Monday 5 December 2016

ಬೆಟ್ಟದ ಜೀವ




ಶಿವರಾಮ ಕಾರಂತರ "ಬೆಟ್ಟದ ಜೀವ" ನಿಜಕ್ಕೂ ಒಂದು ಸುಂದರ ಕೃತಿ. ಇದು ಕಾರಂತರಿಗಾದ ಅನುಭವವದ ಕಥೆ. ಇಲ್ಲಿನ ವಿಶೇಷವೆಂದರೆ ಮಲೆನಾಡ ಸೊಬಗನ್ನು ಬರೀ ಕಣ್ಣಿಗೆ ಕಟ್ಟುವಂತೆ ಹೇಳಿಲ್ಲ ... ಸ್ವತಃ ನಾವೇ ಅಲ್ಲಿ ಇದ್ದೇವೇನೋ ಅನ್ನುವಷ್ಟು ಮನೋಜ್ಞವಾಗಿ ನಿಸರ್ಗ ಸೌಂದರ್ಯವನ್ನು ಚಿತ್ರಿಸಿದ್ದಾರೆ. 

ಕಾರಂತರು ಪುತ್ತೂರಿನಲ್ಲಿ ನೆಲೆಸಿದಾಗ ಕೆಲಸಕ್ಕೆಂದು ಹಳ್ಳಿ ಮಾರ್ಗವಾಗಿ ನಡೆಯುತ್ತಾ ಎಲ್ಲೋ ಹೋಗಬೇಕಾದವರು ಮತ್ತೆಲ್ಲೋ ದಾರಿ ತಪ್ಪಿ ಹೋಗುತ್ತಾರೆ ಅಲ್ಲಿ ಒಬ್ಬ ವ್ಯಕ್ತಿ ಸಿಗುತ್ತಾರೆ ಅವರೇ ದೇರಣ್ಣ. ಅವರು ಗೋಪಾಲಯ್ಯ ಅನ್ನುವರ ಮನೆಗೆ ಕರೆದು ತಂದು ಇರಲು ವ್ಯವಸ್ಥೆ ಮಾಡುತ್ತಾರೆ. ಗೋಪಾಲಯ್ಯ, ಅವರ ಮಡದಿ ಶಂಕರಮ್ಮ, ಅವರ ಸಾಕು ಮಗ ಸೊಸೆ ಮೊಮ್ಮಕ್ಕಳು ಸುತ್ತಾ ನಡೆದ ಕಾರಂತರ ಅನುಭವದ ಕಥೆಯೇ "ಬೆಟ್ಟದ ಜೀವ".

ವಯಸ್ಸಾದ ಅಪ್ಪ ಅಮ್ಮ ಮಕ್ಕಳಿಂದ ದೂರವಿದ್ದು ಪಡುವ ಯಾತನೆ ಇದರ ಮತ್ತೊಂದು ಮುಖ್ಯ ಅಂಶ. ಆ ನೋವಿನಲ್ಲಿಯೂ ಆ ತಂದೆ ತಾಯಿಗಳು ಇದ್ದದರಲ್ಲೇ ಸಂತೋಷ ಕಂಡುಕೊಂಡು ಇದ್ದೊಬ್ಬ ಮಗ ಇಂದು ಬರ್ತಾನೆ ನಾಳೆ ಬರ್ತಾನೆ ಎನ್ನುವ ಭರವಸೆಯಲ್ಲಿ ಜೀವನ ಸಾಗಿಸುತ್ತಾರೆ. ಈ ಭಾವನೆಯನ್ನು ಓದಿಯೇ ಸವಿಯಬೇಕು. ಆದರೆ ಅಪರಿಚಿತರಾಗಿ ಬಂದ ಕಾರಂತರೇ ಅವರ ಮಗನನ್ನು ಹುಡುಕಲು ಸಹಾಯ ಮಾಡುತ್ತಾರೆಂದು ಅವರೆಂದು ಅಂದುಕೊಂಡಿರಲಿಲ್ಲ.

ನನಗೆ ಅತ್ಯಂತ ಮೆಚ್ಚುಗೆಯಾದ ವಿಷಯವೆಂದರೆ ಅಪರಿಚಿತರಾಗಿ ಬಂದ ಕಾರಂತರನ್ನು ಗೋಪಾಲಯ್ಯನವರ ಕುಟುಂಬ ಎಷ್ಟು ಚೆನ್ನಾಗಿ ಅತಿಥಿ ಸತ್ಕಾರ ಮಾಡಿದ್ದಾರೆಂದರೆ ಅದನ್ನಂತೂ ಓದಿ ನನಗೆ ತುಂಬಾ ಆಶ್ಚರ್ಯವಾಯಾಯ್ತು. ಒಂದು ಕ್ಷಣ ನಾನು ಅಂತಹ ಪ್ರಕೃತಿಯ ಸವಿಯಬೇಕು ಆ ರೀತಿ ಜೀವನವ ಒಮ್ಮೆಯಾದರೂ ಅನುಭವಿಸಬೇಕೆಂಬ ಸಣ್ಣ ಆಸೆ ಮನಸ್ಸನ್ನು ಕಾಡಿದ್ದಂತೂ ನಿಜ. ನಿಜಕ್ಕೂ ಈ ಪುಸ್ತಕದಲ್ಲಿ ಅರ್ಥಮಾಡಿಕೊಳ್ಳುವ ಅಂಶಗಳು, ಅನುಭವಿಸಬೇಕಾದ ಅಂಶಗಳು ಬಹಳಷ್ಟಿವೆ. ಆ ಕುಟುಂಬದ ಮುಗ್ಧತೆ, ಕಷ್ಟಪಟ್ಟು ದುಡಿಯುವ ತವಕ, ಮತ್ತೊಬ್ಬರಿಗೆ ಉಪಕಾರ ಮಾಡುತ್ತಾ ಅದರಲ್ಲೇ ಸುಖ ಅನುಭವಿಸೋ ಅವರ ಉದಾರತೆ ನಿಜಕ್ಕೂ ರಮಣೀಯ. ಈ ಕಾದಂಬರಿ ಓದಿ ನಿಜಕ್ಕೂ ನನ್ನ ಮನತುಂಬಿ ಬಂತು.

ಈ ಕಾದಂಬರಿಯಿಂದ ನನಗೆ ಪ್ರಕೃತಿಯ ಮಡಿಲಲ್ಲಿ ಎಷ್ಟು ಸಂತೋಷವಿರುತ್ತದೆ, ನೆಮ್ಮದಿಯಿರುತ್ತದೆ, ಯಾಕಾದರೂ ನಾನು ಆ ಕಾಲದಲ್ಲಿ ಹುಟ್ಟಲಿಲ್ಲ ಎಂದು ಸಂಕಟವೂ ಆಯ್ತು ಜೊತೆಗೆ ಆಗಿನ ಕಾಲದ ಜನರ ಮನಸ್ಥಿತಿಗೂ, ಈಗಿನ ಕಾಲದ ಜನರ ಮನಸ್ಥಿತಿಗೂ ಇರುವ ವ್ಯತ್ಯಾಸ ಕಂಡು ಬಹಳ ಬೇಜಾರಾಯ್ತು. ಆದರೆ ಏನು ಮಾಡುವ ಹಾಗಿಲ್ಲ ಜೀವನ ಹೇಗೆ ಬಂದರೂ ಅದನ್ನು ನಾವಿ ಸ್ವೀಕರಿಸಲೇಬೇಕು. ನಿಜಕ್ಕೂ ಇದರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಇಂತಹ ಅದ್ಭುತ ಕೃತಿಯ ಓದಲು ಅವಕಾಶ ಕೊಟ್ಟ "ಕನ್ನಡ ಕಾದಂಬರಿ ಕೂಟ"ಕ್ಕೆ ಮತ್ತೊಮ್ಮೆ ಧನ್ಯವಾದಗಳು

No comments: