Monday, 21 March 2016

ವಿಶ್ವ ಕವನ ದಿನವಂತೆ ಇಂದು 
ಅದಕೆ ಏನೋ ನನ್ನ ಪದಗಳೆಲ್ಲ ಹಿಂದು ಮುಂದು 
ಪದಕಟ್ಟಿ ಕವನ  ಬರೆಯಲೇಬೇಕು 
ಇವತ್ತಿನ ದಿನಕ್ಕೆ ಅರ್ಪಿಸಲೇ ಬೇಕು 
ಆದರೇನು ಮಾಡಲಿ ಹಿಂದು ಮುಂದಾಗಿರುವ 
ಪದಗಳನು ಜೋಡಿಸಿ ಸುಂದರ ಕವಿತೆಯ ಪೋಣಿಸಿ 
ಕವನದ ದಿನಕ್ಕೆ ಕವನವನ್ನೇ ಬಯಸುವ 
ಚಂದನದ ಕವಿತೆಗೆ ಯಾಕೀ ತಲ್ಲಣ...???? 

Thursday, 17 March 2016

ನಿದ್ದೆಯ ಮಂಪರಲ್ಲಿದ್ದೆ ಎಲ್ಲಿ ಗುನುಗುತ್ತಿತ್ತೋ ನಿನ್ನ ನಿನಾದ 
ಥಟ್ಟನೆ ನೆಟ್ಟಗಾದವು ಕಿವಿಗಳೆರಡು ದೂರ ಓಡಿದಳು ನಿದ್ರಾದೇವಿಯು 
ಏನು ಶಕ್ತಿಯೋ ನಿನ್ನ ದನಿಯಲ್ಲಿ ಎದ್ದು ಸವಿದೆ ಸುಂದರ ಪ್ರಕೃತಿಯನಿಲ್ಲಿ 
ಮನದ ಭಾರವೆಲ್ಲ ಕ್ಷಣದಲ್ಲಿ ಕರಗಿತು 
ಹೊಸ ಭರವಸೆಯೊಂದು ಮನದಲ್ಲಿ ಮೂಡಿತು 
ನೋವು ದುಃಖವೆಲ್ಲ ಮರೆತೆ ನವದಿನದ ಪ್ರಾರಂಭ ಅರಿತೆ 
ನೋವು ಮರೆಸಿ ಮಂದಹಾಸ ಮೂಡಿಸಿದ ಕೋಗಿಲೆಗೆ 
ಮನದುಂಬಿ ಅರ್ಪಿಸುವೆ ನಮನ ಅದಕ್ಕೆಂದೇ ಬರೆದೆ ಈ ಕವನ 

Wednesday, 16 March 2016

ದೇವರು ಕೊಟ್ಟ ಸುಂದರ ಉಡುಗೊರೆ ಪ್ರೀತಿ 
ಅದನು ನಾವು ನೋಡುವ ಪರಿ ನಾನಾ ರೀತಿ 
ಬಯಸುವರಿಗೆಲ್ಲ ಸಿಗದ ವರವಾಗಿ ಭಾಸವಾದರೆ 
ಬೇಡವೆಂದರೂ ಕೆಲವೊಮ್ಮೆ ಬಂದು ಸುರಿವುದು 
ಬೇಕೆಂದು ಕಾಯುವಾಗ ದೂರ ಓಡುವುದು 
ಪ್ರೀತಿಸುವುದು ಪ್ರತೀ ಜೀವಿಯ ಹಕ್ಕಾದರೆ 
ದಕ್ಕಲೇ ಬೇಕು ಎನ್ನುವ ಹಠ ಸ್ವಾರ್ಥವೆನಿಸುವುದು 
ಪ್ರೀತಿಯನ್ನು  ಪ್ರೀತಿಯಿಂದ ಪ್ರೀತಿಸಿ 
ಬಲವಂತವಾಗಿ ದಕ್ಕಿಸಿ ಅನುಭವಿಸದಿರಿ 
ಮೊಗ್ಗು ತಾನಾಗಿಯೇ ಅರಳಿ ಹೂವಾಗಬೇಕು 
ದಳವನ್ನು ನೋಯಿಸಿ ಅರಳಿಸಿದರೆ ಸಿಗುವುದು 
ಬಾಡಿ ಬೆಂಡಾದ ಹೂವೆ ಹೊರತು ಸುಂದರ ಪುಷ್ಪವಲ್ಲ 
ಪ್ರೀತಿಯೂ ಹಾಗೆ...... 

Tuesday, 15 March 2016

ನಿನ್ನಲ್ಲಿ ಅಡಗಿದ ನೋವನು ನೀನೆ ಹುಡುಕಿ ಕೊಲ್ಲು 
ಪರರಿಂದ ಸಾಂತ್ವನ ಬಯಸಿದರೆ 
ಈ ಬಾಳು ಮುಗಿಯದ  ಗೋಳು 
ಮನಸಲ್ಲಿ ನೋವಿರಬಹುದೇನೋ ನೂರಾರು 
ಮಾಡುವ ಸಾಧನೆಗಳು ಕಾಯುತಿವೆ ಸಾವಿರಾರು 
ಬಯಸದೇ ಬಂದಿರುವರೇ ಎಲ್ಲರೂ ಈ ಭೂಮಿಯ ಮೇಲೆ 
ಹೊತ್ತು ಒಂದೊಂದು ವಿಶೇಷ ಕಲೆ 
ಕಾಯಲೇ ಬೇಕು ತಿರುಗಿ ಹೋಗುವ ಕಾಲವನ್ನು 
ತುಂಬಲೇಬೇಕು ಸಾರ್ಥಕ ಬದುಕಿನಿಂದ 
ಹೋಗಿ ಬರುವ ನಡುವಿನ ಅಂತರವನ್ನು 

Monday, 14 March 2016

ನಿನಗೊಂದು ಉಡುಗೊರೆಯ ಕೊಡುವಾಸೆ 
ಆದರೆ ಏನು ಕೊಡಲಿ ನಾ ನಿನಗೆ 
ಸಾಟಿ ಏನು ನೀ ಸುರಿಸುವ ಒಲವಿಗೆ 
ಯೋಚಿಸಿ ಯೋಚಿಸಿ ದಣಿದಿದೆ ಈ ಮನವು 
ತೋಚದೇ ಬರೆಯಲು ಯಾವುದೇ ಪದವು 
ಏನೆಂದು  ವರ್ಣಿಸಲಿ ಏನನ್ನು ಕೊಡಲಿ 
ಹುಡುಕಿತಿರುವೆ ಆ ಉಡುಗೊರೆಯ ಪ್ರತೀಕ್ಷಣ 
ಹೋಗಲಾಡಿಸಲು ಈ ಮನದ ತಲ್ಲಣ 

Monday, 7 March 2016

ಜನ್ಮ ನೀಡುವ ಜೀವನದಿ  
ಪ್ರೀತಿಯ ರೂಪ ಸಹನೆಯ ದೀಪ 
ಮಮತೆಯ ಸಾಗರ ತ್ಯಾಗದ ಬಿಂಬ 
ಮನಸಲ್ಲಿ ಶಾಂತಿಯ ಮೊಗದಲ್ಲಿ ಹೂನಗೆಯ ತುಂಬುತ 
ನೋವು ನಲಿವುಗಳನು ಸಮನಾಗಿ ನುಂಗುತ 
ಸಂತೋಷ ಕೊಟ್ಟು ಮನವನ್ನು ಗೆದ್ದು 
ಕೋಪ ತಾಪಗಳ ಸಂಹಾರ ಮಾಡಿ 
ಒಲವ ಸುರಿವ ದೇವತೆಯಂತೆ ಬಾಳುವಳು 

Friday, 4 March 2016

ಹೂವು ಹಣ್ಣಾಗುವುದು ಆದರೆ ಹಣ್ಣು ಹೂವಾಗಲಾರದು 
ಅಂತೆಯೇ ಸ್ನೇಹ ಪ್ರೀತಿಯಾಗಬಹುದು ಆದರೆ 
ಪ್ರೀತಿ ಎಂದಿಗೂ ಸ್ನೇಹವಾಗುವುದಿಲ್ಲ 
ಪ್ರಕೃತಿಯಂತೆ ನಮ್ಮ ಜೀವನ ನಡೆವುದೇ ಹೊರತು 
ನಮ್ಮಂತೆ ಪ್ರಕೃತಿಯ ಬದಲಿಸಲಾಗದು 

Thursday, 3 March 2016

ನಿನ್ನ ಭೂತಕಾಲವ ಸ್ವೀಕರಿಸಿ 
ವಾಸ್ತವದಲ್ಲಿ ಸಹಕರಿಸಿ 
ಭವಿಷ್ಯವನ್ನು ಪ್ರೋತ್ಸಾಹಿಸುವುದೇ 
ಸತ್ಯ ಸಂಬಂಧ 

Tuesday, 1 March 2016

ಯಾವುದೇ ನೋವಿಗೂ ಪ್ರೀತಿ ಸ್ನೇಹಗಳು 
ಮಾತ್ರೆಯಾಗಬಹುದೇನೋ 
ಆದರೆ ನೆನಪಿಡಿ ಪ್ರೀತಿ ಸ್ನೇಹದಿಂದ 
ಆದ ನೋವಿಗೆ ಔಷಧಿಯೇ ಇಲ್ಲ