ನೀನ್ಯಾರೋ ನಾನ್ಯಾರೋ ಎಲ್ಲಿದ್ದೆವೋ ಹೇಗಿದ್ದೆವೋ
ಒಂದೂ ಅರಿಯದ ಮನಗಳೆರಡೂ ಬೆಸೆದುಕೊಂಡಿವೆ
ಒಂದನ್ನೊಂದು ಬೇರ್ಪಡಿಸಲಾಗದಂತೆ
ಸಾಕಾಗದ ಸರಸಗಳ ಜೊತೆ ಬೇಕಿರದ ವಿರಸಗಳ ವ್ಯಥೆ
ಎರಡರ ನಡುವೆ ಸಿಲುಕಿದ ಈ ಬಾಳಲಿ
ಎಂದೂ ಮುಗಿಯದು ನಮ್ಮಿಬ್ಬರ ಒಲವಿನ ಹಾವಳಿ
ಇದ್ದರೆ ಪ್ರೇಮದ ಬಾಳಲಿ ಸರಸ ವಿರಸಗಳ ಮಿಶ್ರಣ
ಎಂದಿಗೂ ಅನಿಸದು ನೀರಸ ಈ ಜೀವನ
ಕಿತ್ತಾಟಗಳ ಕಿರಿಕಿರಿಯ ಜೊತೆ
ತುಂಟಾಟ ತರಲೆಗಳ ಮಾತುಕತೆ
ಎಲ್ಲ ಬೆರೆಸಿ ಆನಂದಿಸುವ ಕ್ಷಣಗಳೆಲ್ಲ
ರುಚಿಸುವುವು ಜೇನಿನ ಹನಿಯಂತೆ
ನಾ ತೋಚಿದ್ದು ಗೀಚುವೆ ನೀ ತೋಚಿದ್ದು ಹೇಳುವೆ
ಎಲ್ಲಿರಲಿ ಹೇಗಿರಲಿ ನಮ್ಮ ಮನಸುಗಳು
ಪ್ರೇಮವೆಂಬ ಪವಿತ್ರ ಬಂಧನದಲಿ ಸದಾ ಜೊತೆಗಾರರು