ಬ್ರಾಮ್ ಸ್ಟೋಕರ್ ಅವರ ಪ್ರಸಿದ್ಧ ಕೃತಿ "ಡ್ರಾಕುಲ" (ಕನ್ನಡಕ್ಕೆ ಅನುವಾದ : ವಾಸುದೇವರಾವ್ ). ಈ ಕೃತಿ ಮಾಮೂಲಿ ಕೃತಿಗಳಂತೆ ಬೇಗ ಬೇಗ ಓದಲು ಸಾಧ್ಯವಿಲ್ಲ ಕಾರಣ ಇಲ್ಲಿ ಬರುವ ಆಂಗ್ಲ ಹೆಸರುಗಳು, ಊರುಗಳ ಹೆಸರುಗಳನ್ನು ನೆನಪಿಟ್ಟುಕೊಂಡು ಓದುವುದು ಸ್ವಲ್ಪ ಕಷ್ಟವಾಗುತ್ತದೆ. ಇಲ್ಲಿ ಯಾವುದು ಭಾಗ ಅಥವಾ ಅಧ್ಯಾಯ ರೂಪಗಳಲ್ಲಿ ಕಥೆ ಸಾಗುವುದಿಲ್ಲ ಬದಲಾಗಿ ದಿನಚರಿ, ಪತ್ರವ್ಯವಹಾರ, ದಿನಪತ್ರಿಕೆಯ ತುಣುಕು, ಮತ್ತಿತರ ದಾಖಲೆಗಳ ಒಳಗೊಂಡ ೨೬ ಪ್ರಕರಣಗಳಲ್ಲಿ "ಡ್ರಾಕುಲ" ಯಾರು ಎಂತಹ ಕ್ರೂರ ವ್ಯಕ್ತಿಯೆಂದು ಲೇಖಕರು ಅಮೋಘವಾಗಿ ಚಿತ್ರಿಸಿದ್ದಾರೆ.
"ಡ್ರಾಕುಲ" ೧೯೩೧ರಲ್ಲೇ ಹಾಲಿವುಡ್ ಚಿತ್ರವಾಗಿ ತೆರೆಗೆ ಬಂದು, ಅದನ್ನೇ ಆದರಿಸಿ ತೆಗೆದಿರುವ ಹಾಲಿವುಡ್ ಚಿತ್ರಗಳೋ ೨೦೦ ಕ್ಕೂ ಹೆಚ್ಚು. ಇತ್ತೀಚೆಗೂ (೨೦೧೪ರಲ್ಲಿ) ಕೂಡ ಒಂದು ಹಾಲಿವುಡ್ ಚಿತ್ರ ಬಂದಿದೆ. ಇದೇ ಸಾಕು ಇದರ ಜನಪ್ರಿಯತೆಯನ್ನು ಸಾರಲು. ( ಇದೆಲ್ಲ ಡ್ರಾಕುಲ ಬಗ್ಗೆ ಅಂತರ್ಜಾಲದಲ್ಲಿ ನಾನು ಪಡೆದ ಮಾಹಿತಿ ಸುಮ್ಮನೆ ಕುತೂಹಲಕ್ಕೆ ಹುಡುಕುತ್ತಿದ್ದಾಗ ಸಿಕ್ಕ ಮಾಹಿತಿಯಿದು).
ಇನ್ನು ಕಥೆಗೆ ಬರುವುದಾದರೆ ಜೊನಾಥನ್ ಹಾರ್ಕರ್ ಈ ಕಥೆಯಲ್ಲಿ ಬರುವ ಮೊದಲ ವ್ಯಕ್ತಿ ಅವನು ಒಬ್ಬ ಲಾಯರ್ ಆಗಿರುತ್ತಾನೆ. ಟ್ರಾನ್ಸಿಲ್ವೇನಿಯಾ ಪ್ರಾಂತ್ಯದ ಕೌಂಟ್ ಡ್ರಾಕುಲಾಗೆ ಕಾನೂನು ಸಲಹೆ ನೀಡಲು, ಅವನನ್ನು ಕಳುಹಿಸಲಾಗುತ್ತದೆ. ಆ ಸ್ಥಳವನ್ನು ಮುಟ್ಟುವಷ್ಟರಲ್ಲೇ ಸ್ಥಳೀಯರು ತೋರ್ಪಡಿಸುವ ಭೀತಿಯಿಂದ ಹಾರ್ಕರ್ ಅಚ್ಚರಿಗೊಳ್ಳುತ್ತಾನೆ. ಆದರೂ ಕಂಗೆಡದೆ ಪ್ರಯಾಣ ಮುಂದುವರೆಸಿ ಕೌಂಟ್ ಅನ್ನು ಭೇಟಿಯಾಗುತ್ತಾನೆ. ಕೌಂಟ್ ಡ್ರಾಕುಲಾನ ಆಥಿತ್ಯ ಸ್ವೀಕರಿಸಿ, ಅವನಿಗೆ ಕಾನೂನು ಸಲಹೆ ನೀಡುವ ಕಾರ್ಯ ಕೈಗೊಳ್ಳುತ್ತಾನೆ. ಮುಂದೆ ಅಲ್ಲಿ ನಡೆಯುವ ಘಟನೆಗಳು ಭೀತಿಯನ್ನು ಮೂಡಿಸುತ್ತದೆ. ಅದೇನೆಂದು ಓದಿಯೇ ತಿಳಿಯಬೇಕು ಅಷ್ಟು ಭಯಾನಕ ವಾತಾವರಣವನ್ನು ಓದುಗರು ಅನುಭವಿಸುತ್ತಾರೆ.
ಕೌಂಟ್ ಡ್ರಾಕುಲ ಅಮೃತರ ಅರಸ ಎಂದರೆ ಅವನಿಗೆ ಸಾವೇ ಇಲ್ಲದ ರಕ್ತ ಭಕ್ಷಕ. ತಾನು ಅಮರನಾಗೆ ಇರಲು ಏನು ಬೇಕಾದರೂ ಮಾಡಿ , ಯಾರ ರೂಪವನ್ನಾದರೂ ತಾಳಿ, ರಕ್ತ ಹೀರುವ ರಾಕ್ಷಸ, ಹೀಗೆ ಅವನು ತನ್ನ ದಾಹವನ್ನು ಈಡೇರಿಸಿಕೊಳ್ಳಲು ಲಂಡನ್ಗೆ ಬಂದು ಮತ್ತೊಂದು ಬೇಟೆ ಆರಂಭಿಸುತ್ತಾನೆ. ಇತ್ತ ಹಾರ್ಕರನ ಪ್ರೇಯಸಿ ಮಿನಾಮರ್ರೇಯ ಗೆಳತಿ ಲೂಸಿಯಲ್ಲಿ ವಿಚಿತ್ರ ಬದಲಾವಣೆಗಳಾಗ ತೊಡಗುತ್ತದೆ. ನಿರಂತರ ರಕ್ತಹೀನತೆ, ಮನೋವೈಜ್ಞಾನಿಕ ಕಾಯಿಲೆಯಂತೆ ಅದು ತೋರಿಬಂದಾಗ ನೆರವಿಗೆ ಬರುವ ವೈದ್ಯ ಸೇವರ್ಡ್ , ಇನ್ನೊಬ್ಬ ಮೇಧಾವಿ ಪ್ರೊಫೆಸರ್ ವಾನ್ ಹೆಲಿಂಗ್ ಇದರ ಮರ್ಮವನ್ನು ಅರಿಯುತ್ತಾರೆ. ಲೂಸಿಯನ್ನು ಡ್ರಾಕುಲಾನಿಂದ ರಕ್ಷಿಸಲು ನಿರಂತರಯತ್ನ ನಡೆಸುತ್ತಾರೆ, ಅವರು ಅದರಲ್ಲಿ ಸಫಲರಾದರೆ? ಲೂಸಿಗೆ ಏನಾಯಿತು? ಇದು ಕೂಡ ರೋಚಕವಾಗಿದೆ. ಒಬ್ಬೊಬ್ಬರ ಡೈರಿಯೂ ವಿಶೇಷವಾಗಿ ಓದಿಸಿಕೊಂಡು ಹೋಗುತ್ತದೆ.
ಲಂಡನ್ ಅಲ್ಲಿ ಡ್ರಾಕುಲಾ ಮಾಡುವ ನೀಚ ಕೃತ್ಯಗಳು, ಅವನ ತಂತ್ರಗಳಿಗೆ ವೈದ್ಯರು ಮಾಡಿದ ಪ್ರತಿತಂತ್ರಗಳು, ಲೂಸಿಯ ನಂತರ ಕೌಂಟ್ ಮಿನಾಳನ್ನು ಆಕ್ರಮಿಸಿದ ರೀತಿ, ಡ್ರಾಕುಲನಾ ಸೆರೆಯಲ್ಲಿದ್ದ ಹಾರ್ಕರ ಅನುಭವಿಸಿದ ನರಕಯಾತನೆ ಇವೆಲ್ಲವೂ ಅವರವರ ದಿನಚರಿ ಪುಸ್ತಕದಲ್ಲಿ ಕಣ್ಣಿಗೆ ಕಟ್ಟುವಂತೆ ಬರೆದಿರುವುದನ್ನು ಓದುವುದಕ್ಕೆ ಅತ್ಯಂತ ರೋಮಾಚನ ಎನಿಸುವುದು. ಅದಕ್ಕಾಗಿಯೇ ಇದು ೧೮೭೭ರಿಂದ ಇಂದಿಗೂ ಜಗದ್ವಿಖ್ಯಾತ ಕೃತಿ ಎನಿಸಿದೆ. ಇನ್ನು ವಾಸುದೇವರಾವ್ ಅವರ ಕನ್ನಡದ ಅನುವಾದವೋ ಸರಳ ಸುಂದರ, ಕನ್ನಡದಲ್ಲಿ ಬರೆದಿದ್ದೇ ಮೂಲ ಕೃತಿಯೇನೋ ಅನ್ನಿಸುವಂತೆ ಮಾಡುತ್ತದೆ. ಇದನ್ನು ಪುಸ್ತಕದಲ್ಲೇ ಹೇಳಿದ್ದಾರೆ ಅಷ್ಟು ಅದ್ಭುತ ಕೃತಿ ಈ ಡ್ರಾಕುಲ.
No comments:
Post a Comment