Wednesday 30 November 2016

ಪ್ರೇಮ ಪೆಟ್ಟಿಗೆ

ನನ್ನ ಹೃದಯವೊಂದು ಅಂಚೆ ಪೆಟ್ಟಿಗೆ 
ಅದು ಬಯಸುವುದು ನಿನ್ನ ಪ್ರೇಮ ಪತ್ರವನ್ನೇ ಪ್ರತಿ ಘಳಿಗೆ 

ಬಾಳಿನ ಜ್ಯೋತಿಯು ನೀನಾಗಿ ಬಂದೆ 
ನನ್ನ ಕಣ್ಣೀರನ್ನೆಲ್ಲ ನಿನ್ನ ಪ್ರೀತಿಯ ಪನ್ನೀರಲಿ ತೇಲಿಸಿದೆ 
ಶ್ವೇತವರ್ಣದ ಹಿಮದಂತೆ ಶುದ್ಧ ನಿನ್ನ ಪ್ರೇಮಮಯಿ ಮನ  
ಆ ಪ್ರೇಮದಲ್ಲೇ ಮಿಂದು ಏಳುವಾಸೆ ನನಗೆ ಪ್ರತಿಕ್ಷಣ 
ನಿನ್ನ ಪ್ರೀತಿಗೆ ಕಟ್ಟಲಾರೆ ಯಾವುದೇ ನಿಖರ ಬೆಲೆ 
ಕಾರಣ ಅದಕಿರುವುದು ಶಿಖರದಂತ ಎತ್ತರದ ನೆಲೆ 

Monday 28 November 2016

ನಾ ಬರೆಯದೇ ಬಿಟ್ಟ  ಭಾವನೆಗಳು ಬಳಲುತ್ತಿವೆ
ಏಕೆ ಮರೆತೇ ನನ್ನ ನೀ ಎಂದು 
ಹೇಗೆ ಹೇಳಲಿ ನಾ ನಿಮಗೆ ಮನದ ನೋವ 
ತಣಿಸುವ ಮನಗಳೇ ದೂರಾಗಿವೆ ಇಂದು 
ಬಾರದ ಭಾವನೆಗಳ ಜೊತೆ ಸೆಣಸಾಟ 
ಎಂದಿಗೂ ಮುಗಿಯದು ಅವುಗಳ ಹೋರಾಟ 
ಆದರೂ ತೀರದು ಬರೆಯುವ ದಾಹ 
ಇದೇ ಏನೋ ಭಾವನೆಗಳ ಬಿಂಬಿಸುವ ಕವನಗಳ ಮೋಹ 

Friday 25 November 2016

ಅಪ್ಪ ಅಂದ್ರೆ ಆಕಾಶ

ಎ ಆರ್ ಮಣಿಕಾಂತರ “ಅಪ್ಪ ಅಂದ್ರೆ ಆಕಾಶ” ವನ್ನು ನಾ ಆಯ್ದುಕೊಂಡ ಕಾರಣ “ಅಪ್ಪ” (ಇಡೀ ಜಗತ್ತಲ್ಲಿ ನಾ ಎಲ್ಲರಿಗಿಂತ ಹೆಚ್ಚು ಪ್ರೀತಿಸುವ ವ್ಯಕ್ತಿ) ಎನ್ನುವ ಶಬ್ದ. ಇದೊಂದು ಅಪ್ಪ ಮಕ್ಕಳ ನಡುವಿನ ಸಂಬಂಧದ ಪುಸ್ತಕವೆಂದು ನಾ ಮೊದಲು ತಿಳಿದ್ದಿದ್ದೆ, ಆದರೆ ನನ್ನ ಊಹೆ ಸುಳ್ಳೆಂದು ಪುಸ್ತಕ ತೆರೆದಾಗಲೇ ಗೊತ್ತಾಗಿದ್ದು!!!!

ಇದೊಂದು ೩೦ ಕಥೆಗಳ ಪುಸ್ತಕ, ಆದರೆ ಕಲ್ಪನೆಗಿಂತ ಜಾಸ್ತಿ ಯಶಸ್ಸು ಕಂಡವರ ನಿಜವಾದ ಕಥೆಗಳು ಇಲ್ಲಿವೆ. ಒಂದೊಂದರಲ್ಲೂ ಒಂದೊಂದು ಸಂದೇಶ ತಿಳಿಯುತ್ತದೆ, ಸಂಬಂಧದ ಬೆಲೆ, ಜೀವನದ ಮೌಲ್ಯಗಳು ಅಪ್ಪ ಅಮ್ಮಗಳ ಪ್ರಾಮುಖ್ಯತೆ, ಅವರು ನಮಗಾಗಿ ಮಾಡುವ ತ್ಯಾಗ ಬಲಿದಾನಗಳು, ಹೆಣ್ಣು ಹುಟ್ಟಿತೆಂದು ಶಪಿಸಿದ ತಂದೆಯಿಂದ ದೂರಾಗಿ ಇಡೀ ದೇಶದಲ್ಲೇ ಪ್ರಸಿದ್ಧತೆ ಕಂಡ ಸಾಧಕಿ, ಶಾಲೆಯನ್ನೇ ಕಾಣದ ಒಬ್ಬ ಹಳ್ಳಿ ಹೈದ ಆಕಾಶದ ಎತ್ತರಕ್ಕೆ ಬೆಳೆದವನ ಕಥೆ, ಮಕ್ಕಳನ್ನು ಕಳೆದುಕೊಂಡ ತಂದೆ ತಾಯಿಗಳು ನೂರಾರು ಮಕ್ಕಳಿಗೆ ಆಸರೆಯಾದ ಕಥೆ, ಅವರಿಗೆ ಅಭಿನಂದಿಸಿದ ದೊಡ್ಡ ವ್ಯಕ್ತಿಗಳ ಪ್ರಸ್ತಾಪ ಹೀಗೆ ಹತ್ತು ಹಲವಾರು ವಿಷಯಗಳನ್ನು ಇಲ್ಲಿ ಬರೆದಿದ್ದಾರೆ, ಇವೆಲ್ಲವನ್ನು ಓದಿದಾಗ ಮನಸು ತುಂಬಿ ಕಣ್ಣೀರು ಬರುವುದಂತೂ ಖಂಡಿತ.

ಜನ ಸಾಮಾನ್ಯರಿಗೆ ಕಷ್ಟ ಬರುವುದು ಸರ್ವೇ ಸಾಮಾನ್ಯ, ಹಣಕಾಸು, ಆರೋಗ್ಯ, ಮಾನಸಿಕ ಹಿಂಸೆ, ಕಿರುಕುಳ ಯಾವದಾದರೂ ಇರಬಹುದು ಅಂತಹ ಪರಿಸ್ಥಿಯಲ್ಲಿ ಮುಳುಗಿದ್ದ ಹಲವಾರು ಜನರು ಆಶ್ಚರ್ಯಕರ ರೀತಿಯಲ್ಲಿ ಕಷ್ಟದಿಂದ ಮೇಲೆದ್ದು ಇಡೀ ಜಗತ್ತಿಗೆ ಮಾದರಿಯಾದ ಕಥೆಗಳನ್ನು ಓದಿದರೇ ಅಥವಾ ಕೇಳಿದರೆ ಕಷ್ಟಗಳನ್ನು ಎದುರಿಸುವ ಬೇರೆಯವರಿಗೂ ಮಾನಸಿಕ ಸ್ಥೈರ್ಯ ಬರುತ್ತದೆ.

ಈ ರೀತಿಯಲ್ಲಿ ನೋಡಿದರೆ “ಅಪ್ಪ ಅಂದ್ರೆ ಆಕಾಶ” ಪುಸ್ತಕ ಮಾನಸಿಕ ಸ್ಥೈರ್ಯ ಕಳೆದುಕೊಂಡವರಿಗೆ (ಕೆಲವೊಮ್ಮೆ ನನಗೂ ಸೇರಿಸಿ) ಕಣ್ಣು ತೆರೆಸುವ ಅದ್ಭುತ ಶಕ್ತಿ ಎಂದರೆ ತಪ್ಪಾಗಲಾರದವು ಎನ್ನುವುದು ನನ್ನ ಅಭಿಪ್ರಾಯ. ಇಂತಹ ಉದಾಹರಣೆಯನ್ನು ಲೇಖಕರ “ನನ್ನ ಮಾತು” ಅಂಕಣದಲ್ಲಿ ಕಾಣಬಹುದು. ಋಣಾತ್ಮಕ ಮನಸ್ಥಿತಿಯಿಂದ ಬಳಲುವವರಿಗೆ ಇದೊಂದು ಅದ್ಭುತವಾದ ಔಷಧಿ. ಆದಷ್ಟು ಬೇಗ ಇದೆ ಲೇಖಕರು ಬರೆದ “ಅಮ್ಮ ಹೇಳಿದ ೮ ಸುಳ್ಳುಗಳು” ಪುಸ್ತಕವನ್ನು ಓದಬೇಕೆಂಬ ನನ್ನಾಸೆಯನ್ನು ವ್ಯಕ್ತಪಡಿಸುತ್ತ ಮಣಿಕಾಂತ್ ಅವರಿಗೆ ತುಂಬು ಹೃದಯದ ನಮನಗಳನ್ನು ಅರ್ಪಿಸುತ್ತಿದ್ದೇನೆ.

ಮೂಕ ಧಾತು




ಕೆ ಎನ್ ಗಣೇಶಯ್ಯನವರ “ಮೂಕ ಧಾತು” ವೈಜ್ನ್ಮ್ಯಾನಿಕ ಅಂಶಗಳಿಂದ ಕೂಡಿದ ಕುತೂಹಲಕಾರಿ ಪುಸ್ತಕ. ವೃತ್ತಿಯಲ್ಲಿ ಕೃಷಿ ವಿಜ್ಞಾನಿಯಾದ ಇವರ ಬರವಣಿಗೆಯಲ್ಲಿ ಹೆಚ್ಚಾಗಿ ಕಾಣುವುದು ಇತಿಹಾಸಕ್ಕೆ ಸ೦ಬ೦ಧಪಟ್ಟ ವಿಷಯಗಳು. ಆದರೆ “ಮೂಕ ಧಾತು”ವಿನಲ್ಲಿ ಇತಿಹಾಸಕ್ಕಿ೦ತ ವಿಜ್ಞಾನಕ್ಕೆ ಹೆಚ್ಚು ಒತ್ತು ಇದೆ. ಮನುಷ್ಯನ ವಿಕಾಸದ ಹಲವು ಮಜಲುಗಳನ್ನು ಹಾಗು ಜೈವಿಕ ತ೦ತ್ರಜ್ಣಾನದಲ್ಲಿನ ಇತ್ತೀಚಿನ ಬೆಳವಣಿಗೆಳನ್ನು ತು೦ಬಾ ಸರಳ ರೀತಿಯಲ್ಲಿ ಹೇಳಿದ್ದಾರೆ.

ವಿಜ್ಞಾನದ ವಿಷಯವಾದರೂ ಓದಲು ತು೦ಬಾ ಕುತೂಹಲಕಾರಿಯಾಗಿದೆ. ಮೊದಲ ಪುಟ ಶುರುವಾದರೆ ಮುಗಿಯುವವರೆಗೆ ಬಿಡಲು ಮನಸಾಗದ ಪುಸ್ತಕವಿದು ಏಕೆಂದರೆ ಅಷ್ಟು ರೋಚಕ ಅಂಶಗಳಿಂದ ಕೂಡಿವೆ. ಇವರ ಬರವಣಿಗೆಯ ಮತ್ತೊ೦ದು ವೈಶಿಷ್ಟ್ಯವೆ೦ದರೆ ಇವರು ಹೇಳುವ ವಿಷಯಕ್ಕೆ ಸ೦ಬ೦ಧಪಟ್ಟ ಮಾಹಿತಿಯನ್ನು(ರೆಫ಼ರೆನ್ಸ್) ಅದೇ ಹಾಳೆಯಲ್ಲಿ ಕೊಟ್ಟಿರುತ್ತಾರೆ. ಇದರಿ೦ದ ಓದುಗರಿಗೆ ಮಾಹಿತಿಯ ಮೂಲಗಳು ಸಹ ತಿಳಿಯುತ್ತವೆ. ಇಲ್ಲಿ ಕಥೆಯ ಎಳೆಯನ್ನು ಹೇಳುವುದು ಕಷ್ಟ ಏಕೆಂದರೆ ವಿಮರ್ಶೆಗಳಲ್ಲಿ ಹೇಳಬಹುದಾದಂತಹ ಕಥೆ ಇಲ್ಲಿಲ್ಲ. ಇದೊಂದು ವೈಜ್ಞಾನಿಕ ಅಂಶಗಳನ್ನೇ ಮೂಲವಾಗಿಟ್ಟುಕೊಂಡು ಕಾದಂಬರಿ. ಜೊತೆಗೆ ಪುಟದಿಂದ ಪುಟಕ್ಕೆ ಕುತೂಹಲವೇ ಓದುಗರನ್ನು ಆಳುವ ಅರಸ.

ಈ ಕಾದಂಬರಿಯಲ್ಲಿ ಮೂರು ವಿಷಯಗಳು ಮುಖಾಮುಖಿಯಾಗಿ ತರಲು ಪ್ರಯತ್ನಿಸುವುದನ್ನು ಓದುಗರು ಗಮನಿಸುತ್ತಾರೆ. ದೇವರು ಧರ್ಮ ಮತ್ತು ವಿಜ್ಞಾನ, ಆಸೆ ಮತ್ತು ನಾಗರಿಕತೆ, ಸ್ವಾರ್ಥ ಮತ್ತು ಜೀವ ಈ ಅಷ್ಟು ವಿಷಯಗಳು ಮಾನವನ ಜೀವಕ್ಕೂ ಜೀವನಕ್ಕೂ ತುಂಬಾ ಅವಶ್ಯಕ ಹಾಗೆ ಮಾನವನ ವಿಕಾಸವಾದಕ್ಕೂ ಹೇಗೆ ಕಾರಣವಾಗಿವೆ ಎನ್ನುವುದು ತುಂಬಾ ನವಿರಾಗಿ ಚಿತ್ರಿಸಿದ್ದಾರೆ. ನಿಜಕ್ಕೂ ಇದು ಸಂಶೋಧನೆ, ಇತಿಹಾಸ, ವಿಜ್ಞಾನ ಮತ್ತು ವಾಸ್ತವ ಎಲ್ಲದರುಗಳ ಮಿಶ್ರಣಗಳ ಅದ್ಭುತ ಕಾದಂಬರಿ.

Thursday 24 November 2016

ವಿಪರ್ಯಾಸ

ಯಾರಿಗೂ ಬೇಡವಾದ ಜೀವದ ಆತ್ಮ 
ಭಾವನೆಗಳಿದ್ದರೂ ಬರೆಯಲಾಗದೆ ಸೋತ ಕವಿಯಂತೆ 
ಎರಡಕ್ಕೂ ಕಾಡುತಿದೆ ಮುಕ್ತಿಯ ಚಿಂತೆ 

Saturday 5 November 2016

ಬರೆಯದೇ ಕಳೆದ ದಿನವೆಲ್ಲ 
ಮನದಲ್ಲಿ ಸೂತಕದ ಛಾಯೆ 
ಏಕೆ ಹೀಗೆ ಎಂದು ಯೋಚಿಸಿದಾಗ ತಿಳಿಯಿತು 
ಇದೆಲ್ಲ ಆ ಕವನದ ಮಾಯೆ