Monday, 27 March 2017

ಬರಹದ ಹಣ

ಬರೆದಂತೆ ಬದುಕುವುದು 
ನುಡಿದಂತೆ ನಡೆಯುವುದು 
ಎಲ್ಲರೂ ಹೇಳುವಂತೆ ಕಷ್ಟ 
ಏಕೆಂದರೆ ಯಾರೂ ಕೇಳರು ನಮ್ಮ ಇಷ್ಟ 

ತೋಚಿದ್ದು ಗೀಚಿದ ಸಾಲುಗಳು 
ಭರವಸೆಯ ಬೆಳಕಾಗುವುದು ಕೆಲವರಿಗೆ 
ನಿರೀಕ್ಷಿಸದೇ ಕಣ್ಣಿಗೆ ಬಿದ್ದ ಸಾಲುಗಳು 
ಬದಲಾವಣೆಗೆ ಹಾದಿಯಾಗುವುದು ಹಲವರಿಗೆ 

ಬರವಣಿಗೆಯಿಂದ ಸಿಗದಿರಬಹುದು ಭಾರಿ ಹಣ
ಆದರೆ ತಿದ್ದಿದೆ ದಾರಿ ತಪ್ಪಿದ ಎಷ್ಟೋ ಮನಗಳ ಗುಣ 
ಭೂಮಿ ಮೇಲಿನ ಯಾರ ಕಲೆಯೂ ಕೀಳಲ್ಲ 
ದುಡ್ಡು ಬರುವ ಕಲೆಯೊಂದೇ ಶ್ರೇಷ್ಠವಲ್ಲ 

ಎಲ್ಲ ಕಲೆಯಲ್ಲೂ ಅಡಗಿಹಳು ಶಾರದೆ 
ಅದ ಗುರ್ತಿಸದೆ ಸೋತಿಹರು ಆಕೆಯ ಕಾಣದೆ 
ಶ್ರದ್ಧೆ ಭಕ್ತಿ ಶ್ರಮದಿ ಪೋಷಿಸು ನಿನ್ನ ಕಲೆಯ 
ಕೈ ಹಿಡಿದು ಕರುಣಿಸುವಳು ನಿನಗೊಂದು ನೆಲೆಯ 

Wednesday, 22 March 2017

ಕಲಿತ ಪಾಠ

ಜ್ಞಾನವಿಲ್ಲದ ಅಜ್ಞಾನಿಗಳು ಮೊಂಡುವಾದ 
ಮಾಡುವಾಗ ಮೌನವಾಗಿರುವುದೇ ಲೇಸು 

Monday, 20 March 2017

ಕವಿತೆ ಎಂದರೆ

ನನಸಾಗದ ಕನಸುಗಳನು ಪದಗಳ ಸರದಿಂದ ಬಂಧಿಸಿ 
ಬಾರದ ಭಾವನೆಗಳನು  ಬಣ್ಣಗಳಿಂದ ಅಲಂಕರಿಸಿ 
ಈಡೇರದ ಆಸೆಗಳನು ಕಲ್ಪನೆಯಲ್ಲೇ ಸಾಕಾರಗೊಳಿಸಿ 
ಆದ ನಿರಾಸೆಗೆ ಸಾಂತ್ವನದ ಸವಿಮಾತನು ಹೊಂದಿಸಿ 
ಮನದ ಕನ್ನಡಿಯಂತೆ ಬಿಂಬಿಸುವ ಎಡಬಿಡದೇ 
ತೋಚಿದ್ದನ್ನು ಗೀಚುವ ಏಕೈಕ ಸಾಧನವೇ ಕವಿತೆ 

Friday, 17 March 2017

ನನ್ನ ಮೆಚ್ಚಿನ ಲೇಖಕಿಗೊಂದು ನಮನ


ನೆನ್ನೆ ಸಂಜೆ ನಮ್ಮ ಕಛೇರಿ ವತಿಯಿಂದ ಬೆಂಗಳೂರಿನ ಕುವೆಂಪು ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ "ಅಂತರರಾಷ್ಟ್ರೀಯ ಮಹಿಳಾ ದಿನ" ಆಚರಣೆಯ ಪ್ರಯುಕ್ತ ನನ್ನ ಮೆಚ್ಚಿನ ಲೇಖಕಿ "ಶ್ರೀಮತಿ ಸುಧಾಮೂರ್ತಿ" ಅವರನ್ನು ಆಹ್ವಾನಿಸಿದ್ದರು. ಅವರ ಅನೇಕ ಲೇಖನಗಳು, ಕಾದಂಬರಿಗಳನ್ನು ಓದಿದ ನಾನು  ಅವರ ಕಟ್ಟಾ  ಅಭಿಮಾನಿಯಾಗಿದ್ದೆ, ಜೊತೆಗೆ ಅವರನ್ನು ಒಮ್ಮೆಯಾದರೂ ನೋಡಿ ಮಾತಾಡಿಸಬೇಕೆಂಬ ಆಸೆಯೂ ಹುಟ್ಟಿತ್ತು. ಆದರೆ  ಅವರನ್ನು ನಿರೀಕ್ಷಿಸದೇ ಅನಿರೀಕ್ಷಿತವಾಗಿ ಭೇಟಿಯಾಗುವ ಕ್ಷಣ ಬರುತ್ತದೆ ಎಂದು ನಾ ಎಣಿಸಿರಲಿಲ್ಲ ನಿಜಕ್ಕೂ ಅವರನ್ನು ಭೇಟಿಯಾದ ನನ್ನ ಜೀವನದ ಕ್ಷಣಗಳು ಧನ್ಯವೆನಿಸಿದವು, ನನ್ನ ಹೃದಯ ಆನಂದ ಸಾಗರದಲಿ ಮುಳುಗಿತು ಎಂದರೆ ತಪ್ಪಾಗಲಾರದು. 

"ಇಂಟರ್ನ್ಯಾಷನಲ್ ಫಿಗರ್" ಎಂದೇ ಗುರ್ತಿಸಲ್ಪಡುವ ಇನ್ಫೋಸಿಸ್ ಫೌಂಡರ್ ಎಂಬ ಖ್ಯಾತಿಯ ಈ ಮಹಾತಾಯಿ ನಿಜಕ್ಕೂ ಎಷ್ಟು ಸುಂದರ ಸರಳ ಮತ್ತು ವಿನಯವತಿಯೆಂದು ನೆನ್ನೆ ನನ್ನ ಕಣ್ಣಾರೆ ನೋಡಿ ಕಿವಿಯಾರೆ ಅವರ ಧ್ವನಿಯನ್ನು ತುಂಬಿಸಿಕೊಂಡ ಮೇಲೆ ಅರ್ಥವಾಯ್ತು. ಕರಿಮಣಿ ಸರ ಮತ್ತು ದೇವರು ಕೊಟ್ಟ ಎಂದು ಮಾಸದ ನಗುವೇ ಅವರ ಒಡವೆ ಎಂದರೆ ತಪ್ಪಿಲ್ಲ. ಆಕೆಯ ನಗು, ಉಟ್ಟಿದ್ದ ಸರಳ ಕಾಟನ್ ಸೀರೆ , ಧರಿಸಿದ ಮಾಂಗಲ್ಯ ಸರ ಇಷ್ಟೇ ಅವರ ಅಲಂಕಾರ, ಇವೆಲ್ಲದುದರೆ ಜೊತೆ ಅತ್ಯಂತ ಸುಂದರವಾಗಿ ಕಂಡದ್ದು ಅವರ ನಿಷ್ಕಲ್ಮಶ ನಗು. ಇಷ್ಟು ದಿನ ಅವರ ಬರವಣಿಗೆಗೆ ಅಭಿಮಾನಿಯಾಗಿದ್ದ ನಾನು ನೆನ್ನೆಯಿಂದ ಅವರ ನಗುವಿಗೆ ಅಭಿಮಾನಿಯಾಗಿಬಿಟ್ಟೆ. 

ಮಾತಿನಲ್ಲೇ ಮುಳುಗಿದ್ದ ಎಲ್ಲ ಮಹಿಳಾಮಣಿಗಳು  ಅವರ ಭಾಷಣ ಆರಂಭವಾಗುತ್ತಿದ್ದಂತೆ ಎಲ್ಲೆಡೆ ನಿಶಬ್ಧ ಆವರಿಸಿತು. 

"ನಾನು ಅತ್ಯಂತ ಸಾಮಾನ್ಯ ಕುಟುಂಬದಿಂದ ಬಂದ ಸಾಮಾನ್ಯ ಹೆಣ್ಣುಮಗಳಷ್ಟೇ ಹೊರತು ಯಾರಿಗೂ ರೋಲ್ ಮಾಡೆಲ್ ಅಲ್ಲ, ಪ್ರತಿಯೊಂದು ಹೆಣ್ಣು ಅವರವರ ಮಕ್ಕಳಿಗೆ ಕುಟುಂಬಕ್ಕೆ ರೋಲ್ ಮಾಡೆಲ್ ಆಗಿರುತ್ತಾಳೆ ಏಕೆಂದರೆ ಮಾನಸಿಕವಾಗಿ ಗಂಡಿಗಿಂತ ಹೆಣ್ಣೇ ಶಕ್ತಿಯುತಳಾಗಿರುತ್ತಾಳೆ. ಆದರೆ ಅವರಲ್ಲಿನ ಶಕ್ತಿಯನ್ನು ಅವರೇ ಅರ್ಥ ಮಾಡಿಕೊಂಡು ಮುನ್ನುಗ್ಗಬೇಕು. ಹೆಣ್ಣಿಗೆ ಬಾಲ್ಯದಲ್ಲಿ ಅಪ್ಪ, ಯವ್ವನದಲ್ಲಿ ಗಂಡ ಮತ್ತು ವೃದ್ಧಾಪ್ಯದಲ್ಲಿ ಮಗನೆ ನನ್ನ ಭವಿಷ್ಯವೆಂದು ನಂಬಿ ತನ್ನ ಸುತ್ತ ತಾನೇ ಬೇಲಿ ಹಾಕಿಕೊಂಡು ಬದುಕುತ್ತಾಳೆ. ತನ್ನ ಸಾಮರ್ಥ್ಯವನ್ನು ಮರೆತು ಬದುಕುತ್ತಾಳೆ. ಅದನ್ನು ದಾಟಿ ಆಕೆ ಬದುಕಬೇಕು ತನ್ನ ಕಲೆಯ ಛಾಪನ್ನು ಹೊರತರುವಲ್ಲಿ ಶ್ರಮಿಸಬೇಕು ಎಂದರು.  ಆದರೆ ಈಗ ಕಾಲ ಬದಲಾಗಿದೆ ಜಗತ್ತಿನ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾಳೆ ಅದನ್ನು ನೋಡುತಿದ್ದರೆ ಎಲ್ಲರಿಗೂ ಸಂತೋಷವಾಗುತ್ತದೆ. ಹಾಗೆ ಅವರನ್ನು ಹೆಣ್ಣಿನ ಸಾಮರ್ಥ್ಯವನ್ನು ಅರ್ಥಮಾಡಿಸುವುದಲ್ಲದೆ ಸಭೆಯಲ್ಲಿ ನೆರೆದ ಎಲ್ಲ ಹೆಣ್ಣು ಮಕ್ಕಳಿಗೆ ಒಂದು ಕಿವಿ ಮಾತು ಹೇಳಿದರು, ದಯವಿಟ್ಟು ಹೆಂಗಸರು ಅವರಿವರ ಬಗ್ಗೆ ಮಾತಾಡುವುದನ್ನು ಕಮ್ಮಿ ಮಾಡಿ ಸಮಯವನ್ನು ಒಳ್ಳೆಯ ಕೆಲಸಗಳಿಗಾಗಿ ಉಪಯೋಗಿಸಿ, ಮಾತು ಕಮ್ಮಿಯಾದರೆ ಸಾಧನೆಗಳು ಹೆಚ್ಚಾಗುತ್ತವೆ, ಎಷ್ಟು ಸಾಧ್ಯವೋ ಅಷ್ಟು ಓದಿ, ಏಕಂದರೆ ನಿಮ್ಮ ಮಕ್ಕಳಿಗೆ ನೀವೇ ರೋಲ್ ಮಾಡೆಲ್ ಆಗಿರುತ್ತೀರಿ, ನೀವು ಹೇಗೆ ಕೆಲಸ ಮಾತು ನಡೆ ನುಡಿಗಳನ್ನೂ ನಿಭಾಯಿಸುತ್ತೀರೋ ಅದನ್ನೇ ಅವರು ಕಲಿಯುತ್ತಾರೆ ಎಂದರು". 

ಹಾಗೆ ತನ್ನ ಅನುಭವಗಳನ್ನು ತುಂಬಾ ಚಂದವಾಗಿ ಹಂಚಿಕೊಂಡರು. ಅವರು ಹೇಳಿದ ಎಲ್ಲವನ್ನು ಬರೆಯುವಷ್ಟು  ನನಗೆ  ಭಾಷಾಜ್ನ್ಯಾನವಿಲ್ಲ ಹಾಗಾಗಿ ಕೆಲವೊಂದನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಹೀಗೆ ಅವರು ಮಾತಾಡಿ ಆದಮೇಲೆ ಕಾರ್ಯಕ್ರಮದ ನಿರೂಪಕಿಯೊಬ್ಬರು "ಡಾಲರ್ ಸೊಸೆ" ಮತ್ತು "ಮಹಾಶ್ವೇತೆ" ಕಾದಂಬರಿಗಳ ಪರಿಣಾಮವನ್ನು ಹೇಳಿದಾಗ ನಿಜಕ್ಕೊ ಬಹಳ ಸಂತೋಷವಾಯ್ತು. ಅವರ "ಮನದ ಮಾತು" ಮತ್ತು "ಸಾಫ್ಟಮನ"ದಲ್ಲಿ ಬಂದು ಹೋದ ಅನುಭವಗಳನ್ನು ಸ್ವತಃ ಸುಧಾಮ್ಮನ ಬಾಯಲ್ಲಿ ಕೇಳಿ ಮತ್ತಷ್ಟು ಖುಷಿ  ಆಯ್ತು. 

ಒಟ್ಟಿನಲ್ಲಿ ಸುಧಾಮೂರ್ತಿ ಅವರು ಮತ್ತಷ್ಟು ಬರೆಯಲಿ, ಅವರ ಕೀರ್ತಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತಾ, ನೆನ್ನೆಯ ದಿನ ನನ್ನ ಜೀವನದಲ್ಲಿ ಮರೆಯಲಾಗದ ದಿನ ಎಂದು ಸ್ಮರಿಸುತ್ತ, ಅವರಿಗೆ ನನ್ನ ನಮನಗಳನ್ನು ಅರ್ಪಿಸುತ್ತಿದ್ದೇನೆ. 

Wednesday, 15 March 2017

ಬದುಕು

ಬದುಕಿನ ಸುತ್ತ ಹೆಣೆದ ಕವಿತೆಗಳೆಲ್ಲ ಕಳೆಗುಂದುತ್ತಿವೆ 
ಭಾವನೆಗಳ ಸುತ್ತ ಬೆಸೆದ ಬಣ್ಣಗಳೆಲ್ಲ ಮಾಸುತ್ತಿವೆ 
ಮಾಸಲಿ ಕಳೆಗುಂದಲಿ ಏನೇ ಆಗಲಿ ಹೇಗೆ ಇರಲಿ 
ಉಸಿರಿರುವ ತನಕ ಬದುಕೆಂಬ ಹೂವು ಬಾಡದು 

Sunday, 12 March 2017

ಹುಚ್ಚು ಬರವಣಿಗೆ

ನಾ ಬರೆದ ಕಥೆಗಳಲ್ಲಿ ಇಲ್ಲ ಯಾವ ಪಾತ್ರ 
ಅಲ್ಲಿರುವುದೆಲ್ಲ ಬರೀ ವಾಸ್ತವಕ್ಕೆ ಹತ್ರ 
ಮನಸೋ ಇಚ್ಛೆ ಗೀಚುವ ಪದಗಳಿಂದೆಲ್ಲ 
ಹೆಣೆಯಲಾಗದು ಸುಂದರ ಹಾಡ  
ಆ ಹಾಡಿಗೆ ಬೇಕು ಪ್ರಾಸದ ಪುಂಜ 
ಪದಪುಂಜವ ಪೋಣಿಸಲು ಬೇಕೆನಗೆ ಭಾವನೆಗಳ 
ಆಸರೆ ಏಕೆಂದರೆ ನಾ ಅವುಗಳ ಕೈಸೆರೆ 
ಕಥೆ ಬರೆದರೂ ಕವನ ಬರೆದರೂ 
ಒಳಗಿರಲೇಬೇಕು ಒಬ್ಬ ಬರಹಗಾರ 
ಆತನ ಉಳಿಸಲು ಬೆಳೆಸಲು ಬೇಕೊಬ್ಬ 
ತಿದ್ದಿ ತೀಡುವ ಸಲಹೆಗಾರ 

Thursday, 9 March 2017

ಮಿಥ್ಯ ಮುಖ

ಶುದ್ಧ ಹೃದಯವಿದ್ದವರ ಮುಖ ಹೊಳೆಯುವಷ್ಟು 
ಸುಂದರವಾಗಿರುವವರ ಮುಖ ಹೊಳೆಯದು 
ಕೋಪವೋ ಪ್ರೇಮವೋ ನಗುವೋ ನೋವೋ 
ಏನೇ ಇದ್ದರೂ ಇದ್ದಂತೆ ಹೊರ ಹಾಕುವುದು ಹೃದಯ 
ಹೇಗಿದ್ದರೂ ಚಂದ ಕಾಣಬೇಕೆಂಬ ಭ್ರಮೆಯಲ್ಲಿ  
ಕಳ್ಳ ನಗುವ ಹೊರ ಹಾಕುತ್ತಲಿರುವುದು ಮೊಗವು 

ಗೆಳೆತನ

ನಿನ್ನ ನಗುವಿನ ಹಿಂದಿನ ನೋವಿನ ನೆರಳಲಿ ಸಂಚರಿಸಿ 
ನಿನ್ನ ಕೋಪದ ಹಿಂದಿನ ಪ್ರೀತಿಯ ಆಸ್ವಾದಿಸಿ 
ನಿನ್ನ ಮೌನದ ಹಿಂದಿನ ಮಾತನು ಆಲಿಸಿ 
ಅದರಲ್ಲಿ ಬೆರೆತು ನೋವನ್ನ ಮರೆಸಿ 
ಸಹಕರಿಸುವವರೇ ನಿಜವಾದ ಸ್ನೇಹಿತರು 

Tuesday, 7 March 2017

ಓ ಭಾವನೆಯೇ

ಬದುಕಿನುದ್ದಕ್ಕೂ ಬರೆಯೋ ಹಠ ನನಗೆ 
ಕಟ್ಟಿದ ಕವನಗಳ ಸವಿಯುವ ಚಟ ನಿನಗೆ 
ಏನು ಮಾಡಿದರೂ ಹೋಗದು ಗೀಚುವ ಹುಚ್ಚು 
ಅದಕೆ ನನ್ನ ಹೃದಯದ ಮೇಲೆ ಬಿದ್ದಿದೆ ನಿನ್ನದೇ ಅಚ್ಚು 
ನೀನಿದ್ದರೆ ತಾನೇ ನನ್ನ ಪದಗಳಿಗೆ ಭೂಷಣ 
ನೀನೆ ಕೈಬಿಟ್ಟರೆ ಸತ್ತ ಶವದಂತೆ ನನ್ನ ಕವನ 

Sunday, 5 March 2017

ಚಕೋರಿ


ಚಂದ್ರಶೇಖರ ಕಂಬಾರರ "ಚಕೋರಿ" ಒಂದು ವಿಶಿಷ್ಟ ಕೃತಿ ಏಕೆಂದರೆ ಇಲ್ಲಿ ಮಾಮೂಲಿನಂತೆ ಕಥೆಯಷ್ಟೇ ಇಲ್ಲ..  ಎಲ್ಲ  ಪಾತ್ರಗಳ ಚಿತ್ರಣ ಕಾವ್ಯದಿಂದಲೇ ಪರಿಚಿತವಾಗುತ್ತವೆ. ಅದಕ್ಕೆ ಏನೋ ಈ ಪುಸ್ತಕದ ಮೇಲೆ ಕಾದಂಬರಿ ಬದಲು ಮಹಾಕಾವ್ಯವೆಂದು ಮುದ್ರಿಸಿದ್ದಾರೆ. ಈ ಕೃತಿ ಓದಿದಮೇಲೆ ಒಂದು ಹೊಸ ಅನುಭವ ನೀಡುವುದಂತೂ ದಿಟ. ಈ ಹಿಂದೆ "ಶಿಖರಸೂರ್ಯ" (ಚಕೋರಿಯ ಮುಂದಿನ ಭಾಗವನ್ನೇ ನಾ ಮೊದಲು ಓದಿದ್ದೆ http://shwetha-hoolimath.blogspot.in/2017/01/blog-post_1.html ). ಆದರೆ ಎಲ್ಲಿಯೂ ಚಕೋರಿಯನ್ನು ಓದಿ ಇದನ್ನು ಓದಬೇಕೆಂದು ನನಗೆ ಅನಿಸಲಿಲ್ಲ, ಹೊಸ ಕೃತಿಯೆಂದೇ ಓದಿದ್ದೆ. )

ಇದು ಕಾವ್ಯವಾಗಿರುವುದರಿಂದ ಕಥೆಯ ಬಗ್ಗೆ ಹೇಳುವುದು ನನಗೆ ಕಷ್ಟವೆನಿಸುತ್ತಿದೆ. ಕಥಾನಾಯಕ ಚಂದಮುತ್ತ ಒಬ್ಬ ನಾದಪ್ರಿಯ. ಅವನನ್ನು ಕಾಡಿದ ಯಕ್ಷಿಯ ಮೋಹಕ್ಕೆ ತನ್ನವರನ್ನೇ ಬಿಡುವ ಪ್ರಸಂಗ, ಅವನು ಪಟ್ಟ ಪಾಡು, ಮತ್ತು ಇವರಿಬ್ಬರ ಪ್ರೇಮಕ್ಕೆ ವೈರಿಯಾಗುವ ಎರಡು ಪಾತ್ರಗಳ ಚಿತ್ರಣ ನಿಜಕ್ಕೂ ರೋಚಕವಾಗಿವೆ. ಆರಂಭದಲ್ಲಿ ಚಂದಮುತ್ತನ ಮೇಲೆ ಮೂಡಿದ ಭಾವನೆಗಳು ಅಂತ್ಯದಲ್ಲಿ ಬದಲಾಗುತ್ತವೆ. ಅದಕ್ಕೆ ಏನೋ ಮುನ್ನುಡಿಯಲ್ಲಿ "ಚಂದಮುತ್ತನ ತನ್ಮಯತೆ ಇಂದಿನ ಜಾಣ ಬುದ್ಧಿಗೆ ಭಕ್ತಿಯಾಗಿ ಕಾಣಿಸಬಹುದು. ಆದರೆ ಚಂದಮುತ್ತನ ಭಕ್ತಿ ಟೊಳ್ಳುಭಾಕ್ತಿಯಲ್ಲ ಎಂಬುದನ್ನು ಮಾತ್ರ ಸೂಚಿಸಭಯಸುತ್ತೇನೆ." ಎಂದು ಹೇಳಿದ್ದಾರೆ. ಇದರ ಅರ್ಥ ಕೃತಿ ಓದಿದಮೇಲೆ ತಿಳಿಯುತ್ತದೆ. 

ಚಕೋರಿಯ ಬಗ್ಗೆ ಬಹಳ ವಿವರಗಳನ್ನು  ಹೇಳುವುದು ಕಷ್ಟ, ಏಕೆಂದರೆ ಇಲ್ಲಿನ ನಿರೂಪಣಾ ಶೈಲಿಯ ವಿಭಿನ್ನತೆ. ಇದರ ಮುಂದುವರೆದ ಭಾಗ "ಶಿಖರಸೂರ್ಯ" ಕೂಡ ಕಥಾನಾಯಕ ಚಂದಮುತ್ತ ಜಯಸೂರ್ಯನಾಗಿ ನಂತರ ಶಿಖರ ಸೂರ್ಯನಾಗಿ ಮೆರೆದ ರೋಚಕ ಕಥೆ ಇದು. ಚಕೋರಿ ಮತ್ತು ಶಿಖರಸೂರ್ಯ ಎರಡೂ ಮಹಾಕಾವ್ಯಗಳಾಗಿದ್ದು ಮಾಮೂಲಿನಂತೆ ಬೇಗ ಗ್ರಹಿಸಿ ಮುಗಿಸುವಂತಹ ಕೃತಿಗಳಲ್ಲವೆಂಬುದು ನನ್ನ ಅನುಭವ. 

Wednesday, 1 March 2017

ಒಲವಿನ ಓಲೆ

ನಾ ಬರೆದ ಪ್ರೇಮ ಪತ್ರಕೆ ಉತ್ತರಿಸದೆ ಸತಾಯಿಸುತಿರುವೇಕೆ 
ಅಲ್ಲಿರುವುದು ಬರೀ ಪದಗಳಲ್ಲ ಒಲವು ತುಂಬಿದ ಭಾವಗಳು 
ಆ ಭಾವಗಳಿಗೆ ಬಣ್ಣವಿಲ್ಲ ಕಲ್ಪನೆಯಿಲ್ಲ ಇರುವುದು ಕೇವಲ 
ನೀನೆ ನನ್ನ ಉಸಿರೆಂದು ನಂಬಿರುವ ಈ ಹೃದಯ 
ಅದನ್ನೇ ಅರಿಯದೇ ನೀ ದೂರಾದರೆ ಹೇಗೆ ಇನಿಯ 
ಎಲ್ಲಿದ್ದರೂ ಹೇಗಿದ್ದರೂ ಹೃದಯದ ಕಣ್ತೆರೆದು ಓದು ನನ್ನ ಓಲೆಯ 
ಬಂದು ಅಪ್ಪಿಬಿಡುವೆ ಎನ್ನ ಹರಸುತ ಪ್ರೇಮದ ಹೊಳೆಯ 

ಕಾಮನಬಿಲ್ಲು

ಎಲ್ಲರ ಕಣ್ಣಲ್ಲಿ ನಾವು ನಕ್ಷತ್ರವಾಗಿ ಮಿಂಚಲಾಗದಿದ್ದರೂ 
ಮೋಡ ಕವಿದ ಒಬ್ಬರ ಬಾಳಲ್ಲಿ ಕಾಮನಬಿಲ್ಲಾಗಿ ಮೂಡಬಹುದು