ನೆನ್ನೆ ಸಂಜೆ ನಮ್ಮ ಕಛೇರಿ ವತಿಯಿಂದ ಬೆಂಗಳೂರಿನ ಕುವೆಂಪು ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ "ಅಂತರರಾಷ್ಟ್ರೀಯ ಮಹಿಳಾ ದಿನ" ಆಚರಣೆಯ ಪ್ರಯುಕ್ತ ನನ್ನ ಮೆಚ್ಚಿನ ಲೇಖಕಿ "ಶ್ರೀಮತಿ ಸುಧಾಮೂರ್ತಿ" ಅವರನ್ನು ಆಹ್ವಾನಿಸಿದ್ದರು. ಅವರ ಅನೇಕ ಲೇಖನಗಳು, ಕಾದಂಬರಿಗಳನ್ನು ಓದಿದ ನಾನು ಅವರ ಕಟ್ಟಾ ಅಭಿಮಾನಿಯಾಗಿದ್ದೆ, ಜೊತೆಗೆ ಅವರನ್ನು ಒಮ್ಮೆಯಾದರೂ ನೋಡಿ ಮಾತಾಡಿಸಬೇಕೆಂಬ ಆಸೆಯೂ ಹುಟ್ಟಿತ್ತು. ಆದರೆ ಅವರನ್ನು ನಿರೀಕ್ಷಿಸದೇ ಅನಿರೀಕ್ಷಿತವಾಗಿ ಭೇಟಿಯಾಗುವ ಕ್ಷಣ ಬರುತ್ತದೆ ಎಂದು ನಾ ಎಣಿಸಿರಲಿಲ್ಲ ನಿಜಕ್ಕೂ ಅವರನ್ನು ಭೇಟಿಯಾದ ನನ್ನ ಜೀವನದ ಕ್ಷಣಗಳು ಧನ್ಯವೆನಿಸಿದವು, ನನ್ನ ಹೃದಯ ಆನಂದ ಸಾಗರದಲಿ ಮುಳುಗಿತು ಎಂದರೆ ತಪ್ಪಾಗಲಾರದು.
"ಇಂಟರ್ನ್ಯಾಷನಲ್ ಫಿಗರ್" ಎಂದೇ ಗುರ್ತಿಸಲ್ಪಡುವ ಇನ್ಫೋಸಿಸ್ ಫೌಂಡರ್ ಎಂಬ ಖ್ಯಾತಿಯ ಈ ಮಹಾತಾಯಿ ನಿಜಕ್ಕೂ ಎಷ್ಟು ಸುಂದರ ಸರಳ ಮತ್ತು ವಿನಯವತಿಯೆಂದು ನೆನ್ನೆ ನನ್ನ ಕಣ್ಣಾರೆ ನೋಡಿ ಕಿವಿಯಾರೆ ಅವರ ಧ್ವನಿಯನ್ನು ತುಂಬಿಸಿಕೊಂಡ ಮೇಲೆ ಅರ್ಥವಾಯ್ತು. ಕರಿಮಣಿ ಸರ ಮತ್ತು ದೇವರು ಕೊಟ್ಟ ಎಂದು ಮಾಸದ ನಗುವೇ ಅವರ ಒಡವೆ ಎಂದರೆ ತಪ್ಪಿಲ್ಲ. ಆಕೆಯ ನಗು, ಉಟ್ಟಿದ್ದ ಸರಳ ಕಾಟನ್ ಸೀರೆ , ಧರಿಸಿದ ಮಾಂಗಲ್ಯ ಸರ ಇಷ್ಟೇ ಅವರ ಅಲಂಕಾರ, ಇವೆಲ್ಲದುದರೆ ಜೊತೆ ಅತ್ಯಂತ ಸುಂದರವಾಗಿ ಕಂಡದ್ದು ಅವರ ನಿಷ್ಕಲ್ಮಶ ನಗು. ಇಷ್ಟು ದಿನ ಅವರ ಬರವಣಿಗೆಗೆ ಅಭಿಮಾನಿಯಾಗಿದ್ದ ನಾನು ನೆನ್ನೆಯಿಂದ ಅವರ ನಗುವಿಗೆ ಅಭಿಮಾನಿಯಾಗಿಬಿಟ್ಟೆ.
ಮಾತಿನಲ್ಲೇ ಮುಳುಗಿದ್ದ ಎಲ್ಲ ಮಹಿಳಾಮಣಿಗಳು ಅವರ ಭಾಷಣ ಆರಂಭವಾಗುತ್ತಿದ್ದಂತೆ ಎಲ್ಲೆಡೆ ನಿಶಬ್ಧ ಆವರಿಸಿತು.
"ನಾನು ಅತ್ಯಂತ ಸಾಮಾನ್ಯ ಕುಟುಂಬದಿಂದ ಬಂದ ಸಾಮಾನ್ಯ ಹೆಣ್ಣುಮಗಳಷ್ಟೇ ಹೊರತು ಯಾರಿಗೂ ರೋಲ್ ಮಾಡೆಲ್ ಅಲ್ಲ, ಪ್ರತಿಯೊಂದು ಹೆಣ್ಣು ಅವರವರ ಮಕ್ಕಳಿಗೆ ಕುಟುಂಬಕ್ಕೆ ರೋಲ್ ಮಾಡೆಲ್ ಆಗಿರುತ್ತಾಳೆ ಏಕೆಂದರೆ ಮಾನಸಿಕವಾಗಿ ಗಂಡಿಗಿಂತ ಹೆಣ್ಣೇ ಶಕ್ತಿಯುತಳಾಗಿರುತ್ತಾಳೆ. ಆದರೆ ಅವರಲ್ಲಿನ ಶಕ್ತಿಯನ್ನು ಅವರೇ ಅರ್ಥ ಮಾಡಿಕೊಂಡು ಮುನ್ನುಗ್ಗಬೇಕು. ಹೆಣ್ಣಿಗೆ ಬಾಲ್ಯದಲ್ಲಿ ಅಪ್ಪ, ಯವ್ವನದಲ್ಲಿ ಗಂಡ ಮತ್ತು ವೃದ್ಧಾಪ್ಯದಲ್ಲಿ ಮಗನೆ ನನ್ನ ಭವಿಷ್ಯವೆಂದು ನಂಬಿ ತನ್ನ ಸುತ್ತ ತಾನೇ ಬೇಲಿ ಹಾಕಿಕೊಂಡು ಬದುಕುತ್ತಾಳೆ. ತನ್ನ ಸಾಮರ್ಥ್ಯವನ್ನು ಮರೆತು ಬದುಕುತ್ತಾಳೆ. ಅದನ್ನು ದಾಟಿ ಆಕೆ ಬದುಕಬೇಕು ತನ್ನ ಕಲೆಯ ಛಾಪನ್ನು ಹೊರತರುವಲ್ಲಿ ಶ್ರಮಿಸಬೇಕು ಎಂದರು. ಆದರೆ ಈಗ ಕಾಲ ಬದಲಾಗಿದೆ ಜಗತ್ತಿನ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾಳೆ ಅದನ್ನು ನೋಡುತಿದ್ದರೆ ಎಲ್ಲರಿಗೂ ಸಂತೋಷವಾಗುತ್ತದೆ. ಹಾಗೆ ಅವರನ್ನು ಹೆಣ್ಣಿನ ಸಾಮರ್ಥ್ಯವನ್ನು ಅರ್ಥಮಾಡಿಸುವುದಲ್ಲದೆ ಸಭೆಯಲ್ಲಿ ನೆರೆದ ಎಲ್ಲ ಹೆಣ್ಣು ಮಕ್ಕಳಿಗೆ ಒಂದು ಕಿವಿ ಮಾತು ಹೇಳಿದರು, ದಯವಿಟ್ಟು ಹೆಂಗಸರು ಅವರಿವರ ಬಗ್ಗೆ ಮಾತಾಡುವುದನ್ನು ಕಮ್ಮಿ ಮಾಡಿ ಸಮಯವನ್ನು ಒಳ್ಳೆಯ ಕೆಲಸಗಳಿಗಾಗಿ ಉಪಯೋಗಿಸಿ, ಮಾತು ಕಮ್ಮಿಯಾದರೆ ಸಾಧನೆಗಳು ಹೆಚ್ಚಾಗುತ್ತವೆ, ಎಷ್ಟು ಸಾಧ್ಯವೋ ಅಷ್ಟು ಓದಿ, ಏಕಂದರೆ ನಿಮ್ಮ ಮಕ್ಕಳಿಗೆ ನೀವೇ ರೋಲ್ ಮಾಡೆಲ್ ಆಗಿರುತ್ತೀರಿ, ನೀವು ಹೇಗೆ ಕೆಲಸ ಮಾತು ನಡೆ ನುಡಿಗಳನ್ನೂ ನಿಭಾಯಿಸುತ್ತೀರೋ ಅದನ್ನೇ ಅವರು ಕಲಿಯುತ್ತಾರೆ ಎಂದರು".
ಹಾಗೆ ತನ್ನ ಅನುಭವಗಳನ್ನು ತುಂಬಾ ಚಂದವಾಗಿ ಹಂಚಿಕೊಂಡರು. ಅವರು ಹೇಳಿದ ಎಲ್ಲವನ್ನು ಬರೆಯುವಷ್ಟು ನನಗೆ ಭಾಷಾಜ್ನ್ಯಾನವಿಲ್ಲ ಹಾಗಾಗಿ ಕೆಲವೊಂದನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಹೀಗೆ ಅವರು ಮಾತಾಡಿ ಆದಮೇಲೆ ಕಾರ್ಯಕ್ರಮದ ನಿರೂಪಕಿಯೊಬ್ಬರು "ಡಾಲರ್ ಸೊಸೆ" ಮತ್ತು "ಮಹಾಶ್ವೇತೆ" ಕಾದಂಬರಿಗಳ ಪರಿಣಾಮವನ್ನು ಹೇಳಿದಾಗ ನಿಜಕ್ಕೊ ಬಹಳ ಸಂತೋಷವಾಯ್ತು. ಅವರ "ಮನದ ಮಾತು" ಮತ್ತು "ಸಾಫ್ಟಮನ"ದಲ್ಲಿ ಬಂದು ಹೋದ ಅನುಭವಗಳನ್ನು ಸ್ವತಃ ಸುಧಾಮ್ಮನ ಬಾಯಲ್ಲಿ ಕೇಳಿ ಮತ್ತಷ್ಟು ಖುಷಿ ಆಯ್ತು.
ಒಟ್ಟಿನಲ್ಲಿ ಸುಧಾಮೂರ್ತಿ ಅವರು ಮತ್ತಷ್ಟು ಬರೆಯಲಿ, ಅವರ ಕೀರ್ತಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತಾ, ನೆನ್ನೆಯ ದಿನ ನನ್ನ ಜೀವನದಲ್ಲಿ ಮರೆಯಲಾಗದ ದಿನ ಎಂದು ಸ್ಮರಿಸುತ್ತ, ಅವರಿಗೆ ನನ್ನ ನಮನಗಳನ್ನು ಅರ್ಪಿಸುತ್ತಿದ್ದೇನೆ.
No comments:
Post a Comment