Monday, 27 February 2017

ಪ್ರೇಮ ವಿರಹ

ನನ್ನ ಬರವಣಿಗೆಯಷ್ಟು ಅಂದ ನಾನಿಲ್ಲ 
ನಿನ್ನ ಭಾವನೆಗಳಷ್ಟು ಚಂದ ನೀನಿಲ್ಲ 
ಆದರೂ ಆ  ಭಾವಗಳಿಗೆ ಬಣ್ಣ ತುಂಬಿಸಿ  
ಪದಗಳ ಸಾಗರದಲಿ ಬರವಣಿಗೆಯ ಮುಳುಗಿಸಿ 
ನಮ್ಮಿಬ್ಬರ ಅದ್ದಿ ತೆಗೆದರೆ ಮೂಡುವುದು ಪ್ರೇಮಗೀತೆ 
ಅದ ಹಾಡುತ ನಾವಿದ್ದರೆ ಕಾಡದು ವಿರಹದ ಚಿಂತೆ 

ಕಪ್ಪು ಮುತ್ತಿನ ರಹಸ್ಯ


ವಾಸುದೇವರಾವ್ ಅವರ ಷರ್ಲಾಕ್ ಹೋಮ್ಸ್ ನ ಸಾಹಸ ಕಥೆಗಳು "ಕಪ್ಪು ಮುತ್ತಿನ ರಹಸ್ಯ" (ಇಂಗ್ಲಿಷ್ ಮೂಲ : ಸರ್ ಆರ್ಥರ್ ಕಾನನ್ ಡಾಯ್ಲ್). ಇಲ್ಲಿ ೭ ಪತ್ತೇದಾರಿ ಕಥೆಗಳಿದ್ದು, ಎಲ್ಲವೂ ಹೋಮ್ಸ್ ನ ಬುದ್ಧಿವಂತಿಗೆ, ಅಪರಾಧಿಗಳನ್ನು ಪತ್ತೆ ಹಚ್ಚುವ ಕೌಶಲ್ಯ, ಕುಶಾಗ್ರಮತಿ ಇತ್ಯಾದಿ ಅಂಶಗಳನ್ನು ತೋರಿಸುತ್ತವೆ. 

ಈ ಹಿಂದೆ ಇದೇ ಲೇಖಕರ "ಶವದ ಮನೆಯಾದ ಸ್ವರ್ಗ" ಓದಿದ ಕಾರಣ (http://shwetha-hoolimath.blogspot.in/2017/01/blog-post_6.html)  ಷರ್ಲಾಕ್ ಹೋಮ್ಸ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದೆ ಜೊತೆಗೆ ಅರ್ಥರ್ ಬಗ್ಗೆಯೂ ಓದಿದ್ದೆ ನಿಜಕ್ಕೂ ಖುಷಿ ಆಯ್ತು ಏಕೆಂದರೆ ನನಗೆ ಆಂಗ್ಲ ಪುಸ್ತಕಗಳನ್ನು ಓದಿ ಅರ್ಥ ಮಾಡಿಕೊಳ್ಳುವ ಹುಮ್ಮಸ್ಸು, ಆಸಕ್ತಿ ಇಲ್ಲದ ಕಾರಣ, ಕನ್ನಡದಲ್ಲಿ ವಾಸುದೇವರಾವ್ ಅವರ ಅನುವಾದಿತ ಈ ಕೃತಿಗಳನ್ನೇ ಹೊಸದೆಂದು ಭಾವಿಸಿ ಓದಿದೆ, ಸಂತೋಷವು ಆಯ್ತು. 

ಇನ್ನು ಈ ಕೃತಿಗೆ ಬರುವುದಾದರೆ ಇರುವ ೭ ಕಥೆಗಳು ಒಂದಕ್ಕಿಂತ ಒಂದು ರೋಚಕ ಮತ್ತು ವಿಭಿನ್ನ. ಪ್ರತಿಯೊಂದು ಕಥೆಯ ಆರಂಭದಲ್ಲಿ ನಾವಂದುಕೊಂಡ ಊಹೆಗಳೇ ಸುಳ್ಳಾಗಿರುತ್ತವೆ ಜೊತೆಗೆ ಅನಿರೀಕ್ಷಿತ ತಿರುವುಗಳೊಂದಿಗೆ ಅಂತ್ಯವಾಗುತ್ತವೆ. ಹೀಗಾಗಿ ಯಾವುದೇ ಕಥೆಯ ವಿಷಯದ ಬಗ್ಗೆಯಾಗಲೀ, ಪಾತ್ರಗಳ ಬಗ್ಗೆಯಾಗಲಿ ಹೇಳುವುದು ಸ್ವಲ್ಪ ಕಷ್ಟ ಜೊತೆಗೆ ಓದುವ ಪ್ರತಿಯೊಬ್ಬರೂ ಅದನ್ನು ಓದುವಾಗ ಅನುಭವವಿಸುವ ಕುತೂಹಲ ಹೇಗಿರುತ್ತೆ  ಎನ್ನುವುದು ಅವರೇ ತಿಳಿಯಲಿ ಎನ್ನುವುದು ನನ್ನ ಅಭಿಪ್ರಾಯ. 

ಇನ್ನು ಲೇಖಕರ ಬಗ್ಗೆ ಹೇಳುವುದಾದರೆ ವಾಸುದೇವರಾವ್ ಅವರು ಹಲವಾರು ಕೃತಿಗಳನ್ನು ರಚಿಸಿ, ಅನುವಾದಿಸಿ ಪುಸ್ತಕರೂಪದಲ್ಲಿ ಪ್ರಕಟಿಸಿದ್ದಾರೆ. ಇವರ ಕೃತಿಗಳಲ್ಲಿ ಅನುವಾದಗಳೇ ಹೆಚ್ಚಿದ್ದು, ಅಸಂಖ್ಯ ಪತ್ತೇದಾರಿ ಕಾದಂಬರಿಗಳನ್ನೂ ಕನ್ನಡಕ್ಕೆ ತಂದ ಕೀರ್ತಿ ಇವರದು. ಅದರಲ್ಲೂ ಡ್ರಾಕುಲ ಮತ್ತು ಷರ್ಲಾಕ್ ಹೋಮ್ಸ್ ನ ಕೃತಿಗಳು ಹೆಚ್ಚು ಪ್ರಸಿದ್ಧಿಯಾಗಿವೆ. ಜೊತೆಗೆ ಅವರ ಈ ೩ ಕೃತಿಗಳ ಅನುವಾದವನ್ನು ಓದಿದ ಸಂತೋಷ ಮತ್ತು ತೃಪ್ತಿ ನನಗಿದೆ. 

Sunday, 26 February 2017

ಸಮಯ

ಎಲ್ಲರಿಗೂ ಇಹುದು ಸಮಯ ತುರ್ತು ವಿಷಯಗಳಿಗೆ 
ಯಾರಿಗೂ ಸಾಲದು ಸಮಯ ಮುಖ್ಯ ವಿಷಯಗಳಿಗೆ 
ಎಲ್ಲರೂ ಬಲ್ಲರು ಜಾರಿ ಹೋದ ಕ್ಷಣ ತಿರುಗಿ ಬಾರದೆಂದು 
ಆದರೂ ಪರಿತಪಿಸುವರು  ಆ ಕ್ಷಣಕ್ಕಾಗಿ ಎಂದೆಂದೂ 

Saturday, 25 February 2017

ಲೈಫ್ ಈಸ್ ಬ್ಯೂಟಿಫುಲ್


ಬಹಳ ದಿನಗಳ ನಂತರ ನೆನ್ನೆ ಮಧ್ಯಾಹ್ನ ಓದಲು ಆರಂಭಿಸಿದ ಪುಸ್ತಕವನ್ನು ಸಂಜೆಗೆ ಅಂದರೆ ಕೊನೆವರೆಗೂ ಬಿಡದಂತೆ ಮುಗಿಸಿಬಿಟ್ಟೆ ಅದೇ ಜೋಗಿ ಅವರ "ಲೈಫ್ ಈಸ್ ಬ್ಯೂಟಿಫುಲ್" ಪುಸ್ತಕ. ಇಲ್ಲಿ ಯಾವುದೇ ಕಥೆಯಿಲ್ಲ, ಕಾದಂಬರಿಯೂ ಅಲ್ಲ, ಪಾತ್ರಗಳು ಸಹ ಇಲ್ಲ. ಇಲ್ಲಿ ತುಂಬಿರುವುದೆಲ್ಲ ನಾವು ಮತ್ತು ನಮ್ಮ ಬದುಕು ಮಾತ್ರ. 

ಎಲ್ಲಕ್ಕಿಂತ ಜಾಸ್ತಿ ಹಿಡಿಡಿಸಿದ್ದು ವಿಶೇಷವಾದ ಮುನ್ನುಡಿ. ಅಲ್ಲಿ ನಾನು ತುಂಬಾ ಮೆಚ್ಚಿದ್ದು "ಇವತ್ತು ನಾನು ಎಂಥಾ ಪುಸ್ತಕ ಕೊಟ್ಟರೂ ಓದಬಲ್ಲೆ. ಎಂಥಾ ಕಳಪೆ
 ಪುಸ್ತಕದಲ್ಲೂ ನನಗೆ ಬೇಕಾದ ಒಂದು ಸಾಲು ಸಿಕ್ಕೇ ಸಿಗುತ್ತದೆ ಎಂದು ನಂಬಿದವನು ನಾನು. ಎಂಥಾ ಕಸದ ತೊಟ್ಟಿಗೆ ಎಸೆದರೂ ಅಲ್ಲಿಂದ ಒಂದೆರಡು ಉಪಯುಕ್ತ ವಸ್ತುಗಳನ್ನು ಹೆಕ್ಕಬಹುದು ಎಂಬುದು ನನ್ನ ಭರವಸೆ. " ಲೇಖಕರ ಈ ಮಾತುಗಳು ಎಷ್ಟೋ ಸಲ ನನಗೂ ಸತ್ಯವೆನಿಸಿದೆ, ಏಕೆಂದರೆ ಪ್ರತೀ ಬೇಸರ, ನೋವು, ಒಂಟಿತನ, ಯಾರೊಂದಿಗೂ ಹೇಳಿಕೊಳ್ಳಲಾಗದ ನೀರಸ ಮನಸ್ಥಿತಿಯನ್ನು  ದೂರ ಮಾಡುವ ಶಕ್ತಿಯಿರುವುದು ಪುಸ್ತಕಳೊಂದಿಗಿರುವ ಗಾಢವಾದ ಸ್ನೇಹವೆಂಬುದು ನನ್ನ ನಂಬಿಕೆ ಮತ್ತು ಅನುಭವವವೂ ಕೂಡ. 

ಇನ್ನೊಂದು ವಿಶೇಷವೆಂದರೆ ಲೇಖಕರೂ ಓದುಗರಿಗೆ ಈ ಪುಸ್ತಕ ಓದಲು ಹಾಕಿರುವ ಷರತ್ತುಗಳು. ನೀವು ಈ ಕೆಳಗಿನ ವರ್ಗಕ್ಕೆ ಸೇರಿದವರಾಗಿದ್ದರೆ, ದಯವಿಟ್ಟು ಈ ಪುಸ್ತಕವನ್ನು ಓದಬೇಡಿ.
1. ದಿನಕ್ಕೆ ಹತ್ತು ಗಂಟೆಗಿಂತಲೂ ಹೆಚ್ಚು ಫೋನಲ್ಲಿ ಮಾತಾಡುವವರು.
2. ದಿನವಡೀ ಫೇಸ್ ಬುಕ್ ನೋಡುತ್ತಾ ಕೂತಿರುವವರು.
3. ಮಾತಿಗಂತ ವಾಟ್ಸ್ ಆಪ್ ಉತ್ತಮ ಎಂದು ನಂಬಿದವರು.
4. ಸಿನಿಮಾ ಹಾಡುಗಳೇ ಜೀವನದ ಸರ್ವಸ್ವ ಎಂದುಕೊಂಡಿರುವವರು.

ಇದನ್ನೂ ಓದಿ ಅರೇ ಹೌದಲ್ಲ ಈ ೪ ವರ್ಗಗಳಲ್ಲಿ ನಾವು ಕೆಲವೊಮ್ಮೆ ಸೇರಿರುವವರಾಗಿರುತ್ತೇವೆ ಆದರೆ ಅವರು ಹೇಳಿದಷ್ಟು ಸಮಯವಲ್ಲದಿದ್ದರೂ ಸ್ವಲ್ಪ ಹೊತ್ತಾದರೂ ಮೇಲಿನ ೪ನ್ನೂ ಮಾಡಿರುತ್ತೇವೆ. ಈಗಿನ ದಿನಗಳಲ್ಲಿ ವಾಟ್ಸಾಪ್ ಮತ್ತು ಫೇಸ್ಬುಕ್ ಜೀವನದ ಅವಿಭಾಜ್ಯ ಅಂಗಗಳೇನೋ ಎನ್ನುವ ಮಟ್ಟಿಗೆ ನಾವು ಹಚ್ಚಿಕೊಂಡಿದ್ದೇವೆ, ಅವೆರೆಡು ಇಲ್ಲದಿದ್ದರೆ ಜೀವನವೇ ಇಲ್ಲ ಎನ್ನುವ ಮಟ್ಟವನ್ನು ಸುಮಾರು ಜನ ಈಗಾಗಲೇ ತಲುಪಿರಬಹುದು. ಆದರೆ ಇದರಾಚೆಗೂ ಬದುಕಿದೆ, ಸಂತೋಷವಿದೆ, ನೆಮ್ಮದಿಯಿದೆ ಎಂದು ಈ ಪುಸ್ತಕ ಓದಿದರೇ ತಿಳಿಯುತ್ತದೆ. ಏಕೆಂದರೆ ಇಲ್ಲಿ ಸ್ನೇಹ, ಪ್ರೇಮ, ಗುರು ಶಿಷ್ಯ, ಸಿಟ್ಟು, ಒಂಟಿತನ , ನೋವು ನಲಿವು ಹೀಗೆ ಒಬ್ಬ ಮನುಷ್ಯನ ಜೀವನದಲ್ಲಿ ಏನೇನು ಸಮಸ್ಯೆ ಬರಬಹುದೋ, ಯಾವೆಲ್ಲ ವ್ಯಕ್ತಿಗಳು ಬರಬಹುದೋ, ಏನೆಲ್ಲಾ ಮನಸ್ಥಿತಿಗಳನ್ನು ತಲುಪಬಹುದೋ, ಹಾಗೆ ಬರೀ ಪ್ರಶ್ನೆಗಳೇ ತುಂಬಿಕೊಂಡು ಹೇಗೆಲ್ಲ  ಉತ್ತರಗಳ ಹುಡುಕಾಟ ನಡೆಸಬಹುದೋ, ಹೀಗೆ ಹತ್ತು ಹಲವಾರು ವಿಷಯಗಳು ಬಂದು ಹೋಗುತ್ತವೆ. 

ಈ ಪುಸ್ತಕದ ಮೂಲ ಉದ್ದೇಶವೇ ಸಮಸ್ಯೆಗಳ ಸುತ್ತ ಸುತ್ತದೆ, ಪ್ರಶ್ನೆಗಳ ಹಿಂದೆಯೇ ಓಡದೆ, ಇರುವ ಚಿಕ್ಕ ಚಿಕ್ಕ ಸಂತೋಷವನ್ನೇ ಅನುಭವಿಸಿ, ಯಾವುದೇ ಕ್ಷಣವನ್ನು ವ್ಯರ್ಥ ಮಾಡದೇ ಬದುಕಿ ಸಮಸ್ಯೆಯ ಜೊತೆ ಶಾಂತವಾಗಿ ಯೋಚಿಸಿದರೆ ಪೂರ್ತಿ ಪರಿಹಾರ ಸಿಗದಿದ್ದರೂ ಸ್ವಲ್ಪ ನೆಮ್ಮದಿಯ ಹಾದಿಯಂತೂ ಸಿಕ್ಕೇ ಸಿಗುತ್ತದೆ ಎನ್ನುವ ಅಂಶ. ಈ ಪುಸ್ತಕ ಓದಿದಮೇಲೆ ಅನಿಸಿದ್ದು ಅರೆ ಹೌದಲ್ಲಾ!!! ಹೀಗೂ ನಮ್ಮ ಲೈಫ್ ನ ಚೆನ್ನಾಗಿ ಮಾಡ್ಕೋಬಹುದು ಮತ್ತು ನೆಮ್ಮದಿಗೆ, ಯಶಸ್ಸಿಗೆ ಯಾರನ್ನೂ ನೆನೆಯದೇ ನಾವೇ ಎಲ್ಲ ದಾರಿ ಕಂಡುಕೊಳ್ಳಬಹುದು ಎನಿಸಿತು. ನಿಜಕ್ಕೂ "ಲೈಫ್ ಈಸ್ ಬ್ಯೂಟಿಫುಲ್" ಓದಿದರೆ ಸಿಗುವುದು ಲೈಫ್ ಆಗುವುದು ಕಲರ್ಫುಲ್, ಮೀನಿಂಗ್ಫುಲ್ ಮತ್ತು ಸಿಗುವುದು ಪ್ರತಿಯೊಬ್ಬರಿಗೂ ಇನ್ಸ್ಪಿರೇಷನ್ ಫುಲ್ ಅಂಶಗಳೇ ಎಂದು ಹೇಳಲು ಇಚ್ಚಿಸುತ್ತೇನೆ. 

ಮತ್ತೊಮ್ಮೆ  ನಾ ಆಗಿರುವೆ ಈ  ಕೂಟಕ್ಕೆ ಥ್ಯಾಂಕ್ ಫುಲ್ 

Monday, 20 February 2017

ಹಾಡಿನ ಹುಟ್ಟು

ಬರೆದಂತೆಲ್ಲ ಬರಿದಾಗದು ಭಾವನೆ 
ಕಂಡಂತೆಲ್ಲ ಕೊನೆಗೊಳ್ಳದು ಕಲ್ಪನೆ 

ಆದರೆ ಕಲ್ಪನೆ ಭಾವನೆಗಳ ಮಿಲನ 
ಮೂಡುವುದೊಂದು ಸುಂದರ ಕವನ 

ಮೂಡಿದ ಕವನವ ನೋಡಿತು ನಯನ 
ಮಾಡೇ ಬಿಟ್ಟಿತು ಹಾಡನು ಕೇಳಲು ಶ್ರವಣ 

ಶ್ರವಣ ಹುಡುಕುತಿದೆ ಒಬ್ಬ ಗಾಯಕನನ್ನ
ಹಾಡಿಸಲು ಆ ಕವಿಯ ಕವನವನ್ನ 

Wednesday, 15 February 2017

ಸಾಮಾನ್ಯರಲ್ಲಿ ಅಸಾಮಾನ್ಯರು


ಸುಧಾ ಮೂರ್ತಿ ಅವರ "ಸಾಮಾನ್ಯರಲ್ಲಿ  ಅಸಾಮಾನ್ಯರು" ಪುಸ್ತಕದ ಮೂಲ ವಿಷಯ ಏನೆಂದರೆ ಹೊರಗಿನಿಂದ ಸಾಮನ್ಯರಂತೆ ಕಂಡರೂ ಅವರಲ್ಲಡಗಿರುವ ಅಸಾಮಾನ್ಯ ಗುಣಗಳನ್ನು ಹೊರ ತರುವ ಪ್ರಯತ್ನ. ಇಲ್ಲಿ ೧೯ ವ್ಯಕ್ತಿಗಳ ಪರಿಚಯ, ಅವರ ಅಸಾಮಾನ್ಯ ಗುಣಗಳು  ಮತ್ತು ಅವರಿಗಾಗಿ ಇಟ್ಟಿರುವ ಶೀರ್ಷಿಕೆ ಎಲ್ಲವೂ ಇಷ್ಟವಾದವು. 

ಮೂಲತಃ  ಲೇಖಕರು ಹುಬ್ಬಳ್ಳಿಯವರಾಗಿದ್ದು,  ಉತ್ತರ ಕರ್ನಾಟಕದ ಸಂಸ್ಕೃತಿ, ಖಡಕ್ ಮಾತಿನ ಧಾಟಿ ಮತ್ತಿತರ ವಿಶಿಷ್ಟತೆಗಳನ್ನು ತೆಗೆದುಕೊಂಡು ಕೆಲವು ವ್ಯಕ್ತಿಗಳ ಚಿತ್ರಣ ಇಲ್ಲಿ ಮೂಡಿಸಿದ್ದಾರೆ. ನಾನು ಕೂಡ ಉತ್ತರ ಕರ್ನಾಟಕದವಳಾಗಿದ್ದರಿಂದ ಈ ಕೃತಿ ಮತ್ತಷ್ಟು ಇಷ್ಟವಾಯಿತು, ಅದಕ್ಕೆ ಕಾರಣ ನೇರ ನುಡಿ, ಹೊರಗೆ  ಕಟುವಾಗಿ ಕಂಡರೂ ಸ್ಪಷ್ಟತೆ ಎದ್ದುಕಾಣುವಂತ ಮಾತು, ಒಳಮನಸಿನಲ್ಲಿ ಪ್ರೇಮ, ಅಂತಃಕರಣ, ಪರೋಪಕಾರ, ವಾತ್ಸಲ್ಯ ತುಂಬಿದ ಮನಸುಗಳ ಚಿತ್ರಣ. 

ನನಗೆ ಎಲ್ಲರೂ ಹೇಳುತ್ತಾರೆ ಉತ್ತರ ಕರ್ನಾಟಕದ ಜನರ ಮಾತು ತುಂಬಾ ಒರಟು, ಎಂದು ಅದು ನಿಜವೇ ಆದರೂ ಹೊರಗೊಂದು ಒಳಗೊಂದು ಮಾತು ಆಡದ ನೇರ ಮಾತುಗಾರರು ಎಂಬ ಖುಷಿ ನನಗಿದೆ. ಇನ್ನು ಈ ಪುಸ್ತಕದಲ್ಲಿ ಚಿತ್ರಿತರಾಗಿರುವವರಲ್ಲಿ, ಕೆಳಮಟ್ಟದ ಆರ್ಥಿಕ ಪರಿಸ್ಥಿತಿಯಲ್ಲಿರುವವರು, ಕಡಿಮೆ ಓದಿದವರು, ಮಾಧ್ಯಮ ವರ್ಗದ ಕುಟುಂಬದವರು ಹೀಗೆ ಸಾಮಾನ್ಯರೇ ಇದ್ದಾರೆ. ಕಂಡಕ್ಟರ್, ಅಂಗಡಿ ನಡೆಸುವ, ದಾನ, ಅಸೂಯೆ, ಗುಣವಂತರು, ಸಾಧನೆಗೆ ಪ್ರಸಿದ್ಧಿಯಾದವರು ಹೀಗೆ ಹತ್ತು ಹಲವಾರು ಧನಾತ್ಮಕ ಮತ್ತು ಋಣಾತ್ಮಕ ಗುಣಗಳಿದ್ದವರ ಚಿತ್ರಣ ಇಲ್ಲಿ ಮೂಡಿದೆ. ಹಾಗೆ ಇಲ್ಲಿ ಬರುವ ಸಂಭಾಷಣೆಯ ಶೈಲಿ ಕೂಡ ಬಹಳ ಇಷ್ಟವಾಗುತ್ತದೆ. 

ಈ ಕೃತಿಯಲ್ಲಿಯೂ ಕೂಡ ಎಂದಿನಂತೆ ಕಲಿಯುವ ಅಂಶಗಳನ್ನು ಸುಧಾಮೂರ್ತಿಯವರು ಹೇಳಿದ್ದಾರೆ. ಒಳ್ಳೆಯ ಮತ್ತು ಕೆಟ್ಟ ಗುಣಗಳ ವ್ಯಕ್ತಿಗಳು ನಮ್ಮ ಸುತ್ತಮುತ್ತಲೂ ಇರುತ್ತಾರೆ. ಅವುಗಳಲ್ಲಿ ಕೆಲವೊಂದನ್ನು ತೆಗೆದುಕೊಂಡು ಋಣಾತ್ಮಕ ಅಂಶಗಳಿಂದ ದೂರಾಗಿ ಬಾಳಿದರೆ ನಮಗೂ ಮತ್ತು ನಮ್ಮ ಸುತ್ತ ಇರುವವರಿಗೂ ಅನುಕೂಲವೆಂಬುದು ನನ್ನ ಅಭಿಪ್ರಾಯ.

ಕೂಟಕ್ಕೆ ಮತ್ತೊಮ್ಮೆ ಧನ್ಯವಾದಗಳು. :) 

ಬರಹಗಾರ

ಬರವಣಿಗೆ ಎನ್ನುವುದು ವೃತ್ತಿಯಲ್ಲ ಅದು ಒಂದು ಖಾಲಿ ಚೀಲ 
ತೋಚಿದ್ದೆಲ್ಲಾ ಗೀಚುವೆ ಬಯಸಿದ್ದನ್ನೆಲ್ಲ ಬರೆಯುವೆ 
ಕಲ್ಪನೆ ಕನಸುಗಳ ತುಂಬಿ ಭಾವನೆಗಳ ಹೊರದೂಡುವೆ 
ಕೆಲವೊಮ್ಮೆ ಮೂಡಿದರೆ ಕವನ ಮುದಗೊಳ್ಳುವುದು ಮನ 
ಮತ್ತೊಮ್ಮೆ ಮೂಡಿದರೆ ಲೇಖನ ನಲಿಯುವುದು  ಜೀವನ 
ಕಥೆಯೋ ಕವಿತೆಯೋ ಕಾದಂಬರಿಯೋ ಮತ್ತೊಂದೋ 
ಮೊಗದೊಂದೋ ಬರೆಯುತಿಹನು ಬರಹಗಾರ 
ಸಿಗುವನೆಂಬ ಆಶಯದಲ್ಲಿ ಒಬ್ಬ ಸಲಹೆಗಾರ 
ನೀ ಮಾಡಿದ ಕೊನೆಯ ತಪ್ಪೇ ನಿನ್ನ ಅತ್ಯತ್ತಮ ಶಿಕ್ಷಕ 
ತಪ್ಪು ಮಾಡುವುದು ಸಹಜ ತಿದ್ದಿ ಬಾಳುವವನೇ ಮನುಜ 
ತಪ್ಪು ಒಪ್ಪುಗಳ ನಡುವೆ ಮಾಡದಿರು ಕಾದಾಟ 
ಕೊನೆಯುಸಿರು ಇರುವರೆಗೂ ಮುಗಿಯದು ಹೋರಾಟ 


Wednesday, 8 February 2017

ನಂಬು ನಿನ್ನ ಮನವ

ನಿನ್ನ ಮನಸೇ ನಿನ್ನ ಶಕ್ತಿಯುತ  ಅಂಗ 
ತುಂಬಿದರೆ ಅಲ್ಲಿ ಧನಾತ್ಮಕ ಅಂಶಗಳ ಸಂಘ 
ಎಂದಿಗೂ ಸುಳಿಯದು ಋಣಾತ್ಮಕ ಶಕ್ತಿ 
ಆಗ ನಿನ್ನ ಬದುಕಾಗುವುದು ನಿರಾಸೆಗಳಿಂದ ಮುಕ್ತಿ 

Monday, 6 February 2017

ಬಾಳಿನ ಹೊಣೆ

ಕವಿತೆಯೊಳಗಿನ ಕರೆಯ  ಕೆದಕಿ ಕರೆದರೆ 
ಕೇಳುವ ಕಿವಿಗಳಿಗೆ ಕಾಣುವುದು ಕಲ್ಪನೆ 

ಬಾರದ ಭಾವನೆಗಳ ಬಿಂಬಿಸಲು ಬರೆದರೆ 
ಬೇಸತ್ತ ಬದುಕಲಿ ಬಾರದಿರುವುದು ಭಾವನೆ 

ಭಾವನೆ ಕಲ್ಪನೆಗಳ ಜಂಜಾಟದಲ್ಲಿ ಕಾಣದೆ 
ಮರೆಯಾಗುತಿಹುವು ಎಷ್ಟೋ ಯಾತನೆ 

ಯಾತನೆ, ವೇದನೆ ಏನೇ ಇರಲಿ ಹೇಗೆ ಇರಲಿ 
ಬಾಳಿನ ಬಂಡಿಯ ಸಾಗಿಸುವದಷ್ಟೇ ನನ್ನ ಹೊಣೆ