ಅಮೀಶ್ ಅವರ "ನಾಗಾ ರಹಸ್ಯ " (ಕನ್ನಡಕ್ಕೆ ಅನುವಾದ: ಎಸ್.ಉಮೇಶ್) "ಮೆಲುಹದ ಮೃತ್ಯಂಜಯ" ದ ಎರಡನೇ ಭಾಗ ಮತ್ತು ಅದಕ್ಕಿಂತಲೂ ರೋಚಕವಾದ ಪುಸ್ತಕ. ಮೊದಲ ಭಾಗದಲ್ಲಿ ಶಿವ ಒಬ್ಬ ಸಾಮಾನ್ಯ ಮನುಷ್ಯನಾಗಿ ಹೇಗೆ ನೀಲಕಂಠನಾಗಿ ಮೆಲುಹಕ್ಕೆ ರಕ್ಷಣೆ ನೀಡಿದ ಮಹಾದೇವನ ಮಹಿಮೆ ಏನು ಎನ್ನುವುದನ್ನು ಲೇಖಕರು ಅವರದೇ ಆದ ಸುಂದರ ಕಲ್ಪನೆಯಲ್ಲಿ ಸುಂದರವಾಗಿ ಹೇಳಿದ್ದಾರೆ.
ಮೊದಲನೇ ಭಾಗದಲ್ಲಿ ನಾಗಾಗಳ ಬಗ್ಗೆ ಇದ್ದ ಭಾವನೆಗಳು "ನಾಗ ರಹಸ್ಯ " ದಲ್ಲಿ ಕ್ರಮೇಣ ಬದಲಾಗುತ್ತ ಹೋಗುತ್ತವೆ. ಒಟ್ಟು ೨೩ ಅಧ್ಯಾಯಗಳಿದ್ದು ಒಂದೊಂದರಲ್ಲೂ ಒಂದು ವಿಭಿನ್ನ ವಸ್ತು ಮತ್ತು ವ್ಯಕ್ತಿಯ ಬಗ್ಗೆ ತಿಳಿಯುವಂತೆ ಕುತೂಹಲ ಸೆಳೆಯುತ್ತದೆ. ಒಮ್ಮೆ ಈ ಕೃತಿ ಹಿಡಿದರೆ ಕೊನೆಯ ಪುಟ ಬರುವತನಕ ಬಿಡಲು ಮನಸಾಗದು.. ಆದರೆ ನನ್ನ ಅನುಭವ ಹೇಳಬೇಕೆಂದರೆ "ಮೆಲುಹದ ಮೃತ್ಯುಂಜಯ" ಓದಿದ ತಕ್ಷಣ "ನಾಗಾ ರಹಸ್ಯ" ಓದಿದರೆ ತುಂಬಾ ರೋಚಕವಿರುತ್ತದೆ. ಏಕೆಂದರೆ ಬಹಳ ಮೊದಲ ಭಾಗಕ್ಕೂ ಎರಡನೇ ಭಾಗಕ್ಕೂ ಬಹಳ ದಿನಗಳ ಅಂತರವಾದರೆ ಮೆಲುಹದಲ್ಲಿ ಓದಿದ ಎಷ್ಟೋ ಸ್ವಾರಸ್ಯಕರ ಘಟನೆಗಳು ಮರೆಯುವ ಸಾಧ್ಯತೇ ಉಂಟು ಹಾಗಾಗಿ ಒಟ್ಟಿಗೆ ಓದಿದರೆ ಇನ್ನು ಹೆಚ್ಚು ಖುಷಿಯಾಗುತ್ತದೆ.
ಈ ಪುಸ್ತಕದ ಬಗ್ಗೆ ವಿಮರ್ಶೆ ಬರೆಯಲು ನನಗಂತೂ ಅಸಾಧ್ಯ ಅಷ್ಟು ಪ್ರಭುದ್ಧ ಕೃತಿಯಿದು. ಆದರೆ ಇಲ್ಲಿ ಬರುವ ಪಾತ್ರಗಳು ಒಂದಕ್ಕಿಂತ ಒಂದು ವಿಭಿನ್ನ ಹಾಗೆ ಪುಟದಿಂದ ಪುಟಕ್ಕೆ ಅಷ್ಟೇ ವಿಭಿನ್ನವಾಗಿ ಅವರ ಮೇಲಿನ ಭಾವನೆಗಳನ್ನು ಬದಲಾಗುತ್ತಾ ಹೋಗುತ್ತದೆ. ಅದನ್ನು ನಿಜಕ್ಕೂ ಓದಿಯೇ ಆನಂದಿಸಬೇಕು. ನಾಗಾ ನಾಯಕ ಯಾರು, ಅವನ ಚಿಕ್ಕಮ್ಮ ನಾಗರಾಣಿ ಯಾರು ನಾಗಗಳ ಕೆಲಸ ಅವ್ರ ರೂಪ ,ವರ್ತನೆ ಇತ್ಯಾದಿ ಎಲ್ಲವೂ ಅವರೊಂದಿಗೆ ಇದ್ದೇವೇನೋ ಎನ್ನುವ ಮಟ್ಟಕೆ ಮನಸಿಗೆ ಅನಿಸುವುದು ನಿಜ. ನಾಗಾ ನಾಯಕ ಮತ್ತು ರಾಣಿ ಇವರ ಬಗ್ಗೆ ಆರಂಭದಲ್ಲಿ ಒಂದು ಅಭಿಪ್ರಾಯ ಬಂದರೆ ಅಂತ್ಯಕ್ಕೆ ಬೇರೆಯೇ ಒಂದು ರೂಪ ತಾಳುತ್ತದೆ. ನಾಗಾ ರಹಸ್ಯವೇನು ಎನ್ನುವುದೇ ಈ ಕೃತಿಯ ಜೀವಾಳ ಅದನ್ನು ಪತ್ತೆ ಹಚ್ಚಿದ ರೀತಿ, ನಡುವೆ ಆದ ಹೋರಾಟ ಯುದ್ಧ ಎಲ್ಲವೂ ಅದ್ಭುತವಾಗಿವೆ.
ಇಲ್ಲಿ ಬರುವ ವಿಚಿತ್ರ ಗಿಡ, ಮರ ನದಿ, ಪ್ರಾಣಿ ( ಅದರಲ್ಲೂ ಸಿಂಹುಲಿ ಪ್ರಾಣಿಯ ಕಲ್ಪನೆಯಂತೂ ಅದ್ಭುತ )ಎಲ್ಲವೂ ಆಶ್ಚರ್ಯವೆನಿಸುತ್ತದೆ . ಶಿವನ ಕಲ್ಪನೆ ಇಲ್ಲಿ ಬೇರೆಯೇ ಇದ್ದರೂ ಅದನ್ನೂ ವಾಸ್ತವ ಬದುಕಿಗೆ ಅಳವಡಿಸಿ ಅಮೋಘವಾಗಿ ಚಿತ್ರಿಸಿದ್ದಾರೆ. ಆದರೆ ಕೊನೆಗೆ ನಿರಾಸೆಯಾಗುವುದಂತೂ ಖಂಡಿತ ಏಕೆಂದರೆ ಇಲ್ಲಿಯೂ ಕೂಡ ಕಥೆಯ ಅಂತ್ಯ ಆಗುವುದಿಲ್ಲ.. :( ಅದಕ್ಕಾಗಿ "ವಾಯುಪುತ್ರರ ಶಪಥ" ಕ್ಕಾಗಿ ಕಾಯಲೇ ಬೇಕು. ಇದೊಂದು ಬಿಟ್ಟರೆ "ನಾಗಾ ರಹಸ್ಯ" ಅತ್ಯದ್ಭುತ ಕೃತಿ.
No comments:
Post a Comment