Saturday, 31 December 2016

ಹೇ ಹುಡುಗ

ನನ್ನ ಕಣ್ಣಿಲ್ಲ ಕಮಲದಂತೆ 
ನಾ ನಗುವುದಿಲ್ಲ ನೈದಿಲೆಯಂತೆ 
ನನ್ನ ಮುಖ ಅರಳದು ತಾವರೆಯಂತೆ 
ಆದರೂ ಮಿತಿಯಿರದೆ ಹರಿಯುವುದು 
ನನ್ನ ಪ್ರೀತಿ ಸಾಗರದ ಅಲೆಯಂತೆ 
ಇದನರಿತು ನೀ ಬಂದು ಬೆರೆತರೆ ನನ್ನಲಿ 
ಇರದು ಯಾವದೇ ಚಿಂತೆ ನನ್ನಂತರಂಗದಲಿ 

Thursday, 22 December 2016

ತೋಚಿದ್ದು ಗೀಚಿದ್ದು

ಪ್ರತಿಯೊಂದೂ ಕವಿತೆಗೂ ಸ್ಫೂರ್ತಿ ಭಾವನೆ 
ಆ ಭಾವಕ್ಕೆ  ದೊರೆತರೆ ಸುಂದರ ಕಲ್ಪನೆ 
ಮೂಡುವ ಕವನಗಳಿಗೆ ಎಂದಿಗೂ ಬಾರದು ಕೊನೆ 

ಜೀವನವೊಂದು ಪುಸ್ತಕದಂತೆ 
ಕೆಲವು ಅಧ್ಯಾಯ ದುಃಖದಿಂದಿದ್ದರೆ 
ಕೆಲವು ಅಧ್ಯಾಯ ಸಂತಸದಿಂದಿರುತ್ತವೆ 
ಸುಮಾರು ಉತ್ತೇಜಕವಾಗಿರುತ್ತವೆ 
ಆದರೆ ನೀನು ಪುಟಗಳನ್ನೇ ತಿರುವದಿದ್ದರೆ 
ನಿನಗೆಂದು ತಿಳಿಯದು ಮುಂದೇನಿದೆಯೆಂದು 
ದುಃಖದಿಂದ ಕುಗ್ಗದೆ ಖುಷಿಯಿಂದ ಹಿಗ್ಗದೇ 
ಪ್ರತೀ ಪುಟವೂ ನಿನ್ನದೇ ಎಂದು ನಡೆಸು ಜೀವನ 
ಆಗ ನಿನ್ನ ಹುಟ್ಟಾಗುವುದು ಪಾವನ 

Wednesday, 21 December 2016

#ಕಿರು_ಲೇಖನ_ಪ್ರಯತ್ನ

(ಓದಿ ಸಲಹೆಗಳಿದ್ದರೆ ಖಂಡಿತ ಹೇಳಿ)

ಬದುಕೊಂದು ಸಾಗರವಾದರೆ ಅದರಾಚೆ ಕಾಣುವ ದಡವ ಮುಟ್ಟಬೇಕೆಂದು ಆಸೆಪಡುವ ಆಶಾವಾದಿಗಳೆ ನಾವು. ಈ ಓಟದಲ್ಲಿ ಪಡೆಯುವುದು ಏನಿಲ್ಲ, ಕಳೆದುಕೊಳ್ಳುವುದು ಏನಿಲ್ಲ. ಹಾಗಂತ ಓಟವನ್ನು ನಿಲ್ಲಿಸುವಂತೆಯೂ ಇಲ್ಲ. ಆದರೆ ದಡ ಸಮೀಪಿಸುತ್ತಿದ್ದಂತೆ ಉಳಿಯುವುದು ನೆನಪುಗಳು ಮಾತ್ರ ಅದರಲ್ಲಿ ಮನಸಿಗೆ ಹಿತ ನೀಡುವ ಸುಂದರ ಅಲೆಗಳು ಕೆಲವಾದರೆ, ಮುಳ್ಳುಗಳಂತೆ ಚುಚ್ಚಿ ಚುಚ್ಚಿ ಕೊಲ್ಲುವ ಭುಗಿಲೆದ್ದ ಸುನಾಮಿಗಳು ಹಲವು.

ಜೀವನವನ್ನು ಸಮುದ್ರಕ್ಕೆ ಹೋಲಿಸಲು ಕಾರಣ ಸಮುದ್ರ ನೋಡಲು ಎಷ್ಟು ಶಾಂತವೋ ಒಮ್ಮಿಂದೊಮ್ಮೆಲೆ ರುದ್ರತಾಂಡವನಂತೆ ನರ್ತಿಸುತ್ತದೆ, ಹಾಗೆ ಜೀವನವು ಕೂಡ ಒಮ್ಮೆ ಸುಂದರ ಶಾಂತವೆನಿಸಿದರೂ ಅನಿರೀಕ್ಷಿತ ತಿರುವುಗಳು ಬಂದು ಅಲ್ಲೋಲಕಲ್ಲೋಲ ಮಾಡಿಬಿಡುತ್ತವೆ. ಸಮುದ್ರದಿಂದ ನಾವು ಕಲಿಯುವ ಪಾಠವೆಂದರೆ ಯಾವುದು ಇಲ್ಲಿ ಶಾಶ್ವತವಲ್ಲ ಅಲೆಗಳಂತೆ ಸುಖ ದುಃಖಗಳು ಬಂದು ಹೋಗಿ ಬಂದು ಹೋಗಿ ಮಾಡುತ್ತಲೇ ಇರುತ್ತವೆ, ಆದರೆ ನಮ್ಮ ಮನಸ್ಸನ್ನು ಮಾತ್ರ ಸಂತೋಷದಿಂದ ಹಿಗ್ಗಲೂ ಬಿಡದೇ ದುಃಖದಿಂದ ಕುಗ್ಗಲೂ ಬಿಡದೇ ದಡದಲ್ಲಿರುವ ಮರಳಿನಂತೆ ಸ್ಥಿರವಾಗಿಟ್ಟುಕೊಂಡರೆ ಜೀವನದಲ್ಲಿ ಎಂತಹ ಸಂದರ್ಭವನ್ನಾದರೂ ಅನಾಯಾಸವಾಗಿ ಎದುರಿಸಿ ದಡವನ್ನು ಸೇರಬಹುದು.

#ಪುಸ್ತಕಗಳ_ಬಗ್ಗೆ_ನನ್ನ_ಕಿರುಮಾತು

ನನ್ನ ಪ್ರಕಾರ ಗ್ರಂಥಾಲಯ ಎಂದರೆ ಮನಸಿಗೆ ಇರುವ ಆಸ್ಪತ್ರೆಯಂತೆ ಎನಿಸುತ್ತದೆ. ಜ್ಞಾನ, ಮನರಂಜನೆ, ನೊಂದ ಮನಸಿಗೆ ಸಿಗುವ ಸಾಂತ್ವನ, ಕುಳಿತಲ್ಲೇ ಜಗವ ಸುತ್ತುವ ವಾಹನ, ವಿಜ್ಞಾನ, ಮನೋ ವಿಜ್ಞಾನ, ಇತಿಹಾಸ, ಪುರಾಣ, ತಾಂತ್ರಿಕ, ವೈಜ್ಞಾನಿಕ ಇನ್ನು ನೂರಾರು ಸಾವಿರಾರು ವಸ್ತುಗಳ ಅಂಶಗಳ ಆಗರ ಈ ಗ್ರಂಥಾಲಯವೆಂಬ ಸಾಗರ.

ನಮ್ಮ ಮನೆಯ ಸುತ್ತ ಮುತ್ತ ಹೂ ಹಣ್ಣುಗಳ ಗಿಡಗಳನ್ನು ಬೆಳೆಸಿದರೆ ಹೇಗೆ ಪರಿಸರ ಸುಂದರವಾಗಿ ಕಾಣುವುದೋ ಹಾಗೆ ನಮ್ಮ ಮನೆಯ ತುಂಬಾ ಪುಸ್ತಕಗಳನ್ನು ತುಂಬಿದರೆ ನಮಗೆಂದೂ ಒಂಟಿತನದ ರೋಗ ಕಾಡುವುದಿಲ್ಲ ಎನ್ನುವುದು ನನ್ನ ಭಾವನೆ. ಎಲ್ಲರೂ ಪುಸ್ತಕವನ್ನು ಪ್ರೀತಿಸುವುದಿಲ್ಲ ಹಾಗೆ ಪ್ರೀತಿಸುವುವರೆಂದ ಓದುವುದನ್ನು ಬಿಡುವುದಿಲ್ಲ.

ಜೀವನದಲ್ಲಿ ನಮಗೆ ಎಲ್ಲವೂ ಎಲ್ಲರೂ ಇದ್ದರೂ ಬಹಳಷ್ಟು ಜನ ಪ್ರೀತಿ, ಕಾಳಜಿ, ಬಾಂಧವ್ಯ ಇತ್ಯಾದಿಗಳ ಕೊರತೆಯಿಂದ ಬಳಲುತ್ತಲೇ ಇರುತ್ತಾರೆ. ಹೀಗೆ ಬಳಲುವ ಜನ ಅವರಿಗೆ ಇಷ್ಟವಾದ ಹವ್ಯಾಸಗಳಲ್ಲಿ ತೊಡಗಿರುತ್ತಾರೆ ಉದಾಹರಣೆಗೆ ಓದುವುದು, ಬರೆಯುವುದು, ಕಸೂತಿ, ಚಿತ್ರಕಲೆ ಇತ್ಯಾದಿ. ಹೀಗೆ ಓದುಗರ ಬಗ್ಗೆ ಹೇಳಬೇಕೆಂದು ನನಗೆ ಅನಿಸಿದ್ದು ಬರೆಯುತ್ತಿರುವೆ ಪುಸ್ತಕಗಳಲ್ಲಿ ಪ್ರೀತಿ,ಪ್ರೇಮ, ಸ್ನೇಹ, ದ್ವೇಷ, ಜ್ಞಾನ ಎಲ್ಲವೂ ತುಂಬಿರುವುದರಿಂದ ಕೆಲವೊಂದು ಪಾತ್ರಗಳು ಮನಸಿಗೆ ತಾಗಿ ನೊಂದಿರುವವರಿಗೆ ಸಾಂತ್ವನವನ್ನು, ಭರವಸೆ ಕಳೆದುಕೊಂಡವರಿಗೆ ಸಾಧನೆ ಮಾಡುವ ಹುಮ್ಮಸ್ಸನ್ನು ನೀಡಿ ಹೊಸದನ್ನು ಕಲಿಯಲು, ಬೇರೆಯವರಿಗೆ ಕಲಿಸಲು ಪ್ರೇರೇಪಿಸುತ್ತವೆ.

ಹಾಗಾಗಿ ಎಲ್ಲ ಮನಸ್ಥಿತಿಯ ಜನರು ಅವರವರ ಇಚ್ಛೆಯ ಅನುಸಾರ ಪುಸ್ತಕಗಳನ್ನು ಆಯ್ದುಕೊಂಡರೆ ಮನರಂಜನೆಯ ಜೊತೆ ಮನಸ್ಥಿತಿಯು ಸುಧಾರಿಸಿ ಜ್ಞಾನವೂ ಹೆಚ್ಚಾಗುವುದು, ನನಗಾರೂ ಇಲ್ಲ ಎನ್ನುವ ಕೊರಗನ್ನು ನಿವಾರಿಸಿ ಉತ್ತಮ ಸ್ನೇಹಿತನಂತೆ ಸದಾ ನಮ್ಮ ಜೊತೆಯಲ್ಲೇ ಇರುವುದು.

Tuesday, 20 December 2016

ಮೌನಗೀತೆ

ಪ್ರೀತಿಗೆ ಬೇಕಿಲ್ಲ ಮಾತಿನ ಮಾಯೆ 
ಅದಕೆ ಬೇಕಿರುವುದೆಲ್ಲ ಮೌನದ ಛಾಯೆ 

ಭಾವನೆಗಳ ಆಲಾಪನೆ ಮಾತಾದರೆ 
ಪ್ರೇಮದ ಆರಾಧನೆಯೇ ಮೌನ 

ಹಾಗಾಗಿ ನನ್ನ ಮೌನ ಮಾತಾದ ಕ್ಷಣ 
ಸಿಗುವುದೇನೋ ನಿನಗೆ ಒಲವಿನ ಆಲಿಂಗನ

ನನ್ನ ಮೌನ ಮಾತಾಗದಿದ್ದರೂ 
ಭಾವಗಳ ಆಲಾಪನೆ ನಿನಗೆ ಕೇಳದಿದ್ದರೂ 

ಸದಾ ಉಲಿಯುತಿಹುದು ನನ್ನಲಿ ಮೌನ ರಾಗ 
ಅದೇ ನಿನಗಾಗಿ ಮಿಡಿಯುತಿರುವ ಪ್ರೇಮ ರಾಗ 

Sunday, 18 December 2016

ಹುಡುಕಾಟ

ಪ್ರಯೋಗಿಸಿದ ಪದಗಳೆಲ್ಲವೂ ಬೇಸತ್ತು 
ಮಾಡುತಿವೆ ಮುಷ್ಕರ 
ಇನ್ನು ಕವಿತೆ ಬರೆಯಲು ನಾ ಮಾಡಬೇಕಿದೆ 
ಹೊಸಪದಗಳ ಆವಿಷ್ಕಾರ 

Saturday, 17 December 2016

ಅಂದದ ಪ್ರೇಮ

ನಿನ್ನ ಕಲ್ಪನೆಯಷ್ಟು ಅಂದವಿಲ್ಲವೋ ಹುಡುಗ ನಾನು
ನನ್ನ ಭಾವ ತುಂಬಿದ ಕವನದಷ್ಟು ಚಂದವಿಲ್ಲವೋ ನೀನು 
ಆದರೂ ಮಿತಿಯಿಲ್ಲದೇ ಸುರಿಯುತಿದೆ ನಿನ್ನ ಒಲವಿನ ಮಳೆ 
ಅದೇ ಅಲ್ಲವೇ ಎಡೆಬಿಡದೇ ಗೀಚುವ ನನ್ನ ಕವಿತೆಗಳಿಗೆ ಕಳೆ

Wednesday, 14 December 2016

ಪ್ರೀತಿ ಮಳೆ

ನನ್ನಂತರಂಗದಲ್ಲಿ ಬಿಡದೇ ಸುರಿಯುತಿದೆ ಪ್ರೀತಿ ಮಳೆ 
ಅದು ಬಯಸುತಿದೆ ಅಪ್ಪಲು ನಿನ್ನ ಹೃದಯವೆಂಬ ಇಳೆ 
ನಿನ್ನ ಇಳೆಗೆ ನನ್ನ ಮಳೆ ಮುತ್ತಿಟ್ಟ ಕ್ಷಣ 
ಕಾರಂಜಿಯಂತೆ ಕಂಗೊಳಿಸುವುದು ನನ್ನ ಮನ

Monday, 12 December 2016

ಒಂಟಿಯಲ್ಲ ನೀನು

ನೀನೆಂದು ಒಂಟಿಯಲ್ಲ ಮನವೇ 
ನಿನಗಿಂತ ಬೇಕೇ ಬೇರೆ ಸಂಗಾತಿ ನಿನಗೆ      

ಯಾರಿಗೂ ಯಾರಿಲ್ಲ ಈ ಜಗದಲ್ಲಿ 
ಹುಡುಕಬೇಡ ಯಾರನ್ನೂ ನಿನಗಾಗಿ ಇಲ್ಲಿ 

ವ್ಯಯಿಸದಿರು ವೇಳೆಯನ್ನು ಹುಡುಕಾಟಕ್ಕಾಗಿ   
ಮೀಸಲಿಡು ಕೆಲಕ್ಷಣಗಳನ್ನು ನಿನ್ನ ಮನಸಿಗಾಗಿ 

ಅನುಭವಿಸಲು ಅಲ್ಲ ಒಂಟಿತನವನ್ನು 
ಬದಲಾಗಿ ಅರಿತುಕೊಳ್ಳಲು ನಿನ್ನತನವನ್ನು 

ಅರಿತರೆ ನಿನ್ನ ನೀನು ಸರಿಯಾಗಿ ಇಂದು 
ಕಾಡದು ಒಂಟಿತನದ ಚಿಂತೆ ಎಂದೆಂದೂ 

Saturday, 10 December 2016

ಪೆರಿನಿ ತಾಂಡವ


ಕೆ ಎನ್ ಗಣೇಶಯ್ಯನವರ "ಪೆರಿನಿ ತಾಂಡವ" ೩ ನೀಳ್ಗತೆಗಳ ಕಥಾಸಂಕಲನ. ವಿಜ್ಞಾನ, ಮನೋ ವಿಜ್ಞಾನ, ಇತಿಹಾಸ, ಸಾಮಾಜಿಕ ಪಿಡುಗುಗಳು, ವಿಕಾಸವಾದದ ಚರ್ಚೆ ಇನ್ನು ಹತ್ತಾರು ವಿಷಯಗಳ ಸಂಗಮವೆಂದು ಹೇಳಬಹುದು

ಪೆರಿನಿ ಎನ್ನುವುದು ಕ್ರಿ.ಶ ೧೨ನೇ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ರೂಢಿಯಲ್ಲಿದ್ದ ಒಂದು ಶಾಸ್ತ್ರೀಯ ನೃತ್ಯರೂಪ. ಈ ನೃತ್ಯರೂಪವೇ ಇಲ್ಲಿನ ಒಂದು ಕಥೆಯಲ್ಲಿ ಮುಖ್ಯ ಅಂಶ. ಈ ನೃತ್ಯ ಹೇಗೆ ಹುಟ್ಟಿತು ಎಲ್ಲಿ ಹುಟ್ಟಿತು ಎಂಬ ಪ್ರಶ್ನೆಗಳಿಗೆ ಲೇಖಕರು ನಮ್ಮನ್ನು ಇತಿಹಾಸಕ್ಕೆ ಕರೆದುಕೊಂಡು ಹೋಗಿ ಕಾಕತೀಯರ ವಂಶದವರ ಬಗ್ಗೆ ತಿಳಿಯುವಂತೆ ಮಾಡುತ್ತಾರೆ.  ಇಲ್ಲಿ ನಮಗೆ  ಕಾಕತೀಯರ ವಾರಂಗಲ್ಲಿನಲ್ಲಿರುವ "ರಾಮಪ್ಪ ದೇವಸ್ಥಾನ" ದ ಓದುವಾಗ ಮತ್ತು ಚಿತ್ರಗಳನ್ನು ನೋಡುವಾಗ ರಾಮಪ್ಪ ದೇವಾಲಯದ ರಚನೆ ಹೊಯ್ಸಳರ ದೇಗುಲಗಳನ್ನೇ ಹೋಲುತ್ತದೆ ಎಂದು ತಿಳಿಯುತ್ತದೆ. ಹಾಗಿದ್ದರೆ ಈ ರಾಮಪ್ಪ ಯಾರು ? ಎಲ್ಲಿಯವನು ? ಹೊಯ್ಸಳರ ದೇವಾಲಯಗಳಲ್ಲಿ ವಿಷ್ಣುವನ್ನು ಕೇಂದ್ರೀಕರಿಸಿದ್ದರೆ, ಕಾಕತೀಯರಲ್ಲಿ ಶಿವ. ತಮ್ಮ ಪ್ರತಿಸ್ಪರ್ಧಿಗಳಾದ ಹೊಯ್ಸಳರ ಶೈಲಿಯಲ್ಲಿ ಈ ದೇಗುಲವನ್ನೂ ಕಾಕತೀಯರು ನಿರ್ಮಿಸಿದ್ದಾದರೂ ಏಕೆ? ಸಹಜವಾಗಿ ನೋಡುವುದಾದರೇ ಎಲ್ಲ ಕಡೆಯೂ ದೇವಾಲಯ ಕಟ್ಟಿಸಿದ ರಾಜರ ಹೆಸರೋ ಅಥವಾ ಅವರ ಮನೆತನದ ಹೆಸರನ್ನೋ ಇಟ್ಟಿರುತ್ತಾರೆ ಆದರೆ ಇಲ್ಲಿ ರಾಮಪ್ಪನ ದೇವಾಲಯವೆಂದು ಹೆಸರಿಟ್ಟಿದ್ದೇಕೆ, ಕೆರೆಗೂ ಸಹ ರಾಮಪ್ಪ ಕೆರೆ ಎನ್ನಲು ಕಾರಣ? ಇತ್ಯಾದಿ ಕುತೂಹಲ ಹುಟ್ಟಿಸುವ ಮತ್ತು ಇತಿಹಾಸದ ರೋಚಕತೆಯನ್ನು ಓದಬಯಸುವ ಅಂದರೆ ಇತಿಹಾಸ ಪ್ರಿಯರಿಗೆ ಹೆಚ್ಚು ಖುಷಿ ಕೊಡುವ ಅಂಶ ಇಲ್ಲಿದೆ. 

ಇನ್ನುಳಿದ ಕಥೆಗಳಲ್ಲಿ ಬದುಕಿನ ಸುಂದರ ಸಂಬಂಧಗಳು ಮತ್ತು ನಡೆಗಳು, ಸಮಾಜದಲ್ಲಿ ನಮ್ಮ ಸುತ್ತಮುತ್ತ ನಡೆಯುವ ಅನೇಕ ಘಟನೆಗಳಿಂದ   ಮಾನಸಿಕ ಖೇದ ಉಂಟಾಗಿ ಹೇಗೆ ನಮ್ಮ ಜೀವನದಲ್ಲಿ ತಾಂಡವ ರೂಪ ತಳೆಯುತ್ತವೆ ಎನ್ನುವುದನ್ನು ತೋರಿಸಿದ್ದಾರೆ. ಇಲ್ಲಿ ನಾವು ಪ್ರೀತಿ, ಸ್ನೇಹ, ವ್ಯಾಮೋಹ , ಆಕರ್ಷಣೆ ಇವುಗಳಲ್ಲದೆ ವೈಜ್ಞಾನಿಕ ಚರ್ಚೆಗಳು ಮತ್ತು ಅವುಗಳಿಂದಾಗುವ ಅನುಕೂಲ ಅನಾನುಕೂಲ ಎಲ್ಲವನ್ನು ಅರ್ಥ ಮಾಡಿಕೊಳ್ಳಬೇಕು. ಒಟ್ಟಿನಲ್ಲಿ ಹೇಳುವುದಾದರೆ "ಪೆರಿನಿ ತಾಂಡವ" ಇತಿಹಾಸ ಜ್ಞಾನ ಹೆಚ್ಚಿಸುವುದಲ್ಲದೆ ವಾಸ್ತವ ಬದುಕಿನಲ್ಲಿ ಜನರು ಅನುಭವಿಸುವ ಮಾನಸಿಕ ಹಿಂಸೆ, ಗೊಂದಲ, ಆತಂಕ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರವನ್ನು ಕೊಡಬಹುದು ಎಂಬುದು ನನ್ನ ಅನಿಸಿಕೆ. 

Friday, 9 December 2016

ಗಾಂಧಿ ಹತ್ಯೆ ಮತ್ತು ಗೋಡ್ಸೆ


ರವಿ ಬೆಳಗೆರೆ ಅವರ "ಗಾಂಧಿ ಹತ್ಯೆ ಮತ್ತು ಗೋಡ್ಸೆ" ಪುಸ್ತಕದ ಬಗ್ಗೆ ಏನೇ ಬರೆಯಲು ಮನಸು ಹಿಂಜರಿಯುತ್ತದೆ ಕಾರಣ ನಾವು ಗಾಂಧಿ ಮತ್ತು ಗೋಡ್ಸೆ ಅವರ ಬಗ್ಗೆ ಇರುವ ಎಷ್ಟೋ ಭಾವನೆಗಳ ಮೇಲೆ ಇದು ಸಂಚಲನ ಮೂಡಿಸುತ್ತದೆ.

ನಾವು ಗಾಂಧೀಜಿ ಅವರ ಬಗ್ಗೆ ನಂಬಿಕೊಂಡಿರುವ ಎಷ್ಟೋ ವಿಚಾರಗಳು ಒಂದೊಂದು ಕಡೆ ಸುಳ್ಳು ಎಣಿಸುವುದು ಎಷ್ಟು ನಿಜವೋ ಖಳನಾಯಕನೆಂದೇ ಭಾವಿಸುವ ಗೋಡ್ಸೆ ಬಗ್ಗೆ ಕೆಲವೊಂದು ಕಡೆ ಗೌರವ ಮೂಡಿಸುವುದು ಸತ್ಯ. ಹಾಗಾಗಿ ಈ ಪುಸ್ತಕದ ಬಗ್ಗೆ ಹೆಚ್ಚು ಬರೆಯದೆ ಎಲ್ಲರೂ ಇದನ್ನು ಓದಿನೆ ತಿಳಿಯಲಿ ಎನ್ನುವುದು ನನ್ನ ಅಭಿಪ್ರಾಯ.

ಜೊತೆಗೆ ರಾಜೀವ್ ಗಾಂಧಿ ಮತ್ತು ಇಂದಿರಾ ಗಾಂಧಿ ಹತ್ಯೆಯ ಕುರಿತಾದ ರೋಚಕ ಕಥೆಯನ್ನು (ನೈಜತೆ) ರವಿ ಬೆಳಗೆರೆಯವರು "ರಾಜ ಬೇಟೆ" ಮತ್ತು "ಇಂದಿರಾ ವಧೆ" ಎಂಬ ಎರಡು ಅಧ್ಯಾಯಗಳಲ್ಲಿ ತುಂಬಾ ಚೆನ್ನಾಗಿ ಚಿತ್ರಿಸಿದ್ದಾರೆ. ಒಟ್ಟಾಗಿ ಹೇಳುವುದಾದರೆ ಇದೊಂದು ತನಿಖೆ ಆಧಾರಿತ ಪ್ರತೀ ಪುಟವೂ ಕುತೂಹಲಕಾರಿ ಅಂಶಗಳನ್ನು ಒಳಗೊಂಡ ಪುಸ್ತಕ. ಪ್ರತಿಯೊಬ್ಬರೂ ಓದಲೇ ಬೇಕಾದ ಪುಸ್ತಕವಿದು.

ಕನ್ನಡ ಕಾದಂಬರಿ ಕೂಟಕ್ಕೆ ಮತ್ತೊಮ್ಮೆ ಧನ್ಯವಾದಗಳು.

Wednesday, 7 December 2016

ಷಾಕ್ಮೋರಾ




ಯಂಡಮೂರಿ ವೀರೇಂದ್ರನಾಥರ "ಷಾಕ್ಮೋರಾ" ಓದುವಾಗ ಆರಂಭದಲ್ಲಿ ಮಾಟ ಮಂತ್ರದ ಕಥೆಯೇ ಮುಖ್ಯವಾಗಿದೆ ಎಂದು ಭಾಸವಾದರೂ ಇದೊಂದು ವಿಜ್ಞಾನ ಮತ್ತು ಮಾನವಾತೀತ ಶಕ್ತಿಗಳ ನಡುವೆ ನಡೆಯುವ ಘರ್ಷಣೆ...  ಆರಂಭದಲ್ಲಿ "ತುಳಸೀ ದಳ" ನೆನಪಾದರೂ ಮುಂದೆ ಹೋದಂತೆ ಕುತೂಹಲವನ್ನು ಹುಟ್ಟಿಸಿ ಓದುಗರಿಗೆ ವಿಶಿಷ್ಟ ಅನುಭವವನ್ನು ಕೊಡುತ್ತದೆ. 

ಇಲ್ಲಿ ನನಗಿಷ್ಟವಾದ ಮತ್ತೊಂದು ಅಂಶವೆಂದರೆ ೨೪ ನೇ ಪುಟದಲ್ಲಿ ಬರುವ ೪ ಬಗೆಯ ವಿಮರ್ಶಕರ ಬಗ್ಗೆ ಇರುವ ಟಿಪ್ಪಣಿಗಳು. ಪುಸ್ತಕ ಬರೆಯುವವರಿಗೂ, ಓದುವವರಿಗೂ ಮತ್ತು ಪುಸ್ತಕಗಳ ಬಗ್ಗೆ ತಮ್ಮ ಅಭಿಪ್ರಾಯ ಮತ್ತು ವಿಮರ್ಶೆಗಳನ್ನು ಬರೆಯುವವರಿಗೆ ಈ ಅಂಶವು ತುಂಬಾ ಸಹಾಯ ಮಾಡುತ್ತದೆ. 

ಈ ಕಥೆಯಲ್ಲಿ  ಬರುವ ಪುಟ್ಟ ಮಗು ಆರತಿಯ ಮೇಲೆ ನಡೆಯುವ ಹಲ್ಲೆ, ಆರೋಗ್ಯದ ಏರುಪೇರು, ಅದರಿಂದ ಮನೆಯವರಿಗೆ ಆದ ನೋವು ಹಿಂಸೆ, ಇತ್ಯಾದಿಗಳ ಸುತ್ತಾ ತುಂಬಾ ವಿಭಿನ್ನವಾಗಿ ಅನ್ನುವುದಕ್ಕಿಂತ ಓದುಗರೇ ಗೊಂದಲಗೊಂಡು ಇದೇನು ನಾವಂದುಕೊಂಡದ್ದೇ ಒಂದು ಆದರೆ ಕಥೆಯಲ್ಲಿ ಮುಂದೆ ನಡೆಯುತ್ತಿರುವುದೇ ಮತ್ತೊಂದು ಎಂದು ಒದ್ದಾಡುವಂತೆ ಮಾಡುತ್ತದೆ. ಆದರೆ ಈ ಪುಸ್ತಕದ ಹೆಸರು ಮತ್ತು ಆರಂಭದ ಕಥೆ ಕೇವಲ ಕ್ಷುದ್ರವಿದ್ಯೆಯನ್ನು ಮುಖ್ಯ ಅಂಶವಾಗಿದೆಯೆಂದು ಎನಿಸಿದರೂ ಕಥೆಯ ಆಳದಲ್ಲಿ ಬೇರೆಯೇ ಅಂಶವಿದೆಯೆಂದು ಓದುಗರಿಗೆ  ಮುಂದೆ ಮುಂದೆ ತಿಳಿಯುತ್ತದೆ!!! ಅದೇನೆಂದು ಓದುಗರು ಓದಿಯೇ ತಿಳಿಯಬೇಕು... 

ಒಟ್ಟಿನಲ್ಲಿ ಇಲ್ಲಿ ಮೂಢನಂಬಿಕೆ, ಮಾಟ ಮಂತ್ರಗಳಿಗಿಂತ ಮನುಷ್ಯನ ಮುಠಾಳತನ ಮತ್ತು ವಿಜ್ಞಾನಗಳ ನಡುವಿನ ಒಂದು ವಾಗ್ವಾದವೆಂದು ನನಗನಿಸಿತು. ಕಡಿಮೆ ಪುಟಗಳ ಕೃತಿಯಾದರೂ ಅಷ್ಟೇ ವಿಭಿನ್ನ ಅನುಭವ ನೀಡಿದ್ದು ಸತ್ಯ ಹಾಗಾಗಿ ಇಂದು ಸಂಜೆ ಓದಲು ಆರಂಭಿಸಿದ ನಾನು ಈಗಾಗಲೇ ಮುಗಿಸಿದ್ದೇನೆ. ಮತ್ತೊಮ್ಮೆ ಈ ಕನ್ನಡ ಕಾದಂಬರಿ ಕೂಟಕ್ಕೆ ಧನ್ಯವಾದಗಳು. 

ವಾಸ್ತವ

ಬಯಸದ ಬಾಳಲ್ಲಿ ಆಗಿದೆ ಮನವು ಬಂಧನ 
ಬಾರದ ಬಾಳನು ಬಾಳಲು ಕಾಯುತಿದೆ ಆ ಮನ 
ಕಲ್ಪನೆಯಷ್ಟು ಸುಂದರವಲ್ಲ  ಈ ವಾಸ್ತವ 
ಆದರೂ ಬಿಡುವುದಿಲ್ಲ ಬದುಕುವ ಆ ಛಲವ 
ಹೇಗಿದ್ದರೂ ಎಲ್ಲಿದ್ದರೂ ಸಾಗಲೇಬೇಕು ಬಾಳಿನ ಬಂಡಿ 
ಹಿಡಿಯುಲೇಬೇಕು ಸದಾ ನ್ಯಾಯದ ಕನ್ನಡಿ 

Monday, 5 December 2016

ಚಿಗುರಿದ ಕನಸು



ಕಾರಂತರ "ಚಿಗುರಿದ ಕನಸು" ಓದಿ ಮುಗಿಸಿದೆ... ಈಗಾಗಲೇ ಇದು ಶಿವರಾಜ್ ಕುಮಾರ ಅಭಿನಯದ ಚಲನಚಿತ್ರವಾಗಿ ಮೂಡಿ ಬಂದಿರುವುದರಿಂದಬಹಳಷ್ಟು ಜನರಿಗೆ ಇದು ತಿಳಿದೇ ಇರತ್ತದೆ ... ಆದರೂ ಸಿನಿಮಾ ಎಷ್ಟೇ ಚೆನ್ನಾಗಿದ್ದರೂ ಮೂಲ ಪುಸ್ತಕದ ಸೌಂದರ್ಯಕ್ಕೆ ಸಾಟಿ ಆಗುವುದಿಲ್ಲ. 

ಇಲ್ಲಿಯ ನಾಯಕ ಶಂಕರ ತನ್ನ ಊರು ಅಸ್ತಿತ್ವವನ್ನು ಹುಡುಕಲು ಹೋಗುತ್ತಾನೆ. ಹಾಗೇ ಹೋದವನು ಊರಲ್ಲೇ ಉಳಿದು ಹಳ್ಳಿ ಜೀವನಕ್ಕೆ ಹೊಂದಿಕೊಂಡು ಅಲ್ಲಿಯ ಜನಕ್ಕೆ ಸಹಾಯ ಮಾಡುತ್ತಾ ಹಾಗು ಕೃಷಿಯಲ್ಲಿ ಕರಗತನಾಗುತ್ತಾ ಬದುಕುತ್ತಾನೆ... !!!!!

ನಾನು ಈಗಾಗಲೇ ಸಿನಿಮಾ ನೋಡಿದ್ದರಿಂದ ಹೆಚ್ಚು ಕುತೂಹಲ ಆಗಲಿಲ್ಲ ಆದರೂ ಪುಸ್ತಕವನ್ನು ಓದಿ ಅದಕ್ಕೂ ಸಿನಿಮಾಗೂ ಇರುವ ವ್ಯತ್ಯಾಸವನ್ನು ತಿಳಿಯುವ ಆಸೆಯಿಂದ ಓದಿದೆ... ನಿಜಕ್ಕೂ ಸಿನೆಮಾಗಿಂತ ಕಾದಂಬರಿಯೇ ಹೆಚ್ಚು ಇಷ್ಟವಾಯ್ತು.!!!!

"ಇನ್ನೊಂದು ವಿಶೇಷವೆಂದರೆ ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ದೊರಕಿದ್ದು ನಿಜಕ್ಕೂ ಇದು ಹೆಮ್ಮೆಯ ವಿಚಾರ"
ನೀವೆಲ್ಲರೂ ಈ ಪುಸ್ತಕವನ್ನು ಪ್ರೀತಿಯಿಂದ ಓದಿದರೆ ಸಿನೆಮಾಗಿಂತ ಕಾದಂಬರಿಯೇ ಹೆಚ್ಚು ಹಿತವೆನಿಸುತ್ತದೆ

ಚೋಮನ ದುಡಿ




ಶಿವರಾಮ ಕಾರಂತರ "ಚೋಮನ ದುಡಿ" ಓದಿ ಮುಗಿಸಿದೆ.. ಸಂತೋಷವಾಯ್ತು 
ಅಬ್ಬಾ ಎಷ್ಟು ಚಂದವಾಗಿ ಕಣ್ಣಿಗೆ ಕಟ್ಟುವಂತೆ "ಚೋಮ"ನ ಮನಸ್ಥಿತಿಯನ್ನು ಚಿತ್ರಿಸಿದ್ದಾರೆ. ಆ ಕಾಲದ ಜಾತಿ ಪದ್ಧತಿ ಸಂಪ್ರದಾಯಗಳು ಹೇಗಿದ್ದವು ಎನ್ನುವುದು ತುಂಬಾ ಚೆನ್ನಾಗಿ ವಿವರಿಸಿದ್ದಾರೆ. ಪ್ರತಿಯೊಂದು ಅಧ್ಯಾಯವೂ ಕೂಡ ಪ್ರತ್ಯೇಕ ಕಥೆಯಂತೆ ಭಾಸವಾದರೂ ಪ್ರತಿಯೊಂದರಲ್ಲೂ ಚೋಮ ಕಾಡುತ್ತಾನೆ... 
ನನಗೆ "ಬೆಳ್ಳಿ" ಪಾತ್ರ ತುಂಬಾ ಇಷ್ಟವಾಯ್ತು...

ಸಿoಗಾರೆವ್ವ ಮತ್ತು ಅರಮನೆ



"ಸಿoಗಾರೆವ್ವ ಮತ್ತು ಅರಮನೆ" ಒ0ದು ಅದ್ಭುತ ಕಾದ0ಬರಿ. ನಾನು ಮೂಲತಃ ಉತ್ತರ ಕರ್ಣಾಟಕದವಳಾದ್ದರಿ0ದ ಈ ಕಾದ0ಬರಿಯ ಕನ್ನಡ ಭಾಷೆ ಹೆಚ್ಚು ರ0ಜಿಸಿತು...

ಇಲ್ಲಿಯ ನಾಯಕಿ ಸಿ0ಗರೆವ್ವ ಹೆಸರಿಗೆ ತಕ್ಕ0ತೆ ಸು0ದರಿಯಾಗಿದ್ದರೂ ಅವಳ ಯಾತನೆ ಹುಟ್ಟಿನಿ0ದ ಸಾಯುವವರೆಗೂ ತಪ್ಪುವುದಿಲ್ಲ... 

ಹುಟ್ಟಿನಿ0ದ ಅವರ ಅಪ್ಪ, ನ0ತರ ಮದುವೆಯಾದ ಗ0ಡ, ಅವಳ ಜೀವನದಲ್ಲಿ ನಡು ನಡುವೆ ಬರುವ ವ್ಯಕ್ತಿಗಳು ಹೀಗೆ ಯಾರು ಅವಳನ್ನು ನೆಮ್ಮದಿಯಾಗಿ ಬಾಳಿಸುವುದಿಲ್ಲ.,. ಶೀನಿ0ಗಿ ಅವಳ ಜೀವ ಮತ್ತು ಜೀವನದ ಕಷ್ಟ ಸುಖಕ್ಕಾದ ಪ್ರಾಣ ಸ್ನೇಹಿತೆ... ಜೊತೆಗೆ ಈ ಕಥೆಯ ಜೀವಾಳ ಮತ್ತು ಎರಡನೆ ನಾಯಕಿಯೂ ಕೂಡ.. 
ಇದು ಸಿ0ಗಾರೆವ್ವನ ಕರುಣಾಜನಕ ಕಥೆಯಾದರೂ ಆಕೆ ಬ0ದ ಕಶ್ಟಗಳನ್ನು ಧೈರ್ಯದಿ0ದ ಎದಿರುಸುವ ಪರಿಯ ಮೆಚ್ಚಲೇಬೇಕು. ಈ ಕಥೆಯು ದುಖಾಃ0ತ್ಯ ಹೊ0ದಿದರೂ "ಸಿ0ಗಾರೆವ್ವ" ಮಾತ್ರ ಅಚ್ಚಳಿಯದೇ ನನ್ನ ಮನದಲ್ಲಿ ಉಳಿದಿದ್ದಾಳೆ..

ಈ ಕಥೆಯ ಜೀವ0ತ ನಾಯಕಿ ಶೀನಿ0ಗಿಯ ನಿರೂಪಣೆ ಇನ್ನಷ್ಟು ಇಷ್ಟವಾಗುತ್ತದೆ ..

ಇ0ತಹ ಅದ್ಭುತ ಕೃತಿ ರಚಿಸಿದ ರಾಷ್ಟ್ರಕವಿ ಶ್ರೀ ಚ0ದ್ರಶೇಖರ್ ಕ0ಬಾರರಿಗೆ ನನ್ನ ಹೃದಯಪೂರ್ವಕ ನಮನಗಳು ಹಾಗು ಇ0ತಹ ಅದ್ಭುತ ಪುಸ್ತಕಗಳ ಮಹತ್ವವನ್ನು ಹೆಚ್ಚಿಸಿ, ತಲುಪಿಸಿ ಮತ್ತು ಓದುವ ಹಸಿವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡಿದ ಎಲ್ಲರಿಗೂ ನನ್ನ ವ0ದನೆಗಳು...

ಡಾಲರ್ ಸೊಸೆ



ಬಹಳ ದಿನಗಳಿಂದ ಕಾಯುತ್ತಿದ್ದ "ಡಾಲರ್ ಸೊಸೆ" ನೆನ್ನೆ ನನ್ನ ಕೈ ಸೇರಿತು... ಅದನ್ನು ಓದಿ ಮುಗಿಸಿದ್ದು ಆಯಿತು ಜೊತೆಗೆ ಸಂತೋಷವು ಆಯಿತು... 

ಈಗಾಗಲೇ ಈ ಗುಂಪಿನ ಅನೇಕ ಪುಸ್ತಕ ಮಿತ್ರರು ಈ ಪುಸ್ತಕದ ಬಾಗ್ಗೆ ವಿಮರ್ಶೆ ಬರೆದು ಹಾಕಿರುವುದರಿಂದ ವಿಶೇಷವಾಗಿ ಹೇಳುವುದು ಏನು ಇಲ್ಲ....

ಆದರೂ ಸುಧಾ ಮೂರ್ತಿಯವರ ಈ ಕಾದಂಬರಿಯಲ್ಲೂ ಕೂಡ ಕೇವಲ ಕಾಲ್ಪನಿಕ ಕಥೆ ಅಲ್ಲದೇ ನಿಜ ಜೀವನದ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಹೇಳಿದ್ದಾರೆ... ಫಾರಿನ್ ಅಬ್ರಾಡ್ ಅಂತ ಪರಿತಪಿಸುವ ನಮ್ಮ ದೇಶದ ಕೆಲವು ಮೂರ್ಖರು ಬುದ್ಧಿ ಕಲಿಯಲೇ ಬೇಕು ಅಂತಹ ಸಂದೇಶ ಇದರಲ್ಲಿದೆ... 

ನಮ್ಮ ಸ್ವದೇಶೀ ಸುಗಂಧವ ತೆಗಳಿ ವಿದೇಶೀ ದುರ್ಗಂಧಕ್ಕೆ ಬೆರಗಾಗಿ ಬಾಯಿ ಬಿಡುವ ಜನರಿಗೆ ನಿಜವಾಗಲು ಈ ಕಾದಂಬರಿ ಪಾಠ ಕಲಿಸುತ್ತದೆ... 

ಇಲ್ಲೊಂದು ವಿಶೇಷ ಏನಂದರೆ(ಇವತ್ತಿಗೂ ಕೂಡ) ಬೆಂಗಳೂರಿನ ಜನಕ್ಕೆ ಆಮೇರಿಕಾ ಹೇಗೆ ಕನಸಿನ ಸೌಧವೋ... ನಮ್ಮ ಉತ್ತರ ಭಾರತದ ಜನ ಬೆಂಗಳುರಿನಲ್ಲಿ ನೆಲಸಿದ್ದರೆ ಅಮೆರಿಕಾದಲ್ಲಿ ಇದ್ದದ್ದಕ್ಕಿಂತ ಹೆಚ್ಚು ಗರ್ವ ಪಡುತ್ತಾರೆ ಅಂತಹ ಬೆಂಗಳೂರಿನಲ್ಲಿ ನಾನಿದ್ದೇನೆ ಎನ್ನುವುದು ನನ್ನ ಹೆಮ್ಮೆ ... 

ಅಮೇರಿಕಾ ಡಾಲರ್ ಗೂ ನಮ್ಮ ರೂಪಾಯಿಗೂ ಇರುವ ವ್ಯತ್ಯಾಸವೆಂದರೆ ಮನೆ ಊಟಕ್ಕೆ ಹೋಟೆಲ್ ಊಟಕ್ಕೆ ಇರುವ ವ್ಯತ್ಯಾಸ.. ಏಕೆಂದರೆ ದೂರದ ಅಮೇರಿಕಾ ಎರಡು ದಿನ ಚಂದ ಅನಿಸಿದ್ದರೂ ಮೂರನೇ ದಿನ ನಮ್ಮ ದೇಶವೇ ಬೇಕೆನಿಸುವುದು... 

Finallyyyyyyyy I LOVE MY INDIA.........

ಮೆಲೂಹದ ಮೃತ್ಯುಂಜಯ


"ಮೆಲೂಹದ ಮೃತ್ಯುಂಜಯ" ಅಬ್ಬಾ!!!!!!!!!! ಇದೊಂದು ಅದ್ಭುತ ಪುಸ್ತಕ... ಇದರ ಬಗ್ಗೆ ಎಷ್ಟು ಬರೆದರೂ ಎಷ್ಟು ಮೆಚ್ಚುಗೆಯ ಮಾತನ್ನು ವ್ಯಕ್ತ ಪಡಿಸಿದರೂ ಕಡಿಮೆಯೇ.. ನಿಜ ಹೇಳಬೇಕೆಂದರೆ ಇದರ ಬಗ್ಗೆ ವಿಮರ್ಶೆ ಬರೆಯುವಷ್ಟು ನಾನು ದೊಡ್ದವಳಲ್ಲ ಹಾಗಾಗಿ ನನಗೆ ಅನಿಸಿದ್ದನ್ನು ಸರಳವಾಗಿ ಹೇಳುತಿರುವೆ.

ಈ ಪುಸ್ತಕದ ಆರಂಭದ ವಿಮರ್ಶೆಗಳಲ್ಲಿ ಹೇಳಿರುವ ಹಾಗೆ ಓದುಗರಲ್ಲಿ ಕುತೂಹಲವನ್ನು ಸೃಷ್ಟಿಸಿ ಕೊನೆಯ ಪುಟದವರೆಗೂ ಎಡೆಬಿಡದೆ ಓದುವಂತೆ ಪ್ರೇರೇಪಿಸುತ್ತದೆ ಎನ್ನುವ ಮಾತು ಅಕ್ಷರಶಃ ನಿಜ. ಪುಟದಿಂದ ಪುಟಕ್ಕೆ ಕುತೂಹಲ ಹೆಚ್ಚಾಗಿ ರೋಮಾಂಚನ ನೀಡುತ್ತದೆ. ಇದು ಕೇವಲ ಪೌರಾಣಿಕ ಕಥೆಯಂತೆ ಎಲ್ಲೂ ನಮಗೆ ಭಾಸವಾಗುವುದಿಲ್ಲ.
ಈ ಪುಸ್ತಕ ಓದುವಾಗ ನನಗಾದ ಅನುಭವಗಳು... ಹೀಗಿವೆ 

೧. ನಾವು ಶಾಲೆಯಲ್ಲಿದ್ದಾಗ ಓದಿದ ಪ್ರತಿಯೊಂದು ಸಾಮಾಜಿಕ ,ಭೌಗೋಳಿಕ ,ವೈಜ್ಞ್ಯಾನಿಕ, ಐತಿಹಾಸಿಕ ಪಾಠಗಳೆಲ್ಲ ಈ ಪುಸ್ತಕ ಓದುವಾಗ ನೆನಪಾಗುತ್ತವೆ.

೨. ಸಿಂಧೂ ಬಯಲಿನ ನಾಗರೀಕತೆ, ಮಾನಸ ಸರೋವರ , ಶ್ರೀನಗರ ಕಾಶ್ಮೀರ ಹೀಗೆ ನಮ್ಮ ದೇಶದ ಅನೇಕ ಸ್ಥಳಗಳಲ್ಲದೆ ನಮ್ಮ ದೇಶದ ಅನೇಕ ನದಿಗಳ ಹೆಸರಲ್ಲದೆ ಅನೇಕ ಪರದೇಶಗಳ ಸ್ಥಳಗಳು ಇಲ್ಲಿ ಬಂದು ಹೋಗುತ್ತವೆ. ನಾನು ಇಲ್ಲಿ ಇವುಗಳ ಹೆಸರು ತೆಗೆದುಕೊಂಡ ಕಾರಣವೇನೆಂದರೆ ಪ್ರತೀ ಪುಟ ಓದುವಾಗ ಓದುಗರು ಕೂಡ ತಾವಿರುವ ಜಾಗವ ಮರೆತು ಅಲ್ಲಿಯೇ ಹೋಗುತ್ತಿದ್ದಾರೆ ಎಂದೆನಿಸಬೇಕು ಅಷ್ಟರ ಮಟ್ಟಿಗೆ ಈ ಪುಸ್ತಕ ಸೆಳೆಯುತ್ತದೆ.

೩. ಶಿವನು ನಾವಂದುಕೊಂಡ ಹಾಗೆ ದೇವರು.. ಆದರೆ ಇದರಲ್ಲಿ ಅವನ ಕಲ್ಪನೆಯೇ ಭಿನ್ನವಾಗಿದೆ.. ಶಿವ ಹೇಗೆ ಹುಟ್ಟಿದ ಬೆಳೆದ ಮುಂದೆ ಅವನು ಹೇಗೆ ಮಹಾದೇವನಾದ ಎನ್ನುವ ಸುಂದರ ಚಿತ್ರಣ ಇಲ್ಲಿ ಮೂಡಿದೆ. ಮೆಲೂಹಕ್ಕೆ ಶಿವನ ಆಗಮನ, ಅಲ್ಲಿಯ ಜನರ ರಕ್ಷಣೆ, ಅವನ ಕಲ್ಯಾಣ, ಯುದ್ಧದ ತಯಾರಿ ಹೀಗೆ ಮತ್ತೊಂದು ಮೊಗದೊಂದು ಕಣ್ಣಿಗೆ ಕಟ್ಟುವಂತೆ ಹೆಣೆದಿದ್ದಾರೆ.. ನಾವೇ ಇದನ್ನೆಲ್ಲಾ ಕಣ್ಣಾರೆ ನೋಡುತಿದ್ದೆವೇನೋ ಎಂದೆನಿಸಿದರೂ ತಪ್ಪಿಲ್ಲ.

೪. ಇನ್ನೊಂದು ಮುಖ್ಯವಾದ ಅಂಶವೆಂದರೆ ಶ್ರೀ ರಾಮನ ಕಲ್ಪನೆ ಅಷ್ಟೇ ಸುಂದರ ಸರಳ ಮತ್ತು ಉತ್ತಮ ಮೌಲ್ಯಗಳಿಂದ ಚಿತ್ರಿಸಿದ್ದಾರೆ. ಪ್ರತಿಯೊಂದು ಅಧ್ಯಾಯವು ಸಹ ಅದರದೇ ಆದ ವೈಶಿಷ್ಟ್ಯ ಹೊಂದಿದೆ. ಹೀಗೆ ಈ ಪುಸ್ತಕದ ಬಗ್ಗೆ ಎಷ್ಟು ಹೇಳಿದರೂ ಮುಗಿಯುವುದಿಲ್ಲ.

೫. ಕೊನೆಯದಾಗಿ ಹೇಳುವುದೆಂದರೆ ಮೊದಲ ಪುಟದಿಂದ ಕೊನೆಯ ಪುಟದವರೆಗೂ ಬಿಡದಂತೆ ಓದಿಸಿಕೊಂಡು ಓದುವ ಈ ಪುಸ್ತಕ ಅಂತ್ಯದಲ್ಲಿ ನಿರಾಸೆ ಮೂಡಿಸುತ್ತದೆ ಅದಕ್ಕೆ ಕಾರಣ ಈ ಪುಸ್ತಕದ ಮುಂದಿನ ಭಾಗದಲ್ಲಿ ಕಥೆ ಅಂತ್ಯವಾಗುತ್ತದೆ ಅದೇ "ನಾಗಾಗಳ ರಹಸ್ಯ" ಮತ್ತು "ವಾಯುಪುತ್ರರ ಶಪಥ". ಈ ೨ ಪುಸ್ತಕಗಳನ್ನು ಓದಿದ ಮೇಲೆಯೇ ಓದುಗರ ಕುತೂಹಲ ಕರಗತ್ತದೆ ಎನ್ನುವುದು ನನ್ನ ವಯಕ್ತಿಕ ಅಭಿಪ್ರಾಯ..

ಇಂತಹ ಅದ್ಬುತ ಪುಸ್ತಕವನ್ನು ನನ್ನ ಕೈ ಸೇರಿಸಿ ಓದಲು ಪ್ರೇರೇಪಿಸಿದ ಎಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು.

ನೇಹಲ ಕಥೆಗಳು





ನೆನ್ನೆಯ ಭಾನುವಾರವೆಲ್ಲ ಕೆ. ಎನ್. ಗಣೇಶಯ್ಯನವರ "ನೇಹಲ ಕಥೆಗಳು" ಪುಸ್ತಕದ ಜೊತೆಗೆ ಸಾಗಿತು... ನಿಜಕ್ಕೂ ಇದೊಂದು ರೋಚಕ ಪುಸ್ತಕ.... ೮ ಕಥೆಗಳನ್ನು ಒಳಗೊಂಡ ಒಂದಕ್ಕಿಂದ ಒಂದು ವಿಭಿನ್ನ ವಸ್ತುಗಳಿಂದ ಕೂಡಿದ ಪುಸ್ತಕ.

ಇಲ್ಲಿತನಕ ಓದಿದ ಕಥೆ ಪುಸ್ತಕಗಳಿಗಿಂತ ವಿಶಿಷ್ಟ ನಿರೂಪಣೆ, ಕಥೆ ಹೇಳುವ ಶೈಲಿ ಇದರಲ್ಲಿದೆ. ಹಾಗೆ ಒಮ್ಮೆ ಓದಲು ಆರಂಭಿಸಿದರೆ ಪುಟದವರೆಗೂ ಬಿಡದೆ ಸೆಳೆದುಕೊಂಡು ಹೋಗುತ್ತದೆ ಅಷ್ಟು ಅದ್ಭುತ, ರೋಚಕ ವಿಷಯಗಳು ಇದರಲ್ಲಿವೆ. ಈ ಪುಸ್ತಕ ಬರೆಯಲು ಲೇಖಕರು ಮಾಡಿದ ಸಂಶೋಧನೆ ಹೆಚ್ಚು ಮನ ಸೆಳೆಯುತ್ತದೆ. ಪ್ರತೀ ಕಥೆಯ ಕೊನೆಗೆ ಅಂತ್ಯಕ್ಕೆ ತಮಗೆ ಮಾಹಿತಿಯ ಲಿಂಕ್ ಮತ್ತು ಪುಸ್ತಕದ ಹೆಸರು ಮತ್ತು ಅದರ ಲೇಖಕರ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ, ಹೆಚ್ಚು ತಿಳಿಯಲು ಇಚ್ಚಿಸುವರು ಇದರ ಉಪಯೋಗ ಪಡೆಯಬಹುದು. ಇದರಲ್ಲಿ ಐತಿಹಾಸಿಕ, ವೈಜ್ಞಾನಿಕ, ಜ್ಯೋತಿಷ್ಯ, ಇತ್ಯಾದಿ ಕುತೂಹಲಕಾರಿ ವಿಷಯಗಳು ಇವೆ.

ಇರುವ ಒಟ್ಟು ೮ ಕಥೆಗಳಲ್ಲಿ, "ನೇಹಲ" ಮತ್ತು "ರಾಗ ಪಂಜರ" ಎಂಬ ೨ ಕಥೆಗಳು ಮನಸಿಗೆ ಹೆಚ್ಚು ಹಿಡಿಸಿದವು ಜೊತೆಗೆ ಅಷ್ಟೇ ಮಾಹಿತಿ ಮತ್ತು ರಂಜನೆ ಕೊಟ್ಟವು. ನಿಜಕ್ಕೂ ೮ ಕಥೆಗಳಲ್ಲಿ ಲೇಖಕರ ಶ್ರಮ ಮತ್ತು ಮಾಡಿದ ಸಂಶೋಧನೆ ಎದ್ದು ಕಾಣುತ್ತವೆ. ಈ ಕಥೆಗಳಲ್ಲಿ ೭೦-೮೦% ಸತ್ಯಾಂಶ ಮತ್ತು ೨೦-೩೦% ಲೇಖಕರ ಕಲ್ಪನೆಗಳಿಂದ ಕೂಡಿದೆ ಎನ್ನುವುದು ನನಗೆ ಅನಿಸಿತು ಅದಕ್ಕೆ ಕಾರಣ ಪ್ರತೀ ಕಥೆಯ ಅಂತ್ಯಕ್ಕೆ ಲೇಖಕರು ಹೇಳಿದ ಕೊನೆಯ ಮಾತು ಎಂಬ ಅಂಕಣ.

ನಿಜಕ್ಕೂ ಈ ಪುಸ್ತಕ ಓದಿದವರೆಲ್ಲರೂ ಖುಷಿ ಪಡುತ್ತಾರೆ ಎನ್ನುವದು ನನ್ನ ಅಭಿಪ್ರಾಯ. ಭಾನುವಾರದ ರಜವನ್ನು ಇಂತಹ ವಿಶೇಷ ಪುಸ್ತಕದ ಜೊತೆ ಕಳೆದದ್ದು ಮತ್ತೊಂದು ಸಂತೋಷ. ಈ ಕೂಟಕ್ಕೆ ಮತ್ತೊಮ್ಮೆ ಧನ್ಯವಾದಗಳು

ಬೆಟ್ಟದ ಜೀವ




ಶಿವರಾಮ ಕಾರಂತರ "ಬೆಟ್ಟದ ಜೀವ" ನಿಜಕ್ಕೂ ಒಂದು ಸುಂದರ ಕೃತಿ. ಇದು ಕಾರಂತರಿಗಾದ ಅನುಭವವದ ಕಥೆ. ಇಲ್ಲಿನ ವಿಶೇಷವೆಂದರೆ ಮಲೆನಾಡ ಸೊಬಗನ್ನು ಬರೀ ಕಣ್ಣಿಗೆ ಕಟ್ಟುವಂತೆ ಹೇಳಿಲ್ಲ ... ಸ್ವತಃ ನಾವೇ ಅಲ್ಲಿ ಇದ್ದೇವೇನೋ ಅನ್ನುವಷ್ಟು ಮನೋಜ್ಞವಾಗಿ ನಿಸರ್ಗ ಸೌಂದರ್ಯವನ್ನು ಚಿತ್ರಿಸಿದ್ದಾರೆ. 

ಕಾರಂತರು ಪುತ್ತೂರಿನಲ್ಲಿ ನೆಲೆಸಿದಾಗ ಕೆಲಸಕ್ಕೆಂದು ಹಳ್ಳಿ ಮಾರ್ಗವಾಗಿ ನಡೆಯುತ್ತಾ ಎಲ್ಲೋ ಹೋಗಬೇಕಾದವರು ಮತ್ತೆಲ್ಲೋ ದಾರಿ ತಪ್ಪಿ ಹೋಗುತ್ತಾರೆ ಅಲ್ಲಿ ಒಬ್ಬ ವ್ಯಕ್ತಿ ಸಿಗುತ್ತಾರೆ ಅವರೇ ದೇರಣ್ಣ. ಅವರು ಗೋಪಾಲಯ್ಯ ಅನ್ನುವರ ಮನೆಗೆ ಕರೆದು ತಂದು ಇರಲು ವ್ಯವಸ್ಥೆ ಮಾಡುತ್ತಾರೆ. ಗೋಪಾಲಯ್ಯ, ಅವರ ಮಡದಿ ಶಂಕರಮ್ಮ, ಅವರ ಸಾಕು ಮಗ ಸೊಸೆ ಮೊಮ್ಮಕ್ಕಳು ಸುತ್ತಾ ನಡೆದ ಕಾರಂತರ ಅನುಭವದ ಕಥೆಯೇ "ಬೆಟ್ಟದ ಜೀವ".

ವಯಸ್ಸಾದ ಅಪ್ಪ ಅಮ್ಮ ಮಕ್ಕಳಿಂದ ದೂರವಿದ್ದು ಪಡುವ ಯಾತನೆ ಇದರ ಮತ್ತೊಂದು ಮುಖ್ಯ ಅಂಶ. ಆ ನೋವಿನಲ್ಲಿಯೂ ಆ ತಂದೆ ತಾಯಿಗಳು ಇದ್ದದರಲ್ಲೇ ಸಂತೋಷ ಕಂಡುಕೊಂಡು ಇದ್ದೊಬ್ಬ ಮಗ ಇಂದು ಬರ್ತಾನೆ ನಾಳೆ ಬರ್ತಾನೆ ಎನ್ನುವ ಭರವಸೆಯಲ್ಲಿ ಜೀವನ ಸಾಗಿಸುತ್ತಾರೆ. ಈ ಭಾವನೆಯನ್ನು ಓದಿಯೇ ಸವಿಯಬೇಕು. ಆದರೆ ಅಪರಿಚಿತರಾಗಿ ಬಂದ ಕಾರಂತರೇ ಅವರ ಮಗನನ್ನು ಹುಡುಕಲು ಸಹಾಯ ಮಾಡುತ್ತಾರೆಂದು ಅವರೆಂದು ಅಂದುಕೊಂಡಿರಲಿಲ್ಲ.

ನನಗೆ ಅತ್ಯಂತ ಮೆಚ್ಚುಗೆಯಾದ ವಿಷಯವೆಂದರೆ ಅಪರಿಚಿತರಾಗಿ ಬಂದ ಕಾರಂತರನ್ನು ಗೋಪಾಲಯ್ಯನವರ ಕುಟುಂಬ ಎಷ್ಟು ಚೆನ್ನಾಗಿ ಅತಿಥಿ ಸತ್ಕಾರ ಮಾಡಿದ್ದಾರೆಂದರೆ ಅದನ್ನಂತೂ ಓದಿ ನನಗೆ ತುಂಬಾ ಆಶ್ಚರ್ಯವಾಯಾಯ್ತು. ಒಂದು ಕ್ಷಣ ನಾನು ಅಂತಹ ಪ್ರಕೃತಿಯ ಸವಿಯಬೇಕು ಆ ರೀತಿ ಜೀವನವ ಒಮ್ಮೆಯಾದರೂ ಅನುಭವಿಸಬೇಕೆಂಬ ಸಣ್ಣ ಆಸೆ ಮನಸ್ಸನ್ನು ಕಾಡಿದ್ದಂತೂ ನಿಜ. ನಿಜಕ್ಕೂ ಈ ಪುಸ್ತಕದಲ್ಲಿ ಅರ್ಥಮಾಡಿಕೊಳ್ಳುವ ಅಂಶಗಳು, ಅನುಭವಿಸಬೇಕಾದ ಅಂಶಗಳು ಬಹಳಷ್ಟಿವೆ. ಆ ಕುಟುಂಬದ ಮುಗ್ಧತೆ, ಕಷ್ಟಪಟ್ಟು ದುಡಿಯುವ ತವಕ, ಮತ್ತೊಬ್ಬರಿಗೆ ಉಪಕಾರ ಮಾಡುತ್ತಾ ಅದರಲ್ಲೇ ಸುಖ ಅನುಭವಿಸೋ ಅವರ ಉದಾರತೆ ನಿಜಕ್ಕೂ ರಮಣೀಯ. ಈ ಕಾದಂಬರಿ ಓದಿ ನಿಜಕ್ಕೂ ನನ್ನ ಮನತುಂಬಿ ಬಂತು.

ಈ ಕಾದಂಬರಿಯಿಂದ ನನಗೆ ಪ್ರಕೃತಿಯ ಮಡಿಲಲ್ಲಿ ಎಷ್ಟು ಸಂತೋಷವಿರುತ್ತದೆ, ನೆಮ್ಮದಿಯಿರುತ್ತದೆ, ಯಾಕಾದರೂ ನಾನು ಆ ಕಾಲದಲ್ಲಿ ಹುಟ್ಟಲಿಲ್ಲ ಎಂದು ಸಂಕಟವೂ ಆಯ್ತು ಜೊತೆಗೆ ಆಗಿನ ಕಾಲದ ಜನರ ಮನಸ್ಥಿತಿಗೂ, ಈಗಿನ ಕಾಲದ ಜನರ ಮನಸ್ಥಿತಿಗೂ ಇರುವ ವ್ಯತ್ಯಾಸ ಕಂಡು ಬಹಳ ಬೇಜಾರಾಯ್ತು. ಆದರೆ ಏನು ಮಾಡುವ ಹಾಗಿಲ್ಲ ಜೀವನ ಹೇಗೆ ಬಂದರೂ ಅದನ್ನು ನಾವಿ ಸ್ವೀಕರಿಸಲೇಬೇಕು. ನಿಜಕ್ಕೂ ಇದರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಇಂತಹ ಅದ್ಭುತ ಕೃತಿಯ ಓದಲು ಅವಕಾಶ ಕೊಟ್ಟ "ಕನ್ನಡ ಕಾದಂಬರಿ ಕೂಟ"ಕ್ಕೆ ಮತ್ತೊಮ್ಮೆ ಧನ್ಯವಾದಗಳು

ಮೂಕಜ್ಜಿಯ ಕನಸುಗಳು





ನಾ ಓದಿದ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಾದಂಬರಿ ಎಂದರೆ "ಮೂಕಜ್ಜಿಯ ಕನಸುಗಳು". ಓದಿ ನಿಜಕ್ಕೂ ಹೆಮ್ಮೆ ಅನಿಸುತ್ತಿದೆ ಕಾರಣ ಆ ಕಾದಂಬರಿಯ ನಿರೂಪಣಾ ಶೈಲಿ... ಇಲ್ಲಿವರೆಗೂ ನಾ ಓದಿದ ಅನೇಕ ಕಾದಂಬರಿಗಳಿಗಿಂತ ತುಂಬಾ ವಿಭಿನ್ನವಾಗಿದೆ ಜೊತೆಗೆ ಅವುಗಳಷ್ಟು ಸರಳವಾಗಿ ಅರ್ಥವೂ ಆಗುವುದಿಲ್ಲ. ಮನಸಿಟ್ಟು ಓದಿದರೆ ಮಾತ್ರ ತಿಳಿಯುವ ಕಥೆ.

ಕಾರಂತರು ಮುನ್ನುಡಿಯಲ್ಲಿ ಹೇಳಿರುವ ಹಾಗೆ ಇಲ್ಲಿ ಯಾರು ನಾಯಕಿ/ನಾಯಕರು ಇಲ್ಲವಾದರೂ... ನನಗೆ ಮೂಕಜ್ಜಿಯೇ ನಾಯಕಿ ಮತ್ತು ಅವರ ಮೊಮ್ಮಗ ಸುಬ್ರಾಯರೇ ನಾಯಕ ಎನಿಸಿದ್ದಂತು ಸತ್ಯ. ಕೊಲ್ಲೂರು ಮೂಕಾಂಬಿಕೆಯ ಹೆಸರನ್ನಿಟ್ಟ ಒಬ್ಬ ಹುಡುಗಿಯ ಕಥೆಯಿದು. "ಮೂಕಂಬಿಕ" ಹೆಸರು ಆಡು ಭಾಷೆಯಲ್ಲಿ "ಮೂಕಿ" ಆಗುತ್ತದೆ ನಂತರ ಹೆಸರಿಗೆ ತಕ್ಕಂತೆ ಮೌನವಾಗುತ್ತ ಕೊನೆಗೆ ೮೦ ದಾಟಿದ ಮೂಕಜ್ಜಿಯಾಗುತ್ತಾಳೆ.

ಪ್ರತೀ ಅಧ್ಯಾಯದಲ್ಲೂ ಒಂದು ವಿಶಿಷ್ಟತೆ ಇದೆ. ಆರಂಭದಲ್ಲಿ ಹೇಳುವ ಸಣ್ಣ ಕಥೆಗಳಿಗೆಲ್ಲ (ಇಲ್ಲಿ ಮೂಕಜ್ಜಿಯ ಕನಸುಗಳು) ಮುಂದೆ ಹೋದಂತೆ ಒಂದೊಂದು ಆಯಾಮ ಹೊಂದುತ್ತವೆ ಜೊತೆಗೆ ಓದುಗರಿಗೆ ಗೊಂದಲವು ಶುರುವಾಗುತ್ತದೆ. ಅದಕ್ಕೆ ನಾ ಮೊದಲೇ ಹೇಳಿದಂತೆ ಮನಸಿಟ್ಟು ಓದಿದರೆ ಮಾತ್ರ ಅರ್ಥವಾಗುತ್ತದೆ ಇದು ಕೇವಲ ನನ್ನ ಅನುಭವ ಮಾತ್ರ.
ಆ ಅಜ್ಜಿಗೆ ಗೋಚರಿಸುವ ಪ್ರತಿಯೊಂದು ಘಟನೆಗಳು ಮುಂದೆ ನಡೆಯಬಹುದಾದ ಅಥವ ಹಿಂದೆ ನಡೆದ ಘಟನೆಗಳಿಗೆ ಸಂಬಂಧ ಇರುತ್ತವೆ. ಇದನ್ನು ಅರ್ಥ ಮಾಡಿಕೊಂಡದ್ದು ಕೇವಲ ಅವಳ ಮೊಮ್ಮಗ ಸುಬ್ರಾಯ ಮಾತ್ರ. ಉಳಿದವರೆಲ್ಲರೂ ಅಜ್ಜಿಗೆ ಮರಳು ಎಂದೇ ತಿಳಿದು ಆಡಿಕೊಳ್ಳುತ್ತಾರೆ. ಹೀಗೆ ಮುಂದೆ ಓದಿದಂತೆಲ್ಲ ಮೂಕಜ್ಜಿಯ ಮೇಲೆ ನಮಗೂ ಪ್ರೀತಿ ಬೆಳೆಯುತ್ತದೆ.

ಈ ಪುಸ್ತಕದ ಮತ್ತೊಂದು ವಿಶೇಷವೆಂದರೆ ಇಲ್ಲಿ ನನಗೆ ಗೊತ್ತಿಲ್ಲದೇ ಇರುವ ಅನೇಕ ಪದಗಳು ಬಳಕೆಯಾಗಿದ್ದು ಅವನ್ನು ನಾ ತಿಳಿದು ಓದಿದ್ದು. ಕೊನೆಯದಾಗಿ ಹೇಳಬೇಕಂದರೆ ಇದನ್ನು ಓದಿದ ನಿಜಕ್ಕೂ ನನ್ನ ಜ್ಞಾನವೂ ಹೆಚ್ಚಾಯಿತು. ಖಂಡಿತ ಇದೊಂದು ಅಮೋಘ ಪುಸ್ತಕ. ಓದಿ ತುಂಬಾ ಆನಂದವಾಯಿತು. ಮತ್ತೊಮ್ಮೆ ಮಗದೊಮ್ಮೆ ಈ ಕನ್ನಡ ಕಾದಂಬರಿ ಕೂಟಕ್ಕೆ ನನ್ನ ಮನಪೂರ್ವಕ ಧನ್ಯವಾದಗಳು...

ಪರಿಧಿ




ಹೆಂಗಳೆಯರ ಮನದ ಪಡಿಯಚ್ಚು ಸುಧಾಮೂರ್ತಿಯವರ "ಪರಿಧಿ" ಕಾದಂಬರಿ. ಸಮಾಜದ ದೃಷ್ಟಿಯಲ್ಲಿ ಪರಮಸುಖಿಯಾಗಿ ಕಂಡರೂ ಒಂಟಿತನದಿಂದ ಬಳಲುತ್ತಾ ನೋವನ್ನು ಯಾರೊಂದಿಗೂ ಹೇಳಲಾಗದೇ ಮನೋರೋಗಿಯಾಗಿ ಬಳಲುವ ಕಥೆ ಇದು ಜೊತೆಗೆ ವಾಸ್ತವದ ಇನ್ನೊಂದು ರೂಪ ಈ ಪುಸ್ತಕ. ಹಣದಿಂದ ಗುಣ ಬದಲಾಗಿ ಅನುಭವಿಸುವ ಯಾತನೆ ಇದರಲ್ಲಿದೆ .
ಮೃದುಲಾ ಹೆಸರಿಗೆ ತಕ್ಕಂತೆ ಮೃದು, ಜೊತೆಗೆ ಶಾಂತ ಸ್ವಭಾವದಿಂದ ಕೂಡಿದ ಪ್ರೀತಿ ಅಂತಕರಣ ಇರುವ ಚೆಲುವೆ. ಇದ್ದಲ್ಲೇ ತೃಪ್ತಿ ಪಡುವ ವಿಶೇಷ ಗುಣವಿರುವಳು. ಬಡತನದ ಬೇಗೆಯಲ್ಲಿ ಬೆಂದು ತನ್ನದೇ ಪ್ರಯತ್ನದಿಂದ ಸರಕಾರಿ ವೃತ್ತಿ ಪಡೆದ ಡಾಕ್ಟರ್ ಸಂಜಯ್ ಆಕೆಯನ್ನು ಪ್ರೀತಿ ಮಾಡಿ ಮದುವೆಯಾಗುತ್ತಾನೆ. ಆರ್ಥಿಕವಾಗಿ ಮೃದುಲಾ ಅವನಿಂಗಿಂತಲೂ ಮೇಲಿದ್ದರೂ ಯಾವತ್ತಿಗೂ ಆಕೆ ಅಹಂಕಾರ ತೋರಿಸದೇ ಅವನ ಖಾಸಗಿ ಮತ್ತು ವೃತ್ತಿ ಜೀವನದ ಕಷ್ಟ ಸುಖಕ್ಕೆ ಸಂಗಾತಿಯಾಗಿ ಪ್ರತೀ ಕಷ್ಟದಲ್ಲೂ ಒಳ್ಳೆಯದನ್ನೇ ಹುಡುಕಿ ಸಮಾಧಾನವಾಗಿ ಬದುಕುತ್ತಾಳೆ. ಅಲ್ಲದೆ ಅವನ ಉನ್ನತ ವಿದ್ಯಾಭ್ಯಾಸ ಮಾಡಿಸಲು ತಾನೊಬ್ಬಳೇ ದುಡಿದು ಸಂಸಾರ ಸಾಗಿಸುತ್ತಾಳೆ. ಹೀಗೆ ಹೆಂಡತಿಯ ಸಹಾಯದಿಂದ ಬಹಳ ಬೇಗ ಶ್ರದ್ಧೆಯಿಂದ ಓದಿ ಸ್ವಂತ ಆಸ್ಪತ್ರೆ ತೆಗೆದು ಬಹುದೊಡ್ಡ ಶ್ರೀಮಂತನಾಗುತ್ತಾನೆ.
ಆದರೆ ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎನ್ನುವುದು ಇಲ್ಲಿ ನೆನಪಾಗುತ್ತದೆ. ಸಂಜಯ ಒಂದು ಕಾಲದಲ್ಲಿ ನಿಸ್ವಾರ್ಥ ಸೇವೆ, ಬಡವರಿಗೆ ಸಹಾಯ ಮಾಡಬೇಕು ಎಂಬ ಆದರ್ಶದಿಂದ ಬದುಕಿದ್ದವನು ಹಣ ಬಂದಕೂಡಲೇ ಸ್ವಾರ್ಥಿಯಾಗಿ ಜೀವನವೆಂದರೆ ಬರೀ ಹಣ ಗಳಿಸುವುದು ಎಂದು ತಿಳಿದು ಅಕ್ರಮವಾಗಿಯೂ ಗಳಿಸಲು ಆರಂಭಿಸುತ್ತಾನೆ. ಇದ್ಯಾವುದನ್ನು ಸಹಿಸದ ಆದರ್ಶ ಶಿಕ್ಷಕಿ ಮೃದುಲಾ ಮೊದಲ ಬಾರಿಗೆ ತಿರುಗಿ ಬೀಳುತ್ತಾಳೆ. ಇರುವ ಒಬ್ಬನೇ ಮಗನೂ ಆಕೆಯನ್ನು ಅರ್ಥ ಮಾಡಿಕೊಳ್ಳದೆ ಅಪ್ಪನ ದಾರಿಯೇ ಹಿಡಿಯುತ್ತಾಳೆ. ಕೊನೆಗೆ ತನ್ನ ಹೆಂಡತಿಯ ಸಹಾಯದಿಂದಲೇ ಮೇಲೆ ಬಂದ ಸಂಜಯ ಆಕೆಯನ್ನೇ ಕೀಳಾಗಿ ಕಾಣುತ್ತ ಮಹಾಸ್ವಾರ್ಥಿಯಾಗಿ ಬದುಕುತ್ತಾನೆ.
ಮೃದುಲಾ ಮಾತ್ರ ನಾದಿನಿ , ಅತ್ತಿಗೆ ಅಪ್ಪ ಅಮ್ಮಾ ಎಲ್ಲರಿಂದಲೂ ದೂರಾಗಿ ಗಂಡನ ಸ್ವಾರ್ಥ, ನಡವಳಿಕೆಯಿಂದ ಬೇಸತ್ತು, ಮನೋರೋಗಕ್ಕೆ ತುತ್ತಾಗಿ ಸ್ವತಃ ತಾನೇ ಅದಕ್ಕೆ ಚಿಕಿತ್ಸೆ ತೆಗೆದುಕೊಂಡು ಚೇತರಿಸಿಕೊಳ್ಳುತ್ತಾ ಅವನನ್ನು ಬಿಟ್ಟು ಹೋಗುತ್ತಾಳೆ. ಈ ಕಥೆ ಕಾದಂಬರಿಯ ಕಲ್ಪನೆಯಲ್ಲ ನಮ್ಮ ಸುತ್ತ ಮುತ್ತ ನಡೆಯುವ ಎಷ್ಟೋ ದುಡಿಯುವ ಹೆಣ್ಣುಮಕ್ಕಳ ಕಥೆಯಾಗಿದೆ. ತನ್ನ ತೌರುಮನೆಯವರಿಗೆ ಎಂದೂ ಸಹಾಯ ಮಾಡದ ಹೆಣ್ಣು ಗಂಡನಿಗಾಗಿ ಅವರ ಸಂಸಾರಕ್ಕಾಗಿ ದುಡಿದು ಎಲ್ಲರನ್ನು ಸಂತುಷ್ಟಗೊಳಿಸುವಲ್ಲೇ ಮುಕ್ಕಾಲು ಆಯುಷ್ಯವನ್ನು ಕಳೆದರೂ ಸ್ವಾರ್ಥ ಗಂಡಂದಿರು ಅವಳನ್ನು ಎಂದೂ ಪ್ರೀತಿಯಿಂದ ಕಾಣುವುದಿಲ್ಲ, ಅವಳೊಂದು ದುಡಿಯುವ ಯಂತ್ರದಂತೆ ಕಾಣುತ್ತಾರೆ ಅಂತಹ ಗಂಡಂದಿರೂ ಇದನ್ನು ಓದಿದರೆ ಖಂಡಿತ ಅವರಿಗೆ ತಮ್ಮ ಹೆಂಡತಿಯ ಬೆಲೆ ಗೊತ್ತಾದೀತು ಎನ್ನುವುದು ನನ್ನ ಅಭಿಪ್ರಾಯ.
ಸುಧಾಮ್ಮನವರು ಸದಾ ವಾಸ್ತವದ ವಿಷಯಗಳನ್ನು ಹೆಂಗಳೆಯರ ಮನಸ್ಸನ್ನು ಮುಖ್ಯವಾಗಿ ಎಳೆದು ಬರೆಯುತ್ತಾರೆ ಎನ್ನುವುದು ಮತ್ತೊಮ್ಮೆ ನನಗೆ ಖುಷಿ ತಂದಿದೆ. ಅವರಿಗೆ ನನ್ನ ತುಂಬು ಹೃದಯದ ನಮನಗಳು. 

ಸಾಫ್ಟ್ ಮನ






ಸುಧಮ್ಮನ "ಸಾಫ್ಟ್ ಮನ"  ನಿಜಕ್ಕೂ ಸಾಫ್ಟ್ ಅಂಡ್ ಸ್ವೀಟ್ ಆಗಿತ್ತು... ಇದರಲ್ಲಿರುವ ೨೯ ಕಥೆಗಳು ನಿಜಕ್ಕೂ ಕಥೆಗಳಲ್ಲ ಸುಧಮ್ಮನ ಸ್ವಅನುಭವಗಳು... ಒಂದೊಂದರಲ್ಲೂ ಒಂದೊಂದು ಸಂದೇಶವಿದೆ... ನಿಜಕ್ಕೂ ಪ್ರತಿಯೊಬ್ಬರ ಮನಸಿಗೂ ಮುಟ್ಟುವಂತಹ ಪುಸ್ತಕವಿದು... ಏಕೆಂದರೆ ಇಲ್ಲಿರುವುದು ಯಾವುದು ಕಲ್ಪನೆಯಲ್ಲ ವಾಸ್ತವ.
ಸುಧಾಮೂರ್ತಿಯವರದು ನಿಜಕ್ಕೂ ಸರಳ, ಸುಂದರ ಮನಸ್ಸು ಎಂದು ಮತ್ತೊಮ್ಮೆ ಅರಿವು ಮೂಡಿಸಿತು ಈ ಪುಸ್ತಕ. ಅವರದು ಸರಳ, ಸುಲಲಿತ ಬರವಣಿಗೆ ಅಬ್ಬಾ!!! ಎಷ್ಟು ಹೊಗಳಿದರೂ ಸಾಲದೆನಿಸುತ್ತೆ ನನಗೆ. ಈ ಪುಸ್ತಕದಿಂದ ನಾ ಕಲಿತಿದ್ದು ಏನೆಂದರೆ ಸಾಧ್ಯ ಆದಷ್ಟು ಅಹಂ ಭಾವದ ಕೊಲೆ, ನಾನೇ ಶ್ರೇಷ್ಠ ಎಂದು ಮೆರೆಯುವವರ ಪರಿಸ್ಥಿತಿ ಹೇಗಿರುತ್ತೆ, ಹಾಗೆ ಉದಾರ ಮನಸಿಂದ ಸಹಾಯ ಮಾಡುವವರನ್ನು ಕೆಲವು ಜನ ಹೇಗೆ ಮರೆಯುತ್ತಾರೆ ಜೊತೆಗೆ ಕೆಲವು ಜನ ಹೇಗೆ ಸ್ಮರಿಸುತ್ತಾರೆ, ಸಮಾಜ ಸೇವೆ ಮಾಡುವರನ್ನು ಜನ ಹೇಗೆ ನೋಡುತ್ತಾರೆ, ಹೀಗೆ ಹತ್ತಾರು ಅನುಭವಗಳು ನನಗೆ ಆದವು ಜೊತೆಗೆ ಪಾಠ ಕಳಿಸಿದವು ಎಂದರೂ ತಪ್ಪಾಗದು.

ಸುಧಾಮ್ಮ ಇಡೀ ಜಗತ್ತನ್ನು ಸುತ್ತಿದ್ದರೂ ಸಾವಿರಾರು ಬಡ ಪ್ರತಿಭಾವಂತರಿಗೆ ಸಹಾಯ ಮಾಡಿ ಓದಿಸಿ ಕೆಲ್ಸಕ್ಕೆ ಸೇರಿಸಿದರೂ, ಸಾವಿರಾರು ಹೆಣ್ಣುಮಕ್ಕಳ ಬಾಳಿಗೆ ದೀಪ ಹಚ್ಚಿದರೂ ಕಿಂಚಿತ್ತೂ ಅವರು ಇಂದಿಗೂ ಯಾರೊಂದಿಗೂ ಹೇಳಿಕೊಳ್ಳದ ಅತ್ಯಂತ ಸರಳ ಜೀವಿ ಎನ್ನುವುದು ಈ ಪುಸ್ತಕದಿಂದ ತಿಳಿಯಿತು. ಪ್ರತೀ ಕಥೆಯಲ್ಲೂ ಅವರ ಮನ ನಿಜಕ್ಕೂ ಸಾಫ್ಟ್ ಎನ್ನುವುದು ಓದುವವರಿಗೆ ಭಾಸವಾಗುತ್ತೆ. ಪ್ರತಿಯೊಬ್ಬರೂ ಓದಿ ಅಳವಡಿಸಿಕೊಳ್ಳಬೇಕಾದ ಅಮೂಲ್ಯ ವಿಷಯಗಳು ಇದರಲ್ಲಿ ತುಂಬಿವೆ. ಇದು ಕಥೆಯಲ್ಲ , ಕಾದಂಬರಿಯಲ್ಲ ಬದಲಾಗಿ ಜೀವನದ ಮೌಲ್ಯಗಳನ್ನು ತಿಳಿಸುವ ಸುಂದರ ಪುಸ್ತಕ ಈ "ಸಾಫ್ಟ್ ಮನ"
ಇಂತಹ ಸೂಪರ್ ಪುಸ್ತಕ ನನ್ನ ಕೈಗೆ ಕೊಟ್ಟಿದ್ದಕ್ಕೆ ಮತ್ತೊಮ್ಮೆ ಮಗದೊಮ್ಮೆ ಈ ಕೂಟಕ್ಕೆ ಧನ್ಯವಾದಗಳು

ಮಹಾ ಶ್ವೇತೆ



ಸುಧಾ ಮೂರ್ತಿ ಅವರ "ಮಹಾ ಶ್ವೇತೆ"ಯನ್ನು ಈ ಸಾಮಾನ್ಯ ಶ್ವೇತೆ ಓದಿ ಮುಗಿಸಿದಳು. 
ಖಂಡಿತ ಇದೂ ಕೂಡ "ಸಾಸಿವೆ ತಂದವಳು" ಹೆಸರು ನೋಡಿ ಆಕರ್ಷಿಸಿದಂತೆ ಮಹಾ ಶ್ವೇತೆ ಹೆಸರು ನನ್ನನ್ನು ಸೆಳೆಯಿತು. ನಾ ಹೆಸರು ನೋಡಿ ನಿರೀಕ್ಷಿಸಿದ್ದೆ ಬೇರೆ ಈ ಕಥೆಯಲ್ಲಿ ಇರುವ ವಿಷಯವೇ ಬೇರೆ. ನಿಜವಾಗಲು ಇದು ಕೂಡ ನಾ ಇಷ್ಟ ಪಡುವ ನೈಜತೆಯನ್ನು ಒಳಗೊಂಡ ಪುಸ್ತಕ.
ಇದು ಅರಿಯದೇ ಬರುವ ಬಿಳುಪು (ತೊನ್ನು ) ಖಾಯಿಲೆಯಿಂದ ಅನುಭವಿಸುವ ಒಂದು ಹೆಣ್ಣಿನ ಕಥೆ. ತಾ ಮಾಡದ ತಪ್ಪಿಗಾಗಿ ಈ ಕಾದಂಬರಿಯ ನಾಯಕಿ ಅನುಭವಿಸೋ ನೋವು, ಕಳಕೊಂಡ ಜೀವನ, ಮತ್ತೆ ಛಲದಿಂದ ಬದುಕುವ ಆಕೆಯ ಹುಮ್ಮಸ್ಸು ಎಲ್ಲವು ತುಂಬಾ ಇಷ್ಟವಾಗುತ್ತದೆ.

ಆಕೆ ಅಪೂರ್ವ ಸುಂದರಿಯೆಂದು ಇಷ್ಟಪಟ್ಟು ಮದುವೆ ಆದ ಗಂಡ ವಿದೇಶಕ್ಕೆ ಹೋಗುತ್ತಾನೆ, ಹೋಗಿ ಕೆಲವು ದಿನಗಳಾದ ಮೇಲೆ ಅನುಗೆ ಬಿಳುಪಿನ ಮಚ್ಚೆ ಕಾಣುತ್ತದೆ, ಇದರಿಂದ ಕುಪಿತರಾದ ಆಕೆಯ ಅತ್ತೆ, ನಾದಿನಿ, ಮಲತಾಯಿ ತಂಗಿಯರು ನೋಡುವ ದೃಷ್ಟಿಯೇ ಬೇರೆಯಾಗುತ್ತದೆ. ಅವಳಿಗೆ ಆ ರೋಗ ಬಂದಿದ್ದು ಅಪಶಕುನ, ಅನಿಷ್ಟ, ಪೂರ್ವ ಜನ್ಮದ ಖರ್ಮ ಹಾಗೆ ಹೀಗೆ ಏನೇನೋ ಹೀಯಾಳಿಸಿ ನೋಯಿಸುವುದು ಮನಸಿಗೆ ನೋವುಂಟು ಮಾಡುವುದು ಖಂಡಿತ.
ಕೊನೆಗೆ ಆ ನಾಯಕಿ ಎಲ್ಲವನ್ನೂ ಎಲ್ಲರನ್ನೂ ತೊರೆದು ದೂರದ ಪ್ರದೇಶಕ್ಕೆ ಹೋಗಿ ತನ್ನ ವೃತ್ತಿಯಲ್ಲಿ ಹೆಸರು,  ಯಶಸ್ವಿ ಪಡೆದು ಕಷ್ಟದಲ್ಲಿರೋರಿಗೆ ಸಹಾಯ ಮಾಡುತ್ತಾ ಅಪೂರ್ವ ಸ್ನೇಹಿತರನ್ನು ಗಳಿಸಿ ಒಂದು ಅಮೂಲ್ಯ ಜೀವನವನ್ನು ತನ್ನದಾಗಿಸಿಕೊಳ್ಳುತ್ತಾಳೆ. ಮೂಢ ನಂಬಿಕೆಗಳಿಗೆ ಬಲಿಯಾಗಿ ಹೆಂಡತಿಯನ್ನು ಕಳಕೊಂಡ ಆನಂದ ಒಂಟಿಯಾಗುತಾನೆ!!!
ನಿಜಕ್ಕೂ ಇದು ಒಳ್ಳೆಯ ಸಂದೇಶ ಸಾರುವ ಕಾದಂಬರಿ.
ಈ ಬಳಗಕ್ಕೆ ಮತ್ತೊಮ್ಮೆ ನನ್ನ ತುಂಬು ಮನದ ಧನ್ಯವಾದಗಳು.

ಯಶಸ್ವಿ

ಸುಧಾಮೂರ್ತಿ ಅವರ "ಯಶಸ್ವಿ"ಯನ್ನು ಓದುವಲ್ಲಿ ಯಶಸ್ವಿಯಾದೆ ಇದು ಕೇವಲ ಕಾದಂಬರಿಯಲ್ಲ... ನೈಜ ಜೀವನದ ಚಿತ್ರಣ.. 

ಇಲ್ಲಿ ಬರುವ ನಾಯಕ/ನಾಯಕಿಯರೆಲ್ಲ ಬೇರೆ ಬೇರೆ ಅಂತಸ್ತಿನವರು ಜೊತೆಗೆ ಬೇರೆ ಬೇರೆ ಮನಸ್ಥಿತಿಯವರು... ಇವರ ಮಧ್ಯೆ ನಡೆಯುವ ಸ್ನೇಹ,ಪ್ರೇಮ,ಕೆಲಸ ,ನೋವು,ಸಂಕಟ ಇತ್ಯಾದಿಗಳ ಮಿಶ್ರಣವೇ ಯಶಸ್ವಿ 

ಓದುತ್ತಾ ಹೋದಂತೆ ಇದೊಂದು ಕಥೆಯನಿಸದೆ ನಮ್ಮ ಜೀವನದಲ್ಲಿ ನಡೆದ ಮತ್ತು ನಡೆಯುತಿರುವ ಘಟನೆಗಳೆನೋ ಎಂಬಂತೆ ಅನಿಸುವುದು. ಕೆಲವು ಪುಟಗಳು ಸ್ಫೂರ್ತಿ ತಂದರೆ ಮತ್ತೆ ಕೆಲವು ಮುದ ನೀಡುವುವು ಜೊತೆಗೆ ಕೆಲವು ನೋವುಂಟು ಮಾಡುವುವು 


ಸ್ನೇಹಿತರ ನಡುವಿನ ಬಾಂಧವ್ಯದ ನೈಜ ಚಿತ್ರಣವು ಹೌದು... ಬಾಳಿನ ಏಳು ಬೀಳುಗಳ ಎಚ್ಚರಿಕೆಯೂ ಹೌದು.. ಖಂಡಿತ ಎಲ್ಲರೂ ಓದಿ ಆನಂದಿಸಿ.

ಒಳ್ಳೆಯ ಪುಸ್ತಕ ತಲುಪಿಸಲು ಮತ್ತು ನನ್ನ ಓದಿನ ಹಸಿವನ್ನು ಹೆಚ್ಚಿಸದವರಿಗೂ ನನ್ನ ಧನ್ಯವಾದಗಳು 

ಸಾಕು ಮಗಳು

ತ ರಾ ಸು ಅವರ "ಸಾಕು ಮಗಳು" ಪುಸ್ತಕದಲ್ಲಿ ತುಂಬಿರುವುದು ಬರೀ ಗೋಳು:( ಹಾಗಂತ ಓದುವಾಗ ನೀರಸ ಎನಿಸುವುದಿಲ್ಲ... ಆದರೆ ಕಥೆಯ ಕೊನೆ ದುಃಖಾಂತ್ಯ ಆಗಿದ್ದಕ್ಕೆ ಬೇಸರ ಆಗುವುದಂತೂ ನಿಜ. ಮುನ್ನುಡಿಯಲ್ಲಿ ಹೇಳಿದಂತೆ ಬರೀ ದುಃಖ, ದುಗುಡಗಳೇ ಹೆಚ್ಚು ತುಂಬಿರುವ ಕಾದಂಬರಿ ಇದು.
ಈ ಕಾದಂಬರಿಯ ಮೊದಲ ನಾಯಕಿ ನಾಗಮ್ಮ, ಅವಳು ಕೂಸಿದ್ದಾಗಲೇ ಅಪ್ಪ ಅಮ್ಮನ ಕಳಕೊಂಡ ನತದೃಷ್ಟ ಕೂಸು. ಹಳ್ಳಿಯ ಜನರೆಲ್ಲಾ ಅವ್ಳನ್ನು ಅನಿಷ್ಟ, ದರಿದ್ರ ಎಂದೂ ಮೂದಲಿಸಿದರೂ ಅವರ ಮಾತಿಗೆ ಕೆಡಿಸಿಕೊಳ್ಳದೆ ಹನುಮಕ್ಕ ಎಂಬ ಮಾತೃ ಹೃದಯಿ ನಾಗಮ್ಮಳನ್ನು ಬೆಳೆಸುತ್ತಾಳೆ. ಆದರೆ ಹಣೆಬರಹವೋ ನಾಗಮ್ಮಳದೂ ೫ ವರ್ಷದವಳಾಗಿದ್ದಾಗಲೇ ಹನುಮಕ್ಕನನ್ನು ಕಳಕೊಂಡು ಅನಾಥಳಾಗಿ ಉಡಲು, ಉಣ್ಣಲು ಯಾರ ಸಹಾಯವಿಲ್ಲದೆ ಬೇಡುತ್ತಾ ಬದುಕಿದಳು.
ಆಗ ನೀಲಮ್ಮ ಎಂಬ ಮತ್ತೊಬ್ಬ ಹುಡುಗಿಯ ಆಗಮನ ನಾಗಮ್ಮನ ಬಾಳನ್ನು ಮತ್ತೆ ಹಸನು ಮಾಡಿ ಸುಖವಾಗಿ ಬೆಳೆಯುತ್ತಾ ಯವ್ವನಕ್ಕೆ ಕಾಲಿಡುತ್ತಾಳೆ. ಆದರೂ ದುರಾದೃಷ್ಟ ಅವಳನ್ನು ಬಿಡದೆ ಆ ಮನೆಯಿಂದ ಹೊರಗೆ ಹೋಗುವಂತೆ ಮಾಡುತ್ತದೆ. ಇದಕ್ಕೆ ಕಾರಣವಾದ ಸನ್ನಿವೇಶವನ್ನು ಓದಿಯೇ ತಿಳಿಯಬೇಕು. ಹೀಗೆ ಅವಳು ಎಲ್ಲೆಲ್ಲೋ ಅಲಿಯುತ್ತಾ ಮಗುವಿಗೆ ಜನ್ಮವಿಟ್ಟು ಸಾಯುತ್ತಾಳೆ ಅವಳೇ ಲಕ್ಷ್ಮಿ.. ಎರಡನೇ  ಸಾಕು ಮಗಳು...
ಸಾಯುವ ಮುನ್ನ ನಾಗಮ್ಮ ಚಿತ್ರಹಳ್ಳಿಯ ಪಂಡಿತರಿಗೆ ತನ್ನ ಮಗಳನ್ನು ಒಪ್ಪಿಸಿ ಸಾಯುತ್ತಾಳೆ. ಆ ಮಗುವನ್ನು ಕರೆದುಕೊಂಡು ಹೋದಾಗ ಪಂಡಿತರು ತನ್ನ ಹೆಂಡತಿ ಸುಂದರಮ್ಮ ಮತ್ತು ಮಗಳು ರಾಧೆಯಿಂದ ಏನೇನು ನೋವು ಅನುಭವಿಸುತ್ತಾರೆ... ಕೊನೆಗೆ ಅವರು ತಮ್ಮ ಸಾಕು ಮಗಳಿಗಾಗಿ ತೆಗೆದುಕೊಂಡ ನಿರ್ಧಾರ ಎಲ್ಲವೂ ಓದುಗರ ಮನ ಮುಟ್ಟುತ್ತದೆ... ಒಂದು ಸಲ ಓದಬಹುದಾದ ಕಾದಂಬರಿ.

Friday, 2 December 2016

ಶಾಂತಲಾ







ಕೆ.ವಿ ಅಯ್ಯರ್ ಅವರ "ಶಾಂತಲಾ" ಹೆಸರಿನಷ್ಟೇ ಸುಂದರ. ಈ ಕೃತಿ ಓದಿದ ಪ್ರತಿಯೊಬ್ಬರೂ ಹೇಳಿರುವುದು ಬೇಲೂರು ಹಳೇಬೀಡು ನೋಡಬೇಕಂದು ನಾನು ಇದಕ್ಕೆ ಹೊರತಲ್ಲ. ಇಲ್ಲಿ ಪ್ರತಿಯೊಂದು ಸಂಬಂಧಗಳ ಸುಂದರ ಚಿತ್ರಣವಿದೆ. ನನಗೆ ಈ ಪುಸ್ತಕ ಓದಿದ್ದಾಗಿನಿಂದ ಅಲ್ಲಿ ಚಿತ್ರಿತವಾಗಲಿರುವ ಹೊಯ್ಸಳೇಶ್ವರ-ಶಾಂತಲೇಶ್ವರ ತುಂಬಾ ಕಾಡುತ್ತಿದೆ ಎಂದು ನೋಡುವೆನೋ ಅನಿಸುತ್ತಿದೆ. ಈಗಾಗಲೇ ಶಾಂತಲಾ ಓದಿದ ಪ್ರತಿಯೊಬ್ಬರೂ ಕೂಟದಲ್ಲಿ ಒಳ್ಳೆಯ ವಿಮರ್ಶೆಗಳನ್ನು ಬರೆದಿರುವುದರಿಂದ ನಾನು ಹೆಚ್ಚಾಗಿ ಹೇಳುವ ಅವಶ್ಯಕತೆಯಿಲ್ಲ ಎಂದು ಭಾವಿಸುತ್ತೇನೆ.
ಇಲ್ಲಿ ನಾ ಕಂಡ ಅಂಶಗಳೆಂದರೆ ವಿಷ್ಣುವರ್ಧನ ಆಳ್ವಿಕೆಯ ವೀರಜೀವನ, ರಾಜಮಾತೆ ರಾಜಪತ್ನಿಯರ ಜೀವನದ ಸಂಕಟ,ಸುಖ ದುಃಖ, ತಾಯಿ ಮಕ್ಕಳ, ರಾಜ ಮಂತ್ರಿ, ಇತ್ಯಾದಿ ಸಂಬಂಧಗಳ ಸೊಗಸು ಅಮೋಘವಾಗಿ ಚಿತ್ರಿತವಾಗಿದೆ. ಸಾಧ್ಯವಾದಷ್ಟು ಬೇಗ ಶಾಂತಲದಲ್ಲಿ ಬಂದಿರುವ ಅಷ್ಟು ಸ್ಥಲಗಳಿಗೆ ಹೋಗಿಬರುವೆ. ಶಾಂತಲೆಯ ಬಗ್ಗೆ ವಿಮರ್ಶೆಯ ಬದಲು ಒಂದು ಕವನದ ರೂಪದಲ್ಲಿ ಬರೆಯಲು ಪ್ರಯತ್ನಿಸದ್ದೇನೆ.
ನಾಟ್ಯಸರಸ್ವತಿ ಶಾಂತಲೆ ನೀನೆಷ್ಟು ಕೋಮಲೆ
ಅಂದದಲ್ಲಿ ಅಪ್ಸರೆ ಗುಣದಲ್ಲಿ ಶಾರದೆ
ನಿನ್ನ ಓದಿದ ನನ್ನ ಮನತುಂಬಾ ಕಾಡುತಿದೆ ನಿನ್ನ ಕಲೆ
ಕಾದಿರುವೆ ನೋಡಲು ನಿನ್ನ ಸೌಂದರ್ಯದ ಸೆಲೆ
ಬೇಗನೆ ಕರೆಸಿಕೋ ಸುಂದರ ಶಿಲೆಗಳ ನಾಡಿಗೆ

ನಿಕ್ಷೇಪ

ಒಂದು ವಾರ ಊರಲ್ಲಿ ಇಲ್ಲ ಎಂದು ಕಳೆದ ವಾರ ಯಾವುದೇ ಪುಸ್ತಕ ತೆಗೆದುಕೊಂಡಿರಲಿಲ್ಲ. ನಾನು ಪುಸ್ತಕ ಬಿಟ್ಟರು ಪುಸ್ತಕ ನನ್ನ ಬಿಡುವುದಿಲ್ಲ :P . ನನ್ನ ಅಮ್ಮ ಗ್ರಂಥಾಲಯದಿಂದ ೩ ಪುಸ್ತಕ ತಂದಿದ್ರು. ಅದರ ಮೇಲೆ ಮತ್ತೆ ನನ್ನ ಕಣ್ಣು ಬಿದ್ದು ಉಷಾ ನವರತ್ನರಾಮ್ ಅವರ "ನಿಕ್ಷೇಪ". ಇದರ ಹೆಸರೇ ಹೇಳುವಂತೆ ಒಂದು ನಿಧಿಯ ಸುತ್ತ ಹೆಣೆದಿರುವ ಕಥೆ. ಕುತೂಹಲ, ಮೂಢನಂಬಿಕೆ, ದೇವರ ಹೆಸರಲ್ಲಿ ಮನುಷ್ಯರು ಮಾಡುವ ಮೋಸ, ದುರಾಸೆ ಮತ್ತು ಅಂತವರ ವಿರುದ್ಧ ಪ್ರಕೃತಿ ಕೊಟ್ಟ ಶಿಕ್ಷೆ ಎಲ್ಲವೂ ಈ ಕಾದಂಬರಿಯಲ್ಲಿದೆ.
ಲೇಖಕಿ ಮುನ್ನುಡಿಯಲ್ಲಿಯೇ ಹೇಳಿರುವಂತೆ ಈ ಕೃತಿಯಲ್ಲಿರುವುದು ಅರ್ಧ ಸತ್ಯ ಅರ್ಧ ಮಿಥ್ಯಾ. ಇಲ್ಲಿಯ ನಾಯಕ ನಟರಾಜ ಅಮ್ಮ ಅಪ್ಪನ ಕುಟುಂಬಗಳ ನಡುವೆ ನಡೆದ ಕಲಹಗಳಿಂದ ಹುಟ್ಟಿದಾಗಿನಿಂದ ಅವನ ತಾತನ ಕುಟುಂಬದಿಂದ (ಅಮ್ಮನ ಅಪ್ಪ) ದೂರಾಗಿ ಬೆಳೆಯುತ್ತಾನೆ. ನಂತರ ಅವರ ತಾತನಿಗೆ ಆರೋಗ್ಯದಲ್ಲಿ ಏರುಪೇರಾಗಿ ಇನ್ನೇನು ಕೊನೆಯುಸಿರು ಎಳೆಯುವ ಸ್ಥಿತಿಯಲ್ಲಿದ್ದಾಗ ಅವರ ಅಮ್ಮ ವಿಜಯಾ ಮಗನಿಗೆ ಸಂಧಾನ ಮಾಡಿ ಹಳೆಯ ಘಟನೆಗಳನ್ನೆಲ್ಲ ವಿವರಿಸಿ ತಾತನನ್ನು ನೋಡಿಕೊಂಡು ಬರಲು ಮೊದಲ ಬಾರಿಗೆ ಕಳಿಸುತ್ತಾಳೆ. ಈ ಸಂದರ್ಭದಲ್ಲಿ ನಟರಾಜನ ನೆನಪಿನಂಗಳದಲ್ಲಿ ಬರುವ ಅಂಶಗಳು ತುಂಬಾ ಕುತೂಹಲಕಾರಿಯಾಗಿದೆ. ಅವನು ವಿಂದೂರಿಗೆ ಪ್ರಯಾಣಿಸುತ್ತಾನೆ. ಅವನ ಜೊತೆ ಅವನ ಚಿಕಮ್ಮನ ಮಕ್ಕಳು ಜೊತೆಯಾಗುತ್ತಾರೆ ಅಲ್ಲಿಂದ ಶುರುವಾಗುತ್ತದೆ ನಿಷೇಪದ ಅನ್ವೇಷಣೆ.
ಅಲ್ಲಿ ಹೋದಾಗ ಆಶ್ಚರ್ಯಕರ ಸಂಗತಿಗಳು ನಡೆಯುತ್ತವೆ ಅದನ್ನು ನಾನಿಲ್ಲಿ ಹೇಳುವುದಕ್ಕಿಂತ ಓದುಗರು ಓದಿದಾಗಲೇ ಚೆನ್ನಾಗಿ ಅನಿಸುವುದು. ತಾತನ ವಿಂದೂರಿನ ಬಂಗಲೆಯ ರಹಸ್ಯದಿಂದ ಕಲ್ಲೂರಿನ ಸಂಶೋಧನೆವರೆಗೂ ನಟರಾಜನ ಪಾತ್ರ ಮನಸೆಳೆಯುತ್ತದೆ. ಜೊತೆಗೆ ಕಲ್ಲೂರಿನ ಮುಗ್ಧ ಹುಡುಗಿ ಬೆಳ್ಳಿ, ಅವರ ತಾಯಿ ಮುದ್ದಮ್ಮ, ನಿಧಿಗಾಗಿ ವಾಮಾಚಾರ, ದೇವರ ಪೂಜೆ ಮಾಡುವ ದುಷ್ಟರು ಹೀಗೆ ಪ್ರತಿಯೊಂದು ಪಾತ್ರವೂ ತುಂಬಾ ಚೆನ್ನಾಗಿವೆ. ಅಲ್ಲಲ್ಲಿ ಪ್ರೇಮ,ಪ್ರೀತಿ ಎಂಬ ಅನುರಾಗದ ಅಂಶಗಳು ಸಹ ಚೆನ್ನಾಗಿ ಚಿತ್ರಿಸಲಾಗಿದೆ. ಒಮ್ಮೆ ಓದಿದರೂ ಮತ್ತೆ ಮತ್ತೆ ಓದಬೇಕೆನಿಸುತ್ತದೆ ಕಾರಣ ಅಲ್ಲಿ ಚಿತ್ರಿಸಲಾಗಿರುವ ಕಲ್ಲೂರಿನ ಸುಂದರ ನಿಸರ್ಗ, ಗುಡ್ಡ ಬೆಟ್ಟ , ದೇವಸ್ಥಾನಗಳ ಚಿತ್ತಾರ ಎಲ್ಲವೂ ಚೆನ್ನಾಗಿದೆ. ಕುತೂಹಲವನ್ನೇ ಮುಖ್ಯವಾಗಿರುವ ರೋಚಕ ಕಾದಂಬರಿ ಈ "ನಿಕ್ಷೇಪ".
ನಿಕ್ಷೇಪ ಈ ಕೂಟದಲ್ಲಿಲ್ಲದಿದ್ದರೂ ಓದಲು ಉತ್ತೇಜನ ಕೊಟ್ಟು ನನ್ನ ಅಭಿಪ್ರಾಯವನ್ನು ಹಂಚಿಕೊಳ್ಳಲು ಅನುಮತಿ ಕೊಟ್ಟ ಈ ಕೂಟದ ಅಡ್ಮಿನ್ಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ ಸಾಧ್ಯವಾದರೆ ಇದನ್ನು ಅಪ್ಲೋಡ್ ಮಾಡಿ ಎಂದು ಕೋರುತ್ತೇನೆ. ಒಮ್ಮೆ ಓದಿ ಆನಂದಿಸಬಹುದಾದ ಕುತೂಹಲಕಾರಿ ಕಾದಂಬರಿ.

ದೇವರ ಹುಚ್ಚು




ಜೋಗಿ ಅವರ "ದೇವರ ಹುಚ್ಚು" ಮುಗಿದು ೩ ದಿನವಾದರೂ ಕೆಲಸದ ಒತ್ತಡದಿಂದಾಗಿ ನನ್ನ ಅಭಿಪ್ರಾಯವನ್ನು ಹಂಚಿಕೊಳ್ಳಲು ಆಗಿರಲಿಲ್ಲ. :( ಇದೊಂದು ಆಸ್ತಿಕ ಮತ್ತು ನಾಸ್ತಿಕರ ನಡುವೆ ನಡೆಯುವ ವಾದ ವಿವಾದಗಳ ಚಿತ್ರಣ ಎಂದು ಒಮ್ಮೆ ಎನಿಸಿದರೆ ಮತ್ತೊಮ್ಮೆ ಮೇಲ್ಜಾತಿ ಮತ್ತು ಕೀಳುಜಾತಿ ಎನ್ನುವ ಜಾತಿ ಪದ್ಧತಿಗಳಲ್ಲಿ ಒದ್ದಾಡುವ ಜನಗಳ ಬದುಕುವ ಚಿತ್ರಣ ಎಂದು ಎನಿಸುವುದು. "ದೇವರ ಹುಚ್ಚು" ಎನ್ನುವ ಹೆಸರೇ ನನ್ನನ್ನು ಈ ಪುಸ್ತಕ ಆಕರ್ಷಿಸಲು ಕಾರಣ.

ಈ ಕಥೆಯ ಮುಖ್ಯ ಪಾತ್ರಧಾರಿ ರಂಗನಾಥ, ರಾಜಶೇಖರ, ಅಚ್ಯುತ, ಬಾಳಣ್ಣ ಇತ್ಯಾದಿ. ಈ ಕಾದಂಬರಿಯಲ್ಲಿ ಒಟ್ಟು ೩ ಭಾಗಗಳಿದ್ದು ಮೊದಲ್ನೇ ಭಾಗದಲ್ಲಿ ರಂಗನಾಥನ ಸಾವು, ಎರಡನೇ ಭಾಗದಲ್ಲಿ ಅವನ ದೇವರ ಬಗ್ಗೆ ಇದ್ದ ವಿತಂಡ ವಾದಗಳು, ಮೂರನೇ ಭಾಗದಲ್ಲಿ ವಿಚಿತ್ರ ಎನಿಸುವ ರಂಗನಾಥನ ಸಾವಿನ ಕಾರಣಗಳು ಹೀಗೆ ಓದುಗರಿಗೂ ಕೆಲವೊಮ್ಮೆ ಹುಚ್ಚು ಎನಿಸುವಂತೆ ಈ ಕಥೆಯನ್ನು ಬರೆದಿದ್ದಾರೆ. ಈ ಕಥೆಯ ಬಗ್ಗೆ ಹೆಚ್ಚು ಬರೆಯಲು ಕಷ್ಟ ಎನಿಸುವುದು ಏಕೆಂದರೆ ಇದೊಂದು ಭಕ್ತಿ, ನಂಬಿಕೆ, ಅಪನಂಬಿಕೆ, ಜಾತೀಯತೆ ಇತ್ಯಾದಿ ವಾಸ್ತವಗಳನ್ನೇ ತುಂಬಿರುವ ಪುಸ್ತಕ. ಓದುತ್ತಾ ಹೋದಂತೆ ಕೆಲವೊಮ್ಮೆ ನೀರಸ ಎನಿಸಿದ್ದು ಉಂಟು. ಆದರೆ ಒಮ್ಮೆ ಓದಬಹುದಾದ ಒಳ್ಳೆಯ ಪರಿಕಲ್ಪನೆ ಇರುವ ಪುಸ್ತಕ ಎನ್ನುವುದು ನನ್ನ ಅಭಿಪ್ರಾಯ.

ಕ್ರೀಮ್ ಆಫ್ ಕೈಲಾಸಂ

ರಂಗಭೂಮಿಯ ನಾಟಕಾಕಾರ ಮತ್ತು ಹಾಸ್ಯಗಾರ ಟಿ.ಪಿ.ಕೈಲಾಸಂ ಅವರ ಬಗ್ಗೆ 'ಕ್ರೀಮ್ ಆಫ್ ಕೈಲಾಸಂ' ಪುಸ್ತಕ ಓದಿದೆ. ಬಿ.ಎಸ್. ಕೇಶವರಾವ್ ಈ ಪುಸ್ತಕದ ಸಂಪಾದಕರು. ಒಂದು ಸಲ ಓದೋಕೆ ಕೂತರೆ ಸಾಕು ಮತ್ತೆ ನೀವು ಪೂರ್ತಿ ಓದದೆ ಎದ್ದೇಳುವುದಿಲ್ಲ. ಯಾಕೆಂದರೆ ಕೈಲಾಸಂ ಅವರ ನಾಟಕದಲ್ಲಿ ಬರುವ ಸನ್ನಿವೇಶಗಳು, ಸಂಭಾಷಣೆ, ಕೈಲಾಸಂ ಅವರ ಹಾಸ್ಯಭರಿತ ಮಾತುಗಳು, ಬದುಕು ಎಲ್ಲವನ್ನೂ ಸಂಪೂರ್ಣವಾಗಿ ಈ ಪುಸ್ತಕದಲ್ಲಿ ತೆರೆದಿಡಲಾಗಿದೆ. ಕೈಲಾಸಂ ಅವರ ಕೆಲವು ಮಾತುಗಳನ್ನು ಓದುವಾಗಂತೂ ಹೊಟ್ಟೆ ಹುಣ್ಣಾಗುವಷ್ಟು ನಗುವುದಂತೂ ಖಂಡಿತ. ಕೈಲಾಸಂ ಅವರ ಇಡೀ ಬದುಕಿನ ಬಗ್ಗೆ ತುಂಬಾ ಚೆನ್ನಾಗಿ ನಿರೂಪಿಸಲಾಗಿದೆ. ಚಾಮರಾಜಪೇಟೆಯ ಕೆ.ವಿ ಅಯ್ಯರ್ ಅವರ ವ್ಯಾಯಾಮ ಶಾಲೆ ಪಕ್ಕದ ಇನ್ನೊಂದು ಕೋಣೆಯಲ್ಲಿ ವಾಸಿಸುತ್ತಿದ್ದ ಕೈಲಾಸಂ ಕುದುರೆ, ಹಸುಗಳನ್ನು ಕಟ್ಟುತ್ತಿದ್ದ ಒಂದು ಬದಿಯಲ್ಲಿ ತನ್ನ ರೂಮನ್ನು ಆರಿಸಿಕೊಂಡಿದ್ದು, ಅದಕ್ಕೆ 'ನೂಕ್' ಅಂತ ಹೆಸರು ನೀಡಿದ್ದು, ಹೆಗ್ಗಣ-ಇಲಿಗಳ ಬಿಲವಾಗಿದ್ದ ಆ ಸ್ಥಳದಲ್ಲಿ ಕುಳಿತು ಕೈಲಾಸಂ 'ನಾಟಕ'ಗಳನ್ನು ಬರೆದಿದ್ದು ಎಲ್ಲವನ್ನೂ 'ಕ್ರೀಂ ಆಫ್ ಕೈಲಾಸ'ದಲ್ಲಿ ಹೇಳಲಾಗಿದೆ. ಒಟ್ಟಿನಲ್ಲಿ ಕೈಲಾಸಂ ಬದುಕನ್ನೇ ನಮ್ಮೆದುರು ಆ ಪುಟ್ಟ ಪುಸ್ತಕ ಕಟ್ಟಿಕೊಡುತ್ತದೆ.

ಕೈಲಾಸಂ ಅವರ ಬಗ್ಗೆ ಸಾಕಷ್ಟು ಕೇಳಿದ್ದೆ ಆದರೆ ಅವರ ನಾಟಕಗಳ ಬಗ್ಗೆ ಆಗಲಿ ಅಥವಾ ಅವರ ಬಗ್ಗೆ ಆಗಲಿ ಎಲ್ಲೂ ಓದಿರಲಿಲ್ಲ ಆದರೆ ಈ ಪುಸ್ತಕ ಓದಿದ ಮೇಲೆ ಅವರ ಹಾಸ್ಯ ಪ್ರವೃತ್ತಿ, ಉನ್ನತ ಮಟ್ಟದ ಕುಟುಂಬ, ಓದು, ಕೆಲಸ ಎಲ್ಲಾ ಇದ್ದರೂ ಅವರು ಅದರ ಪ್ರಭಾವವಕ್ಕೆ ಒಳಗಾಗದೆ ಸದಾ ನಿಗರ್ವಿಯಾಗಿ ಬದುಕಿದ ರೀತಿ ನನ್ನನ್ನು ತುಂಬಾ ಗಮನ ಸೆಳೆಯಿತು. ಹಾಗಾಗಿ ಅವರ ಮೇಲಿನ ಆಸಕ್ತಿಯಿಂದಾಗಿ ಕೈಲಾಸಂ ಅವರ ಬಗ್ಗೆ ಹೆಚ್ಚು ತಿಳಿಯುವ ಆಸೆಯಿಂದ ಅಂತರಜಾಲದಲ್ಲಿ ನಾನು ತಿಳಿದ ಕೆಲವು ಅಂಶಗಳನ್ನು ಇಲ್ಲಿ ಹಂಚಿಕೊಳ್ಳಲು ಇಚ್ಚಿಸುತ್ತೇನೆ.

ತ್ಯಾಗರಾಜ ಪರಮಶಿವ ಕೈಲಾಸಂರ ಪೂರ್ವಜರು ತಮಿಳುನಾಡಿನ ತಂಜಾವೂರು ಕಡೆಯವರು. ದಿವಾನ್ ಶೇಷಾದ್ರಿ ಅಯ್ಯರ್ ಕಾಲದಲ್ಲಿ ಮೈಸೂರಿಗೆ ಬಂದು ನೆಲೆಸಿದವರು.ಅವರ ತಂದೆ ಪರಮಶಿವ ಅಯ್ಯರ್ ಮೈಸೂರಿನ ಛೀಫ್ ಕೋರ್ಟಿನ ಜಡ್ಜಗಿದ್ದರು. ಇಂಥಾ ದೊಡ್ಡ ಮನೆತನದಲ್ಲಿ ಜನ್ಮ ತಳೆದವರು ಕೈಲಾಸಂ. ಕೈಲಾಸಂ ಬಾಲ್ಯದಲ್ಲಿ ಶ್ರೀಮಂತಿಕೆಯಲ್ಲಿ ಬೆಳೆದರು. ಮನೆಯಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲ. ಹಾಗೆಂದು ಶಿಸ್ತು ಇರಲಿಲ್ಲ ಎನ್ನುವಂತಿಲ್ಲ ಕೈಲಾಸಂಗೆ ತಾಯಿಯಲ್ಲಿ ತುಂಬಾ ಪ್ರೀತಿ, ತಂದೆ-ದೊಡ್ಡಪ್ಪಂದಿರನ್ನು ಕಂಡರೆ ಪ್ರೀತಿಯೊಡನೆ ಸ್ವಲ್ಪ ಭಯ. ಅವರು ದೊಡ್ಡವರಾದಮೇಲೂ ತಂದೆ-ದೊಡ್ಡಪ್ಪ ಎಂದರೆ ಬಹು ಗೌರವದಿಂದ ನಡೆದುಕೊಳ್ಳುತ್ತಿದ್ದರು. ತಂದೆ ಮನೆಯಲ್ಲಿದ್ದಾಗ ತಮ್ಮ ಸ್ನೇಹಿತರು ಬಂದರೆ ಕೈಲಾಸಂ ಹೆಜ್ಜೆ ಶಬ್ದವಾಗದಂತೆ ಬನ್ನಿ ಎಂದು ಸನ್ನೆ ಮಾಡುವರು. ಅವರ ಬಗ್ಗೆ ಓದಿದ್ದೆಲ್ಲವನ್ನು ಬರೆಯುವುದು ಕಷ್ಟ ನನಗೆ ತಿಳಿದಷ್ಟು ಹೇಳಿದ್ದೇನೆ.

ಕೊನೆಯದಾಗಿ ಒಂದೆರಡು ಮಾತುಗಳು, ಕನ್ನಡ ಸಾಹಿತ್ಯ ಲೋಕದಲ್ಲಿ, ಅದರಲ್ಲೂ, ನಾಟಕರಂಗದಲ್ಲಿ , ತಮ್ಮದೇ ಆದ ಛಾಪು ಮೂಡಿಸಿದ ಕೈಲಾಸಂ ತಮ್ಮ ಬದುಕಿನ ಶೈಲಿಯಿಂದ, ಹಾಸ್ಯಮಯ ಮಾತಿನ ಮೋಡಿಯಿಂದ, ಪ್ರತಿಭೆಯಿಂದ ,ಬಹುವಿಷಯಗಳಲ್ಲಿ ವಿದ್ವತ್ತಿನಿಂದ , ದಂತಕಥೆಯೇ ಆಗಿಹೋಗಿದ್ದಾರೆ. ಅವರು ಇಲ್ಲವಾಗಿ ಆರು ದಶಕಗಳು ಮೀರಿದ್ದರೂ, ಇಂದಿಗೂ ಅವರ ಬಗೆಗಿನ ಕುತೂಹಲ, ಆದರಾಭಿಮಾನ , ಕನ್ನಡಿಗರಲ್ಲಿ ಜಾಗೃತವಾಗಿದೆ.

ಏಳು ರೊಟ್ಟಿಗಳು






ಕೆ ಎನ್ ಗಣೇಶಯ್ಯನವರ "ಏಳು ರೊಟ್ಟಿಗಳು" ಹೆಸರು ಕೇಳಿದಾಗ ನನ್ನಮ್ಮ ದಿನ ತಟ್ಟುವ ರೊಟ್ಟಿಗಳು ನೆನಪಾದವು. ಆದರೆ ನನ್ನಮ್ಮನ ರೊಟ್ಟಿಯಲ್ಲಿ ಬೆರೆತಿರುವ ಪ್ರೀತಿ ಮನಸಿಗೂ ಮತ್ತು ಶಕ್ತಿ ದೇಹಕ್ಕೂ ನಾಟಿದರೆ ಗಣೇಶಯ್ಯನವರ "ಏಳು ರೊಟ್ಟಿಗಳಲ್ಲಿ" ಅಪಾರ ಜ್ಞಾನ , ಸಂಶೋಧನೆ, ಇತಿಹಾಸ, ಕುತೂಹಲ ಎಲ್ಲವೂ ಮಿಶ್ರಣಗೊಂಡು ಓದುಗರ ಮನಸು ಮತ್ತು ಮೆದುಳನ್ನು ಕಾಡುತ್ತದೆ. ಇದು ಕಿರುಕಾದಂಬರಿಯಾದರೂ ಇಲ್ಲಿ ತಿಳಿಯುವ ವಿಚಾರಗಳು ಅಪಾರ.

ಇನ್ನು ಕಾದಂಬರಿಯ ಬಗ್ಗೆ ಹೇಳುವುದಾದರೆ ಹೈದರಾಯಬಾದನ್ನು ಆಳಿದ ನಿಜಾಮ,ಆತನ ಆಳ್ವಿಕೆಯಲ್ಲಿ ಸಂಪಾದಿಸಿದ ಲೆಕ್ಕವೇ ಸಿಗದಷ್ಟಿದ್ದ ಅಪಾರ ಚಿನ್ನ ಮತ್ತು ಅಮೂಲ್ಯ ವಸ್ತುಗಳೊಂದಿಗೆ ದೇಶದಿಂದ ಪರಾರೈಯಾಗಲು ಯತ್ನಿಸಿದಾಗ ಭಾರತ ಸರಕಾರದ ಬಿಗಿ ಹಿಡಿತದಿಂದ ಅವನ ಪ್ರಯತ್ನ ಸಫಲವಾಗುವುದಿಲ್ಲ. ಆನಂತರ ಆ ಅಪಾರ ನಿಧಿ ಏನಾಯ್ತು ಎನ್ನುವುದರ ಸುತ್ತಾ ಹೆಣೆದಿರುವ ಕಥೆಯೇ "ಏಳು ರೊಟ್ಟಿಗಳು". ಈ ಕಥೆ ಬರೆಯುವಾಗ ಗಣೇಶಯ್ಯನವರು ಹೈದರಬಾದ್ ಇತಿಹಾಸದ ಬಗ್ಗೆ ಮಾಡಿರುವ ಅಧ್ಯಾನ ಶ್ಲಾಘನೀಯ. ನಿಜಾಮರ ನಿಜವಾದ ಕಥೆ ತಿಳಿಯಲು ಹೈದರಾಬಾದ್ ಗಲ್ಲಿ ಗಲ್ಲಿ ಸುತ್ತಿ ಘಟನೆಗಳನ್ನು ಕೂಡಿಹಾಕಿ ಮತ್ತು ಭಾರತದಲ್ಲಿ ನಿಷೇದಿತ ಪುಸ್ತಕದ ಜೆರಾಕ್ಸ್ ಪ್ರತಿ ಅಧ್ಯಯನ ಮಾಡಿ ಈ ಸುಂದರವಾದ ರೋಚಕ ಕಾದಂಬರಿಯನ್ನು ಬರೆದ್ದಿದ್ದಾರೆ.

ಇಲ್ಲಿನ ಇತಿಹಾಸ, ಚಿತ್ರನಕ್ಷೆಗಳ ಮಾಹಿತಿ, ಕುತೂಹಲಕಾರಿ ನಿರೂಪಣೆ ಎಲ್ಲವೂ ಗಣೇಶಯ್ಯನವರ ವಿಶಿಷ್ಟ ಶೈಲಿಯ ಬರವಣಿಗೆಯನ್ನು ಎತ್ತಿ ಹಿಡಿಯುತ್ತವೆ. ಈ ಪುಸ್ತಕದ ಮಧ್ಯೆ ಬರುವ ಅರಮನೆ ಚಿತ್ರಗಳು, ನಿಜಾಮರ ಆಳ್ವಿಕೆಯಲ್ಲಿ ಬಂದಿರುವ ತಿಜೋರಿ, ಉಡುಪು, ಬಕಲ್ಗಳ ಅವಶೇಷಗಳು ಎಲ್ಲವೂ ನೋಡಿದರೆ ಹೈದೆರಾಬಾದ್ಗೆ ಹೋಗಿ ಎಲ್ಲವನ್ನು ನೋಡಿ ಕೆಲವೊಂದಕ್ಕೆ ಯಾಕೆ ನಿಷೇಧ ಮಾಡಿದ್ದಾರೆ ಎನ್ನುವುದನ್ನು ತಿಳಿದು ಬರಬೇಕೆಂಬ ಆಸೆ ಬಾರದಿರುವದಿಲ್ಲ. ಇದೆಲ್ಲದರ ಜೊತೆಗೆ ಪುಸ್ತಕಡಾ ಕೊನೆಯಲ್ಲಿ "ಈ ರೊಟ್ಟಿಗಳನ್ನು ತಟ್ಟುವಾಗ " ಎಂಬ ಅಂಕಣದಲ್ಲಿ ಲೇಖಕರು ಪಟ್ಟ ಶ್ರಮ ಮಾಹಿತಿ ಸಂಗ್ರಹಿಸಿದ ಕ್ರಮ ಜೊತೆಗೆ ಅವರ ಕುಟುಂಬದವರ ಸಹಕಾರ ಎಲ್ಲವನ್ನೂ ಮನಮುಟ್ಟುವಂತೆ ಹಂಚಿಕೊಂಡಿದ್ದಾರೆ. "ಏಳು ರೊಟ್ಟಿಗಳನ್ನು" ತಿಂದಮೇಲೂ ಇನ್ನು ಒಂದಿಷ್ಟು ರೊಟ್ಟಿಗಳು ಇರಬಾರದಿತ್ತೇ ಎಂದೆನಿಸದೆ ಇರದು.

ಕನಕ ಮುಸುಕು


ಕೆ ಎನ್ ಗಣೇಶಯ್ಯನವರ ಕಾದಂಬರಿಯನ್ನು ನೆನ್ನೆ ಸಂಜೆ ಆರಂಭಿಸಿದೆ ಇವತ್ತು ನಾಳೆವರೆಗೆ ಮುಗಿಯಬಹುದು ಎಂಬ ನನ್ನ ಊಹೆ ಸುಳ್ಳಾಯಿತು, ಕಾರಣ ಕಾದಂಬರಿಯ ರೋಚಕತೆಗೆ ಸೋತು ಇಂದು ಬೆಳಗ್ಗೆ ವಾಹನ ದಟ್ಟಣೆಯಲ್ಲಿ ಸಿಕ್ಕ ನಾನು ಕಛೇರಿಗೆ ಬರುವುದೊರಗೆ ಮುಗಿಸಿಬಿಟ್ಟಿದ್ದೆ!!!! ಹಿಂದೆ ಓದಿದ "ಏಳು ರೊಟ್ಟಿಗಳು", "ಶಿಲಾಕುಲವಲಸೆ", "ಮೂಕಧಾತು" ಇತ್ಯಾದಿಗಳು ಎಷ್ಟು ರೋಚಕ ಎನಿಸಿದವೋ ಅದ್ಕಕಿಂತ ಹೆಚ್ಚು ಪ್ರಿಯವೆನಿಸಿತು ನನಗೆ ಈ "ಕನಕ ಮುಸುಕು".
ಲೇಖಕರೇ ಹೇಳುವ ಹಾಗೆ ಈ ಕೃತಿಯ ಮೂಲ ಆಧಾರ ಅವರ ಪತ್ನಿ ಎಡಿನ್ಬರೋ ವಿಶ್ವವಿದ್ಯಾಲಯಯದಲ್ಲಿ ಸೋಮನಾಥಪುರದ ದೇವಾಲಯದಲ್ಲಿರುವ ಮುಸುಕಿನ ಜೋಳದಂತಹ ಕೆತ್ತನೆಗಳ ಬಗ್ಗೆ ಕೈಗೊಂಡ ಸಂಶೋಧನೆಯಲ್ಲಿ ಹೊಳೆದ ಒಂದು ಕಾಲ್ಪನಿಕ ತಂತು. ಅವರ ಪತ್ನಿಯಲ್ಲಿ ಲೇಖಕರು ಕಂಡ ಮಗಳಿಗಾಗಿ ಪರಿತಪಿಸುವಿಕೆ ಇದ್ದರೂ ಸಂಶೋಧನೆಯಲ್ಲಿನ ಆಸಕ್ತಿಯನ್ನು ಉಳಿಸಿಕೊಳ್ಳಲು ತುಡಿಯುವ ಒಂದು ಹೆಣ್ಣಿನ ವ್ಯಕ್ತಿತ್ವವೇ ಈ ನಾಯಕಿ ಪೂಜಾ.

ಇನ್ನು ಕಥೆಯ ಬಗ್ಗೆ ಹೇಳುವುದಾದರೆ, ಚಂದ್ರಗುಪ್ತ ಮೌರ್ಯ ಜೈನ ಸನ್ಯಾಸಿಯಾಗಿ ತನ್ನ ರಾಜ್ಯ ತ್ಯಜಿಸಿ ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೆ ಜೈನ ಮತದ ಪ್ರಚಾರಕನಾಗಿ ಶ್ರವಣಬೆಳಗೊಳಕ್ಕೆ ಬರುತ್ತಾನೆ. ಹಲವಾರು ಶಾಸನಗಳು ಹೇಳಿರುವಂತೆ ಚಂದ್ರಗುಪ್ತ ಮೌರ್ಯನ ಜೊತೆ ಸುಮಾರು ೧೨೦೦೦ ಜೈನ ಮುನಿಗಳು ಬರುತ್ತಾರೆ!! ಯಾಕೆ? ಎನ್ನುವ ಕುತೂಹಲ ಕಾಡುತ್ತಲೇ ಇರುತ್ತದೆ ಇಂತಹ ಪ್ರಶ್ನೆಗಳು ಕೊನೆಗೆ ಕೈ ಮಾಡಿ ತೋರಿಸುವ ಉತ್ತರ ಸುಮಾರು ೫೦೦ ಟನ್ ಚಿನ್ನದ ಕಡೆಗೆ. ಈ ಚಿನ್ನವನ್ನು ಮುಸುಕಿನ ಜೋಳದ ತೆನೆಯ ರೂಪದಲ್ಲಿ ಮುಸುಕಿನ ಜೋಳದ ತೆನೆಗಳ ಜೊತೆಗೆ ಉತ್ತಮ camouflage ಮಾಡಿ ತರುತ್ತಾರೆ . ಹಾಗಾಗಿ ಕನಕ ಮುಸುಕು. ಇದರ ಜೊತೆಗೆ ಅಮೆರಿಕಾದ ಬೆಳೆಯೆಂದೇ ಪರಿಗಣಿಸಿರುವ ಮುಸುಕಿನ ಜೋಳದ ಬಗ್ಗೆಯೂ ಲೇಖಕರು ಸಾಕಷ್ಟು ಮಾಹಿತಿಗಳನ್ನು ಒದಗಿಸಿದ್ದಾರೆ.
ಚಂದ್ರಗುಪ್ತ ಮೌರ್ಯ ನಿಂದ ಶುರುವಾಗುವ ನಿಧಿಯ ರಹಸ್ಯ ಹೊಯ್ಸಳ ಸಾಮ್ರಾಜ್ಯ ದ ಶಾಂತಲೆಯಲ್ಲಿ ಕೊನೆಗೊಳ್ಳುತ್ತದೆ. ಇದರ ಜೊತೆಗೆ ಕೆ ವಿ ಅಯ್ಯರ್ ಅವರ "ಶಾಂತಲಾ" ಕೂಡ ಬಂದು ಹೋಗುತ್ತಾಳೆ, ಅಲ್ಲದೆ ಆಕೆಯ ಬಗ್ಗೆ ಗೊತ್ತಿರದ ಎಷ್ಟೋ ಮಾಹಿತಿಗಳನ್ನು ಸಹ ಲೇಖಕರು ಒದಗಿಸದ್ದಾರೆ. ಈ ನಿಧಿಯನ್ನು ಹುಡುಕಲು ಹೊರಡುವ ಕಾದಂಬರಿಯ ನಾಯಕಿ ಪೂಜಾ , ಆಕೆಯ ಗಂಡ, ಆಕೆಯ ಗುರು ಹಾಗೂ ಕೆಲವು ಮುಖ್ಯ ಕಾರಣಗಳಿಂದಾಗಿ ಇದನ್ನು ಮುಚ್ಚಿಡಲು ಪ್ರಯತ್ನಿಸುವ ಜೈನ ಧರ್ಮದ ಹಿರಿಯ ನಾಯಕರುಗಳು ಬ್ರಹ್ಮ ಪ್ರಕಾಶ ಹಾಗೂ ಇಷ್ಟೆಲ್ಲಾ ಸಾಲದು ಎಂಬಂತೆ ನಾಯಕಿಯನ್ನು ಬೆನ್ನು ಹತ್ತುವ ಅಂತರಾಷ್ಟ್ರೀಯ ಕಳ್ಳರ ಗುಂಪು ಇದೆಲ್ಲ ಕನಕ ಮುಸಕಿನ ರೋಚಕತೆ ಹೆಚ್ಚಿಸಿರುವ ಅಂಶಗಳು.
ಇನ್ನು ಮುನ್ನುಡಿಯಲ್ಲಿ ಹೇಳಿರುವಂತೆ ಕಾದಂಬರಿಯುದ್ದಕ್ಕೂ ವರ್ತಮಾನದ ವಾಸ್ತವ, ಚಾರಿತ್ರಿಕ ದಾಖಲೆಗಳ ಆಧಾರಪೂರಕ ಛಾಯಾಚಿತ್ರಗಳು, ಸಂಖ್ಯಾಸೂತ್ರಗಳು ಒಗಟುಗಳು, ನಿರ್ವಿವಾದಿತ ಆಕರ ಗ್ರಂಥಗಳ ಪ್ರಸ್ತಾವ ಎಲ್ಲವೂ ಮಿಳಿತವಾಗಿ ಕಥಾನಕ ಸಾಗುತ್ತದೆ. ಸೇಟಲೈಟ್ ಚಾನೆಲ್, ಸೆಲ್ ಫೊನೆ. ಈ-ಮೇಲ್, ನೆಟ್ ಚಾಟ್ ಗಳ ಈ ಯುಗದಲ್ಲಿ ಕಾದಂಬರಿಯ ನಾಯಕಿಯೂ ಅಂಥದ್ದೇ ಹೈ -ಟೆಕ್ ಸಂಪರ್ಕ ತಂತ್ರಗಳನ್ನು ಬಳಸಿ, ಚೂಟಿಯಾಗಿ ವಿದೇಶದಲ್ಲಿ ವಿಹರಿಸುತ್ತಾ ಸಂಶೋಧನೆಯನ್ನು ಮಾಡುತ್ತ ಭೂತ,ಭವಿಷ್ಯಗಳನ್ನು ಬೆಸೆಯುವ ನಾಯಕಿಯಾಗಿ ಪೂಜಾ ಎಲ್ಲರ ಮನಸೆಳೆಯುವುದಂತೂ ದಿಟ.
ಕಥೆಯ ಅಂತ್ಯ ಓದುಗರು ಊಹಿಸುವುದೇ ಒಂದು ಆದರೆ ಅಲ್ಲಿ ನಡೆಯುವುದೇ ಮತ್ತೊಂದು ಆ ಸ್ವಾರಸ್ಯವೇನು ಎಂಬುದನ್ನು ಓದುಗರು ಓದಿಯೇ ಅನುಭವಿಸಬೇಕು. ಇದನ್ನು ಓದಿದ ನಂತರ ಪ್ರತಿಯೊಬ್ಬರಿಗೂ ಸೋಮನಾಥಪುರವನ್ನು ಒಮ್ಮೆಯಾದರೂ ನೋಡಬೇಕಂಬ ಆಸೆ ಹುಟ್ಟದಿರದು ಎಂಬುದು ನನ್ನ ಭಾವ.

ಕಲ್ದವಸಿ






ಕೆ. ಎನ್ ಗಣೇಶಯ್ಯನವರ "ಕಲ್ದವಸಿ" ೩ ಕಥೆಗಳಿರುವ ಒಂದು ವಿಭಿನ್ನ ಕಥಾಸಂಕಲನ. ಇಲ್ಲಿನ ಕಥೆಗಳು ಪುರಾಣ ಶತಮಾನಗಳ ಮತ್ತು ವರ್ತಮಾನಗಳನ್ನೂ ಪರಸ್ಪರ ಬೆರೆಸಿ ಓದುಗರನ್ನು ಹೊಸದೊಂದು ವಿಚಾರಲಹರಿಗೆ ನೂಕುತ್ತವೆ. ಹೀಗೆ ವರ್ತಮಾನ ಮತ್ತು ಇತಿಹಾಸಗಳನ್ನು ಬೇರ್ಪಡಿಸದೆ ಉಂಟಾದ ಮಿಥ್ಯಜ್ಞಾನದಿಂದ ಪಾರಾಗಲು ಈ ಕಥೆಗಳು ಬೇರೆಬೇರೆ ಮನಸ್ಥಿತಿಯ ಓದುಗರಿಗೆ ಸಹಾಯ ಮಾಡುತ್ತವೆ.
ಲೇಖಕರು ಮುನ್ನುಡಿಯಲ್ಲಿ ಹೇಳಿರುವಂತೆ ಸಂಸ್ಕೃತಿ ಅನಾದಿ ಕಾಲದ್ದು, ಭವ್ಯ ಚರಿತ್ರೆ ಇರುವ ದೇಶವೆಂದು ಎಲ್ಲರೂ ಹೇಳಿಕೊಳ್ಳುತ್ತೇವೆ. ಆದರೆ ಚರಿತ್ರೆಯ ಘಟನೆಗಳ ಬಗ್ಗೆ ದಾಖಲಿಸುವ ರೂಢಿಯೇ ನಮ್ಮ ಭಾರತೀಯರ ರಕ್ತದಲ್ಲಿ ಕಂಡುಬರುವುದಿಲ್ಲವೆಂದು ನೋವಿನಿಂದ ಹೇಳಿದ್ದಾರೆ. ಪ್ರತಿಯೊಂದಕ್ಕೂ ನಾವು ಪರದೇಶದ ಚರಿತ್ರಕಾರರು ಬರೆದಿರುವ ಆಧಾರಗಳ ಮೊರೆ ಹೋಗಬೇಕು. ಉದಾಹರಣೆಗೆ ವಿಜಯನಗರದ ವಿವರಗಳಿಗಾಗಿ ಹುಯೆನ್ತ್ಸಾಗ್ ನ ಯಾತ್ರೆಯ ದಾಖಲೆ ನೋಡಬೇಕು, ಚಂದ್ರಗುಪ್ತನ ಬಗ್ಗೆ ತಿಳಿಯಬೇಕೆಂದರೆ ಹೆರೋಟೋಡ್ಸ್ ಬರಹವನ್ನು ನೋಡಬೇಕು, ಹೀಗೆ ಹತ್ತು ಹಲವಾರು ಉದಾಹರಣೆಗಳು ಕಂಡು ಬರುತ್ತವೆ.

ಇನ್ನು ಕಥೆಗಳಿಗೆ ಬರುವುದಾದರೆ ಮೊದಲನೇ ಕಥೆ "ಧರ್ಮನಿಧರ್ಮ"ದಲ್ಲಿ ಎರಡನೇ ಬುದ್ಧನೆಂದೇ ಪ್ರಸಿದ್ಧಿಯಾದ ನಾಗಾರ್ಜುನ ಆಚಾರ್ಯರ ಬಗ್ಗೆ ಬರೆದಿದ್ದಾರೆ. ಲೇಖಕರು ಮತ್ತು ಅವರ ಮಗಳು ನಾಗಾರ್ಜುನ ಕೊಂಡಕ್ಕೆ ಹೋದಾಗ ಅವರಿಗೆ ಸಿಕ್ಕ ಒಬ್ಬ ಇಂಗ್ಲಿಷ್ ಮಹಿಳೆಯ ಸಂಶೋಧನೆಯ ಅಂಶಗಳನ್ನು ಮತ್ತು ತಮ್ಮಿಬ್ಬರ ಸಂಶೋಧನೆ ಮಾಹಿತಿಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಇಲ್ಲಿ ಬರುವ ಎರಡನೇ ಬುದ್ಧನೆಂದು ಪ್ರಖ್ಯಾತರಾದ ನಾಗಾರ್ಜುನ ಆಚಾರ್ಯರ ಜೀವನದ ಬಗ್ಗೆ ಕೂಲಂಕುಷವಾಗಿ ಅಧ್ಯಯನ ಮಾಡಿ ನವಿರಾಗಿ ಬರೆದಿದ್ದಾರೆ . ಅಮರಾವತಿಯನ್ನು ಆಳಿದ ಶಾತವಾಹನರು ಹಿಂದೂ ಧರ್ಮೀಯರಾಗಿದ್ದೂ ಜೈನ ಸ್ತೂಪಗಳ, ವಿಶ್ವವಿದ್ಯಾಲಯ ಸ್ಥಾಪನೆ ಹಾಗು ಜೈನ ಧರ್ಮಕ್ಕೆ ಪ್ರೋತ್ಸಾಹ, ಅದರ ಪ್ರಚಾರಕ್ಕೆ ಕಾರಣವಾಗಿದ್ದು ಏಕೆಂದು ಹೇಳುತ್ತಾ ಇತಿಹಾಸವನ್ನು ಕಥೆಯಾಗಿ ಬಿಚ್ಚಿಡುತ್ತದೆ ಆದರೆ ಈ ಕಥೆಯನ್ನು ಓದುವಾಗ ಗಮನವಿಟ್ಟು ಓದಬೇಕು ಏಕೆಂದರೆ ಶಾಲೆಯಲ್ಲಿ ನಾವು ಕಷ್ಟಪಟ್ಟು ಓದಿ ಮರೆತ ಇತಿಹಾಸವನ್ನು ಮತ್ತೆ ನೆನಪಿಸುವ ಕಥೆಯಿದು. ಮನಸಿಟ್ಟು ಓದಿದರೆ ಮಾತ್ರ ಅರ್ಥವಾಗುತ್ತದೆ ಶಾತವಾಹನರ ಮತ್ತು ಇಕ್ಷ್ವಾಕುಗಳ ಇತಿಹಾಸ. ಇಲ್ಲಿರುವ ರೋಚಕತೆಯನ್ನು ಓದಿಯೇ ತಿಳಿಯಬೇಕು.
ಇನ್ನು ಎರಡನೇ ಕಥೆ "ಅಂಗದಾನ" ಇಲ್ಲಿ ಧರ್ಮಗಳ ಅವಶ್ಯಕತೆಯ ಬಗ್ಗೆ ಮಾತನಾಡುವವರನ್ನೂ ಹಾಗೆಯೆ ತಿರಸ್ಕಾರ ಮನೋಭಾವದಿಂದ ನೋಡುವ ಈ ಎರಡೂ ವಿಚಾರವಾದಿ'ಗಳ ಚರ್ಚೆ, ಬಾಂಬ್ ಸ್ಪೋಟದ ಚಿತ್ರಣ ಇತ್ಯಾದಿಗಳು ಕಣ್ಣಿಗೆ ಕಟ್ಟುವಂತೆ ಮತ್ತು ಓದುಗರನ್ನು ವಿಚಾರ ಮಾಡುವಂತೆ ಮಾಡುತ್ತವೆ. ಅಂತೆಯೆ, ಲೇಖಕರು ಹೇಳುವಂತೆ ಧಾರ್ಮಿಕ ವಿಧಿಗಳನ್ನು ಧಿಕ್ಕರಿಸುವ ಮುನ್ನ ಅವುಗಳ ಅವಲೋಕನೆ ಅವಶ್ಯಕ ಎಂದು ವಾದಿಸುವವರನ್ನು ಇವರು, 'ಮೂಲಭೂತ ವಾದಿಗಳೆಂದು' ತಿರಸ್ಕರಿಸುತ್ತಾರೆ.ಧರ್ಮಗಳ ಉಗಮ ಮತ್ತು ಅವಶ್ಯಕತೆ ಗಳನ್ನು ನಾವು ಉದ್ವೇಗರಹಿತವಾಗಿ, ರಾಜಕೀಯ-ಮುಕ್ತವಾಗಿ, ಹಾಗೂ ಕಾಲಾತೀತವಾಗಿ ಗ್ರಹಿಸಿದರೆ ಸಾಮಾಜಿಕ ಕಳಕಳಿಯಬಗ್ಗೆ ಎಲ್ಲರೂ ಯೋಚಿಸುವುದು ದಿಟ.
ಇನ್ನೂ ಮೂರನೇ ಕಥೆಯೇ "ಕಲ್ದವಸಿ". ಶ್ರೀ ರಾಮಾಯಣ ದರ್ಶನಂ ರಚಿಸುವಾಗ ಕುವೆಂಪುವಿಗೆ ಸಿಕ್ಕ ಒಬ್ಬ ಮಹಿಳೆ "ಸರಸ್ವತಿ" ಯೊಡನೆ ನಡೆದ ಸಂವಾದ ಮತ್ತು ರಾಮಾಯಣದ ಅಂಶಗಳ ಬಗ್ಗೆ ಆಕೆ ಕುವೆಂಪು ಅವರೊಂದಿಗೆ ಮಾಡಿದ ವಾದ ವಿವಾದಗಳು ನಿಜಕ್ಕೂ ಅಲ್ಲಗೆಳೆಯುವಂತಿಲ್ಲ. ಇದು ಕಥೆಯಲ್ಲ ನಿಜವಾಗಲೂ ನಡೆದ ರೋಚಕ ಘಟನೆ ಇದನ್ನು ಓದಿಯೇ ತಿಳಿಯಬೇಕು. ಇನ್ನು ಕಲ್ದವಸಿಯೆಂದರೆ ತನ್ನ ಗಂಡನೊಂದಿಗೆ ವನವಾಸಕ್ಕೆ ಹೋಗದೆ ಭಾವನೆಗಳನ್ನು ಹತ್ತಿಕ್ಕಿ ಕಾದ ಊರ್ಮಿಳೆ ಕಲ್ಲಿನಂತಹಾ ತಪಸ್ವಿನಿಯಾಗಿ, ಸೀತಾರಾಮರ ಹೃದಯದಲ್ಲಿ ಲಕ್ಷ್ಮಣನ ಸ್ಥಿತಿಗೆ ನೆನಪಾಗಿ ವನವಾಸದಲ್ಲಿನ ಪರ್ಣಶಾಲೆಯ ಬಳಿಯ ಕಲ್ಲುಬಂಡೆಯಾಗಿ ನಿಲ್ಲುತ್ತಾಳೆ. ಆಕೆಯೇ ಕಲ್ದವಸಿ. (ಇದು ಅಂತರಜಾಲದಲ್ಲಿ ಸಿಕ್ಕ ಮಾಹಿತಿ) ಇದನ್ನು ಓದಿದಮೇಲೆ ತಮ್ಮನ್ನು ತಾವೇ ಪ್ರಶ್ನಿಸಿ ತಮಗೆ ತಾವೇ ಉತ್ತರಿಸಿಕೊಳ್ಳುವ ಭಾವನೆ ಮನಸ್ಥಿತಿ ಉಂಟಾಗಬಹುದು ಎಂಬುದು ನನ್ನ ಅಭಿಪ್ರಾಯ. ಇದು ನನಗೆ ಅನಿಸಿದ್ದು ನಿಜ.

ಇಕ್ಷ್ವಾಕು ಕುಲತಿಲಕ







ಅಮೀಶ್ ಅವರ ರಾಮಚಂದ್ರ ಸರಣಿ - ೧ "ಇಕ್ಷ್ವಾಕು ಕುಲತಿಲಕ" (ಕನ್ನಡಕ್ಕೆ ಅನುವಾದ: ಬಿ ಕೆ ಎಸ್ ಮೂರ್ತಿ) ಕೃತಿಯಲ್ಲಿರುವುದು ರಾಮಾಯಣದ ನಾಯಕ ಶ್ರೀ ರಾಮನ ಕಥೆ.
ಯಾರು ಸಂಪೂರ್ಣ ರಾಮಾಯಣ ಓದಿಲ್ಲವೋ ಅವರಿಗೆ ಇದು ಹೊಸದೆನಿಸಬಹುದು. ಇಲ್ಲಿನ ಮುಖ್ಯ ಅಂಶಗಳೆಂದರೆ ಬಾಲ್ಯದಿಂದಲೇ ಅಪ್ಪನಿಂದ ಮತ್ತು ಇತರರಿಂದ ತಿರಸ್ಕರಿಸಲ್ಪಟ್ಟ ರಾಮ, ಆತನ ಮೇಲೆ ಬಂದ ಅಪವಾದಗಳಿಂದ ಹೊರಬಂದನೇ? ಪ್ರಿಯ ಪತ್ನಿ ಸೀತೆಯ ಮೇಲಿನ ಪ್ರೇಮ ಅವನ ಹೋರಾಟದ ಮೂಲಕ ಸ್ಥಿರವಾಗಿತ್ತೇ? ರಾವಣನಿಂದ ತನ್ನ ಬಾಲ್ಯದಲ್ಲಿ ಸಿಗಬೇಕಾದ್ದನ್ನೆಲ್ಲವನ್ನು ಕಳೆದುಕೊಂಡ ರಾಮ ಅವನನ್ನು ಸೋಲಿಸಿದನೇ? ಇವೆಲ್ಲುವುಗಳ ಉತ್ತರ ಈ ಪುಸ್ತಕದಲ್ಲಿ ದೊರೆಯುತ್ತದೆ.
ವಯಕ್ತಿಕ ಅಭಿಪ್ರಾಯ ಹೇಳಬೇಕಂದರೆ ಅಮೀಶ್ ಅವರ ಶಿವಸರಣಿಗಳಿಗೆ ಹೋಲಿಸಿದರೆ ಈ ಪುಸ್ತಕದಲ್ಲಿ ಅಷ್ಟು ಸ್ವಾರಸ್ಯ ಮತ್ತು ರೋಚಕತೆಯ ಅನುಭವ ನನಗಾಗಲಿಲ್ಲ. ಹಾಗಂತ ಇಲ್ಲಿ ಯಾವುದು ನೀರಸವೂ ಅನಿಸುವುದಿಲ್ಲ. ಯಾರು ಸಂಪೂರ್ಣ ರಾಮಾಯಣ ಓದಿಲ್ಲವೋ ಅವರಿಗೆ ಖಂಡಿತ ಇದರಿಂದ ರಾಮಾಯಣದ ಜ್ಞಾನ ದೊರೆಯುತ್ತದೆ ಎನ್ನುವುದು ನನ್ನ ಭಾವನೆ.

ಪ್ರಾರ್ಥನಾ

ಯಂಡಮೂರಿ ವೀರೇಂದ್ರನಾಥರ (ಕನ್ನಡಕ್ಕೆ ಅನುವಾದ: ವಂಶಿ) "ಪ್ರಾರ್ಥನಾ" ಗಾತ್ರದಲ್ಲಿ ನಿಜಕ್ಕೂ ದೊಡ್ಡದು. ಇಂತಹ ವಿಷಯದ ಪುಸ್ತಕವನ್ನು ಓದಿದ್ದು ಇದೆ ಮೊದಲು. ನಿಜಕ್ಕೂ ಮೈ ಝುಮ್ ಎನ್ನಿಸುವ ಕಥೆಯಿದು. ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವ ಒಂದು ಹೆಣ್ಣು ಮಗಳ ತಂದೆ ಅವಳನ್ನು ಉಳಿಸುಕೊಳ್ಳಲು ಅನುಭವಿಸುವ ನೋವುಗಳು ನಿಜಕ್ಕೂ ಮನ ಕಲಕುತ್ತದೆ. ಇಲ್ಲಿ ರಸಾಯನ ಶಾಸ್ತ್ರ, ಜೀವ ಶಾಸ್ತ್ರ ಮತ್ತು ವೈದ್ಯಕೀಯ ವಿಜ್ಞಾನದ ಸುತ್ತಾ ಕಥೆ ಹೆಣೆಯಲಾಗಿದೆ. ಕೆಲವೊಂದು ಕಡೆ ಶಬ್ಧಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಇಲ್ಲಿ ಮನಸಿಟ್ಟು ಓದಿದರೆ ಮಾತ್ರ ಕೆಲವೊಂದು ವಿಷಯಗಳು ಅರ್ಥವಾಗುತ್ತವೆ . ಜೊತೆಗೆ ದುಡ್ಡಿನ ಆಸೆಗೆ ಔಷಧಿ ಕಂಪನಿಗಳು ಮಾಡುವ ಮೋಸವೂ ಇದರಲ್ಲಿ ಮುಖ್ಯವಾಗಿ ಚಿತ್ರಿಸಿದ್ದಾರೆ.


ಕ್ಯಾನ್ಸರ್ ಇಂದ ನರಳುವ ೧೨ ವರ್ಶದ ಹುಡುಗಿ ಪ್ರಾರ್ಥನಾ ಆಕೆಯ ತಂದೆ ಭಾರ್ಗವ ಒಬ್ಬ ಮೆಡಿಕಲ್ ರಿಸೆರ್ಚ್ ಮಾಡುವ ವಿಜ್ಞಾನಿ ಜೊತೆಗೆ ಒಬ್ಬ ವೈದ್ಯನೂ ಕೂಡ. ಆ ಕಾಲದಲ್ಲಿ ಕ್ಯಾನ್ಸರ್ ಗೆ ಕಂಡು ಹಿಡಿದಿರುವ ಔಷಧಿ ಅವನ ರೆಸೆರ್ಚ್ ಇಂದ ಅಕಸ್ಮಾತ್ ಆಗಿ ಕಂಡು ಹಿಡಿಯುತ್ತಾನೆ ಆ ಸಮಯದಲ್ಲಿ ತನ್ನ ಮಗಳಿಗೆ ಕ್ಯಾನ್ಸರ್ ಇರುವುದು ಇನ್ನು ಬೆಳಕಿಗೆ ಬಂದಿರುವುದಿಲ್ಲ. ಅವನು ತನ್ನ ಇನ್ಸ್ಟಿಟ್ಯೂಟ್ ವಿರುದ್ಧವೇ ತಿರುಗಿ ಬಿದ್ದು ವಾದ ಮಾಡಿತ್ತಾನೆ ಆದರೆ ಯಾರು ಅವನನ್ನು ನಂಬುವುದಿಲ್ಲ. ಇದೆ ಸಮಯದಲ್ಲಿ ತಾಯಿ ಇಲ್ಲದ ಪ್ರಾರ್ಥನಾಳ ಟೀಚೆರ್ ವಸುಮತಿ ಆಕೆಯ ಮೇಲಿನ ಅತೀಯಾದ ಪ್ರೀತಿಯಿಂದ ಹಾಗೂ ಕಾಳಜಿಯಿಂದ ಭಾರ್ಗವನ ಹೆಂಡತಿಯಾಗುತ್ತಾಳೆ. ಮದುವೆಯಾದ ದಿನವೇ ಈ ಕ್ಯಾನ್ಸರ್ ಸುದ್ದಿ ಬೆಳಕಿಗೆ ಬಂದು ಆ ಇಡೀ ಕುಟುಂಬದ ಸಂತೋಷವನ್ನೇ ಕಿತ್ತುಕೊಳ್ಳುತ್ತದೆ.

ಇಲ್ಲಿಂದ ಶುರುವಾಗುತ್ತದೆ ಹೊಸ ಔಷಧಿಯನ್ನು ಕಂಡು ಹಿಡಿಯುವ ಭಾರ್ಗವನ ಧೃಡ ನಿರ್ಧಾರ... ತನ್ನ ಮಗಳು ಸತ್ತರೂ ಪರವಾಗಿಲ್ಲ ಆಕೆಯ ಮೇಲೆ ಪ್ರಯೋಗ ಮಾಡಿಯಾದರೂ ಈ ಮಾರಕ ರೋಗಕ್ಕೆ ಔಷಧಿ ಕಂಡು ಹಿಡಿದು ಕ್ಯಾನ್ಸರಿನಿಂದ ಸಾಯುವವರನ್ನು ಕಾಪಾಡಬೇಕು ಎಂದು ಕಷ್ಟಪಡುತ್ತಾನೆ. ಅವನು ಕಂಡುಹಿಡಿಯುವ ರೀತಿ ಆ ಸಮಯದಲ್ಲಿ ಅನುಭವಿಸುವ ನರಕ ಯಾತನೆ, ಕೊನೆಗೆ ಅವನು ಹೇಗೆ ವಿಜಯಿಯಾಗುತ್ತಾನೆ ಇದನ್ನೆಲ್ಲ ಈ ಪುಸ್ತಕವನ್ನು ಓದಿಯೇ ಅನುಭವಿಸಬೇಕು. ಆದರೆ ಈ ಎಲ್ಲದರ ಹೋರಾಟದಲ್ಲಿ ತನ್ನ ಮಲಮಗಳ ಪ್ರಾಣ ಉಳಿಸುವ ಸಲುವಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ವಸುಮತಿಯ ತ್ಯಾಗಕ್ಕೆ ನಿಜಕ್ಕೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಹೀಗೆ ಈ ಪುಸ್ತಕ ಹಲವಾರು ರೀತಿಯ ವಿಷಯಗಳನ್ನು ಅಳಗೊಂಡಿವೆ. ಕೊನೆಗೆ "ಪ್ರಾರ್ಥನಾ" ಉಳಿಯುತ್ತಾಳೋ ಇಲ್ಲವೋ ಎನ್ನುವ ಕುತೂಹಲ ಕೊನೆಯ ಪುಟದವರೆಗೆ ಎಳೆದುಕೊಂಡು ಹೋಗುತ್ತದೆ .

ಇದನ್ನು ಓದಿದ ಮೇಲೆ ನನಗೊಂದು ವಿಭಿನ್ನ ಅನುಭವ ಆಗಿದ್ದು ನಿಜ.

ಶಿವನ ಡಂಗುರ






ಚಂದ್ರಶೇಖರ ಕಂಬಾರರ "ಶಿವನ ಡಂಗುರ" ಒಂದು ಅದ್ಭುತ ಕಾದಂಬರಿ. ಸಮಕಾಲೀನ ಬದುಕಿನಲ್ಲಿ ನಡೆಯುವ ತಲ್ಲಣಗಳ ಚಿತ್ರಣವಿದು. ಹಳ್ಳಿಯೊಂದರ ಬದುಕಿನ ಸುತ್ತ ನಡೆಯುವ ಜಾಗತೀಕರಣದ ಹೆಸರಿನಲ್ಲಿ ನಿಸರ್ಗವನ್ನು ನಾಶ ಮಾಡುವುದು, ಅಭಿವೃದ್ಧಿಯ ಹೆಸರಿನಲ್ಲಿ ಈ ನೆಲದ ಸತ್ವವನ್ನೇ ಹೀರುತ್ತಿರುವ ಯೋಜನೆಗಳ ದುಷ್ಪರಿಣಾಮ, ಬಡವರ ಮೇಲೆ ಶ್ರೀಮಂತರು ನಡೆಸುವ ದೌರ್ಜನ್ಯ, ಕೊಲೆ, ಅತ್ಯಾಚಾರ ಹೀಗೆ ಅನೇಕ ಜೀವನದಲ್ಲಿ ನಡೆಯುವ ವಿಚಾರಗಳನ್ನು ಇಲ್ಲಿ ಬರೆದಿದ್ದಾರೆ.

ಇಲ್ಲಿರುವ ಹಳ್ಳಿ ಶಿವಾಪುರ. ಅಲ್ಲಿಯ ಗೌಡ ಬರಮೇಗೌಡ ಹಿರಿಯರ ಕಾಲದ ಗೌಡಕಿಯನ್ನು ಮುಂದುವರೆಸುತ್ತಾ ಬಂದಿರುತ್ತಾನೆ ಆದರೆ ಊರಿನ ಮುಖಂಡನಾಗಿ ಇರಬೇಕಾದ ಯಾವುದೇ ಒಳ್ಳೆಯ ಗುಣಗಳು ಈತನಿಗಿರುವುದಿಲ್ಲ. ಮದುವೆ ಆಗಿ ಹೆಂಡತಿ ಇದ್ದರೂ ಆಕೆ ಹೆಣ್ಣು ಮಗಳನ್ನು ಹಡೆದಳೆಂದು ಅವಳನ್ನು ನಿರ್ಲಕ್ಷಿಸುತ್ತಾ ಪರಸ್ತ್ರೀಯರ ಸಹವಾಸದಲ್ಲಿ ಸುಖ ಕಾಣುತ್ತಾ ದೇವದಾಸಿ ಪದ್ಧತಿಗೆ ಪುಷ್ಟಿ ಕೊಡುತ್ತಾನೆ. ಹಾಗೆ ದೈವ ಪ್ರೇರಣೆಯಿಂದ ಮದುವೆಯಾದ ದೇವದಾಸಿಯೇ "ತುಂಗವ್ವ". ಅವಳದು ಇಲ್ಲಿ ಬಹುಮುಖ್ಯ ಪಾತ್ರ.


ತುಂಗವ್ವ ಮತ್ತು ಬರಮೇಗೌಡನಿಗೆ ಹುಟ್ಟಿದ ಮಗನೇ ಲಕ್ಷ್ಮಣ(ಲಸಮ). ಗೌಡನ ತಮ್ಮನ ಹೆಂಡತಿಯು ಅದೇ ಸಮಯಕ್ಕೆ ಒಂದು ಗಂಡುಮಗುವಿಗೆ ಜನ್ಮ ಕೊಟ್ಟು ಸಾಯುತ್ತಾಳೆ ಅವನೇ ಚಂಬಸವ ಈ ಕಾದಂಬರಿಯ ನಾಯಕ. ಆದರೆ ಅವನು ತುಂಗವ್ವನ ಎದೆಹಾಲು ಕುಡಿದ ಮಗುವಾದ್ದರಿಂದ ಅವನ್ನನು ಎಲ್ಲರೂ ಅಸ್ಪೃಶ್ಯ ಎಂದೇ ಭಾವಿಸಿ ನೋಯಿಸುತ್ತಿದ್ದರು, ಆತ ಮೇಲುಕುಲದವನಾದರೂ ಈ ಕಾರಣಕ್ಕೆ ಸದಾ ಅವಮಾನಗಳನ್ನು ಎದುರಿಸುತ್ತಾ ಬೆಳೆದು ವಿದ್ಯಾಭ್ಯಾಸವನ್ನೆಲ್ಲ ಮುಗಿಸಿ ಮತ್ತೊಬ್ಬ ದೇವದಾಸಿ ಶಾರವ್ವನನ್ನ ಪ್ರೀತಿಸಿ ಮದುವೆ ಆಗಿ ದೇವದಾಸಿ ಪದ್ದತಿಯ ವಿರುದ್ಧ ಹೋರಾಡುತ್ತಾನೆ.

ಈ ನಡುವೆ ಖಳನಾಯಕ ಕುಂಟಿರಪನ ಆಗಮನವಾಗಿ ಅವನು ಬರಾಮೇಗೌಡನ ಮಗಳನ್ನು ಮದುವೆ ಆಗಿ ಇಡೀ ಊರನ್ನೇ ಸ್ಮಶಾನ ಮಾಡುವಲ್ಲಿ ಯಶಸ್ವಿ ಆಗುತ್ತಾನೆ. ಬರಾಮೇಗೌಡನ ವಿಲಾಸಿ ಪ್ರವೃತ್ತಿಯನ್ನು ಬಳಸಿಕೊಂಡು ಅವನನ್ನು ವಶಪಡಿಸಿಕೊಳ್ಳುತ್ತಾನೆ. ಅವನ ಮೂಲಕವೇ ತಾರಾ, ಬಿಗ್ಬಾಸ್, ಜಾಕ್ಸನ್ ಕಂಪನಿ ಎಲ್ಲವೂ ಶಿವಾಪುರದ ಬದುಕಿನಲ್ಲಿ ಪ್ರವೇಶಿಸುತ್ತವೆ. ಇವರು ಯಾರು ಅಲ್ಲಿಯವರಲ್ಲ. ಶಿವಾಪುರದ ಸಮಗ್ರ ಅಭಿವೃದ್ಧಿಯ ಹೆಸರಿನಲ್ಲಿ ಅಲ್ಲಿಯ ಜನರ ಬದುಕನ್ನು ನರಕವಾಗಿಸುತ್ತಾರೆ. ರಾಜಕೀಯ ಪ್ರವೇಶವಾಗಿ ಊರು ರಣರಂಗವಾಗುತ್ತದೆ. ಕೊಲೆ,ಸಂಚು ರೂಪುಗೊಂಡು ನಂಬಿಕೆ ಕುಸಿಯುತ್ತವೆ. ಕಾದಂಬರಿ ಹೀಗೆ ಹೊರಗಿನ ಕೇಡು, ಒಳಗಿನ ಸೇಡು ಎರಡನ್ನು ಏಕಕಾಲಕ್ಕೆ ಎದುರಿಸಿ ಹೊಸ ಸಮಾಜದ ಕಡೆಗೆ ತುಡಿಯುತ್ತದೆ.

ಮಾಡಿದ್ದುಣ್ಣೋ ಮಹರಾಯ ಎನ್ನುವ ಗಾದೆಯಂತೆ ಕೆಡುಕನ್ನು ಮಾಡಿದವರ ಗತಿ ಏನಾಯ್ತು ಹಾಗೆ ಊರಿನ ಏಳ್ಗೆಗಾಗಿ ಶ್ರಮಿಸಿದವರು ಏನೇನನ್ನು ಅನುಭವಿಸಿದರು ಎನ್ನುವುದನ್ನು ಈ ಕಾದಂಬರಿ ಓದಿಯೇ ಅನುಭವಿಸಬೇಕು. ಅಷ್ಟು ರೋಚಕವಾಗಿದೆ. ಒಂದೊಂದು ಪುಟವು ನೈಜತೆಯಿಂದ ಕೂಡಿದ್ದು ಆರಂಭದಿಂದ ಅಂತ್ಯದವರೆಗೂ ಓಡಿಸಿಕೊಂಡೆ ಹೋಗುವ ಸೆಳೆತ ಇದರಲ್ಲಿ ಅಡಗಿದೆ. ಮತ್ತೊಮ್ಮೆ ಹೇಳುತ್ತಿದ್ದೇನೆ ಇದೊಂದು ಅದ್ಭುತ ಕಾದಂಬರಿ. ಇಲ್ಲಿರುವ ಪ್ರತಿಯೊಬ್ಬರೂ ತಪ್ಪದೇ ಇದನ್ನು ಓದಬೇಕಂಬುದು ನನ್ನ ಆಸೆ.

ಮರಣ ಮೃದಂಗ

ಯಂಡಮೂರಿ ವೀರೇಂದ್ರನಾಥರ "ಮರಣ ಮೃದಂಗ" ಅಬ್ಬಾ!!!!! ಎಂದು ಹುಬ್ಬೇರಿಸುವಂತಹ ಕಾದಂಬರಿ. ಇದರ ಬಗ್ಗೆ ಬರೆಯಲು ಎಲ್ಲಿಂದ ಆರಂಭಿಸಲಿ ಯಾವುದರ ಬಗ್ಗೆ ಬರೆಯಲಿ ಎನ್ನುವ ಗೊಂದಲದಿಂದ ತೋಚಿದಂತೆ ನನ್ನ ಅಭಿಪ್ರಾಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಮಾಫಿಯಾ ಅಂಡರ್ವರ್ಲ್ಡ್ ಎನ್ನುವ ಶಬ್ದಗಳನ್ನು ಕೇಳಿದರೆ ಎಲ್ಲರ ಮೈ ಒಂದು ಕ್ಷಣ ಕಂಪಿಸುವುದು. ಮರಣ ಮೃದಂಗ ಕಾದಂಬರಿ ಕೂಡ ಇದೆ ವಿಷಯಗಳನ್ನೊಳಗೊಂಡ ವಾಸ್ತವ ಘಟನೆಗಳ ಚಿತ್ರಣ. ಪತ್ತೇದಾರೀ ಕಾದಂಬರಿ ಎಂದರೂ ತಪ್ಪಿಲ್ಲ.

ವಸಂತದಾದ ಮತ್ತು ಸಲೀಂ ಶಂಕರ್ ಎನ್ನುವ ಇಬ್ಬರು ನರ ರೂಪದ ರಾಕ್ಷಸರ ಸುತ್ತಾ ನಡೆಯುವ ಕಥೆ ಇದು. ಅನುಷಾ, ಉತ್ಪಲಾ,ಜಾನಿ, ಬಿಲ್ಹಣ, ಸುಗ್ರೀವ, ಪಾಂಡಾ,ರಾಮ ಬ್ರಹ್ಮಮ್ ಇತ್ಯಾದಿ ಎಲ್ಲರ ಹೆಸರುಗಳು ಎಷ್ಟು ವಿಭಿನ್ನವಾಗಿವೆಯೋ ಅವರ ಪಾತ್ರಗಳು ಅಷ್ಟೇ ವಿಭಿನ್ನತೆಯಿಂದ ಕೂಡಿವೆ. ಅನುಷಾ ಒಬ್ಬ ಪ್ರತಿಭಾವಂತೆ ಸ್ಟಾಕ್ ಹೋಮ್ ಎಂಬ ಪ್ರತಿಷ್ಠಿತ ಕಂಪನಿಗೆ ಜೆನೆರಲ್ ಮ್ಯಾನೇಜರ್ ಹುದ್ದೆಯ ಸಂದರ್ಶನಕ್ಕೆಂದು ಬಂದು ಅವಳ ಪ್ರತಿಭೆಯಿಂದ ೪ ಪ್ರತಿಸ್ಪರ್ಧಿಗಳ ನಡುವೆ ಇವಳೊಬ್ಬಳೇ ಆಯ್ಕೆಯಾದರೂ ರಾಜಕೀಯ ವ್ಯಕ್ತಿಗಳ ಪ್ರಭಾವವಿರುವ ವ್ಯಕ್ತಿಯನ್ನು ಆಯ್ಕೆ ಮಾಡಲು ಸಂಸ್ಥೆ ನಿರ್ಧರಿಸಿದಾಗ ಅನುಷಾ ಒಂದು ನಾಟಕವಾಡಿ ತನ್ನ ಜಾಣತನದಿಂದ ಆ ಹುದ್ದೆಯನ್ನು ಅಲಂಕರಿಸುತ್ತಾಳೆ. ಇದೆ ಆಕೆ ವಸಂತದಾದ ಎನ್ನುವ ಭೂಗತ ಪಾತಕಿಯ ಸುಳಿಯಲ್ಲಿ ಗೊತ್ತಿಲ್ಲದೇ ಸಿಲುಕುತ್ತಾಳೆ ಆ ಸ್ವಾರಸ್ಯವನ್ನು ಓದಿಯೇ ತಿಳಿಯಬೇಕು. ಇಲ್ಲಿಂದ ಆರಂಭವಾಗುತ್ತದೆ ಮಾಫಿಯಾ ವಿರುದ್ಧ ಅವಳ ಹೋರಾಟ.


ಉತ್ಪಲಾ ಕೂಡ ಒಬ್ಬ ಬಡ ಬ್ರಾಹ್ಮಣರ ಕುಟುಂಬದ ಸಂಪ್ರದಾಯಸ್ಥ ಹುಡುಗಿ ಆರ್ಥಿಕ ತೊಂದರೆಯಿಂದ ನರ್ಸ್ ಹುದ್ದೆ ಪಡೆದು ಅಪ್ಪನಿಗೆ ನೆರವಾಗುತ್ತಾಳೆ. ಹೀಗೆ ಶಾಂತ ರೀತಿಯಲ್ಲಿ ನಡೆಯುತ್ತಿದ್ದ ಅವಳ ಜೀವನ ಇದ್ದಕ್ಕಿದ್ದಂತೆ ಒಂದು ದಿನ ಅವಳ ಆಸ್ಪತ್ರೆಯಲ್ಲಿ ಸಲೀಂ ಶಂಕರ್ ಮತ್ತು ಅವನ ತಂಡದವರು ಮಾಡಿದ ಅಮಾನುಷ ಕೊಲೆಗಳನ್ನು ನೋಡಿ ಪಡಬಾರದ ಹೊಂಸೆಗೆ ಒಳಪಟ್ಟು ತನ್ನ ಜೀವ ಮತ್ತು ಕುಟುಂಬವನ್ನು ಉಳಿಸಿಕೊಳ್ಳಲು ಆಕೆ ಪಟ್ಟ ಶ್ರಮ ಅನುಭವಿಸಿದ ನರಕ ಯಾತನೆ ಎಲ್ಲವೂ ಕಣ್ಣಿಗೆ ಕಟ್ಟುವಂತೆ ಲೇಖಕರು ಚಿತ್ರಿಸಿದ್ದಾರೆ.

ಹೀಗೆ ಉತ್ಪಲಾ, ಅನುಷಾ ತಮಗೆ ಅರಿವಿಲ್ಲದಂತೆ ಮಾಫಿಯಾ ಸುಳಿಗೆ ಸಿಲುಕಿ ಒದ್ದಾಡುವಾಗ ಜಾನಿ, ಬಿಲ್ಹಣರ ಪಾತ್ರಗಳು ಬಂದು ಅವರನ್ನು ಕಾಪಾಡಲು ಇವರು ತೋರಿಸಿದ ಬುದ್ಧಿವಂತಿಕೆ ಮಾಡಿದ ನಟನೆ ಅನುಭವಿಸಿದ ಒತ್ತಡಗಳು ಅಬ್ಬಾ!!! ಮುಗ್ಧ ಉತ್ಪಲಾ ಒಂದು ರೀತಿ ಇಷ್ಟವಾದರೆ ಬುದ್ಧಿವಂತ ಅನುಷಾ ಮಾಡುವ ದಾದಾನ ಮಟ್ಟಹಾಕುವ ಉಪಾಯಗಳು ಅದಕ್ಕೆ ಜಾನಿ ಬಿಲ್ಹಣ ಪ್ರತಿಕ್ರಿಯಿಸಿದ ರೀತಿ ಮತ್ತಷ್ಟು ಮನಸಿಗೆ ಮುದ ನೀಡುತ್ತವೆ. ಮಧ್ಯ ಮಧ್ಯ ಬರುವ ಬೇರೆ ಬೇರೆ ರೌಡಿಗಳು ಅವರನ್ನು ನಾಶ ಮಾಡುವ ರೀತಿ, ಪೊಲೀಸ್ ಇಲಾಖೆ, ಸಿ ಬಿ ಐ ಅಧಿಕಾರಿಗಳ ತನಿಖೆ ಹೀಗೆ ಪ್ರತಿಯೊಂದು ಅಂಶವೂ ಓದುಗರನ್ನು ಸೆಳೆಯುತ್ತದೆ.

ಪ್ರತೀ ಪುಟವೂ ಅತ್ಯಂತ ಕುತೂಹಲದಿಂದ ಕೂಡಿದ್ದು ಪತ್ತೇದಾರಿ ಚಿತ್ರವನ್ನು ನೋಡಿದ ಅನುಭವ ಕೊಡುತ್ತದೆ. ಒಂದು ಪುಟದಲ್ಲೂ ಪ್ರತಿಯೊಂದು ಸಾಲಿನಲ್ಲೂ ಓದುಗರ ಮನಸ್ಸನ್ನು ಸೆಳೆಯುತ್ತದೆ. ಮುಂದೇನಾಗುತ್ತೋ ಅನ್ನೋ ಕಾತರದಲ್ಲೇ ಓದುಗ ಮುಂದುವರೆಯುತ್ತಾನೆ. ನಿಜಕ್ಕೂ ಇದರ ಬಗ್ಗೆ ಎಷ್ಟು ಬರೆದರೂ ಸಾಲದು ಅಷ್ಟು ರೋಮಾಂಚನ ಕೊಟ್ಟ ಕಾದಂಬರೀ ಇದು. ನನಗಂತೂ ಇದನ್ನು ಓದಿ ತುಂಬಾ ಖುಷಿ ಆಯ್ತು.

ತುಳಸೀ ದಳ





ಕಷ್ಮೋರಾ!!! ಬಗ್ಗೆ ಹುಷಾರು ನನ್ನ ಪ್ರೀತಿಯ ಓದುಗರೇ...:P "ತುಳಸೀ ದಳ" ಎಂತಹ ಭಯಾನಕ ಕಾದಂಬರಿ... ಯಂಡಮೂರಿ ವೀರೇಂದ್ರನಾಥರ ಕಲೆ ನಿಜಕ್ಕೂ ಶ್ಲಾಘನೀಯ... ಈ ಕಾದಂಬರಿ ಚಲನಚಿತ್ರವಾಗಿದೆ ಆದರೆ ನಾ ಅದನ್ನು ನೋಡಿಲ್ಲ. ಬಹುತೇಕ ಎಲ್ಲರೂ ನೋಡಿರಬಹುದು. ಮಾಟ, ಮಂತ್ರ ,ವೈಜ್ನ್ಯಾನಿಕತೆ, ವೈದ್ಯಕೀಯ, ಮಾನಸಿಕ ಹಿಂಸೆ, ಮೂಢನಂಬಿಜೆ ಹೀಗೆ ಸುಮಾರು ವಿಷಯಗಳನ್ನು ಮಿಶ್ರಣ ಮಾಡಿ ಓದುಗರ ಮನಸ್ಸನ್ನು ಬೆಚ್ಚಿ ಬೀಳಿಸುವುದು ಸತ್ಯ. ಇದರ ಬಗ್ಗೆ ಹೇಗೆ ಬರೆಯುವುದು, ಎಲ್ಲಿಂದ ಆರಂಭಿಸುವುದು ಎಂಬ ಗೊಂದಲ ನನ್ನ ಕಾಡುತ್ತಿದೆ.
ಜನ ಮೂಢನಂಬಿಕೆಯೆಂದು ಮೂದಲಿಸುವ ವಾಮಾಚಾರ ಇಂದಿಗೂ ಕೆಲವೊಂದು ಕಡೆ ನಡೆಯುತ್ತದೆ ಎಂದು ನಂಬುವವರು ಸಾಕಷ್ಟು ಜನ ಇದ್ದಾರೆ. ಅದರಿಂದ ಅನುಭವಿಸಿದ ನರಕಯಾತನೆ ನೋವು ಎಲ್ಲವನ್ನು ನಾವು ಓದಿರ್ತೀವಿ ಆದರೆ ಮನಸು ನಂಬಿದರೂ ಬುದ್ಧಿ ನಂಬಲಾರದು ಅದಕೆ ಕಾರಣ ವೈಜ್ಞಾನಿಕವಾಗಿ ಜಗತ್ತು ಮುಂದುವರೆದಿರುವುದು.
ಒರಿಸ್ಸಾ ರಾಜ್ಯದ "ಬಿಸ್ತಾ" ಗ್ರಾಮದ ಮಾಂತ್ರಿಕನೇ ಕಾದ್ರಾ (ನರರೂಪದ ರಾಕ್ಷಸ ) ಈತನ ಕ್ಷುದ್ರವಿದ್ಯೆಯಿಂದ ನರಕ ಯಾತನೆಯನ್ನು ಅನುಭವಿಸುವ ಮುಗ್ಧ ಮುದ್ದು ಮಗುವೇ "ತುಳಸಿ ". ಅಬ್ಬಾ!!! ಆ ವಾಮಾಚಾರ ಮಾಡಿದ ಬಗೆಯನ್ನು ವಿವರಿಸಲೂ ಮೈ ಝುಮ್ ಎನ್ನುತ್ತೆ ನನಗೆ ಅಷ್ಟು ಭಯಂಕರವಾಗಿದೆ ಆ ವಿದ್ಯೆ.

ಶ್ರೀಧರ್ ಶಾರದಾ ಮದುವೆಯಾಗಿ ಬಹಳ ವರ್ಷಗಳ ನಂತರ ಹುಟ್ಟಿದ ಮಗುವೇ ತುಳಸಿ ಆ ಮನೆಯ ಮುದ್ದಿನ ಕಣ್ಮಣಿ. ಶ್ರೀಧರ್ ನ ಪರಿಶ್ರಮದಿಂದ ಕಂಪನಿಯಲ್ಲಿ ಉನ್ನತ ಹುದ್ದೆ , ವಿದೇಶ ಪ್ರಯಾಣ ಜೊತೆಗೆ ಅವನ ಕಂಪನಿಯ ಮಾಲೀಕನಿಂದ ಲಕ್ಷಾಂತರ ರೂಪಾಯಿ ದಕ್ಕುತ್ತದೆ. ಆದರೆ ಹಣ ದಕ್ಕುವುದು ತುಳಸಿಗೆ ಅದು ಕೂಡ ಆಕೆಗೆ ೧೦ ವರ್ಷ ತುಂಬಿದ ಮೇಲೆ. ಅಕಸ್ಮಾತ್ ಆ ಮಗು ಸತ್ತರೆ ಅದೆಲ್ಲ ಒಂದು ಆಶ್ರಮಕ್ಕೆ ಸೇರುತ್ತದೆ. ಇದನ್ನರಿತ ಮೋಸಗಾರರು ( ಸ್ವಾಮಿ, ಪುಟ್ಟ, ರಾಮಯ್ಯ ,ಸರಸ್ವತೀ ) ಆ ಹಣವನ್ನು ಪಡೆಯಲು ಮಗುವಿಗೆ ವಾಮಾಚಾರವನ್ನು ಪ್ರಯೋಗಿಸುತ್ತಾರೆ.
ಸಾವಿರಾರು ವರ್ಷಗಳ ಹಿಂದೆ ಪ್ರಯೋಗ ಮಾಡದೇ ಮಲಗಿಸಿದ್ದ ಅತ್ಯಂತ ಕ್ರೂರ ಕ್ಷುದ್ರ ದೇವತೆಯೇ ಕಷ್ಮೋರಾ!!!!! ಅದರ ಆಟ ೨೧ ದಿನ ಮೊದಲನೇ ದಿನದಿಂದ ೨೧ನೇ ದನದ ತನಕ ತುಳಸಿ ಇಂತಹ ನರಕ ಅನುಭವಿಸಿತು, ಒಂದೊಂದು ದಿನವೂ ಎಂತೆಂತ ಯಾತನೆಗಳು ಉಂಟಾದವು ಎನ್ನುವುದನ್ನು ನನಗಂತೂ ಹೇಳಲು ಅಸಾಧ್ಯ ಕಾರಣ ಅದು ಓದಿ ಅನುಭವಿಸಲಿದಷ್ಟು ಸುಲಭವಲ್ಲ ಇಲ್ಲಿ ಹೇಳುವುದು. ಮಾಟ ಮಂತ್ರವನ್ನು ನಂಬದೇ, ದೇವರನ್ನು ನಂಬದಿರುವ ವ್ಯಕ್ತಿ ಶ್ರೀಧರ್ ತನ್ನ ಮಗುವನ್ನು ಉಳಿಸುವುದಕ್ಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಶಾರದೆ ಮಗುವಿಗಾಗಿ ಕಣ್ಣೀರಿಟ್ಟು ಕೊನೆಗೆ ಉಸಿರಾಡುವ ಶವದಂತಾಗಿ ಓದುಗರ ಮನಸ್ಸನ್ನು ಹಿಂಡುವುದು ನಿಜ. ಕೊನೆಯ ೨೪ ಘಂಟೆಗಳನ್ನು ಒಂದೊಂದು ಭಾಗವಾಗಿ ಚಿತ್ರಿಸಿದ್ದಾರೆ ಲೇಖಕರು ಅದು ನಿಜಕ್ಕೂ ರೋಚಕ.
ಶ್ರೀಧರನ ಸ್ನೇಹಿತ ಭ್ರಾಹ್ಮಿನ್ (ಅಭ್ರಕದಬ್ರ ), ವಿದ್ಯಾಪತಿ, ಜಯದೇವ್ , ಪಾರ್ಥಸಾರಥಿ ಇವರೆಲ್ಲ ಈ ಕತೆಯಲ್ಲಿ ಬರುವ ಮುಖ್ಯ ಪಾತ್ರಗಳು ಕೆಲವೊಬ್ಬರು ಜಾದು ಮಾತಾ ಮಂತ್ರ ನಂಬುವರು, ಉಳಿದವರು ಮಾನಸಿಕ ಚಿಕಿತ್ಸೆ ಕೊಡುವ ವೈದ್ಯರು, ಜೊತೆಗೆ ತುಳಸಿಗೆ ಚಿಕಿತ್ಸೆ ಕೊಡುವ ವೈದ್ಯರು, ಇವರುಗಳ ನಡುವೆ ಹುಟ್ಟುವ ಭಿನ್ನ ಅಭಿಪ್ರಾಯಗಳೇ ವಾಮಾಚಾರಕ್ಕೂ ವಿಜ್ಞಾನಕ್ಕೂ ನಡೆಯುವ ಯುದ್ಧ. ಇವೆಲ್ಲವುಗಳ ನಡುವೆ ಆ ಮಗು ಅನುಭವಿಸುವ ನೋವು ಮಾತ್ರ ಹೃದಯ ವಿದ್ರಾವಕ ದೃಶ್ಯ.
ಈ ಪುಸ್ತಕದ ಬಗ್ಗೆ ಜಾಸ್ತಿ ಏನನ್ನೂ ಹೇಳಲು ಸಾಧ್ಯವಿಲ್ಲ. ಮಾಟ ಮಂತ್ರ ನಂಬದವರ ತಲೆಯನ್ನೂ ಸಹ ಕೆಡಿಸುವಂತಹ ಮಾಹಿತಿಗಳು ಇದರಲ್ಲಿ ಲೇಖಕರು ಹೇಳಿದ್ದಾರೆ. ನಿಜಕ್ಕೂ ಇದೊಂದು ಅದ್ಭುತ ಕೃತಿ. ಎಲ್ಲರೂ ಒಮ್ಮೆ ಓದಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ. ಮತ್ತೊಮ್ಮೆ ಈ ಕೂಟಕ್ಕೆ ಧನ್ಯವಾದಗಳು.

ಡ್ರಾಕುಲ






ಬ್ರಾಮ್ ಸ್ಟೋಕರ್ ಅವರ ಪ್ರಸಿದ್ಧ ಕೃತಿ "ಡ್ರಾಕುಲ" (ಕನ್ನಡಕ್ಕೆ ಅನುವಾದ : ವಾಸುದೇವರಾವ್ ). ಈ ಕೃತಿ ಮಾಮೂಲಿ ಕೃತಿಗಳಂತೆ ಬೇಗ ಬೇಗ ಓದಲು ಸಾಧ್ಯವಿಲ್ಲ ಕಾರಣ ಇಲ್ಲಿ ಬರುವ ಆಂಗ್ಲ ಹೆಸರುಗಳು, ಊರುಗಳ ಹೆಸರುಗಳನ್ನು ನೆನಪಿಟ್ಟುಕೊಂಡು ಓದುವುದು ಸ್ವಲ್ಪ ಕಷ್ಟವಾಗುತ್ತದೆ. ಇಲ್ಲಿ ಯಾವುದು ಭಾಗ ಅಥವಾ ಅಧ್ಯಾಯ ರೂಪಗಳಲ್ಲಿ ಕಥೆ ಸಾಗುವುದಿಲ್ಲ ಬದಲಾಗಿ ದಿನಚರಿ, ಪತ್ರವ್ಯವಹಾರ, ದಿನಪತ್ರಿಕೆಯ ತುಣುಕು, ಮತ್ತಿತರ ದಾಖಲೆಗಳ ಒಳಗೊಂಡ ೨೬ ಪ್ರಕರಣಗಳಲ್ಲಿ "ಡ್ರಾಕುಲ" ಯಾರು ಎಂತಹ ಕ್ರೂರ ವ್ಯಕ್ತಿಯೆಂದು ಲೇಖಕರು ಅಮೋಘವಾಗಿ ಚಿತ್ರಿಸಿದ್ದಾರೆ.

"ಡ್ರಾಕುಲ" ೧೯೩೧ರಲ್ಲೇ ಹಾಲಿವುಡ್ ಚಿತ್ರವಾಗಿ ತೆರೆಗೆ ಬಂದು, ಅದನ್ನೇ ಆದರಿಸಿ ತೆಗೆದಿರುವ ಹಾಲಿವುಡ್ ಚಿತ್ರಗಳೋ ೨೦೦ ಕ್ಕೂ ಹೆಚ್ಚು. ಇತ್ತೀಚೆಗೂ (೨೦೧೪ರಲ್ಲಿ) ಕೂಡ ಒಂದು ಹಾಲಿವುಡ್ ಚಿತ್ರ ಬಂದಿದೆ. ಇದೇ ಸಾಕು ಇದರ ಜನಪ್ರಿಯತೆಯನ್ನು ಸಾರಲು. ( ಇದೆಲ್ಲ ಡ್ರಾಕುಲ ಬಗ್ಗೆ ಅಂತರ್ಜಾಲದಲ್ಲಿ ನಾನು ಪಡೆದ ಮಾಹಿತಿ ಸುಮ್ಮನೆ ಕುತೂಹಲಕ್ಕೆ ಹುಡುಕುತ್ತಿದ್ದಾಗ ಸಿಕ್ಕ ಮಾಹಿತಿಯಿದು).

ಇನ್ನು ಕಥೆಗೆ ಬರುವುದಾದರೆ ಜೊನಾಥನ್ ಹಾರ್ಕರ್ ಈ ಕಥೆಯಲ್ಲಿ ಬರುವ ಮೊದಲ ವ್ಯಕ್ತಿ ಅವನು ಒಬ್ಬ ಲಾಯರ್ ಆಗಿರುತ್ತಾನೆ. ಟ್ರಾನ್ಸಿಲ್ವೇನಿಯಾ ಪ್ರಾಂತ್ಯದ ಕೌಂಟ್ ಡ್ರಾಕುಲಾಗೆ ಕಾನೂನು ಸಲಹೆ ನೀಡಲು, ಅವನನ್ನು ಕಳುಹಿಸಲಾಗುತ್ತದೆ. ಆ ಸ್ಥಳವನ್ನು ಮುಟ್ಟುವಷ್ಟರಲ್ಲೇ ಸ್ಥಳೀಯರು ತೋರ್ಪಡಿಸುವ ಭೀತಿಯಿಂದ ಹಾರ್ಕರ್ ಅಚ್ಚರಿಗೊಳ್ಳುತ್ತಾನೆ. ಆದರೂ ಕಂಗೆಡದೆ ಪ್ರಯಾಣ ಮುಂದುವರೆಸಿ ಕೌಂಟ್ ಅನ್ನು ಭೇಟಿಯಾಗುತ್ತಾನೆ. ಕೌಂಟ್ ಡ್ರಾಕುಲಾನ ಆಥಿತ್ಯ ಸ್ವೀಕರಿಸಿ, ಅವನಿಗೆ ಕಾನೂನು ಸಲಹೆ ನೀಡುವ ಕಾರ್ಯ ಕೈಗೊಳ್ಳುತ್ತಾನೆ. ಮುಂದೆ ಅಲ್ಲಿ ನಡೆಯುವ ಘಟನೆಗಳು ಭೀತಿಯನ್ನು ಮೂಡಿಸುತ್ತದೆ. ಅದೇನೆಂದು ಓದಿಯೇ ತಿಳಿಯಬೇಕು ಅಷ್ಟು ಭಯಾನಕ ವಾತಾವರಣವನ್ನು ಓದುಗರು ಅನುಭವಿಸುತ್ತಾರೆ.

ಕೌಂಟ್ ಡ್ರಾಕುಲ ಅಮೃತರ ಅರಸ ಎಂದರೆ ಅವನಿಗೆ ಸಾವೇ ಇಲ್ಲದ ರಕ್ತ ಭಕ್ಷಕ. ತಾನು ಅಮರನಾಗೆ ಇರಲು ಏನು ಬೇಕಾದರೂ ಮಾಡಿ , ಯಾರ ರೂಪವನ್ನಾದರೂ ತಾಳಿ, ರಕ್ತ ಹೀರುವ ರಾಕ್ಷಸ, ಹೀಗೆ ಅವನು ತನ್ನ ದಾಹವನ್ನು ಈಡೇರಿಸಿಕೊಳ್ಳಲು ಲಂಡನ್ಗೆ ಬಂದು ಮತ್ತೊಂದು ಬೇಟೆ ಆರಂಭಿಸುತ್ತಾನೆ. ಇತ್ತ ಹಾರ್ಕರನ ಪ್ರೇಯಸಿ ಮಿನಾಮರ್ರೇಯ ಗೆಳತಿ ಲೂಸಿಯಲ್ಲಿ ವಿಚಿತ್ರ ಬದಲಾವಣೆಗಳಾಗ ತೊಡಗುತ್ತದೆ. ನಿರಂತರ ರಕ್ತಹೀನತೆ, ಮನೋವೈಜ್ಞಾನಿಕ ಕಾಯಿಲೆಯಂತೆ ಅದು ತೋರಿಬಂದಾಗ ನೆರವಿಗೆ ಬರುವ ವೈದ್ಯ ಸೇವರ್ಡ್ , ಇನ್ನೊಬ್ಬ ಮೇಧಾವಿ ಪ್ರೊಫೆಸರ್ ವಾನ್ ಹೆಲಿಂಗ್ ಇದರ ಮರ್ಮವನ್ನು ಅರಿಯುತ್ತಾರೆ. ಲೂಸಿಯನ್ನು ಡ್ರಾಕುಲಾನಿಂದ ರಕ್ಷಿಸಲು ನಿರಂತರಯತ್ನ ನಡೆಸುತ್ತಾರೆ, ಅವರು ಅದರಲ್ಲಿ ಸಫಲರಾದರೆ? ಲೂಸಿಗೆ ಏನಾಯಿತು? ಇದು ಕೂಡ ರೋಚಕವಾಗಿದೆ. ಒಬ್ಬೊಬ್ಬರ ಡೈರಿಯೂ ವಿಶೇಷವಾಗಿ ಓದಿಸಿಕೊಂಡು ಹೋಗುತ್ತದೆ.

ಲಂಡನ್ ಅಲ್ಲಿ ಡ್ರಾಕುಲಾ ಮಾಡುವ ನೀಚ ಕೃತ್ಯಗಳು, ಅವನ ತಂತ್ರಗಳಿಗೆ ವೈದ್ಯರು ಮಾಡಿದ ಪ್ರತಿತಂತ್ರಗಳು, ಲೂಸಿಯ ನಂತರ ಕೌಂಟ್ ಮಿನಾಳನ್ನು ಆಕ್ರಮಿಸಿದ ರೀತಿ, ಡ್ರಾಕುಲನಾ ಸೆರೆಯಲ್ಲಿದ್ದ ಹಾರ್ಕರ ಅನುಭವಿಸಿದ ನರಕಯಾತನೆ ಇವೆಲ್ಲವೂ ಅವರವರ ದಿನಚರಿ ಪುಸ್ತಕದಲ್ಲಿ ಕಣ್ಣಿಗೆ ಕಟ್ಟುವಂತೆ ಬರೆದಿರುವುದನ್ನು ಓದುವುದಕ್ಕೆ ಅತ್ಯಂತ ರೋಮಾಚನ ಎನಿಸುವುದು. ಅದಕ್ಕಾಗಿಯೇ ಇದು ೧೮೭೭ರಿಂದ ಇಂದಿಗೂ ಜಗದ್ವಿಖ್ಯಾತ ಕೃತಿ ಎನಿಸಿದೆ. ಇನ್ನು ವಾಸುದೇವರಾವ್ ಅವರ ಕನ್ನಡದ ಅನುವಾದವೋ ಸರಳ ಸುಂದರ, ಕನ್ನಡದಲ್ಲಿ ಬರೆದಿದ್ದೇ ಮೂಲ ಕೃತಿಯೇನೋ ಅನ್ನಿಸುವಂತೆ ಮಾಡುತ್ತದೆ. ಇದನ್ನು ಪುಸ್ತಕದಲ್ಲೇ ಹೇಳಿದ್ದಾರೆ ಅಷ್ಟು ಅದ್ಭುತ ಕೃತಿ ಈ ಡ್ರಾಕುಲ.