Saturday 10 December 2016

ಪೆರಿನಿ ತಾಂಡವ


ಕೆ ಎನ್ ಗಣೇಶಯ್ಯನವರ "ಪೆರಿನಿ ತಾಂಡವ" ೩ ನೀಳ್ಗತೆಗಳ ಕಥಾಸಂಕಲನ. ವಿಜ್ಞಾನ, ಮನೋ ವಿಜ್ಞಾನ, ಇತಿಹಾಸ, ಸಾಮಾಜಿಕ ಪಿಡುಗುಗಳು, ವಿಕಾಸವಾದದ ಚರ್ಚೆ ಇನ್ನು ಹತ್ತಾರು ವಿಷಯಗಳ ಸಂಗಮವೆಂದು ಹೇಳಬಹುದು

ಪೆರಿನಿ ಎನ್ನುವುದು ಕ್ರಿ.ಶ ೧೨ನೇ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ರೂಢಿಯಲ್ಲಿದ್ದ ಒಂದು ಶಾಸ್ತ್ರೀಯ ನೃತ್ಯರೂಪ. ಈ ನೃತ್ಯರೂಪವೇ ಇಲ್ಲಿನ ಒಂದು ಕಥೆಯಲ್ಲಿ ಮುಖ್ಯ ಅಂಶ. ಈ ನೃತ್ಯ ಹೇಗೆ ಹುಟ್ಟಿತು ಎಲ್ಲಿ ಹುಟ್ಟಿತು ಎಂಬ ಪ್ರಶ್ನೆಗಳಿಗೆ ಲೇಖಕರು ನಮ್ಮನ್ನು ಇತಿಹಾಸಕ್ಕೆ ಕರೆದುಕೊಂಡು ಹೋಗಿ ಕಾಕತೀಯರ ವಂಶದವರ ಬಗ್ಗೆ ತಿಳಿಯುವಂತೆ ಮಾಡುತ್ತಾರೆ.  ಇಲ್ಲಿ ನಮಗೆ  ಕಾಕತೀಯರ ವಾರಂಗಲ್ಲಿನಲ್ಲಿರುವ "ರಾಮಪ್ಪ ದೇವಸ್ಥಾನ" ದ ಓದುವಾಗ ಮತ್ತು ಚಿತ್ರಗಳನ್ನು ನೋಡುವಾಗ ರಾಮಪ್ಪ ದೇವಾಲಯದ ರಚನೆ ಹೊಯ್ಸಳರ ದೇಗುಲಗಳನ್ನೇ ಹೋಲುತ್ತದೆ ಎಂದು ತಿಳಿಯುತ್ತದೆ. ಹಾಗಿದ್ದರೆ ಈ ರಾಮಪ್ಪ ಯಾರು ? ಎಲ್ಲಿಯವನು ? ಹೊಯ್ಸಳರ ದೇವಾಲಯಗಳಲ್ಲಿ ವಿಷ್ಣುವನ್ನು ಕೇಂದ್ರೀಕರಿಸಿದ್ದರೆ, ಕಾಕತೀಯರಲ್ಲಿ ಶಿವ. ತಮ್ಮ ಪ್ರತಿಸ್ಪರ್ಧಿಗಳಾದ ಹೊಯ್ಸಳರ ಶೈಲಿಯಲ್ಲಿ ಈ ದೇಗುಲವನ್ನೂ ಕಾಕತೀಯರು ನಿರ್ಮಿಸಿದ್ದಾದರೂ ಏಕೆ? ಸಹಜವಾಗಿ ನೋಡುವುದಾದರೇ ಎಲ್ಲ ಕಡೆಯೂ ದೇವಾಲಯ ಕಟ್ಟಿಸಿದ ರಾಜರ ಹೆಸರೋ ಅಥವಾ ಅವರ ಮನೆತನದ ಹೆಸರನ್ನೋ ಇಟ್ಟಿರುತ್ತಾರೆ ಆದರೆ ಇಲ್ಲಿ ರಾಮಪ್ಪನ ದೇವಾಲಯವೆಂದು ಹೆಸರಿಟ್ಟಿದ್ದೇಕೆ, ಕೆರೆಗೂ ಸಹ ರಾಮಪ್ಪ ಕೆರೆ ಎನ್ನಲು ಕಾರಣ? ಇತ್ಯಾದಿ ಕುತೂಹಲ ಹುಟ್ಟಿಸುವ ಮತ್ತು ಇತಿಹಾಸದ ರೋಚಕತೆಯನ್ನು ಓದಬಯಸುವ ಅಂದರೆ ಇತಿಹಾಸ ಪ್ರಿಯರಿಗೆ ಹೆಚ್ಚು ಖುಷಿ ಕೊಡುವ ಅಂಶ ಇಲ್ಲಿದೆ. 

ಇನ್ನುಳಿದ ಕಥೆಗಳಲ್ಲಿ ಬದುಕಿನ ಸುಂದರ ಸಂಬಂಧಗಳು ಮತ್ತು ನಡೆಗಳು, ಸಮಾಜದಲ್ಲಿ ನಮ್ಮ ಸುತ್ತಮುತ್ತ ನಡೆಯುವ ಅನೇಕ ಘಟನೆಗಳಿಂದ   ಮಾನಸಿಕ ಖೇದ ಉಂಟಾಗಿ ಹೇಗೆ ನಮ್ಮ ಜೀವನದಲ್ಲಿ ತಾಂಡವ ರೂಪ ತಳೆಯುತ್ತವೆ ಎನ್ನುವುದನ್ನು ತೋರಿಸಿದ್ದಾರೆ. ಇಲ್ಲಿ ನಾವು ಪ್ರೀತಿ, ಸ್ನೇಹ, ವ್ಯಾಮೋಹ , ಆಕರ್ಷಣೆ ಇವುಗಳಲ್ಲದೆ ವೈಜ್ಞಾನಿಕ ಚರ್ಚೆಗಳು ಮತ್ತು ಅವುಗಳಿಂದಾಗುವ ಅನುಕೂಲ ಅನಾನುಕೂಲ ಎಲ್ಲವನ್ನು ಅರ್ಥ ಮಾಡಿಕೊಳ್ಳಬೇಕು. ಒಟ್ಟಿನಲ್ಲಿ ಹೇಳುವುದಾದರೆ "ಪೆರಿನಿ ತಾಂಡವ" ಇತಿಹಾಸ ಜ್ಞಾನ ಹೆಚ್ಚಿಸುವುದಲ್ಲದೆ ವಾಸ್ತವ ಬದುಕಿನಲ್ಲಿ ಜನರು ಅನುಭವಿಸುವ ಮಾನಸಿಕ ಹಿಂಸೆ, ಗೊಂದಲ, ಆತಂಕ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರವನ್ನು ಕೊಡಬಹುದು ಎಂಬುದು ನನ್ನ ಅನಿಸಿಕೆ. 

No comments: