ಹೆಂಗಳೆಯರ ಮನದ ಪಡಿಯಚ್ಚು ಸುಧಾಮೂರ್ತಿಯವರ "ಪರಿಧಿ" ಕಾದಂಬರಿ. ಸಮಾಜದ ದೃಷ್ಟಿಯಲ್ಲಿ ಪರಮಸುಖಿಯಾಗಿ ಕಂಡರೂ ಒಂಟಿತನದಿಂದ ಬಳಲುತ್ತಾ ನೋವನ್ನು ಯಾರೊಂದಿಗೂ ಹೇಳಲಾಗದೇ ಮನೋರೋಗಿಯಾಗಿ ಬಳಲುವ ಕಥೆ ಇದು ಜೊತೆಗೆ ವಾಸ್ತವದ ಇನ್ನೊಂದು ರೂಪ ಈ ಪುಸ್ತಕ. ಹಣದಿಂದ ಗುಣ ಬದಲಾಗಿ ಅನುಭವಿಸುವ ಯಾತನೆ ಇದರಲ್ಲಿದೆ .
ಮೃದುಲಾ ಹೆಸರಿಗೆ ತಕ್ಕಂತೆ ಮೃದು, ಜೊತೆಗೆ ಶಾಂತ ಸ್ವಭಾವದಿಂದ ಕೂಡಿದ ಪ್ರೀತಿ ಅಂತಕರಣ ಇರುವ ಚೆಲುವೆ. ಇದ್ದಲ್ಲೇ ತೃಪ್ತಿ ಪಡುವ ವಿಶೇಷ ಗುಣವಿರುವಳು. ಬಡತನದ ಬೇಗೆಯಲ್ಲಿ ಬೆಂದು ತನ್ನದೇ ಪ್ರಯತ್ನದಿಂದ ಸರಕಾರಿ ವೃತ್ತಿ ಪಡೆದ ಡಾಕ್ಟರ್ ಸಂಜಯ್ ಆಕೆಯನ್ನು ಪ್ರೀತಿ ಮಾಡಿ ಮದುವೆಯಾಗುತ್ತಾನೆ. ಆರ್ಥಿಕವಾಗಿ ಮೃದುಲಾ ಅವನಿಂಗಿಂತಲೂ ಮೇಲಿದ್ದರೂ ಯಾವತ್ತಿಗೂ ಆಕೆ ಅಹಂಕಾರ ತೋರಿಸದೇ ಅವನ ಖಾಸಗಿ ಮತ್ತು ವೃತ್ತಿ ಜೀವನದ ಕಷ್ಟ ಸುಖಕ್ಕೆ ಸಂಗಾತಿಯಾಗಿ ಪ್ರತೀ ಕಷ್ಟದಲ್ಲೂ ಒಳ್ಳೆಯದನ್ನೇ ಹುಡುಕಿ ಸಮಾಧಾನವಾಗಿ ಬದುಕುತ್ತಾಳೆ. ಅಲ್ಲದೆ ಅವನ ಉನ್ನತ ವಿದ್ಯಾಭ್ಯಾಸ ಮಾಡಿಸಲು ತಾನೊಬ್ಬಳೇ ದುಡಿದು ಸಂಸಾರ ಸಾಗಿಸುತ್ತಾಳೆ. ಹೀಗೆ ಹೆಂಡತಿಯ ಸಹಾಯದಿಂದ ಬಹಳ ಬೇಗ ಶ್ರದ್ಧೆಯಿಂದ ಓದಿ ಸ್ವಂತ ಆಸ್ಪತ್ರೆ ತೆಗೆದು ಬಹುದೊಡ್ಡ ಶ್ರೀಮಂತನಾಗುತ್ತಾನೆ.
ಆದರೆ ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎನ್ನುವುದು ಇಲ್ಲಿ ನೆನಪಾಗುತ್ತದೆ. ಸಂಜಯ ಒಂದು ಕಾಲದಲ್ಲಿ ನಿಸ್ವಾರ್ಥ ಸೇವೆ, ಬಡವರಿಗೆ ಸಹಾಯ ಮಾಡಬೇಕು ಎಂಬ ಆದರ್ಶದಿಂದ ಬದುಕಿದ್ದವನು ಹಣ ಬಂದಕೂಡಲೇ ಸ್ವಾರ್ಥಿಯಾಗಿ ಜೀವನವೆಂದರೆ ಬರೀ ಹಣ ಗಳಿಸುವುದು ಎಂದು ತಿಳಿದು ಅಕ್ರಮವಾಗಿಯೂ ಗಳಿಸಲು ಆರಂಭಿಸುತ್ತಾನೆ. ಇದ್ಯಾವುದನ್ನು ಸಹಿಸದ ಆದರ್ಶ ಶಿಕ್ಷಕಿ ಮೃದುಲಾ ಮೊದಲ ಬಾರಿಗೆ ತಿರುಗಿ ಬೀಳುತ್ತಾಳೆ. ಇರುವ ಒಬ್ಬನೇ ಮಗನೂ ಆಕೆಯನ್ನು ಅರ್ಥ ಮಾಡಿಕೊಳ್ಳದೆ ಅಪ್ಪನ ದಾರಿಯೇ ಹಿಡಿಯುತ್ತಾಳೆ. ಕೊನೆಗೆ ತನ್ನ ಹೆಂಡತಿಯ ಸಹಾಯದಿಂದಲೇ ಮೇಲೆ ಬಂದ ಸಂಜಯ ಆಕೆಯನ್ನೇ ಕೀಳಾಗಿ ಕಾಣುತ್ತ ಮಹಾಸ್ವಾರ್ಥಿಯಾಗಿ ಬದುಕುತ್ತಾನೆ.
ಮೃದುಲಾ ಮಾತ್ರ ನಾದಿನಿ , ಅತ್ತಿಗೆ ಅಪ್ಪ ಅಮ್ಮಾ ಎಲ್ಲರಿಂದಲೂ ದೂರಾಗಿ ಗಂಡನ ಸ್ವಾರ್ಥ, ನಡವಳಿಕೆಯಿಂದ ಬೇಸತ್ತು, ಮನೋರೋಗಕ್ಕೆ ತುತ್ತಾಗಿ ಸ್ವತಃ ತಾನೇ ಅದಕ್ಕೆ ಚಿಕಿತ್ಸೆ ತೆಗೆದುಕೊಂಡು ಚೇತರಿಸಿಕೊಳ್ಳುತ್ತಾ ಅವನನ್ನು ಬಿಟ್ಟು ಹೋಗುತ್ತಾಳೆ. ಈ ಕಥೆ ಕಾದಂಬರಿಯ ಕಲ್ಪನೆಯಲ್ಲ ನಮ್ಮ ಸುತ್ತ ಮುತ್ತ ನಡೆಯುವ ಎಷ್ಟೋ ದುಡಿಯುವ ಹೆಣ್ಣುಮಕ್ಕಳ ಕಥೆಯಾಗಿದೆ. ತನ್ನ ತೌರುಮನೆಯವರಿಗೆ ಎಂದೂ ಸಹಾಯ ಮಾಡದ ಹೆಣ್ಣು ಗಂಡನಿಗಾಗಿ ಅವರ ಸಂಸಾರಕ್ಕಾಗಿ ದುಡಿದು ಎಲ್ಲರನ್ನು ಸಂತುಷ್ಟಗೊಳಿಸುವಲ್ಲೇ ಮುಕ್ಕಾಲು ಆಯುಷ್ಯವನ್ನು ಕಳೆದರೂ ಸ್ವಾರ್ಥ ಗಂಡಂದಿರು ಅವಳನ್ನು ಎಂದೂ ಪ್ರೀತಿಯಿಂದ ಕಾಣುವುದಿಲ್ಲ, ಅವಳೊಂದು ದುಡಿಯುವ ಯಂತ್ರದಂತೆ ಕಾಣುತ್ತಾರೆ ಅಂತಹ ಗಂಡಂದಿರೂ ಇದನ್ನು ಓದಿದರೆ ಖಂಡಿತ ಅವರಿಗೆ ತಮ್ಮ ಹೆಂಡತಿಯ ಬೆಲೆ ಗೊತ್ತಾದೀತು ಎನ್ನುವುದು ನನ್ನ ಅಭಿಪ್ರಾಯ.
ಸುಧಾಮ್ಮನವರು ಸದಾ ವಾಸ್ತವದ ವಿಷಯಗಳನ್ನು ಹೆಂಗಳೆಯರ ಮನಸ್ಸನ್ನು ಮುಖ್ಯವಾಗಿ ಎಳೆದು ಬರೆಯುತ್ತಾರೆ ಎನ್ನುವುದು ಮತ್ತೊಮ್ಮೆ ನನಗೆ ಖುಷಿ ತಂದಿದೆ. ಅವರಿಗೆ ನನ್ನ ತುಂಬು ಹೃದಯದ ನಮನಗಳು.
No comments:
Post a Comment