Saturday, 17 November 2012

ಕೂಡು ಅಗಲುವಿಕೆಯ ಅನುಬಂಧ

ನೀ ನನ್ನ ಬಳಿ ಇದ್ದರೆ 
ಬಾಗಿಲಿಗೆ ಬೆಸೆದ ಹೊಸ್ತಿಲು 
ತೋರಣಕ್ಕೆ ಅಂದ ಕೊಡುವ ಹಸಿರು 
ಕಣ್ಣಿಗೆ ಕಾವಲಿರುವ  ರೆಪ್ಪೆ 
ಒಡಲಿಗೆ ಜೀವ ತುಂಬುವ ಉಸಿಉ 
ಕಡಲಿಗೆ ಹಿತ ನೀಡುವ ತೀರ ಇದ್ದಂತೆ 

ನೀ ನನ್ನ ಬಳಿ  ಇಲ್ಲದಿದ್ದರೆ 
ಕರಗುವ ಮಂಜಿನ ಹನಿ 
ಬಿಸಿಲಲಿ ಬದುವ ಸುಮ 
ನೆರಲನೆ ಕಾಣದ ಲತೆ 
ಜೇನಿನಿಂದ  ದೂರಾದ ಹೂವು 
ಸಿಡಿಲಿನ ಆರ್ಭಟಕ್ಕೆ ಬೆಚ್ಚುವ 
ಮರ ಇದ್ದಂತೆ 

ಅದಕ್ಕಾಗಿಯೇ ನಾನು 
ನನ್ನ ಮನಸೆಂಬ ಕನ್ನಡಿಯಲ್ಲಿ 
ನಿನ್ನ ಪ್ರತಿಬಿಂಬ ಶಾಶ್ವತವಾಗಿ 
ನೆಲಸಲಿ ಎಂದು ಬಯಸುವೆ 
ನೀ ನನ್ನ ಮರೆಯದಿರು 
ಓ ನನ್ನ ಜೀವದ ಉಸಿರೇ 

ಆಸರೆ

ಮನಸಿನ ಆಳದ ನೋವಿಗೆ 
ಪ್ರೀತಿಯೆಂಬ ತೈಲವೇ ಆಸರೆ 
ನೆನಪಿನ ದೋಣಿಯನ್ನು ನಡೆಸಲು 
ಸ್ನೇಹ ಎಂಬ ನಾವಿಕನೆ ಆಸರೆ 

ಹೊತ್ತಿ ಉರಿಯುವ ಕಾಡ್ಗಿಚ್ಚಿಗೆ 
ವರುಣ ದೇವನ ಕೃಪೆಯೇ ಆಸರೆ 
ಭವಿಷ್ಯದ ಕನಸುಗಳಿಗೆ 
ವಾಸ್ತವದ ಪರಿಶ್ರಮವೇ ಆಸರೆ 

ನಕ್ಷತ್ರಗಳಿಗೆ ಆಕಾಶವೇ ಆಸರೆ 
ಭೂಮಿಗೆ ಇರುಳಲಿ ಬೀಳುವ ಚಂದ್ರನ ಬೆಳಕೇ  ಆಸರೆ 
ಆದರೆ ಶಶಿಯೇ ನನಗೆ ನಿನ್ನ 
ಬೆಳದಿಂಗಳೇ ಆಸರೆ 

ಮುಗಿಲ ಕಾರ್ಮೋಡ ಕರಗಳು 
ಸೂರ್ಯನ ಕಿರಣಗಳೇ ಆಸರೆ 
ನನ್ನ ಮನದ ದುಗುಡ ತಿಳಿಯಾಗಲು 
ನಿನ್ನ ಒಲವಿನ ಮಾತುಗಳೇ ಆಸರೆ 

ನೀಹಾರಿಕ

ಕನಸಲಿ ಕಂಡ ನೀಹಾರಿಕೆಯ ಬಿಂಬ 
ಹುಡುಗನ ಮನಸಲಿ ಬೇರೂರಿದೆ 
ಯಾವಾಗ ಕನುವಲೋ ಎಂಬ 
ಹತೊರಿಕೆ ಅವನಿಗೆ 

ಆಕಾಶದಲ್ಲಿ ಕಂಡ ನಕ್ಷತ್ರಗಳ
ಗುಚ್ಛ ಭೂಮಿಯಿಂದ ನೋಡಿದ 
ನೀಹಾರಿಕೆಗೆ ಅವುಗಳನ್ನು 
ಎನಿಸುವ ಹಾತೊರಿಕೆ 

ಪ್ರತಿದಿನ ಆ ಒಂದೊಂದು ನಕ್ಷತ್ರಕ್ಕೆ 
ಅವನ  ಕಥೆ ಹೇಳಿ ಮಲಗುವ ಆಸೆ ಅವಳಿಗೆ 
ದಿನಕ್ಕೊಂದು ನಕ್ಷತ್ರಕ್ಕೆ ಬದುಕಿನ 
ಕೊನೆತನಕ ಕಥೆ ಹೇಳುವ ಹಾತೊರಿಕೆ 

ನೀಹಾರಿಕೆ ಇಲ್ಲವಾದ ಒಂದು ದಿನ 
ಆಕಾಶದ ಅಷ್ಟು ನಕ್ಷತ್ರಗಳು 
ಜಗತ್ತಿಗೆ ಅವರಿಬ್ಬರ ಕಥೆ ಹೇಳಲಿ 
ಎಂಬುದು ಅವಳ ಹಾತೊರಿಕೆ 

Friday, 2 November 2012

ಬಾ ಮಳೆಯೇ ಬಾ

ಬಾ ಮಳೆಯೇ ಬಾ
ಉರಿವ ಈ ಧರೆಯ 
ತಂಪಾಗಿಸಲು ಬಾ

ಈ ಭೂಮಿಯಲ್ಲೇ ಬದುಕಿ 
ಈ ಭೂಮಿಯನ್ನು ಅಗಿದು 
ಈ ಭೂಮಿಯೊಳಗೆ ಹುಗಿದು 
ಮುಗಿಸುವ ಮನುಷ್ಯನ ಬದುಕಿಗೆ 
ನಿನ್ನಾಸರೆಯೇ ಉಸಿರು ಓ ಮಳೆಯೇ

ನಿನ್ನಿಂದಲೇ ನಾವು ನೀನಿದ್ದರೆ ನಮ್ಮ ಬದುಕು
ನೀ ಮುನಿದರೆ ನಮಗೆ ಕೆಡುಕು
ಸುರಿದರೆ ಮಳೆ ನಗುವುದು ಈ ಧರೆ
ಮುನಿದರೆ ಮಳೆ ಬಿರಿಯುವುದು ಈ ಧರೆ 

ಓ ಮಳೆಯೇ ಇರಲಿ ನಿನಗೆ 
ಭೂಮಿಯ ಮೇಲೆ ಪ್ರೀತಿ
ನೀನಿದ್ದರೆ ನಮ್ಮ ಬಾಳು ನಿರ್ಭೀತಿ
ಬಾ ಮಳೆಯೇ ಬಾ 

ನೀನು ಮಿತವಾಗಿ ಸುರಿದರೆ 
ಹಿತವಾಗುವುದು ಈ ಇಳೆಗೆ
ಈ ಭೂಮಿಗೆ ಜೀವವು ನೀನೆ ಜೀವನವು ನೀನೆ
ಬಾ ಮಳೆಯೇ ಬಾ 

ನಿನ್ನ ರೌದ್ರನರ್ತನವನ್ನು ತೋರಿಸದೆ 
ಬರಿಯ ಹನಿಗಳನ್ನು ಸುರಿಸದೆ ಇರಬೇಡ 
ಮಿತವಾಗಿ ಸುರಿದು ಹಿತವಾಗಿ ಇರಿಸು ಈ ಭೂಮಿಯ
ಬಾ ಮಳೆಯೇ ಬಾ