Friday, 2 December 2016

ಕಾಕನಕೋಟೆ





ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿ ವೆಂಕಟೇಶ ಅಯ್ಯಂಗಾರರ "ಕಾಕನಕೋಟೆ" ಒಂದು ಚಂದದ ನಾಟಕ ಮತ್ತು ಶಾಲೆ ಕಾಲೇಜಿನ ಪಠ್ಯದಲ್ಲಿ ನಾಟಕ ಓದಿದದ್ದನ್ನು ಬಿಟ್ಟರೆ ನಾ ಓದಿದ ನಾಟಕವೆಂದರೆ ಇದೆ ಮೊದಲು. ಒಂದು ವಿಭಿನ್ನ ಅನುಭವ ನೀಡಿತು ಕಾರಣ ಕಥೆ, ಕಾದಂಬರಿಗಿಂತ ನಾಟಕ ಓದುವುದು ಬೇರೆಯೇ ಅನಿಸುತ್ತದೆ ಕಾರಣ ನಾನು ನಾಟಕಗಳನ್ನು ನೋಡಿದ್ದೇ ಆದರೆ ಓದಿರಲಿಲ್ಲ. ಆದ್ದರಿಂದ "ಕಾಕನಕೋಟೆ" ಹೊಸ ಅನುಭವ ನೀಡಿತು.

ಕಾಕನಕೋಟೆ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯ ಮಲೆನಾಡ ಪ್ರಾಂತ್ಯದ ಸುಂದರ ಕಾಡಿಂದ ಅವತರಿಸಿದ ಸ್ಥಳ. ಇಲ್ಲಿ ವಾಸಿಸುವರು ಕಾಡು ಕುರುಬರು. ಈ ಸ್ಥಳದ ಬಗ್ಗೆ ತಿಳಿಯಲು ಲೇಖಕರು ಅಲ್ಲಿ ಸುತ್ತಿದಾಗ ಸಿಕ್ಕವರೇ ಕಾಕ, ಹೆಗ್ಗಡೆ ದೇವಣ್ಣ, ಕೋಟೆ ಇತ್ಯಾದಿ ವಿವರಗಳ ಹಿಂದೆ ಹೋದಾಗ ಕಥೆ ಬರೆಯಲು ನಿಶ್ಚಯಿಸಿದ್ದು ಕ್ರಮೇಣ ನಾಟಕವಾಗಿ ಪ್ರಕಟಿಸಿದರು. ಅಷ್ಟೇ ಅಲ್ಲದೇ ಇದು ೧೯೭೭ರಲ್ಲೇ ಚಲನಚಿತವಾಗಿದೆ. ಈ ನಾಟಕದ ಮತ್ತೊಂದು ವಿಶೇಷವೆಂದರೆ ನಡುವೆ ಬರುವ ಗೀತೆಗಳು ಕೆಲವೊಮ್ಮೆ ಜಾನಪದ ಅನಿಸಿದರೂ ಮತ್ತೊಮ್ಮೆ ಭಾವಗೀತೆಯೇನೋ ಅನಿಸುತ್ತದೆ. ಆದರೆ ಆ ಹಾಡುಗಳ ಕಲೆ ನಿಜಕ್ಕೂ ಅದ್ಭುತ.


ಕಾಡುಕುರುಬರ ಹಟ್ಟಿಯ ಬುದ್ಧಿವಂತ ಕಾಕ, ತನ್ನ ಬೂಡನ್ನು ಪರಕೀಯರಿಂದ ಕಾಪಾಡುವುದಕ್ಕೆ ಯತ್ನಿಸುವುದು, ಆ ಹಂತದಲ್ಲಿ ಆತ ಸಂಸ್ಥಾನದ ವಿರುದ್ಧ ತಿರುಗಿನಿಲ್ಲದೆ ಅವರಿಗೆ ನಿಷ್ಠನಾಗಿದ್ದುಕೊಂಡೇ ತನ್ನ ಸ್ವಂತಿಕೆಯನ್ನು ಉಳಿಸಿಕೊಳ್ಳುವುದು ನಿಜಕ್ಕೂ ಮನಮುಟ್ಟುತ್ತದೆ. ಕುರುಬರು ಅರಸೊತ್ತಿಗೆಗೆ(ಕಂದಾಯ) ಸಲ್ಲಿಸಬೇಕಾದ ಕಪ್ಪವನ್ನು ಸಲ್ಲಿಸದೇ ಹೋದಾಗ ಉಂಟಾಗುವ ಪರಿಸ್ಥಿತಿಯನ್ನು ಕಾಕ ನಿಭಾಯಿಸುವ ಶೈಲಿಯಲ್ಲೇ ಕಾಡಿನ ಮಕ್ಕಳಿಗೆ ಸಹಜವಾದ ಬುದ್ಧಿವಂತಿಕೆ ಮತ್ತು ಸ್ವಯಂಸ್ಪೂರ್ತಿ ಎದ್ದು ಕಾಣುತ್ತದೆ.

ನಾಟಕ ಮುಗಿದ ಮೇಲೆ ಕೊನೆಯ ಅಂಕಣ "ಕಾಕನಕೋಟೆ:ಅನುಬಂಧ " ಕೂಡ ನಮಗೆ ತಿಳಿಯದ ಎಷ್ಟೋ ಅಂಶಗಳನ್ನು ತಿಳಿಸುತ್ತದೆ. ಪುಸ್ತಕ ಕಿರಿದಾದರೂ ಕಾಡು ಜನರ ದೊಡ್ಡ ಜಗತ್ತನ್ನು ನಮಗೆ ಪರಿಚಯಿಸುತ್ತದೆ. ಅದು ತುಂಬಾ ರೋಚಕ ಅನುಭವ ಕೂಡ ಆಗುತ್ತದೆ ಕಾರಣ. ಈ ಎಲ್ಲಾ ಕಾರಣಗಳಿಂದ ೧೯೩೮ರಲ್ಲಿ ಮೊದಲ ಮುದ್ರಣವಾದರೂ ಇಂದಿಗೂ ಅಷ್ಟೇ ಜನಪ್ರಿಯವಾಗಿದೆ.

No comments: