Friday, 6 January 2017

ಶವದ ಮನೆಯಾದ ಸ್ವರ್ಗ




ವಾಸುದೇವರಾವ್ ಅವರ ಷರ್ಲಾಕ್ ಹೋಮ್ಸ್ ನ ಸಾಹಸ ಕಥೆಗಳು "ಶವದ ಮನೆಯಾದ ಸ್ವರ್ಗ" (ಇಂಗ್ಲಿಷ್ ಮೂಲ : ಸರ್ ಆರ್ಥರ್ ಕಾನನ್ ಡಾಯ್ಲ್) ಅಲ್ಲಿ ಬರುವ ೫ ಕಥೆಗಳನ್ನು ಓದಿದೆ. ಇಲ್ಲಿವರೆಗೂ ಷರ್ಲಾಕ್ ಹೋಮ್ಸ್ ಬಗ್ಗೆ ಚಲನಚಿತ್ರಗಳಲ್ಲಿ ಮತ್ತು ಇಂಗ್ಲಿಷ್ ಪುಸ್ತಕಗಳಲ್ಲಿ ಕೇಳಿದ್ದೆ ಆದರೆ ಯಾವತ್ತೂ ಅಷ್ಟು ಆಳವಾಗಿ ಓದಿರಲಿಲ್ಲ. ಆದರೆ  ಈ ಪುಸ್ತಕ ಓದಿದ ಮೇಲೆ ಆತನ ಬಗ್ಗೆ ಮತ್ತಷ್ಟು ತಿಳಿಯುವ ಆಸೆಯಿಂದ ವಿವಿಧ ಪುಸ್ತಗಳ ಬಗ್ಗೆ ಹುಡುಕುತ್ತ ಅನೇಕ ರೋಚಕ ಅಂಶಗಳನ್ನು ತಿಳಿದುಕೊಂಡೆ. ಹಾಗಾಗಿ ಈ ಪುಸ್ತಕದಲ್ಲಿ ಬರುವ ಕಥೆಗಳ ಬಗ್ಗೆ ಹೇಳುವುದಕ್ಕಿಂತ ಮತ್ತಿತರ ಮೂಲಗಳಿಂದ ದೊರೆತ ಮಾಹಿತಿಗಳನ್ನು ಹಂಚಿಕೊಳ್ಳಬೇಕೆನಿಸಿದೆ. 

ಷರ್ಲಾಕ್ ಹೋಮ್ಸ್ ೧೯ ಮತ್ತು ೨೦ ನೇ ಶತಮಾನದ ನಡುವೆ ಸರ್ ಆರ್ಥರ್ ಕಾನನ್ ಡಾಯ್ಲ್ ಸೃಷ್ಟಿ ಮಾಡಿದ ಕಾಲ್ಪನಿಕ ಪಾತ್ರ.  ಷರ್ಲಾಕ್‌ ಹೋಮ್ಸ್‌ ಲಂಡನ್‌ನಲ್ಲಿ ವಾಸಿಸುತ್ತಿದ ಒಬ್ಬ " ಪತ್ತೆದಾರಿ ಸಲಹೆಗಾರ." ಈತ ಕುಶಾಗ್ರ ಮತಿ.ಪ್ರತಿಯೊಂದು ಸಂಗತಿಯನ್ನೂ ಚಾಣಾಕ್ಷತೆಯಿಂದ ಗಮನಿಸಿ,ತಾರ್ಕಿಕವಾಗಿ ಯೋಚಿಸಿ ತೀರ್ಮಾನಕ್ಕೆ ಬರುವುದರ ಮೂಲಕ ಕಷ್ಟಕರವಾದ ತನಿಖಾ ಪ್ರಕರಣಗಳನ್ನು ಪರಿಹರಿಸುತ್ತಿದ್ದ.ಸೂಕ್ಷ್ಮ ಗ್ರಹಿಕೆ ಮತ್ತು ಕುಶಲ ಚಿಂತನೆಗಾಗಿ ಖ್ಯಾತನಾಗಿದ್ದ. ಕಾನನ್‌ ಡಾಯ್ಲ್‌ ರಚಿಸಿದ ನಾಲ್ಕು ಕಾದಂಬರಿ ಮತ್ತು ಐವತ್ತಾರು ಕಿರುಕಥೆಗಳಲ್ಲಿ ಷರ್ಲಾಕ್‌ ಹೋಮ್ಸ್‌ ಪಾತ್ರವಿದೆ.1887ರ ಬೀಟನ್ಸ್‌ ಕ್ರಿಸ್ಮಸ್‌ ಆನ್ಯುಯಲ್‌ ಸಂಚಿಕೆಯಲ್ಲಿ ಒಂದು ಮತ್ತು 1890ರಲ್ಲಿ ಲಿಪಿನ್ಕಾಟ್ಸ್‌ ಮಂತ್ಲಿ ಮ್ಯಾಗಜೀನ್ ‌ನಲ್ಲಿ ಇನ್ನೊಂದು- ಹೀಗೆ ಮೊದಲ ಎರಡು ಕಥೆಗಳು (ಕಿರು ಕಾದಂಬರಿಗಳು)ಪ್ರಕಟಗೊಂಡವು. 1891ರಲ್ಲಿ ಸ್ಟ್ರ್ಯಾಂಡ್‌ ಮ್ಯಾಗಜೀನ್‌ನಲ್ಲಿ ಕಿರುಕಥೆಗಳ ಮೊದಲ ಸರಣಿಯ ಪ್ರಕಟಣೆಯೊಂದಿಗೆ ಷರ್ಲಾಕ್‌ ಹೋಮ್ಸ್‌ನ ಪಾತ್ರ ಅಪಾರ ಜನಪ್ರಿಯತೆ ಗಳಿಸಿತು. ಮುಂದಿನ ಕಿರುಗತೆಗಳ ಸರಣಿ ಮತ್ತು ಎರಡು ಕಾದಂಬರಿಗಳ ಧಾರಾವಾಹಿ 1927ರತನಕ ಹರಿದು ಬಂತು.ಈ ಕಥೆಗಳು 1875ರಿಂದ 1907ರ ವರೆಗಿನಕಾಲ ಘಟ್ಟವನ್ನು ಒಳಗೊಂಡಿದೆ. ತನಿಖೆಯ ಕೊನೆಯ ಪ್ರಕರಣ 1914ರಲ್ಲಿ ಪ್ರಕಟವಾಯಿತು. 

ಹೀಗೆ ಮಾಹಿತಿಯನ್ನು ಕಲೆಹಾಕುತಿದ್ದಾಗ ಕೆಲವು ಆಶ್ಚರ್ಯಕರ ಅಂಶಗಳು ಕಂಡವು ಅದೇ ಷರ್ಲಾಕ್ ಹೋಮ್ಸ್ ಪಾತ್ರದ ಪ್ರಭಾವ.  ಕಾನನ್ ಡಾಯ್ಲ್ ಷರ್ಲಾಕ್ ಹೋಮ್ಸ್ ಪಾತ್ರವನ್ನು ಸೃಷ್ಟಿ ಮಾಡಿದ  ಆತನ ಬುದ್ಧಿವಂತಿಕೆಯನ್ನು ಚಿತ್ರಿಸಿದ ರೀತಿ ಓದುಗರು ಅವನನ್ನು ಕಾಲ್ಪನಿಕ ವ್ಯಕ್ತಿಯೆನ್ನುವುದನ್ನು ಮರೆತು ಜೀವಂತ ವ್ಯಕ್ತಿಯೆಂದೇ ತಿಳಿಯುವಂತೆ ಮಾಡಿತಂತೆ!!!! ಕೊನೆಗೆ ಡಾಯ್ಲ್ ತನ್ನ ಪಾತ್ರಕ್ಕೆ ಅಂತ್ಯ ಕಾಣಿಸಲು ಕುಖ್ಯಾತ ಕೇಡಿಯೊಬ್ಬನ ಜೊತೆ ಕಾದಾಡುವಾಗ ಸತ್ತು ಹೋದನೆಂದು "ಷರ್ಲಾಕ್ ಹೋಮ್ಸ್ ನ ನೆನಪುಗಳು" ಎಂಬ ಕೃತಿಯಲ್ಲಿ ಚಿತ್ರಿಸಿದ. ಇದರಿಂದ ಬೇಸತ್ತ ಎಲ್ಲ ಯೂರೋಪ್, ಅಮೇರಿಕ, ಆಸ್ಟ್ರೇಲಿಯಾ ದೇಶಗಳ ಜನ ತೀವ್ರ ಪ್ರತಿಭಟನೆಯನ್ನು ಮಾಡಿದ್ದಲ್ಲದೇ, ಜನರು ತಮ್ಮ ಟೋಪಿ ಮತ್ತು ಬಟ್ಟೆಗಳಿಗೆ ಕಪ್ಪು ರಿಬ್ಬನ್ ಸಿಕ್ಕಿಸಿಕೊಂಡು ಷರ್ಲಾಕ್ ಮರಣಕಕ್ಕೆ ಸಂತಾಪ ಸೂಚಿಸಿದರಂತೆ!!!! ಇದೆಲ್ಲ ಸಾಲದಕ್ಕೆ ಓದುಗರೆಲ್ಲ ಕಥೆ ಮುಂದುವರೆಸಬೇಕೆಂದೂ ಫೋನು, ತಂತಿ ಮತ್ತು ಪತ್ರಗಳ ಮೂಲಕ ಒತ್ತಾಯಿಸಿದರು, ಅಷ್ಟು ಅಲ್ಲದೇ ಕೆಲವರಂತೂ ಬೆದರಿಕೆ ಹಾಕಿದರಂತೆ!!! ಇಷ್ಟೆಲ್ಲ ಆದಮೇಲೆ ಡಾಯ್ಲ್ ಬೇರೆ ದಾರಿ ಕಾಣದೆ ಮುಂದಿನ ಕೃತಿಯಲ್ಲಿ "ಕೇಡಿಗಳನ್ನು ಮೂರ್ಖರನ್ನಾಗಿಸಾಲು ಷರ್ಲಾಕ್ ಸತ್ತಂತೆ ನಟಿಸಿದ" ಎಂದು ಅವನನ್ನು ಬದುಕಿಸಿದರಂತೆ. ಹೀಗೆ ಷರ್ಲಾಕ್ ಬಗ್ಗೆ ಹೇಳುತ್ತಾ ಹೋದರೆ ಅಪರಿಮಿತ ರೋಚಕ ಅಂಶಗಳು ಸಿಗುತ್ತವೆ.  ಹಾಗಾಗಿ "ಶವದ ಮನೆಯಾದ ಸ್ವರ್ಗ" ದಲ್ಲಿ ಬರುವ ೫ ಕಥೆಗಳ ಬಗ್ಗೆ ಎನ್ನನು ಹೇಳದೆ ಪ್ರತಿಯೊಂದರಲ್ಲೂ ವಿಭಿನ್ನ ಮತ್ತು ಅನಿರೀಕ್ಷಿತ ತಿರುವುಗಲು ಪಡೆಯುವಂತೆ ಷರ್ಲಾಕ್  ತನಿಖೆ ನಡೆಸಿದ್ದಾನೆ  ಅದನ್ನೆಲ್ಲವನ್ನೂ ಓದಿ ಸವೆದರೆ ಚಂದ ಎನ್ನುವುದು ನನ್ನ ಭಾವನೆ. 

ಇನ್ನು ಕನ್ನಡದಲ್ಲಿ ಷೆರ್ಲಾಕ್ ಹೋಮ್ಸ್ ನ ಪತ್ತೇದಾರಿ ಸರಣಿಯ ಸಮಗ್ರ ಅನುವಾದವನ್ನು ಕನ್ನಡಕ್ಕೆ ತಂದ ವಾಸುದೇವರಾವ್ ಅವರು ಕನ್ನಡದ ಸ್ವಂತ ಕೃತಿ ಎಂಬಂತೆ ಚಿತ್ರಿಸಿದ್ದಾರೆ. ಈಗಾಗಾಲೆ ಅವರ ಅನುವಾದಿತ ಕೃತಿ "ಡ್ರಾಕುಲ" ವನ್ನು ನಾ ಓದಿದ್ದೆ, ಹಾಗಾಗಿ ಷರ್ಲಾಕ್ ಕಥೆ ಓದಿದಮೇಲೆ ಅವರ ಪ್ರತಿಭೆ ಎಂತಹ ಉನ್ನತ ಮಟ್ಟದ್ದು ಎಂದು ಮತ್ತೊಮ್ಮೆ  ಮನದಟ್ಟಾಯಿತು. 

೭ ನೇ ಜುಲೈ ೧೯೩೦ರಲ್ಲಿ ಇಂಗ್ಲೆಂಡಿನ ಕ್ರಾಸ್ಬರೋ ದಲ್ಲಿ  ಅಸುನೀಗಿದ ಡಾಯ್ಲ್ ಸೃಷ್ಟಿಸಿದ ಷರ್ಲಾಕ್ ಹೋಮ್ಸ್ ಇಂದಿಗೂ ಕಿರುಚಿತ್ರ, ಚಲನಚಿತ್ರ, ಸರಣಿ ಕಥೆ, ಬೇರೆ ಭಾಷೆಗಳಿಗೆ ಅನುವಾದ ಇತ್ಯಾದಿ ರೂಪಗಳಲ್ಲಿ ವಿಶ್ವಸಾಹಿತ್ಯದಲ್ಲಿ ಅಮರನಾಗಿದ್ದಾನೆ. 

No comments: