Saturday 25 February 2017

ಲೈಫ್ ಈಸ್ ಬ್ಯೂಟಿಫುಲ್


ಬಹಳ ದಿನಗಳ ನಂತರ ನೆನ್ನೆ ಮಧ್ಯಾಹ್ನ ಓದಲು ಆರಂಭಿಸಿದ ಪುಸ್ತಕವನ್ನು ಸಂಜೆಗೆ ಅಂದರೆ ಕೊನೆವರೆಗೂ ಬಿಡದಂತೆ ಮುಗಿಸಿಬಿಟ್ಟೆ ಅದೇ ಜೋಗಿ ಅವರ "ಲೈಫ್ ಈಸ್ ಬ್ಯೂಟಿಫುಲ್" ಪುಸ್ತಕ. ಇಲ್ಲಿ ಯಾವುದೇ ಕಥೆಯಿಲ್ಲ, ಕಾದಂಬರಿಯೂ ಅಲ್ಲ, ಪಾತ್ರಗಳು ಸಹ ಇಲ್ಲ. ಇಲ್ಲಿ ತುಂಬಿರುವುದೆಲ್ಲ ನಾವು ಮತ್ತು ನಮ್ಮ ಬದುಕು ಮಾತ್ರ. 

ಎಲ್ಲಕ್ಕಿಂತ ಜಾಸ್ತಿ ಹಿಡಿಡಿಸಿದ್ದು ವಿಶೇಷವಾದ ಮುನ್ನುಡಿ. ಅಲ್ಲಿ ನಾನು ತುಂಬಾ ಮೆಚ್ಚಿದ್ದು "ಇವತ್ತು ನಾನು ಎಂಥಾ ಪುಸ್ತಕ ಕೊಟ್ಟರೂ ಓದಬಲ್ಲೆ. ಎಂಥಾ ಕಳಪೆ
 ಪುಸ್ತಕದಲ್ಲೂ ನನಗೆ ಬೇಕಾದ ಒಂದು ಸಾಲು ಸಿಕ್ಕೇ ಸಿಗುತ್ತದೆ ಎಂದು ನಂಬಿದವನು ನಾನು. ಎಂಥಾ ಕಸದ ತೊಟ್ಟಿಗೆ ಎಸೆದರೂ ಅಲ್ಲಿಂದ ಒಂದೆರಡು ಉಪಯುಕ್ತ ವಸ್ತುಗಳನ್ನು ಹೆಕ್ಕಬಹುದು ಎಂಬುದು ನನ್ನ ಭರವಸೆ. " ಲೇಖಕರ ಈ ಮಾತುಗಳು ಎಷ್ಟೋ ಸಲ ನನಗೂ ಸತ್ಯವೆನಿಸಿದೆ, ಏಕೆಂದರೆ ಪ್ರತೀ ಬೇಸರ, ನೋವು, ಒಂಟಿತನ, ಯಾರೊಂದಿಗೂ ಹೇಳಿಕೊಳ್ಳಲಾಗದ ನೀರಸ ಮನಸ್ಥಿತಿಯನ್ನು  ದೂರ ಮಾಡುವ ಶಕ್ತಿಯಿರುವುದು ಪುಸ್ತಕಳೊಂದಿಗಿರುವ ಗಾಢವಾದ ಸ್ನೇಹವೆಂಬುದು ನನ್ನ ನಂಬಿಕೆ ಮತ್ತು ಅನುಭವವವೂ ಕೂಡ. 

ಇನ್ನೊಂದು ವಿಶೇಷವೆಂದರೆ ಲೇಖಕರೂ ಓದುಗರಿಗೆ ಈ ಪುಸ್ತಕ ಓದಲು ಹಾಕಿರುವ ಷರತ್ತುಗಳು. ನೀವು ಈ ಕೆಳಗಿನ ವರ್ಗಕ್ಕೆ ಸೇರಿದವರಾಗಿದ್ದರೆ, ದಯವಿಟ್ಟು ಈ ಪುಸ್ತಕವನ್ನು ಓದಬೇಡಿ.
1. ದಿನಕ್ಕೆ ಹತ್ತು ಗಂಟೆಗಿಂತಲೂ ಹೆಚ್ಚು ಫೋನಲ್ಲಿ ಮಾತಾಡುವವರು.
2. ದಿನವಡೀ ಫೇಸ್ ಬುಕ್ ನೋಡುತ್ತಾ ಕೂತಿರುವವರು.
3. ಮಾತಿಗಂತ ವಾಟ್ಸ್ ಆಪ್ ಉತ್ತಮ ಎಂದು ನಂಬಿದವರು.
4. ಸಿನಿಮಾ ಹಾಡುಗಳೇ ಜೀವನದ ಸರ್ವಸ್ವ ಎಂದುಕೊಂಡಿರುವವರು.

ಇದನ್ನೂ ಓದಿ ಅರೇ ಹೌದಲ್ಲ ಈ ೪ ವರ್ಗಗಳಲ್ಲಿ ನಾವು ಕೆಲವೊಮ್ಮೆ ಸೇರಿರುವವರಾಗಿರುತ್ತೇವೆ ಆದರೆ ಅವರು ಹೇಳಿದಷ್ಟು ಸಮಯವಲ್ಲದಿದ್ದರೂ ಸ್ವಲ್ಪ ಹೊತ್ತಾದರೂ ಮೇಲಿನ ೪ನ್ನೂ ಮಾಡಿರುತ್ತೇವೆ. ಈಗಿನ ದಿನಗಳಲ್ಲಿ ವಾಟ್ಸಾಪ್ ಮತ್ತು ಫೇಸ್ಬುಕ್ ಜೀವನದ ಅವಿಭಾಜ್ಯ ಅಂಗಗಳೇನೋ ಎನ್ನುವ ಮಟ್ಟಿಗೆ ನಾವು ಹಚ್ಚಿಕೊಂಡಿದ್ದೇವೆ, ಅವೆರೆಡು ಇಲ್ಲದಿದ್ದರೆ ಜೀವನವೇ ಇಲ್ಲ ಎನ್ನುವ ಮಟ್ಟವನ್ನು ಸುಮಾರು ಜನ ಈಗಾಗಲೇ ತಲುಪಿರಬಹುದು. ಆದರೆ ಇದರಾಚೆಗೂ ಬದುಕಿದೆ, ಸಂತೋಷವಿದೆ, ನೆಮ್ಮದಿಯಿದೆ ಎಂದು ಈ ಪುಸ್ತಕ ಓದಿದರೇ ತಿಳಿಯುತ್ತದೆ. ಏಕೆಂದರೆ ಇಲ್ಲಿ ಸ್ನೇಹ, ಪ್ರೇಮ, ಗುರು ಶಿಷ್ಯ, ಸಿಟ್ಟು, ಒಂಟಿತನ , ನೋವು ನಲಿವು ಹೀಗೆ ಒಬ್ಬ ಮನುಷ್ಯನ ಜೀವನದಲ್ಲಿ ಏನೇನು ಸಮಸ್ಯೆ ಬರಬಹುದೋ, ಯಾವೆಲ್ಲ ವ್ಯಕ್ತಿಗಳು ಬರಬಹುದೋ, ಏನೆಲ್ಲಾ ಮನಸ್ಥಿತಿಗಳನ್ನು ತಲುಪಬಹುದೋ, ಹಾಗೆ ಬರೀ ಪ್ರಶ್ನೆಗಳೇ ತುಂಬಿಕೊಂಡು ಹೇಗೆಲ್ಲ  ಉತ್ತರಗಳ ಹುಡುಕಾಟ ನಡೆಸಬಹುದೋ, ಹೀಗೆ ಹತ್ತು ಹಲವಾರು ವಿಷಯಗಳು ಬಂದು ಹೋಗುತ್ತವೆ. 

ಈ ಪುಸ್ತಕದ ಮೂಲ ಉದ್ದೇಶವೇ ಸಮಸ್ಯೆಗಳ ಸುತ್ತ ಸುತ್ತದೆ, ಪ್ರಶ್ನೆಗಳ ಹಿಂದೆಯೇ ಓಡದೆ, ಇರುವ ಚಿಕ್ಕ ಚಿಕ್ಕ ಸಂತೋಷವನ್ನೇ ಅನುಭವಿಸಿ, ಯಾವುದೇ ಕ್ಷಣವನ್ನು ವ್ಯರ್ಥ ಮಾಡದೇ ಬದುಕಿ ಸಮಸ್ಯೆಯ ಜೊತೆ ಶಾಂತವಾಗಿ ಯೋಚಿಸಿದರೆ ಪೂರ್ತಿ ಪರಿಹಾರ ಸಿಗದಿದ್ದರೂ ಸ್ವಲ್ಪ ನೆಮ್ಮದಿಯ ಹಾದಿಯಂತೂ ಸಿಕ್ಕೇ ಸಿಗುತ್ತದೆ ಎನ್ನುವ ಅಂಶ. ಈ ಪುಸ್ತಕ ಓದಿದಮೇಲೆ ಅನಿಸಿದ್ದು ಅರೆ ಹೌದಲ್ಲಾ!!! ಹೀಗೂ ನಮ್ಮ ಲೈಫ್ ನ ಚೆನ್ನಾಗಿ ಮಾಡ್ಕೋಬಹುದು ಮತ್ತು ನೆಮ್ಮದಿಗೆ, ಯಶಸ್ಸಿಗೆ ಯಾರನ್ನೂ ನೆನೆಯದೇ ನಾವೇ ಎಲ್ಲ ದಾರಿ ಕಂಡುಕೊಳ್ಳಬಹುದು ಎನಿಸಿತು. ನಿಜಕ್ಕೂ "ಲೈಫ್ ಈಸ್ ಬ್ಯೂಟಿಫುಲ್" ಓದಿದರೆ ಸಿಗುವುದು ಲೈಫ್ ಆಗುವುದು ಕಲರ್ಫುಲ್, ಮೀನಿಂಗ್ಫುಲ್ ಮತ್ತು ಸಿಗುವುದು ಪ್ರತಿಯೊಬ್ಬರಿಗೂ ಇನ್ಸ್ಪಿರೇಷನ್ ಫುಲ್ ಅಂಶಗಳೇ ಎಂದು ಹೇಳಲು ಇಚ್ಚಿಸುತ್ತೇನೆ. 

ಮತ್ತೊಮ್ಮೆ  ನಾ ಆಗಿರುವೆ ಈ  ಕೂಟಕ್ಕೆ ಥ್ಯಾಂಕ್ ಫುಲ್ 

No comments: