Saturday, 31 August 2013

ಬೀಳ್ಕೊಡುಗೆ

**********************************************************
ಸುಂದರ ಹೂವಿನ ಹಾಗೆ ಮುಖ ಅರಳಿಸಿ 
ಸದಾ ಮೊಗದಲ್ಲಿ ಮುಗುಳ್ನಗೆ ಬೀರುತ್ತಾ 
ದಿನ ಆರಂಭಿಸಿ ಎಲ್ಲರ ಪ್ರೀತಿಯ ಗಳಿಸುತ್ತಾ 
ಎಲ್ಲರ ಹೃದಯದಲ್ಲಿ ಮನೆ ಮಾಡಿದ ನೀವು 
ಇಂದು ವಿಶ್ರಾಂತಿಯ ಜೀವನಕ್ಕೆ ಕಾಲಿಡುತ್ತಿದ್ದೀರಿ 

ಈ ಕ್ಷಣ ನನ್ನ ಬಾಳಿನ ದೊಡ್ಡ ನೋವಿನ ಕ್ಷಣ 
ಏಕಾದರೂ ಈ ಸಮಯ ಬಂತೋ ನಾ ಅರಿಯೆ 
ಬೇಡವೆಂದರೂ ಬರುತ್ತಿದೆ ದುಃಖದ ನೀರು ಕಣ್ಣೊಳಗೆ 
ಆದರೂ ಇದ ಬದಲಾಯಿಸಲು ಆಗದು ನನಗೆ

ಬಂದೇ  ಬಿಟ್ಟಿತು ನಿಮ್ಮನ್ನು ಅಗಲುವ ದಿನ 
ಆಗಲಿ ನಿಮಗೆ ಇಂದಿನಿಂದ ಪ್ರತಿದಿನವೂ ಶುಭದಿನ 
ಹಾರೈಸುವೆ ನಾ ನಿಮಗೆ ಈ ಕ್ಷಣ 

ಸದಾ ನಿಮ್ಮ ಮೊಗದಲ್ಲಿ ತುಂಬಿರಲಿ ಹೂನಗೆ 
ತೋಚುತ್ತಿಲ್ಲ ಏನು ಉಡುಗೊರೆ ಕೊಡಲಿ ನಾ ನಿಮಗೆ 
ಉಡುಗೊರೆಯಾಗಿ ಬರೆದಿರುವೆ ಈ ಕವನ
ಖುಷಿ ತುಂಬಿದ ನಂದನವಾಗಲಿ ನಿಮ್ಮ ಜೀವನ 

Friday, 30 August 2013

ರಾಗದ ಹುಡುಕಾಟ

ಎಲ್ಲೋ ಗುನುಗುತಿದ್ದ ಸಂಗೀತದ ಸ್ವರವೊಂದು 
ಬಿತ್ತು ನನ್ನ ಕಿವಿಯ ಮೇಲೆ 
ಹುಡುಕುವ ಆಸೆಯು ಬಂದಿತು ಮನದೊಳಗೆ 
ಏನು ಮಾಡಿದರೂ ಸಿಗುತ್ತಿಲ್ಲ ಆ ರಾಗದ ಅಲೆ
ಅಲೆದು ಅಲೆದು ಸಾಕಾಗಿ ಮುಟ್ಟಿದೆ ನನ್ನ ಕಿವಿ ಓಲೆ 
ಕೈಗೆಟುಕಿತು ಆ ಹಾಡಿನ ಮೂಲ 
ಅದು ಬೇರೇನೂ ಅಲ್ಲ ನನ್ನ ಓಲೆಗೆ 
ಬೆಸೆದ  ಝುಮುಕಿಯ ನಾದ 

Wednesday, 28 August 2013

ಒಲವಿನ ಉದಯ

ಬೆರಳಿಗೆ ಉಂಗುರವಿಟ್ಟ ಆ ಕ್ಷಣ 

ಕೆನ್ನೆಯ ಮೇಲೆ ಗುಳಿಯೊಂದು ಮೂಡಿತು 
ಕಣ್ಣಲ್ಲಿ ಪ್ರೀತಿಯ ಮಿಂಚೊಂದು ಹರಿಯಿತು 
ಮನಸಿನಾಳದಲ್ಲಿ ಹೇಳಲಾಗದ ಆನಂದ 
ಹೃದಯದಲ್ಲಿ ಎಂದೂ  ಕಾಣದ ರೋಮಾಂಚನ 

ಎಲ್ಲೋ ಇದ್ದ ನಮ್ಮಿಬ್ಬರ 
ಬಂಧಿಸಿದೆಇಂದು ಆ ಉಂಗುರ 
ಮೂಡುತ್ತಿವೆ ಭಾವನೆಗಳು ಥರ ಥರ 

ಏನು ಚಂದದ ಅನುಭವವಿದು ಹೇಳಲಾಗುತ್ತಿಲ್ಲ 
ಪ್ರೀತಿಯ ಸೆಳೆತಕ್ಕೆ ಸಿಕ್ಕಮೇಲೆ ಈ 
ಮನಸು ನನ್ನ ಮಾತನ್ನೇ ಕೇಳುತ್ತಿಲ್ಲ 
ಇದಕ್ಕೆಲ್ಲ ಕಾರಣ ನೀನೆ ಓ ನನ್ನ ನಲ್ಲ 


Sunday, 25 August 2013

ಪುಟ್ಟನ ಕೋರಿಕೆ

ಅಕ್ಕರೆಯ ಅಪ್ಪ ಅಮ್ಮನಿಗೆ ಅನಾಮಿಕನ  ನಮನ
ನನಗಿದೋ ಇಂದು ಮಾಡುತಿರುವಿರಿ ನಾಮಕರಣ 
ಚಿನ್ನು ಪುಟ್ಟ ಮುದ್ದು ಬಂಗಾರ ಎಂಬ ಹೆಸರಿಂದಲೇ 
ಕರೆಸಿಕೊಳ್ಳುತ್ತಿರುವೆ ನಾ ಪ್ರತಿದಿನ 
ಮುದ್ದಾದ ಹೆಸರೊಂದನು ಬಯಸುತ್ತಿದೆ ನನ್ನ ಮನ 
ಈ ಶುಭಸಂದರ್ಭದಲ್ಲಿ ನಮ್ಮ ಮನೆ ಆಗಲಿ 
ನನ್ನ ಅಜ್ಜ ಅಜ್ಜಿಯರ ಆಶಿರ್ವಾದಗಳಿಂದ ಕೂಡಿದ ನಂದನ 

Thursday, 22 August 2013

ಆಸೆ

ನೈದಿಲೆಯ ನಯನವ ನೋಡುವ ಆಸೆ ಚಂದ್ರನಿಗೆ 
ತಾವರೆಯ ಅಂದ ಪದಗಳಲ್ಲಿ ಬಂಧಿಸುವಾಸೆ ಕವಿಗೆ 
ಆಗಸದಲ್ಲಿ ತೇಲುವ ಬೆಳ್ಳಿಮೋಡಗಳನ್ನು 
ಚುಂಬಿಸುವಾಸೆ ಗಿರಿಶಿಖರಗಳಿಗೆ 
ದೇವನ ಸೇರುವ ಪುಷ್ಪಗಳ ಮುದ್ದಿಸುವಾಸೆ ಆ ಬಳ್ಳಿಗೆ 
ಕವಿಯು ಮನುಜನಾದರೆ ಗಿರಿಯು 
ನಿಸರ್ಗ ಕೊಟ್ಟ ಸುಂದರ  ಉಡುಗೊರೆ 
ಮೇಲಿರುವ ತಾರೆಗಳಾದರೂ ಕೆಳಗಿರುವ ಗಿರಿಗಳಾದರೂ 
ಅವುಗಳ ಭಾವನೆಗೆ ಅವುಗಳೇ ಸಾಟಿ 



Wednesday, 21 August 2013

ಮದುವೆ


ಹೊಸಬಾಳಿನ ಹೊಸ್ತಿಲಲ್ಲಿ ನಿಂತಿರುವೆ 
ನಿನ್ನ ಮನಸೆಂಬ ಮನೆಯನ್ನು ನಾ 
ತುಂಬುವ ಅಮೃತಘಳಿಗೆಗಾಗಿ ಕಾದಿರುವೆ 
ಈ ಭಾವನೆಗೆ ಏನೆಂದು ಬರೆಯುವುದೋ ನಾ ಅರಿಯೆ 
ಅರಿಶಿನ ದಾರದ ನಂಟಿಗೆ ಅಕ್ಷತೆಯ 
ಆಶಿರ್ವಾದವ ಬೆರೆಸಿ ಪ್ರೀತಿಯ ಪಲ್ಲಕ್ಕಿಯಲ್ಲಿ ಹೊತ್ತು 
ಸಾಗುವ ಮದುವೆ ಎಂಬ ಮೂರಕ್ಷರಗಳ ಬಂಧನ 
ಆಗಲಿ ನಮ್ಮಿಬ್ಬರ ಮನಸುಗಳ ಶುಭಮಿಲನ 

Thursday, 15 August 2013

ಮೇಘಗಳ ಮಿಲನ

ಎಡೆಯಿಲ್ಲದೆ ಸುರಿಸುತ್ತಿವೆ ಮಳೆಯನ್ನು 
ಆ ಮೇಘಗಳು ಹೇಳುತ್ತಿರುವುದಾದರೂ ಏನು 

ಪ್ರೀತಿಯ ಮಳೆಯ ಬಯಸಿದೆ ಈ ಧರೆಯು 
ಬಹು ಪ್ರೀತಿಯಿಂದ ಬಿತ್ತಿರುವರು ಬೀಜಗಳನ್ನು 
ಜೋಪಾನವಾಗಿ ಬಿಗಿದಪ್ಪಿರುವಳು ಭೂತಾಯಿಯು 

ಆಗಸವು ಕಳಿಸಿದೆ ಇಳೆಗೆ ಮೇಘ ಸಂದೇಶವ 
ಕಾಯುತಿರುವಳು ಭೂತಾಯಿಯೂ ಮೇಘಗಳ ಮಿಲನವ 
ಆ ಮಿಲನದ ಫಲವೇ ಭೂತಾಯಿಯ ಮಡಿಲಲ್ಲಿ 
ಹುಟ್ಟುವುವು ಮನುಜರ ಹೊಟ್ಟೆ ತುಂಬುವ ಫಲವು 

ಓ ಮೇಘವೇ ಓಡೋಡಿ ಬಾ ನೀ ಈ ಇಳೆಗೆ 
ಹಸಿದ ಹೊಟ್ಟೆಯ ತುಂಬಿಸು ಬಾ 
ತನ್ನ ಮಕ್ಕಳ ಚಿಂತೆಯಲ್ಲಿರುವ ಭೂತಾಯಿಗೆ 
ನೆಮ್ಮದಿಯ ನೀಡಲು ನೀ ಬೇಗನೆ ಬಾ ಮೇಘವೇ 

Saturday, 3 August 2013

ಅರಿಯದ ಸತ್ಯ

ನೀ ಅರಿಯದ ಸತ್ಯವ ನಾ ಹೇಳಲೇ ಗೆಳೆಯ 

ಮನಸಾರೆ ನಾ ನಿನ್ನ ಪ್ರೀತಿಸುತ್ತಿರುವೆ 
ಪ್ರತೀ ಉಸಿರಲ್ಲೂ ನಿನ್ನ ಹೆಸರ ಜಪಿಸುತ್ತಿರುವೆ 
ನನ್ನ ಮನವೆಂಬ ತಿಳಿನೀರಲ್ಲಿ ನಿನ್ನ 
ಬಿಂಬವನ್ನಷ್ಟೇ ಕಾಣುತ್ತಿರುವೆ 
ನಾ ಬರೆಯುವ ಪ್ರತೀ ಕವನದಲ್ಲೂ 
ನಿನ್ನ ಕಲ್ಪನೆಯನ್ನೇ ಕೆತ್ತಿರುವೆ 

ಇಷ್ಟಾದರೂ ನೀ ನನ್ನ ಮನ ಅರಿಯದೆ 
ಗಾಳಿಗಿಂತ ವೇಗವಾಗಿ ದೂರ ಹೋಗುತಿರುವೆ 

ದಿನ ಸುರಿಯುವ ಈ ಪ್ರೀತಿ ಮಳೆಯಲ್ಲಿ ನಿನ್ನ 
ಜೊತೆ ನೆನೆಯುತ ಬದುಕಿನ ಪ್ರತಿಕ್ಷಣ ನಿನ್ನಲಿ 
ಬೆರೆಯುತ ಕೊನೆವರೆಗೂ ನಿನ್ನ ಬಾಹುಗಳಲ್ಲೇ 
ಬಂಧಿಯಾಗಿರುವ ಆಸೆ ನನಗೆ 
ಇದನರಿತು ನೀ ಬೇಗನೇ ಓಡಿ  ಬಾ  ನನ್ನಲ್ಲಿಗೆ 

Thursday, 1 August 2013

ಕರುನಾಡ ಕೂಸು

ಮಲೆನಾಡ ಮುಡಿಗೆ ಮಲ್ಲಿಗೆ ಮುಡಿಸಿದಂತೆ 
ಬೆಳ್ಳಿಮೋಡ ಮುತ್ತಿಕ್ಕುತ್ತಿದೆ ಬೆಟ್ಟಕ್ಕೆ 

ಹಾಲಿನ ಸಾಗರದಂತೆ ತುಂಬಿ ಹರಿಯುತ್ತಿದ್ದಾಳೆ  
ಶರಾವತಿಯು ಜೋಗ ಜಲಪಾತದಲ್ಲಿ 

ಎಲ್ಲಿ ನೋಡಿದರಲ್ಲಿ ಹಕ್ಕಿಗಳ ಕಲರವ 
ಹೂಗಳ ಸುಗಂಧ ಬೃಂದಾವನದಲ್ಲಿ 

ಹೇಗೆ ಎಣಿಸಲಿ ಈ ಕರುನಾಡ ಸ್ಥಳಗಳ ಸೊಬಗನ್ನು 
ಆಹಾ ಏನು ಆನಂದವೋ ಈ ಕಂಗಳಿಗೆ 

ಚಂದಕ್ಕಿಂತ ಚಂದವಾದ ತಾಣಗಳೇ ತುಂಬಿವೆ  
ಹೇಗೆ ಬಣ್ಣಿಸುವುದೋ ಈ ನೆಲದ ಮಹಿಮೆಯ ನಾ ಕಾಣೆ

ಅದಕ್ಕೆಂದೇ ಎಂದೆಂದಿಗೂ ನಾವು ಹೆಮ್ಮೆಯಿಂದ ಹೇಳುವ 
ಕರುನಾಡ ಕೂಸುಗಳಾಗಿ ಹುಟ್ಟಿದ ನಾವೇ ಪುಣ್ಯವಂತರೆಂದು