Tuesday, 31 December 2013

ನವವರ್ಷಕೆ ಸುಸ್ವಾಗತ

ಹೊಸವರ್ಷದ ಹೊಂಗಿರಣ ಬೀಳುವ ಸಮಯ 
ಇಂಪಾದ ನಾದದಂತೆ ಹರಿಯುವ ಗಾಯನವಾಗಲಿ ಈ ಜೀವನ 

ಕಂಡ ಕನಸುಗಳೆಲ್ಲ ನನಸಾಗದಿದ್ದರೆ ನಿರಾಸೆ ಬೇಡ 
ಬಯಸಿದ್ದೆಲ್ಲ ಸಿಕ್ಕಿತೆಂದು ಅಹಂಕಾರ ಬೇಡ 

ಕೊರಗುವ ಮನಸಿಗೆ ಸಂತೈಸುವ ಮನಸಾಗಿ 
ಹತಾಶೆ ತುಂಬಿದ ಮನಸಿಗೆ ಹುರಿದುಂಬಿಸುವ ಮನಸಾಗಿ 

ಸಾಗಿಸೋಣ ಈ ಬಾಳ ಬಂಡಿಯ ನವ ಉತ್ಸಾಹದಿಂದ 
ಹಾರೈಸುತ್ತ ಎಲ್ಲರಿಗೂ ನಿಷ್ಕಲ್ಮಷ ಮನಸಿಂದ 

Sunday, 29 December 2013

ಈ ಜೀವ ಸಹಿಸದು ನೀ ಒಂದು ಕ್ಷಣ ನೊಂದರು 
ಅಪ್ಪಿತಪ್ಪಿ ಒಂದು ಹನಿ ಕಣ್ಣೀರು ಬಂದರೂ 
ಮುದ್ದಿನ ಮಾತಾಡದಿದ್ದರೂ ಚಿಂತೆಯಿಲ್ಲ ನನಗೆ 
ನಿನ್ನ ಮೌನದ ರೂಪವೇ ಸಾಕು ಅದುವೇ ಎಲ್ಲ ಎನಗೆ 

Friday, 27 December 2013

ಭಾವನೆಗಳೇ ಇಲ್ಲದ ಮನದಲ್ಲಿ ಭಾವಗೀತೆಯಂತೆ 
ಹರಿಯುತ್ತ ಬಂದೆ ನೀ ಅಂದು 
ಏನಾದರೂ ಉಡುಗೊರೆ ಕೊಡುವ ಆಸೆಯಿಂದ 
ಬರೆಯುತಿರುವೆ ಪ್ರೇಮಗೀತೆ ನಿನಗಿಂದು

Monday, 23 December 2013

ಪರಿಶುಧ್ಧ ಪ್ರೇಮ

ರೂಪದಿ ಚಂದ ನಾನಿಲ್ಲ ಆದರೂ ನನ್ನ ಮನಸಿನ ಅಂದಕೆ ಮಿತಿಯಿಲ್ಲ 
ನೀ ಪ್ರೀತಿಸಿದ್ದು ರೂಪವೋ ಗುಣವೋ ಎಂದು ನಾ ಅರಿತಿಲ್ಲ 

ಆದರೂ ನನ್ನಾಸೆಯೊಂದೆ ಹುಡುಗ ಒಲವಿನ ಭಾವಕೆ ಬೇಕೊಂದು 
ಪ್ರೇಮದ ಕಾರಂಜಿಯ ಹರಿಸುವ ಮನಸೊಂದು  

ರೂಪಕ್ಕೆ ಮುಪ್ಪುಂಟು ಆದರೆ ನಿನ್ನ ಹುಡುಗಿಯ ಪ್ರೇಮಕ್ಕೆ ಮುಪ್ಪಿಲ್ಲ 
ಮೊಗದ ಮೇಲಿನ ನಯನವ ಮುಚ್ಚಿ ಮನದ ನಯನದಿಂದ ನೋಡೊಮ್ಮೆ 

ಕಾಣುವುದು ಅಲ್ಲಿ ನಿನಗಾಗಿ ನನ್ನಲ್ಲಿ ಹರಿಯುತ್ತಿರುವ ಪವಿತ್ರ ಪ್ರೇಮ 
ಕಂಡರೂ ಕಾಣದಂತೆ ನೀ ದೂರಾಗಿ ಅದನ್ನು ಮಾಡದಿರು ಬೆಂಕಿಯಲಿ ಹೋಮ 

Thursday, 19 December 2013

ಮರೆಯದೇ ಬರುವೆಯಾ ನೀ
ನನ್ನ ಪ್ರೇಮದ ಕರೆಗೆ ಓಗೊಟ್ಟು 
ಕರೆಯದೇ ಬಂದು ತಿಳಿ ನೀ 
ನನ್ನ ಮನದ ಒಳಗುಟ್ಟು 
ಸುಖವೋ ದುಖವೋ ನಾ ಬಯಸುವೆ 
ಬರೀ ನಿನ್ನ ತೋಳಿನ ಹಾರವೊಂದೇ
ಇದನರಿತು ಬೇಗನೇ ಓಡಿ ಬಾ
ನೀ ನನ್ನ ಕಣ್ಮುಂದೆ

Tuesday, 17 December 2013

ನಿಸರ್ಗ ಮಾತೆಗೊಂದು ಪ್ರಾರ್ಥನೆ

ನಿರ್ಮಲ ಭಾವದ ನದಿಯೇ ಹರಿಯುತಿರುವೆ 
ಉಪಕಾರ ಮಾಡುವ ಮನಸಿಂದ 
ಫಲ ಪುಷ್ಪ ನೀಡುವ ಗಿಡಮರಗಳೇ ಬೆಳೆದಿರುವಿರಿ 
ಉಸಿರಾಡಲು ನೆರವಾಗುವ ಉದ್ದೇಶದಿಂದ 
ಹಕಿಗಳಂತೆ ಹಾರಾಡುವ ಕಪ್ಪು ಮೋಡಗಳೇ 
ಸುರಿಸುವಿರಿ ಮಳೆಯ ಭೂಮಿಯ ಒಡಲು ತುಂಬಲು 

ಪ್ರಕೃತಿ ಮಾತೆಯ ಮುದ್ದಿನ ಮಕ್ಕಳೇ 
ನಿಮ್ಮನ್ನು ಏನು ಹೊಗಳಿದರೂ ಕಡಿಮೆಯೇ 
ಆದರೂ  ಇಷ್ಟೆಲ್ಲಾ ಉಪಕಾರ ಮಾಡಿದ ನಿಮ್ಮನ್ನು 
ಮನುಜನೆಂಬ ಜೀವಿಯು ಕೊಲ್ಲುತ್ತಿದೆ ತನ್ನ ಸ್ವಾರ್ಥಕ್ಕೆ 
ಪ್ರತಿಕ್ಷಣ ನೋವು ನೀಡುತ್ತಿದೆ ಪ್ರಕೃತಿ ಮಾತೆಗೆ 

ತಾಯೇ ನಿನ್ನ ಕ್ಷಮೆ ಕೇಳಲು ಅನಹ್ರರು ನಾವು 
ಆದರೂ ನಾಚಿಕೆ ಇಲ್ಲದೇ ಕೇಳುತಿದ್ದೇವೆ ಮತ್ತೊಮ್ಮೆ 
ರೌದ್ರ ನರ್ತನದಿಂದ ಹೇಳದೇ  ನಿನ್ನ ಪ್ರೀತಿಯ 
ತೋಳಲ್ಲೇ ನಮ್ಮನು ಬಂಧಿಸಿ ಅರ್ಥಮಾಡಿಸು 
ನಿನ್ನ ಮಡಿಲಲ್ಲಿ ಬೆಳೆದ ಅನ್ಯರನ್ನು ಸಂರಕ್ಷಿಸು ಎಂದು 


Monday, 9 December 2013

ಗಿಡಮರಗಳಿಗೊಂದು ನಮನ

ನಗು ಬಂದರೂ ನಗದೇ 
ಅಳು ಬಂದರೂ ಅಳದೇ
ಮನದ ಭಾವನೆಯನ್ನು ಅದುಮಿಟ್ಟುಕೊಂಡು 
ನಿನ್ನ ಮಗುವನ್ನು ಕಿತ್ತು ಅಲಂಕಾರಕ್ಕೆ, ಹಸಿವಿಗೆ 
ಬಳಸುವಾಗಲೆಲ್ಲ ಮೌನರೋಧನೆಯಲ್ಲೇ 
ಕಾಲ ಕಳೆಯುವ ನಿನ್ನ ಉದಾರ ಮನಸಿಗೆ 
ನನ್ನದೊಂದು ನಮನ ಓ ಗಿಡಮರಗಳೇ

Friday, 6 December 2013

ತುಡಿತ

ನಿನ್ನ ನೆನಪು ಸುಳಿದಾಗಲಿಲ್ಲ ಈ ಹೃದಯದಲ್ಲಿ 
ಮಿಡಿಯುವುದು ಒಂದು ಮನಮೋಹಕ ಮಿಡಿತ 

ಅಂತರಂಗದ ಆಳದಲ್ಲಿ ಎಲ್ಲೋ ಒಂದು ಕೇಳುತಿದೆ 
ನಿನಗಾಗಿ ಚಡಪಡಿಸುತ್ತಿರುವ ನನ್ನ ಮನದ ತುಡಿತ 

ಪ್ರತಿಕ್ಷಣ ಬೇಯುತಿರುವೆ ವಿರಹವೆಂಬ ಬೆಂಕಿಯಲ್ಲಿ  
ಕಾಯುತಿರುವೆ ನಾ ತೇಲಲು ನಿನ್ನ ಸನಿಹವೆಂಬ ತಂಗಾಳಿಯಲ್ಲಿ 

Wednesday, 4 December 2013

ವೇದನೆ

ಮರುಭೂಮಿಯಲ್ಲಿ ಮರಳ ಹೊರತು ಸಿಗುವುದೇ ಹರಳು 
ಸತ್ತ ಮನಸಲಿ ನಿರ್ಭಾವುಕ ಸ್ಥಿತಿ ಬಿಟ್ಟರೆ 
ಚಿಗುರುವುದೇ ಸಂತಸದ ಚಿಲುಮೆ 
ಆಸೆಗಳೆಲ್ಲ ಸತ್ತು ಹೋಗಿ ಮನವೆಂಬ ಹೂವು
ಮತ್ತೆಂದು ಆಕಾರ ತಾಳದ ಕಲ್ಲಂತಾಗಿದೆ
ಶಿಲ್ಪಿ ಬಂದು ಕೆತ್ತಿದರೆ ಸುಂದರ ಶಿಲೆಯಾಗಬಹುದೇನೋ ಆ ಕಲ್ಲು
ಒಡೆದು ಹೋದ ಕನ್ನಡಿಯಂತಾಗಿರುವ ಮನವು ಮಾತ್ರ
ಮತ್ತೆಂದು ಅರಳಲಾಗದು ಸುಂದರ ಹೂವಾಗಿ