಟ್ಟಿದ  ಪ್ರತೀ ಜೀವಿಗೂ ಹಸಿವ ನೀಗುವೆ ನೀನು 
ಮರಣ ಹೊಂದಿದ ಪ್ರತೀ ಜೀವವನ್ನು 
ತನ್ನೊಡಲಲ್ಲಿ ಹಾಕಿಕೊಲ್ಲುವೆ ನೀನು 
ಉಸಿರಾಡುವ ಪ್ರತೀ ಅಣುವಿನಲ್ಲೂ ಬೆರೆತಿರುವೆ ನೀನು 
ನೀನಿದ್ದರೆ ನಾವು ನೀನಿಲ್ಲದಿದ್ದರೆ ನಮಗೆ ಸಾವು 
ಏನು ಮಾಡಿದರೂ ತೀರಿಸಲಾಗದು ನಿನ್ನ ಋಣ 
ಅದುವೇ ಅಲ್ಲವೇ  ಈ ಮಣ್ಣಿನ ಗುಣ 

Wednesday, 22 January 2014

ಸೊಬಗು

ನೇಸರನ ಕಿರಣಗಳು ಇಳೆಗೆ ಮುತ್ತಿಡುವ ಮುನ್ನ 
ಎಲೆಗಳ ಮೇಲಿನ ಇಬ್ಬನಿಯ ಹನಿಗಳು ಜಾರುವ ಮುನ್ನ 
ಹೂವುಗಳು ನವಿರಾಗಿ ಅರಳುವ ಸಮಯವು ಮುಗಿಯುವ ಮುನ್ನ 
ಮಂಜು ಮಂಜಾಗಿ ಹರಡಿರುವ ಸುಂದರ ಮುಂಜಾವಿನ 
ಸೊಬಗನು ಮೌನವಾಗಿಯೇ ಸವಿಯುವ ಬಯಕೆ ಈ ಮನಕೆ 

ಸ್ನೇಹ ಬಂಧನ

ಓ ನನ್ನ ಗೆಳತಿ ನೀನಿದ್ದರೆ ನನ್ನ ಸನಿಹ

ಎಂದಿಗೂ ಕಾಡದು ಜೀವನದಲ್ಲಿ ಒಂಟಿತನ 

ನೀ ಖುಷಿಯಾಗಿದ್ದರೆ ನನ್ನ ಮನದಲ್ಲಿ

ಹರಿಯುವುದು ಸಂತಸದ ಹೊನಲು 

ನಿನ್ನ ಮೊಗದಲ್ಲಿ ಸಣ್ಣ ನೋವು 

ಕಂಡರೂ ನನಗಾಗುವುದು ದಿಗಿಲು 

ನನ್ನ ಈ ನಿನ್ನ ಸ್ನೇಹ ತೋರಿಕೆಯ ಬಂಧನವಲ್ಲ 

ಎಂದೂ ಬಿಡಿಸಲಾಗದ ಪವಿತ್ರ ಅನುಬಂಧ 

ಯಾರೋ....???

ನವಿಲಿನ ಗರಿಗೆ ಬಣ್ಣವ ಹಚ್ಚಿದ ಕೈ ಯಾವುದೋ 
ಅಳಿಲಿನ ಬೆನ್ನಿಗೆ ಗೆರೆಯ ಎಳೆದವರ್ಯಾರೋ
ಕೋಗಿಲೆಗೆ  ಇಂಪಾದ ಕಂಠವ ಕೊಟ್ಟವರ್ಯಾರೋ 
ಕಣ್ಣಿಗೆ ಕಾಣದ ಮನಸಲ್ಲಿ ಬಣ್ಣ ಬಣ್ಣದ  ಭಾವನೆಗಳ ಬಿತ್ತುವರ್ಯಾರೋ
ಈ ಯಾರೋ ಅನ್ನೋ ಪ್ರಶ್ನೆಗೆ ಉತ್ತವರಿಸುವರ್ಯಾರೋ... ?????

Thursday, 16 January 2014

ಧ್ಯೇಯ

ನೀ ಬರೋ ದಾರಿಯ ಹೂವಿಂದ 
ಅಲಂಕರಿಸುವ ಹುಚ್ಚಾಸೆ ನನಗಿಲ್ಲ 
ನಿನ್ನ ಮೊಗವನ್ನು ಚಂದಿರನ ಕಾಂತಿಗೆ 
ಹೋಲಿಸುವ ಮನಸೂ ಇಲ್ಲ 
ಆದರೆ ನನ್ನಾಸೆಯೊಂದೇ ಹುಡುಗ 
ನಿನ್ನ ಕಡಲಂತ ಕಂಗಳಲಿ ಮುಗಿಲಂತ ಮನಸಿನ ಆಳದಲಿ 
ಶಾಶ್ವತವಾಗಿ ನಾ ನೆಲೆಸಿದರೆ ಸಾಕು ಅದುವೇ ನನಗೆಲ್ಲ 

Thursday, 9 January 2014

ಹಠ

ನಿನ್ನ ಒಲವಿನ ಸವಿಯ ಸವಿಯುತ್ತಲೇ 
ನಾ ಉಸಿರಾಡುತ್ತಿರುವೆ 
ಆ ಸುಖವ ಅಕ್ಷರಗಳಲ್ಲಿ ವರ್ಣಿಸಲಾಗದೆ 

ಪರಿತಪಿಸುತ್ತಿರುವೆ 
ಆದರೂ ಹಠ ಬಿಡದೇ ನಿನ್ನ ಪ್ರೇಮದ ಪರಿಯ 
ಅಕ್ಷರಗಳಲ್ಲಿ ಪೋಣಿಸುತ್ತಲೇ ಇರುವೆ

Monday, 6 January 2014

ವಿಸ್ಮಯ

ಕನಸು ನನಸಾದಾಗ ಸದ್ದಿಲ್ಲದೇ ನಗುವುದು ಮನವು 
ಬಿರುಕು ಮೂಡಿದಾಗ ಗೊತ್ತಿಲ್ಲದೇ ಸುರಿಯುವುದು ಕಣ್ಣೀರು 
ಕಣ್ಣಿಗೂ ಮನಸಿಗೂ ಎತ್ತನಿಂದೆತ್ತ ಸಂಬಂಧ 
ಭಾವನೆಗಳಿಗೆ ಮನಸು  ಆಸರೆಯಾದರೆ 
ನೋವನ್ನು ಹೊರಹಾಕುವ ಅಸ್ತ್ರ ಕಣ್ಣೀರಲ್ಲವೇ ... 

Friday, 3 January 2014

ಪ್ರೇಮಗೀತೆ

ಭಾವನೆಗಳೇ ಇಲ್ಲದ ಮನದಲ್ಲಿ ಭಾವಗೀತೆಯಂತೆ 
ಹರಿಯುತ್ತ ಬಂದೆ ನೀ ಅಂದು 
ಏನಾದರೂ ಉಡುಗೊರೆ ಕೊಡುವ ಆಸೆಯಿಂದ 

ಬರೆಯುತಿರುವೆ ಪ್ರೇಮಗೀತೆ ನಿನಗಿಂದು

ಈ ಜೀವ ಸಹಿಸದು ನೀ ಒಂದು ಕ್ಷಣ ನೊಂದರು
ಅಪ್ಪಿತಪ್ಪಿ ಒಂದು ಹನಿ ಕಣ್ಣೀರು ಬಂದರೂ
ಮುದ್ದಿನ ಮಾತಾಡದಿದ್ದರೂ ಚಿಂತೆಯಿಲ್ಲ ನನಗೆ
ನಿನ್ನ ಮೌನದ ರೂಪವೇ ಸಾಕು ಅದುವೇ ಎಲ್ಲ ಎನಗೆ

ಒಲವಿನ ಮುತ್ತನು ಸುರಿಸುವೆಯಾ ಎಂದು ಆಸೆಯಾಗಿ
ಮನಸಾರೆ ಬರೆದೆ ಈ ಕವನ ನಿನಗಾಗಿ
ನಿನ್ನ ತುಟಿಯಂಚು ನನ್ನ ಕಣ್ಣರೆಪ್ಪೆಯ ಸೋಕಿ ಜಾರುವ ಮುತ್ತಿಗೂ ಮುನ್ನ
ನನ್ನ ಭಾವನೆಗಳನ್ನೆಲ್ಲ ಕವಿತೆಯಲಿ ಪೋಣಿಸಿ ಮಾಡಿದ
ಮುತ್ತಿನ ಹಾರವನ್ನು ನೀನು ಕೊರಳಿಗೆ ಧರಿಸಿದರೆ ಎಷ್ಟು ಚೆನ್ನ
ನವಿಲೊಂದು ನಕ್ಕಿತಂತೆ ದಡದಲ್ಲಿ 
ನದಿಯಲ್ಲಿ ಅರಳಿದ ನೈದಿಲೆಯ ಅಂದ ಕಂಡು 
ನವಿಲ ಕಂಡ ನೈದಿಲೆ ನಾಚಿ ನಲಿಯಿತಂತೆ 
ಅದರ ಸುಂದರ ಗರಿಗಳ ನೋಡಿ 
ಇವರಿಬ್ಬರ ಭಾವಗಳ ನೋಡಿದ ನಿಸರ್ಗ ಮಾತೆ 
ಮುಗುಳ್ನಗುತ್ತ ಅಂದಳಂತೆ ಮಕ್ಕಳೇ 

ಹೀಗೆ ನಗು ನಗುತ್ತಾ ನೀವು ಬದುಕಿದರೆ
ಸಾರ್ಥಕ ನನ್ನ ಬಾಳು ಎನ್ನುತ್ತದೆ ಈ ಧರೆ

Thursday, 2 January 2014

ಆಸೆ

ಒಲವಿನ ಮುತ್ತನು ಸುರಿಸುವೆಯಾ ಎಂದು ಆಸೆಯಾಗಿ 
ಮನಸಾರೆ ಬರೆದೆ ಈ ಕವನ ನಿನಗಾಗಿ 
ನಿನ್ನ ತುಟಿಯಂಚು ನನ್ನ ಕಣ್ಣರೆಪ್ಪೆಯ ಸೋಕಿ ಜಾರುವ ಮುತ್ತಿಗೂ ಮುನ್ನ 
ನನ್ನ ಭಾವನೆಗಳನ್ನೆಲ್ಲ ಕವಿತೆಯಲಿ ಪೋಣಿಸಿ ಮಾಡಿದ 
ಮುತ್ತಿನ ಹಾರವನ್ನು ನೀನು ಕೊರಳಿಗೆ ಧರಿಸಿದರೆ ಎಷ್ಟು ಚೆನ್ನ