ಯಂಡಮೂರಿ ವೀರೇಂದ್ರನಾಥರ "ಷಾಕ್ಮೋರಾ" ಓದುವಾಗ ಆರಂಭದಲ್ಲಿ ಮಾಟ ಮಂತ್ರದ ಕಥೆಯೇ ಮುಖ್ಯವಾಗಿದೆ ಎಂದು ಭಾಸವಾದರೂ ಇದೊಂದು ವಿಜ್ಞಾನ ಮತ್ತು ಮಾನವಾತೀತ ಶಕ್ತಿಗಳ ನಡುವೆ ನಡೆಯುವ ಘರ್ಷಣೆ... ಆರಂಭದಲ್ಲಿ "ತುಳಸೀ ದಳ" ನೆನಪಾದರೂ ಮುಂದೆ ಹೋದಂತೆ ಕುತೂಹಲವನ್ನು ಹುಟ್ಟಿಸಿ ಓದುಗರಿಗೆ ವಿಶಿಷ್ಟ ಅನುಭವವನ್ನು ಕೊಡುತ್ತದೆ.
ಇಲ್ಲಿ ನನಗಿಷ್ಟವಾದ ಮತ್ತೊಂದು ಅಂಶವೆಂದರೆ ೨೪ ನೇ ಪುಟದಲ್ಲಿ ಬರುವ ೪ ಬಗೆಯ ವಿಮರ್ಶಕರ ಬಗ್ಗೆ ಇರುವ ಟಿಪ್ಪಣಿಗಳು. ಪುಸ್ತಕ ಬರೆಯುವವರಿಗೂ, ಓದುವವರಿಗೂ ಮತ್ತು ಪುಸ್ತಕಗಳ ಬಗ್ಗೆ ತಮ್ಮ ಅಭಿಪ್ರಾಯ ಮತ್ತು ವಿಮರ್ಶೆಗಳನ್ನು ಬರೆಯುವವರಿಗೆ ಈ ಅಂಶವು ತುಂಬಾ ಸಹಾಯ ಮಾಡುತ್ತದೆ.
ಈ ಕಥೆಯಲ್ಲಿ ಬರುವ ಪುಟ್ಟ ಮಗು ಆರತಿಯ ಮೇಲೆ ನಡೆಯುವ ಹಲ್ಲೆ, ಆರೋಗ್ಯದ ಏರುಪೇರು, ಅದರಿಂದ ಮನೆಯವರಿಗೆ ಆದ ನೋವು ಹಿಂಸೆ, ಇತ್ಯಾದಿಗಳ ಸುತ್ತಾ ತುಂಬಾ ವಿಭಿನ್ನವಾಗಿ ಅನ್ನುವುದಕ್ಕಿಂತ ಓದುಗರೇ ಗೊಂದಲಗೊಂಡು ಇದೇನು ನಾವಂದುಕೊಂಡದ್ದೇ ಒಂದು ಆದರೆ ಕಥೆಯಲ್ಲಿ ಮುಂದೆ ನಡೆಯುತ್ತಿರುವುದೇ ಮತ್ತೊಂದು ಎಂದು ಒದ್ದಾಡುವಂತೆ ಮಾಡುತ್ತದೆ. ಆದರೆ ಈ ಪುಸ್ತಕದ ಹೆಸರು ಮತ್ತು ಆರಂಭದ ಕಥೆ ಕೇವಲ ಕ್ಷುದ್ರವಿದ್ಯೆಯನ್ನು ಮುಖ್ಯ ಅಂಶವಾಗಿದೆಯೆಂದು ಎನಿಸಿದರೂ ಕಥೆಯ ಆಳದಲ್ಲಿ ಬೇರೆಯೇ ಅಂಶವಿದೆಯೆಂದು ಓದುಗರಿಗೆ ಮುಂದೆ ಮುಂದೆ ತಿಳಿಯುತ್ತದೆ!!! ಅದೇನೆಂದು ಓದುಗರು ಓದಿಯೇ ತಿಳಿಯಬೇಕು...
ಒಟ್ಟಿನಲ್ಲಿ ಇಲ್ಲಿ ಮೂಢನಂಬಿಕೆ, ಮಾಟ ಮಂತ್ರಗಳಿಗಿಂತ ಮನುಷ್ಯನ ಮುಠಾಳತನ ಮತ್ತು ವಿಜ್ಞಾನಗಳ ನಡುವಿನ ಒಂದು ವಾಗ್ವಾದವೆಂದು ನನಗನಿಸಿತು. ಕಡಿಮೆ ಪುಟಗಳ ಕೃತಿಯಾದರೂ ಅಷ್ಟೇ ವಿಭಿನ್ನ ಅನುಭವ ನೀಡಿದ್ದು ಸತ್ಯ ಹಾಗಾಗಿ ಇಂದು ಸಂಜೆ ಓದಲು ಆರಂಭಿಸಿದ ನಾನು ಈಗಾಗಲೇ ಮುಗಿಸಿದ್ದೇನೆ. ಮತ್ತೊಮ್ಮೆ ಈ ಕನ್ನಡ ಕಾದಂಬರಿ ಕೂಟಕ್ಕೆ ಧನ್ಯವಾದಗಳು.
No comments:
Post a Comment