Friday, 2 December 2016

ಏಳು ರೊಟ್ಟಿಗಳು






ಕೆ ಎನ್ ಗಣೇಶಯ್ಯನವರ "ಏಳು ರೊಟ್ಟಿಗಳು" ಹೆಸರು ಕೇಳಿದಾಗ ನನ್ನಮ್ಮ ದಿನ ತಟ್ಟುವ ರೊಟ್ಟಿಗಳು ನೆನಪಾದವು. ಆದರೆ ನನ್ನಮ್ಮನ ರೊಟ್ಟಿಯಲ್ಲಿ ಬೆರೆತಿರುವ ಪ್ರೀತಿ ಮನಸಿಗೂ ಮತ್ತು ಶಕ್ತಿ ದೇಹಕ್ಕೂ ನಾಟಿದರೆ ಗಣೇಶಯ್ಯನವರ "ಏಳು ರೊಟ್ಟಿಗಳಲ್ಲಿ" ಅಪಾರ ಜ್ಞಾನ , ಸಂಶೋಧನೆ, ಇತಿಹಾಸ, ಕುತೂಹಲ ಎಲ್ಲವೂ ಮಿಶ್ರಣಗೊಂಡು ಓದುಗರ ಮನಸು ಮತ್ತು ಮೆದುಳನ್ನು ಕಾಡುತ್ತದೆ. ಇದು ಕಿರುಕಾದಂಬರಿಯಾದರೂ ಇಲ್ಲಿ ತಿಳಿಯುವ ವಿಚಾರಗಳು ಅಪಾರ.

ಇನ್ನು ಕಾದಂಬರಿಯ ಬಗ್ಗೆ ಹೇಳುವುದಾದರೆ ಹೈದರಾಯಬಾದನ್ನು ಆಳಿದ ನಿಜಾಮ,ಆತನ ಆಳ್ವಿಕೆಯಲ್ಲಿ ಸಂಪಾದಿಸಿದ ಲೆಕ್ಕವೇ ಸಿಗದಷ್ಟಿದ್ದ ಅಪಾರ ಚಿನ್ನ ಮತ್ತು ಅಮೂಲ್ಯ ವಸ್ತುಗಳೊಂದಿಗೆ ದೇಶದಿಂದ ಪರಾರೈಯಾಗಲು ಯತ್ನಿಸಿದಾಗ ಭಾರತ ಸರಕಾರದ ಬಿಗಿ ಹಿಡಿತದಿಂದ ಅವನ ಪ್ರಯತ್ನ ಸಫಲವಾಗುವುದಿಲ್ಲ. ಆನಂತರ ಆ ಅಪಾರ ನಿಧಿ ಏನಾಯ್ತು ಎನ್ನುವುದರ ಸುತ್ತಾ ಹೆಣೆದಿರುವ ಕಥೆಯೇ "ಏಳು ರೊಟ್ಟಿಗಳು". ಈ ಕಥೆ ಬರೆಯುವಾಗ ಗಣೇಶಯ್ಯನವರು ಹೈದರಬಾದ್ ಇತಿಹಾಸದ ಬಗ್ಗೆ ಮಾಡಿರುವ ಅಧ್ಯಾನ ಶ್ಲಾಘನೀಯ. ನಿಜಾಮರ ನಿಜವಾದ ಕಥೆ ತಿಳಿಯಲು ಹೈದರಾಬಾದ್ ಗಲ್ಲಿ ಗಲ್ಲಿ ಸುತ್ತಿ ಘಟನೆಗಳನ್ನು ಕೂಡಿಹಾಕಿ ಮತ್ತು ಭಾರತದಲ್ಲಿ ನಿಷೇದಿತ ಪುಸ್ತಕದ ಜೆರಾಕ್ಸ್ ಪ್ರತಿ ಅಧ್ಯಯನ ಮಾಡಿ ಈ ಸುಂದರವಾದ ರೋಚಕ ಕಾದಂಬರಿಯನ್ನು ಬರೆದ್ದಿದ್ದಾರೆ.

ಇಲ್ಲಿನ ಇತಿಹಾಸ, ಚಿತ್ರನಕ್ಷೆಗಳ ಮಾಹಿತಿ, ಕುತೂಹಲಕಾರಿ ನಿರೂಪಣೆ ಎಲ್ಲವೂ ಗಣೇಶಯ್ಯನವರ ವಿಶಿಷ್ಟ ಶೈಲಿಯ ಬರವಣಿಗೆಯನ್ನು ಎತ್ತಿ ಹಿಡಿಯುತ್ತವೆ. ಈ ಪುಸ್ತಕದ ಮಧ್ಯೆ ಬರುವ ಅರಮನೆ ಚಿತ್ರಗಳು, ನಿಜಾಮರ ಆಳ್ವಿಕೆಯಲ್ಲಿ ಬಂದಿರುವ ತಿಜೋರಿ, ಉಡುಪು, ಬಕಲ್ಗಳ ಅವಶೇಷಗಳು ಎಲ್ಲವೂ ನೋಡಿದರೆ ಹೈದೆರಾಬಾದ್ಗೆ ಹೋಗಿ ಎಲ್ಲವನ್ನು ನೋಡಿ ಕೆಲವೊಂದಕ್ಕೆ ಯಾಕೆ ನಿಷೇಧ ಮಾಡಿದ್ದಾರೆ ಎನ್ನುವುದನ್ನು ತಿಳಿದು ಬರಬೇಕೆಂಬ ಆಸೆ ಬಾರದಿರುವದಿಲ್ಲ. ಇದೆಲ್ಲದರ ಜೊತೆಗೆ ಪುಸ್ತಕಡಾ ಕೊನೆಯಲ್ಲಿ "ಈ ರೊಟ್ಟಿಗಳನ್ನು ತಟ್ಟುವಾಗ " ಎಂಬ ಅಂಕಣದಲ್ಲಿ ಲೇಖಕರು ಪಟ್ಟ ಶ್ರಮ ಮಾಹಿತಿ ಸಂಗ್ರಹಿಸಿದ ಕ್ರಮ ಜೊತೆಗೆ ಅವರ ಕುಟುಂಬದವರ ಸಹಕಾರ ಎಲ್ಲವನ್ನೂ ಮನಮುಟ್ಟುವಂತೆ ಹಂಚಿಕೊಂಡಿದ್ದಾರೆ. "ಏಳು ರೊಟ್ಟಿಗಳನ್ನು" ತಿಂದಮೇಲೂ ಇನ್ನು ಒಂದಿಷ್ಟು ರೊಟ್ಟಿಗಳು ಇರಬಾರದಿತ್ತೇ ಎಂದೆನಿಸದೆ ಇರದು.

No comments: