Friday, 2 December 2016

ಶಿವನ ಡಂಗುರ


ಚಂದ್ರಶೇಖರ ಕಂಬಾರರ "ಶಿವನ ಡಂಗುರ" ಒಂದು ಅದ್ಭುತ ಕಾದಂಬರಿ. ಸಮಕಾಲೀನ ಬದುಕಿನಲ್ಲಿ ನಡೆಯುವ ತಲ್ಲಣಗಳ ಚಿತ್ರಣವಿದು. ಹಳ್ಳಿಯೊಂದರ ಬದುಕಿನ ಸುತ್ತ ನಡೆಯುವ ಜಾಗತೀಕರಣದ ಹೆಸರಿನಲ್ಲಿ ನಿಸರ್ಗವನ್ನು ನಾಶ ಮಾಡುವುದು, ಅಭಿವೃದ್ಧಿಯ ಹೆಸರಿನಲ್ಲಿ ಈ ನೆಲದ ಸತ್ವವನ್ನೇ ಹೀರುತ್ತಿರುವ ಯೋಜನೆಗಳ ದುಷ್ಪರಿಣಾಮ, ಬಡವರ ಮೇಲೆ ಶ್ರೀಮಂತರು ನಡೆಸುವ ದೌರ್ಜನ್ಯ, ಕೊಲೆ, ಅತ್ಯಾಚಾರ ಹೀಗೆ ಅನೇಕ ಜೀವನದಲ್ಲಿ ನಡೆಯುವ ವಿಚಾರಗಳನ್ನು ಇಲ್ಲಿ ಬರೆದಿದ್ದಾರೆ.

ಇಲ್ಲಿರುವ ಹಳ್ಳಿ ಶಿವಾಪುರ. ಅಲ್ಲಿಯ ಗೌಡ ಬರಮೇಗೌಡ ಹಿರಿಯರ ಕಾಲದ ಗೌಡಕಿಯನ್ನು ಮುಂದುವರೆಸುತ್ತಾ ಬಂದಿರುತ್ತಾನೆ ಆದರೆ ಊರಿನ ಮುಖಂಡನಾಗಿ ಇರಬೇಕಾದ ಯಾವುದೇ ಒಳ್ಳೆಯ ಗುಣಗಳು ಈತನಿಗಿರುವುದಿಲ್ಲ. ಮದುವೆ ಆಗಿ ಹೆಂಡತಿ ಇದ್ದರೂ ಆಕೆ ಹೆಣ್ಣು ಮಗಳನ್ನು ಹಡೆದಳೆಂದು ಅವಳನ್ನು ನಿರ್ಲಕ್ಷಿಸುತ್ತಾ ಪರಸ್ತ್ರೀಯರ ಸಹವಾಸದಲ್ಲಿ ಸುಖ ಕಾಣುತ್ತಾ ದೇವದಾಸಿ ಪದ್ಧತಿಗೆ ಪುಷ್ಟಿ ಕೊಡುತ್ತಾನೆ. ಹಾಗೆ ದೈವ ಪ್ರೇರಣೆಯಿಂದ ಮದುವೆಯಾದ ದೇವದಾಸಿಯೇ "ತುಂಗವ್ವ". ಅವಳದು ಇಲ್ಲಿ ಬಹುಮುಖ್ಯ ಪಾತ್ರ.


ತುಂಗವ್ವ ಮತ್ತು ಬರಮೇಗೌಡನಿಗೆ ಹುಟ್ಟಿದ ಮಗನೇ ಲಕ್ಷ್ಮಣ(ಲಸಮ). ಗೌಡನ ತಮ್ಮನ ಹೆಂಡತಿಯು ಅದೇ ಸಮಯಕ್ಕೆ ಒಂದು ಗಂಡುಮಗುವಿಗೆ ಜನ್ಮ ಕೊಟ್ಟು ಸಾಯುತ್ತಾಳೆ ಅವನೇ ಚಂಬಸವ ಈ ಕಾದಂಬರಿಯ ನಾಯಕ. ಆದರೆ ಅವನು ತುಂಗವ್ವನ ಎದೆಹಾಲು ಕುಡಿದ ಮಗುವಾದ್ದರಿಂದ ಅವನ್ನನು ಎಲ್ಲರೂ ಅಸ್ಪೃಶ್ಯ ಎಂದೇ ಭಾವಿಸಿ ನೋಯಿಸುತ್ತಿದ್ದರು, ಆತ ಮೇಲುಕುಲದವನಾದರೂ ಈ ಕಾರಣಕ್ಕೆ ಸದಾ ಅವಮಾನಗಳನ್ನು ಎದುರಿಸುತ್ತಾ ಬೆಳೆದು ವಿದ್ಯಾಭ್ಯಾಸವನ್ನೆಲ್ಲ ಮುಗಿಸಿ ಮತ್ತೊಬ್ಬ ದೇವದಾಸಿ ಶಾರವ್ವನನ್ನ ಪ್ರೀತಿಸಿ ಮದುವೆ ಆಗಿ ದೇವದಾಸಿ ಪದ್ದತಿಯ ವಿರುದ್ಧ ಹೋರಾಡುತ್ತಾನೆ.

ಈ ನಡುವೆ ಖಳನಾಯಕ ಕುಂಟಿರಪನ ಆಗಮನವಾಗಿ ಅವನು ಬರಾಮೇಗೌಡನ ಮಗಳನ್ನು ಮದುವೆ ಆಗಿ ಇಡೀ ಊರನ್ನೇ ಸ್ಮಶಾನ ಮಾಡುವಲ್ಲಿ ಯಶಸ್ವಿ ಆಗುತ್ತಾನೆ. ಬರಾಮೇಗೌಡನ ವಿಲಾಸಿ ಪ್ರವೃತ್ತಿಯನ್ನು ಬಳಸಿಕೊಂಡು ಅವನನ್ನು ವಶಪಡಿಸಿಕೊಳ್ಳುತ್ತಾನೆ. ಅವನ ಮೂಲಕವೇ ತಾರಾ, ಬಿಗ್ಬಾಸ್, ಜಾಕ್ಸನ್ ಕಂಪನಿ ಎಲ್ಲವೂ ಶಿವಾಪುರದ ಬದುಕಿನಲ್ಲಿ ಪ್ರವೇಶಿಸುತ್ತವೆ. ಇವರು ಯಾರು ಅಲ್ಲಿಯವರಲ್ಲ. ಶಿವಾಪುರದ ಸಮಗ್ರ ಅಭಿವೃದ್ಧಿಯ ಹೆಸರಿನಲ್ಲಿ ಅಲ್ಲಿಯ ಜನರ ಬದುಕನ್ನು ನರಕವಾಗಿಸುತ್ತಾರೆ. ರಾಜಕೀಯ ಪ್ರವೇಶವಾಗಿ ಊರು ರಣರಂಗವಾಗುತ್ತದೆ. ಕೊಲೆ,ಸಂಚು ರೂಪುಗೊಂಡು ನಂಬಿಕೆ ಕುಸಿಯುತ್ತವೆ. ಕಾದಂಬರಿ ಹೀಗೆ ಹೊರಗಿನ ಕೇಡು, ಒಳಗಿನ ಸೇಡು ಎರಡನ್ನು ಏಕಕಾಲಕ್ಕೆ ಎದುರಿಸಿ ಹೊಸ ಸಮಾಜದ ಕಡೆಗೆ ತುಡಿಯುತ್ತದೆ.

ಮಾಡಿದ್ದುಣ್ಣೋ ಮಹರಾಯ ಎನ್ನುವ ಗಾದೆಯಂತೆ ಕೆಡುಕನ್ನು ಮಾಡಿದವರ ಗತಿ ಏನಾಯ್ತು ಹಾಗೆ ಊರಿನ ಏಳ್ಗೆಗಾಗಿ ಶ್ರಮಿಸಿದವರು ಏನೇನನ್ನು ಅನುಭವಿಸಿದರು ಎನ್ನುವುದನ್ನು ಈ ಕಾದಂಬರಿ ಓದಿಯೇ ಅನುಭವಿಸಬೇಕು. ಅಷ್ಟು ರೋಚಕವಾಗಿದೆ. ಒಂದೊಂದು ಪುಟವು ನೈಜತೆಯಿಂದ ಕೂಡಿದ್ದು ಆರಂಭದಿಂದ ಅಂತ್ಯದವರೆಗೂ ಓಡಿಸಿಕೊಂಡೆ ಹೋಗುವ ಸೆಳೆತ ಇದರಲ್ಲಿ ಅಡಗಿದೆ. ಮತ್ತೊಮ್ಮೆ ಹೇಳುತ್ತಿದ್ದೇನೆ ಇದೊಂದು ಅದ್ಭುತ ಕಾದಂಬರಿ. ಇಲ್ಲಿರುವ ಪ್ರತಿಯೊಬ್ಬರೂ ತಪ್ಪದೇ ಇದನ್ನು ಓದಬೇಕಂಬುದು ನನ್ನ ಆಸೆ.

No comments: