Saturday, 31 December 2016

ಹೇ ಹುಡುಗ

ನನ್ನ ಕಣ್ಣಿಲ್ಲ ಕಮಲದಂತೆ 
ನಾ ನಗುವುದಿಲ್ಲ ನೈದಿಲೆಯಂತೆ 
ನನ್ನ ಮುಖ ಅರಳದು ತಾವರೆಯಂತೆ 
ಆದರೂ ಮಿತಿಯಿರದೆ ಹರಿಯುವುದು 
ನನ್ನ ಪ್ರೀತಿ ಸಾಗರದ ಅಲೆಯಂತೆ 
ಇದನರಿತು ನೀ ಬಂದು ಬೆರೆತರೆ ನನ್ನಲಿ 
ಇರದು ಯಾವದೇ ಚಿಂತೆ ನನ್ನಂತರಂಗದಲಿ 

Thursday, 22 December 2016

ತೋಚಿದ್ದು ಗೀಚಿದ್ದು

ಪ್ರತಿಯೊಂದೂ ಕವಿತೆಗೂ ಸ್ಫೂರ್ತಿ ಭಾವನೆ 
ಆ ಭಾವಕ್ಕೆ  ದೊರೆತರೆ ಸುಂದರ ಕಲ್ಪನೆ 
ಮೂಡುವ ಕವನಗಳಿಗೆ ಎಂದಿಗೂ ಬಾರದು ಕೊನೆ 

ಜೀವನವೊಂದು ಪುಸ್ತಕದಂತೆ 
ಕೆಲವು ಅಧ್ಯಾಯ ದುಃಖದಿಂದಿದ್ದರೆ 
ಕೆಲವು ಅಧ್ಯಾಯ ಸಂತಸದಿಂದಿರುತ್ತವೆ 
ಸುಮಾರು ಉತ್ತೇಜಕವಾಗಿರುತ್ತವೆ 
ಆದರೆ ನೀನು ಪುಟಗಳನ್ನೇ ತಿರುವದಿದ್ದರೆ 
ನಿನಗೆಂದು ತಿಳಿಯದು ಮುಂದೇನಿದೆಯೆಂದು 
ದುಃಖದಿಂದ ಕುಗ್ಗದೆ ಖುಷಿಯಿಂದ ಹಿಗ್ಗದೇ 
ಪ್ರತೀ ಪುಟವೂ ನಿನ್ನದೇ ಎಂದು ನಡೆಸು ಜೀವನ 
ಆಗ ನಿನ್ನ ಹುಟ್ಟಾಗುವುದು ಪಾವನ 

Wednesday, 21 December 2016

#ಕಿರು_ಲೇಖನ_ಪ್ರಯತ್ನ

(ಓದಿ ಸಲಹೆಗಳಿದ್ದರೆ ಖಂಡಿತ ಹೇಳಿ)

ಬದುಕೊಂದು ಸಾಗರವಾದರೆ ಅದರಾಚೆ ಕಾಣುವ ದಡವ ಮುಟ್ಟಬೇಕೆಂದು ಆಸೆಪಡುವ ಆಶಾವಾದಿಗಳೆ ನಾವು. ಈ ಓಟದಲ್ಲಿ ಪಡೆಯುವುದು ಏನಿಲ್ಲ, ಕಳೆದುಕೊಳ್ಳುವುದು ಏನಿಲ್ಲ. ಹಾಗಂತ ಓಟವನ್ನು ನಿಲ್ಲಿಸುವಂತೆಯೂ ಇಲ್ಲ. ಆದರೆ ದಡ ಸಮೀಪಿಸುತ್ತಿದ್ದಂತೆ ಉಳಿಯುವುದು ನೆನಪುಗಳು ಮಾತ್ರ ಅದರಲ್ಲಿ ಮನಸಿಗೆ ಹಿತ ನೀಡುವ ಸುಂದರ ಅಲೆಗಳು ಕೆಲವಾದರೆ, ಮುಳ್ಳುಗಳಂತೆ ಚುಚ್ಚಿ ಚುಚ್ಚಿ ಕೊಲ್ಲುವ ಭುಗಿಲೆದ್ದ ಸುನಾಮಿಗಳು ಹಲವು.

ಜೀವನವನ್ನು ಸಮುದ್ರಕ್ಕೆ ಹೋಲಿಸಲು ಕಾರಣ ಸಮುದ್ರ ನೋಡಲು ಎಷ್ಟು ಶಾಂತವೋ ಒಮ್ಮಿಂದೊಮ್ಮೆಲೆ ರುದ್ರತಾಂಡವನಂತೆ ನರ್ತಿಸುತ್ತದೆ, ಹಾಗೆ ಜೀವನವು ಕೂಡ ಒಮ್ಮೆ ಸುಂದರ ಶಾಂತವೆನಿಸಿದರೂ ಅನಿರೀಕ್ಷಿತ ತಿರುವುಗಳು ಬಂದು ಅಲ್ಲೋಲಕಲ್ಲೋಲ ಮಾಡಿಬಿಡುತ್ತವೆ. ಸಮುದ್ರದಿಂದ ನಾವು ಕಲಿಯುವ ಪಾಠವೆಂದರೆ ಯಾವುದು ಇಲ್ಲಿ ಶಾಶ್ವತವಲ್ಲ ಅಲೆಗಳಂತೆ ಸುಖ ದುಃಖಗಳು ಬಂದು ಹೋಗಿ ಬಂದು ಹೋಗಿ ಮಾಡುತ್ತಲೇ ಇರುತ್ತವೆ, ಆದರೆ ನಮ್ಮ ಮನಸ್ಸನ್ನು ಮಾತ್ರ ಸಂತೋಷದಿಂದ ಹಿಗ್ಗಲೂ ಬಿಡದೇ ದುಃಖದಿಂದ ಕುಗ್ಗಲೂ ಬಿಡದೇ ದಡದಲ್ಲಿರುವ ಮರಳಿನಂತೆ ಸ್ಥಿರವಾಗಿಟ್ಟುಕೊಂಡರೆ ಜೀವನದಲ್ಲಿ ಎಂತಹ ಸಂದರ್ಭವನ್ನಾದರೂ ಅನಾಯಾಸವಾಗಿ ಎದುರಿಸಿ ದಡವನ್ನು ಸೇರಬಹುದು.

#ಪುಸ್ತಕಗಳ_ಬಗ್ಗೆ_ನನ್ನ_ಕಿರುಮಾತು

ನನ್ನ ಪ್ರಕಾರ ಗ್ರಂಥಾಲಯ ಎಂದರೆ ಮನಸಿಗೆ ಇರುವ ಆಸ್ಪತ್ರೆಯಂತೆ ಎನಿಸುತ್ತದೆ. ಜ್ಞಾನ, ಮನರಂಜನೆ, ನೊಂದ ಮನಸಿಗೆ ಸಿಗುವ ಸಾಂತ್ವನ, ಕುಳಿತಲ್ಲೇ ಜಗವ ಸುತ್ತುವ ವಾಹನ, ವಿಜ್ಞಾನ, ಮನೋ ವಿಜ್ಞಾನ, ಇತಿಹಾಸ, ಪುರಾಣ, ತಾಂತ್ರಿಕ, ವೈಜ್ಞಾನಿಕ ಇನ್ನು ನೂರಾರು ಸಾವಿರಾರು ವಸ್ತುಗಳ ಅಂಶಗಳ ಆಗರ ಈ ಗ್ರಂಥಾಲಯವೆಂಬ ಸಾಗರ.

ನಮ್ಮ ಮನೆಯ ಸುತ್ತ ಮುತ್ತ ಹೂ ಹಣ್ಣುಗಳ ಗಿಡಗಳನ್ನು ಬೆಳೆಸಿದರೆ ಹೇಗೆ ಪರಿಸರ ಸುಂದರವಾಗಿ ಕಾಣುವುದೋ ಹಾಗೆ ನಮ್ಮ ಮನೆಯ ತುಂಬಾ ಪುಸ್ತಕಗಳನ್ನು ತುಂಬಿದರೆ ನಮಗೆಂದೂ ಒಂಟಿತನದ ರೋಗ ಕಾಡುವುದಿಲ್ಲ ಎನ್ನುವುದು ನನ್ನ ಭಾವನೆ. ಎಲ್ಲರೂ ಪುಸ್ತಕವನ್ನು ಪ್ರೀತಿಸುವುದಿಲ್ಲ ಹಾಗೆ ಪ್ರೀತಿಸುವುವರೆಂದ ಓದುವುದನ್ನು ಬಿಡುವುದಿಲ್ಲ.

ಜೀವನದಲ್ಲಿ ನಮಗೆ ಎಲ್ಲವೂ ಎಲ್ಲರೂ ಇದ್ದರೂ ಬಹಳಷ್ಟು ಜನ ಪ್ರೀತಿ, ಕಾಳಜಿ, ಬಾಂಧವ್ಯ ಇತ್ಯಾದಿಗಳ ಕೊರತೆಯಿಂದ ಬಳಲುತ್ತಲೇ ಇರುತ್ತಾರೆ. ಹೀಗೆ ಬಳಲುವ ಜನ ಅವರಿಗೆ ಇಷ್ಟವಾದ ಹವ್ಯಾಸಗಳಲ್ಲಿ ತೊಡಗಿರುತ್ತಾರೆ ಉದಾಹರಣೆಗೆ ಓದುವುದು, ಬರೆಯುವುದು, ಕಸೂತಿ, ಚಿತ್ರಕಲೆ ಇತ್ಯಾದಿ. ಹೀಗೆ ಓದುಗರ ಬಗ್ಗೆ ಹೇಳಬೇಕೆಂದು ನನಗೆ ಅನಿಸಿದ್ದು ಬರೆಯುತ್ತಿರುವೆ ಪುಸ್ತಕಗಳಲ್ಲಿ ಪ್ರೀತಿ,ಪ್ರೇಮ, ಸ್ನೇಹ, ದ್ವೇಷ, ಜ್ಞಾನ ಎಲ್ಲವೂ ತುಂಬಿರುವುದರಿಂದ ಕೆಲವೊಂದು ಪಾತ್ರಗಳು ಮನಸಿಗೆ ತಾಗಿ ನೊಂದಿರುವವರಿಗೆ ಸಾಂತ್ವನವನ್ನು, ಭರವಸೆ ಕಳೆದುಕೊಂಡವರಿಗೆ ಸಾಧನೆ ಮಾಡುವ ಹುಮ್ಮಸ್ಸನ್ನು ನೀಡಿ ಹೊಸದನ್ನು ಕಲಿಯಲು, ಬೇರೆಯವರಿಗೆ ಕಲಿಸಲು ಪ್ರೇರೇಪಿಸುತ್ತವೆ.

ಹಾಗಾಗಿ ಎಲ್ಲ ಮನಸ್ಥಿತಿಯ ಜನರು ಅವರವರ ಇಚ್ಛೆಯ ಅನುಸಾರ ಪುಸ್ತಕಗಳನ್ನು ಆಯ್ದುಕೊಂಡರೆ ಮನರಂಜನೆಯ ಜೊತೆ ಮನಸ್ಥಿತಿಯು ಸುಧಾರಿಸಿ ಜ್ಞಾನವೂ ಹೆಚ್ಚಾಗುವುದು, ನನಗಾರೂ ಇಲ್ಲ ಎನ್ನುವ ಕೊರಗನ್ನು ನಿವಾರಿಸಿ ಉತ್ತಮ ಸ್ನೇಹಿತನಂತೆ ಸದಾ ನಮ್ಮ ಜೊತೆಯಲ್ಲೇ ಇರುವುದು.

Tuesday, 20 December 2016

ಮೌನಗೀತೆ

ಪ್ರೀತಿಗೆ ಬೇಕಿಲ್ಲ ಮಾತಿನ ಮಾಯೆ 
ಅದಕೆ ಬೇಕಿರುವುದೆಲ್ಲ ಮೌನದ ಛಾಯೆ 

ಭಾವನೆಗಳ ಆಲಾಪನೆ ಮಾತಾದರೆ 
ಪ್ರೇಮದ ಆರಾಧನೆಯೇ ಮೌನ 

ಹಾಗಾಗಿ ನನ್ನ ಮೌನ ಮಾತಾದ ಕ್ಷಣ 
ಸಿಗುವುದೇನೋ ನಿನಗೆ ಒಲವಿನ ಆಲಿಂಗನ

ನನ್ನ ಮೌನ ಮಾತಾಗದಿದ್ದರೂ 
ಭಾವಗಳ ಆಲಾಪನೆ ನಿನಗೆ ಕೇಳದಿದ್ದರೂ 

ಸದಾ ಉಲಿಯುತಿಹುದು ನನ್ನಲಿ ಮೌನ ರಾಗ 
ಅದೇ ನಿನಗಾಗಿ ಮಿಡಿಯುತಿರುವ ಪ್ರೇಮ ರಾಗ 

Sunday, 18 December 2016

ಹುಡುಕಾಟ

ಪ್ರಯೋಗಿಸಿದ ಪದಗಳೆಲ್ಲವೂ ಬೇಸತ್ತು 
ಮಾಡುತಿವೆ ಮುಷ್ಕರ 
ಇನ್ನು ಕವಿತೆ ಬರೆಯಲು ನಾ ಮಾಡಬೇಕಿದೆ 
ಹೊಸಪದಗಳ ಆವಿಷ್ಕಾರ