Monday, 30 November 2015

ಮರಳಿ ಗೂಡಿಗೆ ಹೊರಡುವ ಸಮಯ ಬಂದಿದೆ 
ಇಲ್ಲಿದ್ದ ಪ್ರತೀಕ್ಷಣ ನಗುತಾ ನಲಿಯುತ ಅಳುತ 
ಸುಖ ದುಃಖಗಳ ಹಂಚಿಕೊಂಡು ತೋಚಿದ್ದು ಗೀಚಿಕೊಂಡು 
ನಿಮ್ಮ ಮನದ ಮೂಲೆಯಲ್ಲೊಂದು ಜಾಗವ ಹುಡುಕುತಿದ್ದೆ 
ಎಷ್ಟರ ಮಟ್ಟಿಗೆ ದಕ್ಕುವುದೋ ನಿಮ್ಮ ವಾತ್ಸಲ್ಯ ನಾ ಅರಿಯೆ 
ಹೋಗುವ ಮುನ್ನ ಮನಪೂರ್ತಿ ಬೇಡುವೆ ನಿಮ್ಮ ಕ್ಷಮೆಯನ್ನ 
ಪ್ರತೀ ಜನ್ಮಕೂ ಬೇಡುವೆ  ನಿಮ್ಮ  ಮಮತೆಯ ಮಡಿಲನ್ನ 

Wednesday, 25 November 2015

ಹಾರುವ ಹಕ್ಕಿಗೆ ಯಾರ ಹಂಗಿಲ್ಲ ಬೀಸುವ ಗಾಳಿಗೆ ಬೇಲಿಯೂ ಇಲ್ಲ 
ಹರಿವ ನೀರನು ತಡೆಯುವ ಶಕ್ತಿಯು ಇಲ್ಲ 
ಸುಡುವ ಬೆಂಕಿಯ ತಂಪಾಗಿಸುವ ಕಲೆ ಗೊತ್ತಿಲ್ಲ 
ಆದರು ಮನುಜರಾದ ನಮಗೆ ನಂದು ನಂದು 
ಎನ್ನುವ ಅಹಂಕಾರ ಹೋಗುವುದಿಲ್ಲ 
ಸದಾ ಜಾತಿ ಮತ ದ್ವೇಷ ಕ್ರೌರ್ಯ ಅಸಹಿಷ್ಣುತೆ ಎಂದು 
ಕೂಗಾಡುತ್ತಾ ಪ್ರಕೃತಿಯನ್ನು ವಿಕೃತಗೊಳಿಸುತ್ತ 
ಮೂಕಜೀವಿಗಳ ನೆಮ್ಮದಿ ಹಾಳುಮಾಡುತ್ತ ನಿಸರ್ಗವನ್ನು ಕೊಲ್ಲುತ್ತಿದ್ದರೆ 
ಭೂತಾಯಿಯ ಶಾಪಕ್ಕೆ ನಾವೆಲ್ಲ ಬಲಿಯಾಗದೆ ಇರುವುದಿಲ್ಲ 

Monday, 23 November 2015

ನನ್ನಯ ಕವನಕ್ಕೆ ಸ್ಫೂರ್ತಿ ನಿಮ್ಮ ಪ್ರೀತಿ 
ತಪ್ಪಿದ್ದಾಗ ತಿದ್ದಿ ಹೇಳಿದಿರಿ ಬುದ್ಧಿ 
ಸಂತಸವಾದಾಗ ಹರಸಿ ಹಾರೈಸಿದಿರಿ 
ಸ್ನೇಹ-ಪ್ರೀತಿ, ಮಳೆ-ಬೆಳೆ, ನೋವು-ನಲಿವು 
ಪ್ರಕೃತಿ-ವಿಕೃತಿ, ಭೂಮಿ-ಆಕಾಶ 
ಒಂದಲ್ಲ ಎರಡಲ್ಲ ನಾ ಬರೆದ ಕವಿತೆಗಳು 
ಸಿಕ್ಕಿವೆ ನನಗೆ ಸಾವಿರಾರು ಹೊಗಳಿಕೆ ಹಾರೈಕೆಗಳು 
ಏನೆಂದು ಬರೆದು ಧನ್ಯವಾದ ಅರ್ಪಿಸುವುದೋ ತೋಚದು 
ಆದರು ಇರಲಾಗುತ್ತಿಲ್ಲ ನಿಮಗೆ ವಂದಿಸದೇ ಇರಲು 
ಮನತುಂಬಿ ಹೇಳುತಿರುವೆ ನಾ ಇಂದು 
ನಿಮ್ಮೆಲ್ಲರ ಪ್ರೀತಿ ಅಭಿಮಾನಕ್ಕೆ ಚಿರಋಣಿಯಾಗಿರುವೆ ಎಂದೆಂದೂ 

Sunday, 22 November 2015

ತೋಚಿದ ಕವಿತೆಯ ಗೀಚುತ್ತಾ ಎಷ್ಟು ದಿನ ಕಳೆಯಲಿ 
ನನ್ನ ಭಾವನೆಗಳನು ಅಕ್ಷರಗಳಲಿ ಬೆರೆಸಿ ಕವನಗಳಾಗಿ ಪೋಣಿಸಿ 
ಬಿಳಿ  ಹಾಳೆಯ ಮೇಲೆ ಬಣ್ಣ ಬಣ್ಣದ ಭಾವನೆಗಳನು ಬಿಂಬಿಸಲು 
ಬೇಕಾಗಿದೆ ನನಗೆ ಪ್ರೀತಿಯೆಂಬ ಲೇಖನಿಯು 
ಅದರಲ್ಲಿ ತುಂಬಿರಬೇಕು ಮುಗಿಲಷ್ಟು ಪ್ರೇಮದ ಶಾಹಿಯು 
ಸಿಕ್ಕರೆ ಅಂತಹ ಸೌಭಾಗ್ಯ ನನಗೆ 
ಬರೆಯುತ್ತಲೇ ಇರುವೆ ಒಲವಿನ ಗೀತೆಯ ನಾನಿರುವವರೆಗೆ 

Thursday, 19 November 2015

ಅಹಂಕಾರದಿ ಮೆರೆಯಬೇಡ 
ಪ್ರೀತಿ ಸ್ನೇಹಗಳ ಮರೆಯಬೇಡ 
ಸಿಟ್ಟು ಸೆಡವುಗಳಿಗೆ ಬಲಿಯಾಗಬೇಡ 
ಸಹನೆಯ ಕಳೆದುಕೊಳ್ಳಬೇಡ 
ಶ್ರದ್ಧೆ ವಿನಯವೇ ನಮ್ಮ ಒಡವೆಗಳು 
ಬೇಡ ನಮಗೆ ಬೇರೆ ಗೊಡವೆಗಳು 
ಕಾರಣ ಆಕಾಶದ ಎತ್ತರಕ್ಕೆ ನಾವು ಬೆಳೆದರೂ 
ಮರಳಿ ಸೇರುವುದು ಮಣ್ಣಿಗೆ 

Wednesday, 18 November 2015

ದೀಪದಿ0ದ ದೀಪವ ಹಚ್ಚಿ 
ಮನಸಿ0ದ ಮನಸಿಗೆ ಪ್ರೀತಿಯ ಹ0ಚಿ 
ನಿಮ್ಮ ನಮ್ಮೆಲ್ಲರ ಬಾಳು ನ0ದಾದೀಪದ0ತೆ 
ಮಿನುಗುತಿರಲಿ ಎ0ದು ಹಾರೈಸಿ 
ಆಚರಿಸೋಣ ದೀಪಾವಳಿಯ
ಸಮಯ ಓಡುವುದೂ ಇಲ್ಲ ನಿಲ್ಲುವುದಿಲ್ಲ 
ಎಲ್ಲವು ನಮ್ಮ ಭ್ರಮೆಯಷ್ಟೆ... 
ಓಡುವ ಸಮಯವ ನಿಲ್ಲಿಸಲು ನಮ್ಮಿ0ದಾಗದು 
ನಿ0ತ ಸಮಯವ ಓಡಿಸಲೂ ಆಗದು... 
ಕಾಲಕ್ಕೆ ತಕ್ಕ0ತೆ ಆಡುವುದಷ್ಟೇ ನಮ್ಮ ಕಾಯಕ...
ಆಗೊಮ್ಮೆ ಕರೆದಿದ್ದೆ  ಬಾ ಮಳೆಯೇ ಬಾ ಎಂದು 
ಇಂದು ನಿನ್ನ ಬೇಡುತಿರುವೆ ಹೋಗು ಮಳೆಯೇ ಹೋಗೆಂದು 
ಜಿನುಗುವ ಹನಿಯು ಕಣ್ಣಿಗೆ ತಂಪಾಗಿ ಕಂಡರೆ 
ಆಗುತ್ತಿದೆ ಜನರ ಜೀವನಕ್ಕೆ ಬಹು ತೊಂದರೆ 
ಭಾರೀ ಮಳೆಯೋ ಚಂಡಮಾರುತವೋ ಅಬ್ಬಾ 
ನಿಸರ್ಗವೇ ಸಾಕು ಮಾಡು ನಿನ್ನ ರೌದ್ರನರ್ತನವ 
ಬದುಕಿಸಿ ಬಾಳಿಸು ನೊಂದ ಸಂತ್ರಸ್ತರ 
ಕೊಲ್ಲದಿರು ನಿನ್ನ ಸಹನೆಯ 

Sunday, 8 November 2015

ಮುಂಜಾವು ಇಂದು ಮಂಜಿನಿಂದಲೇ ಕೂಡಿತ್ತು 
ಹಸಿರೆಲೆಯ ಮೇಲೆ ಅರಳಿದ ಹೂಗಳೆಲ್ಲವೂ 
ಅಲಂಕೃತಗೊಂಡಿವೆ ಇಬ್ಬನಿಯ ಹನಿಗಳಿಂದ 
ಭೂದೇವಿಯು ತಂಪಾಗಿದ್ದಳು ವರುಣ ಸುರಿಸಿದ ಹನಿಮಳೆಯಿಂದ 
ಆಹಾ ಬೆಂಗಳೂರು ಸಹ ಮಲೆನಾಡಂತೆ ಕಂಗೊಳಿಸುತಿದೆ ಇಂದು 
ನನ್ನ ಮನವು ಕೂಡ ಇಂದು ತಂಪಾಗಿದೆ 
ಸೊಂಪಾಗಿ ಕವನ ಬರೆಯಲು ಆಸೆ ಚಿಮ್ಮುತಿದೆ