Sunday 1 January 2017

ಶಿಖರ ಸೂರ್ಯ


ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಚಂದ್ರಶೇಖರ ಕಂಬಾರರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಅರ್ಪಿಸುತ್ತ,  ಹುಟ್ಟುಹಬ್ಬದ ದಿನವೇ ಅವರ "ಶಿಖರ ಸೂರ್ಯ" ಕೃತಿಯ ಬಗ್ಗೆ ನನ್ನ ಅಬಿನಂಭಿಪ್ರಾಯವನ್ನು ಹಂಚಿಕೊಳ್ಳಲು ಹೆಚ್ಚು ಸಂತೋಷವಾಗುತ್ತಿದೆ. ಈ ಕೃತಿಯು 2010ರಲ್ಲಿ ಭಾರತದ ಪ್ರತಿಷ್ಠಿತ ಪ್ರಶಸ್ತಿಯಾದ 2009ರ ಠಾಕೂರ್ ಸಾಹಿತ್ಯ ಪ್ರಶಸ್ತಿಯನ್ನು ಗಳಿಸಿರುವುದು ಈ ಕಾದಂಬರಿಯ ಶ್ರೇಷ್ಠತೆಯನ್ನು ಗುರುತಿಸುತ್ತದೆ. ಈ ಕಾದಂಬರಿಯು ಅತ್ಯಂತ ರೋಮಾಂಚನಕಾರಿಯಾಗಿ ಹಲವು ತಿರುವುಗಳನ್ನು ಪಡೆಯುತ್ತ ಓದುಗರಿಗೆ ಹೊಸ ಲೋಕವೊಂದನ್ನು ತೋರಿಸುತ್ತ, ಕ್ಷಣ ಕ್ಷಣಕ್ಕೂ ವಿಸ್ಮಯವನ್ನು ಮೂಡಿಸುವ ಅದ್ಭುತವಾದ ಕಲಾಕೃತಿಯಾಗಿದೆ. ಹಾಗೆ ಈ ಪುಸ್ತಕದ ಬಗ್ಗೆ ವಿಮರ್ಶಕರು ಬರೆದಿರುವ ಸಾಲುಗಳನ್ನು ಓದಿದರೇ ಇನ್ನು ಹೆಚ್ಚು ಸಂತೋಷವಾಗುತ್ತದೆ. ಇಂತಹ ಮಹಾನ್ ಕವಿ ಇನ್ನು ನೂರಾರು ವರ್ಷ ಸಂತೋಷವಾಗಿ ಬಾಳಿ ಮತ್ತಷ್ಟು  ಶ್ರೇಷ್ಠ ಕೃತಿಗಳನ್ನು ಕನ್ನಡ  ಸಾಹಿತ್ಯಕ್ಕೆ ಅರ್ಪಿಸಿ ನನ್ನಂತ ಓದುಗರನ್ನು ಸಂತೋಷಪಡಿಸಲಿ ಎಂದು ಹಾರೈಸುತ್ತೇನೆ. 

ಇನ್ನು ಕಥೆಗೆ ಬರುವುದಾದರೆ ಶಿಖರ ಸೂರ್ಯ "ಚಕೋರಿ"ಯ ಮುಂದುವರೆದ ಭಾಗವೆನ್ನಬಹುದು ಅಥವಾ ಸ್ವತಂತ್ರ ಕಾದಂಬರಿ ಎಂದಾದರು ತಿಳಿಯಬಹುದು ಎಂದು ಲೇಖಕರು ಹೇಳಿದ್ದಾರೆ. (ಆದರೆ ನಾನು "ಚಕೋರಿ" ಓದಿಲ್ಲ ಕಾರಣ "ಶಿಖರ ಸೂರ್ಯ"ನನ್ನು ನವಕೃತಿಯಾಗೆ ಓದಿದೆ). ಇಲ್ಲಿ ಬರುವ ಶಿವಾಪುರ, ಕನಕಪುರಿ ಇತಿಹಾಸಗಳು ನಿಜಕ್ಕೂ ರಮಣೀಯವಾಗಿವೆ. ಕಥಾನಾಯಕ ಚಂದಮುತ್ತ ಜಯಸೂರ್ಯನಾಗಿ ನಂತರ ಶಿಖರ ಸೂರ್ಯನಾಗಿ ಮೆರೆದ ರೋಚಕ ಕಥೆ ಇದು. ಇದೊಂದು ಮಹಾಕಾವ್ಯ ಜೊತೆಗೆ ಬೇಗ ಓದಿ ಮುಗಿಸಲು ಅಸಾಧ್ಯವಾದ ಕೃತಿಯಾಗಿದ್ದು ಇದರ ಬಗ್ಗೆ ವಿಮರ್ಶೆ ಬರೆಯಲು ಖಂಡಿತ ನನಗೆ ಸಾಧ್ಯವಿಲ್ಲ. ಹಾಗಾಗಿ ನನಗೆ ತೋಚಿದ ಕೆಲವು ಅಂಶಗಳನ್ನು ಸರಲವಾಗಿ ಹಂಚಿಕೊಳ್ಳಲು ಪ್ರಯತ್ನಿಸಿದ್ದೇನೆ.

ಚಕೋರಿಯನ್ನು ಓದಿದವರಿಗೆ ಚಿನ್ನಮುತ್ತ ಮತ್ತು ಚಂದಮುತ್ತನ ಬಗ್ಗೆ ತಿಳಿದಿರುತ್ತದೆ ಆದರೆ ಅದನ್ನು ಓದದೇ "ಶಿಖರ ಸೂರ್ಯ"ನನ್ನು ಓದುವವರಿಗೆ ಪ್ರಸ್ತಾವನೆಯೇ ಕಥೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು.  ಬದುಕಿದ್ದಾಗಲೇ ಕಥೆಯಾಗಿ, ಲಾವಣಿಯಾಗಿ, ದೇವತೆಯಾಗಿ ಪವಾಡಗಳ ಮೆರೆದ ಚಂದಮುತ್ತನ ಭಾಗಾದಿ ಚಿನ್ನಮುತ್ತ ಶಿಖರ ಸೂರ್ಯ ಕಾದಂಬರಿಯ ನಾಯಕ ಪುರುಷ. ಇವನೂ ಕಲಾವಿದವಾಗಲು ಪ್ರಯತ್ನಿಸಿ, ಸಾಧ್ಯವಾಗದೆ ಮಲೆಯಾಳಿ ಮಂತ್ರ ತಂತ್ರಾದಿ ವಾಮಾಚಾರ ಅನುಸರಿಸಿ, ಆಗಲೂ ಸಾಧ್ಯವಾಗದೆ ಗುರುಶಾಪಕ್ಕೆ ಗುರಿಯಾಗಿ ಎರಡು ಮೂರು ವರ್ಷ ಅಲ್ಲಲ್ಲಿ ಅಲೆದಾಡಿ, ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳಲೆಂದು ಕಾಡಿನ ಕಮರಿಗೆ ಜಿಗಿದು ಸ್ಮೃತಿತಪ್ಪಿ ಬಿದ್ದವನು. ಅಂಥವನನ್ನು ಶಿವಾಪುರದ ಜಟ್ಟಿಗ ಎತ್ತಿ ತಂದು ಉಪಚರಿಸಿ ಕನಕಪುರಿಯ ಇತಿಹಾಸಕ್ಕೆ ಕಾಣಿಕೆಯಾಗಿ ಕೊಟ್ಟ. ಕಾಡಿನ ಕಮರಿಯಲ್ಲಿ ಬೇಹುಷಾರಾಗಿ (ಪ್ರಜ್ಞೆತಪ್ಪಿ) ಬಿದ್ದಿದ್ದ ಚಿನ್ನಮುತ್ತನನ್ನು ಜಟ್ಟಿಗ ದಯಮಾಡಿ ಶಿವಾಪುರಕ್ಕೆ ಎತ್ತಿಕೊಂಡು ಬಂದನಲ್ಲ, ಅಲ್ಲಿಂದ ಮುಂದೆ ಶಿಖರ ಸೂರ್ಯನ ಇತಿಹಾಸ ಕಥನ ಆರಂಭವಾಗುತ್ತದೆ.

ಶಿಖರ ಸೂರ್ಯ ಕಾದಂಬರಿಯ ನಾಯಕನಾದರೂ ವಾಸ್ತವದಲ್ಲಿ ಅವನೊಬ್ಬ ಖಳನಾಯಕ ತನ್ನ ಸ್ವಾರ್ಥಕ್ಕೆ, ಸಾಧನೆಗೆ ಯಾರನ್ನು ಬಿಡದೆ ಹಿಂಸೆ ಕೊಡುತ್ತಿದ್ದರೂ ಅದು ಅವರಿಗೆ ತಿಳಿಯದೆ ಅವರ ಪಾಲಿಗೆ ಒಳ್ಳೆಯವನಾಗೆ ಇದ್ದು ತನ್ನ ಅನುಕೂಲಕ್ಕೆ ತಕ್ಕಂತೆ ನಿರ್ವಹಿಸುವಂತ ಮಹಾನ್ ಸಮಯಸಾಧಕ. ಶಿವಾಪುರದಲ್ಲಿ ಪ್ರಾಣ ಉಳಿಸಿದ ಜಟ್ಟಿಗ ಮತ್ತು ಅವನ ಹೆಂಡತಿಯನ್ನು ತನ್ನ ಸ್ವಾರ್ಥಕ್ಕೆ ನಡೆಸಿಕೊಂಡ ರೀತಿ ನಿಜಕ್ಕೂ ನೋವುಂಟು ಮಾಡುತ್ತದೆ. ಅಲ್ಲಿಂದ ಚಂದಮುತ್ತನಾಗಿದ್ದು ಜಯಸೂರ್ಯನಾಗುತ್ತಾನೆ ಅದು ಹೇಗೆ ಏಕೆ ಎನ್ನುವ ಅಂಶ ನಿಜಕ್ಕೂ ಅಚ್ಚರಿ ಉಂಟು ಮಾಡುತ್ತದೆ. ಅಲ್ಲಿಂದ ತಪ್ಪಿಸಿಕೊಂಡು ಕನಕಪುರಿಗೆ ಬರುತ್ತಾನೆ. 

ಕನಕಪುರಿಯಲ್ಲಿ ತಾನು ವೈದ್ಯೆನೆಂದು ಪರಿಚಿತನಾಗುವ ಜಯಸೂರ್ಯ. ಇಲ್ಲಿ ಶಿಖರಸೂರ್ಯನಾಗಿ ಬದಲಾಗುತ್ತಾನೆ. ಕನಕಪುರಿಗೆ ಬಂದ ಮೊದಲು ಮಾಡಿದ ಕೆಲಸವೆಂದರೆ ಬಹಳ ದಿನಗಳಿಂದ ರೋಗದಿಂದ ನರಳುತ್ತಿದ್ದ ಕನಕಪುರಿಯ ರಾಜನನ್ನು ಒಂದೇ ದಿನದಲ್ಲಿ ಗುಣಪಡಿಸಿ ಬಹುಬೇಗನೆ ಕನಕಪುರಿಯ ಜನರ ಮನಸ್ಸನ್ನು ತನ್ನತ್ತ ಸೆಳೆಯುತ್ತಾನೆ. ನಂತರ ಕನಕಪುರಿಯ ರಾಜ್ಯವೈದ್ಯನಾಗಿ ನಿಯೋಜನೆಗೊಂಡು ಅರಮನೆಯಲ್ಲುರುವವರ ದೌರ್ಬಲ್ಯಗಳನ್ನು ಬಳಸಿಕೊಂಡು ಕನಕಪುರಿಯ ರಾಜನ ಮಗಳು ಛಾಯಾದೇವಿಯನ್ನು ವಿವಾಹವಾಗುತ್ತಾನೆ. ಅಲ್ಲಿಂದ ಶುರುವಾಗುವುದು ಅವನ ಸಂಚಿನ ಕಥೆ (ಮತ್ತಷ್ಟು ರೋಚಕ). ಕನಕಪುರಿಯ ಭಾಗದಲ್ಲಿ ಬರುವ ಮಹಾರಾಣಿ, ರಾಜ, ಪ್ರದಾನಿ ಅರ್ಥಪಾಲ, ಸೇನಾಧಿಕಾರಿ ಬಡೆಗ, ವಿದ್ಯುಲ್ಲತೆ, ಗುಣಶೀಲ, ಶಿಖರ ಸೂರ್ಯನ ಮಕ್ಕಳಾದ ರವಿ ಕೀರ್ತಿ ಮತ್ತು ಮುದ್ದು ಗೌರಿ, ಇತ್ಯಾದಿ ಪಾತ್ರಗಳ ಚಿತ್ರಣ ಒಂದಕ್ಕಿಂತ ಒಂದು ಸೊಗಸಾಗಿವೆ ಹಾಗೆ ಪ್ರತಿಯೊಂದಕ್ಕೂ ಅದರದೇ ಆದ ತೂಕವಿದೆ. 

ಶಿಖರ ಸೂರ್ಯ ಮಾಡಿದ ತನ್ನ ದುರ್ವಿದ್ಯಗಳ ಪ್ರಯೋಗವು ಅನಿರೀಕ್ಷಿತ ತಿರುವುಗಳನ್ನು ಪಡೆಯುತ್ತವೆ. ಓದುವಾಗ ಮುಂದೆ ಹೀಗಿರಬಹುದೇ ಎಂದು ಯಾರಿಗೂ ಅನಿಸಿರುವುದಿಲ್ಲ 
ಹೀಗೆ ಹೇಳುತ್ತಾ ಹೋದರೆ ಎಣಿಸಲಾರದಷ್ಟು  ಅಚ್ಚರಿಗಳನ್ನು ಹೇಳಬೇಕಾಗುತ್ತದೆ ಹಾಗಾಗಿ ಅವೆಲ್ಲವನ್ನು ಓದುಗನೇ ಓದಿ ಸವೆಯಲಿ ಎಂದು ಬಯಸುವೆ. 

ಇದರ ಮತ್ತೊಂದು ವಿಶೇಷವೆಂದರೆ ೨೦೧೨ ರ ಮೈಸೂರಿನ ರಂಗಾಯಣವು ಜ. 15 ರಿಂದ 22ರ ವರೆಗೆ ನಡೆಸಲು ಉದ್ದೇಶಿಸಿರುವ `ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಡಾ ಮೊದಲ ದಿನ ಈ ನಾಟಕ ಪ್ರದರ್ಶನಗೊಂಡಿತ್ತು ಎನ್ನುವುದು ಮತ್ತೊಂದು ಹೆಮ್ಮೆ. ಕಾಕತಾಳೀಯವೆಂಬಂತೆ ಅವರ ಜನ್ಮದಿನವಾದ ಇಂದೇ ನಾನು ಶಿಖರಸೂರ್ಯನನ್ನೂ ಓದಿ ಮುಗಿಸಿದ್ದು ಹೆಚ್ಚು ಸಂತೋಷ ತಂದಿದೆ. ಮತ್ತೊಮ್ಮೆ ಚಂದ್ರಶೇಖರ ಕಂಬಾರರಿಗೆ ಜನ್ಮದಿನದ ಶುಭಾಶಯಗಳು. 

No comments: