Friday, 29 April 2016

ಅಪ್ಪ ನೀ ಇಂದು ಹುಟ್ಟಿದ ದಿನ 
ಕವನ ಬರೆಯಲು ಬಯಸುತಿದೆ ನನ್ನ ಮನ 
ನನ್ನ ಪ್ರಾಣಕ್ಕಿಂತ ಹೆಚ್ಚಾಗಿರುವ ನಿನಗೆ 
ಏನೆಂದು ವರ್ಣಿಸಲಿ ಎಲ್ಲಿಂದ ಬರೆಯಲಿ 
ತೋಚದೇ ಕಂಗಾಲಾಗಿ ಕೂತಿರುವೆ 
ತಪ್ಪಿದ್ದಾಗ ತಿದ್ದಿ ಅತ್ತಾಗ ಮುದ್ದಿಸಿ 
ವಾತ್ಸಲ್ಯವೆಂಬ ಅಮೃತವ ಕುಡಿಸಿ ಬೆಳೆಸಿದೆ 
ಜಗದಲ್ಲಿ ನಿನಗಿಂತ ಹೆಚ್ಚು ನನಗ್ಯಾರಿಲ್ಲ 
ನೀ ಕೊಟ್ಟ ಪ್ರೀತಿಯನು ಮತ್ತಾರೂ ಕೊಡಲೂ ಸಾದ್ಯವಿಲ್ಲ 
ನಿನ್ನ ಹುಟ್ಟಿದ ದಿನ ನನ್ನ ಪ್ರಾರ್ಥನೆಯೊಂದೆ 
ನನ್ನುಸಿರು ಇರುವರೆಗೂ ನೀ ನಗುತಿರು 
ಪ್ರತೀ ಜನ್ಮದಲ್ಲೂ ನಿನ್ನ ಮಗಳಾಗೆಂದು ಹರಸುತಿರು 

Thursday, 28 April 2016

#ಆಂಗ್ಲ_ಸಂದೇಶದ_ಅನುವಾದ 
ನನ್ನ ಮೌನ ಹೃದಯ ಹೇಳುತಿದೆ 
ನನ್ನ ಉಪಸ್ಥಿತಿ ಕೆಲವೊಬ್ಬರಿಗೆ ನೋವಾಗಬಹುದು 
ಆದರೆ ಖಂಡಿತವಾಗಿ ನಾ ಹೇಳುವೆ 
ನನ್ನ ಅನುಪಸ್ಥಿತಿ ಯಾರಿಗೂ  ನೋವು ಮಾಡದು 
ಅದಕೆ ನಾ ಸ್ವಂತ ಆಯ್ಕೆಯಿಂದ ಏಕಾಂಗಿ ಆಗಿರುವೆ 

Wednesday, 27 April 2016

ನಿನ್ನ ನಿರಾಶೆಗೊಳಿಸಿದ ವ್ಯಕ್ತಿಯನ್ನು ದೂರುವುದಕ್ಕಿಂತ 
ಅವರಿಂದ ನಿರೀಕ್ಷಿಸಿದ್ದಕ್ಕೆ ನಿನ್ನ ನೀನು ದೂರಿಕೋ 
ಕಾರಣ ಅತೀ ನಿರೀಕ್ಷೆ ಇದ್ದಲ್ಲಿ ನಿರಾಶೆ ಕಟ್ಟಿಟ್ಟ ಬುತ್ತಿ 

Tuesday, 26 April 2016

#ಮೌನಿಯ_ಕವನ 
ಬಯಸುತಿದೆ ಮಾತು ಶಾಶ್ವತ ಮೌನ 
ಆದರೂ ನೂರಾರು ಭಾವಗಳಿಂದ ತುಂಬಿದೆ ಮನ 
ಮಾತು ಮೌನವಾದಮೇಲೆ ಹೇಳಲಿ ಏನನ್ನ 
ಅದಕ್ಕೆಂದೇ ಲೇಖನಿ ಹಿಡಿದು ಗೀಚುವೆ ಕವನ 

Monday, 25 April 2016

ಓ ಸೂರ್ಯ ಏಕಯ್ಯ ಈ ಕೋಪ 
ಸಾಕು ಮಾಡು ನಿನ್ನ ತಾಪ 
ಕ್ಷಮಿಸಿ ತಣ್ಣಗಾಗು ನಮ್ಮ ಪಾಪ 
ಬಳಲಿ ಬೆಂಡಾಗಿದೆ ಈ ಭೂಮಂಡಲ 
ಶಾಂತನಾಗಿ ಹಿಂತೆಗೆದುಕೊ ನಿನ್ನ ಕೆಂಡಾಮಂಡಲ 
ಮಳೆಯ ಹನಿಯೇ ಆಗಿದೆ ಎಲ್ಲರ ಹಂಬಲ 
ಭುವಿಗೆ ಚೆಲ್ಲು ಬರಿಯ ಬೆಳಕಿನ ಕಿರಣ
ಕರುಣೆ ತೋರಿ ಬದುಕಿಸಿ ಓ ಅರುಣ 

Wednesday, 20 April 2016

ಪ್ರೀತಿಯ ಪಲ್ಲವಿಯ ಬರೆಯಲು ಕುಳಿತಿದ್ದಾಗ 
ಸ್ನೇಹದ ಕರೆಯೊಂದು ಓಡೋಡಿ ಬಂತು 
ಆ ತುಡಿತಕ್ಕೆ ಒಳಗೊಟ್ಟು ಮರೆತೇಬಿಟ್ಟೆ ಪ್ರೇಮವ 
ಇನ್ನೆಂದೂ ನೋಡಲು ಸಾದ್ಯವಿಲ್ಲ ಅಂತಹ ಸ್ನೇಹವ   
ಕಾರಣ ನಾ ಪ್ರೀತಿಸುವೆ ಸ್ನೇಹವ ಪ್ರೀತಿಗಿಂತ ಹೆಚ್ಚು 
ಅದಕೆ ಏನೋ ಸ್ನೇಹಕ್ಕೆ ನನ್ನ ಕಂಡರೆ ಅಚ್ಚುಮೆಚ್ಚು 

Monday, 18 April 2016

ನೀ ನನ್ನ ಉತ್ಸಾಹದ ಚಿಲುಮೆಯೋ ಹೃದಯದ ಜ್ಯೋತಿಯೋ 
ಆತ್ಮದ ಶಾಂತಿಯೋ ಕಣ್ಣಿನ ದೃಷ್ಟಿಯೋ ಯಾವುದೂ ನಾ ಅರಿಯೇ 
ತನು ಮನಗಳಲ್ಲಿ ಬೆರೆತಿರುವ ನಿನ್ನನ್ನು ಬಿಟ್ಟಿರಲು 
ಇದ್ಯಾವ ಪರಿಯ ಅಸಾಹಯಕತೆಯು ಬೆನ್ನತ್ತಿ ಕಾಡುತಿದೆಯೋ 
ಏನೇ ಇದ್ದರೂ ನನ್ನ ವಿಧಿ ನೀನೆ ನನ್ನ ಬಾಳಿನ ನಿಧಿ 
ನಿಷ್ಕಲ್ಮಶ ಪ್ರೇಮದಿಂದ ಪೂಜಿಸುವೆ ನಾ ನಿನ್ನ 
ಎಲ್ಲಿದ್ದರೂ ಮರೆಯದೇ ಅಪ್ಪು ನೀ ನನ್ನ ಮನವನ್ನ 
ನೈದಿಲೆಯಂತ ನಿನ್ನ ನಯನದಲ್ಲಿ ಕಾಣುವೆ ಆ ದೇವರನ್ನು 
ಇದೊಂದೇ ನಾ ಅರಿತಿರುವೆ ಮತ್ತೆಲ್ಲವ ನಾ ಮರೆತಿರುವೆ 

Friday, 15 April 2016

ನಿನ್ನ ನೆನಪುಗಳೆಂಬ ಮುತ್ತುಗಳನು ಆರಿಸುವಾಗ 
ಏನೋ ಒಂದು ರೋಮಾಂಚನ ಮನದಲ್ಲಿ 
ಆರಿಸಿ ಪೋಣಿಸಿ ಸುಂದರ ಹಾರ ಮಾಡಲು ಕಾಯುತಿರುವ 
ನನ್ನ ಮನಕೆ ನಿನ್ನ ಆಸರೆಯೇ ತಾನೇ ಸ್ಫೂರ್ತಿ 
ಎಲ್ಲಿದ್ದರೂ ಬೇಗನೇ ಓಡೋಡಿ ಬಾರೋ ಇನಿಯ 
ಹಾಕುವೆ ಆ ಮುತ್ತುಗಳ ಹಾರವ ನಿನ್ನ ಕೊರಳ ಸನಿಹ 
ಸಾಕಾಗಿದೆ ಎನಗೆ ಈ ವಿರಹ ಅದಕ್ಕೆಂದೇ ಕಟ್ಟಿರುವೆ ಈ ಹಾರ 
ಕಾಯುವ ಮನಸಿಗೆ ನೋವು ಮಾಡದೆ ಬಂದು ಅಪ್ಪಿಬಿಡು 
ಅಗಲಿದ ನೋವಿಂದ ಬಳಲಿದ ಮನಕೆ ಮುಕ್ತಿಯ ಕೊಟ್ಟುಬಿಡು 

Thursday, 14 April 2016

ಅಂಬರದ ನೆಸರನೇ ಏಕೆ ಕೋಪ ಈ ಧರೆಯ ಮೇಲೆ 
ನೀ ಉದಯವಾಗಿ ಅಸ್ತಂಗತನಾಗಿ ಹೋದರೂ 
ಕೆಂಡದಂತೆ ಸುಡುತಿದೆ  ಈ ಭುವಿಯು 
ಇಡೀ ಭೂಮಂಡಲಕ್ಕೆ ಬೆಳಕು ನೀಡುವ 
ನಿನ್ನ ವಿಶಾಲ ಮನದಲ್ಲಿ ಏಕೆ ಬಂತು ಈ ಆಕ್ರೋಶ 
ಭೂ ಜೀವಿಗಳೆಲ್ಲ ದಹಿಸಿದರೆನಾ ನಿನಗೆ ಸಂತೋಷ...???
ಸುರಿಸಬೇಡ ಬೇಡ ಸೂರ್ಯದೇವ ಈ ಬೆಂಕಿಮಳೆಯ 
ತಾಳಲಾರದೇ ಸಾಯುತ್ತಿವೆ ಜೀವಿಗಳು ಆ ಜ್ವಾಲೆಯ 
ಕೈ ಮುಗಿದು ಕೇಳುತಿರುವೆ ನಾ ನಿನಗಿಂದು 
ನಿನ್ನ ಬೆಂಕಿಮಳೆಯ ನಿಲ್ಲಿಸಿ ಸುರಿಸಲು ಹೇಳು 
ವರುಣನಿಗೆ ನೀರಿನ ಮಳೆಯ ತಂಪಾಗಿಡಿಸಲು ಈ ಇಳೆಯ 
ಈ ಕೂಗು ಕೇಳಿ ಶಾಂತನಾಗಿ ನೀ ನೀಡಿದರೆ ಈ ವರವ 
ಕೊನೆವರೆಗೂ ಋಣಿಯಾಗಿರುವೆ ನಾ ನಿನಗೆ ಎಂದೆಂದೂ 

Wednesday, 13 April 2016

ಉತ್ತರ ಸಿಗದ ಪ್ರಶ್ನೆಗಳ ಹಿಂದೆ ಓಡುತ್ತಾ 
ಬಾರದ ಅದೃಷ್ಟವ ಕಾಯುತ್ತ 
ಪ್ರತೀ ಪ್ರಯತ್ನದಲ್ಲಿಯೂ ಸೋಲುತ್ತಾ 
ನೋವಿನ ಮೇಲೊಂದು ನೋವನ್ನು ತಿನ್ನುತ್ತಾ 
ಆತ್ಮಸ್ಥೈರ್ಯವ ಕಳೆದುಕೊಳ್ಳದೇ ಜೀವಿಸುತ್ತಾ 
ಒದ್ದಾಡದ ಹೊರತು ಹೋಗುವೆ ನೀ ಎಲ್ಲಿಗಂತ...??

Sunday, 10 April 2016


ನೆನೆಸಿದಂತೆಲ್ಲ ಗೀಚಲು 
ಜೀವನವೇನು ಕವನವೇ...???
ಬರೆದಂತೆಲ್ಲ ನಡೆಯಲಿ ಎನ್ನಲು 

ಕವನವೇನು ಜೀವನವೇ...???

Thursday, 7 April 2016

ನಗುವ ಮಲ್ಲಿಗೆಯ ನೋಡಿ ನಾಚಿದ ಸೂರ್ಯ 
ನನ್ನ ಶಾಖದಿಂದ ಬಾಡಿ ಹೋಗುವುದಲ್ಲ ಎಂದು ಮರುಗಿದ 
ಗೂಡು ಕಟ್ಟಿ ಚಿಲಿಪಿಲಿ ಎಂದು ಗುನುಗುತಿದ್ದ ಹಕ್ಕಿಗಳ ಕಂಡ ಮರವು 
ನಾ ನೆಲಕೆ ಕುಸಿದು ಬಿದ್ದರೆ ಈ ಜೀವಗಳ ಗತಿಯೇನೆಂದು ನೊಂದಿತು 
ನೀರಲ್ಲೇ ಈಜಿ ಕುಣಿದು ಕುಪ್ಪಳಿಸಿ ಬದುಕುವ  ಮೀನುಗಳ ಕಂಡು 
ನಾನೇ ಬತ್ತಿದರೆ ಇವುಗಳ ಪಾಡೇನು ಎಂದು ಕೆರೆಯು ಕಣ್ಣೀರಿಟ್ಟಿತು 
ಪ್ರಕೃತಿಯೇ ಪ್ರಕೃತಿಯ ಜೀವಿಗಳ ಬಗ್ಗೆ ಮರುಗುತ್ತಿರುವಾಗ 
ಪ್ರಕೃತಿಯನ್ನು ವಿಕೃತಿಗೊಳಿಸುತ್ತಿರುವ ಮನುಜನೇಕೆ ಸುಮ್ಮನಿರುವನೋ...??

Wednesday, 6 April 2016

ಕಳೆಯುತಿದೆ ಇಂದು ಹಳೆಯ ವರುಷ 
ಆಗಮಿಸುತಿದೆ ನಾಳೆ ನವ ವರುಷ 
ತರಲಿ ಈ ಯುಗಾದಿ ಎಲ್ಲರಿಗೂ ಹರುಷ 
ನಾಳೆ ಬರುವ ಯುಗಾದಿ 
ಆಗಲಿ ಎಲ್ಲರಿಗೂ ಶಾಂತಿ ನೆಮ್ಮದಿಯ ಆದಿ 
ತಿನ್ನೋಣ ನಿರಾಸೆ ಕೋಪ ದ್ವೇಷವ ಮರೆತು ಬೇವನು 
ಸೇರಿಸಿ ಹೊಸ ಭರವಸೆಗಳ ಮೂಡಿಸುವ ಬೆಲ್ಲದಲಿ 
ಬಾಳೊಂದು ಸಿಹಿ ಕಹಿಗಳ ಸಂಗಮ 
ಅದಕ್ಕೆಂದು ಹಂಚಿ ತಿಂದು ನಲಿಯೋಣ ಬೇವು ಬೆಲ್ಲವ 

Tuesday, 5 April 2016

ಕವಿಯ ಪ್ರಪಂಚ ಕಾವ್ಯದಲ್ಲಿ ಬಿಂಬಿತವಾದರೆ  
ಕಲಾಕಾರನ ಪ್ರಪಂಚ ಕುಂಚದಲ್ಲಿ ಚಿತ್ರಿತವಾದಂತೆ 
ಶಿಲ್ಪಿ ಕಲ್ಲಲ್ಲಿ ಪ್ರಪಂಚವ ಕೆತ್ತುವನು 
ಇರುವುದು ಒಂದೇ ಪ್ರಪಂಚವಾದರೂ 
ಹೀಗೆ ಒಂದು ಮತ್ತೊಂದು ಮೊಗದೊಂದು ರೂಪದಿ 
ಅವರವರ ಇಷ್ಟದ ಭಾವದಿ ಆಗುವುದು ಪ್ರಪಂಚ ಪರ್ಯಟನೆ 
ನೋಡುವ ಕಂಗಳು ಸವಿಯುವುವು ಅವರಿಷ್ಟದ ಕಲ್ಪನೆ 
ಸಾಗೋಣ ನಾವು ಹರಸುತ ಸವಿಯುತ  ಆ ಕಲೆಯ 
ಕಲಿಯೋಣ ನಾವು ನಮ್ಮ ಅಭಿರುಚಿಯ ಕಲೆಯ 

Monday, 4 April 2016

ಒಮ್ಮೆ ಬಣ್ಣ ಬಣ್ಣದ ಭಾವನೆಗಳು ಮುದ ನೀಡಿದರೆ 
ಮತ್ತೊಮ್ಮೆ ಸುಣ್ಣ ಬಳಿದು ಸುಡಬೇಕು ಎನ್ನುವಷ್ಟು ನೋವು ಮಾಡುವುವು 
ಮಾಯಾವಿ ಮನದೊಳಗೆ ಪ್ರೇಮಮಯಿ ಮನಸು ಕಾಲಿಟ್ಟರೆ 
ಆಗುವ ಆನಂದ ಪರ್ವತಗಿಂತಲೂ ಎತ್ತರ 
ಆದರೆ ಮೋಸ ಮಾಡಿ ಹೋಗುವ ಮನವು ಕಾಲಿಟ್ಟರೆ 
ಮನಸು ನರಳಿ ನರಳಿ ಸಾಯುವುದು ಥರ ಥರ 
ಭಾವನೆಗಳ ನಂಬಿ ಬಂಧನಗಳ ಸುಳಿಗೆ ಸಿಕ್ಕಿದರೆ 
ಬದುಕು ಅದೃಷ್ಟದ ಕೈಗೊಂಬೆಯಾಗಿ ಕುಣಿಯುವುದು ನಿರಂತರ 

Friday, 1 April 2016

ಮರೆತು ಹೋದ ಹಾಡಿಗೆ ನವ ರಾಗ ಸಿಕ್ಕಿದೆ 
ಬರೆಯಲಾಗದೆ ಒದ್ದಾಡುತಿದ್ದ ಮನದಲ್ಲಿ ಹೊಸ ಆಸೆ ಚಿಮ್ಮಿದೆ 
ನೀ ನನ್ನಿಂದ ಎಷ್ಟು ದೂರ ಓಡಿದರೂ ಬಿಡದೇ ಹಿಂದೆ ಸುತ್ತುವೆ 
ಬಾರದ ಭಾವನೆಗಳ ಸುಳಿಯದ ಭರವಸೆಗಳ ನಿನ್ನಲಿ ಕೆತ್ತುವೆ 
ನೀ ಎಲ್ಲಿದ್ದರೂ ಹೇಗಿದ್ದರೂ ತಾಯಿ ಮಗುವ ಮುದ್ದಿಸುವಂತೆ 
ನಾ ನಿನ್ನ ಮುದ್ದಿಸುವೆ ಓ ನನ್ನ ಮುದ್ದು ಕವನವೇ