Friday, 2 December 2016

ಮರಣ ಮೃದಂಗ

ಯಂಡಮೂರಿ ವೀರೇಂದ್ರನಾಥರ "ಮರಣ ಮೃದಂಗ" ಅಬ್ಬಾ!!!!! ಎಂದು ಹುಬ್ಬೇರಿಸುವಂತಹ ಕಾದಂಬರಿ. ಇದರ ಬಗ್ಗೆ ಬರೆಯಲು ಎಲ್ಲಿಂದ ಆರಂಭಿಸಲಿ ಯಾವುದರ ಬಗ್ಗೆ ಬರೆಯಲಿ ಎನ್ನುವ ಗೊಂದಲದಿಂದ ತೋಚಿದಂತೆ ನನ್ನ ಅಭಿಪ್ರಾಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಮಾಫಿಯಾ ಅಂಡರ್ವರ್ಲ್ಡ್ ಎನ್ನುವ ಶಬ್ದಗಳನ್ನು ಕೇಳಿದರೆ ಎಲ್ಲರ ಮೈ ಒಂದು ಕ್ಷಣ ಕಂಪಿಸುವುದು. ಮರಣ ಮೃದಂಗ ಕಾದಂಬರಿ ಕೂಡ ಇದೆ ವಿಷಯಗಳನ್ನೊಳಗೊಂಡ ವಾಸ್ತವ ಘಟನೆಗಳ ಚಿತ್ರಣ. ಪತ್ತೇದಾರೀ ಕಾದಂಬರಿ ಎಂದರೂ ತಪ್ಪಿಲ್ಲ.

ವಸಂತದಾದ ಮತ್ತು ಸಲೀಂ ಶಂಕರ್ ಎನ್ನುವ ಇಬ್ಬರು ನರ ರೂಪದ ರಾಕ್ಷಸರ ಸುತ್ತಾ ನಡೆಯುವ ಕಥೆ ಇದು. ಅನುಷಾ, ಉತ್ಪಲಾ,ಜಾನಿ, ಬಿಲ್ಹಣ, ಸುಗ್ರೀವ, ಪಾಂಡಾ,ರಾಮ ಬ್ರಹ್ಮಮ್ ಇತ್ಯಾದಿ ಎಲ್ಲರ ಹೆಸರುಗಳು ಎಷ್ಟು ವಿಭಿನ್ನವಾಗಿವೆಯೋ ಅವರ ಪಾತ್ರಗಳು ಅಷ್ಟೇ ವಿಭಿನ್ನತೆಯಿಂದ ಕೂಡಿವೆ. ಅನುಷಾ ಒಬ್ಬ ಪ್ರತಿಭಾವಂತೆ ಸ್ಟಾಕ್ ಹೋಮ್ ಎಂಬ ಪ್ರತಿಷ್ಠಿತ ಕಂಪನಿಗೆ ಜೆನೆರಲ್ ಮ್ಯಾನೇಜರ್ ಹುದ್ದೆಯ ಸಂದರ್ಶನಕ್ಕೆಂದು ಬಂದು ಅವಳ ಪ್ರತಿಭೆಯಿಂದ ೪ ಪ್ರತಿಸ್ಪರ್ಧಿಗಳ ನಡುವೆ ಇವಳೊಬ್ಬಳೇ ಆಯ್ಕೆಯಾದರೂ ರಾಜಕೀಯ ವ್ಯಕ್ತಿಗಳ ಪ್ರಭಾವವಿರುವ ವ್ಯಕ್ತಿಯನ್ನು ಆಯ್ಕೆ ಮಾಡಲು ಸಂಸ್ಥೆ ನಿರ್ಧರಿಸಿದಾಗ ಅನುಷಾ ಒಂದು ನಾಟಕವಾಡಿ ತನ್ನ ಜಾಣತನದಿಂದ ಆ ಹುದ್ದೆಯನ್ನು ಅಲಂಕರಿಸುತ್ತಾಳೆ. ಇದೆ ಆಕೆ ವಸಂತದಾದ ಎನ್ನುವ ಭೂಗತ ಪಾತಕಿಯ ಸುಳಿಯಲ್ಲಿ ಗೊತ್ತಿಲ್ಲದೇ ಸಿಲುಕುತ್ತಾಳೆ ಆ ಸ್ವಾರಸ್ಯವನ್ನು ಓದಿಯೇ ತಿಳಿಯಬೇಕು. ಇಲ್ಲಿಂದ ಆರಂಭವಾಗುತ್ತದೆ ಮಾಫಿಯಾ ವಿರುದ್ಧ ಅವಳ ಹೋರಾಟ.


ಉತ್ಪಲಾ ಕೂಡ ಒಬ್ಬ ಬಡ ಬ್ರಾಹ್ಮಣರ ಕುಟುಂಬದ ಸಂಪ್ರದಾಯಸ್ಥ ಹುಡುಗಿ ಆರ್ಥಿಕ ತೊಂದರೆಯಿಂದ ನರ್ಸ್ ಹುದ್ದೆ ಪಡೆದು ಅಪ್ಪನಿಗೆ ನೆರವಾಗುತ್ತಾಳೆ. ಹೀಗೆ ಶಾಂತ ರೀತಿಯಲ್ಲಿ ನಡೆಯುತ್ತಿದ್ದ ಅವಳ ಜೀವನ ಇದ್ದಕ್ಕಿದ್ದಂತೆ ಒಂದು ದಿನ ಅವಳ ಆಸ್ಪತ್ರೆಯಲ್ಲಿ ಸಲೀಂ ಶಂಕರ್ ಮತ್ತು ಅವನ ತಂಡದವರು ಮಾಡಿದ ಅಮಾನುಷ ಕೊಲೆಗಳನ್ನು ನೋಡಿ ಪಡಬಾರದ ಹೊಂಸೆಗೆ ಒಳಪಟ್ಟು ತನ್ನ ಜೀವ ಮತ್ತು ಕುಟುಂಬವನ್ನು ಉಳಿಸಿಕೊಳ್ಳಲು ಆಕೆ ಪಟ್ಟ ಶ್ರಮ ಅನುಭವಿಸಿದ ನರಕ ಯಾತನೆ ಎಲ್ಲವೂ ಕಣ್ಣಿಗೆ ಕಟ್ಟುವಂತೆ ಲೇಖಕರು ಚಿತ್ರಿಸಿದ್ದಾರೆ.

ಹೀಗೆ ಉತ್ಪಲಾ, ಅನುಷಾ ತಮಗೆ ಅರಿವಿಲ್ಲದಂತೆ ಮಾಫಿಯಾ ಸುಳಿಗೆ ಸಿಲುಕಿ ಒದ್ದಾಡುವಾಗ ಜಾನಿ, ಬಿಲ್ಹಣರ ಪಾತ್ರಗಳು ಬಂದು ಅವರನ್ನು ಕಾಪಾಡಲು ಇವರು ತೋರಿಸಿದ ಬುದ್ಧಿವಂತಿಕೆ ಮಾಡಿದ ನಟನೆ ಅನುಭವಿಸಿದ ಒತ್ತಡಗಳು ಅಬ್ಬಾ!!! ಮುಗ್ಧ ಉತ್ಪಲಾ ಒಂದು ರೀತಿ ಇಷ್ಟವಾದರೆ ಬುದ್ಧಿವಂತ ಅನುಷಾ ಮಾಡುವ ದಾದಾನ ಮಟ್ಟಹಾಕುವ ಉಪಾಯಗಳು ಅದಕ್ಕೆ ಜಾನಿ ಬಿಲ್ಹಣ ಪ್ರತಿಕ್ರಿಯಿಸಿದ ರೀತಿ ಮತ್ತಷ್ಟು ಮನಸಿಗೆ ಮುದ ನೀಡುತ್ತವೆ. ಮಧ್ಯ ಮಧ್ಯ ಬರುವ ಬೇರೆ ಬೇರೆ ರೌಡಿಗಳು ಅವರನ್ನು ನಾಶ ಮಾಡುವ ರೀತಿ, ಪೊಲೀಸ್ ಇಲಾಖೆ, ಸಿ ಬಿ ಐ ಅಧಿಕಾರಿಗಳ ತನಿಖೆ ಹೀಗೆ ಪ್ರತಿಯೊಂದು ಅಂಶವೂ ಓದುಗರನ್ನು ಸೆಳೆಯುತ್ತದೆ.

ಪ್ರತೀ ಪುಟವೂ ಅತ್ಯಂತ ಕುತೂಹಲದಿಂದ ಕೂಡಿದ್ದು ಪತ್ತೇದಾರಿ ಚಿತ್ರವನ್ನು ನೋಡಿದ ಅನುಭವ ಕೊಡುತ್ತದೆ. ಒಂದು ಪುಟದಲ್ಲೂ ಪ್ರತಿಯೊಂದು ಸಾಲಿನಲ್ಲೂ ಓದುಗರ ಮನಸ್ಸನ್ನು ಸೆಳೆಯುತ್ತದೆ. ಮುಂದೇನಾಗುತ್ತೋ ಅನ್ನೋ ಕಾತರದಲ್ಲೇ ಓದುಗ ಮುಂದುವರೆಯುತ್ತಾನೆ. ನಿಜಕ್ಕೂ ಇದರ ಬಗ್ಗೆ ಎಷ್ಟು ಬರೆದರೂ ಸಾಲದು ಅಷ್ಟು ರೋಮಾಂಚನ ಕೊಟ್ಟ ಕಾದಂಬರೀ ಇದು. ನನಗಂತೂ ಇದನ್ನು ಓದಿ ತುಂಬಾ ಖುಷಿ ಆಯ್ತು.

No comments: