Friday, 2 December 2016

ಗುಟ್ಟೊಂದು ಹೇಳುವೆ

ಸುಧಾಮೂರ್ತಿಯವರ "ಗುಟ್ಟೊಂದು ಹೇಳುವೆ" ಒಂದು ಅನುಭವ ಕಥನ. ೩೨ ಕಥೆಗಳನ್ನು ಒಳಗೊಂಡಿದ್ದು ಪ್ರತಿಯೊಂದರಲ್ಲೂ ಜೀವನದಲ್ಲಿ ಅಳವಡಿಸಕೊಳಬೇಕಾದ ಅಮೂಲ್ಯವಾದ ಮೌಲ್ಯಗಳನ್ನು ಕಲಿಯುತ್ತೇವೆ. ಇಲ್ಲಿ ಬರುವ ಅಂಶಗಳನ್ನು ಬರೀ ಓದದೇ ಅವನ್ನು ನಾವು ಅಳವಡಿಸಿಕೊಂಡರೆ ಸಣ್ಣ ಸಣ್ಣ ಕಾರಣಗಳಿಂದ ಕಷ್ಟ ನಷ್ಟಗಳ ನಡುವೆ ಸಂಕೀರ್ಣ ಎನಿಸುವ ಜೀವನವನ್ನು ಅತ್ಯಂತ ಸರಳ ಅಷ್ಟೇ ಸುಖವಾಗಿ ಮಾಡಬಹುದು. ಆದರೆ ಅದು ಓದಿದಷ್ಟು ಅಥವಾ ಹೇಳಿದಷ್ಟು ಸುಲಭವಲ್ಲ. ಪ್ರತಿಯೊಂದಕ್ಕೂ ಸಮರ್ಪಣಾ ಭಾವನೆ ಮುಖ್ಯ ಅಂತಹ ಮನಸಿನವರೂ ಮಾತ್ರ ಸಂಕೀರ್ಣ ಜೀವನವನ್ನು ಸರಳ ಜೀವನವನ್ನಾಗಿ ಮಾಡಿಕೊಳ್ಳಲು ಸಾಧ್ಯ. ಅದೇ ಇಲ್ಲಿಯ ಗುಟ್ಟು.

ಈ ಪುಸ್ತಕ ಅವರು ಸಮರ್ಪಿಸಿರುವುದು ಕಾಲದ ಹೊಡೆತಕ್ಕೆ ಸಿಕ್ಕಿದರೂ ಇನ್ನೂ ಆದರ್ಶವಾದಿಯಾಗಿ ಉಳಿಯುವಂತೆ ಮಾಡಿದ ವಿಷ್ಯಾರ್ಥಿಗಳಿಗೆ ಎಂದು ಅವರೇ ಸ್ವತಃ ಪ್ರೀತಿಯಿಂದ ಹೇಳಿದ್ದಾರೆ. ಬಾಲ್ಯದಲ್ಲಿ ಅವರು ಕಲಿತ ಮೌಲ್ಯ, ಕೃತಜ್ಞತೆ, ಅಂತಕರಣ ಮುಂತಾದ ಗುಣಗಳೇ ನನಗೆ ದಾರಿದೀಪವಾಗಿದೆ ಎಂದು ತುಂಬಾ ನಮ್ರತೆಯಿಂದ ಹೇಳಿಕೊಂಡಿದ್ದಾರೆ. ಅವರ ಈ ಎಲ್ಲ ಅನುಭವಗಳನ್ನು ಮುಂದಿನ ಜನಾಂಗದವರಿಗೆ ಹೇಳಬೇಕೆನ್ನುವುದೇ ಈ ಪುಸ್ತಕದ ಜೀವಾಳ.

ಇಲ್ಲಿ ಬರುವ ಅನೇಕ ಅನುಭವ ಕಥಗಳಲ್ಲಿ ಅನೇಕ ವಿಶ್ವವಿಖ್ಯಾತ ವ್ಯಕ್ತಿಗಳೊಂದಿಗೆ ಮಾಡಿದ ಕೆಲಸ, ಕಲಿತ ಅನುಭವ, ಕಳೆದ ಸವಿಕ್ಷಣಗಳು ಎಲ್ಲವನ್ನೂ ತುಂಬಾ ಸರಳ ಸುಂದರವಾಗಿ ಬರೆದಿದ್ದಾರೆ. ನಿಜಕ್ಕೂ ಅಂತವರ ಜೊತೆ ಒಡನಾಟವಿದ್ದರೂ ಸುಧಮ್ಮ ಎಷ್ಟು ಸರಳ ಜೀವಿ ಆಗಿದ್ದಾರೆ ಎಂದು ಆಶ್ಚರ್ಯವಾಗುತ್ತದೆ. ನನಗೆ ತುಂಬಾ ಇಷ್ಟವಾದ ಪ್ರಸಂಗಗಳು ಎಂದರೆ ಅಬ್ದುಲ್ ಕಲಾಂ, ಜೆ ಆರ್ ಡಿ ಟಾಟಾ, ರಷ್ಯಾದಲ್ಲಿ ಮದುವೆ ಮತ್ತು ಕೊನೆಯ ಗುಟ್ಟೊಂದು ಹೇಳುವೆ ಕಥೆ ನಿಜಕ್ಕೂ ಇವು ಮನ ಮುಟ್ಟಿದವು. ಇದನ್ನು ಓದಿದಮೇಲೆ ಜೀವನ ಎಷ್ಟು ಸರಳ ಸುಂದರ ಎನಿಸುತ್ತದೆ ಆದರೆ ಮತ್ತು ವಾಸ್ತವದಲ್ಲಿ ಅಯ್ಯೋ ಹೀಗಾಯಿತು ಹಾಗಾಯಿತು ಎಂದು ಒದ್ದಾಡುತ್ತಲೇ ಇರುತ್ತೇವೆ. ನನಗೆ ಒಂದು ಸುಂದರ ಅನುಭವ ನೀಡಿದ ಜೊತೆಗೆ ಅನೇಕ ಮೌಲ್ಯಗಳನ್ನು ಕಳಿಸಿದ ಅನುಭವ ಕಥನ "ಗುಟ್ಟೊಂದು ಹೇಳುವೆ".

No comments: