Friday, 2 December 2016

ಕಲ್ದವಸಿ


ಕೆ. ಎನ್ ಗಣೇಶಯ್ಯನವರ "ಕಲ್ದವಸಿ" ೩ ಕಥೆಗಳಿರುವ ಒಂದು ವಿಭಿನ್ನ ಕಥಾಸಂಕಲನ. ಇಲ್ಲಿನ ಕಥೆಗಳು ಪುರಾಣ ಶತಮಾನಗಳ ಮತ್ತು ವರ್ತಮಾನಗಳನ್ನೂ ಪರಸ್ಪರ ಬೆರೆಸಿ ಓದುಗರನ್ನು ಹೊಸದೊಂದು ವಿಚಾರಲಹರಿಗೆ ನೂಕುತ್ತವೆ. ಹೀಗೆ ವರ್ತಮಾನ ಮತ್ತು ಇತಿಹಾಸಗಳನ್ನು ಬೇರ್ಪಡಿಸದೆ ಉಂಟಾದ ಮಿಥ್ಯಜ್ಞಾನದಿಂದ ಪಾರಾಗಲು ಈ ಕಥೆಗಳು ಬೇರೆಬೇರೆ ಮನಸ್ಥಿತಿಯ ಓದುಗರಿಗೆ ಸಹಾಯ ಮಾಡುತ್ತವೆ.
ಲೇಖಕರು ಮುನ್ನುಡಿಯಲ್ಲಿ ಹೇಳಿರುವಂತೆ ಸಂಸ್ಕೃತಿ ಅನಾದಿ ಕಾಲದ್ದು, ಭವ್ಯ ಚರಿತ್ರೆ ಇರುವ ದೇಶವೆಂದು ಎಲ್ಲರೂ ಹೇಳಿಕೊಳ್ಳುತ್ತೇವೆ. ಆದರೆ ಚರಿತ್ರೆಯ ಘಟನೆಗಳ ಬಗ್ಗೆ ದಾಖಲಿಸುವ ರೂಢಿಯೇ ನಮ್ಮ ಭಾರತೀಯರ ರಕ್ತದಲ್ಲಿ ಕಂಡುಬರುವುದಿಲ್ಲವೆಂದು ನೋವಿನಿಂದ ಹೇಳಿದ್ದಾರೆ. ಪ್ರತಿಯೊಂದಕ್ಕೂ ನಾವು ಪರದೇಶದ ಚರಿತ್ರಕಾರರು ಬರೆದಿರುವ ಆಧಾರಗಳ ಮೊರೆ ಹೋಗಬೇಕು. ಉದಾಹರಣೆಗೆ ವಿಜಯನಗರದ ವಿವರಗಳಿಗಾಗಿ ಹುಯೆನ್ತ್ಸಾಗ್ ನ ಯಾತ್ರೆಯ ದಾಖಲೆ ನೋಡಬೇಕು, ಚಂದ್ರಗುಪ್ತನ ಬಗ್ಗೆ ತಿಳಿಯಬೇಕೆಂದರೆ ಹೆರೋಟೋಡ್ಸ್ ಬರಹವನ್ನು ನೋಡಬೇಕು, ಹೀಗೆ ಹತ್ತು ಹಲವಾರು ಉದಾಹರಣೆಗಳು ಕಂಡು ಬರುತ್ತವೆ.

ಇನ್ನು ಕಥೆಗಳಿಗೆ ಬರುವುದಾದರೆ ಮೊದಲನೇ ಕಥೆ "ಧರ್ಮನಿಧರ್ಮ"ದಲ್ಲಿ ಎರಡನೇ ಬುದ್ಧನೆಂದೇ ಪ್ರಸಿದ್ಧಿಯಾದ ನಾಗಾರ್ಜುನ ಆಚಾರ್ಯರ ಬಗ್ಗೆ ಬರೆದಿದ್ದಾರೆ. ಲೇಖಕರು ಮತ್ತು ಅವರ ಮಗಳು ನಾಗಾರ್ಜುನ ಕೊಂಡಕ್ಕೆ ಹೋದಾಗ ಅವರಿಗೆ ಸಿಕ್ಕ ಒಬ್ಬ ಇಂಗ್ಲಿಷ್ ಮಹಿಳೆಯ ಸಂಶೋಧನೆಯ ಅಂಶಗಳನ್ನು ಮತ್ತು ತಮ್ಮಿಬ್ಬರ ಸಂಶೋಧನೆ ಮಾಹಿತಿಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಇಲ್ಲಿ ಬರುವ ಎರಡನೇ ಬುದ್ಧನೆಂದು ಪ್ರಖ್ಯಾತರಾದ ನಾಗಾರ್ಜುನ ಆಚಾರ್ಯರ ಜೀವನದ ಬಗ್ಗೆ ಕೂಲಂಕುಷವಾಗಿ ಅಧ್ಯಯನ ಮಾಡಿ ನವಿರಾಗಿ ಬರೆದಿದ್ದಾರೆ . ಅಮರಾವತಿಯನ್ನು ಆಳಿದ ಶಾತವಾಹನರು ಹಿಂದೂ ಧರ್ಮೀಯರಾಗಿದ್ದೂ ಜೈನ ಸ್ತೂಪಗಳ, ವಿಶ್ವವಿದ್ಯಾಲಯ ಸ್ಥಾಪನೆ ಹಾಗು ಜೈನ ಧರ್ಮಕ್ಕೆ ಪ್ರೋತ್ಸಾಹ, ಅದರ ಪ್ರಚಾರಕ್ಕೆ ಕಾರಣವಾಗಿದ್ದು ಏಕೆಂದು ಹೇಳುತ್ತಾ ಇತಿಹಾಸವನ್ನು ಕಥೆಯಾಗಿ ಬಿಚ್ಚಿಡುತ್ತದೆ ಆದರೆ ಈ ಕಥೆಯನ್ನು ಓದುವಾಗ ಗಮನವಿಟ್ಟು ಓದಬೇಕು ಏಕೆಂದರೆ ಶಾಲೆಯಲ್ಲಿ ನಾವು ಕಷ್ಟಪಟ್ಟು ಓದಿ ಮರೆತ ಇತಿಹಾಸವನ್ನು ಮತ್ತೆ ನೆನಪಿಸುವ ಕಥೆಯಿದು. ಮನಸಿಟ್ಟು ಓದಿದರೆ ಮಾತ್ರ ಅರ್ಥವಾಗುತ್ತದೆ ಶಾತವಾಹನರ ಮತ್ತು ಇಕ್ಷ್ವಾಕುಗಳ ಇತಿಹಾಸ. ಇಲ್ಲಿರುವ ರೋಚಕತೆಯನ್ನು ಓದಿಯೇ ತಿಳಿಯಬೇಕು.
ಇನ್ನು ಎರಡನೇ ಕಥೆ "ಅಂಗದಾನ" ಇಲ್ಲಿ ಧರ್ಮಗಳ ಅವಶ್ಯಕತೆಯ ಬಗ್ಗೆ ಮಾತನಾಡುವವರನ್ನೂ ಹಾಗೆಯೆ ತಿರಸ್ಕಾರ ಮನೋಭಾವದಿಂದ ನೋಡುವ ಈ ಎರಡೂ ವಿಚಾರವಾದಿ'ಗಳ ಚರ್ಚೆ, ಬಾಂಬ್ ಸ್ಪೋಟದ ಚಿತ್ರಣ ಇತ್ಯಾದಿಗಳು ಕಣ್ಣಿಗೆ ಕಟ್ಟುವಂತೆ ಮತ್ತು ಓದುಗರನ್ನು ವಿಚಾರ ಮಾಡುವಂತೆ ಮಾಡುತ್ತವೆ. ಅಂತೆಯೆ, ಲೇಖಕರು ಹೇಳುವಂತೆ ಧಾರ್ಮಿಕ ವಿಧಿಗಳನ್ನು ಧಿಕ್ಕರಿಸುವ ಮುನ್ನ ಅವುಗಳ ಅವಲೋಕನೆ ಅವಶ್ಯಕ ಎಂದು ವಾದಿಸುವವರನ್ನು ಇವರು, 'ಮೂಲಭೂತ ವಾದಿಗಳೆಂದು' ತಿರಸ್ಕರಿಸುತ್ತಾರೆ.ಧರ್ಮಗಳ ಉಗಮ ಮತ್ತು ಅವಶ್ಯಕತೆ ಗಳನ್ನು ನಾವು ಉದ್ವೇಗರಹಿತವಾಗಿ, ರಾಜಕೀಯ-ಮುಕ್ತವಾಗಿ, ಹಾಗೂ ಕಾಲಾತೀತವಾಗಿ ಗ್ರಹಿಸಿದರೆ ಸಾಮಾಜಿಕ ಕಳಕಳಿಯಬಗ್ಗೆ ಎಲ್ಲರೂ ಯೋಚಿಸುವುದು ದಿಟ.
ಇನ್ನೂ ಮೂರನೇ ಕಥೆಯೇ "ಕಲ್ದವಸಿ". ಶ್ರೀ ರಾಮಾಯಣ ದರ್ಶನಂ ರಚಿಸುವಾಗ ಕುವೆಂಪುವಿಗೆ ಸಿಕ್ಕ ಒಬ್ಬ ಮಹಿಳೆ "ಸರಸ್ವತಿ" ಯೊಡನೆ ನಡೆದ ಸಂವಾದ ಮತ್ತು ರಾಮಾಯಣದ ಅಂಶಗಳ ಬಗ್ಗೆ ಆಕೆ ಕುವೆಂಪು ಅವರೊಂದಿಗೆ ಮಾಡಿದ ವಾದ ವಿವಾದಗಳು ನಿಜಕ್ಕೂ ಅಲ್ಲಗೆಳೆಯುವಂತಿಲ್ಲ. ಇದು ಕಥೆಯಲ್ಲ ನಿಜವಾಗಲೂ ನಡೆದ ರೋಚಕ ಘಟನೆ ಇದನ್ನು ಓದಿಯೇ ತಿಳಿಯಬೇಕು. ಇನ್ನು ಕಲ್ದವಸಿಯೆಂದರೆ ತನ್ನ ಗಂಡನೊಂದಿಗೆ ವನವಾಸಕ್ಕೆ ಹೋಗದೆ ಭಾವನೆಗಳನ್ನು ಹತ್ತಿಕ್ಕಿ ಕಾದ ಊರ್ಮಿಳೆ ಕಲ್ಲಿನಂತಹಾ ತಪಸ್ವಿನಿಯಾಗಿ, ಸೀತಾರಾಮರ ಹೃದಯದಲ್ಲಿ ಲಕ್ಷ್ಮಣನ ಸ್ಥಿತಿಗೆ ನೆನಪಾಗಿ ವನವಾಸದಲ್ಲಿನ ಪರ್ಣಶಾಲೆಯ ಬಳಿಯ ಕಲ್ಲುಬಂಡೆಯಾಗಿ ನಿಲ್ಲುತ್ತಾಳೆ. ಆಕೆಯೇ ಕಲ್ದವಸಿ. (ಇದು ಅಂತರಜಾಲದಲ್ಲಿ ಸಿಕ್ಕ ಮಾಹಿತಿ) ಇದನ್ನು ಓದಿದಮೇಲೆ ತಮ್ಮನ್ನು ತಾವೇ ಪ್ರಶ್ನಿಸಿ ತಮಗೆ ತಾವೇ ಉತ್ತರಿಸಿಕೊಳ್ಳುವ ಭಾವನೆ ಮನಸ್ಥಿತಿ ಉಂಟಾಗಬಹುದು ಎಂಬುದು ನನ್ನ ಅಭಿಪ್ರಾಯ. ಇದು ನನಗೆ ಅನಿಸಿದ್ದು ನಿಜ.

No comments: