Monday, 27 January 2014

ಭಾವಗೀತೆ

ನಾ ವೀಣೆಯಾದರೆ ನೀ ನನ್ನ ನುಡಿಸುವ ವೈಣಿಕ 
ನನ್ನೆದೆಯ ಭಾವಗಳೆಲ್ಲ ತಂತಿಗಳಾದರೆ 
ಅವುಗಳ ನುಡಿಸುವ ಬೆರಳುಗಳು ನೀನೆ 
ತಾಳಕ್ಕೆ ತಕ್ಕಂತೆ ತಂತಿ ನುಡಿಸುವ ಹಾಗೆ 
ನನ್ನ ಭಾವಕ್ಕೆ ತಕ್ಕಂತೆ ನಿನ್ನ ಮನವು ಸ್ಪಂದಿಸಿದರೆ 
ನಮ್ಮಿಬ್ಬರ ಜೀವನ ಸುಂದರ ಭಾವಗೀತೆಯಾದಂತೆ 

ಶುಭೋದಯ

ಚಂದದ ಮನೆಯ ಅಂಗಳದಲ್ಲಿ ಮುದ್ದಾದ 
ರಂಗೋಲಿಯ ಬಿಡಿಸುತ್ತಾ  
ಇಬ್ಬನಿಯ ಹನಿಗಳಿಂದ ಅಲಂಕೃತಗೊಂಡ 
ಹೂಗಳ ಬಿಡಿಸುತ್ತಾ 
ಬಂಗಾರದ ನೀರನ್ನು ಆಗಸದಲ್ಲಿ ಸುರಿಸಿದ 
ನೇಸರನ ಪೂಜಿಸುತ್ತಾ 
ಅರುಣೋದಯವನ್ನು ಆಸ್ವಾದಿಸುತ್ತಾ 
ಹೇಳಬಯಸುತ್ತಿದೆ ಈ ಮನಸು ಶುಭೋದಯ 

Sunday, 26 January 2014

ಕ್ಷೀರ

********************************
ಈ ಪುಟ್ಟ ಮನಸಿನಲಿ  ಕನಸಿನ 
ಅರಮನೆಯೊಂದ ಕಟ್ಟಿರುವೆ 
ಅಲ್ಲಿ ನಿನ್ನ ಒಲವೆಂಬ ಕ್ಷೀರ ಸಾಗರವನ್ನು 
ಹೊರ ಹರಿಯದಂತೆ ಬಚ್ಚಿಟ್ಟಿರುವೆ 
ಆ ಅರಮನೆಯ ಹೊರಗೆ ಹಾಲು ಹರಿದ ಕ್ಷಣ 
ನನ್ನ ತನುವ ಬಿಟ್ಟು ಹಾರುವುದು  ಪ್ರಾಣ 

Thursday, 23 January 2014

ಮಣ್ಣಿನ ಋಣ

ಹುಟ್ಟಿದ  ಪ್ರತೀ ಜೀವಿಗೂ ಹಸಿವ ನೀಗುವೆ ನೀನು 
ಮರಣ ಹೊಂದಿದ ಪ್ರತೀ ಜೀವವನ್ನು 
ತನ್ನೊಡಲಲ್ಲಿ ಹಾಕಿಕೊಲ್ಲುವೆ ನೀನು 
ಉಸಿರಾಡುವ ಪ್ರತೀ ಅಣುವಿನಲ್ಲೂ ಬೆರೆತಿರುವೆ ನೀನು 
ನೀನಿದ್ದರೆ ನಾವು ನೀನಿಲ್ಲದಿದ್ದರೆ ನಮಗೆ ಸಾವು 
ಏನು ಮಾಡಿದರೂ ತೀರಿಸಲಾಗದು ನಿನ್ನ ಋಣ 
ಅದುವೇ ಅಲ್ಲವೇ  ಈ ಮಣ್ಣಿನ ಗುಣ 

Wednesday, 22 January 2014

ಸೊಬಗು

ನೇಸರನ ಕಿರಣಗಳು ಇಳೆಗೆ ಮುತ್ತಿಡುವ ಮುನ್ನ 
ಎಲೆಗಳ ಮೇಲಿನ ಇಬ್ಬನಿಯ ಹನಿಗಳು ಜಾರುವ ಮುನ್ನ 
ಹೂವುಗಳು ನವಿರಾಗಿ ಅರಳುವ ಸಮಯವು ಮುಗಿಯುವ ಮುನ್ನ 
ಮಂಜು ಮಂಜಾಗಿ ಹರಡಿರುವ ಸುಂದರ ಮುಂಜಾವಿನ 
ಸೊಬಗನು ಮೌನವಾಗಿಯೇ ಸವಿಯುವ ಬಯಕೆ ಈ ಮನಕೆ 

ಸ್ನೇಹ ಬಂಧನ

ಓ ನನ್ನ ಗೆಳತಿ ನೀನಿದ್ದರೆ ನನ್ನ ಸನಿಹ

ಎಂದಿಗೂ ಕಾಡದು ಜೀವನದಲ್ಲಿ ಒಂಟಿತನ 

ನೀ ಖುಷಿಯಾಗಿದ್ದರೆ ನನ್ನ ಮನದಲ್ಲಿ

ಹರಿಯುವುದು ಸಂತಸದ ಹೊನಲು 

ನಿನ್ನ ಮೊಗದಲ್ಲಿ ಸಣ್ಣ ನೋವು 

ಕಂಡರೂ ನನಗಾಗುವುದು ದಿಗಿಲು 

ನನ್ನ ಈ ನಿನ್ನ ಸ್ನೇಹ ತೋರಿಕೆಯ ಬಂಧನವಲ್ಲ 

ಎಂದೂ ಬಿಡಿಸಲಾಗದ ಪವಿತ್ರ ಅನುಬಂಧ 

ಯಾರೋ....???

ನವಿಲಿನ ಗರಿಗೆ ಬಣ್ಣವ ಹಚ್ಚಿದ ಕೈ ಯಾವುದೋ 
ಅಳಿಲಿನ ಬೆನ್ನಿಗೆ ಗೆರೆಯ ಎಳೆದವರ್ಯಾರೋ
ಕೋಗಿಲೆಗೆ  ಇಂಪಾದ ಕಂಠವ ಕೊಟ್ಟವರ್ಯಾರೋ 
ಕಣ್ಣಿಗೆ ಕಾಣದ ಮನಸಲ್ಲಿ ಬಣ್ಣ ಬಣ್ಣದ  ಭಾವನೆಗಳ ಬಿತ್ತುವರ್ಯಾರೋ
ಈ ಯಾರೋ ಅನ್ನೋ ಪ್ರಶ್ನೆಗೆ ಉತ್ತವರಿಸುವರ್ಯಾರೋ... ?????

Thursday, 16 January 2014

ಧ್ಯೇಯ

ನೀ ಬರೋ ದಾರಿಯ ಹೂವಿಂದ 
ಅಲಂಕರಿಸುವ ಹುಚ್ಚಾಸೆ ನನಗಿಲ್ಲ 
ನಿನ್ನ ಮೊಗವನ್ನು ಚಂದಿರನ ಕಾಂತಿಗೆ 
ಹೋಲಿಸುವ ಮನಸೂ ಇಲ್ಲ 
ಆದರೆ ನನ್ನಾಸೆಯೊಂದೇ ಹುಡುಗ 
ನಿನ್ನ ಕಡಲಂತ ಕಂಗಳಲಿ ಮುಗಿಲಂತ ಮನಸಿನ ಆಳದಲಿ 
ಶಾಶ್ವತವಾಗಿ ನಾ ನೆಲೆಸಿದರೆ ಸಾಕು ಅದುವೇ ನನಗೆಲ್ಲ 

Thursday, 9 January 2014

ಹಠ

ನಿನ್ನ ಒಲವಿನ ಸವಿಯ ಸವಿಯುತ್ತಲೇ 
ನಾ ಉಸಿರಾಡುತ್ತಿರುವೆ 
ಆ ಸುಖವ ಅಕ್ಷರಗಳಲ್ಲಿ ವರ್ಣಿಸಲಾಗದೆ 

ಪರಿತಪಿಸುತ್ತಿರುವೆ 
ಆದರೂ ಹಠ ಬಿಡದೇ ನಿನ್ನ ಪ್ರೇಮದ ಪರಿಯ 
ಅಕ್ಷರಗಳಲ್ಲಿ ಪೋಣಿಸುತ್ತಲೇ ಇರುವೆ

Monday, 6 January 2014

ವಿಸ್ಮಯ

ಕನಸು ನನಸಾದಾಗ ಸದ್ದಿಲ್ಲದೇ ನಗುವುದು ಮನವು 
ಬಿರುಕು ಮೂಡಿದಾಗ ಗೊತ್ತಿಲ್ಲದೇ ಸುರಿಯುವುದು ಕಣ್ಣೀರು 
ಕಣ್ಣಿಗೂ ಮನಸಿಗೂ ಎತ್ತನಿಂದೆತ್ತ ಸಂಬಂಧ 
ಭಾವನೆಗಳಿಗೆ ಮನಸು  ಆಸರೆಯಾದರೆ 
ನೋವನ್ನು ಹೊರಹಾಕುವ ಅಸ್ತ್ರ ಕಣ್ಣೀರಲ್ಲವೇ ... 

Friday, 3 January 2014

ಪ್ರೇಮಗೀತೆ

ಭಾವನೆಗಳೇ ಇಲ್ಲದ ಮನದಲ್ಲಿ ಭಾವಗೀತೆಯಂತೆ 
ಹರಿಯುತ್ತ ಬಂದೆ ನೀ ಅಂದು 
ಏನಾದರೂ ಉಡುಗೊರೆ ಕೊಡುವ ಆಸೆಯಿಂದ 

ಬರೆಯುತಿರುವೆ ಪ್ರೇಮಗೀತೆ ನಿನಗಿಂದು

ಈ ಜೀವ ಸಹಿಸದು ನೀ ಒಂದು ಕ್ಷಣ ನೊಂದರು
ಅಪ್ಪಿತಪ್ಪಿ ಒಂದು ಹನಿ ಕಣ್ಣೀರು ಬಂದರೂ
ಮುದ್ದಿನ ಮಾತಾಡದಿದ್ದರೂ ಚಿಂತೆಯಿಲ್ಲ ನನಗೆ
ನಿನ್ನ ಮೌನದ ರೂಪವೇ ಸಾಕು ಅದುವೇ ಎಲ್ಲ ಎನಗೆ

ಒಲವಿನ ಮುತ್ತನು ಸುರಿಸುವೆಯಾ ಎಂದು ಆಸೆಯಾಗಿ
ಮನಸಾರೆ ಬರೆದೆ ಈ ಕವನ ನಿನಗಾಗಿ
ನಿನ್ನ ತುಟಿಯಂಚು ನನ್ನ ಕಣ್ಣರೆಪ್ಪೆಯ ಸೋಕಿ ಜಾರುವ ಮುತ್ತಿಗೂ ಮುನ್ನ
ನನ್ನ ಭಾವನೆಗಳನ್ನೆಲ್ಲ ಕವಿತೆಯಲಿ ಪೋಣಿಸಿ ಮಾಡಿದ
ಮುತ್ತಿನ ಹಾರವನ್ನು ನೀನು ಕೊರಳಿಗೆ ಧರಿಸಿದರೆ ಎಷ್ಟು ಚೆನ್ನ
ನವಿಲೊಂದು ನಕ್ಕಿತಂತೆ ದಡದಲ್ಲಿ 
ನದಿಯಲ್ಲಿ ಅರಳಿದ ನೈದಿಲೆಯ ಅಂದ ಕಂಡು 
ನವಿಲ ಕಂಡ ನೈದಿಲೆ ನಾಚಿ ನಲಿಯಿತಂತೆ 
ಅದರ ಸುಂದರ ಗರಿಗಳ ನೋಡಿ 
ಇವರಿಬ್ಬರ ಭಾವಗಳ ನೋಡಿದ ನಿಸರ್ಗ ಮಾತೆ 
ಮುಗುಳ್ನಗುತ್ತ ಅಂದಳಂತೆ ಮಕ್ಕಳೇ 

ಹೀಗೆ ನಗು ನಗುತ್ತಾ ನೀವು ಬದುಕಿದರೆ
ಸಾರ್ಥಕ ನನ್ನ ಬಾಳು ಎನ್ನುತ್ತದೆ ಈ ಧರೆ

Thursday, 2 January 2014

ಆಸೆ

ಒಲವಿನ ಮುತ್ತನು ಸುರಿಸುವೆಯಾ ಎಂದು ಆಸೆಯಾಗಿ 
ಮನಸಾರೆ ಬರೆದೆ ಈ ಕವನ ನಿನಗಾಗಿ 
ನಿನ್ನ ತುಟಿಯಂಚು ನನ್ನ ಕಣ್ಣರೆಪ್ಪೆಯ ಸೋಕಿ ಜಾರುವ ಮುತ್ತಿಗೂ ಮುನ್ನ 
ನನ್ನ ಭಾವನೆಗಳನ್ನೆಲ್ಲ ಕವಿತೆಯಲಿ ಪೋಣಿಸಿ ಮಾಡಿದ 
ಮುತ್ತಿನ ಹಾರವನ್ನು ನೀನು ಕೊರಳಿಗೆ ಧರಿಸಿದರೆ ಎಷ್ಟು ಚೆನ್ನ