Wednesday, 12 July 2017

ಕನಸುಗಳ ಕದವು ಮುಚ್ಚಿದಾಗ 
ಅವಕಾಶಗಳ ಬಾಗಿಲವ ಹುಡುಕಿ ತೆಗೆದರೆ 
ಹಸಿರಾಗಿ ಕಂಗೊಳಿಸುವುದು 
ವಾಸ್ತವ ಬದುಕೆಂಬ ಧರೆ 

ಸಮಯ

ಭೂತಕಾಲದ ನೋವನ್ನು ತೆಗೆದು 
ವರ್ತಮಾನವನ್ನು ಶಿಕ್ಷಿಸಿ 
ಭವಿಷ್ಯಕ್ಕೆ ಪಾರ್ಶ್ವವಾಯು ಹೊಡೆಸಬೇಡ 

ಇಲ್ಯಾವುದೂ ಶಾಶ್ವತವಲ್ಲ 
ಕಾಲವೊಂದೆ ಸತ್ಯ ನಾನೆಂಬ ಅಹಂವೆಲ್ಲ ಮಿಥ್ಯ 
ಕಾಲದ ಹಿಂದೆ ಓಡುವುದಷ್ಟೇ ನಮ್ಮ ಕಾಯಕ 

ಬದುಕಬೇಕು ನಾವು ವರ್ತಮಾನದಲ್ಲಿ 
ಮರೆಯಬೇಕು ನಾವು ಭೂತಕಾಲವನ್ನಿಲ್ಲಿ 
ಆಗ ನೆಮ್ಮದಿಯೇ ತುಂಬುವುದು ಭವಿಷ್ಯದಲ್ಲಿ 

ನೊಂದ ಮತ್ತು ಸ್ವಾರ್ಥ ಮನಸುಗಳ ನಡುವೆ

ಈ  ಭೂಮಿಯ ಮೇಲೆ ಸಂಭವಿಸುವ ಹುಟ್ಟು ಸಾವು ಕೇವಲ ಆಕಸ್ಮಿಕವೇ ಹೊರತೂ ಇಲ್ಯಾರೂ ಬಯಸಿಯೂ ಹುಟ್ಟಿಲ್ಲ, ಬಯಸಿ ಸಾಯುವುದೂ ಇಲ್ಲ. ಎಲ್ಲವೂ ಕಾಲನಿರ್ಣಯವಷ್ಟೇ ಎಂಬುದು ನನ್ನ ಅಭಿಪ್ರಾಯ. ಹುಟ್ಟುತ್ತಲೇ ಸುಖವ ಹೊತ್ತು ಎಲ್ಲರೂ ಹುಟ್ಟುವುದಿಲ್ಲ, ಹಾಗೆಯೇ ನೋವಿನ ಬುಟ್ಟಿಯ ಹೊತ್ತೂ ಯಾರೂ ಹುಟ್ಟುವುದಿಲ್ಲ. ಆದರೆ ನಮ್ಮ ಸುತ್ತಮುತ್ತ ಬಹಳಷ್ಟು ಜನರು  "ನಾ ಬಯಸಿದ ಬದುಕು ನನ್ನದಾಗಲಿಲ್ಲ, ನಾ ಬದುಕುವ ಬದುಕು ಬೇರೆಯವರ ಒತ್ತಾಯದ ಫಲ, ನನ್ನಾಸೆಗಳೆಲ್ಲವನ್ನು ಸಾಯಿಸಿ ಬೇರೆಯವರ ಖುಷಿಗಾಗಿ ಬದುಕುತಿರುವೆ" ಇತ್ಯಾದಿ ಇತ್ಯಾದಿ ಹೀಗೆ ಅನೇಕರು ಕೊರಗುತ್ತಲೇ ಇರುತ್ತಾರೆ. ಇದಕ್ಕೆಲ್ಲ ಹೊಣೆ ಯಾರು ಎಂಬ ಪ್ರಶ್ನೆಯೇ ಕಾಡುತ್ತಿರುತ್ತದೆ. 

ಬಯಸದೇ ಬಂದ ದೌರ್ಭಾಗ್ಯಕ್ಕೆ ಬಲಿಯಾದವರ ಮನವು ಕಲ್ಲಿನಂತೆ ಎಷ್ಟೇ ಪೆಟ್ಟು ಬಿದ್ದರೂ ಕರಗುವುದಿಲ್ಲ. ಆದರೆ ಅಂತರಂಗದಲ್ಲಿ ಬೆರೆತ ಪ್ರೀತಿ, ಕರುಣೆ, ವಾತ್ಸಲ್ಯವೆಂಬ ಅಮೂಲ್ಯ ಮೌಲ್ಯಗಳು ನಿಷ್ಕರುಣೆಯಿಂದ ಕರಗಿ ಹೋಗುತ್ತವೆ. ಇದಕ್ಕೆ ಹೊಣೆ ಯಾರೆಂದು ದೂರುವುದೊ ಆ ಮನಕ್ಕೆ ತಿಳಿಯದು, ಆದರೆ ಅದಕ್ಕೂ ಆಸೆಗಳಿವೆ, ಕನಸುಗಳಿವೆ, ಭಾವನೆಗಳಿವೆ ಎಂಬ ಸರಳ ಸತ್ಯ ಸ್ವಾರ್ಥ ಮನಗಳಿಗೆ ತಿಳಿಯದು, ತಿಳಿದರೂ ನೊಂದ ಮನಸಿಗೆ ಸ್ಪಂದಿಸುವ ದೊಡ್ಡ ಮನಸು ಮಾಡದು. ವಾಸ್ತವ ಬದುಕು ಹೀಗಿರುವಾಗ ಜೀವನದಲ್ಲಿ ಒಂದು ಕ್ಷಣವಾದರೂ ಪ್ರತಿಯೊಬ್ಬರಿಗೂ "ಯಾಕಾದರೂ ಬದುಕಿದ್ದೇನೋ" ಎಂಬ ನೋವು ಕಾಡಿಯೇ ಕಾದಿರುತ್ತದೆ. ಹಾಗಂತ ಅವರೆಲ್ಲರೂ ಸಾಯುತ್ತಾರೆಯೇ?? ಖಂಡಿತ ಇಲ್ಲ. 

ಹುಟ್ಟು ಹೇಗೆ ನಮ್ಮ ಕೈಯಲ್ಲಿ ಇಲ್ಲವೋ ಹಾಗೆ ಸಾವು ಕೂಡ ನಮ್ಮ ಕೈಯಲ್ಲಿ ಇಲ್ಲ. ಆದರೆ ಅವಕಾಶಗಳು ಮತ್ತು ಅವಕಾಶದ ಹುಡುಕಾಟ, ಬಯಸದ ಬದುಕಿಗೆ ಕೊನೆ, ಬಯಸುವ ಬದುಕಿಗೆ ನಾಂದಿ ಹಾಡುವ ಕಲೆ ಎಲ್ಲವೂ ನಮ್ಮ ಕೈಯಲ್ಲಿವೆ. ಕಣ್ಣಿನ ದೃಷ್ಟಿಯೊಂದನ್ನೇ ನಂಬದೆ ಅಂತರಂಗದ ದೃಷ್ಟಿಯನ್ನು ಎಚ್ಚರಿಸಿ ಬದುಕಿದರೆ ಸ್ವಾರ್ಥ ಮನಸುಗಳು, ಆಡಿಕೊಂಡು ನಗುವ ಮನಸುಗಳು, ದ್ವೇಷಿಸುವ ಮನಸುಗಳು ಇತ್ಯಾದಿ ಎಲ್ಲವೂ ನೊಂದ ಮನಗಳ ಸಾಧನೆಯ ನೋಡಿ ಬೆರಗಾಗುತ್ತವೆ. ಏಕೆಂದರೆ, 

ಹುಡುಕಿದರೆ ಸಿಗುವುವು ನೂರಾರು ನೋವುಗಳು 
ಮಾಡಿದರೆ ಆಗುವುವು ಸಾವಿರಾರು ಸಾಧನೆಗಳು 
ಬಿಟ್ಟು ಸಾಧಿಸಿದರೆ ಎಲ್ಲರ ಮೇಲಿನ ನಿರೀಕ್ಷೆ 
ಇಡೀ ಜಗತ್ತೇ ಮಾಡುವುದು ನಿನ್ನ ಸಾಧನೆಗಳ ಸಮೀಕ್ಷೆ 



Tuesday, 11 July 2017

ಒಲವೆಂಬ ಹಸಿರು ಸ್ವಚ್ಚಂದವಾಗಿ ಹರಡಿರಲು 
ನೀನೆ ನನ್ನುಸಿರು ಎಂಬ ಕರೆಗಾಗಿ 
ಎಡೆಬಿಡದೇ ಕಾಯುತಿದೆ  ಒಡಲು 
ಬಸವಳಿದ ಬದುಕಿಗೆ ಭರವಸೆಯೇ ಬೆಳಕು 
ಕವಲೊಡೆದ ಕನಸಿಗೆ ಕಲ್ಪನೆಯೇ ಕೆಡಕು 

ಸ್ವಾರ್ಥ

ಯಾರಿಗಾಗಿ ಯಾರೂ ಇಲ್ಲಿಲ್ಲ 
ಸಮಯಸಾಧಕರೆಂಬ ಸ್ವಾರ್ಥಿಗಳೇ 
ತುಂಬಿರುವರು ಜಗದಲ್ಲೆಲ್ಲ