ಒಂದು ವಾರ ಊರಲ್ಲಿ ಇಲ್ಲ ಎಂದು ಕಳೆದ ವಾರ ಯಾವುದೇ ಪುಸ್ತಕ ತೆಗೆದುಕೊಂಡಿರಲಿಲ್ಲ. ನಾನು ಪುಸ್ತಕ ಬಿಟ್ಟರು ಪುಸ್ತಕ ನನ್ನ ಬಿಡುವುದಿಲ್ಲ :P . ನನ್ನ ಅಮ್ಮ ಗ್ರಂಥಾಲಯದಿಂದ ೩ ಪುಸ್ತಕ ತಂದಿದ್ರು. ಅದರ ಮೇಲೆ ಮತ್ತೆ ನನ್ನ ಕಣ್ಣು ಬಿದ್ದು ಉಷಾ ನವರತ್ನರಾಮ್ ಅವರ "ನಿಕ್ಷೇಪ". ಇದರ ಹೆಸರೇ ಹೇಳುವಂತೆ ಒಂದು ನಿಧಿಯ ಸುತ್ತ ಹೆಣೆದಿರುವ ಕಥೆ. ಕುತೂಹಲ, ಮೂಢನಂಬಿಕೆ, ದೇವರ ಹೆಸರಲ್ಲಿ ಮನುಷ್ಯರು ಮಾಡುವ ಮೋಸ, ದುರಾಸೆ ಮತ್ತು ಅಂತವರ ವಿರುದ್ಧ ಪ್ರಕೃತಿ ಕೊಟ್ಟ ಶಿಕ್ಷೆ ಎಲ್ಲವೂ ಈ ಕಾದಂಬರಿಯಲ್ಲಿದೆ.
ಲೇಖಕಿ ಮುನ್ನುಡಿಯಲ್ಲಿಯೇ ಹೇಳಿರುವಂತೆ ಈ ಕೃತಿಯಲ್ಲಿರುವುದು ಅರ್ಧ ಸತ್ಯ ಅರ್ಧ ಮಿಥ್ಯಾ. ಇಲ್ಲಿಯ ನಾಯಕ ನಟರಾಜ ಅಮ್ಮ ಅಪ್ಪನ ಕುಟುಂಬಗಳ ನಡುವೆ ನಡೆದ ಕಲಹಗಳಿಂದ ಹುಟ್ಟಿದಾಗಿನಿಂದ ಅವನ ತಾತನ ಕುಟುಂಬದಿಂದ (ಅಮ್ಮನ ಅಪ್ಪ) ದೂರಾಗಿ ಬೆಳೆಯುತ್ತಾನೆ. ನಂತರ ಅವರ ತಾತನಿಗೆ ಆರೋಗ್ಯದಲ್ಲಿ ಏರುಪೇರಾಗಿ ಇನ್ನೇನು ಕೊನೆಯುಸಿರು ಎಳೆಯುವ ಸ್ಥಿತಿಯಲ್ಲಿದ್ದಾಗ ಅವರ ಅಮ್ಮ ವಿಜಯಾ ಮಗನಿಗೆ ಸಂಧಾನ ಮಾಡಿ ಹಳೆಯ ಘಟನೆಗಳನ್ನೆಲ್ಲ ವಿವರಿಸಿ ತಾತನನ್ನು ನೋಡಿಕೊಂಡು ಬರಲು ಮೊದಲ ಬಾರಿಗೆ ಕಳಿಸುತ್ತಾಳೆ. ಈ ಸಂದರ್ಭದಲ್ಲಿ ನಟರಾಜನ ನೆನಪಿನಂಗಳದಲ್ಲಿ ಬರುವ ಅಂಶಗಳು ತುಂಬಾ ಕುತೂಹಲಕಾರಿಯಾಗಿದೆ. ಅವನು ವಿಂದೂರಿಗೆ ಪ್ರಯಾಣಿಸುತ್ತಾನೆ. ಅವನ ಜೊತೆ ಅವನ ಚಿಕಮ್ಮನ ಮಕ್ಕಳು ಜೊತೆಯಾಗುತ್ತಾರೆ ಅಲ್ಲಿಂದ ಶುರುವಾಗುತ್ತದೆ ನಿಷೇಪದ ಅನ್ವೇಷಣೆ.
ಅಲ್ಲಿ ಹೋದಾಗ ಆಶ್ಚರ್ಯಕರ ಸಂಗತಿಗಳು ನಡೆಯುತ್ತವೆ ಅದನ್ನು ನಾನಿಲ್ಲಿ ಹೇಳುವುದಕ್ಕಿಂತ ಓದುಗರು ಓದಿದಾಗಲೇ ಚೆನ್ನಾಗಿ ಅನಿಸುವುದು. ತಾತನ ವಿಂದೂರಿನ ಬಂಗಲೆಯ ರಹಸ್ಯದಿಂದ ಕಲ್ಲೂರಿನ ಸಂಶೋಧನೆವರೆಗೂ ನಟರಾಜನ ಪಾತ್ರ ಮನಸೆಳೆಯುತ್ತದೆ. ಜೊತೆಗೆ ಕಲ್ಲೂರಿನ ಮುಗ್ಧ ಹುಡುಗಿ ಬೆಳ್ಳಿ, ಅವರ ತಾಯಿ ಮುದ್ದಮ್ಮ, ನಿಧಿಗಾಗಿ ವಾಮಾಚಾರ, ದೇವರ ಪೂಜೆ ಮಾಡುವ ದುಷ್ಟರು ಹೀಗೆ ಪ್ರತಿಯೊಂದು ಪಾತ್ರವೂ ತುಂಬಾ ಚೆನ್ನಾಗಿವೆ. ಅಲ್ಲಲ್ಲಿ ಪ್ರೇಮ,ಪ್ರೀತಿ ಎಂಬ ಅನುರಾಗದ ಅಂಶಗಳು ಸಹ ಚೆನ್ನಾಗಿ ಚಿತ್ರಿಸಲಾಗಿದೆ. ಒಮ್ಮೆ ಓದಿದರೂ ಮತ್ತೆ ಮತ್ತೆ ಓದಬೇಕೆನಿಸುತ್ತದೆ ಕಾರಣ ಅಲ್ಲಿ ಚಿತ್ರಿಸಲಾಗಿರುವ ಕಲ್ಲೂರಿನ ಸುಂದರ ನಿಸರ್ಗ, ಗುಡ್ಡ ಬೆಟ್ಟ , ದೇವಸ್ಥಾನಗಳ ಚಿತ್ತಾರ ಎಲ್ಲವೂ ಚೆನ್ನಾಗಿದೆ. ಕುತೂಹಲವನ್ನೇ ಮುಖ್ಯವಾಗಿರುವ ರೋಚಕ ಕಾದಂಬರಿ ಈ "ನಿಕ್ಷೇಪ".
ನಿಕ್ಷೇಪ ಈ ಕೂಟದಲ್ಲಿಲ್ಲದಿದ್ದರೂ ಓದಲು ಉತ್ತೇಜನ ಕೊಟ್ಟು ನನ್ನ ಅಭಿಪ್ರಾಯವನ್ನು ಹಂಚಿಕೊಳ್ಳಲು ಅನುಮತಿ ಕೊಟ್ಟ ಈ ಕೂಟದ ಅಡ್ಮಿನ್ಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ ಸಾಧ್ಯವಾದರೆ ಇದನ್ನು ಅಪ್ಲೋಡ್ ಮಾಡಿ ಎಂದು ಕೋರುತ್ತೇನೆ. ಒಮ್ಮೆ ಓದಿ ಆನಂದಿಸಬಹುದಾದ ಕುತೂಹಲಕಾರಿ ಕಾದಂಬರಿ.
No comments:
Post a Comment