Monday 5 December 2016

ಮೆಲೂಹದ ಮೃತ್ಯುಂಜಯ


"ಮೆಲೂಹದ ಮೃತ್ಯುಂಜಯ" ಅಬ್ಬಾ!!!!!!!!!! ಇದೊಂದು ಅದ್ಭುತ ಪುಸ್ತಕ... ಇದರ ಬಗ್ಗೆ ಎಷ್ಟು ಬರೆದರೂ ಎಷ್ಟು ಮೆಚ್ಚುಗೆಯ ಮಾತನ್ನು ವ್ಯಕ್ತ ಪಡಿಸಿದರೂ ಕಡಿಮೆಯೇ.. ನಿಜ ಹೇಳಬೇಕೆಂದರೆ ಇದರ ಬಗ್ಗೆ ವಿಮರ್ಶೆ ಬರೆಯುವಷ್ಟು ನಾನು ದೊಡ್ದವಳಲ್ಲ ಹಾಗಾಗಿ ನನಗೆ ಅನಿಸಿದ್ದನ್ನು ಸರಳವಾಗಿ ಹೇಳುತಿರುವೆ.

ಈ ಪುಸ್ತಕದ ಆರಂಭದ ವಿಮರ್ಶೆಗಳಲ್ಲಿ ಹೇಳಿರುವ ಹಾಗೆ ಓದುಗರಲ್ಲಿ ಕುತೂಹಲವನ್ನು ಸೃಷ್ಟಿಸಿ ಕೊನೆಯ ಪುಟದವರೆಗೂ ಎಡೆಬಿಡದೆ ಓದುವಂತೆ ಪ್ರೇರೇಪಿಸುತ್ತದೆ ಎನ್ನುವ ಮಾತು ಅಕ್ಷರಶಃ ನಿಜ. ಪುಟದಿಂದ ಪುಟಕ್ಕೆ ಕುತೂಹಲ ಹೆಚ್ಚಾಗಿ ರೋಮಾಂಚನ ನೀಡುತ್ತದೆ. ಇದು ಕೇವಲ ಪೌರಾಣಿಕ ಕಥೆಯಂತೆ ಎಲ್ಲೂ ನಮಗೆ ಭಾಸವಾಗುವುದಿಲ್ಲ.
ಈ ಪುಸ್ತಕ ಓದುವಾಗ ನನಗಾದ ಅನುಭವಗಳು... ಹೀಗಿವೆ 

೧. ನಾವು ಶಾಲೆಯಲ್ಲಿದ್ದಾಗ ಓದಿದ ಪ್ರತಿಯೊಂದು ಸಾಮಾಜಿಕ ,ಭೌಗೋಳಿಕ ,ವೈಜ್ಞ್ಯಾನಿಕ, ಐತಿಹಾಸಿಕ ಪಾಠಗಳೆಲ್ಲ ಈ ಪುಸ್ತಕ ಓದುವಾಗ ನೆನಪಾಗುತ್ತವೆ.

೨. ಸಿಂಧೂ ಬಯಲಿನ ನಾಗರೀಕತೆ, ಮಾನಸ ಸರೋವರ , ಶ್ರೀನಗರ ಕಾಶ್ಮೀರ ಹೀಗೆ ನಮ್ಮ ದೇಶದ ಅನೇಕ ಸ್ಥಳಗಳಲ್ಲದೆ ನಮ್ಮ ದೇಶದ ಅನೇಕ ನದಿಗಳ ಹೆಸರಲ್ಲದೆ ಅನೇಕ ಪರದೇಶಗಳ ಸ್ಥಳಗಳು ಇಲ್ಲಿ ಬಂದು ಹೋಗುತ್ತವೆ. ನಾನು ಇಲ್ಲಿ ಇವುಗಳ ಹೆಸರು ತೆಗೆದುಕೊಂಡ ಕಾರಣವೇನೆಂದರೆ ಪ್ರತೀ ಪುಟ ಓದುವಾಗ ಓದುಗರು ಕೂಡ ತಾವಿರುವ ಜಾಗವ ಮರೆತು ಅಲ್ಲಿಯೇ ಹೋಗುತ್ತಿದ್ದಾರೆ ಎಂದೆನಿಸಬೇಕು ಅಷ್ಟರ ಮಟ್ಟಿಗೆ ಈ ಪುಸ್ತಕ ಸೆಳೆಯುತ್ತದೆ.

೩. ಶಿವನು ನಾವಂದುಕೊಂಡ ಹಾಗೆ ದೇವರು.. ಆದರೆ ಇದರಲ್ಲಿ ಅವನ ಕಲ್ಪನೆಯೇ ಭಿನ್ನವಾಗಿದೆ.. ಶಿವ ಹೇಗೆ ಹುಟ್ಟಿದ ಬೆಳೆದ ಮುಂದೆ ಅವನು ಹೇಗೆ ಮಹಾದೇವನಾದ ಎನ್ನುವ ಸುಂದರ ಚಿತ್ರಣ ಇಲ್ಲಿ ಮೂಡಿದೆ. ಮೆಲೂಹಕ್ಕೆ ಶಿವನ ಆಗಮನ, ಅಲ್ಲಿಯ ಜನರ ರಕ್ಷಣೆ, ಅವನ ಕಲ್ಯಾಣ, ಯುದ್ಧದ ತಯಾರಿ ಹೀಗೆ ಮತ್ತೊಂದು ಮೊಗದೊಂದು ಕಣ್ಣಿಗೆ ಕಟ್ಟುವಂತೆ ಹೆಣೆದಿದ್ದಾರೆ.. ನಾವೇ ಇದನ್ನೆಲ್ಲಾ ಕಣ್ಣಾರೆ ನೋಡುತಿದ್ದೆವೇನೋ ಎಂದೆನಿಸಿದರೂ ತಪ್ಪಿಲ್ಲ.

೪. ಇನ್ನೊಂದು ಮುಖ್ಯವಾದ ಅಂಶವೆಂದರೆ ಶ್ರೀ ರಾಮನ ಕಲ್ಪನೆ ಅಷ್ಟೇ ಸುಂದರ ಸರಳ ಮತ್ತು ಉತ್ತಮ ಮೌಲ್ಯಗಳಿಂದ ಚಿತ್ರಿಸಿದ್ದಾರೆ. ಪ್ರತಿಯೊಂದು ಅಧ್ಯಾಯವು ಸಹ ಅದರದೇ ಆದ ವೈಶಿಷ್ಟ್ಯ ಹೊಂದಿದೆ. ಹೀಗೆ ಈ ಪುಸ್ತಕದ ಬಗ್ಗೆ ಎಷ್ಟು ಹೇಳಿದರೂ ಮುಗಿಯುವುದಿಲ್ಲ.

೫. ಕೊನೆಯದಾಗಿ ಹೇಳುವುದೆಂದರೆ ಮೊದಲ ಪುಟದಿಂದ ಕೊನೆಯ ಪುಟದವರೆಗೂ ಬಿಡದಂತೆ ಓದಿಸಿಕೊಂಡು ಓದುವ ಈ ಪುಸ್ತಕ ಅಂತ್ಯದಲ್ಲಿ ನಿರಾಸೆ ಮೂಡಿಸುತ್ತದೆ ಅದಕ್ಕೆ ಕಾರಣ ಈ ಪುಸ್ತಕದ ಮುಂದಿನ ಭಾಗದಲ್ಲಿ ಕಥೆ ಅಂತ್ಯವಾಗುತ್ತದೆ ಅದೇ "ನಾಗಾಗಳ ರಹಸ್ಯ" ಮತ್ತು "ವಾಯುಪುತ್ರರ ಶಪಥ". ಈ ೨ ಪುಸ್ತಕಗಳನ್ನು ಓದಿದ ಮೇಲೆಯೇ ಓದುಗರ ಕುತೂಹಲ ಕರಗತ್ತದೆ ಎನ್ನುವುದು ನನ್ನ ವಯಕ್ತಿಕ ಅಭಿಪ್ರಾಯ..

ಇಂತಹ ಅದ್ಬುತ ಪುಸ್ತಕವನ್ನು ನನ್ನ ಕೈ ಸೇರಿಸಿ ಓದಲು ಪ್ರೇರೇಪಿಸಿದ ಎಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು.

No comments: