ಕೆ ಎನ್ ಗಣೇಶಯ್ಯನವರ ಕಾದಂಬರಿಯನ್ನು ನೆನ್ನೆ ಸಂಜೆ ಆರಂಭಿಸಿದೆ ಇವತ್ತು ನಾಳೆವರೆಗೆ ಮುಗಿಯಬಹುದು ಎಂಬ ನನ್ನ ಊಹೆ ಸುಳ್ಳಾಯಿತು, ಕಾರಣ ಕಾದಂಬರಿಯ ರೋಚಕತೆಗೆ ಸೋತು ಇಂದು ಬೆಳಗ್ಗೆ ವಾಹನ ದಟ್ಟಣೆಯಲ್ಲಿ ಸಿಕ್ಕ ನಾನು ಕಛೇರಿಗೆ ಬರುವುದೊರಗೆ ಮುಗಿಸಿಬಿಟ್ಟಿದ್ದೆ!!!! ಹಿಂದೆ ಓದಿದ "ಏಳು ರೊಟ್ಟಿಗಳು", "ಶಿಲಾಕುಲವಲಸೆ", "ಮೂಕಧಾತು" ಇತ್ಯಾದಿಗಳು ಎಷ್ಟು ರೋಚಕ ಎನಿಸಿದವೋ ಅದ್ಕಕಿಂತ ಹೆಚ್ಚು ಪ್ರಿಯವೆನಿಸಿತು ನನಗೆ ಈ "ಕನಕ ಮುಸುಕು".
ಲೇಖಕರೇ ಹೇಳುವ ಹಾಗೆ ಈ ಕೃತಿಯ ಮೂಲ ಆಧಾರ ಅವರ ಪತ್ನಿ ಎಡಿನ್ಬರೋ ವಿಶ್ವವಿದ್ಯಾಲಯಯದಲ್ಲಿ ಸೋಮನಾಥಪುರದ ದೇವಾಲಯದಲ್ಲಿರುವ ಮುಸುಕಿನ ಜೋಳದಂತಹ ಕೆತ್ತನೆಗಳ ಬಗ್ಗೆ ಕೈಗೊಂಡ ಸಂಶೋಧನೆಯಲ್ಲಿ ಹೊಳೆದ ಒಂದು ಕಾಲ್ಪನಿಕ ತಂತು. ಅವರ ಪತ್ನಿಯಲ್ಲಿ ಲೇಖಕರು ಕಂಡ ಮಗಳಿಗಾಗಿ ಪರಿತಪಿಸುವಿಕೆ ಇದ್ದರೂ ಸಂಶೋಧನೆಯಲ್ಲಿನ ಆಸಕ್ತಿಯನ್ನು ಉಳಿಸಿಕೊಳ್ಳಲು ತುಡಿಯುವ ಒಂದು ಹೆಣ್ಣಿನ ವ್ಯಕ್ತಿತ್ವವೇ ಈ ನಾಯಕಿ ಪೂಜಾ.
ಇನ್ನು ಕಥೆಯ ಬಗ್ಗೆ ಹೇಳುವುದಾದರೆ, ಚಂದ್ರಗುಪ್ತ ಮೌರ್ಯ ಜೈನ ಸನ್ಯಾಸಿಯಾಗಿ ತನ್ನ ರಾಜ್ಯ ತ್ಯಜಿಸಿ ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೆ ಜೈನ ಮತದ ಪ್ರಚಾರಕನಾಗಿ ಶ್ರವಣಬೆಳಗೊಳಕ್ಕೆ ಬರುತ್ತಾನೆ. ಹಲವಾರು ಶಾಸನಗಳು ಹೇಳಿರುವಂತೆ ಚಂದ್ರಗುಪ್ತ ಮೌರ್ಯನ ಜೊತೆ ಸುಮಾರು ೧೨೦೦೦ ಜೈನ ಮುನಿಗಳು ಬರುತ್ತಾರೆ!! ಯಾಕೆ? ಎನ್ನುವ ಕುತೂಹಲ ಕಾಡುತ್ತಲೇ ಇರುತ್ತದೆ ಇಂತಹ ಪ್ರಶ್ನೆಗಳು ಕೊನೆಗೆ ಕೈ ಮಾಡಿ ತೋರಿಸುವ ಉತ್ತರ ಸುಮಾರು ೫೦೦ ಟನ್ ಚಿನ್ನದ ಕಡೆಗೆ. ಈ ಚಿನ್ನವನ್ನು ಮುಸುಕಿನ ಜೋಳದ ತೆನೆಯ ರೂಪದಲ್ಲಿ ಮುಸುಕಿನ ಜೋಳದ ತೆನೆಗಳ ಜೊತೆಗೆ ಉತ್ತಮ camouflage ಮಾಡಿ ತರುತ್ತಾರೆ . ಹಾಗಾಗಿ ಕನಕ ಮುಸುಕು. ಇದರ ಜೊತೆಗೆ ಅಮೆರಿಕಾದ ಬೆಳೆಯೆಂದೇ ಪರಿಗಣಿಸಿರುವ ಮುಸುಕಿನ ಜೋಳದ ಬಗ್ಗೆಯೂ ಲೇಖಕರು ಸಾಕಷ್ಟು ಮಾಹಿತಿಗಳನ್ನು ಒದಗಿಸಿದ್ದಾರೆ.
ಚಂದ್ರಗುಪ್ತ ಮೌರ್ಯ ನಿಂದ ಶುರುವಾಗುವ ನಿಧಿಯ ರಹಸ್ಯ ಹೊಯ್ಸಳ ಸಾಮ್ರಾಜ್ಯ ದ ಶಾಂತಲೆಯಲ್ಲಿ ಕೊನೆಗೊಳ್ಳುತ್ತದೆ. ಇದರ ಜೊತೆಗೆ ಕೆ ವಿ ಅಯ್ಯರ್ ಅವರ "ಶಾಂತಲಾ" ಕೂಡ ಬಂದು ಹೋಗುತ್ತಾಳೆ, ಅಲ್ಲದೆ ಆಕೆಯ ಬಗ್ಗೆ ಗೊತ್ತಿರದ ಎಷ್ಟೋ ಮಾಹಿತಿಗಳನ್ನು ಸಹ ಲೇಖಕರು ಒದಗಿಸದ್ದಾರೆ. ಈ ನಿಧಿಯನ್ನು ಹುಡುಕಲು ಹೊರಡುವ ಕಾದಂಬರಿಯ ನಾಯಕಿ ಪೂಜಾ , ಆಕೆಯ ಗಂಡ, ಆಕೆಯ ಗುರು ಹಾಗೂ ಕೆಲವು ಮುಖ್ಯ ಕಾರಣಗಳಿಂದಾಗಿ ಇದನ್ನು ಮುಚ್ಚಿಡಲು ಪ್ರಯತ್ನಿಸುವ ಜೈನ ಧರ್ಮದ ಹಿರಿಯ ನಾಯಕರುಗಳು ಬ್ರಹ್ಮ ಪ್ರಕಾಶ ಹಾಗೂ ಇಷ್ಟೆಲ್ಲಾ ಸಾಲದು ಎಂಬಂತೆ ನಾಯಕಿಯನ್ನು ಬೆನ್ನು ಹತ್ತುವ ಅಂತರಾಷ್ಟ್ರೀಯ ಕಳ್ಳರ ಗುಂಪು ಇದೆಲ್ಲ ಕನಕ ಮುಸಕಿನ ರೋಚಕತೆ ಹೆಚ್ಚಿಸಿರುವ ಅಂಶಗಳು.
ಇನ್ನು ಮುನ್ನುಡಿಯಲ್ಲಿ ಹೇಳಿರುವಂತೆ ಕಾದಂಬರಿಯುದ್ದಕ್ಕೂ ವರ್ತಮಾನದ ವಾಸ್ತವ, ಚಾರಿತ್ರಿಕ ದಾಖಲೆಗಳ ಆಧಾರಪೂರಕ ಛಾಯಾಚಿತ್ರಗಳು, ಸಂಖ್ಯಾಸೂತ್ರಗಳು ಒಗಟುಗಳು, ನಿರ್ವಿವಾದಿತ ಆಕರ ಗ್ರಂಥಗಳ ಪ್ರಸ್ತಾವ ಎಲ್ಲವೂ ಮಿಳಿತವಾಗಿ ಕಥಾನಕ ಸಾಗುತ್ತದೆ. ಸೇಟಲೈಟ್ ಚಾನೆಲ್, ಸೆಲ್ ಫೊನೆ. ಈ-ಮೇಲ್, ನೆಟ್ ಚಾಟ್ ಗಳ ಈ ಯುಗದಲ್ಲಿ ಕಾದಂಬರಿಯ ನಾಯಕಿಯೂ ಅಂಥದ್ದೇ ಹೈ -ಟೆಕ್ ಸಂಪರ್ಕ ತಂತ್ರಗಳನ್ನು ಬಳಸಿ, ಚೂಟಿಯಾಗಿ ವಿದೇಶದಲ್ಲಿ ವಿಹರಿಸುತ್ತಾ ಸಂಶೋಧನೆಯನ್ನು ಮಾಡುತ್ತ ಭೂತ,ಭವಿಷ್ಯಗಳನ್ನು ಬೆಸೆಯುವ ನಾಯಕಿಯಾಗಿ ಪೂಜಾ ಎಲ್ಲರ ಮನಸೆಳೆಯುವುದಂತೂ ದಿಟ.
ಕಥೆಯ ಅಂತ್ಯ ಓದುಗರು ಊಹಿಸುವುದೇ ಒಂದು ಆದರೆ ಅಲ್ಲಿ ನಡೆಯುವುದೇ ಮತ್ತೊಂದು ಆ ಸ್ವಾರಸ್ಯವೇನು ಎಂಬುದನ್ನು ಓದುಗರು ಓದಿಯೇ ಅನುಭವಿಸಬೇಕು. ಇದನ್ನು ಓದಿದ ನಂತರ ಪ್ರತಿಯೊಬ್ಬರಿಗೂ ಸೋಮನಾಥಪುರವನ್ನು ಒಮ್ಮೆಯಾದರೂ ನೋಡಬೇಕಂಬ ಆಸೆ ಹುಟ್ಟದಿರದು ಎಂಬುದು ನನ್ನ ಭಾವ.
No comments:
Post a Comment