ಸುಧಾ ಮೂರ್ತಿ ಅವರ "ಸಾಮಾನ್ಯರಲ್ಲಿ ಅಸಾಮಾನ್ಯರು" ಪುಸ್ತಕದ ಮೂಲ ವಿಷಯ ಏನೆಂದರೆ ಹೊರಗಿನಿಂದ ಸಾಮನ್ಯರಂತೆ ಕಂಡರೂ ಅವರಲ್ಲಡಗಿರುವ ಅಸಾಮಾನ್ಯ ಗುಣಗಳನ್ನು ಹೊರ ತರುವ ಪ್ರಯತ್ನ. ಇಲ್ಲಿ ೧೯ ವ್ಯಕ್ತಿಗಳ ಪರಿಚಯ, ಅವರ ಅಸಾಮಾನ್ಯ ಗುಣಗಳು ಮತ್ತು ಅವರಿಗಾಗಿ ಇಟ್ಟಿರುವ ಶೀರ್ಷಿಕೆ ಎಲ್ಲವೂ ಇಷ್ಟವಾದವು.
ಮೂಲತಃ ಲೇಖಕರು ಹುಬ್ಬಳ್ಳಿಯವರಾಗಿದ್ದು, ಉತ್ತರ ಕರ್ನಾಟಕದ ಸಂಸ್ಕೃತಿ, ಖಡಕ್ ಮಾತಿನ ಧಾಟಿ ಮತ್ತಿತರ ವಿಶಿಷ್ಟತೆಗಳನ್ನು ತೆಗೆದುಕೊಂಡು ಕೆಲವು ವ್ಯಕ್ತಿಗಳ ಚಿತ್ರಣ ಇಲ್ಲಿ ಮೂಡಿಸಿದ್ದಾರೆ. ನಾನು ಕೂಡ ಉತ್ತರ ಕರ್ನಾಟಕದವಳಾಗಿದ್ದರಿಂದ ಈ ಕೃತಿ ಮತ್ತಷ್ಟು ಇಷ್ಟವಾಯಿತು, ಅದಕ್ಕೆ ಕಾರಣ ನೇರ ನುಡಿ, ಹೊರಗೆ ಕಟುವಾಗಿ ಕಂಡರೂ ಸ್ಪಷ್ಟತೆ ಎದ್ದುಕಾಣುವಂತ ಮಾತು, ಒಳಮನಸಿನಲ್ಲಿ ಪ್ರೇಮ, ಅಂತಃಕರಣ, ಪರೋಪಕಾರ, ವಾತ್ಸಲ್ಯ ತುಂಬಿದ ಮನಸುಗಳ ಚಿತ್ರಣ.
ನನಗೆ ಎಲ್ಲರೂ ಹೇಳುತ್ತಾರೆ ಉತ್ತರ ಕರ್ನಾಟಕದ ಜನರ ಮಾತು ತುಂಬಾ ಒರಟು, ಎಂದು ಅದು ನಿಜವೇ ಆದರೂ ಹೊರಗೊಂದು ಒಳಗೊಂದು ಮಾತು ಆಡದ ನೇರ ಮಾತುಗಾರರು ಎಂಬ ಖುಷಿ ನನಗಿದೆ. ಇನ್ನು ಈ ಪುಸ್ತಕದಲ್ಲಿ ಚಿತ್ರಿತರಾಗಿರುವವರಲ್ಲಿ, ಕೆಳಮಟ್ಟದ ಆರ್ಥಿಕ ಪರಿಸ್ಥಿತಿಯಲ್ಲಿರುವವರು, ಕಡಿಮೆ ಓದಿದವರು, ಮಾಧ್ಯಮ ವರ್ಗದ ಕುಟುಂಬದವರು ಹೀಗೆ ಸಾಮಾನ್ಯರೇ ಇದ್ದಾರೆ. ಕಂಡಕ್ಟರ್, ಅಂಗಡಿ ನಡೆಸುವ, ದಾನ, ಅಸೂಯೆ, ಗುಣವಂತರು, ಸಾಧನೆಗೆ ಪ್ರಸಿದ್ಧಿಯಾದವರು ಹೀಗೆ ಹತ್ತು ಹಲವಾರು ಧನಾತ್ಮಕ ಮತ್ತು ಋಣಾತ್ಮಕ ಗುಣಗಳಿದ್ದವರ ಚಿತ್ರಣ ಇಲ್ಲಿ ಮೂಡಿದೆ. ಹಾಗೆ ಇಲ್ಲಿ ಬರುವ ಸಂಭಾಷಣೆಯ ಶೈಲಿ ಕೂಡ ಬಹಳ ಇಷ್ಟವಾಗುತ್ತದೆ.
ಈ ಕೃತಿಯಲ್ಲಿಯೂ ಕೂಡ ಎಂದಿನಂತೆ ಕಲಿಯುವ ಅಂಶಗಳನ್ನು ಸುಧಾಮೂರ್ತಿಯವರು ಹೇಳಿದ್ದಾರೆ. ಒಳ್ಳೆಯ ಮತ್ತು ಕೆಟ್ಟ ಗುಣಗಳ ವ್ಯಕ್ತಿಗಳು ನಮ್ಮ ಸುತ್ತಮುತ್ತಲೂ ಇರುತ್ತಾರೆ. ಅವುಗಳಲ್ಲಿ ಕೆಲವೊಂದನ್ನು ತೆಗೆದುಕೊಂಡು ಋಣಾತ್ಮಕ ಅಂಶಗಳಿಂದ ದೂರಾಗಿ ಬಾಳಿದರೆ ನಮಗೂ ಮತ್ತು ನಮ್ಮ ಸುತ್ತ ಇರುವವರಿಗೂ ಅನುಕೂಲವೆಂಬುದು ನನ್ನ ಅಭಿಪ್ರಾಯ.
ಕೂಟಕ್ಕೆ ಮತ್ತೊಮ್ಮೆ ಧನ್ಯವಾದಗಳು. :)
No comments:
Post a Comment