Friday 2 December 2016

ಕ್ರೀಮ್ ಆಫ್ ಕೈಲಾಸಂ

ರಂಗಭೂಮಿಯ ನಾಟಕಾಕಾರ ಮತ್ತು ಹಾಸ್ಯಗಾರ ಟಿ.ಪಿ.ಕೈಲಾಸಂ ಅವರ ಬಗ್ಗೆ 'ಕ್ರೀಮ್ ಆಫ್ ಕೈಲಾಸಂ' ಪುಸ್ತಕ ಓದಿದೆ. ಬಿ.ಎಸ್. ಕೇಶವರಾವ್ ಈ ಪುಸ್ತಕದ ಸಂಪಾದಕರು. ಒಂದು ಸಲ ಓದೋಕೆ ಕೂತರೆ ಸಾಕು ಮತ್ತೆ ನೀವು ಪೂರ್ತಿ ಓದದೆ ಎದ್ದೇಳುವುದಿಲ್ಲ. ಯಾಕೆಂದರೆ ಕೈಲಾಸಂ ಅವರ ನಾಟಕದಲ್ಲಿ ಬರುವ ಸನ್ನಿವೇಶಗಳು, ಸಂಭಾಷಣೆ, ಕೈಲಾಸಂ ಅವರ ಹಾಸ್ಯಭರಿತ ಮಾತುಗಳು, ಬದುಕು ಎಲ್ಲವನ್ನೂ ಸಂಪೂರ್ಣವಾಗಿ ಈ ಪುಸ್ತಕದಲ್ಲಿ ತೆರೆದಿಡಲಾಗಿದೆ. ಕೈಲಾಸಂ ಅವರ ಕೆಲವು ಮಾತುಗಳನ್ನು ಓದುವಾಗಂತೂ ಹೊಟ್ಟೆ ಹುಣ್ಣಾಗುವಷ್ಟು ನಗುವುದಂತೂ ಖಂಡಿತ. ಕೈಲಾಸಂ ಅವರ ಇಡೀ ಬದುಕಿನ ಬಗ್ಗೆ ತುಂಬಾ ಚೆನ್ನಾಗಿ ನಿರೂಪಿಸಲಾಗಿದೆ. ಚಾಮರಾಜಪೇಟೆಯ ಕೆ.ವಿ ಅಯ್ಯರ್ ಅವರ ವ್ಯಾಯಾಮ ಶಾಲೆ ಪಕ್ಕದ ಇನ್ನೊಂದು ಕೋಣೆಯಲ್ಲಿ ವಾಸಿಸುತ್ತಿದ್ದ ಕೈಲಾಸಂ ಕುದುರೆ, ಹಸುಗಳನ್ನು ಕಟ್ಟುತ್ತಿದ್ದ ಒಂದು ಬದಿಯಲ್ಲಿ ತನ್ನ ರೂಮನ್ನು ಆರಿಸಿಕೊಂಡಿದ್ದು, ಅದಕ್ಕೆ 'ನೂಕ್' ಅಂತ ಹೆಸರು ನೀಡಿದ್ದು, ಹೆಗ್ಗಣ-ಇಲಿಗಳ ಬಿಲವಾಗಿದ್ದ ಆ ಸ್ಥಳದಲ್ಲಿ ಕುಳಿತು ಕೈಲಾಸಂ 'ನಾಟಕ'ಗಳನ್ನು ಬರೆದಿದ್ದು ಎಲ್ಲವನ್ನೂ 'ಕ್ರೀಂ ಆಫ್ ಕೈಲಾಸ'ದಲ್ಲಿ ಹೇಳಲಾಗಿದೆ. ಒಟ್ಟಿನಲ್ಲಿ ಕೈಲಾಸಂ ಬದುಕನ್ನೇ ನಮ್ಮೆದುರು ಆ ಪುಟ್ಟ ಪುಸ್ತಕ ಕಟ್ಟಿಕೊಡುತ್ತದೆ.

ಕೈಲಾಸಂ ಅವರ ಬಗ್ಗೆ ಸಾಕಷ್ಟು ಕೇಳಿದ್ದೆ ಆದರೆ ಅವರ ನಾಟಕಗಳ ಬಗ್ಗೆ ಆಗಲಿ ಅಥವಾ ಅವರ ಬಗ್ಗೆ ಆಗಲಿ ಎಲ್ಲೂ ಓದಿರಲಿಲ್ಲ ಆದರೆ ಈ ಪುಸ್ತಕ ಓದಿದ ಮೇಲೆ ಅವರ ಹಾಸ್ಯ ಪ್ರವೃತ್ತಿ, ಉನ್ನತ ಮಟ್ಟದ ಕುಟುಂಬ, ಓದು, ಕೆಲಸ ಎಲ್ಲಾ ಇದ್ದರೂ ಅವರು ಅದರ ಪ್ರಭಾವವಕ್ಕೆ ಒಳಗಾಗದೆ ಸದಾ ನಿಗರ್ವಿಯಾಗಿ ಬದುಕಿದ ರೀತಿ ನನ್ನನ್ನು ತುಂಬಾ ಗಮನ ಸೆಳೆಯಿತು. ಹಾಗಾಗಿ ಅವರ ಮೇಲಿನ ಆಸಕ್ತಿಯಿಂದಾಗಿ ಕೈಲಾಸಂ ಅವರ ಬಗ್ಗೆ ಹೆಚ್ಚು ತಿಳಿಯುವ ಆಸೆಯಿಂದ ಅಂತರಜಾಲದಲ್ಲಿ ನಾನು ತಿಳಿದ ಕೆಲವು ಅಂಶಗಳನ್ನು ಇಲ್ಲಿ ಹಂಚಿಕೊಳ್ಳಲು ಇಚ್ಚಿಸುತ್ತೇನೆ.

ತ್ಯಾಗರಾಜ ಪರಮಶಿವ ಕೈಲಾಸಂರ ಪೂರ್ವಜರು ತಮಿಳುನಾಡಿನ ತಂಜಾವೂರು ಕಡೆಯವರು. ದಿವಾನ್ ಶೇಷಾದ್ರಿ ಅಯ್ಯರ್ ಕಾಲದಲ್ಲಿ ಮೈಸೂರಿಗೆ ಬಂದು ನೆಲೆಸಿದವರು.ಅವರ ತಂದೆ ಪರಮಶಿವ ಅಯ್ಯರ್ ಮೈಸೂರಿನ ಛೀಫ್ ಕೋರ್ಟಿನ ಜಡ್ಜಗಿದ್ದರು. ಇಂಥಾ ದೊಡ್ಡ ಮನೆತನದಲ್ಲಿ ಜನ್ಮ ತಳೆದವರು ಕೈಲಾಸಂ. ಕೈಲಾಸಂ ಬಾಲ್ಯದಲ್ಲಿ ಶ್ರೀಮಂತಿಕೆಯಲ್ಲಿ ಬೆಳೆದರು. ಮನೆಯಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲ. ಹಾಗೆಂದು ಶಿಸ್ತು ಇರಲಿಲ್ಲ ಎನ್ನುವಂತಿಲ್ಲ ಕೈಲಾಸಂಗೆ ತಾಯಿಯಲ್ಲಿ ತುಂಬಾ ಪ್ರೀತಿ, ತಂದೆ-ದೊಡ್ಡಪ್ಪಂದಿರನ್ನು ಕಂಡರೆ ಪ್ರೀತಿಯೊಡನೆ ಸ್ವಲ್ಪ ಭಯ. ಅವರು ದೊಡ್ಡವರಾದಮೇಲೂ ತಂದೆ-ದೊಡ್ಡಪ್ಪ ಎಂದರೆ ಬಹು ಗೌರವದಿಂದ ನಡೆದುಕೊಳ್ಳುತ್ತಿದ್ದರು. ತಂದೆ ಮನೆಯಲ್ಲಿದ್ದಾಗ ತಮ್ಮ ಸ್ನೇಹಿತರು ಬಂದರೆ ಕೈಲಾಸಂ ಹೆಜ್ಜೆ ಶಬ್ದವಾಗದಂತೆ ಬನ್ನಿ ಎಂದು ಸನ್ನೆ ಮಾಡುವರು. ಅವರ ಬಗ್ಗೆ ಓದಿದ್ದೆಲ್ಲವನ್ನು ಬರೆಯುವುದು ಕಷ್ಟ ನನಗೆ ತಿಳಿದಷ್ಟು ಹೇಳಿದ್ದೇನೆ.

ಕೊನೆಯದಾಗಿ ಒಂದೆರಡು ಮಾತುಗಳು, ಕನ್ನಡ ಸಾಹಿತ್ಯ ಲೋಕದಲ್ಲಿ, ಅದರಲ್ಲೂ, ನಾಟಕರಂಗದಲ್ಲಿ , ತಮ್ಮದೇ ಆದ ಛಾಪು ಮೂಡಿಸಿದ ಕೈಲಾಸಂ ತಮ್ಮ ಬದುಕಿನ ಶೈಲಿಯಿಂದ, ಹಾಸ್ಯಮಯ ಮಾತಿನ ಮೋಡಿಯಿಂದ, ಪ್ರತಿಭೆಯಿಂದ ,ಬಹುವಿಷಯಗಳಲ್ಲಿ ವಿದ್ವತ್ತಿನಿಂದ , ದಂತಕಥೆಯೇ ಆಗಿಹೋಗಿದ್ದಾರೆ. ಅವರು ಇಲ್ಲವಾಗಿ ಆರು ದಶಕಗಳು ಮೀರಿದ್ದರೂ, ಇಂದಿಗೂ ಅವರ ಬಗೆಗಿನ ಕುತೂಹಲ, ಆದರಾಭಿಮಾನ , ಕನ್ನಡಿಗರಲ್ಲಿ ಜಾಗೃತವಾಗಿದೆ.

No comments: