ನಾ ಓದಿದ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಾದಂಬರಿ ಎಂದರೆ "ಮೂಕಜ್ಜಿಯ ಕನಸುಗಳು". ಓದಿ ನಿಜಕ್ಕೂ ಹೆಮ್ಮೆ ಅನಿಸುತ್ತಿದೆ ಕಾರಣ ಆ ಕಾದಂಬರಿಯ ನಿರೂಪಣಾ ಶೈಲಿ... ಇಲ್ಲಿವರೆಗೂ ನಾ ಓದಿದ ಅನೇಕ ಕಾದಂಬರಿಗಳಿಗಿಂತ ತುಂಬಾ ವಿಭಿನ್ನವಾಗಿದೆ ಜೊತೆಗೆ ಅವುಗಳಷ್ಟು ಸರಳವಾಗಿ ಅರ್ಥವೂ ಆಗುವುದಿಲ್ಲ. ಮನಸಿಟ್ಟು ಓದಿದರೆ ಮಾತ್ರ ತಿಳಿಯುವ ಕಥೆ.
ಕಾರಂತರು ಮುನ್ನುಡಿಯಲ್ಲಿ ಹೇಳಿರುವ ಹಾಗೆ ಇಲ್ಲಿ ಯಾರು ನಾಯಕಿ/ನಾಯಕರು ಇಲ್ಲವಾದರೂ... ನನಗೆ ಮೂಕಜ್ಜಿಯೇ ನಾಯಕಿ ಮತ್ತು ಅವರ ಮೊಮ್ಮಗ ಸುಬ್ರಾಯರೇ ನಾಯಕ ಎನಿಸಿದ್ದಂತು ಸತ್ಯ. ಕೊಲ್ಲೂರು ಮೂಕಾಂಬಿಕೆಯ ಹೆಸರನ್ನಿಟ್ಟ ಒಬ್ಬ ಹುಡುಗಿಯ ಕಥೆಯಿದು. "ಮೂಕಂಬಿಕ" ಹೆಸರು ಆಡು ಭಾಷೆಯಲ್ಲಿ "ಮೂಕಿ" ಆಗುತ್ತದೆ ನಂತರ ಹೆಸರಿಗೆ ತಕ್ಕಂತೆ ಮೌನವಾಗುತ್ತ ಕೊನೆಗೆ ೮೦ ದಾಟಿದ ಮೂಕಜ್ಜಿಯಾಗುತ್ತಾಳೆ.
ಪ್ರತೀ ಅಧ್ಯಾಯದಲ್ಲೂ ಒಂದು ವಿಶಿಷ್ಟತೆ ಇದೆ. ಆರಂಭದಲ್ಲಿ ಹೇಳುವ ಸಣ್ಣ ಕಥೆಗಳಿಗೆಲ್ಲ (ಇಲ್ಲಿ ಮೂಕಜ್ಜಿಯ ಕನಸುಗಳು) ಮುಂದೆ ಹೋದಂತೆ ಒಂದೊಂದು ಆಯಾಮ ಹೊಂದುತ್ತವೆ ಜೊತೆಗೆ ಓದುಗರಿಗೆ ಗೊಂದಲವು ಶುರುವಾಗುತ್ತದೆ. ಅದಕ್ಕೆ ನಾ ಮೊದಲೇ ಹೇಳಿದಂತೆ ಮನಸಿಟ್ಟು ಓದಿದರೆ ಮಾತ್ರ ಅರ್ಥವಾಗುತ್ತದೆ ಇದು ಕೇವಲ ನನ್ನ ಅನುಭವ ಮಾತ್ರ.
ಆ ಅಜ್ಜಿಗೆ ಗೋಚರಿಸುವ ಪ್ರತಿಯೊಂದು ಘಟನೆಗಳು ಮುಂದೆ ನಡೆಯಬಹುದಾದ ಅಥವ ಹಿಂದೆ ನಡೆದ ಘಟನೆಗಳಿಗೆ ಸಂಬಂಧ ಇರುತ್ತವೆ. ಇದನ್ನು ಅರ್ಥ ಮಾಡಿಕೊಂಡದ್ದು ಕೇವಲ ಅವಳ ಮೊಮ್ಮಗ ಸುಬ್ರಾಯ ಮಾತ್ರ. ಉಳಿದವರೆಲ್ಲರೂ ಅಜ್ಜಿಗೆ ಮರಳು ಎಂದೇ ತಿಳಿದು ಆಡಿಕೊಳ್ಳುತ್ತಾರೆ. ಹೀಗೆ ಮುಂದೆ ಓದಿದಂತೆಲ್ಲ ಮೂಕಜ್ಜಿಯ ಮೇಲೆ ನಮಗೂ ಪ್ರೀತಿ ಬೆಳೆಯುತ್ತದೆ.
ಈ ಪುಸ್ತಕದ ಮತ್ತೊಂದು ವಿಶೇಷವೆಂದರೆ ಇಲ್ಲಿ ನನಗೆ ಗೊತ್ತಿಲ್ಲದೇ ಇರುವ ಅನೇಕ ಪದಗಳು ಬಳಕೆಯಾಗಿದ್ದು ಅವನ್ನು ನಾ ತಿಳಿದು ಓದಿದ್ದು. ಕೊನೆಯದಾಗಿ ಹೇಳಬೇಕಂದರೆ ಇದನ್ನು ಓದಿದ ನಿಜಕ್ಕೂ ನನ್ನ ಜ್ಞಾನವೂ ಹೆಚ್ಚಾಯಿತು. ಖಂಡಿತ ಇದೊಂದು ಅಮೋಘ ಪುಸ್ತಕ. ಓದಿ ತುಂಬಾ ಆನಂದವಾಯಿತು. ಮತ್ತೊಮ್ಮೆ ಮಗದೊಮ್ಮೆ ಈ ಕನ್ನಡ ಕಾದಂಬರಿ ಕೂಟಕ್ಕೆ ನನ್ನ ಮನಪೂರ್ವಕ ಧನ್ಯವಾದಗಳು...
No comments:
Post a Comment