Friday 25 December 2015

ನನ್ನ ಹಿಂದೆ ಹಿಂದೆಯೇ ಸುತ್ತುವೆ  ಏಕೆ ಹುಡುಗ 
ಮುಂದೆ ಬಂದು ಹೇಳಬಾರದೇ ನಿನ್ನೊಲವಿನ ದುಗುಡ 
ನಾ ಬಯಸಿದ ಪ್ರೀತಿಯೇ ನೀನಾಗಿರುವಾಗ 
ಬೇಡೆನ್ನಲಾರೆ ನಿನ್ನ ನಾನು 
ಸುಂದರ ಬಾಳನು ಎಳೆಯಲು ಬೇಕಾಗಿದೆ 
ನಿನ್ನ ಒಲವಿನ ತೇರು 
ಆ ತೇರಲಿ ನಾವು ಒಂದಾಗಿ ಸಾಗಿದರೆ 
ಅದೇ ನಮಗೆ ನೆಮ್ಮದಿಯ ಸೂರು 

Tuesday 22 December 2015

ನನ್ನ ಮನವೆಂಬ ಕೊಳದಲ್ಲಿ ಕಾಣುವ ಪ್ರತಿಬಿಂಬ ನೀನೆ 
ನಾ ಹಾಡುವ ಹಾಡಲಿ ಹೊರಡುವ ದನಿಯು ನೀನೆ 
ನಾ ಗೀಚುವ ಕವಿತೆಗಳಲ್ಲಿ ಬೆರೆತಿರುವ ಭಾವಗಳು ನೀನೆ 
ತನು ಮನಗಳ ಬೇರಲ್ಲಿ ಬೆಸೆದಿರುವ ನಿನ್ನ ಪ್ರೇಮ ಪರ್ವತ 
ಸದಾ ನನಗಾಗಿ ಸೀಮಿತ ಎನ್ನುವ ಸ್ವಾರ್ಥಿಯೂ ನಾನೇ 

Monday 21 December 2015

ಭರವಸೆಗಳಿಲ್ಲದ ಮನದಲ್ಲಿ ಹೊಸ ಗುರಿಯ ಪ್ರವೇಶ 
ಎಲ್ಲೋ ಪಿಸುಗುಡುತ್ತಿದೆ ಒಂದು ಧನಾತ್ಮಕ ಸಂದೇಶ 
ಋಣಾತ್ಮಕ ಘಟನೆಗಳೇ  ಆಳಿದವು ನನ್ನ ಜೀವನವ 
ಅವನ್ನೆಲ್ಲ ಸಂಹಾರ ಮಾಡುವುದೇನೋ ಈ ಸಂದೇಶ
ಆಸೆಯಿಂದ ಕಾಯುತಿರುವೆ ಆ ಅಮೃತ ಘಳಿಗೆಗಾಗಿ 
ಈಗಲಾದರೂ ಕರುಣಿಸು ವಿಧಿಯೇ ಈ ನೊಂದ ಮನಸಿಗಾಗಿ 

Friday 18 December 2015

ನಾ ಏನು ಮಾಡಲಿ ಬರೆಯಲೇನು ತೋಚುತ್ತಿಲ್ಲ 
ಹಾಗೆಂದು ಸುಮ್ಮನಿರಲೂ ಆಗುತ್ತಿಲ್ಲ 
ಹುಡುಕಿ ಹುಡುಕಿ ಸಾಕಾಗಿದೆ ಪದಗಳ ದಂಡನು 
ಸಿಕ್ಕರೆ ಕೊಟ್ಟುಬಿಡಿ ನನಗೆ ಆ ಪದವನ್ನು 
ಕೊಂಚವಾದರೂ ನಿಟ್ಟುಸಿರು ಬಿಡುವುದೇನೋ 
ಪರದಾಡುತ್ತಿರುವ ನನ್ನ ಮನಸಿನ್ನು 

Tuesday 15 December 2015

ನನ್ನೊಡಲಲ್ಲಿ ಬಚ್ಚಿಟ್ಟ ಪ್ರೀತಿಯ ಅಕ್ಷರದಲ್ಲಿ ಬಿಚ್ಚಿಡುತ್ತಿದ್ದೆ 
ಕಾರಣ ಏಕೋ ಮಾತುಗಳು ಮೌನವಾಗುತ್ತಿವೆ 
ಬರೆದಿದ್ದಲ್ಲ ಹಾಳೆಗೆ ಅಂಟುವುದು ಆದರೆ ಸೇರಬೇಕಾದ 
ಮನಸಿಗೆ ಸೇರುವುದು ಯಾವಾಗ ನೀ ಒಲವೆ 
ಮಾತಿಲ್ಲದೇ ಮೌನವಾಗುತ್ತಿರುವ ನನ್ನ ಮನಸು 
ಶಾಶ್ವತ ಮೌನಕ್ಕೆ ಸೇರುವ ಮುನ್ನ ಬಂದು 
ಅಪ್ಪಬಾರದೇ ನೀ ಎನ್ನ ಒಲವ ಒಮ್ಮೆ 
ಬೇಡೆನು ನಾ ನಿನಗೆ ಏನನ್ನೂ ಮತ್ತೊಮ್ಮೆ 

Monday 14 December 2015

"ಯಾವುದು ನಮ್ಮದೋ ಅದು ನಮ್ಮ ಬಳಿಯೇ ಇರುತ್ತದೆ, 
ಇತರರದು ಇತರರಲ್ಲಿಯೇ ಇರುತ್ತದೆ" 
ಇದನರಿತು ನಾವು ಬದುಕಿದರೆ ನೆಮ್ಮದಿಯ ಬದುಕು ಸದಾ ನಮ್ಮದಾಗಿರುತ್ತದೆ  

Monday 7 December 2015

ನನ್ನ ಭಾವನೆಗಳನು ಹೇಳಲು ನೀನೆ ತಾನೇ ಗತಿ 
ನೀನೆ ದೂರವಾದರೆ ಏನಾಗುವುದೋ ನನ್ನ ಮತಿ 
ನೀ ಹೇಗಿದ್ದರೂ ಎಲ್ಲಿದ್ದರೂ ಸರಿಯೇ ನನ್ನ ಕೋರಿಕೆಯೊಂದೇ 
ಬರೆದಷ್ಟು ಬರೆಸು ಅತ್ತಾಗ ಸಂತೈಸು ನಗುವಾಗ ಹರಸು 
ನೀನೆ ನನ್ನ ಭಾವಗಳ ಬಿಂಬ ನೀನಿರದಿದ್ದರೆ ನಾನೊಂದು ಕಲ್ಲಿನ ಕಂಬ 
ಕವನವೇ ಏನೆಂದು ಹೇಳಲಿ ನಿನಗೆ ಎಷ್ಟೆಂದು ಹೊಗಳಲಿ 
ಪ್ರತೀ ಭಾವನೆಗಳ ಬಿಂಬಿಸಿರುವೆ ನಿನ್ನೊಂದಿಗೆ 
ಎಂದೆಂದಿಗೂ ದೂರಾಗದಿರು ನನ್ನ ಉಸಿರು ನಿಲ್ಲುವವರೆಗೆ 

Sunday 6 December 2015

ನನ್ನಿಂದಲೇ ಕವಿತೆ ಬರೆಸಿಕೊಳ್ಳುವೆಯಲ್ಲ ಹುಡುಗ 
ನೀ ನನಗಾಗಿ ಬರೆಯುವುದು ಯಾವಾಗ 
ನಿನ್ನ ಪ್ರೇಮದ ಚಿತ್ತಾರವ  ನನ್ನ ಕವನದ ಕುಂಚದಲ್ಲಿ 
ಬಿಡಿಸುವ ಆಸೆಯಾಗಿದೆ ಬಣ್ಣಗಳ ಆಯ್ಕೆ ಶುರುವಾಗಿದೆ 
ನಾ ಚಿತ್ರ ಬಿಡಿಸುವಲ್ಲಿ ಮಗ್ನಳಾದರೆ ಕವನ ಬರೆಯುವರು ಯಾರು 
ಅದಕ್ಕೆಂದೇ ಕೋರುವೆ ಇನಿಯ ನಾ ಬರೆಯುವೆ ನಿನ್ನೊಲವಿನ ಚಿತ್ರವ 
ನೀ ಬರೆದುಬಿಡು ಒಮ್ಮೆ ಅದಕೆ ಹೊಂದುವ ಸರಳ ಸುಂದರ ಕವನವ 

Friday 4 December 2015

ಕನಸಿನ ಪೆಟ್ಟಿಗೆಯಲ್ಲಿ ಬಚ್ಚಿಟ್ಟ ಆಸೆಗಳೆಲ್ಲ 
ಮನಸಿನ ಸಂತಸವ ಬಿಚ್ಚಿಡುತ್ತಿವೆ 
ನವಿರಾಗಿ ಹೆಣೆದ ಕನಸೆಂಬ ಹೂವಿನ ಹಾರವು 
ನನಸಿನ  ಹೂವಾಗಿ ಒಂದೊಂದೇ ಮುಡಿಗೆ ಏರುತಿವೆ 
ಸಾಧನೆಯ ಸಾಗರ ಬಾ ಎಂದು ಕರೆಯುತಿದೆ 
ಧುಮುಕುವ ಆಸೆಯು ಹಸಿರಾಗಿ ಹರಿಯುತಿದೆ 
ಜಯ ಸಿಗುವುದೋ ಸೋಲಾಗುವುದೋ ಗೊತ್ತಿಲ್ಲ 
ಶ್ರಮಿಸುತ್ತಲೇ ಗುರಿ ಮುಟ್ಟುವ ದಾರಿಯ ಮರೆಯುವುದಿಲ್ಲ 

Wednesday 2 December 2015

ಸ್ನೇಹದ ವೇಷ ಧರಿಸಿ ಪ್ರೀತಿಸುವರು ಕೆಲವರು 
ಪ್ರೀತಿಯ ವೇಷ ಧರಿಸಿ  ಭಾವನೆಯ ಜೊತೆ ಆಟವಾಡುವರು ಹಲವರು 
ಸ್ನೇಹ ಪ್ರೀತಿಯ ಕಣ್ಣಾಮುಚ್ಚಾಲೆಯಲ್ಲಿ 
ನೋವು ತಿನ್ನುವ ಮನಗಳು ಸಾವಿರಾರು 
ಅತ್ತರೆ ಕರಗುವುದಿಲ್ಲ ಆ ನೋವು ನಕ್ಕರೆ ಅರಗುವುದಿಲ್ಲ ಆ ಸಂಕಟ 
ಬಾಳೆಂಬ ಬಂಡಿಯಲ್ಲಿ ಸ್ನೇಹ ಪ್ರೀತಿಗಳೇ ಚಕ್ರಗಳು 
ಎರಡು ಕೈಕೊಟ್ಟರೆ ಕುಸಿಯದಿರದೇ ಬಾಳಬಂಡಿಯು...??? 

Monday 30 November 2015

ಮರಳಿ ಗೂಡಿಗೆ ಹೊರಡುವ ಸಮಯ ಬಂದಿದೆ 
ಇಲ್ಲಿದ್ದ ಪ್ರತೀಕ್ಷಣ ನಗುತಾ ನಲಿಯುತ ಅಳುತ 
ಸುಖ ದುಃಖಗಳ ಹಂಚಿಕೊಂಡು ತೋಚಿದ್ದು ಗೀಚಿಕೊಂಡು 
ನಿಮ್ಮ ಮನದ ಮೂಲೆಯಲ್ಲೊಂದು ಜಾಗವ ಹುಡುಕುತಿದ್ದೆ 
ಎಷ್ಟರ ಮಟ್ಟಿಗೆ ದಕ್ಕುವುದೋ ನಿಮ್ಮ ವಾತ್ಸಲ್ಯ ನಾ ಅರಿಯೆ 
ಹೋಗುವ ಮುನ್ನ ಮನಪೂರ್ತಿ ಬೇಡುವೆ ನಿಮ್ಮ ಕ್ಷಮೆಯನ್ನ 
ಪ್ರತೀ ಜನ್ಮಕೂ ಬೇಡುವೆ  ನಿಮ್ಮ  ಮಮತೆಯ ಮಡಿಲನ್ನ 

Wednesday 25 November 2015

ಹಾರುವ ಹಕ್ಕಿಗೆ ಯಾರ ಹಂಗಿಲ್ಲ ಬೀಸುವ ಗಾಳಿಗೆ ಬೇಲಿಯೂ ಇಲ್ಲ 
ಹರಿವ ನೀರನು ತಡೆಯುವ ಶಕ್ತಿಯು ಇಲ್ಲ 
ಸುಡುವ ಬೆಂಕಿಯ ತಂಪಾಗಿಸುವ ಕಲೆ ಗೊತ್ತಿಲ್ಲ 
ಆದರು ಮನುಜರಾದ ನಮಗೆ ನಂದು ನಂದು 
ಎನ್ನುವ ಅಹಂಕಾರ ಹೋಗುವುದಿಲ್ಲ 
ಸದಾ ಜಾತಿ ಮತ ದ್ವೇಷ ಕ್ರೌರ್ಯ ಅಸಹಿಷ್ಣುತೆ ಎಂದು 
ಕೂಗಾಡುತ್ತಾ ಪ್ರಕೃತಿಯನ್ನು ವಿಕೃತಗೊಳಿಸುತ್ತ 
ಮೂಕಜೀವಿಗಳ ನೆಮ್ಮದಿ ಹಾಳುಮಾಡುತ್ತ ನಿಸರ್ಗವನ್ನು ಕೊಲ್ಲುತ್ತಿದ್ದರೆ 
ಭೂತಾಯಿಯ ಶಾಪಕ್ಕೆ ನಾವೆಲ್ಲ ಬಲಿಯಾಗದೆ ಇರುವುದಿಲ್ಲ 

Monday 23 November 2015

ನನ್ನಯ ಕವನಕ್ಕೆ ಸ್ಫೂರ್ತಿ ನಿಮ್ಮ ಪ್ರೀತಿ 
ತಪ್ಪಿದ್ದಾಗ ತಿದ್ದಿ ಹೇಳಿದಿರಿ ಬುದ್ಧಿ 
ಸಂತಸವಾದಾಗ ಹರಸಿ ಹಾರೈಸಿದಿರಿ 
ಸ್ನೇಹ-ಪ್ರೀತಿ, ಮಳೆ-ಬೆಳೆ, ನೋವು-ನಲಿವು 
ಪ್ರಕೃತಿ-ವಿಕೃತಿ, ಭೂಮಿ-ಆಕಾಶ 
ಒಂದಲ್ಲ ಎರಡಲ್ಲ ನಾ ಬರೆದ ಕವಿತೆಗಳು 
ಸಿಕ್ಕಿವೆ ನನಗೆ ಸಾವಿರಾರು ಹೊಗಳಿಕೆ ಹಾರೈಕೆಗಳು 
ಏನೆಂದು ಬರೆದು ಧನ್ಯವಾದ ಅರ್ಪಿಸುವುದೋ ತೋಚದು 
ಆದರು ಇರಲಾಗುತ್ತಿಲ್ಲ ನಿಮಗೆ ವಂದಿಸದೇ ಇರಲು 
ಮನತುಂಬಿ ಹೇಳುತಿರುವೆ ನಾ ಇಂದು 
ನಿಮ್ಮೆಲ್ಲರ ಪ್ರೀತಿ ಅಭಿಮಾನಕ್ಕೆ ಚಿರಋಣಿಯಾಗಿರುವೆ ಎಂದೆಂದೂ 

Sunday 22 November 2015

ತೋಚಿದ ಕವಿತೆಯ ಗೀಚುತ್ತಾ ಎಷ್ಟು ದಿನ ಕಳೆಯಲಿ 
ನನ್ನ ಭಾವನೆಗಳನು ಅಕ್ಷರಗಳಲಿ ಬೆರೆಸಿ ಕವನಗಳಾಗಿ ಪೋಣಿಸಿ 
ಬಿಳಿ  ಹಾಳೆಯ ಮೇಲೆ ಬಣ್ಣ ಬಣ್ಣದ ಭಾವನೆಗಳನು ಬಿಂಬಿಸಲು 
ಬೇಕಾಗಿದೆ ನನಗೆ ಪ್ರೀತಿಯೆಂಬ ಲೇಖನಿಯು 
ಅದರಲ್ಲಿ ತುಂಬಿರಬೇಕು ಮುಗಿಲಷ್ಟು ಪ್ರೇಮದ ಶಾಹಿಯು 
ಸಿಕ್ಕರೆ ಅಂತಹ ಸೌಭಾಗ್ಯ ನನಗೆ 
ಬರೆಯುತ್ತಲೇ ಇರುವೆ ಒಲವಿನ ಗೀತೆಯ ನಾನಿರುವವರೆಗೆ 

Thursday 19 November 2015

ಅಹಂಕಾರದಿ ಮೆರೆಯಬೇಡ 
ಪ್ರೀತಿ ಸ್ನೇಹಗಳ ಮರೆಯಬೇಡ 
ಸಿಟ್ಟು ಸೆಡವುಗಳಿಗೆ ಬಲಿಯಾಗಬೇಡ 
ಸಹನೆಯ ಕಳೆದುಕೊಳ್ಳಬೇಡ 
ಶ್ರದ್ಧೆ ವಿನಯವೇ ನಮ್ಮ ಒಡವೆಗಳು 
ಬೇಡ ನಮಗೆ ಬೇರೆ ಗೊಡವೆಗಳು 
ಕಾರಣ ಆಕಾಶದ ಎತ್ತರಕ್ಕೆ ನಾವು ಬೆಳೆದರೂ 
ಮರಳಿ ಸೇರುವುದು ಮಣ್ಣಿಗೆ 

Wednesday 18 November 2015

ದೀಪದಿ0ದ ದೀಪವ ಹಚ್ಚಿ 
ಮನಸಿ0ದ ಮನಸಿಗೆ ಪ್ರೀತಿಯ ಹ0ಚಿ 
ನಿಮ್ಮ ನಮ್ಮೆಲ್ಲರ ಬಾಳು ನ0ದಾದೀಪದ0ತೆ 
ಮಿನುಗುತಿರಲಿ ಎ0ದು ಹಾರೈಸಿ 
ಆಚರಿಸೋಣ ದೀಪಾವಳಿಯ
ಸಮಯ ಓಡುವುದೂ ಇಲ್ಲ ನಿಲ್ಲುವುದಿಲ್ಲ 
ಎಲ್ಲವು ನಮ್ಮ ಭ್ರಮೆಯಷ್ಟೆ... 
ಓಡುವ ಸಮಯವ ನಿಲ್ಲಿಸಲು ನಮ್ಮಿ0ದಾಗದು 
ನಿ0ತ ಸಮಯವ ಓಡಿಸಲೂ ಆಗದು... 
ಕಾಲಕ್ಕೆ ತಕ್ಕ0ತೆ ಆಡುವುದಷ್ಟೇ ನಮ್ಮ ಕಾಯಕ...
ಆಗೊಮ್ಮೆ ಕರೆದಿದ್ದೆ  ಬಾ ಮಳೆಯೇ ಬಾ ಎಂದು 
ಇಂದು ನಿನ್ನ ಬೇಡುತಿರುವೆ ಹೋಗು ಮಳೆಯೇ ಹೋಗೆಂದು 
ಜಿನುಗುವ ಹನಿಯು ಕಣ್ಣಿಗೆ ತಂಪಾಗಿ ಕಂಡರೆ 
ಆಗುತ್ತಿದೆ ಜನರ ಜೀವನಕ್ಕೆ ಬಹು ತೊಂದರೆ 
ಭಾರೀ ಮಳೆಯೋ ಚಂಡಮಾರುತವೋ ಅಬ್ಬಾ 
ನಿಸರ್ಗವೇ ಸಾಕು ಮಾಡು ನಿನ್ನ ರೌದ್ರನರ್ತನವ 
ಬದುಕಿಸಿ ಬಾಳಿಸು ನೊಂದ ಸಂತ್ರಸ್ತರ 
ಕೊಲ್ಲದಿರು ನಿನ್ನ ಸಹನೆಯ 

Sunday 8 November 2015

ಮುಂಜಾವು ಇಂದು ಮಂಜಿನಿಂದಲೇ ಕೂಡಿತ್ತು 
ಹಸಿರೆಲೆಯ ಮೇಲೆ ಅರಳಿದ ಹೂಗಳೆಲ್ಲವೂ 
ಅಲಂಕೃತಗೊಂಡಿವೆ ಇಬ್ಬನಿಯ ಹನಿಗಳಿಂದ 
ಭೂದೇವಿಯು ತಂಪಾಗಿದ್ದಳು ವರುಣ ಸುರಿಸಿದ ಹನಿಮಳೆಯಿಂದ 
ಆಹಾ ಬೆಂಗಳೂರು ಸಹ ಮಲೆನಾಡಂತೆ ಕಂಗೊಳಿಸುತಿದೆ ಇಂದು 
ನನ್ನ ಮನವು ಕೂಡ ಇಂದು ತಂಪಾಗಿದೆ 
ಸೊಂಪಾಗಿ ಕವನ ಬರೆಯಲು ಆಸೆ ಚಿಮ್ಮುತಿದೆ 

Wednesday 28 October 2015

ಸಂಗೀತ ಸುಧೆಯ ಕುಡಿಯುವ ಕಾಲ ಬಂದೇ ಬಿಟ್ಟಿತು 
ಗಾನ ಗಂಗೆಯು ಶ್ರುತಿಯನು ಹೇಳಿಸಿದಳು 
ರಾಗಕ್ಕೆ ತಕ್ಕ ತಾಳವ ಹಾಕುವ ವಿದ್ಯೆಗೆ ಪರಿತಪಿಸುತಿರುವೆ 
ಅದಕ್ಕೆಂದೇ ರಾಗ ತಾಳ ಭಾವಗಳ ಬೆರೆಸಿದ  ನನ್ನ ದನಿಯು 
ಪಲ್ಲವಿ ಅನುಪಲ್ಲವಿಗಳ ಸ್ನೇಹವ ಬಯಸುತಿದೆ 

Sunday 25 October 2015

ಬಯಸಿದೆ ಮನಸು ಸಂಗೀತ ಶಾರದೆಯ ಒಲಿಸಿಕೊಳ್ಳಲು 
ಶುರುವಾಗಲಿದೆ ನನ್ನ ದನಿಯಲ್ಲಿ ನಾದಗಂಗೆಯ ನಾಟ್ಯವು  
ಅದಕ್ಕೆಂದೇ ಕೋರುತಿರುವೆ ನಿಮ್ಮನು ಹರಸಿ ಹಾರೈಸಿ ನನ್ನ ದನಿಯನ್ನು 
ನೋವೆಲ್ಲ ಮರೆಸಿ ಸಂತಸ ಕೊಡುವ ಹಾಡನು ಹಾಡಲು 
ಸಂಗೀತ ಒಲಿಯುವುದೋ ದೂರ ಓಡುವುದೋ ನಾನರಿಯೇ 
ಶ್ರದ್ಧಾ ಭಕ್ತಿಯಲಿ ಕಲಿಯುವೆ ಎಂಬ ಮಾತೊಂದೇ ನಾ ನುಡಿವೆ 

ಬನ್ನಿ ಸರ ಸರ ಆಚರಿಸಲು ದಸರಾ 
ಹಂಚಲು ಬನ್ನಿ ಬಂಗಾರ 
ಜಗಮಗಿಸುತ್ತಿವೆ ಊರೆಲ್ಲ ತಳಿರು ತೋರಣ 
ಬಯಸುತ್ತಿವೆ ಮನಸುಗಳೆಲ್ಲ ಸ್ನೇಹ ಪ್ರೀತಿ 
ಬಾಂಧವ್ಯಗಳ ಮಿಲನ 
ಶುಭವಾಗಲಿ ನಿಮಗೆಲ್ಲ ಸಂತಸ ತುಂಬಿರಲಿ ಬಾಳೆಲ್ಲ 

Monday 19 October 2015

ಸಾವಿರ ಉಳಿಪೆಟ್ಟು ಬಿದ್ದಾಗಲೇ ಒಂದು ಕಲ್ಲು 
ಸುಂದರ ಶಿಲೆಯಾಗುವಂತೆ 
ಈ ಮನಸಿಗೆ ನೋವಿನ ಮೇಲೆ ನೋವು ಆದಾಗಲೇ 
ಸಾಧನೆಯ ಬೆಳಕು ಬೇಗ ಹರಿಯುವುದು 
ನೊಂದ ಮನಸಿಗೆ ನೆಮ್ಮದಿ ಸಿಗುವುದು 

Sunday 18 October 2015

ಪ್ರೀತಿಯಿಂದ ಬರೆಯಬೇಕಿದ್ದ ಕವಿತೆ 
ನೋವಲ್ಲಿ ಕೊನೆಯಾಯಿತೇಕೋ...???????
ಮುಂದೆ ಬರಯುವ ಆಸೆ ಉಳಿಯುವುದೋ 
ಅಳಿಯುವುದೋ ನನಗೆ ತೋಚದೇಕೋ..???

Wednesday 14 October 2015

ಹೊಸ ಆಸೆ ಬರುತಿದೆ ನಿನ್ನೆದೆಯ ಮೇಲೆ ರಂಗೋಲಿಯ ಬಿಡಿಸಿ 
ಬಣ್ಣಗಳಿಂದ ಅಲಂಕರಿಸಿ ಹೂಗಳಿಂದ ಸಿಂಗರಿಸಿ 
ನನ್ನೆಲ್ಲ ಒಲವನ್ನು ಅದರೊಳಗೆ ತುಂಬಿಸಿ ನಿನಗದನು ಉಣಬಡಿಸಿ 
ನನ್ನೆದೆಯ ಗೂಡಲ್ಲಿ ನಿನ್ನ ಬಚ್ಚಿಟ್ಟು ಮುದ್ದಿಸಿ 
ಮತ್ತೆಂದೂ ನೀ ನನ್ನಿಂದ ದೂರಾಗದಂತೆ ಬಿಗಿದಪ್ಪಲು 
ನನ್ನ ಕೊನೇ ಉಸಿರಿರುವ ಕ್ಷಣದಲ್ಲೂ 

ನಾ ಬರೆಯುವ ಕವನಗಳೆಲ್ಲ ನನ್ನ ಮಕ್ಕಳಂತೆ 
ಕೆಲವು ಉದ್ದವಾಗಿ ಬೆಳೆದರೆ ಹಲವು ಕುಳ್ಳಗಿರುವುವು 
ಪ್ರೇಮದ ಬಂಧನ ಕೆಲವರಲ್ಲಿದ್ದರೆ 
ಸ್ನೇಹದ ವಾತ್ಸಲ್ಯವ ಮೆರೆಯುವುವು ಹಲವು 
ನೋವು ಸಂಕಟಗಳ ಸುಂದರವಾಗಿ ಬಿಂಬಿಸುವ 
ಕೌಶಲ್ಯ ಕೆಲವರಿಗಿದ್ದರೆ ಸಂತಸವನ್ನು ತಡೆಯಲಾರದೇ 
ಸರಳ ಶಬ್ಧಗಳಲ್ಲೇ ಹಂಚಿಕೊಳುವ ಆಸೆ ಹಲವರಿಗೆ 
ಮಕ್ಕಳು  ಹೇಗಿದ್ದರೂ ಎಲ್ಲಿದ್ದರೂ ಅವು ಎಂದೆಂದಿಗೂ ಈ ತಾಯಿಯ 
ಪಾಲಿಗೆ ಚಂದನವನದಲ್ಲಿ ಅರಳಿದ ಮುದ್ದು ಕವಿತೆಗಳೇ 

Tuesday 13 October 2015

ಬದುಕಲ್ಲಿ ಬರುವ ಕಷ್ಟಗಳೇ ಶಾಶ್ವತ ಸುಖಕ್ಕೆ ಅಡಿಪಾಯ 
ನನಗಾರು ಇಲ್ಲ ಎನ್ನುವ ಸಂದರ್ಭವೇ ನಿನ್ನ ಮೇಲೆ 
ನಿನಗಿರುವ ನಂಬಿಕೆ ಎಂಬ ಸತ್ವಪರೀಕ್ಷೆಯ ತಳಪಾಯ 
ಕಷ್ಟ ಬಂದಾಗ ಕುಗ್ಗದೇ ಸುಖವು ಬಂದಾಗ ಹಿಗ್ಗದೇ 
ಎರಡನ್ನು ಸಮನಾಗಿ ಸವಿದರೆ ಜೀವನ ಒಂದು ಮೃಷ್ಟಾನ್ನ ಭೋಜನ 

Thursday 8 October 2015

ನನ್ನೊಡಲಲ್ಲಿ ಬೆರೆತಿರುವ ಸ್ನೇಹ ನೀನು 
ನೀನಿಲ್ಲದೆ ಇರಲಾರೆ ನಾನು 
ಮನಸು ನೊಂದು ಬೆಂದು ಕಣ್ಣೀರಿಡುವಾಗಲೆಲ್ಲ 
ಸಂತೈಸಿದ ಮಮತೆಯ ಕಡಲು ನಿನ್ನ ಸ್ನೇಹ 
ಅದಕ್ಕೇ ಏನೋ  ನನಗೆ ಅದರ ಮೇಲೆ ವಿಪರೀತ ಮೋಹ 
ಪ್ರೀತಿಯ ಕೊರತೆಯ ಮರೆಸಿದ ನಿನ್ನ ಸ್ನೇಹಕ್ಕೆ 
ಬಿಡಿಸಲಾರದ ಬಂಧನವಾಗಿಸು ನನ್ನ ಭಾವಕ್ಕೆ 

Wednesday 7 October 2015

ಕೊಚ್ಚೆಯ ಮೇಲೆ ಕಲ್ಲೆಸದರೆ ಆಕಾಶಕ್ಕೆ ಮುಖ ಮಾಡಿ ಉಗಿದರೆ 
ನಮ್ಮ ಮುಖ ಮನಸು ದುರ್ಗಂಧ ಬೀರುವ ಹಾಗೆ 
ಮನುಷತ್ವ ಇಲ್ಲದ ರಾಕ್ಷಸತನ ಕೂಡಿದ ಮನುಷ್ಯರ  ಜೊತೆ ಬೆರೆತಾಗಲೂ 
ನಮ್ಮ ಜೀವಕ್ಕೂ ಜೀವನಕ್ಕೂ ಕೊಳಕು ಅಂಟುವುದು 

Monday 5 October 2015

ಬಣ್ಣ ಬಣ್ಣದ ಭಾವನೆಗಳ ನಡುವೆ ಸಣ್ಣ ಸಣ್ಣ ಆಸೆಗಳು ಚಿಗುರುತ್ತಿವೆ 
ಬಾಳನ್ನು  ಭಾವ ಗೀತೆಯಂತೆ ರಚಿಸುವ ಯತ್ನ ಮಾಡುತಿರುವೆ 
ಪ್ರೀತಿಯೆಂಬ ರಾಗಕ್ಕೆ  ಸ್ನೇಹವೆಂಬ ತಾಳವ ಬೆರೆಸಿದರೆ ವಿಶ್ವಾಸವೆಂಬ 
ಭಾವವು ಹೊರ ಹೊಮ್ಮುವುದೇನೋ ಎಂಬ ನಿರೀಕ್ಷೆಯಲ್ಲಿದ್ದೇನೆ 
ಆಗ ಸುಮಧುರವಾಗಿ  ಹರಿಯುವುದು  ಬಾಳೆಂಬ ಭಾವಗೀತೆ 

Sunday 4 October 2015

ಪ್ರೀತಿಯ ಕಮಲ ಕಮರುವ ಸಮಯದಿ 
ಬಂದಿದೆ ಒಂದು ಸ್ನೇಹದ ಮಲ್ಲಿಗೆ 
ಘಮ್ಮೆನ್ನುತ್ತಿದೆ ನೋವು ತಿಂದ ಮನಸಿಂದು ಆ ಪರಿಮಳದಲ್ಲಿ 
ಹೊಸ ಆಸೆಯೂ ಚಿಗುರಿತಿದೆ ಬದುಕಲಿ 
ನೋವೆಲ್ಲಾ ಮರೆಯಾಗುತಿದೆ ಆ ಸ್ನೇಹದ ಸೆಳೆತದಲ್ಲಿ 

Tuesday 29 September 2015

ಮನಸಿನ ಮಾತುಗಳೆಲ್ಲ ಮೌನದಲ್ಲೇ 
ಮರಣ ಹೊಂದುತ್ತಿವೆ 
ಕನಸಿನ ಕೂಸುಗಳೆಲ್ಲ ಕರುಳಲ್ಲೇ 
ಕೊನೆಯುಸಿರೆಳೆಯುತ್ತಿವೆ 
ಭಾವನೆಗಳಿಲ್ಲದ ಬದುಕು ಒಣಗಿದ ಜಾಲಿಯಂತಾದರೆ 
ಸಾಧನೆಗಳಿಲ್ಲದ ಬದುಕು ಶೂನ್ಯವಿದ್ದಂತೆ 
ಒಳ್ಳೆಯ ಭಾವನೆಗಳನು ಬೆಳೆಸಿ ದುಡಿಯುವ ಕೈಗಳೆಂಬ 
ದಾರದಿಂದ ಸಾಧನೆಗಳೆಂಬ ಹೂಗಳನು ಪೋಣಿಸಿದರೆ 
ಕಂಗೊಳಿಸುವುದು ಬದುಕು ಆಗ ಸುಂದರ ಹಾರದಂತೆ 

Sunday 27 September 2015

ಮುಖಪುಸ್ತಕದಲ್ಲಿಂದು ಡಿಜಿಟಲ್ ಇಂಡಿಯಾದೇ ಪ್ರಭಾವ 
ಎಲ್ಲಿ ನೋಡಿದರೂ ತ್ರಿವರ್ಣಗಳದೇ ರಾಜ್ಯಭಾರ 
ರಾಷ್ಟ್ರಧ್ವಜವು ಸೆರೆ ಹಿಡಿಯುತ್ತಿದೆ ಎಲ್ಲರ ಭಾವಚಿತ್ರವ 
ಕಣ್ಣೆರಡು ಸಾಲುತ್ತಿಲ್ಲ ತುಂಬಿಕೊಳ್ಳಲು ಈ ಸೌಂದರ್ಯವ 

Wednesday 23 September 2015

ಮಾತಾಡದ ಮೌನಕ್ಕಿಂದು ಕವನ 
ಬರೆಸಿಕೊಳ್ಳುವ ಆಸೆಯಾಗಿದೆಯಂತೆ 
ಏನೆಂದು ಬರೆಯಲಿ ಎಂದು ಕೇಳಿದರೆ 
ತೋಚಿದ್ದು ಗೀಚು ಎಂದು ಹೇಳುತಿದೆ 
ಮೌನಕ್ಕೆ ನೋವಿರದು ನಲಿವಿರದು 
ಅದಕಿರುವುದು ಮೂಕ ಭಾವನೆಯೊಂದೆ 
ಅದನು ಕಾಣಲು ಯಾರು ಪ್ರಯತ್ನಿಸುತ್ತಿಲ್ಲ 
ಆದರೂ ಹಠವ ಬಿಡುವುದಿಲ್ಲ 
ಹೀಗಾದರೆ ಹೇಗೆ ಬರೆಯಲಿ ನಾ ಕವನವ 
ಜೋಡಿಸಲಿ ಹೇಗೆ ಸಾಲುಗಳ 

ಪ್ರೀತಿಗೆ ದೇವರು ಎಂದರು ತಿಳಿದವರು ಆ ದೇವರ ಮಕ್ಕಳೇ ನಾವೆಲ್ಲರೂ 
ಆದರೂ ಕಿತ್ತಾಡಿ ಸಾಯುತ್ತಿರುವರು ದ್ವೇಷವೆಂಬ ಬೆಂಕಿಯಲಿ 
ಕೊಚ್ಚಿ ಹೋಗುತಿಹರು ಅಪನಂಬಿಕೆಯೆಂಬ ಸುಳಿಯಲ್ಲಿ 
ನಾಶ ಮಾಡಲಿ ದ್ವೇಷ ಸಿಟ್ಟು ದುರಾಸೆಗಳೆಂಬ ಅಸುರರ 
ನಂಬಿಕೆ ಪ್ರೀತಿ ವಿಶ್ವಾಸಗಳೆಂಬ ತ್ರಿಮೂರ್ತಿಗಳು ಒಂದಾಗಿ 
ಮತ್ತೆ ಒಂದಾಗಿ ಬಾಳೋನ  ನಾವೆಲ್ಲಾ ಪ್ರೀತಿಯ ಕಂದಮ್ಮಗಳಾಗಿ 

Tuesday 22 September 2015

ಮನಸಿಗೆ ಮರೆಯಲಾಗದ ಗಾಯ ಆದಾಗಲೇ 
ಅದನ್ನು ಶಾಶ್ವತವಾಗಿ ಅಳಿಸುವ ಔಷಧ ಸಿಗುವುದು 
ಜೀವನದ ಆಸೆ ಕನಸುಗಳೆಲ್ಲ ಸತ್ತಾಗಲೇ 
ಮನಸು ಶಾಶ್ವತ ಮೌನಕ್ಕೆ ಶರಣಾಗುವುದು 

Saturday 19 September 2015

ನೀ ಹುಟ್ಟಿದ ಕ್ಷಣದಿಂದ ನನ್ನ ಆನಂದಕ್ಕೆ ಮಿತಿಯೇ ಇಲ್ಲ 
ಮುಗ್ಧವಾದ ನಿನ್ನ ಕಂಗಳಲ್ಲಿ ಲಕ್ಷ್ಮಿಯ ನಾಟ್ಯ ಕಂಡರೆ 
ಪುಟ್ಟ ಬಾಯಿಂದ ಹೊರಬರುವ ಧ್ವನಿಯಿಂದ 
ನಾದಗಂಗೆಯೇ ಹರಿದಂತಾಗುತ್ತದೆ 
ನೀ ನಗುವ ಕ್ಷಣವೆಲ್ಲ ಬಾಲ ದೇವತೆಯೇ 
ಜೊತೆಯಿದ್ದಂತೆ  ಭಾಸವಾಗುತ್ತಿದೆ 
ಮಗಳೇ ಏನು ಪುಣ್ಯ ಮಾಡಿ ಪಡೆದೆನೋ ನಾ ನಿನ್ನ 
ನೀ ಬಳಿಯಿದ್ದ ಕ್ಷಣಗಳೆಲ್ಲ ಹೇಳುತ್ತಿವೆ ನಾ ಬಲು ಧನ್ಯ 

Tuesday 15 September 2015

ನಂಬಿ ಮೋಸ ಹೋಗದಿರು ಮನಸೇ 
ನಿನಗೆ ನೀನೆ ಎಲ್ಲ ನಿನ್ನನು ಬಿಟ್ಟರೆ ಇಲ್ಲಿ ಗತಿಯಾರಿಲ್ಲ 
ಬಾಳಿನ ಹಸಿರೆಲ್ಲ ಕಮರಿ ಹೋದಾಗ 
ಉಸಿರೇ ನೀ ನಿಲ್ಲುವೆ ಯಾವಾಗ 

Tuesday 8 September 2015

ಕಣ್ಣಿಗೆ ಕಾಣದ ಮನದಲ್ಲಿ ಬಣ್ಣ ಬಣ್ಣದ 
ಭಾವನೆಗಳ ಬಿತ್ತುವ ಪುಣ್ಯಾತ್ಮನ್ಯಾರೋ 
ಅವು ಚಿಗುರಿ ಹೂವಾಗಿ ಅರಳುವ ಸಮಯದಲ್ಲಿ 
ಕಿತ್ತು ಸಾಯಿಸಿಬಿಡು ಎಂದು 
ವಿಧಿಯ ಬರೆದ ಕೈ ಯಾವುದೋ 

Monday 7 September 2015

ನನ್ನೊಡಲಲ್ಲಿ ತುಂಬಿದೆ ಮಮತೆಯ ಮಂಜು 
ಅದೇಕೋ ಕರಗುತಿದೆ ಕಾರಣ ನಿಮ್ಮೆಲ್ಲರ ಸಂಚು 
ಬೇಡವೆಂದರೂ ನಿಷ್ಕರುಣೆಯಿಂದ ಕೀಳುತ್ತಿರುವಿರಿ 
ನನ್ನ ಕರುಳಿನ ಕುಡಿಗಳ ನಿಮ್ಮ ಜೀವನದ ಆಧಾರವ 
ಅವುಗಳ ಆರ್ತನಾದಗಳೇ ಹೇಳುತ್ತಿವೆ ನಿಮಗಿಲ್ಲ ಇನ್ನು ಮಳೆ ಬೆಳೆಯೂ 
ಆದರೂ ಬಾರದು ಬುದ್ಧಿಯೂ ಬರೀ ಬರಗಾಲವೇ ನಿಮಗೆ ಸಿದ್ಧಿಯೂ 
ನನ್ನ ಕರುಣೆ ಸಹನೆಯೂ ಕರಗುತ್ತಿವೆ ನಿಮ್ಮ ನೋವುಗಳು ಹೆಚ್ಚುತ್ತಿವೆ 
ಕೊಂದರೆ ನೀವು ಭೂತಾಯಿಯ ಹತ್ತುವಿರಿ ನರಕದ ಮೆಟ್ಟಿಲುಗಳ 

Friday 4 September 2015

ನಿನ್ನ ಕಣ್ಣೀರು ಜಾರುವ ಮುನ್ನ 
ಬರುವುದು ಒ0ದು ಚಿನ್ನ 
ಬಿಗಿಯಾಗಿ ಹಿಡಿದಪ್ಪಲು ನಿನ್ನ 
ಜಾರದ0ತೆ ನೋಡಿಕೊಳ್ಳುವುದು 

ನಿನ್ನ ಕ0ಬನಿಯನ್ನ...

Thursday 27 August 2015

ನನ್ನ ಮನಸೊಂದು ತಿಳಿನೀರ ಕೊಳವು 
ಅಲ್ಲಿ ಹರಿಯುತ್ತಿದೆ ಪರಿಶುದ್ಧ ಪ್ರೇಮವೂ 
ಬಯಸುತಿದೆ ನಿನ್ನ ಮನಸಿನ ಸಂಗಮವೂ 
ಕೊಳದಲ್ಲಿ ಚಂದ್ರನ ಬಿಂಬವ ಕಾಣಲು 
ನೈದಿಲೆಯ ನಯನವು ಪರಿತಪಿಸುವ ಹಾಗೇ 
ನನ್ನ ಪ್ರೀತಿಯ ಬಳ್ಳಿಗೆ ನಿನ್ನ ಮನಸಿನ 
ಸಂಗಮವೇ ಆಸರೆಯೆಂದು ಕಾಯುತಿರುವೆ 


Thursday 6 August 2015

ರೈತನಿಗೂ ಸಾಕಾಗಿದೆ ಬರಗಾಲದ ನೋವು 
ಬೆಳೆಗಳಿಗೆಲ್ಲ ತಾಕುತ್ತಿದೆ ಬಿಸಿಲಿನ ಖಾವು 
ಬೇಕಾಗಿದೆ ನಮಗೆಲ್ಲ ವರುಣನ  ಕರುಣೆಯು 
ಭೂತಾಯಿಯ ಕರುಳ ತಂಪಾಗಿಸಲು 
ಓ ಮಳೆರಾಯ ನಿನಗೊಂದು ಪ್ರಾರ್ಥನೆ 
ನಿನ್ನ ಕೋಪದಿಂದ ಸುಡಬೇಡ ನಮ್ಮ ರೈತರ ಬೆಳೆ 
ಅತೀಯಾಗಿಯೂ ಸುರಿಯದೇ ಬರಿಯ ಹನಿಗಳನ್ನೂ ಉದುರಿಸದೆ 
ಮಿತವಾಗಿ ಸುರಿದು ಬದುಕಿಸು ಬೆಳೆಯ ಚಿಗುರ 
ಪ್ರೀತಿ ಕರುಣೆ ವಾತ್ಸಲ್ಯದಿಂದ ವರೆಸು ರೈತರ ಕಣ್ಣೀರ 

Monday 3 August 2015

ಮಾತಾಡದ ಮೌನಕ್ಕೆ ಇಂದೇಕೋ ಶರಣಾಗಿರುವೆ 
ಸಿಗಲಾರದ ಶಬ್ಧಕ್ಕೆ ಹುಡುಕಾಡಿ ಸೋತಿರುವೆ 
ನೂರಾರು ಭಾವಗಳ ಪೋಣಿಸುವ ಆಸೆಯ ಕೊಂದಿರುವೆ 
ಮೌನವು ಮಾತಾಗಿ ಭಾವಗಳೆಲ್ಲ ಪದಗಳಾಗಿ 
ಹೊರಹೊಮ್ಮುವ ತನಕ ಕೊನೆವರೆಗೂ ಕಾಯುವೆ 

Thursday 30 July 2015

ಸದಾ ಹಸನ್ಮುಖಿಯಾಗಿ ಜೀವನದ ಸೂತ್ರವ ಹೇಳುತ್ತಾ 
ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆಗೆ ಶ್ರಮಿಸುತ್ತಾ  
ಮಾಡುವ ಕಾಯಕದಲ್ಲೇ ದೇವರನ್ನು ಕಂಡ ನಾಯಕ 
ಕೋಟಿ ಕೋಟಿ ಜನಗಳ ಮನಗೆದ್ದ ಮರೆಯಲಾಗದ ಮಾಣಿಕ್ಯ 
ನೀವು ನಗು ನಗುತ್ತಲೇ ಜಗವ ಆ ಬಿಟ್ಟ ಕ್ಷಣ 
ಶತಕೋಟಿ ಜನರು  ಕಂಬನಿ ಹರಿಸಿದರು ತುಂಬಿ ಮನ 
ಓ ಮುದ್ದು ಕಲಾಂ ತಾತ ನಿಮಗಿದೋ ನನ್ನ ಅಂತಿಮ ಸಲಾಂ         

Tuesday 28 July 2015

ಮುದ್ದು ಮಕ್ಕಳ ಮುದ್ದಿನ ಮೇಷ್ಟ್ರು ನೀವಾಗಿ 
ವಿಜ್ಞಾನ ಲೋಕದ ವಜ್ರವಾಗಿ ಕಂಗೊಳಿಸುತ್ತಾ 
ಮಾನವನ ಮೌಲ್ಯಗಳ ಇಡೀ ಮನಕುಲಕ್ಕೆ ಅರ್ಥೈಸಿ 
ಭಾರತ ರತ್ನವ ಸ್ವೀಕರಿಸಿದ ನಮ್ಮೆಲ್ಲರ ಹಿರಿಮೆಯ 
ಕಲಾಂ ಅಜ್ಜನಿಗೊಂದು ಮನಸ್ಪೂರ್ವಕ ಸಲಾಂ 

Monday 27 July 2015

ಮನಸೇಕೋ ಆಗಿದೆ ಇಂದು ಖಾಲಿ ಖಾಲಿ 
ಪದಗಳೆಲ್ಲ ಆಗುತ್ತಿವೆ ಚೆಲ್ಲಾಪಿಲ್ಲಿ 
ಭಾವನೆಗಳ ಎಣಿಸಿ ಪದಗಳ ಬೆರೆಸಿ ಕವನವ 
ಬರೆಯುವ ಆಸೆ ಹೋಗುತಿದೆ ಎಲ್ಲಿ...???

Tuesday 21 July 2015

ನನ್ನ ಎದೆಯೆಂಬ ಭುವಿಯೊಳಗೆ ಬಿತ್ತಿರುವೆ ಒಲವಿನ ಬೀಜವ 
ಪ್ರೀತಿಯ ಪನ್ನೀರು ಸುರಿದರೆ ಉದಯಿಸುವುದೇನೋ ಪ್ರೇಮ ಪುಷ್ಪ 
ಆ ಪುಷ್ಪ ಬಯಸುತಿದೆ ಪ್ರೀತಿಯ ಪರ್ವತದ ತುದಿಗೆ ಏರಲು 
ಅದಕ್ಕೆಂದೇ ಕಾಯುತಿದೆ ಪ್ರೆಮಗಂಗೆಯ ಹರಿಸುವ ಮನವು ಬರಲು 

Sunday 12 July 2015

ಮೌನದಿ ಬರೆದ ಕವನವ ಮಾತಲಿ ಹೇಳಲಿ ಹೇಗೆ 
ಅರಿಯದೇ ಬಂದ ಪ್ರೀತಿಯ ಕೀಳಲಿ ಹೇಗೆ 
ನೂರಾರು ಆಸೆಗಳು ಚಿಗುರುವ ಸಮಯದಿ 
ಸಾವಿರಾರು ಮೈಲಿಗಳಷ್ಟು ದೂರ ಬಿಟ್ಟು ಓಡಲಿ ಹೇಗೆ 

Wednesday 8 July 2015

ನೀ ಕವಿಯಾದರೆ ನಾ ನಿನ್ನ ಪದಗಳಲ್ಲಿ ಕುಣಿಯುವ ಕವಿತೆ 
ನೀ ವೈಣಿಕನಾದರೆ ನಾ ನಿನ್ನ ಕೈಯಿಂದ ಮೀಟುವ ವೀಣೆ 
ನೀ ಬಾನಷ್ಟು ಎತ್ತರದಲ್ಲಿದ್ದರೆ ನಾ ಇಂದಲ್ಲ ನಾಳೆ ಮೇಘ 
ಸಂದೇಶ ಬರುವುದೆಂದು ಕಾಯುತ್ತಿರುವ ಭೂಮಿ 
ನೀ ಇಂಪಾಗಿ ಹಾಡುವ ಕೋಗಿಲೆಯಾದರೆ ನಾ ನಿನ್ನ 
ದನಿಯಿಂದ ಹೊರಡುವ ಸಂಗೀತ ಸುಧೆಯು 
ನೀ ಎಲ್ಲಿದ್ದರೂ ಹೇಗಿದ್ದರೂ ನಾ ನಿನ್ನ ನೆರಳಾಗಿ  
ಬಾಳಿಗೆ ಜ್ಯೋತಿಯಾಗಿ ಬೆಳಗುವ ಉಷೆಯೂ 

Monday 6 July 2015

ಮನವೊಂದು ಪುಸ್ತಕದಂತೆ 
ಅಲ್ಲಿ ಬರುವ ಆಸೆ ಕನಸುಗಳೆಲ್ಲ ಪುಟಗಳಂತೆ 
ಸುಂದರ ಭಾವಗಳನು ಬೆರೆಸಿ 
ಒಳ್ಳೆಯ ಯೋಚನೆಗಳ ಪೋಣಿಸಿ ಬರೆಯುವ 
ಆಸೆಯು ಕೈಗೂಡಿದರೆ ಬಾಳೊಂದು 
ಬೆಳಗುವುದು ನಂದಾದೀಪದಂತೆ 

Thursday 2 July 2015

ಭಾವಗಳ ಬೆರೆಸಿ ಮೌನದಲೇ ಕವಿತೆಯ ಬರೆಯುವಾಸೆ 
ಕಾರಣ ಮಾತುಗಳೆಲ್ಲ ಮಂಜಿನಂತೆ ಕರಗುತಿವೆ 
ನುಡಿಗಳ ಪೋಣಿಸಿ ಕವನದ ಹಾರವ ಮಾಡುವ ಆಸೆ 
ಅದಕ್ಕೆಂದೇ ಪದಗಳ ಗುಂಪನು ಹುಡುಕುತಿರುವೆ 

Tuesday 23 June 2015

ನಲಿವೊಂದೆ ನೆನೆದರೆ ನೋವನ್ನು ನುಂಗುವರ್ಯಾರು 
ಮನಸಿನ ನೋವನ್ನು ಮರೆತರೆ ಬದುಕಲ್ಲಿ 
ಮುಂಬರುವುದನ್ನು ತಡೆಯುವರ್ಯಾರು 
ಬದುಕೊಂದು ನೋವು ನಲಿವುಗಳೆಂಬ ಚಕ್ರಗಳ ಬಂಡಿ 
ಸರಿಯಾಗಿ ಸುತ್ತಿದರೆ ನಮ್ಮ ಬಾಳೊಂದು ಸುಂದರ ಕನ್ನಡಿ 

Sunday 21 June 2015

ನಿನ್ನೊಂದಿಗೆ ಮಳೆಯಲಿ ನೆನೆದ ಆ ಕ್ಷಣ 
ನಾ ಕಂಡೆ ನಿನ್ನ ಕಣ್ಣಲ್ಲಿ ಹನಿಯಾಗಿ ಮೂಡಿದ ಮಿಂಚೊಂದ 
ಅದು ಹೇಳುತಿತ್ತು ನನಗೆ ನಿನ್ನ ಪ್ರೀತಿಯ ಆಲಿಂಗನ 
ಕಣ್ಣಲ್ಲೇ ಹುಟ್ಟಿ ಕಣ್ಣಿಂದಲೇ ಕಳಿಸಿದ ನಿನ್ನ ನಯನ ಸಂದೇಶಕ್ಕೆ 
ಏನೆಂದು ಉತ್ತರಿಸುವುದೋ ತಿಳಿಯದಾಗಿದೆ 

Monday 15 June 2015

ನೀ ನುಡಿಯದ ಪದಗಳಿಗೆ ಸ್ವರವೂ ನಾನೇ 
ನೀ ಹೇಳದ ನೋವಿಗೆ ಕಂಬನಿಯೂ ನಾನೇ 
ನೀ ಹಾಡುವ ಹಾಡಿಗೆ ಉಲಿಯುವ ನಾದಗಂಗೆಯೂ ನಾನೇ 
ನೀ ಸುರಿಸುವ ಒಲವಿಗೆ ಹರಿಯುವ ಪ್ರೆಮಗಂಗೆಯೂ ನಾನೇ 
ನಿನಗೇ ನೋವೇ ಆದರೂ ಸಾವೇ ಬಂದರೂ 
ನಿನ್ನ ಉಸಿರಲ್ಲಿ ಉಸಿರಾಗಿ ಸಾವಲ್ಲಿ ಸಾವಾಗಿ ಬರುವ ಜೀವವೂ ನನ್ನದೇ 

Wednesday 10 June 2015

ನನ್ನ ಹೃದಯದಲ್ಲಿ ಒಲವಿನ ಕಾರ್ಮೋಡ ಕವಿದಾಗಿದೆ 
ನಿನ್ನ ಪ್ರೇಮದ ಕಿರಣಗಳ ಸ್ಪರ್ಶದಿಂದ ಅದು 
ಕರಗಿ ಪ್ರೀತಿಯ ಮಳೆ ಸುರಿಸಬೇಕಿದೆ 
ಹನಿಯಾಗಿ ಉದುರುವುದೋ ಭೋರ್ಗರೆದು 
ಸುರಿಯುವುದೋ ಗೊತ್ತಿಲ್ಲ 
ಮುಂಜಾವಿನಲ್ಲಿ ಎಲೆಗಳ ಮೇಲೆ ಬಿದ್ದ ಇಬ್ಬನಿಯಷ್ಟೇ 
ಪುಟ್ಟ ಕಿರಣ ತಾಕಿದರೂ ಸಾಕು 
ಪ್ರೀತಿಯ ಪರ್ವತವೇ ಸಿಕ್ಕಿತೆಂದು ಕುಣಿದಾಡುವುದು 
ನನ್ನ ಮನವೆಲ್ಲ 

Tuesday 9 June 2015

ಬರೆಯದೇ ಉಳಿದ ಪದಗಳಿಲ್ಲ ನಿನ್ನ ಭಾವಗಳ ಬಿಂಬಿಸಲು 
ಹುಡುಕದಿರುವ ಹಾಳೆಗಳಿಲ್ಲ ನನ್ನ ಕವನಗಳ ತುಂಬಿಸಲು 
ನಿನ್ನ ಭಾವನೆಗಳಿಗೆ ನನ್ನ ಪದಗಳ ಮಿಲನವಾದ ಕ್ಷಣ 
ಚಂದಿರ ಕಂಡ ನೈದಿಲೆಯಂತೆ ನಲಿಯುವುದು ನನ್ನ ಮನ 

Sunday 7 June 2015

ಇನ್ನೇನು ನೋವೆಲ್ಲಾ ದೂರ ಹೋದವೆಂದು ನಗುವ ಮುನ್ನವೇ 
ಕಹಿ ನೆನಪೆಂಬ ಮುಳ್ಳುಗಳು ಮನಸಿಗೆ ಇರಿದು ಕಣ್ಣೀರ ಹರಿಸುವುವು 
ಆ ನೆನಪುಗಳನು ಮರೆಯುವ ಯತ್ನದಲ್ಲಿ ಹೊಸ ಆಸೆಗಳ 
ಚಿಗುರನ್ನೇ ಕತ್ತರಿಸಿ ಹಾಕುತ ಬದುಕುತಿವೆ  ಭಾವನೆಗಳು 

Tuesday 2 June 2015

ಬಾರದ ಭಾವನೆಗಳ ಬರಿಸುವ ಹುಚ್ಚು ಹಠವೇಕೆ 
ಒಲ್ಲದ ಪ್ರೀತಿಯ ಒಪ್ಪಿಕೋ ಎನ್ನುವ ಬಲವಂತವೇಕೆ 
ಮರುಭೂಮಿಯ ಮರಳಲ್ಲಿ ಮಲ್ಲಿಗೆಯ ಬೆಳೆದರೆ 
ಸತ್ತು ಹೋದ ಮನದಲ್ಲಿ ಪ್ರೇಮದ ಭಾವವ ಬಿತ್ತಿದಂತೆ 

Sunday 24 May 2015

ಅತ್ತರೂ ನಕ್ಕರೂ ನನಗಿರುವ ಸಂಗಾತಿಯೊಂದೇ ಅದೇ ನನ್ನ ಮುದ್ದು ಕವನ 
ಆದರೇ ಬರೆಯಲಾಗದೇ ಸೋಲುತಿರುವೆ ನಾನೀಗ ಏಕೋ 
ಕಾರಣ ಬರೆಯಲು ಹುಡುಕುವ ಪದಗಳೇ ಆಡುತ್ತಿವೆ  ಕಣ್ಣಾಮುಚ್ಚಾಲೆ ಆಟ 
ಪದೇ ಪದೇ ಸತಾಯಿಸುವ ಆಸೆ ಈ ಪದಗಳಿಗೇಕೋ...?????

Friday 22 May 2015

ಅಮ್ಮನ ಪ್ರೀತಿಯ ಉಣಿಸುವ  ಅಮ್ಮ ನಿನಗಾಗಿ 
ಶಿವನ ಚರಣ ಕಮಲದಲಿ ಬೆರೆತ ಚರಣದಾಸಿ 
ಪವಿತ್ರ ಪ್ರೇಮದ ನವಿರು ಭಾವದ ಕುಲವಧು 
ನಿರ್ಮಲ ಮನಸಿನ ಪುಟ್ಟ ಗೌರಮ್ಮ 
ತ್ರಿಕೋಣ ಪ್ರೇಮಕಥೆಯ ನಿರೂಪಣೆ ಲಕ್ಷ್ಮಿ ಬಾರಮ್ಮ 
ಮನಸಾಕ್ಷಿಯ ಒಲಿಸಿ ಬಾಳುತಿರುವ ಅಗ್ನಿಸಾಕ್ಷಿ 
ಅಕ್ಕ ತಂಗಿಯ ಪವಿತ್ರ ಬಂಧನದ ಅಕ್ಕ 
ಅಮ್ಮನೇ ಎನ್ನ ಪ್ರಾಣ ಎನ್ನುವ ಯಶೋದೆ 
ಮುಗ್ಧ ನಗೆಯ ಮುದ್ದು ಮುಖ ಗೋಕುಲದಲ್ಲಿ ಸೀತೆ 
ಕೈಗೆಟುಕದಷ್ಟು ದೂರದಲ್ಲಿ ಮಿನುಗುತಿರುವ ಅಶ್ವಿನಿ ನಕ್ಷತ್ರ 
ಹೊಟ್ಟೆ ತುಂಬಾ ನಗಿಸಿ ಚಿಂತೆ ಮರೆಸಿ ಮಲಗಿಸುವ ರೋಬೋ ಫ್ಯಾಮಿಲಿ 



Tuesday 12 May 2015

ಬೆಂಕಿಯಲಿ ಬೆಂದ ಮನಸೊಂದು ನೀರಲಿ ಮುಳುಗುವ 
ಮನಸಿಗೆ ಸಾಂತ್ವನ ಹೇಳುವಾಗ 
ನಲಿದಾಡುವ ಮನಸುಗಳೇಕೆ ನೋವು ತಿನ್ನುವ ಮನಸಿಗೆ 
ಖುಷಿಯ ಕೊಡುವಲ್ಲಿ  ಏಕೇ ಅಸಮರ್ಥವಾಗುತಿವೆ...????


Sunday 10 May 2015

ಮರೆತು ಹೋದ ಕಥೆಯೊಂದು ಮತ್ತೆ ನೆನಪಾಗಿದೆ 
ಬೇಡವೆಂದು ಹರಿದ ಪುಟವೊಂದು 
ಮತ್ತೆ ಹಾರಿ ಬಳಿಗೆ ಬರುತಿದೆ 
ಆ ಕಥೆಗೆ ಈ ಪುಟವು ಹೊಂದಿಕೊಂಡರೆ 
ಮೂಡುವುದೇ ಶೃಂಗಾರ ಕಾವ್ಯ.. ???
ಮತ್ತೆ ಬೇಡವೆಂದು ಕಿತ್ತು ಹಾಕಿದರೆ ಸತ್ತು 
ಹೋಗುವುದೇ ಮಧುರ ಬಾಂಧವ್ಯ ... ???

Wednesday 6 May 2015

ಮನಸಲ್ಲೊಂದು ಆಸೆ ಮೂಡಿದೆ ಕಾದಂಬರಿ ಬರೆಯಲು 
ಆದರೆ ತೋಚುತ್ತಿಲ್ಲ ನನಗೆ ಪಾತ್ರಗಳನು ಹುಡುಕಲು 
ಕಾಲ್ಪನಿಕವಾಗಿರಲೋ ವಾಸ್ತವವಾಗಿರಲೋ ತಿಳಿಯದಾಗಿದೆ 
ಮನಸಿನ ತೊಳಲಾಟಕ್ಕೆ ಸಹಾಯ ಮಾಡುವುದೇ ನನ್ನ ಕವನ 
ಬಿಳಿಯ ಹಾಳೆಯ ಪುಸ್ತಕದಲ್ಲಿ ಕಪ್ಪು ಶಾಹಿಯ ಬರಹದಿಂದ 
ತುಂಬಿಸುವ ನನ್ನ ಕಾದಂಬರಿಯ ಕನಸು ನನಸಾಗುವುದೇ...???

Tuesday 5 May 2015

ಮಾತಲಿ ಆಗದ ಕೆಲಸವ ಮೌನದಿ ಸಾಧಿಸು 
ಸಿಟ್ಟಿಂದ ಗೆಲ್ಲಲಾಗದ ಮನಸನ್ನು ಪ್ರೀತಿಲಿ ಗೆಲ್ಲು 
ರೂಪಕ್ಕೆ ಕಟ್ಟುವ ಬೆಲೆಯನ್ನು ಗುಣಕ್ಕೆ ಕೊಡು 
ಶುಭ್ರ ಮನದಿ ಪ್ರಾರ್ಥಿಸು ನೀ ದೇವರನ್ನು 
ಬಾಳಿಸು ನೀ ಎಲ್ಲರನ್ನು ಖುಷಿಯಿಂದ ಎಂದು 

Monday 4 May 2015

ಕನಸಿಗೆ ಕಣ್ಣಿಲ್ಲ ಮನಸಿಗೆ ಮನೆಯಿಲ್ಲ 
ಭಾವನೆಗೆ ಬಣ್ಣವಿಲ್ಲ ಆಸೆಗೆ ಮಿತಿಯಿಲ್ಲ 
ಇವೆಲ್ಲವನ್ನೂ ಬಿಟ್ಟು ಬದುಕುವ ಶಕ್ತಿ ಯಾರಿಗೂ ಇಲ್ಲ !!!!

Saturday 2 May 2015

ಈ ಹೃದಯ ಹಾಡುತಿದೆ ಒಂದು ಚಂದದ ರಾಗ 
ಅದಕ್ಕೆಂದು ದಕ್ಕುವುದೋ ನಿನ್ನ ಮನಸನ್ನು ತಲುಪುವ ಯೋಗ 
ಆ ರಾಗದ ಪಲ್ಲವಿಗೆ ಬೇಕೊಂದು ನಿನ್ನನ್ನೇ ಹೋಲುವ ಚರಣ 
ನಿನ್ನ ಕರಗಳಿಂದ ವೀಣೆಯ ಮೀಟಿದಾಗ  ಹೊರಡುವ ನಾದವು 
ನನ್ನ ಹೃದಯದ ರಾಗವಾದರೆ  ಸುಂದರ ಸಂಗೀತದಂತಿರುವ 
ನನ್ನ ಬದುಕು ಎಂದೆಂದಿಗೂ ಭಾವಗೀತೆಯೇ ಓ ಒಲವೇ 

Monday 27 April 2015

ಮಾತುಗಳೆಲ್ಲ ಮಂಜಿನಂತೆ ಕರಗಿ ಮೌನವಾಗುತ್ತಿವೆ 
ಭಾವನೆಗಳೆಲ್ಲ ಮರುಭೂಮಿಯಂತೆ ಬರಡಾಗುತ್ತಿವೆ 
ನನ್ನ ಧ್ವನಿ ನನಗೇ ಕೇಳದೇ ಕಿವಿಯು ಕಿವುಡಾಗಿದೆ 
ಏಕೆ ಈ ಮೌನವು ಮನೆ ಮಾಡುತಿದೆ ನನ್ನ ಮನೆ ಮನದಲ್ಲಿ 
ಎಂದು ಹುಡುಕುತಾ ಅಲೆಯುತಿರುವೆ ನಾ ಇದಕೆ ಉತ್ತರವಾ 

Friday 24 April 2015

ಒಂದು ಕೊಳೆತ ಹಣ್ಣನು ಇಟ್ಟರೆ ಮತ್ತೆಲ್ಲ 
ಹಣ್ಣುಗಳು ಕೊಳೆಯುವಂತೆ 
ಕೆಟ್ಟ ಮನಸಿನ ಮನುಷ್ಯನ ಜೊತೆ ಬೆರೆತಾಗ
ಒಳ್ಳೆ ಮನಸು ಕೂಡ  ಕೊಳೆತು ನಾರುವುದು 

ನನ್ನಾಸೆಯ ಹೂ ನೀನು 
ಈ ಬಾಳಿಗೆ ಬೆಳದಿಂಗಳು ನೀನು 
ನನ್ನ ಪ್ರತೀಕ್ಷಣದ ಉಸಿರು ನೀನು 
ಈ ನನ್ನ ಜೀವಕೆ ಜೀವನವಾಗುವೆಯಾ ನೀನು...???

Tuesday 21 April 2015

ಪವಿತ್ರ ಕಲ್ಯಾಣಿಯೇ ಏನು ಅದೃಷ್ಟವೋ ನಿನ್ನದು 
ನಿನ್ನ ಬದುಕಿನ ಪ್ರತೀ ಕ್ಷಣವ ದೇವಸ್ಥಾನದಲ್ಲಿ ಕಳೆವೆ 
ಭಕ್ತರ ಪಾಪ ಪುಣ್ಯಗಳನು ನಿನ್ನ  ಮಡಿಲಲ್ಲಿ ತುಂಬುವೆ 
ಎಲ್ಲ ಜೀವಿಗಳ ನೋವುಗಳನು ಮಾಡುವೆ ನೀ ಶಮನ 
ತಾಯಿ ಈ ನಿನ್ನ ವಾತ್ಸಲ್ಯಕೆ ಇದೋ ನನ್ನದೊಂದು ನಮನ 

Sunday 19 April 2015

ಬರೆಯುವ ಆಸೆಯು ಕುಂದುತ್ತಿದೆ ಕಾರಣ ಭಾವನೆಗಳು ಸತ್ತಿವೆ 
ಮನಸಿನ ನೋವನು ಪದಗಳ ಹೆಣೆಯುತ್ತಾ ಮರೆಯುತಿದ್ದೆ 
ಆದರೆ ಪದಗಳೇ ಮೋಸ ಮಾಡಿ ಮರೆಯಾಗುತ್ತಿವೆ 
ಯಾರಿಗೆ ಹೇಳಲಿ ನನ್ನ ದುಃಖವ ಹೇಗೆ ಮರೆಯಲಿ ಈ ನೋವ

Friday 17 April 2015

ಬೆದರು ಗೊಂಬೆ ನಾನಲ್ಲ ನೀ ಆಡಿಸಿದಂತೆ ಆಡಲು 
ನೋವು ನಲಿವುಗಳ ಅರಿವಿರುವ ಮನಸುಂಟು ಈ ಜೀವಕೆ 
ಉಸಿರಾಡುವ ಶವವಾಗಿ ಬದುಕುವ ಆಸೆಯೂ ನನಗಿಲ್ಲ 
ಸಾವಿನ ದಾರಿಯ ಹುಡುಕುವ ಕೆಟ್ಟಾಸೆಯೂ ಇಲ್ಲ 
ಒಳ್ಳೆಯ ಸಮಯವ ಕಾಯುತ್ತ ಅಶಾವಾದಿಯಾಗಿ ಬದುಕುವೆ 

Sunday 5 April 2015

ಒಲವಿನ ಹಾದಿಯಲ್ಲಿ ನೀ ಸುರಿಸುವ ಪ್ರೀತಿಯೇ ಮುತ್ತಿನ ಬಳ್ಳಿಯು 
ನಿನ್ನ ಧ್ವನಿಯಲಿ ಹರಿಯುವ ಪದಗಳೇ ಸಂಗೀತದ ಅಲೆಗಳು 
ನಿನ್ನ ಕಣ್ಣಂಚಿನ ನೋಟವೇ ಚಂದ್ರನ ಕಾಂತಿಗೆ ನಗುವ ನೈದಿಲೆಯು 
ಏನು ಹೊಗಳಿದರೂ ಸರಿದೂಗದ ನಿನ್ನ ಪ್ರೇಮ ಪರ್ವತದಲ್ಲಿ 
ಮಿಂದು ಆನಂದಿಸುವ ಸೌಭಾಗ್ಯವೇ ನನ್ನದು 

Sunday 29 March 2015

ಬಾಳಿನ ಎಲ್ಲಾ ದಾರಿಗಳು ಮುಚ್ಚಿರಲು 
ಮನಸೆಂಬ ಮಂಟಪವು ಕುಸಿಯುವುದು 
ವೇದನೆಯ ಸಾಗರದಲಿ ಮನವು ಮುಳುಗಿರಲು  
ಉಸಿರಾಡುವ ಆಸೆಯೇ ಕುಗ್ಗುವುದು 
ಕೊಚ್ಚಿ ಹೋಗುವೆ ಎಂಬ ಹೆದರಿಕೆಯ ಹಿಮ್ಮೆಟ್ಟಿ ಮುನ್ನುಗ್ಗಿದರೆ 
ಎಲ್ಲಾದರೂ ಒಂದು ಉತ್ಸಾಹದ ಚಿಗುರು ಹುಟ್ಟುವುದು 

Wednesday 18 March 2015

ಸಿಡಕ್ ಮೂತಿ ಸಿದ್ದ 
ಸಿಡಕಬೇಡ  ಹಗಲಗಲ 
ನೀ ಸಿಡಕಿದ್ರೆ ಹಿಂಗ ನಿಂಗ ನಷ್ಟ ಬಾಳ 
ಒದ್ದಾಡಬೇಡ  ಆಮ್ಯಾಲ 
ನನ್ನದಲ್ಲದ ನಿನ್ನ ಅಂದವ ನನ್ನದು ಎಂದುಕೊಂಡರೇನು ಚೆನ್ನ 
ಸೌಂದರ್ಯ ಸವೆಯುವ ಆಸೆಯಿಂದ  ನಾ ನಿನ್ನಲ್ಲಿ ಬಂದೆ 
ಆ ಕ್ಷಣ ನೀನಿಲ್ಲದಿರುವುದ ಕಂಡು ನಾ ನೋವಲಿ ಬೆಂದೆ 
ನೋವು ತಾಳಲಾರದೆ ಹೊರಟು ನಿಂತ ನನ್ನ ಮತ್ತೆ 
ಕಟ್ಟಿ ಹಾಕಿತು ನಿನ್ನ ಚೂಪಾದ ಮುಳ್ಳು ಓ ಗುಲಾಬಿಯೇ 

Friday 6 March 2015

ಹಾಡುವ ಆಸೆಯಾಗಿದೆ ಕೋಗಿಲೆಯೇ ನನಗೂ ನಿನ್ನಂತೆ 
ಆದರೆ ಧ್ವನಿಯಲ್ಲಿ ಮಾಧುರ್ಯವಿಲ್ಲ 
ನಾಟ್ಯವಾಡುವ ಮನಸಾಗಿದೆ ನವಿಲೇ ನನಗೂ ನಿನ್ನಂತೆ 
ಆದರೆ ಚಂದದ ಸುಂದರ ಗರಿಗಳಿಲ್ಲ 
ನಾದವ ಹೊರಡಿಸುವ ಆಸೆಯಾಗಿದೆ ವೀಣೆಯೇ ನನಗೂ ನಿನ್ನಂತೆ 
ಆದರೆ ಮೀಟಲು ನನ್ನಲ್ಲಿ ತಂತಿಗಳಿಲ್ಲ 
ಬೇಡವೆಂದರೂ ಬರುವ ಈ ಆಸೆಗಳ ತಡೆಯುವ ಹಂಬಲ ನನಗೆ 
ಆದರೆ ತಡೆಯುವ ಶಕ್ತಿ ಇಲ್ಲ 

Wednesday 4 March 2015

ಭಾವನೆಗಳು ಬತ್ತದೆ ಕನಸು ಸಾಯದೆ 
ಜೀವನವೆಂಬ ಹೋರಾಟ ಮುಗಿಯುವುದೇ...???

Tuesday 3 March 2015

ಚಿಗುರಾಗಲಿ ಮೊಗ್ಗಾಗಲಿ ಅದು ಬಳ್ಳಿಗೆ ಸ್ವಂತ 
ಹೂವಾಗಿ ಹಣ್ಣಾಗಿ ಅರಳಿದ ಮೇಲೆ ಪರರಿಗೆ ಸ್ವಂತ 
ನಾನು ನನ್ನದು ಎಂದು ಪರಿತಪಿಸುವ ಮನುಜ
ಈ ಸತ್ಯವೇಕೆ ಅರಿಯನೋ ನಾ ಅರಿಯೇ 

Thursday 26 February 2015

ಬಾಳೊಂದು ಲತೆಯಾದರೆ 
ನೋವು ನಲಿವುಗಳೆಲ್ಲ ಹೂವು ಮುಳ್ಳುಗಳಂತೆ 
ಸುಂದರವಾದ ಹೂವು ಕಣ್ಣಿಗೆ ತಂಪಾಗಿ ಕಂಡರೆ 
ಹರಿತವಾದ ಮುಳ್ಳು ಚುಚ್ಚಿದರೆ ಕಣ್ಣೀರು ಹರಿವುದು 


Friday 20 February 2015

ವೀಣೆಯಿಂದ ನಾದಗಂಗೆ ಹರಿದಂತೆ 
ನವಿಲು ನಾಟ್ಯ ಮಯೂರಿಯಾಗಿ ಕುಣಿದಂತೆ 
ಪ್ರೇಮ ಪಲ್ಲವಿ ಬರೆಯುವಾಗ ಒಲವಿನ ಶ್ರುತಿ ಸೇರಿದಂತೆ 
ನೀ ಬಳಿ ಬಂದ ಕ್ಷಣ ಮಿಂಚಂತೆ ಕುಣಿವುದು ನನ್ನ ಮನ 

Tuesday 17 February 2015

ಕವನ ಬರೆಯಲು ಇಂದೇಕೋ ಮನಸಿಲ್ಲ 
ಬರೆಯದೇ ಇರಲು ಮನಸು ಕೇಳುತ್ತಿಲ್ಲ 
ಏನು ಬರೆಯುವುದೆಂದು ತೋಚುತ್ತಿಲ್ಲ 
ಆದರೂ ಬರೆಯುವ ಹಠ ಹೋಗುತ್ತಿಲ್ಲ 

Monday 16 February 2015

ಅರಿಯದ ಸತ್ಯದ ಹುಡುಕಾಟ ಮರೆಯದ ನೆನಪಿನ ಪರದಾಟ 
ಎರಡರ ನಡುವೆ ಜೀವನವೆಂಬ ನೌಕೆಯ ಎಳದಾಟ

Thursday 12 February 2015

ನನ್ನ ಬಾಳೆಂಬ ಬತ್ತಿಗೆ ನಿನ್ನ ಒಲವೆಂಬ ಎಣ್ಣೆಯ ಹಾಕಿ 
ಪ್ರೀತಿಯ ನಂದಾದೀಪವ ಹಚ್ಚುವಾಸೆ ನನಗೆ 
ಈ ನನ್ನ ಬಾಳಿಗೆ ನಿನ್ನಾಸರೆಯೇ ನನಗೆಲ್ಲ ನೀನಿಲ್ಲದೇ ನನಗೆ ಬದುಕಿಲ್ಲ 
ನಾ ಕವಿಯಾಗಲು ಹೊರಟಿರುವೆ ಕಾಣದ ಕವಿತೆಯ ಹುಡುಕುತ್ತಾ 
ಕಡಲೋ ದಡವೋ ಕಾಡೋ ನಾಡೋ ಅದರ ಅರಿವಿಲ್ಲ ಎನಗೆ 
ಪದಗಳ ಅರಸುತ್ತ ಸುಂದರ ಸಾಲನ್ನು ಹೆಣೆಯುತ್ತಾ 
ಕವನದ ಮಾಲೆಯ ಮಾಡುವ ಆಸೆಯೊಂದೇ ಮನದಲ್ಲಿ  ನನಗೆ 

Wednesday 11 February 2015

ಮಾತು ಕಲಿಸುವ ಅಮ್ಮ ಕನ್ನಡವಮ್ಮ 
ಅನ್ನ ನೀಡುವ ಅಮ್ಮ ಭೂಮಿಯಮ್ಮ 
ನೀರು ಕೊಡುವ ಅಮ್ಮ ಕಾವೇರಮ್ಮ 
ಇಂತ ಅಮ್ಮಂದಿರ ಕೊಟ್ಟ ಕರುನಾಡಲಿ 
ಬದುಕುವ ನಾವೇ ಪುಣ್ಯವಂತರಮ್ಮ          

Tuesday 10 February 2015

ನಾ ಅರಳಿದ  ತಾವರೆ ನೀ ನನ್ನ ನಗಿಸುವ ಚಂದಿರ 
ನಾ ಉಸಿರಾಡುವ ದೇಹ ನೀ ಅಲ್ಲಿ ಬೆರೆತಿರುವ ಆತ್ಮ 
ಹಸಿರೆಲೆಯ ಮೇಲಿರುವ ಇಬ್ಬನಿಯ ಹನಿಯಂತೆ ನನ್ನ ಪ್ರೀತಿ 
ಹೂಗಳ ಪರಿಮಳದಂತೆ ನೀ ನನ್ನ ಆವರಿಸಿರುವ ರೀತಿ 

Tuesday 3 February 2015

ಮನ ಏನನ್ನೋ  ಬಯಸುತಿದೆ 
ವಿಧಿಯಲ್ಲಿ ಮತ್ತೇನೋ ಬರೆದಿದೆ 
ಮನಸಿನ  ಆಸೆಯೇನೋ ಬದಲಾಗುವುದು 
ಆದರೆ ವಿಧಿಯ ಬರಹ ಬದಲಾದಿತೆ..?? 
ಹಣೆಬರಹ ಬದಲಿಸುವ ಶಕ್ತಿಯಿಲ್ಲದ ಮನಕೆ 
ಕನಸು ಕಾಣುವ ಹಕ್ಕಿದೆಯಾ..???

Tuesday 27 January 2015

ತನ್ನದಲ್ಲದ ವಸ್ತುವ ಪ್ರೀತಿಸುವುದು ತಪ್ಪಲ್ಲ 
ಅದೇ ವಸ್ತು ತನಗೇ ದಕ್ಕಲಿ ಎಂಬ ಸ್ವಾರ್ಥ ತಪ್ಪು 
ಅದಕೆ ಕಾರಣ ಹಿರಿಯರ ಚಿನ್ನದ  ನುಡಿ 
ಬಾರದು ಬಪ್ಪದು ಬಪ್ಪದು ತಪ್ಪದು 

Saturday 17 January 2015

ನಾ ನಿನ್ನ ಪ್ರೀತಿಸುವ ಪ್ರಮಾಣ ಎಷ್ಟೆಂದು ಅರಿತಿಲ್ಲ ನನ್ನ ಮನ 
ಆದರೆ ನೀನಿಲ್ಲದೆ ಹೋದರೆ ಒಂದು ಕ್ಷಣವೂ ನಿಲ್ಲದು ನನ್ನ ಪ್ರಾಣ 
ನೀ ಎಲ್ಲೇ ಹೇಗೆ ಇದ್ದರೂ ಚಿಂತೆ ಇಲ್ಲ ಎನಗೆ 
ನಿನ್ನ  ಮನಸಿನ ಮೂಲೆಯಲ್ಲೊಂದು ಜಾಗ ಕೊಡು ಅದೇ ಸಾಕೆನಗೆ 

Thursday 1 January 2015

ಹೊಸವರ್ಷದ ಹೊಂಗಿರಣ ಬಿದ್ದಾಗಿದೆ 
ದೇವಸ್ಥಾನವೆಂಬ ಪವಿತ್ರ ಜಾಗದಿಂದ ದಿನ ಆರಂಭವಾಗಿದೆ 
ದೇವರ  ಆಶೀರ್ವಾದ ಪಡೆದಂತ ಅನುಭವ ಮನಸಲ್ಲಿ 
ಹೊಸ ಆಸೆಯ ಚಿಗುರು ಕವಲೊಡೆದಿದೆ ಬಾಳ ಲತೆಯಲ್ಲಿ 
ಶುದ್ಧ ಮನಸಿಂದ ಪ್ರಾರ್ಥಿಸುವೆ ಆ ದೇವರನ್ನು 
ಸುಖ ನೆಮ್ಮದಿಯಿಂದ ಬಾಳಿಸು ನೀ ಎಲ್ಲರನ್ನು