Wednesday, 27 January 2016

ಬಾಳೊಂದು  ಹೋರಾಟ 
ಕಲಿಸುತ್ತಲೇ  ಇರುವುದು ದಿನಕ್ಕೊಂದು ಪಾಠ  
ಬಂಧನಗಳ ನಂಬಿ ಬದುಕಿದರೆ ನೋವು ಕಟ್ಟಿಟ್ಟ ಬುಟ್ಟಿ 
ಇದೇ ಅಲ್ಲವೇ ಬದುಕಿನ ಮೂಲ ಸೃಷ್ಟಿ 
ಕೊರಗಿ ಬೆಂದು  ಬಾಡಬೇಡವೇ ಹುಚ್ಚು ಮನವೇ 
ಇಲ್ಯಾರು ಇರರು ನಿನಗಾಗಿ 
ಅವರವರ ಬದುಕೇ ಹೆಚ್ಚು ಅವರಿಗಾಗಿ 
ಬಿಟ್ಟು ಬಿಡು ನನ್ನವರೆಂಬ  ವ್ಯಾಮೋಹವ 
ಸ್ವಚ್ಛಂದವಾಗಿ ಬದುಕು ನೆನೆದು ನಿನ್ನ ನಿರ್ಮಲ ಮನವ

Sunday, 24 January 2016

ಎಲ್ಲರೂ ನನ್ನವರೇ ಎಂದು ನಂಬಿ ಪ್ರೀತಿಸಬೇಡ ಹುಚ್ಚು ಮನವೇ 
ನಿನ್ನ ಪ್ರೀತಿ ನಂಬಿಕೆಗೆ ಯೋಗ್ಯರಲ್ಲ ಎಲ್ಲರೂ 
ಅವರಿಗಿಲ್ಲದೇ ಹೋಗುವುದು ಕೆಲವೊಮ್ಮೆ ನಿನ್ನ ಮಮತೆಯ ಅರಿವೇ 
ಅರ್ಥೈಸಿ ಬದುಕಿದರೆ ಆಗುವರು ಅವರೂ ಸಹ ನಿನಗೆ ಪ್ರಿಯರು 
ನೀ ಕೊಟ್ಟ ಪ್ರೀತಿಗೆ ಬಯಸದಿರು ಅವರ ಪ್ರೀತಿಯ 
ಸಿಗದಿದ್ದರೆ ಹಾಕದಿರು ಅವರಿಗೆ ಹಿಡಿ ಶಾಪವ 
ನಿನ್ನ ನೀನು ನಿಯಂತ್ರಿಸಿದರೆ ನಿನಗಿಲ್ಲ ನೋವು 
ಬಿಟ್ಟು ಬದುಕು ಎಲ್ಲರ ಚಿಂತೆ ಆಗ ಸಿಗುವುದು ನೆಮ್ಮದಿಯ ಸೂರು 

Thursday, 21 January 2016

ನೀ ಇಂದು ಹೋಗುತಿರುವೆ ನನ್ನಿಂದ ದೂರಾಗಿ  
ತಿರುಗಿ ಬರುವೆ  ಮತ್ತೆ ಕೂಡಿ ಬಾಳಲು ಶಾಶ್ವತವಾಗಿ 
ವಿರಹದಲ್ಲೂ ಸುಖವಿದೆ ಎಂದು ಅನಿಸುತಿದೆ 
ಕಾರಣ ಕಣ್ಮನಗಳಲ್ಲಿ ನಿನ್ನೊಲವೇ ತುಂಬಿದೆ 
ಪ್ರತೀ ಕಲ್ಪನೆಯಲಿ ಕನಸಲ್ಲಿ ಕುಣಿದು ನಲಿದು ಹೋಗುವೆ 
ನಿನ್ನ ನೆನಪಾದ ಕ್ಷಣಗಳೆಲ್ಲ ರಂಗು ರಂಗಾಗಿ ಭಾಸವಾಗಿದೆ 
ಕಾಯುವುದರಲ್ಲೂ ಹಿತವಿದೆ ತಾಳ್ಮೆಗೆ ತಕ್ಕ ಫಲವು ಇದೆ 
ಎಲ್ಲಿದ್ದರೂ ಓಡೋಡಿ ಬಾರೋ ಹುಡುಗ 
ಕೇಳಿಸುತ್ತಿಲ್ಲವೇ ನನ್ನ ಮನದ ದುಗುಡ 
ಬೇಗನೆ ಸಾಗಲಿ ಈ ವಿರಹ ಸೇರಲು ಕಾದಿರುವೆ ನಿನ್ನ ಸನಿಹ 

Wednesday, 20 January 2016

ಅಂಚೆ(POST) ಮಿಂಚಂಚೆ(EMAIL)
**********************************************
ಓ ಅಂಚೆಯಣ್ಣ ಹೇಗಿದ್ದಿಯಪ್ಪ 
ಒಂದಾನೊಂದು ಕಾಲದಲ್ಲಿ ನೀನೆ ಜಗಕೆಲ್ಲ ಸಂಪರ್ಕ ಸಾಧನ 
ಸುಖದ ಸುದ್ದಿ ಇರಲಿ ನೋವಿನ ಸುದ್ದಿ ಇರಲಿ ವ್ಯವಹಾರವಿರಲಿ 
ನಿನ್ನಿಂದಲೇ ಹೋಗುತ್ತಿತ್ತು ಸಂದೇಶ ತಿರುಗುತ್ತ ದೇಶ ವಿದೇಶ 
ಎಂದು ಬಂತೋ ಮಿಂಚಂಚೆ ಮರತೇ ಬಿಟ್ಟರು ಹಳೆಯ ಅಂಚೆ 
ಇಮೇಲ್ ಫೇಸ್ಬುಕ್ ವ್ಹಾಟ್ಸಪ್ ಇವುಗಳದೇ ಹಾವಳಿ 
ಎಲ್ಲೆಂದರಲ್ಲಿ ಮನ ಬಂದಂತೆ ಮಾಡುತಿವೆ ಜಗದ ತುಂಬಾ ದಾಳಿ 
ಅದಕ್ಕೆ ನೊಂದು ಬರೆಯುತಿರುವೆ ಅಂಚೆಯಣ್ಣನ ಅಳಲು 
ಮತ್ತೆ ಬರಿಸಲು ಅವನ ಮೊಗದ ಮೇಲೆ ಹರ್ಷದ ಹೊನಲು 

Tuesday, 19 January 2016

ಓ ಕವಿತೆಯೇ..... 
ತೋಚಿದ್ದು ಗೀಚಿದೆ ಅನಿಸಿದ್ದು ಹೇಳಿದೆ 
ಒಲವನ್ನು ತೋಡಿಕೊಂಡೆ ನೋವನ್ನು ಹಂಚಿಕೊಂಡೆ 
ಗೆಳೆಯರನ್ನು ಪಡೆದೆ ಅಭಿಮಾನದ ಹೊಳೆಯಲ್ಲಿ ಮಿಂದೆದ್ದೆ 
ನಗು ಅಳು ಸ್ನೇಹ ಪ್ರೀತಿ ತ್ಯಾಗ ವಿಶ್ವಾಸ ಹೀಗೆ 
ಮತ್ತೊಂದು ಮಗದೊಂದು ಸೇರಿಸುತ್ತ 
ಭಾವನಾತ್ಮಕ ಬೆದರಿಕೆಗಳನು ಎದುರಿಸಿದೆ 
ಆದರೂ ಬಿಡಲಾಗುತ್ತಿಲ್ಲ ಬರೆಯುವುದನ್ನು ನಿನ್ನಲ್ಲಿ 
ನೀನೆ ಕೈಬಿಟ್ಟರೆ ಮತ್ತಾರು ಆಸರೆ ನನಗಿಲ್ಲಿ 

Sunday, 17 January 2016

ನಾಳೆ ಏನಾಗುವುದೋ ಗೊತ್ತಿಲ್ಲ ನೆನ್ನೆ ಆಗಿದ್ದು ಬೇಕಾಗಿಲ್ಲ 
ಭೂತ ಭವಿಷ್ಯಕಾಲಗಳ ನಡುವೆ ವಾಸ್ತವ ಹಾಳಾದರೆ 
ಆ ಕ್ಷಣಗಳು ತಿರುಗೆಂದೂ ಬರುವುದಿಲ್ಲ 
ಪ್ರತೀಕ್ಷಣ ಅನುಭವಿಸಿ ಬದುಕಿದರೆ ಬಾರದು ನಾಳೆಯ ಚಿಂತೆ 
ವಾಸ್ತವ ಅರಿತರೆ ಪಡುವುದಿಲ್ಲ ನೆನ್ನೆಯ ನೆನದು ಸುಮ್ಮನೆ ವ್ಯಥೆ 
ಶ್ರದ್ದೆಯಿಂದ ದುಡಿಯೋಣ ದ್ವೇಷ ಕೋಪಗಳ ಮರೆಯೋಣ 
ನಾವು ಬದುಕಿ ಪರರನ್ನು ಬದುಕಿಸಿ ಜೀವನವೆಂಬ ಪಯಣವ ಮುಗಿಸೋಣ 


Friday, 15 January 2016

ನಾ ಸೈನಿಕನ ಹೆಂಡತಿ ನಿಜವೇ ಅದರೂ 
ನನ್ನಲ್ಲೂ ಇದೆ ಒಂದು ಹೆಂಗರಳು 
ಅದು ಬಯಸುವುದು ಸದಾ ನಿನ್ನ ಒಲವು 

ಮಾಂಗಲ್ಯ ಬಂಧನವಾಗಿ ವರುಷಗಳೇ ಕಳೆದರೂ 
ನಾ ನಿನ್ನೊಂದಿಗೆ ಕಳೆದದ್ದು ಕೇವಲ ಕೆಲ ದಿನಗಳು 

ಪ್ರತೀಕ್ಷಣ ಹೊಟ್ಟೆಕಿಚ್ಚು ಪಡುತಿರುವೆ ಕಾರಣ 
ಪತ್ನಿಗಿಂತ ಹೆಚ್ಚು ಪ್ರೀತಿಸುವೆ ನೀ ವೃತ್ತಿಯನ್ನು 
ಒಮ್ಮೆಯಾದರೂ ನೆನೆಸಿಕೋ ನಿನ್ನಾಕೆಯ 
ಉಸಿರು ಬಿಗಿಹಿಡಿದು ಕಾಯುತಿರುವಳು ನೀ ಬರುವ ದಾರಿಯ 

ಸಮುದ್ರದಲ್ಲಿ ಮುಳುಗುವೆಯೋ ಮರುಭೂಮಿಯಲ್ಲಿರುವೆಯೋ 
ಹಿಮ ಪರ್ವತಗಳಲ್ಲಿ ಸಿಲುಕಿರುವೆಯೋ ನಾನರಿಯೆ
ನೀ ಹೇಗಿದ್ದರೂ ಎಲ್ಲಿದ್ದರೂ ಮರೆಯದಿರು ನಿನ್ನ ಹುಡುಗಿಯ 
ನಾ ಸದಾ ನಿನ್ನ ಕ್ಷೇಮಕ್ಕಾಗಿ ಜಪಿಸುವೆ 

ನೀ ಸದಾ ಕಾಎಂದಿಗೂ ಭಾರತ ಮಾತೆಯ ಮಕ್ಕಳನು 
ಎಂದಿಗೂ ಚಿಂತಿಸದಿರು ನಾ ಇಲ್ಲಿ ಒಂಟಿಯಾಗಿರುವೆನೆಂದು 
ನಾ ಹೊಟ್ಟೆಕಿಚ್ಚು ಪಡುವೆನೆಂದು ವ್ಯಥೆ ಪಡಬೇಡ 
ಆದರೂ ಎಂದಿಗೂ ದೂರಾಗದು ನನ್ನ ಮನದ ದುಗುಡ 

ಮನದ ಮನದನ್ನೆಯ ಮರೆತರೂ ಚಿಂತೆಯಿಲ್ಲ 
ತಾಯ್ನಾಡಿನ ರಕ್ಷಣೆ ನಿನ್ನ ಹೊಣೆಯೆಂದು ನೀ ಮರೆಯುವುದಿಲ್ಲ 
ನನಗೆ ಹೊಟ್ಟೆಕಿಚ್ಚಿಗಿಂತ ಹೆಚ್ಚಾಗಿ ನನ್ನ ದೇಶವನ್ನು 
ಹುಚ್ಚಿಯಂತೆ ಪ್ರೀತಿಸುವೆ ಜೊತೆಗೆ ನಿನ್ನನ್ನೂ ಕೂಡ 

Wednesday, 13 January 2016

ಸಂಭ್ರಮದಿಂದ ಬರುತಿದೆ ಮತ್ತೊಂದು ಸಂಕ್ರಾಂತಿ 
ತುಂಬಲಿ ಎಲ್ಲರ ಬಾಳಲ್ಲಿ ಹೊಸ ಕಾಂತಿ 
ಎಳ್ಳು ಬೆಲ್ಲದ ಸಂಗಮದಂತೆ ಚಿಮ್ಮಲಿ ಹೊಸ ಪ್ರೀತಿ 
ನಾವು ಸಿಹಿಯ ತಿಂದು ಮತ್ತೊಬ್ಬರಿಗೂ ತಿನ್ನಿಸಿ 
ಮರೆಯೋಣ ಹಿಂದಿನ ಕಹಿಯ 
ಸಾಗೋಣ ಎಲ್ಲರೂ ಸವಿಯುತ ಹೊಸ ಬದುಕಿನ ಸವಿಯ 

Tuesday, 12 January 2016

ನಾ ಮಣ್ಣಲ್ಲಿ ಮಣ್ಣಾಗುವ ಮುನ್ನ 
ತಿಳಿಯಬಾರದೇ ನೀ ನನ್ನ ಪ್ರೀತಿಯ ಆಳವನ್ನ 
ನನ್ನ ಉಸಿರಲ್ಲಿ ಉಸಿರಾಗಿರುವ ನೀನು 
ತಡೆಯಬಾರದೇ ನನ್ನ ಸಾವನ್ನು 
ಬಯಸಿದ ಪ್ರೀತಿಗೆ ಬೇಡವಾಗಿರುವೆ ನಾ ಇಂದು 
ತಿರುಗಿ  ಬರಲಾರೆ ನಾ ಮುಂದೆಂದೂ 
ಈ ಉಸಿರು ನಿಲ್ಲುವ ಮುನ್ನ 
ಕೇಳಬಯಸುತಿದೆ ನಿನ್ನ ಒಲವಿನ ಹಾಡನ್ನ 
ಎಲ್ಲಿದ್ದರೂ ಓಡಿ ಬಾ ನನ್ನಲ್ಲಿ 
ಕಾಯುತಿರುವೆ ಜೀವ ಬಿಡಲು ನಿನ್ನ ಮಡಿಲಲ್ಲಿ 

Sunday, 10 January 2016

ಮುಂಜಾನೆ ಬೀಸಿದ ತಂಪಾದ ಗಾಳಿಗೆ ಇಳೆಯೆಲ್ಲ ಛಳಿ ಛಳಿ 
ಮನಸಿಗೆ ಬರುವ ಆಲೋಚನೆಗಳೆಲ್ಲ ಸಿಹಿ ಸಿಹಿ 
ಭುವಿಯಲಿ ಬೀಸುತಿರುವ ತಂಪಾದ ಗಾಳಿಯು 
ಎಲ್ಲರ ಮನಸಿಗೂ ಬೀಸಲಿ ತಾನು ನಕ್ಕು ಪರರನ್ನು ನಗಿಸಲಿ 
ಕೋಪ ತಾಪ ನೋವು ದುಃಖಗಳನು ಬಿಸಿಲಿಗೆ ಬೇಯಲು ಬಿಟ್ಟು 
ಸ್ನೇಹ ಪ್ರೀತಿ ಸಂತೋಷ ವಿಶ್ವಾಸವೆಂಬ ತಣ್ಣನೆಯ ಆನಂದವ ಕಟ್ಟು 
ಮರೆಯೋಣ ದ್ವೇಷವ ಹರಸೋಣ ಎಲ್ಲರಿಗೂ ಸಂತೋಷವ 

Thursday, 7 January 2016

ಸದಾ ಮುಗುಳ್ನಗುವೆ ಎಂದು ನೋವಿಲ್ಲವೆಂದು ಅರ್ಥವಲ್ಲ 
ಮುಖ ಸಪ್ಪಗಿದೆಯೆಂದು ಖುಷಿಯಾಗಿಲ್ಲವೆಂದೂ ಅಲ್ಲ 
ಮುಖವೊಂದು ಪುಸ್ತಕದಂತೆ ಪುಟ ತಿರುವಿದಂತೆಲ್ಲ 
ವಿಷಯ ಬೇರೆಯಾಗುವ ಹಾಗೆ 
ಪ್ರತೀ ಕ್ಷಣ ಕಳೆದಂತೆ ಭಾವನೆಗಳು ವಿಭಿನ್ನ ರೂಪ ತಾಳುವುದು 
ಆ ಭಾವಗಳ ಅನುಸಾರ ಮುಖ ಕಂಡರೆ 
ಆ ಮುಖದ ಮೇಲೆ ನೋವು ನಲಿವುಗಳ ಸಂಗಮವಾಗುವುದು 

Tuesday, 5 January 2016

ದೇಶವೆಲ್ಲ ಕಂಬನಿ ಮಿಡಿಯುತ್ತಿದೆ ವೀರ ಮರಣ ಅಪ್ಪಿದ ಯೋಧನಿಗೆ 
ಏನು ಬರೆದರೂ ಹೊಗಳಿದರೂ ಸಾಲದು ನಿಮ್ಮ ತ್ಯಾಗದ ಬದುಕಿಗೆ 
ನಿಮ್ಮ ಅಭಯ ಹಸ್ತಗಳಲ್ಲಿ  ನಿರ್ಭಯವಾಗಿ ಬದುಕುವ ನಾವೇ ಧನ್ಯರು 
ನಿಮ್ಮ ದೇಹ ಮಣ್ಣಿಗೆ ಸೇರಿದರೂ ನಿಮ್ಮ ತ್ಯಾಗದ ಫಲ ಅಜರಾಮರ