Friday, 25 December 2015

ನನ್ನ ಹಿಂದೆ ಹಿಂದೆಯೇ ಸುತ್ತುವೆ  ಏಕೆ ಹುಡುಗ 
ಮುಂದೆ ಬಂದು ಹೇಳಬಾರದೇ ನಿನ್ನೊಲವಿನ ದುಗುಡ 
ನಾ ಬಯಸಿದ ಪ್ರೀತಿಯೇ ನೀನಾಗಿರುವಾಗ 
ಬೇಡೆನ್ನಲಾರೆ ನಿನ್ನ ನಾನು 
ಸುಂದರ ಬಾಳನು ಎಳೆಯಲು ಬೇಕಾಗಿದೆ 
ನಿನ್ನ ಒಲವಿನ ತೇರು 
ಆ ತೇರಲಿ ನಾವು ಒಂದಾಗಿ ಸಾಗಿದರೆ 
ಅದೇ ನಮಗೆ ನೆಮ್ಮದಿಯ ಸೂರು 

Tuesday, 22 December 2015

ನನ್ನ ಮನವೆಂಬ ಕೊಳದಲ್ಲಿ ಕಾಣುವ ಪ್ರತಿಬಿಂಬ ನೀನೆ 
ನಾ ಹಾಡುವ ಹಾಡಲಿ ಹೊರಡುವ ದನಿಯು ನೀನೆ 
ನಾ ಗೀಚುವ ಕವಿತೆಗಳಲ್ಲಿ ಬೆರೆತಿರುವ ಭಾವಗಳು ನೀನೆ 
ತನು ಮನಗಳ ಬೇರಲ್ಲಿ ಬೆಸೆದಿರುವ ನಿನ್ನ ಪ್ರೇಮ ಪರ್ವತ 
ಸದಾ ನನಗಾಗಿ ಸೀಮಿತ ಎನ್ನುವ ಸ್ವಾರ್ಥಿಯೂ ನಾನೇ 

Monday, 21 December 2015

ಭರವಸೆಗಳಿಲ್ಲದ ಮನದಲ್ಲಿ ಹೊಸ ಗುರಿಯ ಪ್ರವೇಶ 
ಎಲ್ಲೋ ಪಿಸುಗುಡುತ್ತಿದೆ ಒಂದು ಧನಾತ್ಮಕ ಸಂದೇಶ 
ಋಣಾತ್ಮಕ ಘಟನೆಗಳೇ  ಆಳಿದವು ನನ್ನ ಜೀವನವ 
ಅವನ್ನೆಲ್ಲ ಸಂಹಾರ ಮಾಡುವುದೇನೋ ಈ ಸಂದೇಶ
ಆಸೆಯಿಂದ ಕಾಯುತಿರುವೆ ಆ ಅಮೃತ ಘಳಿಗೆಗಾಗಿ 
ಈಗಲಾದರೂ ಕರುಣಿಸು ವಿಧಿಯೇ ಈ ನೊಂದ ಮನಸಿಗಾಗಿ 

Friday, 18 December 2015

ನಾ ಏನು ಮಾಡಲಿ ಬರೆಯಲೇನು ತೋಚುತ್ತಿಲ್ಲ 
ಹಾಗೆಂದು ಸುಮ್ಮನಿರಲೂ ಆಗುತ್ತಿಲ್ಲ 
ಹುಡುಕಿ ಹುಡುಕಿ ಸಾಕಾಗಿದೆ ಪದಗಳ ದಂಡನು 
ಸಿಕ್ಕರೆ ಕೊಟ್ಟುಬಿಡಿ ನನಗೆ ಆ ಪದವನ್ನು 
ಕೊಂಚವಾದರೂ ನಿಟ್ಟುಸಿರು ಬಿಡುವುದೇನೋ 
ಪರದಾಡುತ್ತಿರುವ ನನ್ನ ಮನಸಿನ್ನು 

Tuesday, 15 December 2015

ನನ್ನೊಡಲಲ್ಲಿ ಬಚ್ಚಿಟ್ಟ ಪ್ರೀತಿಯ ಅಕ್ಷರದಲ್ಲಿ ಬಿಚ್ಚಿಡುತ್ತಿದ್ದೆ 
ಕಾರಣ ಏಕೋ ಮಾತುಗಳು ಮೌನವಾಗುತ್ತಿವೆ 
ಬರೆದಿದ್ದಲ್ಲ ಹಾಳೆಗೆ ಅಂಟುವುದು ಆದರೆ ಸೇರಬೇಕಾದ 
ಮನಸಿಗೆ ಸೇರುವುದು ಯಾವಾಗ ನೀ ಒಲವೆ 
ಮಾತಿಲ್ಲದೇ ಮೌನವಾಗುತ್ತಿರುವ ನನ್ನ ಮನಸು 
ಶಾಶ್ವತ ಮೌನಕ್ಕೆ ಸೇರುವ ಮುನ್ನ ಬಂದು 
ಅಪ್ಪಬಾರದೇ ನೀ ಎನ್ನ ಒಲವ ಒಮ್ಮೆ 
ಬೇಡೆನು ನಾ ನಿನಗೆ ಏನನ್ನೂ ಮತ್ತೊಮ್ಮೆ 

Monday, 14 December 2015

"ಯಾವುದು ನಮ್ಮದೋ ಅದು ನಮ್ಮ ಬಳಿಯೇ ಇರುತ್ತದೆ, 
ಇತರರದು ಇತರರಲ್ಲಿಯೇ ಇರುತ್ತದೆ" 
ಇದನರಿತು ನಾವು ಬದುಕಿದರೆ ನೆಮ್ಮದಿಯ ಬದುಕು ಸದಾ ನಮ್ಮದಾಗಿರುತ್ತದೆ  

Monday, 7 December 2015

ನನ್ನ ಭಾವನೆಗಳನು ಹೇಳಲು ನೀನೆ ತಾನೇ ಗತಿ 
ನೀನೆ ದೂರವಾದರೆ ಏನಾಗುವುದೋ ನನ್ನ ಮತಿ 
ನೀ ಹೇಗಿದ್ದರೂ ಎಲ್ಲಿದ್ದರೂ ಸರಿಯೇ ನನ್ನ ಕೋರಿಕೆಯೊಂದೇ 
ಬರೆದಷ್ಟು ಬರೆಸು ಅತ್ತಾಗ ಸಂತೈಸು ನಗುವಾಗ ಹರಸು 
ನೀನೆ ನನ್ನ ಭಾವಗಳ ಬಿಂಬ ನೀನಿರದಿದ್ದರೆ ನಾನೊಂದು ಕಲ್ಲಿನ ಕಂಬ 
ಕವನವೇ ಏನೆಂದು ಹೇಳಲಿ ನಿನಗೆ ಎಷ್ಟೆಂದು ಹೊಗಳಲಿ 
ಪ್ರತೀ ಭಾವನೆಗಳ ಬಿಂಬಿಸಿರುವೆ ನಿನ್ನೊಂದಿಗೆ 
ಎಂದೆಂದಿಗೂ ದೂರಾಗದಿರು ನನ್ನ ಉಸಿರು ನಿಲ್ಲುವವರೆಗೆ 

Sunday, 6 December 2015

ನನ್ನಿಂದಲೇ ಕವಿತೆ ಬರೆಸಿಕೊಳ್ಳುವೆಯಲ್ಲ ಹುಡುಗ 
ನೀ ನನಗಾಗಿ ಬರೆಯುವುದು ಯಾವಾಗ 
ನಿನ್ನ ಪ್ರೇಮದ ಚಿತ್ತಾರವ  ನನ್ನ ಕವನದ ಕುಂಚದಲ್ಲಿ 
ಬಿಡಿಸುವ ಆಸೆಯಾಗಿದೆ ಬಣ್ಣಗಳ ಆಯ್ಕೆ ಶುರುವಾಗಿದೆ 
ನಾ ಚಿತ್ರ ಬಿಡಿಸುವಲ್ಲಿ ಮಗ್ನಳಾದರೆ ಕವನ ಬರೆಯುವರು ಯಾರು 
ಅದಕ್ಕೆಂದೇ ಕೋರುವೆ ಇನಿಯ ನಾ ಬರೆಯುವೆ ನಿನ್ನೊಲವಿನ ಚಿತ್ರವ 
ನೀ ಬರೆದುಬಿಡು ಒಮ್ಮೆ ಅದಕೆ ಹೊಂದುವ ಸರಳ ಸುಂದರ ಕವನವ 

Friday, 4 December 2015

ಕನಸಿನ ಪೆಟ್ಟಿಗೆಯಲ್ಲಿ ಬಚ್ಚಿಟ್ಟ ಆಸೆಗಳೆಲ್ಲ 
ಮನಸಿನ ಸಂತಸವ ಬಿಚ್ಚಿಡುತ್ತಿವೆ 
ನವಿರಾಗಿ ಹೆಣೆದ ಕನಸೆಂಬ ಹೂವಿನ ಹಾರವು 
ನನಸಿನ  ಹೂವಾಗಿ ಒಂದೊಂದೇ ಮುಡಿಗೆ ಏರುತಿವೆ 
ಸಾಧನೆಯ ಸಾಗರ ಬಾ ಎಂದು ಕರೆಯುತಿದೆ 
ಧುಮುಕುವ ಆಸೆಯು ಹಸಿರಾಗಿ ಹರಿಯುತಿದೆ 
ಜಯ ಸಿಗುವುದೋ ಸೋಲಾಗುವುದೋ ಗೊತ್ತಿಲ್ಲ 
ಶ್ರಮಿಸುತ್ತಲೇ ಗುರಿ ಮುಟ್ಟುವ ದಾರಿಯ ಮರೆಯುವುದಿಲ್ಲ 

Wednesday, 2 December 2015

ಸ್ನೇಹದ ವೇಷ ಧರಿಸಿ ಪ್ರೀತಿಸುವರು ಕೆಲವರು 
ಪ್ರೀತಿಯ ವೇಷ ಧರಿಸಿ  ಭಾವನೆಯ ಜೊತೆ ಆಟವಾಡುವರು ಹಲವರು 
ಸ್ನೇಹ ಪ್ರೀತಿಯ ಕಣ್ಣಾಮುಚ್ಚಾಲೆಯಲ್ಲಿ 
ನೋವು ತಿನ್ನುವ ಮನಗಳು ಸಾವಿರಾರು 
ಅತ್ತರೆ ಕರಗುವುದಿಲ್ಲ ಆ ನೋವು ನಕ್ಕರೆ ಅರಗುವುದಿಲ್ಲ ಆ ಸಂಕಟ 
ಬಾಳೆಂಬ ಬಂಡಿಯಲ್ಲಿ ಸ್ನೇಹ ಪ್ರೀತಿಗಳೇ ಚಕ್ರಗಳು 
ಎರಡು ಕೈಕೊಟ್ಟರೆ ಕುಸಿಯದಿರದೇ ಬಾಳಬಂಡಿಯು...???