Friday, 25 November 2016

ಅಪ್ಪ ಅಂದ್ರೆ ಆಕಾಶ

ಎ ಆರ್ ಮಣಿಕಾಂತರ “ಅಪ್ಪ ಅಂದ್ರೆ ಆಕಾಶ” ವನ್ನು ನಾ ಆಯ್ದುಕೊಂಡ ಕಾರಣ “ಅಪ್ಪ” (ಇಡೀ ಜಗತ್ತಲ್ಲಿ ನಾ ಎಲ್ಲರಿಗಿಂತ ಹೆಚ್ಚು ಪ್ರೀತಿಸುವ ವ್ಯಕ್ತಿ) ಎನ್ನುವ ಶಬ್ದ. ಇದೊಂದು ಅಪ್ಪ ಮಕ್ಕಳ ನಡುವಿನ ಸಂಬಂಧದ ಪುಸ್ತಕವೆಂದು ನಾ ಮೊದಲು ತಿಳಿದ್ದಿದ್ದೆ, ಆದರೆ ನನ್ನ ಊಹೆ ಸುಳ್ಳೆಂದು ಪುಸ್ತಕ ತೆರೆದಾಗಲೇ ಗೊತ್ತಾಗಿದ್ದು!!!!

ಇದೊಂದು ೩೦ ಕಥೆಗಳ ಪುಸ್ತಕ, ಆದರೆ ಕಲ್ಪನೆಗಿಂತ ಜಾಸ್ತಿ ಯಶಸ್ಸು ಕಂಡವರ ನಿಜವಾದ ಕಥೆಗಳು ಇಲ್ಲಿವೆ. ಒಂದೊಂದರಲ್ಲೂ ಒಂದೊಂದು ಸಂದೇಶ ತಿಳಿಯುತ್ತದೆ, ಸಂಬಂಧದ ಬೆಲೆ, ಜೀವನದ ಮೌಲ್ಯಗಳು ಅಪ್ಪ ಅಮ್ಮಗಳ ಪ್ರಾಮುಖ್ಯತೆ, ಅವರು ನಮಗಾಗಿ ಮಾಡುವ ತ್ಯಾಗ ಬಲಿದಾನಗಳು, ಹೆಣ್ಣು ಹುಟ್ಟಿತೆಂದು ಶಪಿಸಿದ ತಂದೆಯಿಂದ ದೂರಾಗಿ ಇಡೀ ದೇಶದಲ್ಲೇ ಪ್ರಸಿದ್ಧತೆ ಕಂಡ ಸಾಧಕಿ, ಶಾಲೆಯನ್ನೇ ಕಾಣದ ಒಬ್ಬ ಹಳ್ಳಿ ಹೈದ ಆಕಾಶದ ಎತ್ತರಕ್ಕೆ ಬೆಳೆದವನ ಕಥೆ, ಮಕ್ಕಳನ್ನು ಕಳೆದುಕೊಂಡ ತಂದೆ ತಾಯಿಗಳು ನೂರಾರು ಮಕ್ಕಳಿಗೆ ಆಸರೆಯಾದ ಕಥೆ, ಅವರಿಗೆ ಅಭಿನಂದಿಸಿದ ದೊಡ್ಡ ವ್ಯಕ್ತಿಗಳ ಪ್ರಸ್ತಾಪ ಹೀಗೆ ಹತ್ತು ಹಲವಾರು ವಿಷಯಗಳನ್ನು ಇಲ್ಲಿ ಬರೆದಿದ್ದಾರೆ, ಇವೆಲ್ಲವನ್ನು ಓದಿದಾಗ ಮನಸು ತುಂಬಿ ಕಣ್ಣೀರು ಬರುವುದಂತೂ ಖಂಡಿತ.

ಜನ ಸಾಮಾನ್ಯರಿಗೆ ಕಷ್ಟ ಬರುವುದು ಸರ್ವೇ ಸಾಮಾನ್ಯ, ಹಣಕಾಸು, ಆರೋಗ್ಯ, ಮಾನಸಿಕ ಹಿಂಸೆ, ಕಿರುಕುಳ ಯಾವದಾದರೂ ಇರಬಹುದು ಅಂತಹ ಪರಿಸ್ಥಿಯಲ್ಲಿ ಮುಳುಗಿದ್ದ ಹಲವಾರು ಜನರು ಆಶ್ಚರ್ಯಕರ ರೀತಿಯಲ್ಲಿ ಕಷ್ಟದಿಂದ ಮೇಲೆದ್ದು ಇಡೀ ಜಗತ್ತಿಗೆ ಮಾದರಿಯಾದ ಕಥೆಗಳನ್ನು ಓದಿದರೇ ಅಥವಾ ಕೇಳಿದರೆ ಕಷ್ಟಗಳನ್ನು ಎದುರಿಸುವ ಬೇರೆಯವರಿಗೂ ಮಾನಸಿಕ ಸ್ಥೈರ್ಯ ಬರುತ್ತದೆ.

ಈ ರೀತಿಯಲ್ಲಿ ನೋಡಿದರೆ “ಅಪ್ಪ ಅಂದ್ರೆ ಆಕಾಶ” ಪುಸ್ತಕ ಮಾನಸಿಕ ಸ್ಥೈರ್ಯ ಕಳೆದುಕೊಂಡವರಿಗೆ (ಕೆಲವೊಮ್ಮೆ ನನಗೂ ಸೇರಿಸಿ) ಕಣ್ಣು ತೆರೆಸುವ ಅದ್ಭುತ ಶಕ್ತಿ ಎಂದರೆ ತಪ್ಪಾಗಲಾರದವು ಎನ್ನುವುದು ನನ್ನ ಅಭಿಪ್ರಾಯ. ಇಂತಹ ಉದಾಹರಣೆಯನ್ನು ಲೇಖಕರ “ನನ್ನ ಮಾತು” ಅಂಕಣದಲ್ಲಿ ಕಾಣಬಹುದು. ಋಣಾತ್ಮಕ ಮನಸ್ಥಿತಿಯಿಂದ ಬಳಲುವವರಿಗೆ ಇದೊಂದು ಅದ್ಭುತವಾದ ಔಷಧಿ. ಆದಷ್ಟು ಬೇಗ ಇದೆ ಲೇಖಕರು ಬರೆದ “ಅಮ್ಮ ಹೇಳಿದ ೮ ಸುಳ್ಳುಗಳು” ಪುಸ್ತಕವನ್ನು ಓದಬೇಕೆಂಬ ನನ್ನಾಸೆಯನ್ನು ವ್ಯಕ್ತಪಡಿಸುತ್ತ ಮಣಿಕಾಂತ್ ಅವರಿಗೆ ತುಂಬು ಹೃದಯದ ನಮನಗಳನ್ನು ಅರ್ಪಿಸುತ್ತಿದ್ದೇನೆ.

No comments: