Wednesday 12 July 2017

ಕನಸುಗಳ ಕದವು ಮುಚ್ಚಿದಾಗ 
ಅವಕಾಶಗಳ ಬಾಗಿಲವ ಹುಡುಕಿ ತೆಗೆದರೆ 
ಹಸಿರಾಗಿ ಕಂಗೊಳಿಸುವುದು 
ವಾಸ್ತವ ಬದುಕೆಂಬ ಧರೆ 

ಸಮಯ

ಭೂತಕಾಲದ ನೋವನ್ನು ತೆಗೆದು 
ವರ್ತಮಾನವನ್ನು ಶಿಕ್ಷಿಸಿ 
ಭವಿಷ್ಯಕ್ಕೆ ಪಾರ್ಶ್ವವಾಯು ಹೊಡೆಸಬೇಡ 

ಇಲ್ಯಾವುದೂ ಶಾಶ್ವತವಲ್ಲ 
ಕಾಲವೊಂದೆ ಸತ್ಯ ನಾನೆಂಬ ಅಹಂವೆಲ್ಲ ಮಿಥ್ಯ 
ಕಾಲದ ಹಿಂದೆ ಓಡುವುದಷ್ಟೇ ನಮ್ಮ ಕಾಯಕ 

ಬದುಕಬೇಕು ನಾವು ವರ್ತಮಾನದಲ್ಲಿ 
ಮರೆಯಬೇಕು ನಾವು ಭೂತಕಾಲವನ್ನಿಲ್ಲಿ 
ಆಗ ನೆಮ್ಮದಿಯೇ ತುಂಬುವುದು ಭವಿಷ್ಯದಲ್ಲಿ 

ನೊಂದ ಮತ್ತು ಸ್ವಾರ್ಥ ಮನಸುಗಳ ನಡುವೆ

ಈ  ಭೂಮಿಯ ಮೇಲೆ ಸಂಭವಿಸುವ ಹುಟ್ಟು ಸಾವು ಕೇವಲ ಆಕಸ್ಮಿಕವೇ ಹೊರತೂ ಇಲ್ಯಾರೂ ಬಯಸಿಯೂ ಹುಟ್ಟಿಲ್ಲ, ಬಯಸಿ ಸಾಯುವುದೂ ಇಲ್ಲ. ಎಲ್ಲವೂ ಕಾಲನಿರ್ಣಯವಷ್ಟೇ ಎಂಬುದು ನನ್ನ ಅಭಿಪ್ರಾಯ. ಹುಟ್ಟುತ್ತಲೇ ಸುಖವ ಹೊತ್ತು ಎಲ್ಲರೂ ಹುಟ್ಟುವುದಿಲ್ಲ, ಹಾಗೆಯೇ ನೋವಿನ ಬುಟ್ಟಿಯ ಹೊತ್ತೂ ಯಾರೂ ಹುಟ್ಟುವುದಿಲ್ಲ. ಆದರೆ ನಮ್ಮ ಸುತ್ತಮುತ್ತ ಬಹಳಷ್ಟು ಜನರು  "ನಾ ಬಯಸಿದ ಬದುಕು ನನ್ನದಾಗಲಿಲ್ಲ, ನಾ ಬದುಕುವ ಬದುಕು ಬೇರೆಯವರ ಒತ್ತಾಯದ ಫಲ, ನನ್ನಾಸೆಗಳೆಲ್ಲವನ್ನು ಸಾಯಿಸಿ ಬೇರೆಯವರ ಖುಷಿಗಾಗಿ ಬದುಕುತಿರುವೆ" ಇತ್ಯಾದಿ ಇತ್ಯಾದಿ ಹೀಗೆ ಅನೇಕರು ಕೊರಗುತ್ತಲೇ ಇರುತ್ತಾರೆ. ಇದಕ್ಕೆಲ್ಲ ಹೊಣೆ ಯಾರು ಎಂಬ ಪ್ರಶ್ನೆಯೇ ಕಾಡುತ್ತಿರುತ್ತದೆ. 

ಬಯಸದೇ ಬಂದ ದೌರ್ಭಾಗ್ಯಕ್ಕೆ ಬಲಿಯಾದವರ ಮನವು ಕಲ್ಲಿನಂತೆ ಎಷ್ಟೇ ಪೆಟ್ಟು ಬಿದ್ದರೂ ಕರಗುವುದಿಲ್ಲ. ಆದರೆ ಅಂತರಂಗದಲ್ಲಿ ಬೆರೆತ ಪ್ರೀತಿ, ಕರುಣೆ, ವಾತ್ಸಲ್ಯವೆಂಬ ಅಮೂಲ್ಯ ಮೌಲ್ಯಗಳು ನಿಷ್ಕರುಣೆಯಿಂದ ಕರಗಿ ಹೋಗುತ್ತವೆ. ಇದಕ್ಕೆ ಹೊಣೆ ಯಾರೆಂದು ದೂರುವುದೊ ಆ ಮನಕ್ಕೆ ತಿಳಿಯದು, ಆದರೆ ಅದಕ್ಕೂ ಆಸೆಗಳಿವೆ, ಕನಸುಗಳಿವೆ, ಭಾವನೆಗಳಿವೆ ಎಂಬ ಸರಳ ಸತ್ಯ ಸ್ವಾರ್ಥ ಮನಗಳಿಗೆ ತಿಳಿಯದು, ತಿಳಿದರೂ ನೊಂದ ಮನಸಿಗೆ ಸ್ಪಂದಿಸುವ ದೊಡ್ಡ ಮನಸು ಮಾಡದು. ವಾಸ್ತವ ಬದುಕು ಹೀಗಿರುವಾಗ ಜೀವನದಲ್ಲಿ ಒಂದು ಕ್ಷಣವಾದರೂ ಪ್ರತಿಯೊಬ್ಬರಿಗೂ "ಯಾಕಾದರೂ ಬದುಕಿದ್ದೇನೋ" ಎಂಬ ನೋವು ಕಾಡಿಯೇ ಕಾದಿರುತ್ತದೆ. ಹಾಗಂತ ಅವರೆಲ್ಲರೂ ಸಾಯುತ್ತಾರೆಯೇ?? ಖಂಡಿತ ಇಲ್ಲ. 

ಹುಟ್ಟು ಹೇಗೆ ನಮ್ಮ ಕೈಯಲ್ಲಿ ಇಲ್ಲವೋ ಹಾಗೆ ಸಾವು ಕೂಡ ನಮ್ಮ ಕೈಯಲ್ಲಿ ಇಲ್ಲ. ಆದರೆ ಅವಕಾಶಗಳು ಮತ್ತು ಅವಕಾಶದ ಹುಡುಕಾಟ, ಬಯಸದ ಬದುಕಿಗೆ ಕೊನೆ, ಬಯಸುವ ಬದುಕಿಗೆ ನಾಂದಿ ಹಾಡುವ ಕಲೆ ಎಲ್ಲವೂ ನಮ್ಮ ಕೈಯಲ್ಲಿವೆ. ಕಣ್ಣಿನ ದೃಷ್ಟಿಯೊಂದನ್ನೇ ನಂಬದೆ ಅಂತರಂಗದ ದೃಷ್ಟಿಯನ್ನು ಎಚ್ಚರಿಸಿ ಬದುಕಿದರೆ ಸ್ವಾರ್ಥ ಮನಸುಗಳು, ಆಡಿಕೊಂಡು ನಗುವ ಮನಸುಗಳು, ದ್ವೇಷಿಸುವ ಮನಸುಗಳು ಇತ್ಯಾದಿ ಎಲ್ಲವೂ ನೊಂದ ಮನಗಳ ಸಾಧನೆಯ ನೋಡಿ ಬೆರಗಾಗುತ್ತವೆ. ಏಕೆಂದರೆ, 

ಹುಡುಕಿದರೆ ಸಿಗುವುವು ನೂರಾರು ನೋವುಗಳು 
ಮಾಡಿದರೆ ಆಗುವುವು ಸಾವಿರಾರು ಸಾಧನೆಗಳು 
ಬಿಟ್ಟು ಸಾಧಿಸಿದರೆ ಎಲ್ಲರ ಮೇಲಿನ ನಿರೀಕ್ಷೆ 
ಇಡೀ ಜಗತ್ತೇ ಮಾಡುವುದು ನಿನ್ನ ಸಾಧನೆಗಳ ಸಮೀಕ್ಷೆ 



Tuesday 11 July 2017

ಒಲವೆಂಬ ಹಸಿರು ಸ್ವಚ್ಚಂದವಾಗಿ ಹರಡಿರಲು 
ನೀನೆ ನನ್ನುಸಿರು ಎಂಬ ಕರೆಗಾಗಿ 
ಎಡೆಬಿಡದೇ ಕಾಯುತಿದೆ  ಒಡಲು 
ಬಸವಳಿದ ಬದುಕಿಗೆ ಭರವಸೆಯೇ ಬೆಳಕು 
ಕವಲೊಡೆದ ಕನಸಿಗೆ ಕಲ್ಪನೆಯೇ ಕೆಡಕು 

ಸ್ವಾರ್ಥ

ಯಾರಿಗಾಗಿ ಯಾರೂ ಇಲ್ಲಿಲ್ಲ 
ಸಮಯಸಾಧಕರೆಂಬ ಸ್ವಾರ್ಥಿಗಳೇ 
ತುಂಬಿರುವರು ಜಗದಲ್ಲೆಲ್ಲ 

Thursday 29 June 2017

ಪ್ರೀತಿ

ಮುಂಜಾನೆಯಿಂದ ಮುಸ್ಸಂಜೆವರೆಗೂ 
ಜಗವ ಬೆಳಗುವನು ದಿನಕರ 
ನನ್ನ ಜೀವನದ ಪ್ರತೀಕ್ಷಣವ ನಂದನ 
ಮಾಡುವನು ಪ್ರಿಯಕರ 

ಸ್ವರ

ನನ್ನ ಮನದ ವೀಣೆಯ ನೀ ಮೀಟಿದರೆ 
ಹೊಮ್ಮುವುದು ನಾದಸ್ವರ 
ನಿನ್ನ ಒಲವಿನ ಭಾವಗಳ ನಾ ಪದಗಳಲಿ ಬಂಧಿಸಿದರೆ 
ಚಿಮ್ಮುವುದು ಪ್ರೇಮಸ್ವರ 

ಮಹಲು

ನನಗೆ ಬೇಡ ಯಾವ ತಾಜಮಹಲು 
ಸಾಕೆನಗೆ ನಿನ್ನ ಪ್ರೇಮಭರಿತ ಮನದ ಮಹಲು 

ಭರವಸೆ

ಬರುತ್ತಲೇ ಇರುವುವು ಭರವಸೆಯ ಅಲೆಗಳು 
ಅಲ್ಲಿ ಮುಳುಗು ಎದ್ದರೆ ಹೇಳದೇ ಕೇಳದೆ 
ಅಳಿಸಿ ಹೋಗುವುವು ನೋವಿನ ಕಲೆಗಳು 

Tuesday 27 June 2017

ತೋಚಿದ್ದು ಗೀಚಿದ್ದು

ನೀನ್ಯಾರೋ ನಾನ್ಯಾರೋ ಎಲ್ಲಿದ್ದೆವೋ ಹೇಗಿದ್ದೆವೋ 
ಒಂದೂ ಅರಿಯದ ಮನಗಳೆರಡೂ ಬೆಸೆದುಕೊಂಡಿವೆ 
ಒಂದನ್ನೊಂದು ಬೇರ್ಪಡಿಸಲಾಗದಂತೆ 

ಸಾಕಾಗದ ಸರಸಗಳ ಜೊತೆ ಬೇಕಿರದ ವಿರಸಗಳ ವ್ಯಥೆ 
ಎರಡರ ನಡುವೆ ಸಿಲುಕಿದ ಈ ಬಾಳಲಿ 
ಎಂದೂ ಮುಗಿಯದು ನಮ್ಮಿಬ್ಬರ ಒಲವಿನ ಹಾವಳಿ 

ಇದ್ದರೆ ಪ್ರೇಮದ ಬಾಳಲಿ ಸರಸ ವಿರಸಗಳ ಮಿಶ್ರಣ 
ಎಂದಿಗೂ ಅನಿಸದು ನೀರಸ ಈ ಜೀವನ 

ಕಿತ್ತಾಟಗಳ ಕಿರಿಕಿರಿಯ ಜೊತೆ 
ತುಂಟಾಟ ತರಲೆಗಳ ಮಾತುಕತೆ 
ಎಲ್ಲ ಬೆರೆಸಿ ಆನಂದಿಸುವ ಕ್ಷಣಗಳೆಲ್ಲ 
ರುಚಿಸುವುವು ಜೇನಿನ ಹನಿಯಂತೆ 

ನಾ ತೋಚಿದ್ದು ಗೀಚುವೆ ನೀ ತೋಚಿದ್ದು ಹೇಳುವೆ 
ಎಲ್ಲಿರಲಿ ಹೇಗಿರಲಿ ನಮ್ಮ ಮನಸುಗಳು  
ಪ್ರೇಮವೆಂಬ ಪವಿತ್ರ ಬಂಧನದಲಿ ಸದಾ ಜೊತೆಗಾರರು 
ತಿಂದಷ್ಟು ರುಚಿ ಮಸಾಲೆ ಅನ್ನ 
ಬರೆದಷ್ಟು ಖುಷಿ ನವರಸ ತುಂಬಿದ ಕವನ 

Monday 26 June 2017

ಮುತ್ತಿನ ಚಿಪ್ಪುಗಳು ಬಚ್ಚಿಟ್ಟುಕೊಂಡಿವೆ 
ಸಾಗರದ ಆಳದಲ್ಲಿ 
ನಿನ್ನೊಲವಿನ ಸಿಹಿನೆನಪುಗಳು ಮುತ್ತಿಕ್ಕುತ್ತಿವೆ 
ನನ್ನ ಹೃದಯಾನಂತರಾಳದಲಿ 

Wednesday 21 June 2017

ನೆನಪು

ಆ ಬಾನಂಗಳದಲಿ ಹೊಳೆಯುತಿವೆ ನಕ್ಷತ್ರಗಳು 
ಈ ಮನದಂಗಳದಿ ಕಾಡುತಿವೆ ನಿನ್ನೊಲವಿನ ಸವಿನೆನಪುಗಳು 

ಶುಭೋದಯ

ಅಂಬರದ ನೇಸರ ನಗುತಿಹನು ನಲ್ಬೆಳಗಲಿ 
ಎಡಿಎ ನೋಡುತ ಹೊಮ್ಮುತಿವೆ ನೂರಾರು 
ಭರವಸೆಗಳು ನನ್ನ ಮನದಲಿ 

Tuesday 20 June 2017

ಹೊಂಗಿರಣ

ಭಾವನೆಗಳ ಮೇಲೆ ಉತ್ಸಾಹದ  ಹೊಂಗಿರಣ 
ಸದಾ ಸೋಕುತಿದ್ದರೆ 
ಮೊಗ್ಗಾದ ಅಕ್ಷರಗಳೆಲ್ಲ ಕವನವೆಂಬ ಹೂವಾಗಿ 
ಪರಿಮಳವ ಸೂಸುವುವು 
ನೀಲಿ ಆಕಾಶದಲ್ಲಿ ಚಂದದ ಮೋಡಗಳ ಚಿತ್ತಾರ 
ನನ್ನ ಮನದ ಇಳೆಯಲ್ಲಿ ನಿನ್ನದೇ ಭಾವನೆಗಳ ಅಲಂಕಾರ 

ದೀಪ

ನಿನ್ನ ಒಲವೆಂಬ ದೀಪ ಸ್ವಲ್ಪ ಸೋಕಿದರೂ ಸಾಕು 
ಕತ್ತಲೆ ಆವರಿಸಿರುವ ನನ್ನ ಭಾವನೆಗಳೆಲ್ಲ 
ಕವನಗಳಾಗಿ ಮಿನುಗುವುವು 
ನಿನ್ನ ಪ್ರೀತಿ ಎಂದಿಗೂ ಆರದ ದೀಪ 
ನಾ ಅಲ್ಲಿ ಸದಾ ಮಿನುಗುವ ಒಲವಿನ ಪ್ರತಿರೂಪ 

Thursday 8 June 2017

ಭಾವನೆ

ನಾ ಬರೆದಷ್ಟು ಮೇಲೇರುತಿರುವೆ ನೀ ಬೆಟ್ಟದ ರೀತಿ 
ಹೀಗೆ ಆದರೆ ಕಾಡುತಿಹುದು ಎಲ್ಲಿ ದೂರಾಗುವವೊ 
ನನ್ನ ಭಾವನೆಗಳೆಂಬ ಭೀತಿ 

ಮಾರ್ಗ

ಸಾಧನೆಗೆ ಹುಡುಕದಿರು ಸಂಕ್ಷಿಪ್ತ ಮಾರ್ಗ 
ಕೊರೆಯುತ್ತಾ ಹೋಗು ಶ್ರಮವೆಂಬ ಸುರಂಗ ಮಾರ್ಗ 
ಆಗ ನಿನಗಾಗಿ ಕಾಯುವುದು ಹಾಯಾಗಿ 
ನಡೆಯಲು ಯಶಸ್ಸೆಂಬ ರಾಜಮಾರ್ಗ 
ಒಲವಿನ ಸಿಹಿಮುತ್ತನು ಇಟ್ಟೆ ನೀ ಹಣೆಗೆ 
ಆ ಕ್ಷಣ ಇಂಪಾಗಿ ಹರಿಯುತಿದೆ ನನ್ನ ಬರವಣಿಗೆ 
ಬಿಡದೇ ಕಾಡುವೆ ಏಕೆ ನನ್ನ 
ಕಾದಿರಲು ನಾ ಸೇರಲು ನಿನ್ನ ಒಲವನ್ನ 
ಮನದಿಂದ ಮನಕೆ ಒಲವಿನ ಅಲೆಯ ಸ್ಪರ್ಶ 
ಕ್ಷಣದಿಂದ ಕ್ಷಣಕೆ ತುಂಬಿ ತುಳುಕುತಿದೆ ಹರ್ಷ 

ಬದುಕೊಂದು ಯುದ್ಧ

ಬಾರದ ಭಾವನೆಗಳ ಬರಿಸಿ ಬದುಕುವುದು 
ಬಾಣಗಳಿಲ್ಲದ ಬತ್ತಳಿಕೆಯೊಂದಿಗೆ 
ಯುದ್ಧಭೂಮಿಗೆ ಇಳಿದಂತೆ 

ಭರವಸೆ

ಏರು ಇಳುವಿನ ಬಾಳಲಿ 
ಬರೀ ನೋವನ್ನೇ ಹೇಗೆ ತಾಳಲಿ 
ಶ್ರದ್ಧೆ ಶ್ರಮದಿ ಸಾಗಿದರೆ ನಲಿವಿನ ದಾರಿಯ 
ದೂರ ಮಾಡುವವರು ಯಾರಿಲ್ಲಿ 

ತೇರು

ನೀನೊಂದು ಊರು ನಾನೊಂದು ಊರು 
ಆದರೇನು ಇಲ್ಲವೆ ನಮಗೆ ಪ್ರೀತಿಯ ಸೂರು 
ಅದರಡಿಯಲ್ಲಿ ನಿಂತು ಎಳೆಯೋಣ 
ನಮ್ಮಿಬ್ಬರ ಒಲವಿನ ತೇರು 

ಮಳೆ

ನೀನಿಟ್ಟ ಮುತ್ತಿನ ಹನಿಯೊಂದು ಉದುರಿ ಹೃದಯವೆಂಬ 
ಹಸಿರೆಲೆಯ ತುಂಬಾ ಒಲವಿನ ಮಳೆಯಾಗಿದೆ 

Wednesday 7 June 2017

ಬಿತ್ತನೆ

ನೀ ಬಿಟ್ಟಿದೆ ಪ್ರೀತಿಯ ಬೀಜ 
ನನ್ನ ಹೃದಾಯ್ದ ಇಳೆಯಲ್ಲಿ ಅಂದು 
ಮೊಳಕೆಯೊಡೆದು ಒಲವಿನ ಹೂದೊಟವಾಗಿ 
ಆಗಸದಿ ಚಾಚಿದೆ ಇಂದು 

ಕಾಮನಬಿಲ್ಲು

ನೀ ಬರೆದ ಕಾಮನಬಿಲ್ಲ ನನ್ನೆದೆಯ ಬಾಂದಳದಿ 
ಕಾದಿರುವೆ ನಾ ಬಿಡಿಸಲು ರಂಗೋಲಿಯ 
ನಿನ್ನ ಮನೆಯ ಅಂಗಳದಿ 

ನೋವು

ಮಾತಿನಲಿ ಹೇಳಲಾಗದ ನೋವ ಮೌನ ನುಂಗಿದರೆ 
ಈಡೇರದ ಆಸೆಗಳ ನಿರಾಸೆ ನುಂಗುವುದು 

ನೀನಿಲ್ಲದ ಸಂಜೆ ನನಗದು ಸಜೆ 
ನೀನಿದ್ದ ಕ್ಷಣ ನನ್ನ ಮನವೊಂದು ಹೂಬನ 

ಪ್ರೀತಿ

ನಿನ್ನ ಪ್ರೀತಿಯ ಪರಿಗೆ ಮೂರ್ಛೆ ಹೋದ 
ನನ್ನ ಹೃದಯ ಮತ್ತೆ ಕಣ್ಬಿಟ್ಟು ನೋಡಿದಾಗ 
ನಿನ್ನ ಒಲವಿನ ಕರುಳಲ್ಲಿ ಪುನರ್ಜನ್ಮ ತಾಳಿತ್ತು 

Friday 26 May 2017

ತೋಚದೆ ಗೀಚಿದೆ

ಭಾವನೆಗಳ ಬರ ಬರುವ ಬದಲು 
ಕವಿತೆಗಳ ಕಲ್ಪನೆ ಕರಗುವ ಮೊದಲು 

ಗೀಚುವ ಗೋಳು ಗೊಣಗುವ ಮುನ್ನ 
ರಚಿಸಬೇಕಿದೆ ನವರಸ ತುಂಬಿದ ಕವನವನ್ನ 

ಯಾರು ಕೇಳುವರೋ ಏನು ತೋಚದೇ 
ಕಂಗಾಲಾಗಿರುವ ನನ್ನ ಪರಿತಪಿಸುವ ಪರಿಯನ್ನ 

Tuesday 2 May 2017

ಬರೆಯಲಾಗದ ನೋವು

ಬರೆದು ಬರೆದು ಸಾಕಾದ ಮನಸು ಬೇಯುತಿದೆ ಬೇಸಿಗೆಯಲಿ 
ಒಂದೋ ಎರಡೋ ಭಾವನೆಗಳು ಮೂಡಿದರೆ ಸಾಕು 
ಸ್ವಚ್ಛಂದವಾಗಿ ಹರಿಯುವುವು ಪದಗಳು ತಾಳೆಗರಿಯಲಿ 

ನಾ ಬರೆಯಲಾರೆ ಏನನ್ನೂ ನನಗಾಗಿ 
ಬಯಸದೇ ಬಂದ ಭಾವನೆಗಳು ಬರೆಸುತಿವೆ ಕವನಗಳ 
ಸೇರಿಸಿ ಎಲ್ಲ ಸಾಲುಗಳನು ಒಂದಾಗಿ 

ಮೂಡುವುವು ಆಸೆಗಳು ನೂರಾರು 
ಹುಡುಕುವೆನು ಬರೆಯಲು ಪದಗಳ ಸಾವಿರಾರು 
ಆಸೆಯೆಂಬ ಆನೆಯ ಏರಲು ಬೇಕಿದೆ ಪದಗಳ ಏಣಿ 
ಸಾಗುವುದು ಆಗ ಸುಂದರ ಕಾವ್ಯದ ದೋಣಿ 

Thursday 27 April 2017

ನೀ ಆಗಸದಲ್ಲಿ ಅಡಗಿದ ಕವಿತೆ
ನಾ ಭೂಮಿಯಲ್ಲಿ ಗೀಚುತಿರುವ ಕವಿ
ನೀನಿಲ್ಲದ ಈ ಕ್ಷಣ ಬಿಸಿಲಲಿ 
ಬೆಂದ ಇಳೆಯಂತಾಗಿದೆ ನನ್ನ ಮನ
ನೀನೆಂದೂ ಮುಗಿಯದ ಕವನ
ನಾನೆಂದೂ ತೀರದ ಭಾವನೆ
ಎಲ್ಲ ನೋವನ್ನೂ ಮರೆಸುವುದು ಸಂಗೀತ
ಅದ ಕೇಳುತಿದ್ದರೆ ಮೈಮನವೆಲ್ಲ ತಕಧಿಮಿತ

Monday 24 April 2017

ನೀನಿಲ್ಲದೆ ಬರೆದ ನನ್ನ ಕವಿತೆ ನಶ್ವರ 
ಇನ್ನೇಕೆ ಹುಡುಕಲಿ ಬೇರೆ ಅಕ್ಷರ 
ನೀ ಆಗಸದಲ್ಲಿ ಅಡಗಿದ ಕವಿತೆ 
ನಾ ಭೂಮಿಯಲ್ಲಿ ಗೀಚುತಿರುವ ಕವಿ 

Monday 17 April 2017

ಪ್ರೀತಿಯ ಲಾಲಿ

ನಿನ್ನ ಕರಗಳು ಬಿಡಿಸಿವೆ ಪ್ರೀತಿಯ ರಂಗೋಲಿ 
ನನ್ನ ಮನದಂಗಳದಲಿ 
ಅದ ನೋಡುತ ನೋಡುತ ಜಾರಿದೆ ನಿದ್ದೆಗೆ 
ಕೇಳುತಾ ನಿನ್ನಯ ಲಾಲಿ 

Thursday 6 April 2017

ಕವಿತೆಯೇ ನನ್ನುಸಿರು

ಬರೆದ ಕವಿತೆ ಮರೆತು ಮರೆಯಾದರೆ 
ಬರೆಸಿದ ಭಾವನೆಯ ಬಸಿರು ಬರಿದಾದಂತೆ 
ಬಸಿರೇ ಇಲ್ಲವಾದರೆ ಕವನವೆಂಬ ಕುಡಿಯು ಕಮರುವುದು 
ಕುಡಿಯೇ ಕಮರಿದ ಮೇಲೆ ನಿಲ್ಲುವುದೇ ಉಸಿರು 

Tuesday 4 April 2017

ಕವಿತೆ ಹಣತೆ

ಬರೆದಷ್ಟು ಬೆಳೆಯುವುದು ಕವಿತೆ 
ಎಣ್ಣೆ ಇದ್ದಷ್ಟು ಉರಿಯುವುದು ಹಣತೆ 
ಹಣತೆಯಿದ್ದರೆ ಬೆಳಗುವುದು ಬಾಳು 
ಕವಿತೆಯಿದ್ದರೆ ಹೊಮ್ಮುವುವು ಮನದ ಗೋಳು 
ಗೋಳುಗಳ ಮದ್ಯೆ ಸಿಕ್ಕಿದ ಬಾಳು ಕೇಳುತಿದೆ  
ಹಣತೆ ಕವಿತೆಗಳ ಸಂತೆಯಲ್ಲಿ ಸಿಕ್ಕಿರುವೆ 
ಒಂದ ಬಿಟ್ಟು ಮತ್ತೊಂದು ಅಗಲಿದರೆ 
ಗೋಳು ತುಂಬಿದ ಬಾಳಿಗೆ ಮತ್ಯಾರು ಆಸರೆ 

Sunday 2 April 2017

ಖಾಲಿ ಮನ

ಖಾಲಿ ಹಾಳೆಯ ಮೇಲೆ ಗೀಚಿದ ಪದಗಳೆಲ್ಲ ಕವಿತೆಯಾಗದು 
ಖಾಲಿ ಮನದಲಿ ಆಡಿದ ಮಾತುಗಳಿಗೆ ಅರ್ಥವಿರದು 
ಮಾತು ತೂಕವಿರಲು ಪದವು ಕವನವಾಗಲು 
ಬೇಕೊಂದು ಭಾವನೆ  ಭರವಸೆ ತುಂಬಿದ ಮನ 
ಆಗ ಸರಾಗವಾಗಿ ಹರಿಯುವುದು ಅರ್ಥಪೂರ್ಣ 
ಸಾಲುಗಳ ತುಂಬು ಮನಸಿನ ಮಾತಿನ ಕವನ 

Monday 27 March 2017

ಬರಹದ ಹಣ

ಬರೆದಂತೆ ಬದುಕುವುದು 
ನುಡಿದಂತೆ ನಡೆಯುವುದು 
ಎಲ್ಲರೂ ಹೇಳುವಂತೆ ಕಷ್ಟ 
ಏಕೆಂದರೆ ಯಾರೂ ಕೇಳರು ನಮ್ಮ ಇಷ್ಟ 

ತೋಚಿದ್ದು ಗೀಚಿದ ಸಾಲುಗಳು 
ಭರವಸೆಯ ಬೆಳಕಾಗುವುದು ಕೆಲವರಿಗೆ 
ನಿರೀಕ್ಷಿಸದೇ ಕಣ್ಣಿಗೆ ಬಿದ್ದ ಸಾಲುಗಳು 
ಬದಲಾವಣೆಗೆ ಹಾದಿಯಾಗುವುದು ಹಲವರಿಗೆ 

ಬರವಣಿಗೆಯಿಂದ ಸಿಗದಿರಬಹುದು ಭಾರಿ ಹಣ
ಆದರೆ ತಿದ್ದಿದೆ ದಾರಿ ತಪ್ಪಿದ ಎಷ್ಟೋ ಮನಗಳ ಗುಣ 
ಭೂಮಿ ಮೇಲಿನ ಯಾರ ಕಲೆಯೂ ಕೀಳಲ್ಲ 
ದುಡ್ಡು ಬರುವ ಕಲೆಯೊಂದೇ ಶ್ರೇಷ್ಠವಲ್ಲ 

ಎಲ್ಲ ಕಲೆಯಲ್ಲೂ ಅಡಗಿಹಳು ಶಾರದೆ 
ಅದ ಗುರ್ತಿಸದೆ ಸೋತಿಹರು ಆಕೆಯ ಕಾಣದೆ 
ಶ್ರದ್ಧೆ ಭಕ್ತಿ ಶ್ರಮದಿ ಪೋಷಿಸು ನಿನ್ನ ಕಲೆಯ 
ಕೈ ಹಿಡಿದು ಕರುಣಿಸುವಳು ನಿನಗೊಂದು ನೆಲೆಯ 

Wednesday 22 March 2017

ಕಲಿತ ಪಾಠ

ಜ್ಞಾನವಿಲ್ಲದ ಅಜ್ಞಾನಿಗಳು ಮೊಂಡುವಾದ 
ಮಾಡುವಾಗ ಮೌನವಾಗಿರುವುದೇ ಲೇಸು 

Monday 20 March 2017

ಕವಿತೆ ಎಂದರೆ

ನನಸಾಗದ ಕನಸುಗಳನು ಪದಗಳ ಸರದಿಂದ ಬಂಧಿಸಿ 
ಬಾರದ ಭಾವನೆಗಳನು  ಬಣ್ಣಗಳಿಂದ ಅಲಂಕರಿಸಿ 
ಈಡೇರದ ಆಸೆಗಳನು ಕಲ್ಪನೆಯಲ್ಲೇ ಸಾಕಾರಗೊಳಿಸಿ 
ಆದ ನಿರಾಸೆಗೆ ಸಾಂತ್ವನದ ಸವಿಮಾತನು ಹೊಂದಿಸಿ 
ಮನದ ಕನ್ನಡಿಯಂತೆ ಬಿಂಬಿಸುವ ಎಡಬಿಡದೇ 
ತೋಚಿದ್ದನ್ನು ಗೀಚುವ ಏಕೈಕ ಸಾಧನವೇ ಕವಿತೆ 

Friday 17 March 2017

ನನ್ನ ಮೆಚ್ಚಿನ ಲೇಖಕಿಗೊಂದು ನಮನ


ನೆನ್ನೆ ಸಂಜೆ ನಮ್ಮ ಕಛೇರಿ ವತಿಯಿಂದ ಬೆಂಗಳೂರಿನ ಕುವೆಂಪು ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ "ಅಂತರರಾಷ್ಟ್ರೀಯ ಮಹಿಳಾ ದಿನ" ಆಚರಣೆಯ ಪ್ರಯುಕ್ತ ನನ್ನ ಮೆಚ್ಚಿನ ಲೇಖಕಿ "ಶ್ರೀಮತಿ ಸುಧಾಮೂರ್ತಿ" ಅವರನ್ನು ಆಹ್ವಾನಿಸಿದ್ದರು. ಅವರ ಅನೇಕ ಲೇಖನಗಳು, ಕಾದಂಬರಿಗಳನ್ನು ಓದಿದ ನಾನು  ಅವರ ಕಟ್ಟಾ  ಅಭಿಮಾನಿಯಾಗಿದ್ದೆ, ಜೊತೆಗೆ ಅವರನ್ನು ಒಮ್ಮೆಯಾದರೂ ನೋಡಿ ಮಾತಾಡಿಸಬೇಕೆಂಬ ಆಸೆಯೂ ಹುಟ್ಟಿತ್ತು. ಆದರೆ  ಅವರನ್ನು ನಿರೀಕ್ಷಿಸದೇ ಅನಿರೀಕ್ಷಿತವಾಗಿ ಭೇಟಿಯಾಗುವ ಕ್ಷಣ ಬರುತ್ತದೆ ಎಂದು ನಾ ಎಣಿಸಿರಲಿಲ್ಲ ನಿಜಕ್ಕೂ ಅವರನ್ನು ಭೇಟಿಯಾದ ನನ್ನ ಜೀವನದ ಕ್ಷಣಗಳು ಧನ್ಯವೆನಿಸಿದವು, ನನ್ನ ಹೃದಯ ಆನಂದ ಸಾಗರದಲಿ ಮುಳುಗಿತು ಎಂದರೆ ತಪ್ಪಾಗಲಾರದು. 

"ಇಂಟರ್ನ್ಯಾಷನಲ್ ಫಿಗರ್" ಎಂದೇ ಗುರ್ತಿಸಲ್ಪಡುವ ಇನ್ಫೋಸಿಸ್ ಫೌಂಡರ್ ಎಂಬ ಖ್ಯಾತಿಯ ಈ ಮಹಾತಾಯಿ ನಿಜಕ್ಕೂ ಎಷ್ಟು ಸುಂದರ ಸರಳ ಮತ್ತು ವಿನಯವತಿಯೆಂದು ನೆನ್ನೆ ನನ್ನ ಕಣ್ಣಾರೆ ನೋಡಿ ಕಿವಿಯಾರೆ ಅವರ ಧ್ವನಿಯನ್ನು ತುಂಬಿಸಿಕೊಂಡ ಮೇಲೆ ಅರ್ಥವಾಯ್ತು. ಕರಿಮಣಿ ಸರ ಮತ್ತು ದೇವರು ಕೊಟ್ಟ ಎಂದು ಮಾಸದ ನಗುವೇ ಅವರ ಒಡವೆ ಎಂದರೆ ತಪ್ಪಿಲ್ಲ. ಆಕೆಯ ನಗು, ಉಟ್ಟಿದ್ದ ಸರಳ ಕಾಟನ್ ಸೀರೆ , ಧರಿಸಿದ ಮಾಂಗಲ್ಯ ಸರ ಇಷ್ಟೇ ಅವರ ಅಲಂಕಾರ, ಇವೆಲ್ಲದುದರೆ ಜೊತೆ ಅತ್ಯಂತ ಸುಂದರವಾಗಿ ಕಂಡದ್ದು ಅವರ ನಿಷ್ಕಲ್ಮಶ ನಗು. ಇಷ್ಟು ದಿನ ಅವರ ಬರವಣಿಗೆಗೆ ಅಭಿಮಾನಿಯಾಗಿದ್ದ ನಾನು ನೆನ್ನೆಯಿಂದ ಅವರ ನಗುವಿಗೆ ಅಭಿಮಾನಿಯಾಗಿಬಿಟ್ಟೆ. 

ಮಾತಿನಲ್ಲೇ ಮುಳುಗಿದ್ದ ಎಲ್ಲ ಮಹಿಳಾಮಣಿಗಳು  ಅವರ ಭಾಷಣ ಆರಂಭವಾಗುತ್ತಿದ್ದಂತೆ ಎಲ್ಲೆಡೆ ನಿಶಬ್ಧ ಆವರಿಸಿತು. 

"ನಾನು ಅತ್ಯಂತ ಸಾಮಾನ್ಯ ಕುಟುಂಬದಿಂದ ಬಂದ ಸಾಮಾನ್ಯ ಹೆಣ್ಣುಮಗಳಷ್ಟೇ ಹೊರತು ಯಾರಿಗೂ ರೋಲ್ ಮಾಡೆಲ್ ಅಲ್ಲ, ಪ್ರತಿಯೊಂದು ಹೆಣ್ಣು ಅವರವರ ಮಕ್ಕಳಿಗೆ ಕುಟುಂಬಕ್ಕೆ ರೋಲ್ ಮಾಡೆಲ್ ಆಗಿರುತ್ತಾಳೆ ಏಕೆಂದರೆ ಮಾನಸಿಕವಾಗಿ ಗಂಡಿಗಿಂತ ಹೆಣ್ಣೇ ಶಕ್ತಿಯುತಳಾಗಿರುತ್ತಾಳೆ. ಆದರೆ ಅವರಲ್ಲಿನ ಶಕ್ತಿಯನ್ನು ಅವರೇ ಅರ್ಥ ಮಾಡಿಕೊಂಡು ಮುನ್ನುಗ್ಗಬೇಕು. ಹೆಣ್ಣಿಗೆ ಬಾಲ್ಯದಲ್ಲಿ ಅಪ್ಪ, ಯವ್ವನದಲ್ಲಿ ಗಂಡ ಮತ್ತು ವೃದ್ಧಾಪ್ಯದಲ್ಲಿ ಮಗನೆ ನನ್ನ ಭವಿಷ್ಯವೆಂದು ನಂಬಿ ತನ್ನ ಸುತ್ತ ತಾನೇ ಬೇಲಿ ಹಾಕಿಕೊಂಡು ಬದುಕುತ್ತಾಳೆ. ತನ್ನ ಸಾಮರ್ಥ್ಯವನ್ನು ಮರೆತು ಬದುಕುತ್ತಾಳೆ. ಅದನ್ನು ದಾಟಿ ಆಕೆ ಬದುಕಬೇಕು ತನ್ನ ಕಲೆಯ ಛಾಪನ್ನು ಹೊರತರುವಲ್ಲಿ ಶ್ರಮಿಸಬೇಕು ಎಂದರು.  ಆದರೆ ಈಗ ಕಾಲ ಬದಲಾಗಿದೆ ಜಗತ್ತಿನ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾಳೆ ಅದನ್ನು ನೋಡುತಿದ್ದರೆ ಎಲ್ಲರಿಗೂ ಸಂತೋಷವಾಗುತ್ತದೆ. ಹಾಗೆ ಅವರನ್ನು ಹೆಣ್ಣಿನ ಸಾಮರ್ಥ್ಯವನ್ನು ಅರ್ಥಮಾಡಿಸುವುದಲ್ಲದೆ ಸಭೆಯಲ್ಲಿ ನೆರೆದ ಎಲ್ಲ ಹೆಣ್ಣು ಮಕ್ಕಳಿಗೆ ಒಂದು ಕಿವಿ ಮಾತು ಹೇಳಿದರು, ದಯವಿಟ್ಟು ಹೆಂಗಸರು ಅವರಿವರ ಬಗ್ಗೆ ಮಾತಾಡುವುದನ್ನು ಕಮ್ಮಿ ಮಾಡಿ ಸಮಯವನ್ನು ಒಳ್ಳೆಯ ಕೆಲಸಗಳಿಗಾಗಿ ಉಪಯೋಗಿಸಿ, ಮಾತು ಕಮ್ಮಿಯಾದರೆ ಸಾಧನೆಗಳು ಹೆಚ್ಚಾಗುತ್ತವೆ, ಎಷ್ಟು ಸಾಧ್ಯವೋ ಅಷ್ಟು ಓದಿ, ಏಕಂದರೆ ನಿಮ್ಮ ಮಕ್ಕಳಿಗೆ ನೀವೇ ರೋಲ್ ಮಾಡೆಲ್ ಆಗಿರುತ್ತೀರಿ, ನೀವು ಹೇಗೆ ಕೆಲಸ ಮಾತು ನಡೆ ನುಡಿಗಳನ್ನೂ ನಿಭಾಯಿಸುತ್ತೀರೋ ಅದನ್ನೇ ಅವರು ಕಲಿಯುತ್ತಾರೆ ಎಂದರು". 

ಹಾಗೆ ತನ್ನ ಅನುಭವಗಳನ್ನು ತುಂಬಾ ಚಂದವಾಗಿ ಹಂಚಿಕೊಂಡರು. ಅವರು ಹೇಳಿದ ಎಲ್ಲವನ್ನು ಬರೆಯುವಷ್ಟು  ನನಗೆ  ಭಾಷಾಜ್ನ್ಯಾನವಿಲ್ಲ ಹಾಗಾಗಿ ಕೆಲವೊಂದನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಹೀಗೆ ಅವರು ಮಾತಾಡಿ ಆದಮೇಲೆ ಕಾರ್ಯಕ್ರಮದ ನಿರೂಪಕಿಯೊಬ್ಬರು "ಡಾಲರ್ ಸೊಸೆ" ಮತ್ತು "ಮಹಾಶ್ವೇತೆ" ಕಾದಂಬರಿಗಳ ಪರಿಣಾಮವನ್ನು ಹೇಳಿದಾಗ ನಿಜಕ್ಕೊ ಬಹಳ ಸಂತೋಷವಾಯ್ತು. ಅವರ "ಮನದ ಮಾತು" ಮತ್ತು "ಸಾಫ್ಟಮನ"ದಲ್ಲಿ ಬಂದು ಹೋದ ಅನುಭವಗಳನ್ನು ಸ್ವತಃ ಸುಧಾಮ್ಮನ ಬಾಯಲ್ಲಿ ಕೇಳಿ ಮತ್ತಷ್ಟು ಖುಷಿ  ಆಯ್ತು. 

ಒಟ್ಟಿನಲ್ಲಿ ಸುಧಾಮೂರ್ತಿ ಅವರು ಮತ್ತಷ್ಟು ಬರೆಯಲಿ, ಅವರ ಕೀರ್ತಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತಾ, ನೆನ್ನೆಯ ದಿನ ನನ್ನ ಜೀವನದಲ್ಲಿ ಮರೆಯಲಾಗದ ದಿನ ಎಂದು ಸ್ಮರಿಸುತ್ತ, ಅವರಿಗೆ ನನ್ನ ನಮನಗಳನ್ನು ಅರ್ಪಿಸುತ್ತಿದ್ದೇನೆ. 

Wednesday 15 March 2017

ಬದುಕು

ಬದುಕಿನ ಸುತ್ತ ಹೆಣೆದ ಕವಿತೆಗಳೆಲ್ಲ ಕಳೆಗುಂದುತ್ತಿವೆ 
ಭಾವನೆಗಳ ಸುತ್ತ ಬೆಸೆದ ಬಣ್ಣಗಳೆಲ್ಲ ಮಾಸುತ್ತಿವೆ 
ಮಾಸಲಿ ಕಳೆಗುಂದಲಿ ಏನೇ ಆಗಲಿ ಹೇಗೆ ಇರಲಿ 
ಉಸಿರಿರುವ ತನಕ ಬದುಕೆಂಬ ಹೂವು ಬಾಡದು 

Sunday 12 March 2017

ಹುಚ್ಚು ಬರವಣಿಗೆ

ನಾ ಬರೆದ ಕಥೆಗಳಲ್ಲಿ ಇಲ್ಲ ಯಾವ ಪಾತ್ರ 
ಅಲ್ಲಿರುವುದೆಲ್ಲ ಬರೀ ವಾಸ್ತವಕ್ಕೆ ಹತ್ರ 
ಮನಸೋ ಇಚ್ಛೆ ಗೀಚುವ ಪದಗಳಿಂದೆಲ್ಲ 
ಹೆಣೆಯಲಾಗದು ಸುಂದರ ಹಾಡ  
ಆ ಹಾಡಿಗೆ ಬೇಕು ಪ್ರಾಸದ ಪುಂಜ 
ಪದಪುಂಜವ ಪೋಣಿಸಲು ಬೇಕೆನಗೆ ಭಾವನೆಗಳ 
ಆಸರೆ ಏಕೆಂದರೆ ನಾ ಅವುಗಳ ಕೈಸೆರೆ 
ಕಥೆ ಬರೆದರೂ ಕವನ ಬರೆದರೂ 
ಒಳಗಿರಲೇಬೇಕು ಒಬ್ಬ ಬರಹಗಾರ 
ಆತನ ಉಳಿಸಲು ಬೆಳೆಸಲು ಬೇಕೊಬ್ಬ 
ತಿದ್ದಿ ತೀಡುವ ಸಲಹೆಗಾರ 

Thursday 9 March 2017

ಮಿಥ್ಯ ಮುಖ

ಶುದ್ಧ ಹೃದಯವಿದ್ದವರ ಮುಖ ಹೊಳೆಯುವಷ್ಟು 
ಸುಂದರವಾಗಿರುವವರ ಮುಖ ಹೊಳೆಯದು 
ಕೋಪವೋ ಪ್ರೇಮವೋ ನಗುವೋ ನೋವೋ 
ಏನೇ ಇದ್ದರೂ ಇದ್ದಂತೆ ಹೊರ ಹಾಕುವುದು ಹೃದಯ 
ಹೇಗಿದ್ದರೂ ಚಂದ ಕಾಣಬೇಕೆಂಬ ಭ್ರಮೆಯಲ್ಲಿ  
ಕಳ್ಳ ನಗುವ ಹೊರ ಹಾಕುತ್ತಲಿರುವುದು ಮೊಗವು 

ಗೆಳೆತನ

ನಿನ್ನ ನಗುವಿನ ಹಿಂದಿನ ನೋವಿನ ನೆರಳಲಿ ಸಂಚರಿಸಿ 
ನಿನ್ನ ಕೋಪದ ಹಿಂದಿನ ಪ್ರೀತಿಯ ಆಸ್ವಾದಿಸಿ 
ನಿನ್ನ ಮೌನದ ಹಿಂದಿನ ಮಾತನು ಆಲಿಸಿ 
ಅದರಲ್ಲಿ ಬೆರೆತು ನೋವನ್ನ ಮರೆಸಿ 
ಸಹಕರಿಸುವವರೇ ನಿಜವಾದ ಸ್ನೇಹಿತರು 

Tuesday 7 March 2017

ಓ ಭಾವನೆಯೇ

ಬದುಕಿನುದ್ದಕ್ಕೂ ಬರೆಯೋ ಹಠ ನನಗೆ 
ಕಟ್ಟಿದ ಕವನಗಳ ಸವಿಯುವ ಚಟ ನಿನಗೆ 
ಏನು ಮಾಡಿದರೂ ಹೋಗದು ಗೀಚುವ ಹುಚ್ಚು 
ಅದಕೆ ನನ್ನ ಹೃದಯದ ಮೇಲೆ ಬಿದ್ದಿದೆ ನಿನ್ನದೇ ಅಚ್ಚು 
ನೀನಿದ್ದರೆ ತಾನೇ ನನ್ನ ಪದಗಳಿಗೆ ಭೂಷಣ 
ನೀನೆ ಕೈಬಿಟ್ಟರೆ ಸತ್ತ ಶವದಂತೆ ನನ್ನ ಕವನ 

Sunday 5 March 2017

ಚಕೋರಿ


ಚಂದ್ರಶೇಖರ ಕಂಬಾರರ "ಚಕೋರಿ" ಒಂದು ವಿಶಿಷ್ಟ ಕೃತಿ ಏಕೆಂದರೆ ಇಲ್ಲಿ ಮಾಮೂಲಿನಂತೆ ಕಥೆಯಷ್ಟೇ ಇಲ್ಲ..  ಎಲ್ಲ  ಪಾತ್ರಗಳ ಚಿತ್ರಣ ಕಾವ್ಯದಿಂದಲೇ ಪರಿಚಿತವಾಗುತ್ತವೆ. ಅದಕ್ಕೆ ಏನೋ ಈ ಪುಸ್ತಕದ ಮೇಲೆ ಕಾದಂಬರಿ ಬದಲು ಮಹಾಕಾವ್ಯವೆಂದು ಮುದ್ರಿಸಿದ್ದಾರೆ. ಈ ಕೃತಿ ಓದಿದಮೇಲೆ ಒಂದು ಹೊಸ ಅನುಭವ ನೀಡುವುದಂತೂ ದಿಟ. ಈ ಹಿಂದೆ "ಶಿಖರಸೂರ್ಯ" (ಚಕೋರಿಯ ಮುಂದಿನ ಭಾಗವನ್ನೇ ನಾ ಮೊದಲು ಓದಿದ್ದೆ http://shwetha-hoolimath.blogspot.in/2017/01/blog-post_1.html ). ಆದರೆ ಎಲ್ಲಿಯೂ ಚಕೋರಿಯನ್ನು ಓದಿ ಇದನ್ನು ಓದಬೇಕೆಂದು ನನಗೆ ಅನಿಸಲಿಲ್ಲ, ಹೊಸ ಕೃತಿಯೆಂದೇ ಓದಿದ್ದೆ. )

ಇದು ಕಾವ್ಯವಾಗಿರುವುದರಿಂದ ಕಥೆಯ ಬಗ್ಗೆ ಹೇಳುವುದು ನನಗೆ ಕಷ್ಟವೆನಿಸುತ್ತಿದೆ. ಕಥಾನಾಯಕ ಚಂದಮುತ್ತ ಒಬ್ಬ ನಾದಪ್ರಿಯ. ಅವನನ್ನು ಕಾಡಿದ ಯಕ್ಷಿಯ ಮೋಹಕ್ಕೆ ತನ್ನವರನ್ನೇ ಬಿಡುವ ಪ್ರಸಂಗ, ಅವನು ಪಟ್ಟ ಪಾಡು, ಮತ್ತು ಇವರಿಬ್ಬರ ಪ್ರೇಮಕ್ಕೆ ವೈರಿಯಾಗುವ ಎರಡು ಪಾತ್ರಗಳ ಚಿತ್ರಣ ನಿಜಕ್ಕೂ ರೋಚಕವಾಗಿವೆ. ಆರಂಭದಲ್ಲಿ ಚಂದಮುತ್ತನ ಮೇಲೆ ಮೂಡಿದ ಭಾವನೆಗಳು ಅಂತ್ಯದಲ್ಲಿ ಬದಲಾಗುತ್ತವೆ. ಅದಕ್ಕೆ ಏನೋ ಮುನ್ನುಡಿಯಲ್ಲಿ "ಚಂದಮುತ್ತನ ತನ್ಮಯತೆ ಇಂದಿನ ಜಾಣ ಬುದ್ಧಿಗೆ ಭಕ್ತಿಯಾಗಿ ಕಾಣಿಸಬಹುದು. ಆದರೆ ಚಂದಮುತ್ತನ ಭಕ್ತಿ ಟೊಳ್ಳುಭಾಕ್ತಿಯಲ್ಲ ಎಂಬುದನ್ನು ಮಾತ್ರ ಸೂಚಿಸಭಯಸುತ್ತೇನೆ." ಎಂದು ಹೇಳಿದ್ದಾರೆ. ಇದರ ಅರ್ಥ ಕೃತಿ ಓದಿದಮೇಲೆ ತಿಳಿಯುತ್ತದೆ. 

ಚಕೋರಿಯ ಬಗ್ಗೆ ಬಹಳ ವಿವರಗಳನ್ನು  ಹೇಳುವುದು ಕಷ್ಟ, ಏಕೆಂದರೆ ಇಲ್ಲಿನ ನಿರೂಪಣಾ ಶೈಲಿಯ ವಿಭಿನ್ನತೆ. ಇದರ ಮುಂದುವರೆದ ಭಾಗ "ಶಿಖರಸೂರ್ಯ" ಕೂಡ ಕಥಾನಾಯಕ ಚಂದಮುತ್ತ ಜಯಸೂರ್ಯನಾಗಿ ನಂತರ ಶಿಖರ ಸೂರ್ಯನಾಗಿ ಮೆರೆದ ರೋಚಕ ಕಥೆ ಇದು. ಚಕೋರಿ ಮತ್ತು ಶಿಖರಸೂರ್ಯ ಎರಡೂ ಮಹಾಕಾವ್ಯಗಳಾಗಿದ್ದು ಮಾಮೂಲಿನಂತೆ ಬೇಗ ಗ್ರಹಿಸಿ ಮುಗಿಸುವಂತಹ ಕೃತಿಗಳಲ್ಲವೆಂಬುದು ನನ್ನ ಅನುಭವ. 

Wednesday 1 March 2017

ಒಲವಿನ ಓಲೆ

ನಾ ಬರೆದ ಪ್ರೇಮ ಪತ್ರಕೆ ಉತ್ತರಿಸದೆ ಸತಾಯಿಸುತಿರುವೇಕೆ 
ಅಲ್ಲಿರುವುದು ಬರೀ ಪದಗಳಲ್ಲ ಒಲವು ತುಂಬಿದ ಭಾವಗಳು 
ಆ ಭಾವಗಳಿಗೆ ಬಣ್ಣವಿಲ್ಲ ಕಲ್ಪನೆಯಿಲ್ಲ ಇರುವುದು ಕೇವಲ 
ನೀನೆ ನನ್ನ ಉಸಿರೆಂದು ನಂಬಿರುವ ಈ ಹೃದಯ 
ಅದನ್ನೇ ಅರಿಯದೇ ನೀ ದೂರಾದರೆ ಹೇಗೆ ಇನಿಯ 
ಎಲ್ಲಿದ್ದರೂ ಹೇಗಿದ್ದರೂ ಹೃದಯದ ಕಣ್ತೆರೆದು ಓದು ನನ್ನ ಓಲೆಯ 
ಬಂದು ಅಪ್ಪಿಬಿಡುವೆ ಎನ್ನ ಹರಸುತ ಪ್ರೇಮದ ಹೊಳೆಯ 

ಕಾಮನಬಿಲ್ಲು

ಎಲ್ಲರ ಕಣ್ಣಲ್ಲಿ ನಾವು ನಕ್ಷತ್ರವಾಗಿ ಮಿಂಚಲಾಗದಿದ್ದರೂ 
ಮೋಡ ಕವಿದ ಒಬ್ಬರ ಬಾಳಲ್ಲಿ ಕಾಮನಬಿಲ್ಲಾಗಿ ಮೂಡಬಹುದು 

Monday 27 February 2017

ಪ್ರೇಮ ವಿರಹ

ನನ್ನ ಬರವಣಿಗೆಯಷ್ಟು ಅಂದ ನಾನಿಲ್ಲ 
ನಿನ್ನ ಭಾವನೆಗಳಷ್ಟು ಚಂದ ನೀನಿಲ್ಲ 
ಆದರೂ ಆ  ಭಾವಗಳಿಗೆ ಬಣ್ಣ ತುಂಬಿಸಿ  
ಪದಗಳ ಸಾಗರದಲಿ ಬರವಣಿಗೆಯ ಮುಳುಗಿಸಿ 
ನಮ್ಮಿಬ್ಬರ ಅದ್ದಿ ತೆಗೆದರೆ ಮೂಡುವುದು ಪ್ರೇಮಗೀತೆ 
ಅದ ಹಾಡುತ ನಾವಿದ್ದರೆ ಕಾಡದು ವಿರಹದ ಚಿಂತೆ 

ಕಪ್ಪು ಮುತ್ತಿನ ರಹಸ್ಯ


ವಾಸುದೇವರಾವ್ ಅವರ ಷರ್ಲಾಕ್ ಹೋಮ್ಸ್ ನ ಸಾಹಸ ಕಥೆಗಳು "ಕಪ್ಪು ಮುತ್ತಿನ ರಹಸ್ಯ" (ಇಂಗ್ಲಿಷ್ ಮೂಲ : ಸರ್ ಆರ್ಥರ್ ಕಾನನ್ ಡಾಯ್ಲ್). ಇಲ್ಲಿ ೭ ಪತ್ತೇದಾರಿ ಕಥೆಗಳಿದ್ದು, ಎಲ್ಲವೂ ಹೋಮ್ಸ್ ನ ಬುದ್ಧಿವಂತಿಗೆ, ಅಪರಾಧಿಗಳನ್ನು ಪತ್ತೆ ಹಚ್ಚುವ ಕೌಶಲ್ಯ, ಕುಶಾಗ್ರಮತಿ ಇತ್ಯಾದಿ ಅಂಶಗಳನ್ನು ತೋರಿಸುತ್ತವೆ. 

ಈ ಹಿಂದೆ ಇದೇ ಲೇಖಕರ "ಶವದ ಮನೆಯಾದ ಸ್ವರ್ಗ" ಓದಿದ ಕಾರಣ (http://shwetha-hoolimath.blogspot.in/2017/01/blog-post_6.html)  ಷರ್ಲಾಕ್ ಹೋಮ್ಸ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದೆ ಜೊತೆಗೆ ಅರ್ಥರ್ ಬಗ್ಗೆಯೂ ಓದಿದ್ದೆ ನಿಜಕ್ಕೂ ಖುಷಿ ಆಯ್ತು ಏಕೆಂದರೆ ನನಗೆ ಆಂಗ್ಲ ಪುಸ್ತಕಗಳನ್ನು ಓದಿ ಅರ್ಥ ಮಾಡಿಕೊಳ್ಳುವ ಹುಮ್ಮಸ್ಸು, ಆಸಕ್ತಿ ಇಲ್ಲದ ಕಾರಣ, ಕನ್ನಡದಲ್ಲಿ ವಾಸುದೇವರಾವ್ ಅವರ ಅನುವಾದಿತ ಈ ಕೃತಿಗಳನ್ನೇ ಹೊಸದೆಂದು ಭಾವಿಸಿ ಓದಿದೆ, ಸಂತೋಷವು ಆಯ್ತು. 

ಇನ್ನು ಈ ಕೃತಿಗೆ ಬರುವುದಾದರೆ ಇರುವ ೭ ಕಥೆಗಳು ಒಂದಕ್ಕಿಂತ ಒಂದು ರೋಚಕ ಮತ್ತು ವಿಭಿನ್ನ. ಪ್ರತಿಯೊಂದು ಕಥೆಯ ಆರಂಭದಲ್ಲಿ ನಾವಂದುಕೊಂಡ ಊಹೆಗಳೇ ಸುಳ್ಳಾಗಿರುತ್ತವೆ ಜೊತೆಗೆ ಅನಿರೀಕ್ಷಿತ ತಿರುವುಗಳೊಂದಿಗೆ ಅಂತ್ಯವಾಗುತ್ತವೆ. ಹೀಗಾಗಿ ಯಾವುದೇ ಕಥೆಯ ವಿಷಯದ ಬಗ್ಗೆಯಾಗಲೀ, ಪಾತ್ರಗಳ ಬಗ್ಗೆಯಾಗಲಿ ಹೇಳುವುದು ಸ್ವಲ್ಪ ಕಷ್ಟ ಜೊತೆಗೆ ಓದುವ ಪ್ರತಿಯೊಬ್ಬರೂ ಅದನ್ನು ಓದುವಾಗ ಅನುಭವವಿಸುವ ಕುತೂಹಲ ಹೇಗಿರುತ್ತೆ  ಎನ್ನುವುದು ಅವರೇ ತಿಳಿಯಲಿ ಎನ್ನುವುದು ನನ್ನ ಅಭಿಪ್ರಾಯ. 

ಇನ್ನು ಲೇಖಕರ ಬಗ್ಗೆ ಹೇಳುವುದಾದರೆ ವಾಸುದೇವರಾವ್ ಅವರು ಹಲವಾರು ಕೃತಿಗಳನ್ನು ರಚಿಸಿ, ಅನುವಾದಿಸಿ ಪುಸ್ತಕರೂಪದಲ್ಲಿ ಪ್ರಕಟಿಸಿದ್ದಾರೆ. ಇವರ ಕೃತಿಗಳಲ್ಲಿ ಅನುವಾದಗಳೇ ಹೆಚ್ಚಿದ್ದು, ಅಸಂಖ್ಯ ಪತ್ತೇದಾರಿ ಕಾದಂಬರಿಗಳನ್ನೂ ಕನ್ನಡಕ್ಕೆ ತಂದ ಕೀರ್ತಿ ಇವರದು. ಅದರಲ್ಲೂ ಡ್ರಾಕುಲ ಮತ್ತು ಷರ್ಲಾಕ್ ಹೋಮ್ಸ್ ನ ಕೃತಿಗಳು ಹೆಚ್ಚು ಪ್ರಸಿದ್ಧಿಯಾಗಿವೆ. ಜೊತೆಗೆ ಅವರ ಈ ೩ ಕೃತಿಗಳ ಅನುವಾದವನ್ನು ಓದಿದ ಸಂತೋಷ ಮತ್ತು ತೃಪ್ತಿ ನನಗಿದೆ. 

Sunday 26 February 2017

ಸಮಯ

ಎಲ್ಲರಿಗೂ ಇಹುದು ಸಮಯ ತುರ್ತು ವಿಷಯಗಳಿಗೆ 
ಯಾರಿಗೂ ಸಾಲದು ಸಮಯ ಮುಖ್ಯ ವಿಷಯಗಳಿಗೆ 
ಎಲ್ಲರೂ ಬಲ್ಲರು ಜಾರಿ ಹೋದ ಕ್ಷಣ ತಿರುಗಿ ಬಾರದೆಂದು 
ಆದರೂ ಪರಿತಪಿಸುವರು  ಆ ಕ್ಷಣಕ್ಕಾಗಿ ಎಂದೆಂದೂ 

Saturday 25 February 2017

ಲೈಫ್ ಈಸ್ ಬ್ಯೂಟಿಫುಲ್


ಬಹಳ ದಿನಗಳ ನಂತರ ನೆನ್ನೆ ಮಧ್ಯಾಹ್ನ ಓದಲು ಆರಂಭಿಸಿದ ಪುಸ್ತಕವನ್ನು ಸಂಜೆಗೆ ಅಂದರೆ ಕೊನೆವರೆಗೂ ಬಿಡದಂತೆ ಮುಗಿಸಿಬಿಟ್ಟೆ ಅದೇ ಜೋಗಿ ಅವರ "ಲೈಫ್ ಈಸ್ ಬ್ಯೂಟಿಫುಲ್" ಪುಸ್ತಕ. ಇಲ್ಲಿ ಯಾವುದೇ ಕಥೆಯಿಲ್ಲ, ಕಾದಂಬರಿಯೂ ಅಲ್ಲ, ಪಾತ್ರಗಳು ಸಹ ಇಲ್ಲ. ಇಲ್ಲಿ ತುಂಬಿರುವುದೆಲ್ಲ ನಾವು ಮತ್ತು ನಮ್ಮ ಬದುಕು ಮಾತ್ರ. 

ಎಲ್ಲಕ್ಕಿಂತ ಜಾಸ್ತಿ ಹಿಡಿಡಿಸಿದ್ದು ವಿಶೇಷವಾದ ಮುನ್ನುಡಿ. ಅಲ್ಲಿ ನಾನು ತುಂಬಾ ಮೆಚ್ಚಿದ್ದು "ಇವತ್ತು ನಾನು ಎಂಥಾ ಪುಸ್ತಕ ಕೊಟ್ಟರೂ ಓದಬಲ್ಲೆ. ಎಂಥಾ ಕಳಪೆ
 ಪುಸ್ತಕದಲ್ಲೂ ನನಗೆ ಬೇಕಾದ ಒಂದು ಸಾಲು ಸಿಕ್ಕೇ ಸಿಗುತ್ತದೆ ಎಂದು ನಂಬಿದವನು ನಾನು. ಎಂಥಾ ಕಸದ ತೊಟ್ಟಿಗೆ ಎಸೆದರೂ ಅಲ್ಲಿಂದ ಒಂದೆರಡು ಉಪಯುಕ್ತ ವಸ್ತುಗಳನ್ನು ಹೆಕ್ಕಬಹುದು ಎಂಬುದು ನನ್ನ ಭರವಸೆ. " ಲೇಖಕರ ಈ ಮಾತುಗಳು ಎಷ್ಟೋ ಸಲ ನನಗೂ ಸತ್ಯವೆನಿಸಿದೆ, ಏಕೆಂದರೆ ಪ್ರತೀ ಬೇಸರ, ನೋವು, ಒಂಟಿತನ, ಯಾರೊಂದಿಗೂ ಹೇಳಿಕೊಳ್ಳಲಾಗದ ನೀರಸ ಮನಸ್ಥಿತಿಯನ್ನು  ದೂರ ಮಾಡುವ ಶಕ್ತಿಯಿರುವುದು ಪುಸ್ತಕಳೊಂದಿಗಿರುವ ಗಾಢವಾದ ಸ್ನೇಹವೆಂಬುದು ನನ್ನ ನಂಬಿಕೆ ಮತ್ತು ಅನುಭವವವೂ ಕೂಡ. 

ಇನ್ನೊಂದು ವಿಶೇಷವೆಂದರೆ ಲೇಖಕರೂ ಓದುಗರಿಗೆ ಈ ಪುಸ್ತಕ ಓದಲು ಹಾಕಿರುವ ಷರತ್ತುಗಳು. ನೀವು ಈ ಕೆಳಗಿನ ವರ್ಗಕ್ಕೆ ಸೇರಿದವರಾಗಿದ್ದರೆ, ದಯವಿಟ್ಟು ಈ ಪುಸ್ತಕವನ್ನು ಓದಬೇಡಿ.
1. ದಿನಕ್ಕೆ ಹತ್ತು ಗಂಟೆಗಿಂತಲೂ ಹೆಚ್ಚು ಫೋನಲ್ಲಿ ಮಾತಾಡುವವರು.
2. ದಿನವಡೀ ಫೇಸ್ ಬುಕ್ ನೋಡುತ್ತಾ ಕೂತಿರುವವರು.
3. ಮಾತಿಗಂತ ವಾಟ್ಸ್ ಆಪ್ ಉತ್ತಮ ಎಂದು ನಂಬಿದವರು.
4. ಸಿನಿಮಾ ಹಾಡುಗಳೇ ಜೀವನದ ಸರ್ವಸ್ವ ಎಂದುಕೊಂಡಿರುವವರು.

ಇದನ್ನೂ ಓದಿ ಅರೇ ಹೌದಲ್ಲ ಈ ೪ ವರ್ಗಗಳಲ್ಲಿ ನಾವು ಕೆಲವೊಮ್ಮೆ ಸೇರಿರುವವರಾಗಿರುತ್ತೇವೆ ಆದರೆ ಅವರು ಹೇಳಿದಷ್ಟು ಸಮಯವಲ್ಲದಿದ್ದರೂ ಸ್ವಲ್ಪ ಹೊತ್ತಾದರೂ ಮೇಲಿನ ೪ನ್ನೂ ಮಾಡಿರುತ್ತೇವೆ. ಈಗಿನ ದಿನಗಳಲ್ಲಿ ವಾಟ್ಸಾಪ್ ಮತ್ತು ಫೇಸ್ಬುಕ್ ಜೀವನದ ಅವಿಭಾಜ್ಯ ಅಂಗಗಳೇನೋ ಎನ್ನುವ ಮಟ್ಟಿಗೆ ನಾವು ಹಚ್ಚಿಕೊಂಡಿದ್ದೇವೆ, ಅವೆರೆಡು ಇಲ್ಲದಿದ್ದರೆ ಜೀವನವೇ ಇಲ್ಲ ಎನ್ನುವ ಮಟ್ಟವನ್ನು ಸುಮಾರು ಜನ ಈಗಾಗಲೇ ತಲುಪಿರಬಹುದು. ಆದರೆ ಇದರಾಚೆಗೂ ಬದುಕಿದೆ, ಸಂತೋಷವಿದೆ, ನೆಮ್ಮದಿಯಿದೆ ಎಂದು ಈ ಪುಸ್ತಕ ಓದಿದರೇ ತಿಳಿಯುತ್ತದೆ. ಏಕೆಂದರೆ ಇಲ್ಲಿ ಸ್ನೇಹ, ಪ್ರೇಮ, ಗುರು ಶಿಷ್ಯ, ಸಿಟ್ಟು, ಒಂಟಿತನ , ನೋವು ನಲಿವು ಹೀಗೆ ಒಬ್ಬ ಮನುಷ್ಯನ ಜೀವನದಲ್ಲಿ ಏನೇನು ಸಮಸ್ಯೆ ಬರಬಹುದೋ, ಯಾವೆಲ್ಲ ವ್ಯಕ್ತಿಗಳು ಬರಬಹುದೋ, ಏನೆಲ್ಲಾ ಮನಸ್ಥಿತಿಗಳನ್ನು ತಲುಪಬಹುದೋ, ಹಾಗೆ ಬರೀ ಪ್ರಶ್ನೆಗಳೇ ತುಂಬಿಕೊಂಡು ಹೇಗೆಲ್ಲ  ಉತ್ತರಗಳ ಹುಡುಕಾಟ ನಡೆಸಬಹುದೋ, ಹೀಗೆ ಹತ್ತು ಹಲವಾರು ವಿಷಯಗಳು ಬಂದು ಹೋಗುತ್ತವೆ. 

ಈ ಪುಸ್ತಕದ ಮೂಲ ಉದ್ದೇಶವೇ ಸಮಸ್ಯೆಗಳ ಸುತ್ತ ಸುತ್ತದೆ, ಪ್ರಶ್ನೆಗಳ ಹಿಂದೆಯೇ ಓಡದೆ, ಇರುವ ಚಿಕ್ಕ ಚಿಕ್ಕ ಸಂತೋಷವನ್ನೇ ಅನುಭವಿಸಿ, ಯಾವುದೇ ಕ್ಷಣವನ್ನು ವ್ಯರ್ಥ ಮಾಡದೇ ಬದುಕಿ ಸಮಸ್ಯೆಯ ಜೊತೆ ಶಾಂತವಾಗಿ ಯೋಚಿಸಿದರೆ ಪೂರ್ತಿ ಪರಿಹಾರ ಸಿಗದಿದ್ದರೂ ಸ್ವಲ್ಪ ನೆಮ್ಮದಿಯ ಹಾದಿಯಂತೂ ಸಿಕ್ಕೇ ಸಿಗುತ್ತದೆ ಎನ್ನುವ ಅಂಶ. ಈ ಪುಸ್ತಕ ಓದಿದಮೇಲೆ ಅನಿಸಿದ್ದು ಅರೆ ಹೌದಲ್ಲಾ!!! ಹೀಗೂ ನಮ್ಮ ಲೈಫ್ ನ ಚೆನ್ನಾಗಿ ಮಾಡ್ಕೋಬಹುದು ಮತ್ತು ನೆಮ್ಮದಿಗೆ, ಯಶಸ್ಸಿಗೆ ಯಾರನ್ನೂ ನೆನೆಯದೇ ನಾವೇ ಎಲ್ಲ ದಾರಿ ಕಂಡುಕೊಳ್ಳಬಹುದು ಎನಿಸಿತು. ನಿಜಕ್ಕೂ "ಲೈಫ್ ಈಸ್ ಬ್ಯೂಟಿಫುಲ್" ಓದಿದರೆ ಸಿಗುವುದು ಲೈಫ್ ಆಗುವುದು ಕಲರ್ಫುಲ್, ಮೀನಿಂಗ್ಫುಲ್ ಮತ್ತು ಸಿಗುವುದು ಪ್ರತಿಯೊಬ್ಬರಿಗೂ ಇನ್ಸ್ಪಿರೇಷನ್ ಫುಲ್ ಅಂಶಗಳೇ ಎಂದು ಹೇಳಲು ಇಚ್ಚಿಸುತ್ತೇನೆ. 

ಮತ್ತೊಮ್ಮೆ  ನಾ ಆಗಿರುವೆ ಈ  ಕೂಟಕ್ಕೆ ಥ್ಯಾಂಕ್ ಫುಲ್ 

Monday 20 February 2017

ಹಾಡಿನ ಹುಟ್ಟು

ಬರೆದಂತೆಲ್ಲ ಬರಿದಾಗದು ಭಾವನೆ 
ಕಂಡಂತೆಲ್ಲ ಕೊನೆಗೊಳ್ಳದು ಕಲ್ಪನೆ 

ಆದರೆ ಕಲ್ಪನೆ ಭಾವನೆಗಳ ಮಿಲನ 
ಮೂಡುವುದೊಂದು ಸುಂದರ ಕವನ 

ಮೂಡಿದ ಕವನವ ನೋಡಿತು ನಯನ 
ಮಾಡೇ ಬಿಟ್ಟಿತು ಹಾಡನು ಕೇಳಲು ಶ್ರವಣ 

ಶ್ರವಣ ಹುಡುಕುತಿದೆ ಒಬ್ಬ ಗಾಯಕನನ್ನ
ಹಾಡಿಸಲು ಆ ಕವಿಯ ಕವನವನ್ನ 

Wednesday 15 February 2017

ಸಾಮಾನ್ಯರಲ್ಲಿ ಅಸಾಮಾನ್ಯರು


ಸುಧಾ ಮೂರ್ತಿ ಅವರ "ಸಾಮಾನ್ಯರಲ್ಲಿ  ಅಸಾಮಾನ್ಯರು" ಪುಸ್ತಕದ ಮೂಲ ವಿಷಯ ಏನೆಂದರೆ ಹೊರಗಿನಿಂದ ಸಾಮನ್ಯರಂತೆ ಕಂಡರೂ ಅವರಲ್ಲಡಗಿರುವ ಅಸಾಮಾನ್ಯ ಗುಣಗಳನ್ನು ಹೊರ ತರುವ ಪ್ರಯತ್ನ. ಇಲ್ಲಿ ೧೯ ವ್ಯಕ್ತಿಗಳ ಪರಿಚಯ, ಅವರ ಅಸಾಮಾನ್ಯ ಗುಣಗಳು  ಮತ್ತು ಅವರಿಗಾಗಿ ಇಟ್ಟಿರುವ ಶೀರ್ಷಿಕೆ ಎಲ್ಲವೂ ಇಷ್ಟವಾದವು. 

ಮೂಲತಃ  ಲೇಖಕರು ಹುಬ್ಬಳ್ಳಿಯವರಾಗಿದ್ದು,  ಉತ್ತರ ಕರ್ನಾಟಕದ ಸಂಸ್ಕೃತಿ, ಖಡಕ್ ಮಾತಿನ ಧಾಟಿ ಮತ್ತಿತರ ವಿಶಿಷ್ಟತೆಗಳನ್ನು ತೆಗೆದುಕೊಂಡು ಕೆಲವು ವ್ಯಕ್ತಿಗಳ ಚಿತ್ರಣ ಇಲ್ಲಿ ಮೂಡಿಸಿದ್ದಾರೆ. ನಾನು ಕೂಡ ಉತ್ತರ ಕರ್ನಾಟಕದವಳಾಗಿದ್ದರಿಂದ ಈ ಕೃತಿ ಮತ್ತಷ್ಟು ಇಷ್ಟವಾಯಿತು, ಅದಕ್ಕೆ ಕಾರಣ ನೇರ ನುಡಿ, ಹೊರಗೆ  ಕಟುವಾಗಿ ಕಂಡರೂ ಸ್ಪಷ್ಟತೆ ಎದ್ದುಕಾಣುವಂತ ಮಾತು, ಒಳಮನಸಿನಲ್ಲಿ ಪ್ರೇಮ, ಅಂತಃಕರಣ, ಪರೋಪಕಾರ, ವಾತ್ಸಲ್ಯ ತುಂಬಿದ ಮನಸುಗಳ ಚಿತ್ರಣ. 

ನನಗೆ ಎಲ್ಲರೂ ಹೇಳುತ್ತಾರೆ ಉತ್ತರ ಕರ್ನಾಟಕದ ಜನರ ಮಾತು ತುಂಬಾ ಒರಟು, ಎಂದು ಅದು ನಿಜವೇ ಆದರೂ ಹೊರಗೊಂದು ಒಳಗೊಂದು ಮಾತು ಆಡದ ನೇರ ಮಾತುಗಾರರು ಎಂಬ ಖುಷಿ ನನಗಿದೆ. ಇನ್ನು ಈ ಪುಸ್ತಕದಲ್ಲಿ ಚಿತ್ರಿತರಾಗಿರುವವರಲ್ಲಿ, ಕೆಳಮಟ್ಟದ ಆರ್ಥಿಕ ಪರಿಸ್ಥಿತಿಯಲ್ಲಿರುವವರು, ಕಡಿಮೆ ಓದಿದವರು, ಮಾಧ್ಯಮ ವರ್ಗದ ಕುಟುಂಬದವರು ಹೀಗೆ ಸಾಮಾನ್ಯರೇ ಇದ್ದಾರೆ. ಕಂಡಕ್ಟರ್, ಅಂಗಡಿ ನಡೆಸುವ, ದಾನ, ಅಸೂಯೆ, ಗುಣವಂತರು, ಸಾಧನೆಗೆ ಪ್ರಸಿದ್ಧಿಯಾದವರು ಹೀಗೆ ಹತ್ತು ಹಲವಾರು ಧನಾತ್ಮಕ ಮತ್ತು ಋಣಾತ್ಮಕ ಗುಣಗಳಿದ್ದವರ ಚಿತ್ರಣ ಇಲ್ಲಿ ಮೂಡಿದೆ. ಹಾಗೆ ಇಲ್ಲಿ ಬರುವ ಸಂಭಾಷಣೆಯ ಶೈಲಿ ಕೂಡ ಬಹಳ ಇಷ್ಟವಾಗುತ್ತದೆ. 

ಈ ಕೃತಿಯಲ್ಲಿಯೂ ಕೂಡ ಎಂದಿನಂತೆ ಕಲಿಯುವ ಅಂಶಗಳನ್ನು ಸುಧಾಮೂರ್ತಿಯವರು ಹೇಳಿದ್ದಾರೆ. ಒಳ್ಳೆಯ ಮತ್ತು ಕೆಟ್ಟ ಗುಣಗಳ ವ್ಯಕ್ತಿಗಳು ನಮ್ಮ ಸುತ್ತಮುತ್ತಲೂ ಇರುತ್ತಾರೆ. ಅವುಗಳಲ್ಲಿ ಕೆಲವೊಂದನ್ನು ತೆಗೆದುಕೊಂಡು ಋಣಾತ್ಮಕ ಅಂಶಗಳಿಂದ ದೂರಾಗಿ ಬಾಳಿದರೆ ನಮಗೂ ಮತ್ತು ನಮ್ಮ ಸುತ್ತ ಇರುವವರಿಗೂ ಅನುಕೂಲವೆಂಬುದು ನನ್ನ ಅಭಿಪ್ರಾಯ.

ಕೂಟಕ್ಕೆ ಮತ್ತೊಮ್ಮೆ ಧನ್ಯವಾದಗಳು. :) 

ಬರಹಗಾರ

ಬರವಣಿಗೆ ಎನ್ನುವುದು ವೃತ್ತಿಯಲ್ಲ ಅದು ಒಂದು ಖಾಲಿ ಚೀಲ 
ತೋಚಿದ್ದೆಲ್ಲಾ ಗೀಚುವೆ ಬಯಸಿದ್ದನ್ನೆಲ್ಲ ಬರೆಯುವೆ 
ಕಲ್ಪನೆ ಕನಸುಗಳ ತುಂಬಿ ಭಾವನೆಗಳ ಹೊರದೂಡುವೆ 
ಕೆಲವೊಮ್ಮೆ ಮೂಡಿದರೆ ಕವನ ಮುದಗೊಳ್ಳುವುದು ಮನ 
ಮತ್ತೊಮ್ಮೆ ಮೂಡಿದರೆ ಲೇಖನ ನಲಿಯುವುದು  ಜೀವನ 
ಕಥೆಯೋ ಕವಿತೆಯೋ ಕಾದಂಬರಿಯೋ ಮತ್ತೊಂದೋ 
ಮೊಗದೊಂದೋ ಬರೆಯುತಿಹನು ಬರಹಗಾರ 
ಸಿಗುವನೆಂಬ ಆಶಯದಲ್ಲಿ ಒಬ್ಬ ಸಲಹೆಗಾರ 
ನೀ ಮಾಡಿದ ಕೊನೆಯ ತಪ್ಪೇ ನಿನ್ನ ಅತ್ಯತ್ತಮ ಶಿಕ್ಷಕ 
ತಪ್ಪು ಮಾಡುವುದು ಸಹಜ ತಿದ್ದಿ ಬಾಳುವವನೇ ಮನುಜ 
ತಪ್ಪು ಒಪ್ಪುಗಳ ನಡುವೆ ಮಾಡದಿರು ಕಾದಾಟ 
ಕೊನೆಯುಸಿರು ಇರುವರೆಗೂ ಮುಗಿಯದು ಹೋರಾಟ 


Wednesday 8 February 2017

ನಂಬು ನಿನ್ನ ಮನವ

ನಿನ್ನ ಮನಸೇ ನಿನ್ನ ಶಕ್ತಿಯುತ  ಅಂಗ 
ತುಂಬಿದರೆ ಅಲ್ಲಿ ಧನಾತ್ಮಕ ಅಂಶಗಳ ಸಂಘ 
ಎಂದಿಗೂ ಸುಳಿಯದು ಋಣಾತ್ಮಕ ಶಕ್ತಿ 
ಆಗ ನಿನ್ನ ಬದುಕಾಗುವುದು ನಿರಾಸೆಗಳಿಂದ ಮುಕ್ತಿ 

Monday 6 February 2017

ಬಾಳಿನ ಹೊಣೆ

ಕವಿತೆಯೊಳಗಿನ ಕರೆಯ  ಕೆದಕಿ ಕರೆದರೆ 
ಕೇಳುವ ಕಿವಿಗಳಿಗೆ ಕಾಣುವುದು ಕಲ್ಪನೆ 

ಬಾರದ ಭಾವನೆಗಳ ಬಿಂಬಿಸಲು ಬರೆದರೆ 
ಬೇಸತ್ತ ಬದುಕಲಿ ಬಾರದಿರುವುದು ಭಾವನೆ 

ಭಾವನೆ ಕಲ್ಪನೆಗಳ ಜಂಜಾಟದಲ್ಲಿ ಕಾಣದೆ 
ಮರೆಯಾಗುತಿಹುವು ಎಷ್ಟೋ ಯಾತನೆ 

ಯಾತನೆ, ವೇದನೆ ಏನೇ ಇರಲಿ ಹೇಗೆ ಇರಲಿ 
ಬಾಳಿನ ಬಂಡಿಯ ಸಾಗಿಸುವದಷ್ಟೇ ನನ್ನ ಹೊಣೆ 


Tuesday 31 January 2017

ಚಿತ್ರ ಕವನ

ಚಿತ್ರ ನೋಡಿ ಬರೆದ ಕವಿತೆ 
ಕವಿತೆ ಕೇಳಿ ಬರೆದ ಚಿತ್ರ 
ಎರಡು ಕಲ್ಪನೆಗಳೇ ಆದರೂ 
ಅದರಲ್ಲಡಗಿಹುದು ಭಾವನೆಗಳ ಆಗರ 
ಅದಕೆ ಏನೋ ಧುಮ್ಮಿಕ್ಕಿ ಹರಿಯುತಿದೆ 
ಚಿತ್ರಕವನಗಳ ಸಾಗರ 

ಕೃಷ್ಣ

ನೀ ಬರುವ ದಾರಿಯ ಕಾಯುತಿದ್ದಳು ಈ ರಾಧೇ 
ಭಾವನೆಗಳ ಸೆಳೆತವ ಸಹಿಸಲಾರದೆ 

ಭಾವನೆಗಳು ಬರಿದಾಗುವ ಮುನ್ನ ನೀ ಕೊಟ್ಟೆ ನವಿಲುಗರಿ 
ಆ ಗರಿಯ ಹಿಡಿದು ಬರೆಯುವಾಸೆ ನಿನ್ನೊಲವಿನ ಹೆಗಲೇರಿ 

ಬಣ್ಣ ಬಣ್ಣದ ಗರಿಯ ನೋಡಿದೆ ಬರೆಯಲು ಚಂದದ ಕವನ 
ಬರೆಯದಂತೆ ತಡೆಯುತಿಹುದು ನಿನ್ನೇ ಆವರಿಸಿರುವ ನನ್ನೀ ಮನ 

ಬರೆಯುವುದ ಬಿಟ್ಟು ಎಣಿಸುತಿರುವೆ ಗರಿಗಳನು 
ಮರೆಯಲು ನೀ ಇರದ ವಿರಹದ ಘಳಿಗೆಗಳನು 

Monday 30 January 2017

ಶಾಲಭಂಜಿಕೆ



"ಶಾಲಭಂಜಿಕೆ" ಕೆ.ಎನ್. ಗಣೇಶಯ್ಯನವರ ಸಣ್ಣಕೆಥೆಗಳ ಸಂಗಮ. ಇಲ್ಲಿ ಬರುವ ೮ ಕಥೆಗಳಲ್ಲಿ ಲೇಖಕರ ಶ್ರಮ ಸಂಶೋಧನೆಯ ಉತ್ಸಾಹ ಎದ್ದು ಕಾಣುತ್ತದೆ. ನನಗೆ ಈ ಪುಸ್ತಕ ಓದಿದಮೇಲೆ ಅನಿಸಿದ್ದು ನಾವು ನೋಡುವ ಎಷ್ಟೋ ಸ್ಥಳಗಳು, ವ್ಯಕ್ತಿಗಳು, ವಿಚಾರಗಳು ಸರಳವಾಗಿ ಕಂಡರೂ ಅವುಗಳ ಹಿಂದೆ ನಮಗೆ ಗೊತ್ತಿಲ್ಲದೇ ಇರುವಂತಹ ಅಥವಾ ನಿರೀಕ್ಷೆ ಮಾಡಲಾರದಂತಹ ರೋಚಕ ಸತ್ಯಗಳು ಅಡಗಿರುತ್ತವೆ ಎಂಬುದು. 

ಇಲ್ಲಿ ಬರುವ ೮ ಕಥೆಗಳ ವಸ್ತುಗಳು ಬೇರೆಬೇರೆಯಾಗಿವೆ ಜೊತೆಗೆ ಇಲ್ಲಿ ಬಂದಿರುವ ಅಂಶಗಳಲ್ಲಿ ಕೆಲವು ಅಂಶಗಳು ನಮ್ಮ ಸುತ್ತಮುತ್ತ ನಡೆಯುತ್ತಿವೆ.  ಬೆಂಗಳೂರಿನ ಇತಿಹಾಸ, ಶಿಲೆಗಳ ಕೆತ್ತನೆಯ ಹಿಂದಿನ ಉದ್ದೇಶ ಮತ್ತು ಕಥೆ, ನನ್ನನ್ನು ಯಾವಾಗಲೂ ಅಚ್ಚರಿ ಮೂಡಿಸುವ ಪಿರಮಿಡ್ಡಿನ ಇತಿಹಾಸದ ಒಂದು ಎಳೆ, ಅನೇಕ ವೈಜ್ನ್ಯಾನಿಕ, ತಾಂತ್ರಿಕ ವಿಷಯಗಳ ಮೇಲಿನ ಸಂಶೋಧನೆಯ ಶ್ರಮ ಅದಕ್ಕಾಗಿ ಪಟ್ಟ ತೊಂದರೆ ಹೀಗೆ ಬಹಳಷ್ಟು ವಿಷಯಗಳು ಇಲ್ಲಿ ಇವೆ, ಎಲ್ಲವನ್ನು ಕಥೆಯ ರೂಪದಲ್ಲಿ ಬರೆಯುವುದು ಕಷ್ಟ ಅದರಲ್ಲಿ ಗಣೇಶಯ್ಯನವರು ಯಶಸ್ವಿಯಾಗಿದ್ದಾರೆ. 

ಈ ಕೃತಿ ಚಿಕ್ಕದಾದರೂ ಇಲ್ಲಿ ನಾ ಕಲಿತಿದ್ದು ತಿಳಿದಿದ್ದು ಬಹಳ... ಕೆಲವರಿಗೆ  ಇತಿಹಾಸ ಓದುವುದು ನೀರಸವೆನಿಸಿದರೆ ಅದನ್ನು ಹೆಕ್ಕಿ ತೆಗೆಯಲು ಲೇಖರು ಪಟ್ಟ ಶ್ರಮ ಕೈಗೊಂಡ ಸಂಶೋಧನೆ ಎಲ್ಲವೂ ಮನಸ್ಸನ್ನು ಮುದಗೊಳಿಸುತ್ತವೆ. 

Monday 23 January 2017

ಹೇ ಹುಡುಗ ನಾನಲ್ಲ ಬೆಳದಿಂಗಳ ಬಾಲೆ 
ಆದರೆ ನನಗಿಹುದು ಮುದ್ದಾಗಿ ಕವನ ಗೀಚುವ ಕಲೆ 
ಪೋಣಿಸುತಿರುವೆ ಪದಗಳ ಪುಂಜವ 
ಕೊರಳಿಗೆ ಸುತ್ತಿ ಎಳೆಯಲು ಒಲವಿನ ಹಾರವ 
ಅದಕ್ಕೆಂದೆ ನಾ ಬಂದೆ ಬಾನಂಗಳದಲಿ 
ಹುಡುಕಲು ನಿನ್ನ ನಕ್ಷತ್ರಗಳ ಲೋಕದಲಿ 
ಆಗಸದಲಿ ಹರಡಿದ ತಾರೆಗಳ ನಾ ಎನಿಸುವ ಮುನ್ನ 
ಎಲ್ಲಿದ್ದರು ಬಂದು ಅಪ್ಪಿಬಿಡು ನೀ ಎನ್ನ 

Sunday 22 January 2017

ಬರೆದಂತೆಲ್ಲ ಸವಿಯದು ಭಾವನೆಗಳ ಬಂಡಿ 
ಏಕೆಂದರೆ ಸದಾ ಜೊತೆಗಿರುವುದು ಕವನಗಳ ಕೊಂಡಿ 

Saturday 14 January 2017

ಚಿತಾದಂತ



ಡಾ. ಕೆ.ಎನ್.ಗಣೇಶಯ್ಯರವರು ಬರೆದ "ಚಿತಾದಂತ" ರೋಚಕ ಕಾದಂಬರಿಗಳಲ್ಲೊಂದು. ಇತಿಹಾಸದ ಎಳೆಯನ್ನು ಹಿಡಿದು ಇಂದಿನ ಕಾಲದವರೆಗೆ ನಡೆದ ಎಲ್ಲ ಅಂಶಗಳನ್ನು ಒಳಗೊಂಡಿದ್ದು, ಓದುಗರನ್ನು ಆಶ್ಚರ್ಯಚಕಿತರನ್ನಾಗಿ ಮಾಡುವುದರ ಜೊತೆಗೆ ಪ್ರತಿಯೊಂದು ಮಾಹಿತಿಗೂ ಅವರು ಕೊಟ್ಟಿರುವ ನಕ್ಷೆಗಳು, ಟಿಪ್ಪಣಿ, ಚಿತ್ರ ಮತ್ತು ಸಂಬಂಧಪಟ್ಟ ಪುಸ್ತಾಕಗಳ ಮಾಹಿತಿ ಎಲ್ಲವೂ ನಾವು ನಿಜವಾದ ಘಟನೆಗಳಲ್ಲೇ ಬದುಕುತ್ತಿದ್ದೇವೇನೋ ಎನಿಸುತ್ತದೆ. 

ಇದರಲ್ಲಿ ಅಲೆಕ್ಸಾಂಡರನು ಭಾರತದ ಮೇಲಿನ ದಾಳಿಯ ನಂತರ ಅವನ ಸಂಪತ್ತಿನ ಹುಡುಕಾಟ ಇದೆ. ಎರಡು ಸಾವಿರ ವರ್ಷಗಳ ರೋಚಕ ಇತಿಹಾಸ  ಇಲ್ಲಿದೆ. ಅಂದಿನಿಂದ ಇವತ್ತಿನ ಸ್ವತಂತ್ರ ಭಾರತದ ವರೆಗೂ ಬಂದಿರುವ ಇತಿಹಾಸದ ಚಂದ್ರಗುಪ್ತ ಮೌರ್ಯ, ಅಶೋಕ, ಚಾಣಕ್ಯ, ಕೌಟಿಲ್ಯ ಎಲ್ಲಕ್ಕಿಂತ ಮುಖ್ಯವಾಗಿ ಅಲೆಕ್ಸಾಂಡರ್ ನ ಚಿತ್ರಣ ಅತ್ಯಂತ ಆಶ್ಚರ್ಯದಿಂದ ಕೂಡಿದೆ. ಭೌಧ್ದ ಧರ್ಮದ ಬೆಳವಣಿಗೆ ಮತ್ತು ಇತರ ವಿವರ, ಮೌರ್ಯ ರಾಜ್ಯದ ವಿಷ್ಲೇಶಣೆ, ಸಿಕಂದರನ ದಂಡಯಾತ್ರೆಯ ಸಮಯದ ಭಾರತದ ಸ್ಥಿತಿ ಗತಿ ಹಾಗೂ ನಿಗೂಢ ತೇರವಾದಿಗಳ ವಿಷಯ ದೊಂದಿಗೆ ಬುದ್ಧನ ಹಲ್ಲಿನ ವಿಸ್ಮಯಕಾರಿ ಅಂಶಗಳನ್ನು ಈ ಕಾದಂಬರಿ ಒಳಗೊಂಡಿದೆ.ಎಲ್ಲಕ್ಕಿಂತ ರೋಚಕವೆಂದರೆ ಈ ಕಾದಂಬರಿಯಲ್ಲಿ ಬರುವ ಅಂದರೆ ಇಂದಿನ ವಾಸ್ತಕದಲ್ಲಿ ಚಿತ್ರಿತವಾಗಿರುವ ರಚಿತಾ ಎಂಬ ಹುಡುಗಿಯ ಮುತ್ತಾತ ಬರೆದ ಡೈರಿ, ೧೨ ಭಾಗದ ಸಿಕಂದರನ ಸಿರಿ ಎಂದು ನಾಮಾಂಕಿತಗೊಂಡ ಈ ಡೈರಿಯನ್ನು ಓದುವಾಗ ಅಬ್ಬಾ!!!! ಹೀಗೂ ಉಂಟೆ ಎನಿಸುವುದು. 

ಬುದ್ಧನ ಹಲ್ಲಿಗೂ ಅಲೆಗ್ಸಾಂಡರನ  ಸಂಪತ್ತಿಗೆ ಇರುವ ಸಂಬಂಧ,  ಪ್ರಚಲಿತವಾಗಿ ಬುದ್ಧನ ೪ ಹಲ್ಲುಗಳ ಬಗ್ಗೆ ಇರುವ ವಾದ ವಿವಾದ ಏನು, ಅಂದರೆ ಶ್ರೀಲಂಕಾ, ಜಪಾನ್, ಚೈನಾ, ಕಾಂಬೋಡಿಯಾ ಇತ್ಯಾದಿ ದೇಶಗಳಲ್ಲಿ ಇರುವ ಹಲ್ಲಿನಲ್ಲಿ ಯಾವುದು ಸುಳ್ಳು ಯಾವುದು ನಿಜ ಎನ್ನುವ ಸತ್ಯದ ಹುಡುಕಾಟ, ಅದರ ಸುತ್ತ ಹಬ್ಬಿರುವ ದಂತಕತೆಗಳು, .. ತೇರವಾದಿಗಳು ಎಂದರೆ ಯಾರು, ಅವರೆಲ್ಲಿದ್ದರು, ಈಗಲೂ ಇದ್ದಾರೆಯೇ, ಅಲೆಕ್ಸಾಂಡರ ನ ದಂಡಯಾತ್ರೆ ಮತ್ತು ಅವನು ಸಂಗ್ರಹಿಸಿದ ಖಜಾನೆ ನಿಧಿ ಭಾರತದಲ್ಲಿದೆಯೇ, ಅಬ್ಬಾ!!! ಒಂದಕ್ಕೊಂದು ಸಂಬಂಧವಿಲ್ಲವೆಂದು ಎನಿಸುವ ಅಂಶಗಳು ಹೇಗೆ ಬೆಸೆದಿವೆ ಎನ್ನುವುದು ಇಲ್ಲಿನ ಪ್ರಮುಖ ಅಂಶ. ಕುತೂಹಲ ತಡಿಯಲಾರದೆ, ಕ್ಯಾಂಡಿ ದೇವಾಲಯದ ಚಿತ್ರಗಳನ್ನು ಅಂತರ್ಜಾಲದಲ್ಲಿ ನೋಡಿದೆ, ಒಮ್ಮೆಯಾದರೂ ನೋಡಿ ಬರಬೇಕೆಂಬ ಆಸೆ ಮೂಡಿತು. ಇಲ್ಲಿ ಆ ಚಿತ್ರಗಳನ್ನು ಹಂಚಿಕೊಂಡಿದ್ದೇನೆ. 

ಈ ಕಾದಂಬರಿಯ ಶೀರ್ಷಿಕೆ ಎಷ್ಟು ವಿಭಿನ್ನವಾಗಿದೆ ಏಕೆ ಈ ಹೆಸರಿಟ್ಟಿದ್ದಾರೆ ಎನ್ನುವ ಕುತೂಹಲ ಪ್ರಥಮ ಪುಟದಿಂದ ಕೊನೆಯ ಪುಟದವರೆಗೂ ಒಂದೊಂದು ಯೋಚನೆ ಬರುವಂತೆ ಮಾಡುತ್ತದೆ. ಆದರೆ ಎಲ್ಲ ಊಹೆಗಳನ್ನು ಸುಳ್ಳುಮಾಡಿಸುವಲ್ಲಿ ಗಣೇಶಯ್ಯನವರ ಬರವಣಿಗೆ ಯಶಸ್ವಿಯಾಗಿದೆ. 

Friday 6 January 2017

ಶವದ ಮನೆಯಾದ ಸ್ವರ್ಗ




ವಾಸುದೇವರಾವ್ ಅವರ ಷರ್ಲಾಕ್ ಹೋಮ್ಸ್ ನ ಸಾಹಸ ಕಥೆಗಳು "ಶವದ ಮನೆಯಾದ ಸ್ವರ್ಗ" (ಇಂಗ್ಲಿಷ್ ಮೂಲ : ಸರ್ ಆರ್ಥರ್ ಕಾನನ್ ಡಾಯ್ಲ್) ಅಲ್ಲಿ ಬರುವ ೫ ಕಥೆಗಳನ್ನು ಓದಿದೆ. ಇಲ್ಲಿವರೆಗೂ ಷರ್ಲಾಕ್ ಹೋಮ್ಸ್ ಬಗ್ಗೆ ಚಲನಚಿತ್ರಗಳಲ್ಲಿ ಮತ್ತು ಇಂಗ್ಲಿಷ್ ಪುಸ್ತಕಗಳಲ್ಲಿ ಕೇಳಿದ್ದೆ ಆದರೆ ಯಾವತ್ತೂ ಅಷ್ಟು ಆಳವಾಗಿ ಓದಿರಲಿಲ್ಲ. ಆದರೆ  ಈ ಪುಸ್ತಕ ಓದಿದ ಮೇಲೆ ಆತನ ಬಗ್ಗೆ ಮತ್ತಷ್ಟು ತಿಳಿಯುವ ಆಸೆಯಿಂದ ವಿವಿಧ ಪುಸ್ತಗಳ ಬಗ್ಗೆ ಹುಡುಕುತ್ತ ಅನೇಕ ರೋಚಕ ಅಂಶಗಳನ್ನು ತಿಳಿದುಕೊಂಡೆ. ಹಾಗಾಗಿ ಈ ಪುಸ್ತಕದಲ್ಲಿ ಬರುವ ಕಥೆಗಳ ಬಗ್ಗೆ ಹೇಳುವುದಕ್ಕಿಂತ ಮತ್ತಿತರ ಮೂಲಗಳಿಂದ ದೊರೆತ ಮಾಹಿತಿಗಳನ್ನು ಹಂಚಿಕೊಳ್ಳಬೇಕೆನಿಸಿದೆ. 

ಷರ್ಲಾಕ್ ಹೋಮ್ಸ್ ೧೯ ಮತ್ತು ೨೦ ನೇ ಶತಮಾನದ ನಡುವೆ ಸರ್ ಆರ್ಥರ್ ಕಾನನ್ ಡಾಯ್ಲ್ ಸೃಷ್ಟಿ ಮಾಡಿದ ಕಾಲ್ಪನಿಕ ಪಾತ್ರ.  ಷರ್ಲಾಕ್‌ ಹೋಮ್ಸ್‌ ಲಂಡನ್‌ನಲ್ಲಿ ವಾಸಿಸುತ್ತಿದ ಒಬ್ಬ " ಪತ್ತೆದಾರಿ ಸಲಹೆಗಾರ." ಈತ ಕುಶಾಗ್ರ ಮತಿ.ಪ್ರತಿಯೊಂದು ಸಂಗತಿಯನ್ನೂ ಚಾಣಾಕ್ಷತೆಯಿಂದ ಗಮನಿಸಿ,ತಾರ್ಕಿಕವಾಗಿ ಯೋಚಿಸಿ ತೀರ್ಮಾನಕ್ಕೆ ಬರುವುದರ ಮೂಲಕ ಕಷ್ಟಕರವಾದ ತನಿಖಾ ಪ್ರಕರಣಗಳನ್ನು ಪರಿಹರಿಸುತ್ತಿದ್ದ.ಸೂಕ್ಷ್ಮ ಗ್ರಹಿಕೆ ಮತ್ತು ಕುಶಲ ಚಿಂತನೆಗಾಗಿ ಖ್ಯಾತನಾಗಿದ್ದ. ಕಾನನ್‌ ಡಾಯ್ಲ್‌ ರಚಿಸಿದ ನಾಲ್ಕು ಕಾದಂಬರಿ ಮತ್ತು ಐವತ್ತಾರು ಕಿರುಕಥೆಗಳಲ್ಲಿ ಷರ್ಲಾಕ್‌ ಹೋಮ್ಸ್‌ ಪಾತ್ರವಿದೆ.1887ರ ಬೀಟನ್ಸ್‌ ಕ್ರಿಸ್ಮಸ್‌ ಆನ್ಯುಯಲ್‌ ಸಂಚಿಕೆಯಲ್ಲಿ ಒಂದು ಮತ್ತು 1890ರಲ್ಲಿ ಲಿಪಿನ್ಕಾಟ್ಸ್‌ ಮಂತ್ಲಿ ಮ್ಯಾಗಜೀನ್ ‌ನಲ್ಲಿ ಇನ್ನೊಂದು- ಹೀಗೆ ಮೊದಲ ಎರಡು ಕಥೆಗಳು (ಕಿರು ಕಾದಂಬರಿಗಳು)ಪ್ರಕಟಗೊಂಡವು. 1891ರಲ್ಲಿ ಸ್ಟ್ರ್ಯಾಂಡ್‌ ಮ್ಯಾಗಜೀನ್‌ನಲ್ಲಿ ಕಿರುಕಥೆಗಳ ಮೊದಲ ಸರಣಿಯ ಪ್ರಕಟಣೆಯೊಂದಿಗೆ ಷರ್ಲಾಕ್‌ ಹೋಮ್ಸ್‌ನ ಪಾತ್ರ ಅಪಾರ ಜನಪ್ರಿಯತೆ ಗಳಿಸಿತು. ಮುಂದಿನ ಕಿರುಗತೆಗಳ ಸರಣಿ ಮತ್ತು ಎರಡು ಕಾದಂಬರಿಗಳ ಧಾರಾವಾಹಿ 1927ರತನಕ ಹರಿದು ಬಂತು.ಈ ಕಥೆಗಳು 1875ರಿಂದ 1907ರ ವರೆಗಿನಕಾಲ ಘಟ್ಟವನ್ನು ಒಳಗೊಂಡಿದೆ. ತನಿಖೆಯ ಕೊನೆಯ ಪ್ರಕರಣ 1914ರಲ್ಲಿ ಪ್ರಕಟವಾಯಿತು. 

ಹೀಗೆ ಮಾಹಿತಿಯನ್ನು ಕಲೆಹಾಕುತಿದ್ದಾಗ ಕೆಲವು ಆಶ್ಚರ್ಯಕರ ಅಂಶಗಳು ಕಂಡವು ಅದೇ ಷರ್ಲಾಕ್ ಹೋಮ್ಸ್ ಪಾತ್ರದ ಪ್ರಭಾವ.  ಕಾನನ್ ಡಾಯ್ಲ್ ಷರ್ಲಾಕ್ ಹೋಮ್ಸ್ ಪಾತ್ರವನ್ನು ಸೃಷ್ಟಿ ಮಾಡಿದ  ಆತನ ಬುದ್ಧಿವಂತಿಕೆಯನ್ನು ಚಿತ್ರಿಸಿದ ರೀತಿ ಓದುಗರು ಅವನನ್ನು ಕಾಲ್ಪನಿಕ ವ್ಯಕ್ತಿಯೆನ್ನುವುದನ್ನು ಮರೆತು ಜೀವಂತ ವ್ಯಕ್ತಿಯೆಂದೇ ತಿಳಿಯುವಂತೆ ಮಾಡಿತಂತೆ!!!! ಕೊನೆಗೆ ಡಾಯ್ಲ್ ತನ್ನ ಪಾತ್ರಕ್ಕೆ ಅಂತ್ಯ ಕಾಣಿಸಲು ಕುಖ್ಯಾತ ಕೇಡಿಯೊಬ್ಬನ ಜೊತೆ ಕಾದಾಡುವಾಗ ಸತ್ತು ಹೋದನೆಂದು "ಷರ್ಲಾಕ್ ಹೋಮ್ಸ್ ನ ನೆನಪುಗಳು" ಎಂಬ ಕೃತಿಯಲ್ಲಿ ಚಿತ್ರಿಸಿದ. ಇದರಿಂದ ಬೇಸತ್ತ ಎಲ್ಲ ಯೂರೋಪ್, ಅಮೇರಿಕ, ಆಸ್ಟ್ರೇಲಿಯಾ ದೇಶಗಳ ಜನ ತೀವ್ರ ಪ್ರತಿಭಟನೆಯನ್ನು ಮಾಡಿದ್ದಲ್ಲದೇ, ಜನರು ತಮ್ಮ ಟೋಪಿ ಮತ್ತು ಬಟ್ಟೆಗಳಿಗೆ ಕಪ್ಪು ರಿಬ್ಬನ್ ಸಿಕ್ಕಿಸಿಕೊಂಡು ಷರ್ಲಾಕ್ ಮರಣಕಕ್ಕೆ ಸಂತಾಪ ಸೂಚಿಸಿದರಂತೆ!!!! ಇದೆಲ್ಲ ಸಾಲದಕ್ಕೆ ಓದುಗರೆಲ್ಲ ಕಥೆ ಮುಂದುವರೆಸಬೇಕೆಂದೂ ಫೋನು, ತಂತಿ ಮತ್ತು ಪತ್ರಗಳ ಮೂಲಕ ಒತ್ತಾಯಿಸಿದರು, ಅಷ್ಟು ಅಲ್ಲದೇ ಕೆಲವರಂತೂ ಬೆದರಿಕೆ ಹಾಕಿದರಂತೆ!!! ಇಷ್ಟೆಲ್ಲ ಆದಮೇಲೆ ಡಾಯ್ಲ್ ಬೇರೆ ದಾರಿ ಕಾಣದೆ ಮುಂದಿನ ಕೃತಿಯಲ್ಲಿ "ಕೇಡಿಗಳನ್ನು ಮೂರ್ಖರನ್ನಾಗಿಸಾಲು ಷರ್ಲಾಕ್ ಸತ್ತಂತೆ ನಟಿಸಿದ" ಎಂದು ಅವನನ್ನು ಬದುಕಿಸಿದರಂತೆ. ಹೀಗೆ ಷರ್ಲಾಕ್ ಬಗ್ಗೆ ಹೇಳುತ್ತಾ ಹೋದರೆ ಅಪರಿಮಿತ ರೋಚಕ ಅಂಶಗಳು ಸಿಗುತ್ತವೆ.  ಹಾಗಾಗಿ "ಶವದ ಮನೆಯಾದ ಸ್ವರ್ಗ" ದಲ್ಲಿ ಬರುವ ೫ ಕಥೆಗಳ ಬಗ್ಗೆ ಎನ್ನನು ಹೇಳದೆ ಪ್ರತಿಯೊಂದರಲ್ಲೂ ವಿಭಿನ್ನ ಮತ್ತು ಅನಿರೀಕ್ಷಿತ ತಿರುವುಗಲು ಪಡೆಯುವಂತೆ ಷರ್ಲಾಕ್  ತನಿಖೆ ನಡೆಸಿದ್ದಾನೆ  ಅದನ್ನೆಲ್ಲವನ್ನೂ ಓದಿ ಸವೆದರೆ ಚಂದ ಎನ್ನುವುದು ನನ್ನ ಭಾವನೆ. 

ಇನ್ನು ಕನ್ನಡದಲ್ಲಿ ಷೆರ್ಲಾಕ್ ಹೋಮ್ಸ್ ನ ಪತ್ತೇದಾರಿ ಸರಣಿಯ ಸಮಗ್ರ ಅನುವಾದವನ್ನು ಕನ್ನಡಕ್ಕೆ ತಂದ ವಾಸುದೇವರಾವ್ ಅವರು ಕನ್ನಡದ ಸ್ವಂತ ಕೃತಿ ಎಂಬಂತೆ ಚಿತ್ರಿಸಿದ್ದಾರೆ. ಈಗಾಗಾಲೆ ಅವರ ಅನುವಾದಿತ ಕೃತಿ "ಡ್ರಾಕುಲ" ವನ್ನು ನಾ ಓದಿದ್ದೆ, ಹಾಗಾಗಿ ಷರ್ಲಾಕ್ ಕಥೆ ಓದಿದಮೇಲೆ ಅವರ ಪ್ರತಿಭೆ ಎಂತಹ ಉನ್ನತ ಮಟ್ಟದ್ದು ಎಂದು ಮತ್ತೊಮ್ಮೆ  ಮನದಟ್ಟಾಯಿತು. 

೭ ನೇ ಜುಲೈ ೧೯೩೦ರಲ್ಲಿ ಇಂಗ್ಲೆಂಡಿನ ಕ್ರಾಸ್ಬರೋ ದಲ್ಲಿ  ಅಸುನೀಗಿದ ಡಾಯ್ಲ್ ಸೃಷ್ಟಿಸಿದ ಷರ್ಲಾಕ್ ಹೋಮ್ಸ್ ಇಂದಿಗೂ ಕಿರುಚಿತ್ರ, ಚಲನಚಿತ್ರ, ಸರಣಿ ಕಥೆ, ಬೇರೆ ಭಾಷೆಗಳಿಗೆ ಅನುವಾದ ಇತ್ಯಾದಿ ರೂಪಗಳಲ್ಲಿ ವಿಶ್ವಸಾಹಿತ್ಯದಲ್ಲಿ ಅಮರನಾಗಿದ್ದಾನೆ. 

Sunday 1 January 2017

ಶಿಖರ ಸೂರ್ಯ


ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಚಂದ್ರಶೇಖರ ಕಂಬಾರರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಅರ್ಪಿಸುತ್ತ,  ಹುಟ್ಟುಹಬ್ಬದ ದಿನವೇ ಅವರ "ಶಿಖರ ಸೂರ್ಯ" ಕೃತಿಯ ಬಗ್ಗೆ ನನ್ನ ಅಬಿನಂಭಿಪ್ರಾಯವನ್ನು ಹಂಚಿಕೊಳ್ಳಲು ಹೆಚ್ಚು ಸಂತೋಷವಾಗುತ್ತಿದೆ. ಈ ಕೃತಿಯು 2010ರಲ್ಲಿ ಭಾರತದ ಪ್ರತಿಷ್ಠಿತ ಪ್ರಶಸ್ತಿಯಾದ 2009ರ ಠಾಕೂರ್ ಸಾಹಿತ್ಯ ಪ್ರಶಸ್ತಿಯನ್ನು ಗಳಿಸಿರುವುದು ಈ ಕಾದಂಬರಿಯ ಶ್ರೇಷ್ಠತೆಯನ್ನು ಗುರುತಿಸುತ್ತದೆ. ಈ ಕಾದಂಬರಿಯು ಅತ್ಯಂತ ರೋಮಾಂಚನಕಾರಿಯಾಗಿ ಹಲವು ತಿರುವುಗಳನ್ನು ಪಡೆಯುತ್ತ ಓದುಗರಿಗೆ ಹೊಸ ಲೋಕವೊಂದನ್ನು ತೋರಿಸುತ್ತ, ಕ್ಷಣ ಕ್ಷಣಕ್ಕೂ ವಿಸ್ಮಯವನ್ನು ಮೂಡಿಸುವ ಅದ್ಭುತವಾದ ಕಲಾಕೃತಿಯಾಗಿದೆ. ಹಾಗೆ ಈ ಪುಸ್ತಕದ ಬಗ್ಗೆ ವಿಮರ್ಶಕರು ಬರೆದಿರುವ ಸಾಲುಗಳನ್ನು ಓದಿದರೇ ಇನ್ನು ಹೆಚ್ಚು ಸಂತೋಷವಾಗುತ್ತದೆ. ಇಂತಹ ಮಹಾನ್ ಕವಿ ಇನ್ನು ನೂರಾರು ವರ್ಷ ಸಂತೋಷವಾಗಿ ಬಾಳಿ ಮತ್ತಷ್ಟು  ಶ್ರೇಷ್ಠ ಕೃತಿಗಳನ್ನು ಕನ್ನಡ  ಸಾಹಿತ್ಯಕ್ಕೆ ಅರ್ಪಿಸಿ ನನ್ನಂತ ಓದುಗರನ್ನು ಸಂತೋಷಪಡಿಸಲಿ ಎಂದು ಹಾರೈಸುತ್ತೇನೆ. 

ಇನ್ನು ಕಥೆಗೆ ಬರುವುದಾದರೆ ಶಿಖರ ಸೂರ್ಯ "ಚಕೋರಿ"ಯ ಮುಂದುವರೆದ ಭಾಗವೆನ್ನಬಹುದು ಅಥವಾ ಸ್ವತಂತ್ರ ಕಾದಂಬರಿ ಎಂದಾದರು ತಿಳಿಯಬಹುದು ಎಂದು ಲೇಖಕರು ಹೇಳಿದ್ದಾರೆ. (ಆದರೆ ನಾನು "ಚಕೋರಿ" ಓದಿಲ್ಲ ಕಾರಣ "ಶಿಖರ ಸೂರ್ಯ"ನನ್ನು ನವಕೃತಿಯಾಗೆ ಓದಿದೆ). ಇಲ್ಲಿ ಬರುವ ಶಿವಾಪುರ, ಕನಕಪುರಿ ಇತಿಹಾಸಗಳು ನಿಜಕ್ಕೂ ರಮಣೀಯವಾಗಿವೆ. ಕಥಾನಾಯಕ ಚಂದಮುತ್ತ ಜಯಸೂರ್ಯನಾಗಿ ನಂತರ ಶಿಖರ ಸೂರ್ಯನಾಗಿ ಮೆರೆದ ರೋಚಕ ಕಥೆ ಇದು. ಇದೊಂದು ಮಹಾಕಾವ್ಯ ಜೊತೆಗೆ ಬೇಗ ಓದಿ ಮುಗಿಸಲು ಅಸಾಧ್ಯವಾದ ಕೃತಿಯಾಗಿದ್ದು ಇದರ ಬಗ್ಗೆ ವಿಮರ್ಶೆ ಬರೆಯಲು ಖಂಡಿತ ನನಗೆ ಸಾಧ್ಯವಿಲ್ಲ. ಹಾಗಾಗಿ ನನಗೆ ತೋಚಿದ ಕೆಲವು ಅಂಶಗಳನ್ನು ಸರಲವಾಗಿ ಹಂಚಿಕೊಳ್ಳಲು ಪ್ರಯತ್ನಿಸಿದ್ದೇನೆ.

ಚಕೋರಿಯನ್ನು ಓದಿದವರಿಗೆ ಚಿನ್ನಮುತ್ತ ಮತ್ತು ಚಂದಮುತ್ತನ ಬಗ್ಗೆ ತಿಳಿದಿರುತ್ತದೆ ಆದರೆ ಅದನ್ನು ಓದದೇ "ಶಿಖರ ಸೂರ್ಯ"ನನ್ನು ಓದುವವರಿಗೆ ಪ್ರಸ್ತಾವನೆಯೇ ಕಥೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು.  ಬದುಕಿದ್ದಾಗಲೇ ಕಥೆಯಾಗಿ, ಲಾವಣಿಯಾಗಿ, ದೇವತೆಯಾಗಿ ಪವಾಡಗಳ ಮೆರೆದ ಚಂದಮುತ್ತನ ಭಾಗಾದಿ ಚಿನ್ನಮುತ್ತ ಶಿಖರ ಸೂರ್ಯ ಕಾದಂಬರಿಯ ನಾಯಕ ಪುರುಷ. ಇವನೂ ಕಲಾವಿದವಾಗಲು ಪ್ರಯತ್ನಿಸಿ, ಸಾಧ್ಯವಾಗದೆ ಮಲೆಯಾಳಿ ಮಂತ್ರ ತಂತ್ರಾದಿ ವಾಮಾಚಾರ ಅನುಸರಿಸಿ, ಆಗಲೂ ಸಾಧ್ಯವಾಗದೆ ಗುರುಶಾಪಕ್ಕೆ ಗುರಿಯಾಗಿ ಎರಡು ಮೂರು ವರ್ಷ ಅಲ್ಲಲ್ಲಿ ಅಲೆದಾಡಿ, ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳಲೆಂದು ಕಾಡಿನ ಕಮರಿಗೆ ಜಿಗಿದು ಸ್ಮೃತಿತಪ್ಪಿ ಬಿದ್ದವನು. ಅಂಥವನನ್ನು ಶಿವಾಪುರದ ಜಟ್ಟಿಗ ಎತ್ತಿ ತಂದು ಉಪಚರಿಸಿ ಕನಕಪುರಿಯ ಇತಿಹಾಸಕ್ಕೆ ಕಾಣಿಕೆಯಾಗಿ ಕೊಟ್ಟ. ಕಾಡಿನ ಕಮರಿಯಲ್ಲಿ ಬೇಹುಷಾರಾಗಿ (ಪ್ರಜ್ಞೆತಪ್ಪಿ) ಬಿದ್ದಿದ್ದ ಚಿನ್ನಮುತ್ತನನ್ನು ಜಟ್ಟಿಗ ದಯಮಾಡಿ ಶಿವಾಪುರಕ್ಕೆ ಎತ್ತಿಕೊಂಡು ಬಂದನಲ್ಲ, ಅಲ್ಲಿಂದ ಮುಂದೆ ಶಿಖರ ಸೂರ್ಯನ ಇತಿಹಾಸ ಕಥನ ಆರಂಭವಾಗುತ್ತದೆ.

ಶಿಖರ ಸೂರ್ಯ ಕಾದಂಬರಿಯ ನಾಯಕನಾದರೂ ವಾಸ್ತವದಲ್ಲಿ ಅವನೊಬ್ಬ ಖಳನಾಯಕ ತನ್ನ ಸ್ವಾರ್ಥಕ್ಕೆ, ಸಾಧನೆಗೆ ಯಾರನ್ನು ಬಿಡದೆ ಹಿಂಸೆ ಕೊಡುತ್ತಿದ್ದರೂ ಅದು ಅವರಿಗೆ ತಿಳಿಯದೆ ಅವರ ಪಾಲಿಗೆ ಒಳ್ಳೆಯವನಾಗೆ ಇದ್ದು ತನ್ನ ಅನುಕೂಲಕ್ಕೆ ತಕ್ಕಂತೆ ನಿರ್ವಹಿಸುವಂತ ಮಹಾನ್ ಸಮಯಸಾಧಕ. ಶಿವಾಪುರದಲ್ಲಿ ಪ್ರಾಣ ಉಳಿಸಿದ ಜಟ್ಟಿಗ ಮತ್ತು ಅವನ ಹೆಂಡತಿಯನ್ನು ತನ್ನ ಸ್ವಾರ್ಥಕ್ಕೆ ನಡೆಸಿಕೊಂಡ ರೀತಿ ನಿಜಕ್ಕೂ ನೋವುಂಟು ಮಾಡುತ್ತದೆ. ಅಲ್ಲಿಂದ ಚಂದಮುತ್ತನಾಗಿದ್ದು ಜಯಸೂರ್ಯನಾಗುತ್ತಾನೆ ಅದು ಹೇಗೆ ಏಕೆ ಎನ್ನುವ ಅಂಶ ನಿಜಕ್ಕೂ ಅಚ್ಚರಿ ಉಂಟು ಮಾಡುತ್ತದೆ. ಅಲ್ಲಿಂದ ತಪ್ಪಿಸಿಕೊಂಡು ಕನಕಪುರಿಗೆ ಬರುತ್ತಾನೆ. 

ಕನಕಪುರಿಯಲ್ಲಿ ತಾನು ವೈದ್ಯೆನೆಂದು ಪರಿಚಿತನಾಗುವ ಜಯಸೂರ್ಯ. ಇಲ್ಲಿ ಶಿಖರಸೂರ್ಯನಾಗಿ ಬದಲಾಗುತ್ತಾನೆ. ಕನಕಪುರಿಗೆ ಬಂದ ಮೊದಲು ಮಾಡಿದ ಕೆಲಸವೆಂದರೆ ಬಹಳ ದಿನಗಳಿಂದ ರೋಗದಿಂದ ನರಳುತ್ತಿದ್ದ ಕನಕಪುರಿಯ ರಾಜನನ್ನು ಒಂದೇ ದಿನದಲ್ಲಿ ಗುಣಪಡಿಸಿ ಬಹುಬೇಗನೆ ಕನಕಪುರಿಯ ಜನರ ಮನಸ್ಸನ್ನು ತನ್ನತ್ತ ಸೆಳೆಯುತ್ತಾನೆ. ನಂತರ ಕನಕಪುರಿಯ ರಾಜ್ಯವೈದ್ಯನಾಗಿ ನಿಯೋಜನೆಗೊಂಡು ಅರಮನೆಯಲ್ಲುರುವವರ ದೌರ್ಬಲ್ಯಗಳನ್ನು ಬಳಸಿಕೊಂಡು ಕನಕಪುರಿಯ ರಾಜನ ಮಗಳು ಛಾಯಾದೇವಿಯನ್ನು ವಿವಾಹವಾಗುತ್ತಾನೆ. ಅಲ್ಲಿಂದ ಶುರುವಾಗುವುದು ಅವನ ಸಂಚಿನ ಕಥೆ (ಮತ್ತಷ್ಟು ರೋಚಕ). ಕನಕಪುರಿಯ ಭಾಗದಲ್ಲಿ ಬರುವ ಮಹಾರಾಣಿ, ರಾಜ, ಪ್ರದಾನಿ ಅರ್ಥಪಾಲ, ಸೇನಾಧಿಕಾರಿ ಬಡೆಗ, ವಿದ್ಯುಲ್ಲತೆ, ಗುಣಶೀಲ, ಶಿಖರ ಸೂರ್ಯನ ಮಕ್ಕಳಾದ ರವಿ ಕೀರ್ತಿ ಮತ್ತು ಮುದ್ದು ಗೌರಿ, ಇತ್ಯಾದಿ ಪಾತ್ರಗಳ ಚಿತ್ರಣ ಒಂದಕ್ಕಿಂತ ಒಂದು ಸೊಗಸಾಗಿವೆ ಹಾಗೆ ಪ್ರತಿಯೊಂದಕ್ಕೂ ಅದರದೇ ಆದ ತೂಕವಿದೆ. 

ಶಿಖರ ಸೂರ್ಯ ಮಾಡಿದ ತನ್ನ ದುರ್ವಿದ್ಯಗಳ ಪ್ರಯೋಗವು ಅನಿರೀಕ್ಷಿತ ತಿರುವುಗಳನ್ನು ಪಡೆಯುತ್ತವೆ. ಓದುವಾಗ ಮುಂದೆ ಹೀಗಿರಬಹುದೇ ಎಂದು ಯಾರಿಗೂ ಅನಿಸಿರುವುದಿಲ್ಲ 
ಹೀಗೆ ಹೇಳುತ್ತಾ ಹೋದರೆ ಎಣಿಸಲಾರದಷ್ಟು  ಅಚ್ಚರಿಗಳನ್ನು ಹೇಳಬೇಕಾಗುತ್ತದೆ ಹಾಗಾಗಿ ಅವೆಲ್ಲವನ್ನು ಓದುಗನೇ ಓದಿ ಸವೆಯಲಿ ಎಂದು ಬಯಸುವೆ. 

ಇದರ ಮತ್ತೊಂದು ವಿಶೇಷವೆಂದರೆ ೨೦೧೨ ರ ಮೈಸೂರಿನ ರಂಗಾಯಣವು ಜ. 15 ರಿಂದ 22ರ ವರೆಗೆ ನಡೆಸಲು ಉದ್ದೇಶಿಸಿರುವ `ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಡಾ ಮೊದಲ ದಿನ ಈ ನಾಟಕ ಪ್ರದರ್ಶನಗೊಂಡಿತ್ತು ಎನ್ನುವುದು ಮತ್ತೊಂದು ಹೆಮ್ಮೆ. ಕಾಕತಾಳೀಯವೆಂಬಂತೆ ಅವರ ಜನ್ಮದಿನವಾದ ಇಂದೇ ನಾನು ಶಿಖರಸೂರ್ಯನನ್ನೂ ಓದಿ ಮುಗಿಸಿದ್ದು ಹೆಚ್ಚು ಸಂತೋಷ ತಂದಿದೆ. ಮತ್ತೊಮ್ಮೆ ಚಂದ್ರಶೇಖರ ಕಂಬಾರರಿಗೆ ಜನ್ಮದಿನದ ಶುಭಾಶಯಗಳು.