Friday 28 June 2013

ಬಯಕೆ

ಬೆಳ್ಳಂಬೆಳಗ್ಗೆ  ಬೀಸುತ್ತಿತ್ತು ತಂಗಾಳಿ 
ಕುಣಿದಾಡುತಿದ್ದವು ಇಬ್ಬನಿಯೆಂಬ ಸುಂದರ 
ಮುತ್ತಿನ ಹನಿಗಳು ಹಸಿರೆಲೆಯ ಮೇಲೆ 
ಚಂದದ ಪುಷ್ಪವು ಮೈದುಂಬಿ ಸುರಿದಿತ್ತು 
ಮನೆ ಮುಂದಿನ ನಂದನದಲ್ಲಿ, ಮುಂಜಾವಿನ
ಸುಂದರ ಪ್ರಕೃತಿಯ ಆಸ್ವಾದಿಸುತ್ತಿದ್ದ ಸಮಯ 
ಮನವು ಬಿಡಿಸಲು ಬಯಸುತ್ತಿದೆ ಬಣ್ಣದ ರಂಗೋಲಿಯ 




Thursday 27 June 2013

ಹೀಗೊಂದು ಪ್ರಾರ್ಥನೆ

ದೇವರೇ ನೀನೇಕೆ ಇಷ್ಟು ಕ್ರೂರಿ 
ನೀ ಅರಿತು ಮಾಡುತಿರುವೆ ನನಗೆ ನೋವು 

ನಾ ಮಾಡಿದ ತಪ್ಪಾದರೂ ಏನು 
ತಿಳಿಯದೆ ಈ ಭೂಮಿ ಮೇಲೆ ಜನ್ಮ ತಾಳಿದೆ 

ಹುಟ್ಟಿದ ಕ್ಷಣದಿಂದ ಇಲ್ಲಿಯವರೆಗೂ 
ಖುಷಿಯೇನೆಂದು ನಾ ಕಾಣೆ 

ನೋವಿನ ವಿನಹ ಬೇರೇನೂ ಬದುಕೆ ಇಲ್ಲವೇ ನನಗೆ 
ಕಣ್ಣೀರ ಹರಿಸಲೆಂದೇ ಹುಟ್ತಿಸಿದೆಯ ನನ್ನ 

ನನ್ನ ನೋವಿನ ಕಣ್ಣೀರಿಗೆ ಕೊನೆಯಿಲ್ಲವಾದರೆ 
ಕೊಟ್ಟುಬಿಡು ಈ ಜೀವಕ್ಕೆ ಮುಕ್ತಿಯನ್ನು 

 

Monday 24 June 2013

ಸೈನಿಕ

ಪ್ರಳಯವಾದರೂ ಸರಿಯೇ 

ಸ್ಪೋಟವಾದರೂ ಸರಿಯೇ 

ಎಲ್ಲೆಂದರಲ್ಲಿ ಪ್ರತ್ಯಕ್ಷವಾಗುವೆ 

ನೊಂದ ಸಂತ್ರಸ್ತರಿಗೆ ನೆರವಾಗುವೆ 

ಎಲ್ಲಾ ಆಸೆಗಳನ್ನು ಸಂಬಂಧಗಳನ್ನೂ ಬಿಟ್ಟು 

ಕೊನೆಗೆ ನಿನ್ನ ಜೀವವನ್ನು ಲೆಕ್ಕಿಸದೆ  

ನೂರಾರು ಜೀವಗಳನು ಉಳಿಸುವೆ 

ದೇಶಕ್ಕಾಗಿ ಮಡಿಯಲು ತಯಾರಿರುವ 

ನಿನ್ನ ತ್ಯಾಗಕ್ಕೆ ಏನು ಹೇಳಿದರೂ ಸಾಲುವುದಿಲ್ಲ 

ನಿನಗೆಷ್ಟು ನಮನಗಳನು ಅರ್ಪಿಸಿದರೂ 

ಕಡಿಮೆಯೇ ಓ ಸೈನಿಕ...  ಜೈ ಹಿಂದ್   

Saturday 22 June 2013

ನಿಸರ್ಗ

ಅಮ್ಮನ ಕಾಣದ ಮನ ನೊಂದ ಮಗುವೊಂದು 
ಎಡೆಬಿಡದೆ ಉಸಿರುಗಟ್ಟುವ ಹಾಗೆ ಅಳುತ್ತಲೇ ಇದೆ 
ಆ ಅಳುವ ನಿಲ್ಲಿಸಲು ಆ ತಾಯಿ ಎಂದು ಬರುವಳೋ 
ಆ ಕಂದನ ಮೊಗವ ನಗುವಿನಿಂದ ಎಂದು ಅರಳುವುದೋ 

ಕ್ಷುಲ್ಲಕ ಕಾರಣಗಳಿಗಾಗಿ ಎಂದೂ ತಾಯಿ ಮಗುವ ದೂರ 
ಮಾಡುವುದಿಲ್ಲ, ಏಕಾಏಕಿ ಮಗುವ ಬಿಟ್ಟು ಹೋದರೆ ಅದು 
ಮಾಡುವುದಾದರೂ ಏನು ಅಳುವ ಹೊರತು 

ಈ ಪ್ರಕೃತಿಯೂ ಕೂಡ ಅಮ್ಮನ ಹಾಗೆ, ನಾವೆಲ್ಲರೂ 
ಪ್ರಕೃತಿಯ ಮಡಿಲಲ್ಲಿ ಮಲಗುವ ಮಕ್ಕಳಲ್ಲವೇ 
ಬದುಕು ಕೊಟ್ಟ ಈ ನಿಸರ್ಗವನ್ನೇ ನಾವು ಕೊಲ್ಲುತ್ತಾ 
ಹೋದರೆ ನಮ್ಮ ಕೈ ಬಿಡದೆ ಅದಕ್ಕೆ ಬೇರೆ ದಾರಿ ಇದೆಯೇ 

ಅದಕ್ಕೆಂದೇ ಆಗುತ್ತಿಲ್ಲವೇ ಉತ್ತರದಲ್ಲಿ ಜಲಪ್ರಳಯ 
ಅದನ್ನು ತಡಿಯಬಹುದಾಗಿತ್ತಲ್ಲವೇ ನಾವು ಇದ್ದಿದ್ದರೆ ನಿಸರ್ಗದ ಸನಿಹ, 

ಏನಾದರೂ ಇರಲಿ ಹೇಗಾದರೂ ಇರಲಿ 
ಪ್ರಕೃತಿ ಎಂದರೆ ಜನ್ಮ ಕೊಟ್ಟ ಅಮ್ಮನಂತೆ  
ಬದುಕ ಕೊಟ್ಟವರನ್ನೇ ಕೊಳ್ಳಲು ಹೊರಟರೆ ಆಗುವುದು 
ನಮ್ಮ ಬದುಕಿನ ಸರ್ವನಾಶವೇ ಹೊರತು ಬೇರೇನೂ ಅಲ್ಲ 

ಅಮ್ಮನಂತೆ ಪ್ರೀತಿಸಿ  ಆರೈಕೆ ಮಾಡೋಣ ನಿಸರ್ಗ ಮಾತೆಯನ್ನು 
ಆ ತಾಯಿ ಪಾವನ ಮಾಡುವಳು ನಮ್ಮ ಜೀವನವನ್ನು 

Friday 21 June 2013

ಸಾಗರ ಪ್ರೀತಿ

ಹೃದಯದಲಿ ನದಿಯೊಂದು ಹರಿಯುತ್ತಿದೆ 
ನಿನ್ನ ಒಲವಿನ ಮಳೆಯೂ ಅಲ್ಲಿ ಸುರಿಯುತ್ತಿದೆ 

ನದಿಯಲ್ಲಿ ಮಳೆಯೂ ಸುರಿದು ಎರಡು ಮನಗಳ 
ಪ್ರೀತಿಯ ಸಾಗರ ತುಂಬಿ ಹರಿಯುತ್ತಿದೆ 

ನದಿಯ ಮಧ್ಯ ನನ್ನ ಮನಸೆಂಬ ಮರವನ್ನು ಬೆಳೆಸಿ 
ಆ ಮರದಲ್ಲಿ ನಿನಗಾಗಿ ಒಂದು ಪ್ರೀತಿಯ ಗೂಡು ಕಟ್ಟಿರುವೆ 

ಆ ಗೂಡಿಗೆ ನಿನ್ನ ಪ್ರೀತಿಯ ಅಲೆಗಳು ಬಂದು ತಾಕಬೇಕು 
ತಂಪಾದ ಆ ಅಲೆಗಳ ಸ್ಪರ್ಷ ಸದಾ ನನ್ನ ಗೂಡಿಗೆ ಇರಬೇಕು



Wednesday 19 June 2013

ನನ್ನ ಕೋಗಿಲೆ

ನಿನ್ನ ಧ್ವನಿಯ ಕೇಳದೆ ಕಂಗಾಲಾಗಿದ್ದೆ ನಾ ಇಷ್ಟು ದಿನ 
ಎನ್ನ ಅಗಲಿ ಎಲ್ಲಿ ಹೋದೆಯೋ ಎಂದು ಚಡಪಡಿಸುತ್ತಿತ್ತು ಈ ಮನ 

ಮುಂಜಾನೆಯ ಮಂಪರು ಬೆಳಕಲ್ಲಿಯೂ  
ಹುಡುಕುತ್ತಿದ್ದೆ ನಿನ್ನ ಸುಂದರ ದನಿಯ 
ಹಸಿರೆಲೆ ಮೇಲಿನ ಇಬ್ಬನಿ ಕರಗಿದರೂ 
ಮೋಡಗಳ  ಬಂಗಾರ ಬಣ್ಣ ಹೋಗಿ 
ಬೆಳ್ಳಿಯ ಬಣ್ಣ ಬಂದರೂ ನಿನ್ನ ಸುಳಿವಿಲ್ಲದೇ ಹೋಯಿತು 

ನನ್ನ ಎಲ್ಲ  ನೋವನ್ನೂ ಮರೆಸುತಿದ್ದೆ 
ನಿನ್ನ ಇಂಪಾದ ದನಿಯಿಂದ 
ಸುಖವೋ ದುಖವೋ ಒಮ್ಮೆ 
ನಿನ್ನ ಸ್ವರವನ್ನು ಕೇಳಿದರೆ ಸಾಕು 
ಮನ ಹಗುರಾಗಿ ಹಕ್ಕಿಯಂತೆ ಹಾರಾಡುತಿದ್ದೆ  ನಾ 

ನಿನಗೆ ಕಾದು ಕಾದು ಸಾಕಾಗಿ 
ನಾನೇ ಹಾಡಲು ಕಲಿತಿರುವೆ 
ನಿನಗೆಂದೇ  ಬರೆದು ಹಾಡುತ್ತ
 ಕಾಯುತಿರುವೆನು ಕೇಳೆ ಕೋಗಿಲೆ 
ಈ ಹಾಡನು  ಕೇಳಿಯಾದರೂ ಬರುವೆ ಏನು ನೋಡುವೆ

ಕುಹೂ ಕುಹೂ ಹಾಡುವೆ ನೀ ಕೋಗಿಲೆ 
ನನಗೆ ಯಾವಾಗ ಕಲಿಸುವೆ ನೀ ಹೇಳೆಲೆ 
ಕುಹೂ ಕುಹೂ ಎಂದು ಹಾಡುತ್ತಲೇ ಬೇಗನೆ 
ಬಂದು ನೊಂದ ಈ  ಮನಸನು ಸಂತೈಸು ಬಾರೆಲೆ 

Sunday 16 June 2013

ಹೀಗೊಂದು ಪುಟ್ಟ ಸಂದೇಶ

ಮನಸಿನ ವೇಗ ಗಾಳಿಗಿಂತ ಹೆಚ್ಚು 
ಗಾಳಿ ಬೀಸಿದಾಗ ಚಂದದ ಎಲೆಗಳು 
ಬೇಡದ ಧೂಳಿನ ಕಣಗಳು ಹಾರುತಾ ಬರುವುವು 
ಹಸಿರೆಲೆ ಬಂದು ಮುಖಕ್ಕೆ ಬಡಿದಾಗ ಆನಂದವಾದರೆ 
ಬೇಡದ ಧೂಳು ಕಣ್ಣಲಿ ಹೋದಾಗ ನೋವಿನ ನೀರು ಬರುವುದು 
ಮನಸು ಸ್ವಚ್ಛಂದವಾಗಿ ಹರಿಯಲು ಬಿಟ್ಟರೆ 
ಅಪರಿಮಿತ ಕನಸುಗಳು ಹರಿಯುವುವು 
ಕೈಗೆಟುಕದ ಕನಸಿಗೆ ಹೆಚ್ಚು ಆಸೆ ಪಡುವುದು 
ವಾಸ್ತವದ ಮಡಿಲಲ್ಲಿ  ತಲೆಯಿಟ್ಟು ಮಲಗದು 
ಈ ಮನಸು ಬಯಸಿದ್ದು ಸಿಗದು ಸಿಕ್ಕಿರುವುದನ್ನು ಅದು ಸ್ವೀಕರಿಸದು  
ಇರುವ ಭಾಗ್ಯವ ಬಿಟ್ಟು ಇರದುದರ ಕಡೆ ಓಡಿದರೆ 
ಆಗುವುದೇ ನಮ್ಮ ಆಶಾಗೋಪುರ ನನಸಿನ ಸೌಧ 
ಏನೇ ಆಗಲಿ ಮುಂದೆ ಸಾಗಲೇಬೇಕು ಈ ಬದುಕ ನಡೆಸಲೇಬೇಕು 
ಕಷ್ಟವೋ ಸುಖವೋ ನೋವೋ ನಲಿವೋ ಎಲ್ಲದುದರ 
ಅನುಭವ ಪಡೆದು ಸಾಗಿಸಿದರೆ ಈ ಜೀವನ ಒಂದು ನಂದನವನ 


Saturday 8 June 2013

ಪದಗಳ ಪರದಾಟ

ನಾ ಬರೆಯದೇ ಉಳಿದ ಪದಗಳಿಲ್ಲ 
ನಿನ್ನ ಒಲವನ್ನು ವರ್ಣಿಸಲು 
ಆದರೂ ಮನಸು ಕೇಳುತ್ತಿಲ್ಲ  ಗೀಚದೆ  ಇರಲು 
ಎಲ್ಲಿಂದ ಹುಡುಕಲಿ ನಾ ಪದಗಳನ್ನು 
ಶಬ್ಧಕೋಶವೇ ನಾಚಿ ಮರೆಯಾಗಿದೆ ನಿನ್ನೊಲವ ಕಂಡು  
ಓ ಶಾರದೆಯೇ ಕಳುಹಿಸು ನನ್ನ ಇನಿಯನ 
ಪ್ರೇಮಕ್ಕೆ ಸರಿತೂಗುವ ಅಕ್ಷರಗಳ ದಂಡು 

Wednesday 5 June 2013

ಸ್ನೇಹ ಬಂಧನ

ಹಕ್ಕಿಯಂತೆ ರೆಕ್ಕೆಯಿಲ್ಲ ನನಗೆ ಸದಾ 
ನಿನ್ನ ಜೊತೆ ಹಾರಾಡಲು 
ಆದರೂ ಆಸೆ ನನಗೆ ಇಬ್ಬರೂ ಸೇರಿ 
ಬಾನಿನ ಎತ್ತರಕ್ಕೆ ಹಾರಲು 

ನೀ ನುಡಿವ ಒಂದೊಂದು ನುಡಿಯು 
ಪೋಣಿಸಿದ ಮುತ್ತಿನ ಹಾರದಂತೆ 
ನಿನ್ನ ಸ್ನೇಹ ಸದಾ ಹೀಗೆ ಇದ್ದರೆ ನನ್ನ 
ಬದುಕೊಂದು ಸುಂದರ ನವಿಲಿನ ಗರಿಯಂತೆ

ಪ್ರೀತಿ ಪ್ರೇಮಕ್ಕಿಂತ ಮಿಗಿಲಾದ 
ಪವಿತ್ರ ಸ್ನೇಹ ಬಂಧನ ನಮ್ಮದು 
ಈ ಸ್ನೇಹದ ಸಂಕೋಲೆಯಿಂದ ಬೇಡೆನಗೆ 
ಬಿಡುಗಡೆ ಸದಾ ನಾನಿರಬೇಕು ನಿನ್ನಲ್ಲೇ 

Monday 3 June 2013

ಒಲವಿನ ಮಳೆ

ಆಗಸದಲಿ ಕಪ್ಪು ಮೋಡ ಕವಿದಿದೆ 
ಮಳೆ ನಿರೀಕ್ಷೆಯಲಿ ಭೂಮಿ ಕಾದಿದೆ 
ಬೆಳ್ಳಿ ಮೋಡ ಕಾಣಲು ಸುಂದರ 
ಕಾರ್ಮೋಡ ಈ ಧರೆಗೆ ಜೀವಾಳ 

ಹೃದಯವೆಂಬ ಬಾನಲ್ಲಿ ನೀ ಬಿತ್ತಿದೆ ಒಲವಿನ ಮೋಡವ  
ಕಾಯುತ್ತಿರುವೆ ನಾ  ಸುರಿಯುವ ಆ ಪ್ರೀತಿಯ ಮಳೆಗೆ  
ಈ ಸುಂದರ ಪ್ರೀತಿಗೆ ಬೆಳ್ಳಿ ಮೋಡವೇ ಸ್ಫೂರ್ತಿ 
ಭಾವಗಳ ಸಂಯೋಜನೆಗೆ ಕಾರ್ಮೊಡವೇ ಸ್ಫೂರ್ತಿ 

ಗಾಳಿಗೆ ಹಾರುವ ಸುಂದರ ಬೆಳ್ಳಿ ಮೋಡಕ್ಕಿಂತ ತಂಪಾಗಿ ಮಳೆ ಸುರಿಸಿ  
ಶಾಶ್ವತವಾಗಿ ಧರೆ ಸೇರುವ ಕಾರ್ಮೊಡವೇ ಚಂದ 
ಆ ಕಾರ್ಮೋಡ ನೀನಾಗಿ ಇಳೆಯು ನಾನಾಗಿ ನಡುವೆ ಇರುವ ಅಂತರದಲ್ಲಿ 
ಒಲವೆಂಬ  ಮಳೆಯ ಸುರಿಸಿದರೆ ಇನ್ನೂ ಚಂದ 


Sunday 2 June 2013

ಶುಭೋದಯ

ಮುತ್ತಂತೆ ಉದುರುತ್ತಿವೆ ಮುಂಜಾನೆ ಹನಿಗಳು 
ಸುಂದರವಾಗಿ ಕಾಣುತ್ತಿವೆ ಹಸಿರೆಲೆಗಳು 
ಆಗಸದಲಿ ಹರಿದಿದೆ ಉದಯನ ಚಿನ್ನದ ನೀರು 
ಇಬ್ಬನಿಯ ಅಂದ ಸೂರ್ಯನ ಕಿರಣಗಳ ಚಂದ 
ಜೊತೆಗೆ ನೆಮ್ಮದಿಯಾಗಿ ಮಾಡಿ  ದೇವರ ಪ್ರಾರ್ಥನೆಯ 
ಸುಂದರ ಮುಂಜಾನೆಯ ಸೊಬಗಲಿ ಸುಂದರ ಮುಗುಳ್ನಗೆಯ 
ಜೊತೆಯಲ್ಲಿ ಎಳೆಯೋಣ ಬದುಕಿನ ರಥವ 

ಜೀವನದ ಜೋಕಾಲಿ

ಕೋಗಿಲೆಯಾಗಿ ನೀ ಹಾಡಿದರೆ 
ನವಿಲಾಗಿ ನಾನು ಕುಣಿಯುವೆ 
ಆಗಸದಲ್ಲಿ ಕವಿದಿರುವ ಕಪ್ಪು ಮೋಡ ನೀನಾದರೆ 
ಅದನ್ನು ಕರಗಿಸಿ ಹನಿಯಾಗಿಸುವ ಕಿರಣ ನಾನಾಗುವೆ 

ನನ್ನ ಉಸಿರಾಡುವ ಪ್ರತಿ ಕ್ಷಣ 
ಜಪಿಸುವುದು ನಿನ್ನ ಹೆಸರಿನ ಮಂತ್ರ 
ನೀನಿರುವ ಕ್ಷಣವೆಲ್ಲ ಜೇನಂತೆ ಸವಿ 
ದೂರಾದ ಸಮಯ ಬೇವಿನಂತೆ ಕಹಿ 

ಹೂವಾದ ಆಸೆಯೆಲ್ಲಾ ಮುಳ್ಳಾಗಿಸದೆ 
ನವಿರಾದ ಹೊಂಗನಸ ಮಾಡಿ ಸವಿಯೋಣ
ಕಟ್ಟಿದ ಕನಸನ್ನು ನನಸಾಗಿಸಿ ಜೀವನವೆಂಬ 
ಜೋಕಾಲಿಯಲ್ಲಿ ಇಬ್ಬರೂ ಸೇರಿ ಜೀಕೋಣ