Tuesday, 31 December 2013

ನವವರ್ಷಕೆ ಸುಸ್ವಾಗತ

ಹೊಸವರ್ಷದ ಹೊಂಗಿರಣ ಬೀಳುವ ಸಮಯ 
ಇಂಪಾದ ನಾದದಂತೆ ಹರಿಯುವ ಗಾಯನವಾಗಲಿ ಈ ಜೀವನ 

ಕಂಡ ಕನಸುಗಳೆಲ್ಲ ನನಸಾಗದಿದ್ದರೆ ನಿರಾಸೆ ಬೇಡ 
ಬಯಸಿದ್ದೆಲ್ಲ ಸಿಕ್ಕಿತೆಂದು ಅಹಂಕಾರ ಬೇಡ 

ಕೊರಗುವ ಮನಸಿಗೆ ಸಂತೈಸುವ ಮನಸಾಗಿ 
ಹತಾಶೆ ತುಂಬಿದ ಮನಸಿಗೆ ಹುರಿದುಂಬಿಸುವ ಮನಸಾಗಿ 

ಸಾಗಿಸೋಣ ಈ ಬಾಳ ಬಂಡಿಯ ನವ ಉತ್ಸಾಹದಿಂದ 
ಹಾರೈಸುತ್ತ ಎಲ್ಲರಿಗೂ ನಿಷ್ಕಲ್ಮಷ ಮನಸಿಂದ 

Sunday, 29 December 2013

ಈ ಜೀವ ಸಹಿಸದು ನೀ ಒಂದು ಕ್ಷಣ ನೊಂದರು 
ಅಪ್ಪಿತಪ್ಪಿ ಒಂದು ಹನಿ ಕಣ್ಣೀರು ಬಂದರೂ 
ಮುದ್ದಿನ ಮಾತಾಡದಿದ್ದರೂ ಚಿಂತೆಯಿಲ್ಲ ನನಗೆ 
ನಿನ್ನ ಮೌನದ ರೂಪವೇ ಸಾಕು ಅದುವೇ ಎಲ್ಲ ಎನಗೆ 

Friday, 27 December 2013

ಭಾವನೆಗಳೇ ಇಲ್ಲದ ಮನದಲ್ಲಿ ಭಾವಗೀತೆಯಂತೆ 
ಹರಿಯುತ್ತ ಬಂದೆ ನೀ ಅಂದು 
ಏನಾದರೂ ಉಡುಗೊರೆ ಕೊಡುವ ಆಸೆಯಿಂದ 
ಬರೆಯುತಿರುವೆ ಪ್ರೇಮಗೀತೆ ನಿನಗಿಂದು

Monday, 23 December 2013

ಪರಿಶುಧ್ಧ ಪ್ರೇಮ

ರೂಪದಿ ಚಂದ ನಾನಿಲ್ಲ ಆದರೂ ನನ್ನ ಮನಸಿನ ಅಂದಕೆ ಮಿತಿಯಿಲ್ಲ 
ನೀ ಪ್ರೀತಿಸಿದ್ದು ರೂಪವೋ ಗುಣವೋ ಎಂದು ನಾ ಅರಿತಿಲ್ಲ 

ಆದರೂ ನನ್ನಾಸೆಯೊಂದೆ ಹುಡುಗ ಒಲವಿನ ಭಾವಕೆ ಬೇಕೊಂದು 
ಪ್ರೇಮದ ಕಾರಂಜಿಯ ಹರಿಸುವ ಮನಸೊಂದು  

ರೂಪಕ್ಕೆ ಮುಪ್ಪುಂಟು ಆದರೆ ನಿನ್ನ ಹುಡುಗಿಯ ಪ್ರೇಮಕ್ಕೆ ಮುಪ್ಪಿಲ್ಲ 
ಮೊಗದ ಮೇಲಿನ ನಯನವ ಮುಚ್ಚಿ ಮನದ ನಯನದಿಂದ ನೋಡೊಮ್ಮೆ 

ಕಾಣುವುದು ಅಲ್ಲಿ ನಿನಗಾಗಿ ನನ್ನಲ್ಲಿ ಹರಿಯುತ್ತಿರುವ ಪವಿತ್ರ ಪ್ರೇಮ 
ಕಂಡರೂ ಕಾಣದಂತೆ ನೀ ದೂರಾಗಿ ಅದನ್ನು ಮಾಡದಿರು ಬೆಂಕಿಯಲಿ ಹೋಮ 

Thursday, 19 December 2013

ಮರೆಯದೇ ಬರುವೆಯಾ ನೀ
ನನ್ನ ಪ್ರೇಮದ ಕರೆಗೆ ಓಗೊಟ್ಟು 
ಕರೆಯದೇ ಬಂದು ತಿಳಿ ನೀ 
ನನ್ನ ಮನದ ಒಳಗುಟ್ಟು 
ಸುಖವೋ ದುಖವೋ ನಾ ಬಯಸುವೆ 
ಬರೀ ನಿನ್ನ ತೋಳಿನ ಹಾರವೊಂದೇ
ಇದನರಿತು ಬೇಗನೇ ಓಡಿ ಬಾ
ನೀ ನನ್ನ ಕಣ್ಮುಂದೆ

Tuesday, 17 December 2013

ನಿಸರ್ಗ ಮಾತೆಗೊಂದು ಪ್ರಾರ್ಥನೆ

ನಿರ್ಮಲ ಭಾವದ ನದಿಯೇ ಹರಿಯುತಿರುವೆ 
ಉಪಕಾರ ಮಾಡುವ ಮನಸಿಂದ 
ಫಲ ಪುಷ್ಪ ನೀಡುವ ಗಿಡಮರಗಳೇ ಬೆಳೆದಿರುವಿರಿ 
ಉಸಿರಾಡಲು ನೆರವಾಗುವ ಉದ್ದೇಶದಿಂದ 
ಹಕಿಗಳಂತೆ ಹಾರಾಡುವ ಕಪ್ಪು ಮೋಡಗಳೇ 
ಸುರಿಸುವಿರಿ ಮಳೆಯ ಭೂಮಿಯ ಒಡಲು ತುಂಬಲು 

ಪ್ರಕೃತಿ ಮಾತೆಯ ಮುದ್ದಿನ ಮಕ್ಕಳೇ 
ನಿಮ್ಮನ್ನು ಏನು ಹೊಗಳಿದರೂ ಕಡಿಮೆಯೇ 
ಆದರೂ  ಇಷ್ಟೆಲ್ಲಾ ಉಪಕಾರ ಮಾಡಿದ ನಿಮ್ಮನ್ನು 
ಮನುಜನೆಂಬ ಜೀವಿಯು ಕೊಲ್ಲುತ್ತಿದೆ ತನ್ನ ಸ್ವಾರ್ಥಕ್ಕೆ 
ಪ್ರತಿಕ್ಷಣ ನೋವು ನೀಡುತ್ತಿದೆ ಪ್ರಕೃತಿ ಮಾತೆಗೆ 

ತಾಯೇ ನಿನ್ನ ಕ್ಷಮೆ ಕೇಳಲು ಅನಹ್ರರು ನಾವು 
ಆದರೂ ನಾಚಿಕೆ ಇಲ್ಲದೇ ಕೇಳುತಿದ್ದೇವೆ ಮತ್ತೊಮ್ಮೆ 
ರೌದ್ರ ನರ್ತನದಿಂದ ಹೇಳದೇ  ನಿನ್ನ ಪ್ರೀತಿಯ 
ತೋಳಲ್ಲೇ ನಮ್ಮನು ಬಂಧಿಸಿ ಅರ್ಥಮಾಡಿಸು 
ನಿನ್ನ ಮಡಿಲಲ್ಲಿ ಬೆಳೆದ ಅನ್ಯರನ್ನು ಸಂರಕ್ಷಿಸು ಎಂದು 


Monday, 9 December 2013

ಗಿಡಮರಗಳಿಗೊಂದು ನಮನ

ನಗು ಬಂದರೂ ನಗದೇ 
ಅಳು ಬಂದರೂ ಅಳದೇ
ಮನದ ಭಾವನೆಯನ್ನು ಅದುಮಿಟ್ಟುಕೊಂಡು 
ನಿನ್ನ ಮಗುವನ್ನು ಕಿತ್ತು ಅಲಂಕಾರಕ್ಕೆ, ಹಸಿವಿಗೆ 
ಬಳಸುವಾಗಲೆಲ್ಲ ಮೌನರೋಧನೆಯಲ್ಲೇ 
ಕಾಲ ಕಳೆಯುವ ನಿನ್ನ ಉದಾರ ಮನಸಿಗೆ 
ನನ್ನದೊಂದು ನಮನ ಓ ಗಿಡಮರಗಳೇ

Friday, 6 December 2013

ತುಡಿತ

ನಿನ್ನ ನೆನಪು ಸುಳಿದಾಗಲಿಲ್ಲ ಈ ಹೃದಯದಲ್ಲಿ 
ಮಿಡಿಯುವುದು ಒಂದು ಮನಮೋಹಕ ಮಿಡಿತ 

ಅಂತರಂಗದ ಆಳದಲ್ಲಿ ಎಲ್ಲೋ ಒಂದು ಕೇಳುತಿದೆ 
ನಿನಗಾಗಿ ಚಡಪಡಿಸುತ್ತಿರುವ ನನ್ನ ಮನದ ತುಡಿತ 

ಪ್ರತಿಕ್ಷಣ ಬೇಯುತಿರುವೆ ವಿರಹವೆಂಬ ಬೆಂಕಿಯಲ್ಲಿ  
ಕಾಯುತಿರುವೆ ನಾ ತೇಲಲು ನಿನ್ನ ಸನಿಹವೆಂಬ ತಂಗಾಳಿಯಲ್ಲಿ 

Wednesday, 4 December 2013

ವೇದನೆ

ಮರುಭೂಮಿಯಲ್ಲಿ ಮರಳ ಹೊರತು ಸಿಗುವುದೇ ಹರಳು 
ಸತ್ತ ಮನಸಲಿ ನಿರ್ಭಾವುಕ ಸ್ಥಿತಿ ಬಿಟ್ಟರೆ 
ಚಿಗುರುವುದೇ ಸಂತಸದ ಚಿಲುಮೆ 
ಆಸೆಗಳೆಲ್ಲ ಸತ್ತು ಹೋಗಿ ಮನವೆಂಬ ಹೂವು
ಮತ್ತೆಂದು ಆಕಾರ ತಾಳದ ಕಲ್ಲಂತಾಗಿದೆ
ಶಿಲ್ಪಿ ಬಂದು ಕೆತ್ತಿದರೆ ಸುಂದರ ಶಿಲೆಯಾಗಬಹುದೇನೋ ಆ ಕಲ್ಲು
ಒಡೆದು ಹೋದ ಕನ್ನಡಿಯಂತಾಗಿರುವ ಮನವು ಮಾತ್ರ
ಮತ್ತೆಂದು ಅರಳಲಾಗದು ಸುಂದರ ಹೂವಾಗಿ 

Thursday, 28 November 2013

ವಾಸ್ತವ

ಆಕಾಶದ ಎತ್ತರಕ್ಕೆ ಹಾರಾಡುವ 
ಗಾಳಿಪಟ ಸುಂದರವಾಗಿ ಕಾಣುವುದು 
ಆದರೆ ಎತ್ತರಕ್ಕೆ ಹಾರಿಸಿದ ಕೈಗಳು ಮಾತ್ರ 

ಇಳೆಯೊಳಗೆ ಮರೆಯಾಗುವುದು
ಬದುಕು ಸಹ ಹಾಗೆ ಅಲ್ಲವೇ
ಕೈಹಿಡಿದು ಕಾಪಾಡಿದ ಮನವು
ಮೌನದಲ್ಲೇ ಮುಳುಗುವುದು
ಉಪಕಾರ ಮಾಡಿಸಿಕೊಂಡ ಮನವು
ಹಕ್ಕಿಯಂತೆ ಹಾರಾಡುವುದು 

Sunday, 17 November 2013

ಮಳೆಯಿಂದಾದ ವಿರಹ

ಮಳೆ ಸುರಿಯುವ ಸುಂದರ ಸಂಜೆಯಲಿ 
ನೀನಿಲ್ಲವೆಂದು ಕೊರಗುತಿರುವೆ ನಾ ಈ  ಕ್ಷಣ 
ಏನು ಮಾಡಿದರೂ ಕೇಳುತಿಲ್ಲ ನನ್ನ ಮನ 
ಬೇಡವೆಂದರೂ ಕೆಣಕುತ್ತಿದೆ ನಿನ್ನ ನೆನಪು 
ಆ ಕ್ಷಣ ಕಣ್ಣಲ್ಲಿ ಮೂಡುವುದು ಒಂದು ಹೊಳಪು 
ಮಳೆ ನಿಂತು ಹೋಗಿ ಎಲೆಯಿಂದ ಹನಿ ಉದುರುವ ಒಳಗೆ 
ನೀ ಬರದಿದ್ದರೆ ನನ್ನ ನಯನದಿಂದ ಜಾರುವುದು 
ಕಣ್ಣೀರಿನ ಹನಿ ಓ ಹುಡುಗ  

Sunday, 10 November 2013

ಕವನ

ಬಹಳ ದಿನವಾಯ್ತು ನಿನ್ನ ನೋಡಿ ನಕ್ಕು ನಲಿದಾಡಿ 
ಬೇಕೆಂದರೂ ಹತ್ತಿರ ಬರಲಾರಷ್ಟು ದೂರಾಗಿದ್ದೆ ನಿನ್ನಿಂದ 
ಆದೆಷ್ಟು ಪರದಾಡಿದೆನೋ ನಾ ನಿನ್ನ ಕಾಣದೆ 
ಆಗಲಿದ್ದ ಪ್ರತಿಕ್ಷಣ ಯುಗದಂತೆ ಕಳೆದೆ 
ಅಂತು ಇಂತೂ ನಿನ್ನ ಸನಿಹ ಸುಳಿವ ಕ್ಷಣ ಬಂದಾಗಿದೆ 
ಬಯಸಿದ್ದೆಲ್ಲ ನಿನ್ನಲ್ಲಿ ಬರೆಯುವ ಆಸೆ ಚಿಗುರೊಡೆದಿದೆ 
ಇನ್ನೇನು ಬೇಕು ಹೇಳು ನನಗೆ ಓ ಕವನವೇ
ಬಯಸದೇ ಏನನ್ನೂ ನಾ ನಿನ್ನ ಪಡೆದೆ 
ಬಯಕೆಯ ಹೊಳೆಯೇ ಮನದಲ್ಲಿ ಹರಿಸುತಿರುವೆ 
ಬೇಡಿದರೂ ಸಿಗದಂತ ವರವಿಂದು 
ಬೇಡದೇನೇ ನನಗಿಂದು ಸಿಕ್ಕಿದೆ 
ಧನ್ಯವೋ ಧನ್ಯ ಈ ಜೀವ 
ಸದಾ ಹರಿಯುತಿರಲಿ ಹೀಗೆ ನಿನ್ನ ಒಲವಿನ ಭಾವ 

Monday, 14 October 2013

ಕಾದು ಸಾಕಾಗಿದೆ ಎನಗೆ

ಬಯಸದೇ ನೀ ಹತ್ತಿರ ಸುಳಿದ ಆ ಕ್ಷಣ 
ಅರಿತಿರಲಿಲ್ಲ ಏನನ್ನೂ  ನನ್ನ ಈ ಮನ 
ಜೊತೆಯಲೇ ಬೆರೆಯುತ ದಿನಗಳ ಎಣಿಸುತ್ತ 
ಸಾಗುತಲಿತ್ತು ನಮ್ಮ ಸುಂದರ  ಜೀವನ 
ಪ್ರತಿಕ್ಷಣ ಕಳೆಯುವಾಗಲೆಲ್ಲ ಬೇಕೆನಿಸುತ್ತಿತ್ತು ನಿನ್ನ ಸನಿಹ 
ಆದರೂ ವಿಧಿಯಿಲ್ಲದೇ ಬದುಕುತಿರುವೆ ನಿನ್ನ ವಿನಹ 
ಏನು ಮಾಡಲು ಅರಿಯದೆ ಮೌನವಾಗಿದ್ದೇನೆ ನಾ ಇಂದು 
ಎಡೆಬಿಡದೆ ಕಾಯುತಿರುವೆ ನಿನ್ನ ಸೇರುವ ದಿನ ಬರುವುದೆಂದು  

Thursday, 10 October 2013

ಮುಂಜಾನೆಯ ಸಮಯ

ಹೂ ಅರಳುವ ಸಮಯ 
ಇಬ್ಬನಿ ಎಲೆಗೆ ಮುತ್ತಿಕ್ಕುವ ಸಮಯ 
ಚಂದ್ರ ಮರೆಯಾಗಿ ಸೂರ್ಯೋದಯವಾಗುವ ಸಮಯ 
ನಸುಕು ಮರೆಯಾಗಿ ಬೆಳಕು ಹರಿಯುವ ಸಮಯ 
ಆಹಾ ಏನು ಆನಂದವೋ ಈ ಸೌಂದರ್ಯವ  ಸವಿಯಲು 
ಈ ಸಮಯ ಕಂಗಳೆರಡು ಸಾಲದಯ್ತು ಎನಗೆ 
ಮನ ಬಯಸುತ್ತಿದೆ ರಂಗೋಲಿ ಬಿಡಿಸಲು 
ಮನೆ ಮುಂದಿರುವ ಧರೆಗೆ 


Wednesday, 9 October 2013

ಅಂದು ನಾನೆಲ್ಲೋ ನೀನೆಲ್ಲೋ.... 

ನಡುವೆಲ್ಲೋ ಬೆಸೆಯಿತು ನಮ್ಮಿಬ್ಬರ ಮನಗಳ ಭಾವಾಂಕುರ.... 

ಅದರ ಫ಼ಲವಾಗಿ ಆಗಿದೆ ಇಂದು ಪ್ರೇಮಾಂಕುರ....

ವರ್ಣಿಸಲು ಅಸಾಧ್ಯ

ನೋಡಲು ನೀನು ಆ ಹುಣ್ಣಿಮೆಗಿಂತ ಚಂದ 
ನಕ್ಕರೆ ನೀನು ನಾಚುವುದು ಹೂವಿನ ಅಂದ 
ಎಲ್ಲೆಂದು ಹುಡುಕಲಿ ನಿನ್ನೊಲವ ವರ್ಣಿಸುವ ಶಬ್ಧಗಳ 
ಹುಡುಕಾಡಿ ಸೋತಿರುವೆ ನಾ ಪ್ರತಿಕ್ಷಣ 
ನಾ ಎಲ್ಲಿದ್ದರೂ ಹೇಗಿದ್ದರೂ ಬಯಸುವುದೊಂದೇ 
ಜೊತೆಗಿದ್ದರೆ ನೀನು ಬಾಳೆಲ್ಲ ಹಾಲುಜೇನು 

Wednesday, 2 October 2013

ಕರೆಯೋಲೆ

ಒಲವಿನ ಬಂಧನದಲ್ಲಿ ನಾವಿಬ್ಬರೂ ಬೆರೆತು 
ಅದಕ್ಕೆಂದೇ ಕಳಿಸಿರುವೆ ಮದುವೆಯ ಮಮತೆಯ ಕರೆಯೋಲೆ 
ಎರಡು ಮನಸುಗಳ ಮಿಲನ ಮದುವೆ ಎಂಬ
ಮೂರಕ್ಷರಗಳಲ್ಲಿ ಆಗುವ ಶುಭ ಸಮಯ 
ನಮ್ಮ ಮನಸಿನ ಭಾವನೆಗಳು ಮದರಂಗಿಯಲ್ಲಿ 
ಮೂಡುವ ಸಮಯ ಇಂತಹ ಶುಭಗಳಿಗೆಯಲ್ಲಿ 
ನಾವಿಬ್ಬರೂ ಕಾಯುತಿದ್ದೇವೆ ನಿಮ್ಮೆಲ್ಲರ ಆಶೀರ್ವಾದವ 
ಅಕ್ಷತೆಯ ರೂಪದಲ್ಲಿ ಪಡೆಯಲು ಅದಕ್ಕೆಂದೇ 
ನಾ ಬರೆದಿರುವೆ ಈ ಕವನವ ಇದನ್ನೇ ಕರೆಯೋಲೆಯೆಂದು 
ಸ್ವೀಕರಿಸಿ ಕಳುಹಿಸಿ ನಿಮ್ಮ ಪ್ರೀತಿ ತುಂಬಿದ ಆಶಿರ್ವಾದವ 
ಹರಸಿ ನಮಗೆ ಪ್ರೀತಿಯಿಂದ ಸಾಗಿಸಿ ಎಂದು ನಮ್ಮಿಬ್ಬರ ಜೀವನವ

Monday, 30 September 2013

ಆಶ್ರಯ

ಒಲವಿನ ಮೋಡಗಳಿಂದ ಎಡೆಬಿಡದೆ  ಸುರಿಯುತಿದೆ 

ಪ್ರೀತಿಯೆಂಬ ಮಳೆಯು ಈ ಹೃದಯದ ಇಳೆಗೆ 

ಇಂಗಿಸಿ ಹಿಡಿದಿಟ್ಟುಕೊಂಡಿದೆ ಪ್ರೀತಿಯೆಂಬ ಅಂತರ್ಜಲವ 

ಬೇಡಿದಾಗ ಸುರಿಯದ ಮಳೆಗೆ ಬೇಕಲ್ಲವೇ 

ತನ್ನಲ್ಲಿ ಬಚ್ಚಿಟ್ಟ ಅಂತರ್ಜಾಲದ ಆಶ್ರಯ ಈ ಇಳೆಗೆ 

Tuesday, 24 September 2013

ಕೈ ಆಸರೆ

ಮೋಡದ ಮರೆಯಲ್ಲಿ ಅಡಗಿದ ಚಂದ್ರನ ಹಾಗೆ 
ನನ್ನ ಮನದ ಗೋಡೆಯ ಹಿಂದೆ ನೀ ಅವಿತಿರುವೆ 
ಬಂದು ನಿನ್ನ ಮೊಗವನ್ನು ಒಮ್ಮೆ ತೋರಿದರೆ 
ಚಂದಿರನ ಕಂಡ ನೈದಿಲೆಯಂತೆ ನಾ ಬೀಗುವೆ 
ನಿನ್ನ ರೂಪವ ಹೊಗಳುವ ಆಸೆ ಎನಗಿಲ್ಲ 
ನಿನ್ನ ಮನದ ಅಂದವೆ ಸಾಕು ಅದುವೇ ನನಗೆಲ್ಲ 
ನನ್ನ ಜೀವಕ್ಕೆ ಜೀವನಕ್ಕೆ ಬೇಕಾಗಿದೆ 
ಒಲವು ಬೆರೆತ ನಿನ್ನ ಕೈಗಳ ಹಾರದ ಆಸರೆಯೊಂದೆ 

Thursday, 19 September 2013

ಸಿಗದ ಉತ್ತರ

ನೂರಾರು ಆಸೆಗಳು ಹೂವಿನಂತೆ ಅರಳಿ 
ಮನಸೆಂಬ ಬಳ್ಳಿಯ ಸುತ್ತ ಹಬ್ಬುತ್ತಿವೆ 
ಬಣ್ಣ ಬಣ್ಣದ ಹೂಗಳ ನಡುವೆ ಹಸಿರೆಲೆಯು ಇದ್ದಂತೆ 
ಥರ ಥರ ಭಾವಗಳ ನಡುವೆ ಮನವು ಹೊಯ್ದಾಡುತ್ತಿದೆ 
ಇದಕ್ಕೆ ಏನೆಂದು ಹೇಳುವುದೋ ನಾ ಕಾಣೆ 
ಚಂಚಲ ಮನಸಿನ ವಿಚಿತ್ರ ಭಾವಗಳ ಮೂಲ 
ಎಲ್ಲಿರುವುದೋ ಹೇಗೆ ಹುಟ್ಟುವುದೋ  ಒಂದೂ ತಿಳಿಯದು 
ಈ ಪ್ರಶ್ನೆಗೆ ಉತ್ತರ ಸಿಕ್ಕ ಕ್ಷಣ ನನ್ನ ಮನಸಾಗುವುದು ಧನ್ಯ 

Tuesday, 17 September 2013

ವಿಷಯದ ಹುಡುಕಾಟ

ಬರೆಯಬೇಕೆಂದು ಪ್ರಯತ್ನಿಸಿದರೂ ಏನೂ 
ತೋಚುತ್ತಿಲ್ಲ ಮನಸಿಗೆ ಇಂದು 
ಏನಾದರೂ ಸರಿಯೇ ಬರೆದೇ ಬಿಡಲು 
ನಿರ್ಧರಿಸುವೆ ನಾ ಈ ಕ್ಷಣ 
ಅಂದುಕೊಂಡ ಪದಗಳೆಲ್ಲೂ ಸಿಗುತ್ತಿಲ್ಲ 
ಆದರೂ ಬರೆಯದೇ ಇರಲು ಮನಸಿಲ್ಲ 

ಒಲವಾಯಿತು ಛಲವಾಯಿತು 
ನಿಸರ್ಗವಾಯಿತು ನೀಹಾರಿಕವಾಯಿತು 
ಸ್ನೇಹವಾಯಿತು ಪ್ರೇಮವಾಯಿತು 
ಮಗುವಾಯಿತು ನಗುವಾಯಿತು 
ಆನಂದ ಭಾಷ್ಪವೂ ಹರಿಯಿತು 
ದುಃಖದ ಕಣ್ಣೀರೂ ಸುರಿಯಿತು 

ನಾ ಬರೆಯಬೇಕೆಂಬ ವಿಷಯಗಳೆಲ್ಲ 
ಸವೆಯುತ್ತಾ ಎಲ್ಲಿಗೆ ಹೋದವೋ ನಾ ಕಾಣೆ 
ಮನದ ಹಂಬಲ ಈಡೆರುವುದೋ ಇಲ್ಲವೋ 
ಅದೇನೇ ಇರಲಿ ಕವನ ಎಂಬ ಕೋಣೆಯೊಳಗೆ 
ಭಾವನೆಯ ಹಾಳೆಗಳು ರಾಶಿ ರಾಶಿ ಬಿದ್ದಿವೆ 
ಅವನ್ನೆಲ್ಲ ಆಯ್ದು ಒಂದು ಸುಂದರ 
ಕವನವ ಬರೆದೇ ತೀರುವೆ ನಾ ಇಂದು

ವಿಷಯದ ಹುಡುಕಾಟ

ಬರೆಯಬೇಕೆಂದು ಪ್ರಯತ್ನಿಸಿದರೂ ಏನೂ 
ತೋಚುತ್ತಿಲ್ಲ ಮನಸಿಗೆ ಇಂದು 
ಏನಾದರೂ ಸರಿಯೇ ಬರೆದೇ ಬಿಡಲು 
ನಿರ್ಧರಿಸುವೆ ನಾ ಈ ಕ್ಷಣ 
ಅಂದುಕೊಂಡ ಪದಗಳೆಲ್ಲೂ ಸಿಗುತ್ತಿಲ್ಲ 
ಆದರೂ ಬರೆಯದೇ  ಇರಲು ಮನಸಿಲ್ಲ 

ಒಲವಾಯಿತು ಛಲವಾಯಿತು 
ನಿಸರ್ಗವಾಯಿತು ನೀಹಾರಿಕವಾಯಿತು 
ಸ್ನೇಹವಾಯಿತು ಪ್ರೇಮವಾಯಿತು 
ಮಗುವಾಯಿತು ನಗುವಾಯಿತು 
ಆನಂದ ಭಾಷ್ಪವೂ ಹರಿಯಿತು 
ದುಃಖದ ಕಣ್ಣೀರೂ ಸುರಿಯಿತು 

ನಾ ಬರೆಯಬೇಕೆಂಬ ವಿಷಯಗಳೆಲ್ಲ 
ಸವೆಯುತ್ತಾ ಎಲ್ಲಿಗೆ ಹೋದವೋ ನಾ ಕಾಣೆ 
ಮನದ ಹಂಬಲ ಈಡೆರುವುದೋ ಇಲ್ಲವೋ 
ಅದೇನೇ ಇರಲಿ ಕವನ ಎಂಬ ಕೋಣೆಯೊಳಗೆ 
ಭಾವನೆಯ ಹಾಳೆಗಳು ರಾಶಿ ರಾಶಿ ಬಿದ್ದಿವೆ 
ಅವನ್ನೆಲ್ಲ ಆಯ್ದು ಒಂದು ಸುಂದರ 
ಕವನವ ಬರೆದೇ ತೀರುವೆ ನಾ ಇಂದು 

Monday, 16 September 2013

ನನ್ನ ಮಲ್ಲಿಗೆ

ಧರೆಯ ಮೇಲೆ ಹುಟ್ಟಿ ಅಂಬರದಲ್ಲಿ ಚಾಚಿ 
ಕೈಗೆಟುಕದಷ್ಟು ಮೇಲೆ ಹೋಗಿದೆ 
ನಿನ್ನ ಕಾಂತಿ ಮತ್ತು ಕಂಪು 
ಅಂದಕ್ಕೂ ನೀನೆ ಪೂಜೆಗೂ ನೀನೆ 
ಪ್ರೀತಿಗೂ ನೀನೆ ಸ್ನೇಹಕ್ಕೂ ನೀನೆ 
ಓ ನನ್ನ ಮಲ್ಲಿಗೆಯೇ 

ಎಂತಹ ನೋವಿನಲ್ಲೂ ನಾ ನಿನ್ನ ಕಂಡರೂ 
ಶ್ವೇತ ವರ್ಣದ ನಿನ್ನ ದುಂಡು ಮುಖವ 
ನೋಡಿ ಕಂಪನ್ನು ಸವಿದರೆ ಸಾಕು 
ಮನದ ಚೆಂತೆಯಲ್ಲ ಮಂಜಿನಂತೆ ಕರಗಿಸಿಬಿಡುವೆ 
ಓ ನನ್ನ ಮಲ್ಲಿಗೆಯೇ 

ಪ್ರೇಮ ನಿವೇದನೆಗೆ  ಬೇಕು ನೀನೆ 
ವಿವಾಹ ಬಂಧನಕೇ ಬೇಡುವರು ನಿನ್ನನ್ನೇ 
ಸೂರ್ಯನ ಬೆಳಕಿಗೆ ಸೂರ್ಯನೇ ಸಾಟಿಯಂತೆ 
ಚಂದ್ರನ ಕಾಂತಿಗೆ ಚಂದ್ರನೇ ಸಾಟಿಯಂತೆ 
ಹಾಗೆ ನಿನ್ನ ರೂಪಕ್ಕೆ ಕಂಪಿಗೆ ನೀನೆ ಸಾಟಿ 
ಓ ನನ್ನ ಮಲ್ಲಿಗೆಯೇ 

Thursday, 12 September 2013

ಆಕಾಂಕ್ಷೆ

ನೀರ ಅಗಲಿ ಮೀನು ಇರಲಾರದು 
ಮಗುವ ಅಗಲಿ ತಾಯಿ ಇರಲಾರಳು 
ಗೂಡು ಮರೆತು ಹಕ್ಕಿ ಇರಲಾರದು 
ಹಸಿರ ಕೊಂದರೆ   ಉಸಿರು ನಿಲ್ಲಲಾರದು 
ಬೆಟ್ಟಕ್ಕೆ ಚುಂಬಿಸದೆ ಮೋಡವು ಧರೆಗಿಳಿಯದು 

ಪ್ರಕೃತಿಯ ನಡುವೆ ಬದುಕುವ ನಾವು ನಿಸರ್ಗ
ಮಾತೆಯ ಮಡಿಲಿಂದ ಹೊರಬಂದು ಬಾಳಲಾರೆವು 
ಸುಂದರ ಸಮೃಧ್ಧಿಯಿಂದಿದ್ದರೆ ನಮ್ಮ ನಿಸರ್ಗ 
ಎಲ್ಲರ ಜೀವನ ಆಗುವುದು ಸ್ವರ್ಗ 

ಪ್ರಕೃತಿ ವಿರುದ್ಹ ಬೇಡ ಅತಿಯಾದ ನಿರೀಕ್ಷೆ 
ಮಾಡೋಣ ಪ್ರಕೃತಿಯ ಪರ ಒಂದು ಸಮೀಕ್ಷೆ 
ಇಟ್ಟುಕೊಂಡು ಒಳ್ಳೆಯ ಆಕಾಂಕ್ಷೆ 

Wednesday, 11 September 2013

ಮೌನದಿ ಬರೆದ ಒಲವಿನ ಅಕ್ಷರ

ಅರಿಯದೆ ಬಂದ ನೀನು ನನ್ನ 
ಪೂರ್ಣ ಮನವನ್ನು ಆವರಿಸಿರುವೆ 
ಕರೆಯದೆ ಬಂದ ನೀನು ನನ್ನ 
ಕಿವಿಯಲ್ಲಿ ಪಿಸುಗುಡುವ ಧ್ವನಿಯಾಗಿರುವೆ 
ಹೇಳದೆ ನುಗ್ಗಿದ ನೀನು ನನ್ನ 
ಜೀವನದ ಆಸರೆಯಾಗಿ ಹೋಗಿರುವೆ 

ನನ್ನ ತನು ಎಲ್ಲಿದ್ದರೂ ಸರಿಯೇ 
ಮನ ಮಾತ್ರ ನಿನ್ನ ಸುತ್ತ ತಿರುಗುತ್ತಲೇ ಇಹುದು 
ಏನು ಮೋಡಿ ಮಾಡಿ ಹೋದೆಯೋ ಏನೋ 
ನಿನ್ನ ನೋಡಿದ ಕ್ಷಣದಲ್ಲೇ ನನ್ನ ಮಾತೆಲ್ಲ ಮೌನವಾಯಿತು 
ಭಾವನೆಗಳ ಸಂಗಮವಾಗಿ ಬರೀ ಮನವೇ ಮಾತಾಡಿತು 

ಈ ಮೌನದ ಅಕ್ಷರಗಳ ನಿನಗೆಂದೇ ಬರೆಯುತಿರುವೆ 
ಬೇಗ ಬಂದು ಜೋಡಿಸು ಬಾರಾ 
ಮಾಡೊಂದು ಪ್ರೀತಿಯ ಅಕ್ಷರಗಳ ಸುಂದರ ಹಾರ 


ನಿರಾಸೆ ಬೇಡ ಓ ಬದುಕೇ

ನಾ ಬಯಸಿದ ಜೀವನ ನನ್ನದಾಗಲಿಲ್ಲ 
ಹೀಗೆಂದು ನಾ ಸುಮ್ಮನಿದ್ದರೆ ನನಗಿಂತ ಬೇರೆ ಮೂರ್ಖರಿಲ್ಲ 
ಸಿಗದ ಬಾಳಿನ ಆಸೆಯ ಬಿಟ್ಟು 
ಸಿಕ್ಕ ಬಾಳನ್ನು ಹಸನಾಗಿಸುವ ಗುರಿಕಡೆಗೆ ನಡೆಯುವುದೇ 
ವಾಸ್ತವ ಬದುಕಿನ ನಿಜವಾದ ಅರ್ಥ 

Friday, 6 September 2013

ಸಂಬಂಧ

ರಾಗಕ್ಕೂ ತಾಳಕ್ಕೂ ಹೋಲಿಕೆಯಾದರೆ 
ಮಧುರ ಗಾನಸುಧೆ ಹರಿಯುವುದು 

ಕರುಳಿಗೂ ಕಂದನಿಗೂ ನಂಟಿದ್ದಾಗಲೇ 
ಅಮ್ಮನಿಗೆ ಕೇಳುವುದು ಮಗುವಿನ ಆರ್ತನಾದ 

ಮಲ್ಲಿಗೆ ಸಂಪಿಗೆ ಕೇದಗೆ ಬೆರೆತಾಗಲೇ 
ಹರಿಯುವುದು ಅನನ್ಯ ಸುಗಂಧ 

ಅಂತೆಯ ಬಾಳಿನ ಬಂಧಗಳನು ಅರಿತಾಗಲೆ 
ಜೀವನ ಆಗುವುದು ನಂದನ 

Wednesday, 4 September 2013

ಬೇಡೆನು ಏನು ನಾ ನಿನಗೆ

ಕಡಲಲ್ಲಿ ಇರುವ ಮುತ್ತಂತೆ 
ಭುವಿಯೊಳಗೆ ಹುದುಗಿದ ಬಂಗಾರದಂತೆ 
ನೀ ನನ್ನ ಉಸಿರಲಿ ಬೆರೆತಿರುವೆ 

ಮರಕ್ಕೆ ಕಟ್ಟಿದ ಜೇನು ಗೂಡಂತೆ 
ಬಳ್ಳಿಗೆ ಅಂಟಿದ ಹೂಗಳಂತೆ 
ನನ್ನ ಮನಸ್ಸು ಸದಾ ನಿನ್ನ ಹಿಂದೆಯೇ ಸುತ್ತುತ್ತಿದೆ 

ಎಲ್ಲೇ ಇರು ಹೇಗೆ ಇರು ನಾ ವ್ಯಥೆಪಡೆನು 
ನನಗೆಂದೇ ಒಲಿದ ನಿನ್ನ ಪ್ರೇಮವೊಂದಿದ್ದರೆ ಸಾಕೆನಗೆ 
ಕೊನೆ ಉಸಿರು ಇರುವ ತನಕ ಬೇರೇನೂ ಬೇಡೆನು ನಾನಿನಗೆ 

Monday, 2 September 2013

ನೆನಪಿಂದ ನೆನಪಾದ ನೆನಪೊಂದು 
ಹಳೆಯ ನೆನಪೊಂದನು ಕೆಣಕುತಿದೆ 
ಹಳೆಯ ಕಹಿನೆನಪನು ಅಳಿಸುವ ಬದಲು 
ಸಿಹಿನೆನಪಿನ ಬೇರನ್ನು ಕೀಳುತ್ತಿದೆ ಆ ನೆನಪು 
ನೆನೆಯಬಾರದೆಂದು ಬಯಸಿದ ಈ ನೆನಪು 
ದಿನ ದಿನವೂ ಮತ್ತೆ ಮತ್ತೆ ನೆನಪಾಗುವುದೇಕೆ... ??


Saturday, 31 August 2013

ಬೀಳ್ಕೊಡುಗೆ

**********************************************************
ಸುಂದರ ಹೂವಿನ ಹಾಗೆ ಮುಖ ಅರಳಿಸಿ 
ಸದಾ ಮೊಗದಲ್ಲಿ ಮುಗುಳ್ನಗೆ ಬೀರುತ್ತಾ 
ದಿನ ಆರಂಭಿಸಿ ಎಲ್ಲರ ಪ್ರೀತಿಯ ಗಳಿಸುತ್ತಾ 
ಎಲ್ಲರ ಹೃದಯದಲ್ಲಿ ಮನೆ ಮಾಡಿದ ನೀವು 
ಇಂದು ವಿಶ್ರಾಂತಿಯ ಜೀವನಕ್ಕೆ ಕಾಲಿಡುತ್ತಿದ್ದೀರಿ 

ಈ ಕ್ಷಣ ನನ್ನ ಬಾಳಿನ ದೊಡ್ಡ ನೋವಿನ ಕ್ಷಣ 
ಏಕಾದರೂ ಈ ಸಮಯ ಬಂತೋ ನಾ ಅರಿಯೆ 
ಬೇಡವೆಂದರೂ ಬರುತ್ತಿದೆ ದುಃಖದ ನೀರು ಕಣ್ಣೊಳಗೆ 
ಆದರೂ ಇದ ಬದಲಾಯಿಸಲು ಆಗದು ನನಗೆ

ಬಂದೇ  ಬಿಟ್ಟಿತು ನಿಮ್ಮನ್ನು ಅಗಲುವ ದಿನ 
ಆಗಲಿ ನಿಮಗೆ ಇಂದಿನಿಂದ ಪ್ರತಿದಿನವೂ ಶುಭದಿನ 
ಹಾರೈಸುವೆ ನಾ ನಿಮಗೆ ಈ ಕ್ಷಣ 

ಸದಾ ನಿಮ್ಮ ಮೊಗದಲ್ಲಿ ತುಂಬಿರಲಿ ಹೂನಗೆ 
ತೋಚುತ್ತಿಲ್ಲ ಏನು ಉಡುಗೊರೆ ಕೊಡಲಿ ನಾ ನಿಮಗೆ 
ಉಡುಗೊರೆಯಾಗಿ ಬರೆದಿರುವೆ ಈ ಕವನ
ಖುಷಿ ತುಂಬಿದ ನಂದನವಾಗಲಿ ನಿಮ್ಮ ಜೀವನ 

Friday, 30 August 2013

ರಾಗದ ಹುಡುಕಾಟ

ಎಲ್ಲೋ ಗುನುಗುತಿದ್ದ ಸಂಗೀತದ ಸ್ವರವೊಂದು 
ಬಿತ್ತು ನನ್ನ ಕಿವಿಯ ಮೇಲೆ 
ಹುಡುಕುವ ಆಸೆಯು ಬಂದಿತು ಮನದೊಳಗೆ 
ಏನು ಮಾಡಿದರೂ ಸಿಗುತ್ತಿಲ್ಲ ಆ ರಾಗದ ಅಲೆ
ಅಲೆದು ಅಲೆದು ಸಾಕಾಗಿ ಮುಟ್ಟಿದೆ ನನ್ನ ಕಿವಿ ಓಲೆ 
ಕೈಗೆಟುಕಿತು ಆ ಹಾಡಿನ ಮೂಲ 
ಅದು ಬೇರೇನೂ ಅಲ್ಲ ನನ್ನ ಓಲೆಗೆ 
ಬೆಸೆದ  ಝುಮುಕಿಯ ನಾದ 

Wednesday, 28 August 2013

ಒಲವಿನ ಉದಯ

ಬೆರಳಿಗೆ ಉಂಗುರವಿಟ್ಟ ಆ ಕ್ಷಣ 

ಕೆನ್ನೆಯ ಮೇಲೆ ಗುಳಿಯೊಂದು ಮೂಡಿತು 
ಕಣ್ಣಲ್ಲಿ ಪ್ರೀತಿಯ ಮಿಂಚೊಂದು ಹರಿಯಿತು 
ಮನಸಿನಾಳದಲ್ಲಿ ಹೇಳಲಾಗದ ಆನಂದ 
ಹೃದಯದಲ್ಲಿ ಎಂದೂ  ಕಾಣದ ರೋಮಾಂಚನ 

ಎಲ್ಲೋ ಇದ್ದ ನಮ್ಮಿಬ್ಬರ 
ಬಂಧಿಸಿದೆಇಂದು ಆ ಉಂಗುರ 
ಮೂಡುತ್ತಿವೆ ಭಾವನೆಗಳು ಥರ ಥರ 

ಏನು ಚಂದದ ಅನುಭವವಿದು ಹೇಳಲಾಗುತ್ತಿಲ್ಲ 
ಪ್ರೀತಿಯ ಸೆಳೆತಕ್ಕೆ ಸಿಕ್ಕಮೇಲೆ ಈ 
ಮನಸು ನನ್ನ ಮಾತನ್ನೇ ಕೇಳುತ್ತಿಲ್ಲ 
ಇದಕ್ಕೆಲ್ಲ ಕಾರಣ ನೀನೆ ಓ ನನ್ನ ನಲ್ಲ 


Sunday, 25 August 2013

ಪುಟ್ಟನ ಕೋರಿಕೆ

ಅಕ್ಕರೆಯ ಅಪ್ಪ ಅಮ್ಮನಿಗೆ ಅನಾಮಿಕನ  ನಮನ
ನನಗಿದೋ ಇಂದು ಮಾಡುತಿರುವಿರಿ ನಾಮಕರಣ 
ಚಿನ್ನು ಪುಟ್ಟ ಮುದ್ದು ಬಂಗಾರ ಎಂಬ ಹೆಸರಿಂದಲೇ 
ಕರೆಸಿಕೊಳ್ಳುತ್ತಿರುವೆ ನಾ ಪ್ರತಿದಿನ 
ಮುದ್ದಾದ ಹೆಸರೊಂದನು ಬಯಸುತ್ತಿದೆ ನನ್ನ ಮನ 
ಈ ಶುಭಸಂದರ್ಭದಲ್ಲಿ ನಮ್ಮ ಮನೆ ಆಗಲಿ 
ನನ್ನ ಅಜ್ಜ ಅಜ್ಜಿಯರ ಆಶಿರ್ವಾದಗಳಿಂದ ಕೂಡಿದ ನಂದನ 

Thursday, 22 August 2013

ಆಸೆ

ನೈದಿಲೆಯ ನಯನವ ನೋಡುವ ಆಸೆ ಚಂದ್ರನಿಗೆ 
ತಾವರೆಯ ಅಂದ ಪದಗಳಲ್ಲಿ ಬಂಧಿಸುವಾಸೆ ಕವಿಗೆ 
ಆಗಸದಲ್ಲಿ ತೇಲುವ ಬೆಳ್ಳಿಮೋಡಗಳನ್ನು 
ಚುಂಬಿಸುವಾಸೆ ಗಿರಿಶಿಖರಗಳಿಗೆ 
ದೇವನ ಸೇರುವ ಪುಷ್ಪಗಳ ಮುದ್ದಿಸುವಾಸೆ ಆ ಬಳ್ಳಿಗೆ 
ಕವಿಯು ಮನುಜನಾದರೆ ಗಿರಿಯು 
ನಿಸರ್ಗ ಕೊಟ್ಟ ಸುಂದರ  ಉಡುಗೊರೆ 
ಮೇಲಿರುವ ತಾರೆಗಳಾದರೂ ಕೆಳಗಿರುವ ಗಿರಿಗಳಾದರೂ 
ಅವುಗಳ ಭಾವನೆಗೆ ಅವುಗಳೇ ಸಾಟಿ Wednesday, 21 August 2013

ಮದುವೆ


ಹೊಸಬಾಳಿನ ಹೊಸ್ತಿಲಲ್ಲಿ ನಿಂತಿರುವೆ 
ನಿನ್ನ ಮನಸೆಂಬ ಮನೆಯನ್ನು ನಾ 
ತುಂಬುವ ಅಮೃತಘಳಿಗೆಗಾಗಿ ಕಾದಿರುವೆ 
ಈ ಭಾವನೆಗೆ ಏನೆಂದು ಬರೆಯುವುದೋ ನಾ ಅರಿಯೆ 
ಅರಿಶಿನ ದಾರದ ನಂಟಿಗೆ ಅಕ್ಷತೆಯ 
ಆಶಿರ್ವಾದವ ಬೆರೆಸಿ ಪ್ರೀತಿಯ ಪಲ್ಲಕ್ಕಿಯಲ್ಲಿ ಹೊತ್ತು 
ಸಾಗುವ ಮದುವೆ ಎಂಬ ಮೂರಕ್ಷರಗಳ ಬಂಧನ 
ಆಗಲಿ ನಮ್ಮಿಬ್ಬರ ಮನಸುಗಳ ಶುಭಮಿಲನ 

Thursday, 15 August 2013

ಮೇಘಗಳ ಮಿಲನ

ಎಡೆಯಿಲ್ಲದೆ ಸುರಿಸುತ್ತಿವೆ ಮಳೆಯನ್ನು 
ಆ ಮೇಘಗಳು ಹೇಳುತ್ತಿರುವುದಾದರೂ ಏನು 

ಪ್ರೀತಿಯ ಮಳೆಯ ಬಯಸಿದೆ ಈ ಧರೆಯು 
ಬಹು ಪ್ರೀತಿಯಿಂದ ಬಿತ್ತಿರುವರು ಬೀಜಗಳನ್ನು 
ಜೋಪಾನವಾಗಿ ಬಿಗಿದಪ್ಪಿರುವಳು ಭೂತಾಯಿಯು 

ಆಗಸವು ಕಳಿಸಿದೆ ಇಳೆಗೆ ಮೇಘ ಸಂದೇಶವ 
ಕಾಯುತಿರುವಳು ಭೂತಾಯಿಯೂ ಮೇಘಗಳ ಮಿಲನವ 
ಆ ಮಿಲನದ ಫಲವೇ ಭೂತಾಯಿಯ ಮಡಿಲಲ್ಲಿ 
ಹುಟ್ಟುವುವು ಮನುಜರ ಹೊಟ್ಟೆ ತುಂಬುವ ಫಲವು 

ಓ ಮೇಘವೇ ಓಡೋಡಿ ಬಾ ನೀ ಈ ಇಳೆಗೆ 
ಹಸಿದ ಹೊಟ್ಟೆಯ ತುಂಬಿಸು ಬಾ 
ತನ್ನ ಮಕ್ಕಳ ಚಿಂತೆಯಲ್ಲಿರುವ ಭೂತಾಯಿಗೆ 
ನೆಮ್ಮದಿಯ ನೀಡಲು ನೀ ಬೇಗನೆ ಬಾ ಮೇಘವೇ 

Saturday, 3 August 2013

ಅರಿಯದ ಸತ್ಯ

ನೀ ಅರಿಯದ ಸತ್ಯವ ನಾ ಹೇಳಲೇ ಗೆಳೆಯ 

ಮನಸಾರೆ ನಾ ನಿನ್ನ ಪ್ರೀತಿಸುತ್ತಿರುವೆ 
ಪ್ರತೀ ಉಸಿರಲ್ಲೂ ನಿನ್ನ ಹೆಸರ ಜಪಿಸುತ್ತಿರುವೆ 
ನನ್ನ ಮನವೆಂಬ ತಿಳಿನೀರಲ್ಲಿ ನಿನ್ನ 
ಬಿಂಬವನ್ನಷ್ಟೇ ಕಾಣುತ್ತಿರುವೆ 
ನಾ ಬರೆಯುವ ಪ್ರತೀ ಕವನದಲ್ಲೂ 
ನಿನ್ನ ಕಲ್ಪನೆಯನ್ನೇ ಕೆತ್ತಿರುವೆ 

ಇಷ್ಟಾದರೂ ನೀ ನನ್ನ ಮನ ಅರಿಯದೆ 
ಗಾಳಿಗಿಂತ ವೇಗವಾಗಿ ದೂರ ಹೋಗುತಿರುವೆ 

ದಿನ ಸುರಿಯುವ ಈ ಪ್ರೀತಿ ಮಳೆಯಲ್ಲಿ ನಿನ್ನ 
ಜೊತೆ ನೆನೆಯುತ ಬದುಕಿನ ಪ್ರತಿಕ್ಷಣ ನಿನ್ನಲಿ 
ಬೆರೆಯುತ ಕೊನೆವರೆಗೂ ನಿನ್ನ ಬಾಹುಗಳಲ್ಲೇ 
ಬಂಧಿಯಾಗಿರುವ ಆಸೆ ನನಗೆ 
ಇದನರಿತು ನೀ ಬೇಗನೇ ಓಡಿ  ಬಾ  ನನ್ನಲ್ಲಿಗೆ 

Thursday, 1 August 2013

ಕರುನಾಡ ಕೂಸು

ಮಲೆನಾಡ ಮುಡಿಗೆ ಮಲ್ಲಿಗೆ ಮುಡಿಸಿದಂತೆ 
ಬೆಳ್ಳಿಮೋಡ ಮುತ್ತಿಕ್ಕುತ್ತಿದೆ ಬೆಟ್ಟಕ್ಕೆ 

ಹಾಲಿನ ಸಾಗರದಂತೆ ತುಂಬಿ ಹರಿಯುತ್ತಿದ್ದಾಳೆ  
ಶರಾವತಿಯು ಜೋಗ ಜಲಪಾತದಲ್ಲಿ 

ಎಲ್ಲಿ ನೋಡಿದರಲ್ಲಿ ಹಕ್ಕಿಗಳ ಕಲರವ 
ಹೂಗಳ ಸುಗಂಧ ಬೃಂದಾವನದಲ್ಲಿ 

ಹೇಗೆ ಎಣಿಸಲಿ ಈ ಕರುನಾಡ ಸ್ಥಳಗಳ ಸೊಬಗನ್ನು 
ಆಹಾ ಏನು ಆನಂದವೋ ಈ ಕಂಗಳಿಗೆ 

ಚಂದಕ್ಕಿಂತ ಚಂದವಾದ ತಾಣಗಳೇ ತುಂಬಿವೆ  
ಹೇಗೆ ಬಣ್ಣಿಸುವುದೋ ಈ ನೆಲದ ಮಹಿಮೆಯ ನಾ ಕಾಣೆ

ಅದಕ್ಕೆಂದೇ ಎಂದೆಂದಿಗೂ ನಾವು ಹೆಮ್ಮೆಯಿಂದ ಹೇಳುವ 
ಕರುನಾಡ ಕೂಸುಗಳಾಗಿ ಹುಟ್ಟಿದ ನಾವೇ ಪುಣ್ಯವಂತರೆಂದು 


Tuesday, 30 July 2013

ಸಾಗರ ಕರೆದರೆ ನದಿಯು ಹರಿದು ಬರದೆ ಇರವುದೇ 
ಹೃದಯ ನೊಂದರೆ ಕಂಗಳ ಹನಿ ಜಾರದಿರುವುದೇ 
ಹುಣ್ಣಿಮೆ ಚಂದಿರನ ತೋರಿದರೆ ಕಂದನ ಬಾಯಲ್ಲಿ 
ತುತ್ತು ಇಳಿಯದಿರುವುದೇ 
ಸುಡುವ ನೆಲವು ಮಳೆ ಸುರಿದರೆ ಧರೆಯು ತಣಿಯದಿರುವುದೇ 
ಪ್ರಕೃತಿಯೇ ಆಗಲೀ  ಮನುಜನೇ ಆಗಲೀ 
ನೋವಾದರೂ ನಲಿವಾದರೂ ಒಬ್ಬರಿಗೊಬ್ಬರೂ ಇದ್ದೆ ಇರುತಾರೆ  
ನೊಂದ ಮನಸಿಗೊಂದು ಬೇಕು ಸಾಂತ್ವನ ನೀಡುವ ಮನಸು 
ಖುಷಿಯ ಭಾವಕ್ಕೊಂದು ಬೇಕು ಪ್ರತಿಸ್ಪಂದಿಸುವ ಮನಸು 

Saturday, 27 July 2013

ನೀನಿರದೆ ಎಲ್ಲಿಗೆ ಹೋಗಲಿ 
ದಿನ ಬರುವ ಕಾಲಕೆ ಏನೆಂದು ಹೇಳಲಿ 
ಪ್ರತಿ ಕ್ಷಣವೂ ಬಯಸುತ್ತಿದೆ ನಿನ್ನ ಸನಿಹ 
ಇದನ್ನು ಹೇಳಲಾಗದೆ ಕಳಿಸಿರುವೆ ಈ ಬಿನ್ನಹ 
ನೀ ನನ್ನ ಪ್ರೀತಿಯ ಸ್ವೀಕರಿಸುವ ಕ್ಷಣಕ್ಕಾಗಿ 
ಎಡೆಬಿಡದೆ ಕಾಯುತಿರುವೆ ನಾನೀಗ 
ಎಂದಾದರೂ ಬರಲಿ ಆ ಕ್ಷಣ 
ಈ ಜನ್ಮ ಪೂರ್ತಿ ಕಾಯುವುದು ಈ ಮನ 

Monday, 22 July 2013

ಮುಂಜಾವಿನ ಕನಸು

ನವಿರಾದ ಕನಸೊಂದು ಬಿತ್ತು ಮುಂಜಾವಿನಲ್ಲಿ 
ಪೋಣಿಸಿದ ಸುಂದರ ಮುತ್ತುಗಳಂತೆ  ಬಿದ್ದಿದ್ದವು 
ಇಬ್ಬನಿಯ ತುಂತುರು ಹನಿಗಳು ಹಸಿರೆಲೆಗಳ ಮೇಲೆ 
ನಸುಕಾದ ಬೆಳಕು ಬೀರುತ್ತಿತ್ತು ಆಗಸದಲ್ಲಿ 
ಸೂರ್ಯನ ಚಿನ್ನದ ಬಣ್ಣವು ಹರಡಿತ್ತು ಮೋಡಗಳ ಮೇಲೆ 
ಎಂತಹ ರಮಣೀಯ ನೋಟವದು ಆಹಾ ಕಂಗಳೆರಡು 
ಸಾಲದಾಯ್ತು ಎನಗೆ ಅದನ್ನು ನೋಡಲು 
ನನ್ನನ್ನೇ ನಾ ಮರೆತು ನಿಂತಿದ್ದೆ ಆ ಒಂದು ಕ್ಷಣ 
ಎಲ್ಲೆಲ್ಲಿ ನೋಡಿದರೂ ಮನಸು ಸೆಳೆಯುತ್ತಿದೆ ಹಸಿರು ವನ 
ಏನು ಪುಣ್ಯ ಮಾಡಿದವೋ ಈ ಕಂಗಳು ಎಂದು 
ಖುಷಿಯಿಂದ ಕಣ್ಣು ಬಿಟ್ಟು ನೋಡಿದರೆ ಅದೇ 
ನಾಲ್ಕು ಗೋಡೆಗಳ ಮಧ್ಯ ಮಲಗಿದ್ದೆ 
ಮೂಡಿತು ಈ ಮನಸಿಗೆ ನಿರಾಸೆಯೊಂದು 
ಮುಂಜಾವಿನ ಆ ಸೌಂದರ್ಯ ಈ ಕಣ್ಣು ತುಂಬುವುದೆಂದು 

Saturday, 20 July 2013

ಹೂವೇ ನನಗೆ ಸ್ಫೂರ್ತಿ

ಏನನ್ನೋ ಯೋಚಿಸುತ್ತ ಕುಳಿತಿದ್ದೆ 
ಮನೆಯ ಮಹಡಿಯ ಮೇಲೆ ನಾ ಅಂದು 
ಹಾಗೆ ಸುಮ್ಮನೆ ಆನಂದಿಸುತ್ತಿದ್ದೆ ಆ ನಿಸರ್ಗವ 
ನೀನೇಕೆ ಕಣ್ಮುಂದೆ ಬಂದೆಯೋ ಏನೋ 

ನಾ ಅರಿಯೆ ಸುಂದರ ಕುಂಡದಲ್ಲಿ ಅರಳಿ 
ನಗುತ್ತ ನಿಂತಿದ್ದೆ ನನ್ನ ನೋಡುತಿದ್ದೆ  ನೀನು 
ನಿನ್ನ ನಗುವ ನೋಡುತ್ತಾ ನನ್ನ ಮನದ ಚಿಂತೆಯ 
ಮರೆತು ಮಂದಹಾಸವ ಬೀರಿದೆ ನಾನು 

ಆ ಕ್ಷಣವೇ ನಿನಗೆ  ಅರ್ಪಿಸಿದೆ ನನ್ನ ಮೊದಲ ಕವನವ 
ಕೇಳಿ ಆನಂದಿಸು ಓ ಹೂವೆ 
"ನೀ ಅಂದು ಚೆಲ್ಲಿದ ಆ ಹೂನಗೆ ಇಂದೂ ನನ್ನ ಕಾಡುತಿದೆ 
ಸಾಕು ಆ ನಿನ್ನ ಹೂನಗೆ ನನ್ನ ಈ ಜೀವನದ ಪಾಲಿಗೆ"

ನೀನಿಂದು ಮೆಚ್ಚಿದರೆ ಈ ಕವನ 
ನಾ ಮನಸಾರೆ ಅರ್ಪಿಸುವೆ ನಿನಗೆ ಕೋಟಿ ನಮನ 
 

Wednesday, 17 July 2013

ಸ್ಪೂರ್ತಿಯ ಸೆಲೆ

ನಿನ್ನ ಕಂಡ ಆ ದಿನ  ಏನನ್ನು ಅರಿತಿರಲಿಲ್ಲ ನನ್ನ ಈ ಮನ 
ಭಾವನೆ ಇಲ್ಲದೆ ನಿನ್ನಲ್ಲಿ ಬಂದಿದ್ದೆ ನಾ ಅಂದು 
ಏನು ಮೋಡಿ ಮಾಡಿದೆಯೋ ನೀ ಎನಗೆ 
ನಿನ್ನ ಅಗಲಿ ಇರಲಾಗುತ್ತಿಲ್ಲ ನನಗಿಂದು 

ನಗುವಿರದ ತುಟಿಗಳಲ್ಲಿ ಮಂದಹಾಸ ಬೀರುತಿದೆ 
ಕನಸಿಲ್ಲದ ಕಂಗಳಲ್ಲಿ ನೂರಾರು ಆಸೆಗಳು ಉದಯಿಸುತ್ತಿವೆ 
ಬಾಡಿದ ಬಳ್ಳಿಯಂತಿದ್ದ ಈ ಮನಸಲ್ಲಿ ಮಂದಾರ 
ಪುಷ್ಪವೊಂದು ಮೈದುಂಬಿ ಅರಳಿದೆ 

ಪ್ರೀತಿ ಶುರುವಾದ ಆ ಕ್ಷಣ ಮನದಲ್ಲಿ ಆಗುತ್ತಿದೆ 
ಏನೋ ಒಂದು ಸುಂದರ ರೋಮಾಂಚನ 
ಮುಗಿಲ ಮಲ್ಲಿಗೆಯಂತೆ ಎತ್ತರಕ್ಕೆ ಇರಬೇಕು ಈ ಪ್ರೀತಿ 
ಸ್ಪೂರ್ತಿಯ ಸೆಲೆಯಾಗಬೆಕು ನಾವಿಬ್ಬರೂ ಬಾಳುವ ರೀತಿ 

Tuesday, 9 July 2013

ನೀನಿರುವ ಕ್ಷಣವ ಹಿಡಿದಿಟ್ಟು ಮುತ್ತಿನ ಹಾರದಂತೆ 
ಪೋಣಿಸಿ ಒಲವಿನ ಗೊಂಬೆಯು ನಾನಾದಾಗ 
ನೀ ಬಂದು ಆ ಹಾರವ ತಂದು ನನಗೆ ತೊಡಿಸಿದರೆ 
ಆಗುವ ಆನಂದಕೆ ಸಾಟಿಯುಂಟೆ ಓ ನನ್ನ ಒಲವೆ 

Friday, 28 June 2013

ಬಯಕೆ

ಬೆಳ್ಳಂಬೆಳಗ್ಗೆ  ಬೀಸುತ್ತಿತ್ತು ತಂಗಾಳಿ 
ಕುಣಿದಾಡುತಿದ್ದವು ಇಬ್ಬನಿಯೆಂಬ ಸುಂದರ 
ಮುತ್ತಿನ ಹನಿಗಳು ಹಸಿರೆಲೆಯ ಮೇಲೆ 
ಚಂದದ ಪುಷ್ಪವು ಮೈದುಂಬಿ ಸುರಿದಿತ್ತು 
ಮನೆ ಮುಂದಿನ ನಂದನದಲ್ಲಿ, ಮುಂಜಾವಿನ
ಸುಂದರ ಪ್ರಕೃತಿಯ ಆಸ್ವಾದಿಸುತ್ತಿದ್ದ ಸಮಯ 
ಮನವು ಬಿಡಿಸಲು ಬಯಸುತ್ತಿದೆ ಬಣ್ಣದ ರಂಗೋಲಿಯ 
Thursday, 27 June 2013

ಹೀಗೊಂದು ಪ್ರಾರ್ಥನೆ

ದೇವರೇ ನೀನೇಕೆ ಇಷ್ಟು ಕ್ರೂರಿ 
ನೀ ಅರಿತು ಮಾಡುತಿರುವೆ ನನಗೆ ನೋವು 

ನಾ ಮಾಡಿದ ತಪ್ಪಾದರೂ ಏನು 
ತಿಳಿಯದೆ ಈ ಭೂಮಿ ಮೇಲೆ ಜನ್ಮ ತಾಳಿದೆ 

ಹುಟ್ಟಿದ ಕ್ಷಣದಿಂದ ಇಲ್ಲಿಯವರೆಗೂ 
ಖುಷಿಯೇನೆಂದು ನಾ ಕಾಣೆ 

ನೋವಿನ ವಿನಹ ಬೇರೇನೂ ಬದುಕೆ ಇಲ್ಲವೇ ನನಗೆ 
ಕಣ್ಣೀರ ಹರಿಸಲೆಂದೇ ಹುಟ್ತಿಸಿದೆಯ ನನ್ನ 

ನನ್ನ ನೋವಿನ ಕಣ್ಣೀರಿಗೆ ಕೊನೆಯಿಲ್ಲವಾದರೆ 
ಕೊಟ್ಟುಬಿಡು ಈ ಜೀವಕ್ಕೆ ಮುಕ್ತಿಯನ್ನು 

 

Monday, 24 June 2013

ಸೈನಿಕ

ಪ್ರಳಯವಾದರೂ ಸರಿಯೇ 

ಸ್ಪೋಟವಾದರೂ ಸರಿಯೇ 

ಎಲ್ಲೆಂದರಲ್ಲಿ ಪ್ರತ್ಯಕ್ಷವಾಗುವೆ 

ನೊಂದ ಸಂತ್ರಸ್ತರಿಗೆ ನೆರವಾಗುವೆ 

ಎಲ್ಲಾ ಆಸೆಗಳನ್ನು ಸಂಬಂಧಗಳನ್ನೂ ಬಿಟ್ಟು 

ಕೊನೆಗೆ ನಿನ್ನ ಜೀವವನ್ನು ಲೆಕ್ಕಿಸದೆ  

ನೂರಾರು ಜೀವಗಳನು ಉಳಿಸುವೆ 

ದೇಶಕ್ಕಾಗಿ ಮಡಿಯಲು ತಯಾರಿರುವ 

ನಿನ್ನ ತ್ಯಾಗಕ್ಕೆ ಏನು ಹೇಳಿದರೂ ಸಾಲುವುದಿಲ್ಲ 

ನಿನಗೆಷ್ಟು ನಮನಗಳನು ಅರ್ಪಿಸಿದರೂ 

ಕಡಿಮೆಯೇ ಓ ಸೈನಿಕ...  ಜೈ ಹಿಂದ್   

Saturday, 22 June 2013

ನಿಸರ್ಗ

ಅಮ್ಮನ ಕಾಣದ ಮನ ನೊಂದ ಮಗುವೊಂದು 
ಎಡೆಬಿಡದೆ ಉಸಿರುಗಟ್ಟುವ ಹಾಗೆ ಅಳುತ್ತಲೇ ಇದೆ 
ಆ ಅಳುವ ನಿಲ್ಲಿಸಲು ಆ ತಾಯಿ ಎಂದು ಬರುವಳೋ 
ಆ ಕಂದನ ಮೊಗವ ನಗುವಿನಿಂದ ಎಂದು ಅರಳುವುದೋ 

ಕ್ಷುಲ್ಲಕ ಕಾರಣಗಳಿಗಾಗಿ ಎಂದೂ ತಾಯಿ ಮಗುವ ದೂರ 
ಮಾಡುವುದಿಲ್ಲ, ಏಕಾಏಕಿ ಮಗುವ ಬಿಟ್ಟು ಹೋದರೆ ಅದು 
ಮಾಡುವುದಾದರೂ ಏನು ಅಳುವ ಹೊರತು 

ಈ ಪ್ರಕೃತಿಯೂ ಕೂಡ ಅಮ್ಮನ ಹಾಗೆ, ನಾವೆಲ್ಲರೂ 
ಪ್ರಕೃತಿಯ ಮಡಿಲಲ್ಲಿ ಮಲಗುವ ಮಕ್ಕಳಲ್ಲವೇ 
ಬದುಕು ಕೊಟ್ಟ ಈ ನಿಸರ್ಗವನ್ನೇ ನಾವು ಕೊಲ್ಲುತ್ತಾ 
ಹೋದರೆ ನಮ್ಮ ಕೈ ಬಿಡದೆ ಅದಕ್ಕೆ ಬೇರೆ ದಾರಿ ಇದೆಯೇ 

ಅದಕ್ಕೆಂದೇ ಆಗುತ್ತಿಲ್ಲವೇ ಉತ್ತರದಲ್ಲಿ ಜಲಪ್ರಳಯ 
ಅದನ್ನು ತಡಿಯಬಹುದಾಗಿತ್ತಲ್ಲವೇ ನಾವು ಇದ್ದಿದ್ದರೆ ನಿಸರ್ಗದ ಸನಿಹ, 

ಏನಾದರೂ ಇರಲಿ ಹೇಗಾದರೂ ಇರಲಿ 
ಪ್ರಕೃತಿ ಎಂದರೆ ಜನ್ಮ ಕೊಟ್ಟ ಅಮ್ಮನಂತೆ  
ಬದುಕ ಕೊಟ್ಟವರನ್ನೇ ಕೊಳ್ಳಲು ಹೊರಟರೆ ಆಗುವುದು 
ನಮ್ಮ ಬದುಕಿನ ಸರ್ವನಾಶವೇ ಹೊರತು ಬೇರೇನೂ ಅಲ್ಲ 

ಅಮ್ಮನಂತೆ ಪ್ರೀತಿಸಿ  ಆರೈಕೆ ಮಾಡೋಣ ನಿಸರ್ಗ ಮಾತೆಯನ್ನು 
ಆ ತಾಯಿ ಪಾವನ ಮಾಡುವಳು ನಮ್ಮ ಜೀವನವನ್ನು 

Friday, 21 June 2013

ಸಾಗರ ಪ್ರೀತಿ

ಹೃದಯದಲಿ ನದಿಯೊಂದು ಹರಿಯುತ್ತಿದೆ 
ನಿನ್ನ ಒಲವಿನ ಮಳೆಯೂ ಅಲ್ಲಿ ಸುರಿಯುತ್ತಿದೆ 

ನದಿಯಲ್ಲಿ ಮಳೆಯೂ ಸುರಿದು ಎರಡು ಮನಗಳ 
ಪ್ರೀತಿಯ ಸಾಗರ ತುಂಬಿ ಹರಿಯುತ್ತಿದೆ 

ನದಿಯ ಮಧ್ಯ ನನ್ನ ಮನಸೆಂಬ ಮರವನ್ನು ಬೆಳೆಸಿ 
ಆ ಮರದಲ್ಲಿ ನಿನಗಾಗಿ ಒಂದು ಪ್ರೀತಿಯ ಗೂಡು ಕಟ್ಟಿರುವೆ 

ಆ ಗೂಡಿಗೆ ನಿನ್ನ ಪ್ರೀತಿಯ ಅಲೆಗಳು ಬಂದು ತಾಕಬೇಕು 
ತಂಪಾದ ಆ ಅಲೆಗಳ ಸ್ಪರ್ಷ ಸದಾ ನನ್ನ ಗೂಡಿಗೆ ಇರಬೇಕುWednesday, 19 June 2013

ನನ್ನ ಕೋಗಿಲೆ

ನಿನ್ನ ಧ್ವನಿಯ ಕೇಳದೆ ಕಂಗಾಲಾಗಿದ್ದೆ ನಾ ಇಷ್ಟು ದಿನ 
ಎನ್ನ ಅಗಲಿ ಎಲ್ಲಿ ಹೋದೆಯೋ ಎಂದು ಚಡಪಡಿಸುತ್ತಿತ್ತು ಈ ಮನ 

ಮುಂಜಾನೆಯ ಮಂಪರು ಬೆಳಕಲ್ಲಿಯೂ  
ಹುಡುಕುತ್ತಿದ್ದೆ ನಿನ್ನ ಸುಂದರ ದನಿಯ 
ಹಸಿರೆಲೆ ಮೇಲಿನ ಇಬ್ಬನಿ ಕರಗಿದರೂ 
ಮೋಡಗಳ  ಬಂಗಾರ ಬಣ್ಣ ಹೋಗಿ 
ಬೆಳ್ಳಿಯ ಬಣ್ಣ ಬಂದರೂ ನಿನ್ನ ಸುಳಿವಿಲ್ಲದೇ ಹೋಯಿತು 

ನನ್ನ ಎಲ್ಲ  ನೋವನ್ನೂ ಮರೆಸುತಿದ್ದೆ 
ನಿನ್ನ ಇಂಪಾದ ದನಿಯಿಂದ 
ಸುಖವೋ ದುಖವೋ ಒಮ್ಮೆ 
ನಿನ್ನ ಸ್ವರವನ್ನು ಕೇಳಿದರೆ ಸಾಕು 
ಮನ ಹಗುರಾಗಿ ಹಕ್ಕಿಯಂತೆ ಹಾರಾಡುತಿದ್ದೆ  ನಾ 

ನಿನಗೆ ಕಾದು ಕಾದು ಸಾಕಾಗಿ 
ನಾನೇ ಹಾಡಲು ಕಲಿತಿರುವೆ 
ನಿನಗೆಂದೇ  ಬರೆದು ಹಾಡುತ್ತ
 ಕಾಯುತಿರುವೆನು ಕೇಳೆ ಕೋಗಿಲೆ 
ಈ ಹಾಡನು  ಕೇಳಿಯಾದರೂ ಬರುವೆ ಏನು ನೋಡುವೆ

ಕುಹೂ ಕುಹೂ ಹಾಡುವೆ ನೀ ಕೋಗಿಲೆ 
ನನಗೆ ಯಾವಾಗ ಕಲಿಸುವೆ ನೀ ಹೇಳೆಲೆ 
ಕುಹೂ ಕುಹೂ ಎಂದು ಹಾಡುತ್ತಲೇ ಬೇಗನೆ 
ಬಂದು ನೊಂದ ಈ  ಮನಸನು ಸಂತೈಸು ಬಾರೆಲೆ 

Sunday, 16 June 2013

ಹೀಗೊಂದು ಪುಟ್ಟ ಸಂದೇಶ

ಮನಸಿನ ವೇಗ ಗಾಳಿಗಿಂತ ಹೆಚ್ಚು 
ಗಾಳಿ ಬೀಸಿದಾಗ ಚಂದದ ಎಲೆಗಳು 
ಬೇಡದ ಧೂಳಿನ ಕಣಗಳು ಹಾರುತಾ ಬರುವುವು 
ಹಸಿರೆಲೆ ಬಂದು ಮುಖಕ್ಕೆ ಬಡಿದಾಗ ಆನಂದವಾದರೆ 
ಬೇಡದ ಧೂಳು ಕಣ್ಣಲಿ ಹೋದಾಗ ನೋವಿನ ನೀರು ಬರುವುದು 
ಮನಸು ಸ್ವಚ್ಛಂದವಾಗಿ ಹರಿಯಲು ಬಿಟ್ಟರೆ 
ಅಪರಿಮಿತ ಕನಸುಗಳು ಹರಿಯುವುವು 
ಕೈಗೆಟುಕದ ಕನಸಿಗೆ ಹೆಚ್ಚು ಆಸೆ ಪಡುವುದು 
ವಾಸ್ತವದ ಮಡಿಲಲ್ಲಿ  ತಲೆಯಿಟ್ಟು ಮಲಗದು 
ಈ ಮನಸು ಬಯಸಿದ್ದು ಸಿಗದು ಸಿಕ್ಕಿರುವುದನ್ನು ಅದು ಸ್ವೀಕರಿಸದು  
ಇರುವ ಭಾಗ್ಯವ ಬಿಟ್ಟು ಇರದುದರ ಕಡೆ ಓಡಿದರೆ 
ಆಗುವುದೇ ನಮ್ಮ ಆಶಾಗೋಪುರ ನನಸಿನ ಸೌಧ 
ಏನೇ ಆಗಲಿ ಮುಂದೆ ಸಾಗಲೇಬೇಕು ಈ ಬದುಕ ನಡೆಸಲೇಬೇಕು 
ಕಷ್ಟವೋ ಸುಖವೋ ನೋವೋ ನಲಿವೋ ಎಲ್ಲದುದರ 
ಅನುಭವ ಪಡೆದು ಸಾಗಿಸಿದರೆ ಈ ಜೀವನ ಒಂದು ನಂದನವನ 


Saturday, 8 June 2013

ಪದಗಳ ಪರದಾಟ

ನಾ ಬರೆಯದೇ ಉಳಿದ ಪದಗಳಿಲ್ಲ 
ನಿನ್ನ ಒಲವನ್ನು ವರ್ಣಿಸಲು 
ಆದರೂ ಮನಸು ಕೇಳುತ್ತಿಲ್ಲ  ಗೀಚದೆ  ಇರಲು 
ಎಲ್ಲಿಂದ ಹುಡುಕಲಿ ನಾ ಪದಗಳನ್ನು 
ಶಬ್ಧಕೋಶವೇ ನಾಚಿ ಮರೆಯಾಗಿದೆ ನಿನ್ನೊಲವ ಕಂಡು  
ಓ ಶಾರದೆಯೇ ಕಳುಹಿಸು ನನ್ನ ಇನಿಯನ 
ಪ್ರೇಮಕ್ಕೆ ಸರಿತೂಗುವ ಅಕ್ಷರಗಳ ದಂಡು 

Wednesday, 5 June 2013

ಸ್ನೇಹ ಬಂಧನ

ಹಕ್ಕಿಯಂತೆ ರೆಕ್ಕೆಯಿಲ್ಲ ನನಗೆ ಸದಾ 
ನಿನ್ನ ಜೊತೆ ಹಾರಾಡಲು 
ಆದರೂ ಆಸೆ ನನಗೆ ಇಬ್ಬರೂ ಸೇರಿ 
ಬಾನಿನ ಎತ್ತರಕ್ಕೆ ಹಾರಲು 

ನೀ ನುಡಿವ ಒಂದೊಂದು ನುಡಿಯು 
ಪೋಣಿಸಿದ ಮುತ್ತಿನ ಹಾರದಂತೆ 
ನಿನ್ನ ಸ್ನೇಹ ಸದಾ ಹೀಗೆ ಇದ್ದರೆ ನನ್ನ 
ಬದುಕೊಂದು ಸುಂದರ ನವಿಲಿನ ಗರಿಯಂತೆ

ಪ್ರೀತಿ ಪ್ರೇಮಕ್ಕಿಂತ ಮಿಗಿಲಾದ 
ಪವಿತ್ರ ಸ್ನೇಹ ಬಂಧನ ನಮ್ಮದು 
ಈ ಸ್ನೇಹದ ಸಂಕೋಲೆಯಿಂದ ಬೇಡೆನಗೆ 
ಬಿಡುಗಡೆ ಸದಾ ನಾನಿರಬೇಕು ನಿನ್ನಲ್ಲೇ 

Monday, 3 June 2013

ಒಲವಿನ ಮಳೆ

ಆಗಸದಲಿ ಕಪ್ಪು ಮೋಡ ಕವಿದಿದೆ 
ಮಳೆ ನಿರೀಕ್ಷೆಯಲಿ ಭೂಮಿ ಕಾದಿದೆ 
ಬೆಳ್ಳಿ ಮೋಡ ಕಾಣಲು ಸುಂದರ 
ಕಾರ್ಮೋಡ ಈ ಧರೆಗೆ ಜೀವಾಳ 

ಹೃದಯವೆಂಬ ಬಾನಲ್ಲಿ ನೀ ಬಿತ್ತಿದೆ ಒಲವಿನ ಮೋಡವ  
ಕಾಯುತ್ತಿರುವೆ ನಾ  ಸುರಿಯುವ ಆ ಪ್ರೀತಿಯ ಮಳೆಗೆ  
ಈ ಸುಂದರ ಪ್ರೀತಿಗೆ ಬೆಳ್ಳಿ ಮೋಡವೇ ಸ್ಫೂರ್ತಿ 
ಭಾವಗಳ ಸಂಯೋಜನೆಗೆ ಕಾರ್ಮೊಡವೇ ಸ್ಫೂರ್ತಿ 

ಗಾಳಿಗೆ ಹಾರುವ ಸುಂದರ ಬೆಳ್ಳಿ ಮೋಡಕ್ಕಿಂತ ತಂಪಾಗಿ ಮಳೆ ಸುರಿಸಿ  
ಶಾಶ್ವತವಾಗಿ ಧರೆ ಸೇರುವ ಕಾರ್ಮೊಡವೇ ಚಂದ 
ಆ ಕಾರ್ಮೋಡ ನೀನಾಗಿ ಇಳೆಯು ನಾನಾಗಿ ನಡುವೆ ಇರುವ ಅಂತರದಲ್ಲಿ 
ಒಲವೆಂಬ  ಮಳೆಯ ಸುರಿಸಿದರೆ ಇನ್ನೂ ಚಂದ 


Sunday, 2 June 2013

ಶುಭೋದಯ

ಮುತ್ತಂತೆ ಉದುರುತ್ತಿವೆ ಮುಂಜಾನೆ ಹನಿಗಳು 
ಸುಂದರವಾಗಿ ಕಾಣುತ್ತಿವೆ ಹಸಿರೆಲೆಗಳು 
ಆಗಸದಲಿ ಹರಿದಿದೆ ಉದಯನ ಚಿನ್ನದ ನೀರು 
ಇಬ್ಬನಿಯ ಅಂದ ಸೂರ್ಯನ ಕಿರಣಗಳ ಚಂದ 
ಜೊತೆಗೆ ನೆಮ್ಮದಿಯಾಗಿ ಮಾಡಿ  ದೇವರ ಪ್ರಾರ್ಥನೆಯ 
ಸುಂದರ ಮುಂಜಾನೆಯ ಸೊಬಗಲಿ ಸುಂದರ ಮುಗುಳ್ನಗೆಯ 
ಜೊತೆಯಲ್ಲಿ ಎಳೆಯೋಣ ಬದುಕಿನ ರಥವ 

ಜೀವನದ ಜೋಕಾಲಿ

ಕೋಗಿಲೆಯಾಗಿ ನೀ ಹಾಡಿದರೆ 
ನವಿಲಾಗಿ ನಾನು ಕುಣಿಯುವೆ 
ಆಗಸದಲ್ಲಿ ಕವಿದಿರುವ ಕಪ್ಪು ಮೋಡ ನೀನಾದರೆ 
ಅದನ್ನು ಕರಗಿಸಿ ಹನಿಯಾಗಿಸುವ ಕಿರಣ ನಾನಾಗುವೆ 

ನನ್ನ ಉಸಿರಾಡುವ ಪ್ರತಿ ಕ್ಷಣ 
ಜಪಿಸುವುದು ನಿನ್ನ ಹೆಸರಿನ ಮಂತ್ರ 
ನೀನಿರುವ ಕ್ಷಣವೆಲ್ಲ ಜೇನಂತೆ ಸವಿ 
ದೂರಾದ ಸಮಯ ಬೇವಿನಂತೆ ಕಹಿ 

ಹೂವಾದ ಆಸೆಯೆಲ್ಲಾ ಮುಳ್ಳಾಗಿಸದೆ 
ನವಿರಾದ ಹೊಂಗನಸ ಮಾಡಿ ಸವಿಯೋಣ
ಕಟ್ಟಿದ ಕನಸನ್ನು ನನಸಾಗಿಸಿ ಜೀವನವೆಂಬ 
ಜೋಕಾಲಿಯಲ್ಲಿ ಇಬ್ಬರೂ ಸೇರಿ ಜೀಕೋಣ