Monday, 30 May 2016

ಪ್ರೀತಿಸುವ ಮನಕೆ ಕಾಯುವುದೇ ಕಾಯಕ 
ಕಾಯಿಸುವ ಮನಸಿಗೆ ಆ ಮನಸ ಸೇರುವ ತವಕ 
ರಾಗಕ್ಕೆ ಭಾವವು ಸೇರಿ ಇಂಪಾದ ಸಂಗೀತ ಹರಿವಂತೆ 
ಕಾಯಕಕ್ಕೆ ತವಕ ಸೇರಿದರೆ ಅಂತ್ಯವಾಗುವುದು ವಿರಹ 
ಚಿಲುಮೆಯಂತೆ ಚಿಮ್ಮುವುದು ಪ್ರೇಮ ಬರಹ 

Friday, 27 May 2016

ಪುಸ್ತಕ ವೈಜ್ಞ್ಯಾನಿಕವೋ, ಸಾಮಾಜಿಕವೋ, ಹಾಸ್ಯವೋ, 
ಮನರನಜನೆಯೋ ಮತ್ತೊಂದೋ ಮೊಗದಂದೋ 
ಓದುಗರ ಆಯ್ಕೆ ಯಾವುದೇ ಇರಲಿ ಜ್ಞ್ಯಾನಕ್ಕೆ ಅಂತ್ಯ ಇರದು 
ಪುಸ್ತಕದ ಪುಟಗಳಂತೆ ಮನಸಿನ ಭಾವಗಳು ಬದಲಾಗುವುವು 
ಆ ಭಾವಗಳೆಲ್ಲ ಪುಟಗಳ ಸಾರದಂತೆ ಅನುಭವಿಸಿ ಓದಿದರೆ ಆನಂದ 
ಒತ್ತಾಯದಿಂದ ಓದಿದರೆ ಆಗುವುದು ಸಮಯದ ದಂಡ 
ಪ್ರೀತಿಯಿಂದ ಓದಿದರೆ ಪುಸ್ತಕ ಆಗುವೆ ಜ್ಞ್ಯಾನದ ಅರ್ಚಕ 

Thursday, 26 May 2016


ನಿನ್ನ ನಗುವೆಂಬ ಬೆಳದಿಂಗಳಲಿ ಹರಿದಾಡುವ ಒಲವು 
ನನ್ನ ಕಣ್ಣಿನ ಕಾಂತಿಯ ಸೇರಿದರೆ ಚಿಮ್ಮುವುದು ಕಾರಂಜಿಯು 
ನಿನ್ನ ತುಟಿಯಂಚಲ್ಲಿ ಒಂದು ಕಿರುನಗೆಯ 
ನಾ ಕಂಡರೆ ಸಾಕು ನನ್ನ ಮನಸು ನಲಿಯುವುದು
ಅರಳುತಿರುವ ಹೂವಲ್ಲಿ ಹರಿಯುತಿರುವ ನೀರಲ್ಲಿ 
ನಾ ಕಾಣಲು ಪರಿತಪಿಸುವೆ ಆ ನಿನ್ನ ನಗುವ 
ಇರುಳ ಚಂದ್ರನಲ್ಲೂ  ಕಾಣುತಿದೆ ನಿನ್ನ ಮೊಗವು 
ಆ ಚಂದ್ರನಿಗೂ ಸಾಟಿಯಾಗುತ್ತಿಲ್ಲ ನಿನ್ನ ನಗುವು
ನಾನಿರುವ ಪ್ರತೀಕ್ಷಣ ಬಯಸುವೆ ನಿನ್ನ ಆ ನಗುವ 
ಮರೆಯುವೆ ಅದ ನೋಡುತ ನನ್ನ ಮನದ ಭಾರವ 

Tuesday, 24 May 2016

ಬಂದೇ ಬಿಟ್ಟಿತು ಮತ್ತೊಂದು ಮಂಗಳವಾರ 
ಹೊತ್ತು ಹತ್ತಾರು ಕಾದಂಬರಿಗಳ ಹಾರ 
ಬೇಕಾದ ಕಾದಂಬರಿ ಎಂಬ ಹೂ ಆರಿಸಿ ನೀವೆಲ್ಲ 
ಅದನು ಕಿತ್ತು ನಿಮ್ಮ ಕೈಯಲ್ಲಿಡುವರು 
ಕಾದಂಬರಿ ಕೂಟದ ಮಾಲೀಕರೆಲ್ಲ 
ಹಾರವೆಲ್ಲ ಬಿಡಿ ಬಿಡಿ ಹೂಗಳಾದ ಮೇಲೆ 
ಒಂದೊಂದೇ ದಳವನ್ನು ಸವಿಯಿರಿ ನೀವೆಲ್ಲ 
ಅರ್ಪಿಸುತ್ತಾ ಧನ್ಯವಾದಗಳನು ಕಾದಂಬರಿಗಳಿಗೆಲ್ಲ 

Sunday, 22 May 2016

ಕೈಗೆಟುಕಿದರೆ ಒಂದು ಕಾದಂಬರಿ 
ಪುಟ ತಿರುವಿದರೆ ತೋರುವುದು ನೂರಾರು ಭಾವ ಲಹರಿ 
ಬಿಳಿಯ ಹಾಳೆಗಳಿಗೆ  ಕಪ್ಪು ಶಾಹಿಯ ಬಂಧನ 
ಓದುತ ಹೋದಂತೆ ಮನಸಿಗಾಗುವುದು ರೋಮಾಂಚನ 
ಹಾಳೆ ಬಿಳಿಯಾದರೂ ಶಾಹಿ ಕಪ್ಪಾದರೂ 
ಅದರಲ್ಲಿ ಅಡಗಿವೆ ರಂಗು ರಂಗಿನ ಭಾವನೆಗಳು 
ಅದನೋದುವ ಭಾಗ್ಯವ ಪಡೆದ ನನ್ನ ನಯನ 
ಹೇಳುತಿವೆ ಪುಸ್ತಕಗಳಿಗೆ ಮನದುಂಬಿ ನಮನ 

Friday, 20 May 2016

ನೀ ನಡೆವ ದಾರಿಯಲ್ಲಿ ಹೂನಗೆಯು ಸದಾ ಅರಳಿರಲಿ 
ನೀ ನುಡಿವ ಸ್ವರದಲ್ಲಿ ಸಂಗೀತವು ತುಂಬಿ ಹರಿಯಲಿ 
ಏನೇನೋ ಬಯಸುವ ಮನಸು
ಆಸೆಗಳೆಲ್ಲ ಕೈಗೂಡಿದರೆ ಎಂತಹ ಸೊಗಸು 

ವಿಧಿಯಾಟದ ಬುಟ್ಟಿಯಲ್ಲಿ ಸಿಹಿಯನ್ನು ಹೆಕ್ಕಿ 
ಕಹಿಯನ್ನು ಕುಟ್ಟುವ ಸೌಭಾಗ್ಯ ನನಗಿಲ್ಲ 
ಆಗಿದ್ದು ಆಗಲಿ ಸಿಕಿದ್ದು ಸಿಗಲಿ ನನಗಿಲ್ಲ ರೋದನೆ 
ನೀ ಸನಿಹವಿಲ್ಲ ಎಂಬುದೊಂದೇ ನನ್ನ ವೇದನೆ 

ನಿನ್ನ ಕಣ್ಣ ನೋಟದಲ್ಲಿ ಸದಾ ನನ್ನ ಬಿಂಬ ಕಾಣುತಿರಲಿ 
ನನ್ನ ಬಾಳಿನ ಕೊನೆವರೆಗೂ ನಿನ್ನ ನೆನಪು ಕಾಡುತಿರಲಿ 
ಅಲ್ಲಿಯವರೆಗೂ ನಾ ಬರೆಯುತಿರುವೆ ಒಲವಿನ ಕವನ 
ಅದು ನಿನ್ನ ಮನ ತಟ್ಟಿದರೆ ನನ್ನ ಬದುಕು ಪಾವನ 
ನಾನು ಓದಿದ ಕಾದಂಬರಿಗಳ ಹೆಸರಲ್ಲಿ ಹೆಣೆದಿರುವ ಸಾಲುಗಳು 
#ಕನ್ನಡ_ಕಾದಂಬರಿಗಳ_ಕೂಟ 
"ಡಾಲರ್ ಸೊಸೆಯ" ಕಾಲದಲ್ಲಿ 
"ಚೋಮನ ದುಡಿಯ" ಸೊಬಗನ್ನೇ ಮರೆತು 
"ಯಶಸ್ವಿ"ಯಾಗಿ "ಚಂದ್ರನ ಚೂರ"ನ್ನು ಓದಿದರೂ 
"ಸಿಂಗಾರೆವ್ವ" ನ ಸೌಂದರ್ಯವನ್ನು "ಧರ್ಮರಾಯನ ಸಂಸಾರ"ದಲ್ಲಿ 
ಹುಡುಕುವ ಆಸೆಯೇ "ಚಿಗುರಿದ ಕನಸು"

ನನ್ನ ಮನಸ ಕದ್ದು ಕನಸು ಕಾಣುವ ನಿನ್ನ 
ಗೊತ್ತಿಲ್ಲದೇ ಬಂದು ಬಿಗಿದಪ್ಪಿ ಬೆಚ್ಚಿ ಬೀಳಿಸುವ 
ನನ್ನ ಆಸೆಗೆ ನಿತ್ಯ ತಣ್ನೀರೆರಚುತಿದೆ ನಿನ್ನ ನಿಷ್ಕಲ್ಮಶ ಪ್ರೇಮ 
ಕಾರಣ ಅಷ್ಟು ಸುಂದರ ನಿನ್ನ ಸೆಳೆತದ ಮೋಹ 
ಸದಾ ಕನಸು ಕಾಣುತಿರಲಿ ನಿನ್ನ ನಯನ 
ಆ ಕ್ಷಣವೇ ನಮ್ಮಿಬ್ಬರ ಮನಸುಗಳ ಶುಭ ಮಿಲನ 

Thursday, 19 May 2016

ನಿನ್ನ ಬದಲಾದ ವರ್ತನೆಯನ್ನು ಗುರ್ತಿಸುವ ಜನ 
ಅವರ ಯಾವ ವರ್ತನೆಯಿಂದ ನೀನು ಬದಲಾದೆ ಎಂದು 
ಅವರು ಎಂದಿಗೂ ಗುರ್ತಿಸುವುದಿಲ್ಲ 

Wednesday, 18 May 2016

ಮಳೆ ಸುರಿದು ತಂಪಾಗಿದೆ ಇಳೆಯು 
ಬಿಟ್ಟಿದೆ ಭೂಮಿಯು ನೆಮ್ಮದಿಯ ನಿಟ್ಟುಸಿರು 
ಇಳೆಗೆ ಮಳೆ ಸುರಿದ ಕ್ಷಣ ನಲಿಯಿತು ನನ್ನ ಮನ 
ಬಿರು ಬೇಸಿಗೆಯಿಂದ ಕಂಗೆಟ್ಟಿದ್ದ ನನ್ನ ಮನ 
ಅರ್ಪಿಸುತ್ತಿದೆ  ಆ ವರುಣನಿಗೆ ತುಂಬು ಹೃದಯದ ನಮನ 
ಮಾಡುವೆ ಇಂದು ಆ ನಿಸರ್ಗ ಮಾತೆಗೆ ಪ್ರಾರ್ಥನ
ಹೀಗೆಯೇ ದಿನವು ಭುವಿಯು ತಂಪಾಗಿರಲಿ 
ಪ್ರಕೃತಿಯ ಮೇಲೆ ಸದಾ ಮನುಜರ ಪ್ರೇಮವಿರಲಿ 

Tuesday, 17 May 2016

ಕನ್ನಡ ಕಾದಂಬರಿಗಳ ಕೂಟ
ಹಗಲಿರುಳು ಎನ್ನದೇ ಕೊಡುತಿರುವೆ ನೀ ನನಗೆ ಕಾಟ 
ಊಟ ನಿದ್ದೆಗಳ ಮರೆಸಿ ನಿನ್ನಲ್ಲೇ ನನ್ನ ಮನವ ಬೆರೆಸಿ 
ನಿನ್ನ ಬಿಟ್ಟಿರಲಾರದಂಗೆ ಮಾಡಿದೆ ನನ್ನ ನಿನ್ನ ಒಡನಾಟ 
ಹೀಗೆ ಆಡುತಿದ್ದರೆ ನೀ ಇಂತಹ ಆಟ 
ಇಷ್ಟರಲ್ಲೇ ನಿನ್ನ ಸಂಪೂರ್ಣ ಆವರಿಸುವುದು ನನ್ನ ನೋಟ
ಆಗ ಕಿಚಾಯಿಸಿ ನಗುವ ಆಸೆ ನನಗೆ ನೋಡಿ ನಿನ್ನ ಪರದಾಟ 

Monday, 16 May 2016

ಮನವೆಂಬ ತಿಳಿನೀರ ಕೊಳದಲ್ಲಿ 
ಕೋಪ ದ್ವೇಷ  ನೋವು ನಿರಾಸೆ ಎಂಬ ಕಲ್ಲುಗಳ ಎಸೆದರೂ 
ಅವು ಕೊಳದ ತಳದಲ್ಲಿ ಮುಳುಗುವುದೇ ಹೊರತು 
ಪ್ರೀತಿ ಸ್ನೇಹಗಳ ಬೀಜ ಬಿತ್ತಿ ಭರವಸೆಯ ಬೆಳಕಲ್ಲಿ ಹುಟ್ಟಿ 
ಪರಿಶ್ರಮದ ಫಲವಾಗಿ ಅರಳುವ ಕಮಲದಂತೆ 
ಎಂದೂ ಸುಂದರವಾಗಿ ಕಾಣಲಾರದು 
ನಿನ್ನ ಮನವಾಗಿರಲಿ ಎಂದೆಂದೂ ತಿಳಿನೀರ ಕೊಳವಾಗಿ 
ಕಾಪಾಡು ನೀ ಅದನು ಆಗದಂತೆ ಸಾಗರದ ನೀರಾಗಿ 

Sunday, 15 May 2016

ನಿನ್ನ ಪ್ರೀತಿಯ ಪ್ರಮಾಣವ ಪರಾಮರ್ಶಿಸಿ ಪರಿಕಲ್ಪಿಸುವ ಪ್ರತಿಭೆ ನನಗಿಲ್ಲ 
ಕಾರಣ ಅದನು ತಿಳಿಯುವ ಕುತೂಹಲವೂ ಎನಗಿಲ್ಲ 
ನನ್ನ ಮನಸ ಕದ್ದು ನೀ ಕನಸು ಕಾಣುವಾಗ ನಾ ಬಂದು ಬಿಗಿದಪ್ಪಿದಾಗ 
ನಿನ್ನ ಕಂಗಳ ಕಾಂತಿಯಲಿ ಹೊಳೆಯುವ ಒಲವನ್ನು ನೋಡಿದರೆ 
ತಿಳಿಯುವುದು ನೀ ನನ್ನ ಪ್ರೀತಿಸುವ ಪರಿಯೇನು 
ಅದನ್ನು ಅನುಭವಿಸುವ ಪುಣ್ಯ ಪಡೆದ ನನ್ನ ಹಿರಿಮೆಗೆ ಸಾಟಿ ಏನು... ?

Wednesday, 11 May 2016

ನಾ ತಿರುವುತಿದ್ದೆ ಪುಟಗಳನು ಒಂದಾದ ಮೇಲೊಂದರಂತೆ 
ಬಿಚ್ಚಿಡುತ್ತಾ ಹೋಯಿತು ನೂರಾರು ಭಾವಗಳನು ಆ ಪುಸ್ತಕವು 
ಪ್ರತೀ ಪುಟದಲ್ಲಿಯೂ ಬಿಂಬಿತವಾಗಿದೆ ನೋವು ನಲಿವುಗಳ ತಲ್ಲಣ 
ಓದುವ ಪ್ರತೀಕ್ಷಣ ಆಗುವುದು ಮನದಲ್ಲಿ ರೋಮಾಂಚನ 
ಹಸಿವಿನ ಅರಿವಿಲ್ಲ ನಿದ್ದೆಯ ಸುಳಿವಿಲ್ಲ ಪುಸ್ತಕದೇ ರಾಜ್ಯಭಾರ ಮನದಲ್ಲಿ 
ಸಿಲುಕಿರುವೆ ನೈಜ ಜೀವನದ ಚಿತ್ರಿಸುವ ಕಲೆಯ ಸುಳಿಯಲ್ಲಿ 
ಕೊನೆಪುಟವ ಓದಿ ಮುಗಿದಮೇಲೆಯೇ ತೀರಿತು ದಾಹ 
ಏನು ಮೋಡಿ ಮಾಡಿ ಹೋಯಿತೋ ಆ ಪುಸ್ತಕದ ಮೋಹ 

Friday, 6 May 2016

ಏನೆಂದು ಬರೆಯಲಿ ಅಮ್ಮ ನಾ ನಿನಗಾಗಿ 
ಶಾರದಾಂಬೆಯೂ ಕರುಣಿಸರಾಳಲು ನಿನ್ನ ವರ್ಣಿಸುವ ಪದವನ್ನು 
ನೀನಿಲ್ಲದ ನನ್ನ ಬಾಳು ಊಹಿಸಲೂ ಅಸಾಧ್ಯ 
ಎಂತಹ ಕರುಣೆ, ಸಹನೆ ತಾಯಿ ನಿನ್ನದು 
ನಿನ್ನ ಪ್ರೇಮಾಮೃತದಲ್ಲಿ ಮಿಂದು ಬೆಳೆದ ಈ ಮಗಳು 
ಇವತ್ತು ಮಾತ್ರ ತಾಯಂದಿರ ದಿನವೆಂದು ಶುಭಾಷಯ 
ಹೇಳಿದರೆ ನೀ ಕೊಟ್ಟ ಪ್ರೀತಿಗೆ ನಾ ಬೆಲೆ ಕಟ್ಟಲಾದಿತೆ 
ನನ್ನ ಕೊನೆಯುಸಿರು ಇರುವರೆಗೂ ನಾ ಬಯಸುವೆ ನಿನ್ನ ನಗುವ 
ನನ್ನ ಬದುಕಿನ ಕೊನೆದಿನವು  ಬರುವರೆಗೂ ನಾ ಹೇಳುವೆ 
ನಿನಗೆ ತಾಯಂದಿರ ದಿನದ ಶುಭಾಷಯ 

Monday, 2 May 2016

ಮುಗಿಲ ಹೆಗಲ ಹತ್ತಿ ನನ್ನೊಡಲ ಸಂಕಟ ಹೊರಹಾಕಬೇಕೆಂದಿದ್ದೆ 
ಈ ಬಿಸಿಲನು ತಾಳದೇ ಅಂಬರದ ನೇಸರನ ಮುಟ್ಟಿ ಅಳಬೇಕೆಂದಿದ್ದೆ 
ವೈಜ್ಞ್ಯಾನಿಕವಾಗಿ ಸೂರ್ಯ ಇಡೀ ಭೂಗ್ರಹಕ್ಕೆ ಬೆಳಕು ನೀಡುವ ನಕ್ಷತ್ರ 
ವೈದಿಕವಾಗಿ ಅರುಣ ನಾವು ದಿನವೂ ಕೈಮುಗಿವ ದಿನಕರ 
ಆ ಹೊಳೆವ ನಕ್ಷತ್ರನೆಲ್ಲಿ ಈ ಸಾಮಾನ್ಯ ಹುಡುಗಿಯಲ್ಲಿ ...??
ಆದರೂ ಅವನು ದೇವನಲ್ಲವೇ ಈ ಭಕ್ತೆಯ ಕೂಗು ಕೇಳುವುದಿಲ್ಲವೇ.. 
ಕರುಣೆ ತೋರು ಓ ಅರುಣನ್ನ  ಕಳುಹಿಸಿಕೊಡು ಭುವಿಗೆ ಆ ವರುಣನ್ನ 
ನಿನಗಾಗಿ ನೀ ಬದುಕು ಪ್ರತೀಕ್ಷಣ 
ಯಾರಿಲ್ಲ ಇಲ್ಲಿ ನೀಡಲು ನಿನಗೆ ಸಾಂತ್ವನ 

ಎಷ್ಟೆಂದು ನಿರೀಕ್ಷಿಸುವೆ ನಿಷ್ಕಲ್ಮಷ ಪ್ರೀತಿಯ 
ಬದುಕಲು ಕಲಿಯಬೇಕು ಬೇರೆ ರೀತಿಯ 

ಮುಖವಾಡ ತೊಟ್ಟು ಪ್ರೀತಿಸುವ ಸಾರ್ಥಿಗಳೇ ಹೆಚ್ಚು 
ಅದಕ್ಕೆಂದೇ ನೀ ಅವರಿಗೆ ಹಚ್ಚು ಬುದ್ಧಿಯ ಕಿಚ್ಚು 

ಬೇರೆಯವರನು  ನಂಬಿ ಬದುಕದಿರು 
ಆತ್ಮವಿಶ್ವಾಸದ ದಿಟ್ಟ ಹೆಜ್ಜೆಗಳನು ನಿಲ್ಲಿಸದಿರು