Showing posts with label ನಾ ಓದಿದ ಪುಸ್ತಕ. Show all posts
Showing posts with label ನಾ ಓದಿದ ಪುಸ್ತಕ. Show all posts

Sunday, 5 March 2017

ಚಕೋರಿ


ಚಂದ್ರಶೇಖರ ಕಂಬಾರರ "ಚಕೋರಿ" ಒಂದು ವಿಶಿಷ್ಟ ಕೃತಿ ಏಕೆಂದರೆ ಇಲ್ಲಿ ಮಾಮೂಲಿನಂತೆ ಕಥೆಯಷ್ಟೇ ಇಲ್ಲ..  ಎಲ್ಲ  ಪಾತ್ರಗಳ ಚಿತ್ರಣ ಕಾವ್ಯದಿಂದಲೇ ಪರಿಚಿತವಾಗುತ್ತವೆ. ಅದಕ್ಕೆ ಏನೋ ಈ ಪುಸ್ತಕದ ಮೇಲೆ ಕಾದಂಬರಿ ಬದಲು ಮಹಾಕಾವ್ಯವೆಂದು ಮುದ್ರಿಸಿದ್ದಾರೆ. ಈ ಕೃತಿ ಓದಿದಮೇಲೆ ಒಂದು ಹೊಸ ಅನುಭವ ನೀಡುವುದಂತೂ ದಿಟ. ಈ ಹಿಂದೆ "ಶಿಖರಸೂರ್ಯ" (ಚಕೋರಿಯ ಮುಂದಿನ ಭಾಗವನ್ನೇ ನಾ ಮೊದಲು ಓದಿದ್ದೆ http://shwetha-hoolimath.blogspot.in/2017/01/blog-post_1.html ). ಆದರೆ ಎಲ್ಲಿಯೂ ಚಕೋರಿಯನ್ನು ಓದಿ ಇದನ್ನು ಓದಬೇಕೆಂದು ನನಗೆ ಅನಿಸಲಿಲ್ಲ, ಹೊಸ ಕೃತಿಯೆಂದೇ ಓದಿದ್ದೆ. )

ಇದು ಕಾವ್ಯವಾಗಿರುವುದರಿಂದ ಕಥೆಯ ಬಗ್ಗೆ ಹೇಳುವುದು ನನಗೆ ಕಷ್ಟವೆನಿಸುತ್ತಿದೆ. ಕಥಾನಾಯಕ ಚಂದಮುತ್ತ ಒಬ್ಬ ನಾದಪ್ರಿಯ. ಅವನನ್ನು ಕಾಡಿದ ಯಕ್ಷಿಯ ಮೋಹಕ್ಕೆ ತನ್ನವರನ್ನೇ ಬಿಡುವ ಪ್ರಸಂಗ, ಅವನು ಪಟ್ಟ ಪಾಡು, ಮತ್ತು ಇವರಿಬ್ಬರ ಪ್ರೇಮಕ್ಕೆ ವೈರಿಯಾಗುವ ಎರಡು ಪಾತ್ರಗಳ ಚಿತ್ರಣ ನಿಜಕ್ಕೂ ರೋಚಕವಾಗಿವೆ. ಆರಂಭದಲ್ಲಿ ಚಂದಮುತ್ತನ ಮೇಲೆ ಮೂಡಿದ ಭಾವನೆಗಳು ಅಂತ್ಯದಲ್ಲಿ ಬದಲಾಗುತ್ತವೆ. ಅದಕ್ಕೆ ಏನೋ ಮುನ್ನುಡಿಯಲ್ಲಿ "ಚಂದಮುತ್ತನ ತನ್ಮಯತೆ ಇಂದಿನ ಜಾಣ ಬುದ್ಧಿಗೆ ಭಕ್ತಿಯಾಗಿ ಕಾಣಿಸಬಹುದು. ಆದರೆ ಚಂದಮುತ್ತನ ಭಕ್ತಿ ಟೊಳ್ಳುಭಾಕ್ತಿಯಲ್ಲ ಎಂಬುದನ್ನು ಮಾತ್ರ ಸೂಚಿಸಭಯಸುತ್ತೇನೆ." ಎಂದು ಹೇಳಿದ್ದಾರೆ. ಇದರ ಅರ್ಥ ಕೃತಿ ಓದಿದಮೇಲೆ ತಿಳಿಯುತ್ತದೆ. 

ಚಕೋರಿಯ ಬಗ್ಗೆ ಬಹಳ ವಿವರಗಳನ್ನು  ಹೇಳುವುದು ಕಷ್ಟ, ಏಕೆಂದರೆ ಇಲ್ಲಿನ ನಿರೂಪಣಾ ಶೈಲಿಯ ವಿಭಿನ್ನತೆ. ಇದರ ಮುಂದುವರೆದ ಭಾಗ "ಶಿಖರಸೂರ್ಯ" ಕೂಡ ಕಥಾನಾಯಕ ಚಂದಮುತ್ತ ಜಯಸೂರ್ಯನಾಗಿ ನಂತರ ಶಿಖರ ಸೂರ್ಯನಾಗಿ ಮೆರೆದ ರೋಚಕ ಕಥೆ ಇದು. ಚಕೋರಿ ಮತ್ತು ಶಿಖರಸೂರ್ಯ ಎರಡೂ ಮಹಾಕಾವ್ಯಗಳಾಗಿದ್ದು ಮಾಮೂಲಿನಂತೆ ಬೇಗ ಗ್ರಹಿಸಿ ಮುಗಿಸುವಂತಹ ಕೃತಿಗಳಲ್ಲವೆಂಬುದು ನನ್ನ ಅನುಭವ. 

Monday, 27 February 2017

ಕಪ್ಪು ಮುತ್ತಿನ ರಹಸ್ಯ


ವಾಸುದೇವರಾವ್ ಅವರ ಷರ್ಲಾಕ್ ಹೋಮ್ಸ್ ನ ಸಾಹಸ ಕಥೆಗಳು "ಕಪ್ಪು ಮುತ್ತಿನ ರಹಸ್ಯ" (ಇಂಗ್ಲಿಷ್ ಮೂಲ : ಸರ್ ಆರ್ಥರ್ ಕಾನನ್ ಡಾಯ್ಲ್). ಇಲ್ಲಿ ೭ ಪತ್ತೇದಾರಿ ಕಥೆಗಳಿದ್ದು, ಎಲ್ಲವೂ ಹೋಮ್ಸ್ ನ ಬುದ್ಧಿವಂತಿಗೆ, ಅಪರಾಧಿಗಳನ್ನು ಪತ್ತೆ ಹಚ್ಚುವ ಕೌಶಲ್ಯ, ಕುಶಾಗ್ರಮತಿ ಇತ್ಯಾದಿ ಅಂಶಗಳನ್ನು ತೋರಿಸುತ್ತವೆ. 

ಈ ಹಿಂದೆ ಇದೇ ಲೇಖಕರ "ಶವದ ಮನೆಯಾದ ಸ್ವರ್ಗ" ಓದಿದ ಕಾರಣ (http://shwetha-hoolimath.blogspot.in/2017/01/blog-post_6.html)  ಷರ್ಲಾಕ್ ಹೋಮ್ಸ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದೆ ಜೊತೆಗೆ ಅರ್ಥರ್ ಬಗ್ಗೆಯೂ ಓದಿದ್ದೆ ನಿಜಕ್ಕೂ ಖುಷಿ ಆಯ್ತು ಏಕೆಂದರೆ ನನಗೆ ಆಂಗ್ಲ ಪುಸ್ತಕಗಳನ್ನು ಓದಿ ಅರ್ಥ ಮಾಡಿಕೊಳ್ಳುವ ಹುಮ್ಮಸ್ಸು, ಆಸಕ್ತಿ ಇಲ್ಲದ ಕಾರಣ, ಕನ್ನಡದಲ್ಲಿ ವಾಸುದೇವರಾವ್ ಅವರ ಅನುವಾದಿತ ಈ ಕೃತಿಗಳನ್ನೇ ಹೊಸದೆಂದು ಭಾವಿಸಿ ಓದಿದೆ, ಸಂತೋಷವು ಆಯ್ತು. 

ಇನ್ನು ಈ ಕೃತಿಗೆ ಬರುವುದಾದರೆ ಇರುವ ೭ ಕಥೆಗಳು ಒಂದಕ್ಕಿಂತ ಒಂದು ರೋಚಕ ಮತ್ತು ವಿಭಿನ್ನ. ಪ್ರತಿಯೊಂದು ಕಥೆಯ ಆರಂಭದಲ್ಲಿ ನಾವಂದುಕೊಂಡ ಊಹೆಗಳೇ ಸುಳ್ಳಾಗಿರುತ್ತವೆ ಜೊತೆಗೆ ಅನಿರೀಕ್ಷಿತ ತಿರುವುಗಳೊಂದಿಗೆ ಅಂತ್ಯವಾಗುತ್ತವೆ. ಹೀಗಾಗಿ ಯಾವುದೇ ಕಥೆಯ ವಿಷಯದ ಬಗ್ಗೆಯಾಗಲೀ, ಪಾತ್ರಗಳ ಬಗ್ಗೆಯಾಗಲಿ ಹೇಳುವುದು ಸ್ವಲ್ಪ ಕಷ್ಟ ಜೊತೆಗೆ ಓದುವ ಪ್ರತಿಯೊಬ್ಬರೂ ಅದನ್ನು ಓದುವಾಗ ಅನುಭವವಿಸುವ ಕುತೂಹಲ ಹೇಗಿರುತ್ತೆ  ಎನ್ನುವುದು ಅವರೇ ತಿಳಿಯಲಿ ಎನ್ನುವುದು ನನ್ನ ಅಭಿಪ್ರಾಯ. 

ಇನ್ನು ಲೇಖಕರ ಬಗ್ಗೆ ಹೇಳುವುದಾದರೆ ವಾಸುದೇವರಾವ್ ಅವರು ಹಲವಾರು ಕೃತಿಗಳನ್ನು ರಚಿಸಿ, ಅನುವಾದಿಸಿ ಪುಸ್ತಕರೂಪದಲ್ಲಿ ಪ್ರಕಟಿಸಿದ್ದಾರೆ. ಇವರ ಕೃತಿಗಳಲ್ಲಿ ಅನುವಾದಗಳೇ ಹೆಚ್ಚಿದ್ದು, ಅಸಂಖ್ಯ ಪತ್ತೇದಾರಿ ಕಾದಂಬರಿಗಳನ್ನೂ ಕನ್ನಡಕ್ಕೆ ತಂದ ಕೀರ್ತಿ ಇವರದು. ಅದರಲ್ಲೂ ಡ್ರಾಕುಲ ಮತ್ತು ಷರ್ಲಾಕ್ ಹೋಮ್ಸ್ ನ ಕೃತಿಗಳು ಹೆಚ್ಚು ಪ್ರಸಿದ್ಧಿಯಾಗಿವೆ. ಜೊತೆಗೆ ಅವರ ಈ ೩ ಕೃತಿಗಳ ಅನುವಾದವನ್ನು ಓದಿದ ಸಂತೋಷ ಮತ್ತು ತೃಪ್ತಿ ನನಗಿದೆ. 

Saturday, 25 February 2017

ಲೈಫ್ ಈಸ್ ಬ್ಯೂಟಿಫುಲ್


ಬಹಳ ದಿನಗಳ ನಂತರ ನೆನ್ನೆ ಮಧ್ಯಾಹ್ನ ಓದಲು ಆರಂಭಿಸಿದ ಪುಸ್ತಕವನ್ನು ಸಂಜೆಗೆ ಅಂದರೆ ಕೊನೆವರೆಗೂ ಬಿಡದಂತೆ ಮುಗಿಸಿಬಿಟ್ಟೆ ಅದೇ ಜೋಗಿ ಅವರ "ಲೈಫ್ ಈಸ್ ಬ್ಯೂಟಿಫುಲ್" ಪುಸ್ತಕ. ಇಲ್ಲಿ ಯಾವುದೇ ಕಥೆಯಿಲ್ಲ, ಕಾದಂಬರಿಯೂ ಅಲ್ಲ, ಪಾತ್ರಗಳು ಸಹ ಇಲ್ಲ. ಇಲ್ಲಿ ತುಂಬಿರುವುದೆಲ್ಲ ನಾವು ಮತ್ತು ನಮ್ಮ ಬದುಕು ಮಾತ್ರ. 

ಎಲ್ಲಕ್ಕಿಂತ ಜಾಸ್ತಿ ಹಿಡಿಡಿಸಿದ್ದು ವಿಶೇಷವಾದ ಮುನ್ನುಡಿ. ಅಲ್ಲಿ ನಾನು ತುಂಬಾ ಮೆಚ್ಚಿದ್ದು "ಇವತ್ತು ನಾನು ಎಂಥಾ ಪುಸ್ತಕ ಕೊಟ್ಟರೂ ಓದಬಲ್ಲೆ. ಎಂಥಾ ಕಳಪೆ
 ಪುಸ್ತಕದಲ್ಲೂ ನನಗೆ ಬೇಕಾದ ಒಂದು ಸಾಲು ಸಿಕ್ಕೇ ಸಿಗುತ್ತದೆ ಎಂದು ನಂಬಿದವನು ನಾನು. ಎಂಥಾ ಕಸದ ತೊಟ್ಟಿಗೆ ಎಸೆದರೂ ಅಲ್ಲಿಂದ ಒಂದೆರಡು ಉಪಯುಕ್ತ ವಸ್ತುಗಳನ್ನು ಹೆಕ್ಕಬಹುದು ಎಂಬುದು ನನ್ನ ಭರವಸೆ. " ಲೇಖಕರ ಈ ಮಾತುಗಳು ಎಷ್ಟೋ ಸಲ ನನಗೂ ಸತ್ಯವೆನಿಸಿದೆ, ಏಕೆಂದರೆ ಪ್ರತೀ ಬೇಸರ, ನೋವು, ಒಂಟಿತನ, ಯಾರೊಂದಿಗೂ ಹೇಳಿಕೊಳ್ಳಲಾಗದ ನೀರಸ ಮನಸ್ಥಿತಿಯನ್ನು  ದೂರ ಮಾಡುವ ಶಕ್ತಿಯಿರುವುದು ಪುಸ್ತಕಳೊಂದಿಗಿರುವ ಗಾಢವಾದ ಸ್ನೇಹವೆಂಬುದು ನನ್ನ ನಂಬಿಕೆ ಮತ್ತು ಅನುಭವವವೂ ಕೂಡ. 

ಇನ್ನೊಂದು ವಿಶೇಷವೆಂದರೆ ಲೇಖಕರೂ ಓದುಗರಿಗೆ ಈ ಪುಸ್ತಕ ಓದಲು ಹಾಕಿರುವ ಷರತ್ತುಗಳು. ನೀವು ಈ ಕೆಳಗಿನ ವರ್ಗಕ್ಕೆ ಸೇರಿದವರಾಗಿದ್ದರೆ, ದಯವಿಟ್ಟು ಈ ಪುಸ್ತಕವನ್ನು ಓದಬೇಡಿ.
1. ದಿನಕ್ಕೆ ಹತ್ತು ಗಂಟೆಗಿಂತಲೂ ಹೆಚ್ಚು ಫೋನಲ್ಲಿ ಮಾತಾಡುವವರು.
2. ದಿನವಡೀ ಫೇಸ್ ಬುಕ್ ನೋಡುತ್ತಾ ಕೂತಿರುವವರು.
3. ಮಾತಿಗಂತ ವಾಟ್ಸ್ ಆಪ್ ಉತ್ತಮ ಎಂದು ನಂಬಿದವರು.
4. ಸಿನಿಮಾ ಹಾಡುಗಳೇ ಜೀವನದ ಸರ್ವಸ್ವ ಎಂದುಕೊಂಡಿರುವವರು.

ಇದನ್ನೂ ಓದಿ ಅರೇ ಹೌದಲ್ಲ ಈ ೪ ವರ್ಗಗಳಲ್ಲಿ ನಾವು ಕೆಲವೊಮ್ಮೆ ಸೇರಿರುವವರಾಗಿರುತ್ತೇವೆ ಆದರೆ ಅವರು ಹೇಳಿದಷ್ಟು ಸಮಯವಲ್ಲದಿದ್ದರೂ ಸ್ವಲ್ಪ ಹೊತ್ತಾದರೂ ಮೇಲಿನ ೪ನ್ನೂ ಮಾಡಿರುತ್ತೇವೆ. ಈಗಿನ ದಿನಗಳಲ್ಲಿ ವಾಟ್ಸಾಪ್ ಮತ್ತು ಫೇಸ್ಬುಕ್ ಜೀವನದ ಅವಿಭಾಜ್ಯ ಅಂಗಗಳೇನೋ ಎನ್ನುವ ಮಟ್ಟಿಗೆ ನಾವು ಹಚ್ಚಿಕೊಂಡಿದ್ದೇವೆ, ಅವೆರೆಡು ಇಲ್ಲದಿದ್ದರೆ ಜೀವನವೇ ಇಲ್ಲ ಎನ್ನುವ ಮಟ್ಟವನ್ನು ಸುಮಾರು ಜನ ಈಗಾಗಲೇ ತಲುಪಿರಬಹುದು. ಆದರೆ ಇದರಾಚೆಗೂ ಬದುಕಿದೆ, ಸಂತೋಷವಿದೆ, ನೆಮ್ಮದಿಯಿದೆ ಎಂದು ಈ ಪುಸ್ತಕ ಓದಿದರೇ ತಿಳಿಯುತ್ತದೆ. ಏಕೆಂದರೆ ಇಲ್ಲಿ ಸ್ನೇಹ, ಪ್ರೇಮ, ಗುರು ಶಿಷ್ಯ, ಸಿಟ್ಟು, ಒಂಟಿತನ , ನೋವು ನಲಿವು ಹೀಗೆ ಒಬ್ಬ ಮನುಷ್ಯನ ಜೀವನದಲ್ಲಿ ಏನೇನು ಸಮಸ್ಯೆ ಬರಬಹುದೋ, ಯಾವೆಲ್ಲ ವ್ಯಕ್ತಿಗಳು ಬರಬಹುದೋ, ಏನೆಲ್ಲಾ ಮನಸ್ಥಿತಿಗಳನ್ನು ತಲುಪಬಹುದೋ, ಹಾಗೆ ಬರೀ ಪ್ರಶ್ನೆಗಳೇ ತುಂಬಿಕೊಂಡು ಹೇಗೆಲ್ಲ  ಉತ್ತರಗಳ ಹುಡುಕಾಟ ನಡೆಸಬಹುದೋ, ಹೀಗೆ ಹತ್ತು ಹಲವಾರು ವಿಷಯಗಳು ಬಂದು ಹೋಗುತ್ತವೆ. 

ಈ ಪುಸ್ತಕದ ಮೂಲ ಉದ್ದೇಶವೇ ಸಮಸ್ಯೆಗಳ ಸುತ್ತ ಸುತ್ತದೆ, ಪ್ರಶ್ನೆಗಳ ಹಿಂದೆಯೇ ಓಡದೆ, ಇರುವ ಚಿಕ್ಕ ಚಿಕ್ಕ ಸಂತೋಷವನ್ನೇ ಅನುಭವಿಸಿ, ಯಾವುದೇ ಕ್ಷಣವನ್ನು ವ್ಯರ್ಥ ಮಾಡದೇ ಬದುಕಿ ಸಮಸ್ಯೆಯ ಜೊತೆ ಶಾಂತವಾಗಿ ಯೋಚಿಸಿದರೆ ಪೂರ್ತಿ ಪರಿಹಾರ ಸಿಗದಿದ್ದರೂ ಸ್ವಲ್ಪ ನೆಮ್ಮದಿಯ ಹಾದಿಯಂತೂ ಸಿಕ್ಕೇ ಸಿಗುತ್ತದೆ ಎನ್ನುವ ಅಂಶ. ಈ ಪುಸ್ತಕ ಓದಿದಮೇಲೆ ಅನಿಸಿದ್ದು ಅರೆ ಹೌದಲ್ಲಾ!!! ಹೀಗೂ ನಮ್ಮ ಲೈಫ್ ನ ಚೆನ್ನಾಗಿ ಮಾಡ್ಕೋಬಹುದು ಮತ್ತು ನೆಮ್ಮದಿಗೆ, ಯಶಸ್ಸಿಗೆ ಯಾರನ್ನೂ ನೆನೆಯದೇ ನಾವೇ ಎಲ್ಲ ದಾರಿ ಕಂಡುಕೊಳ್ಳಬಹುದು ಎನಿಸಿತು. ನಿಜಕ್ಕೂ "ಲೈಫ್ ಈಸ್ ಬ್ಯೂಟಿಫುಲ್" ಓದಿದರೆ ಸಿಗುವುದು ಲೈಫ್ ಆಗುವುದು ಕಲರ್ಫುಲ್, ಮೀನಿಂಗ್ಫುಲ್ ಮತ್ತು ಸಿಗುವುದು ಪ್ರತಿಯೊಬ್ಬರಿಗೂ ಇನ್ಸ್ಪಿರೇಷನ್ ಫುಲ್ ಅಂಶಗಳೇ ಎಂದು ಹೇಳಲು ಇಚ್ಚಿಸುತ್ತೇನೆ. 

ಮತ್ತೊಮ್ಮೆ  ನಾ ಆಗಿರುವೆ ಈ  ಕೂಟಕ್ಕೆ ಥ್ಯಾಂಕ್ ಫುಲ್ 

Wednesday, 15 February 2017

ಸಾಮಾನ್ಯರಲ್ಲಿ ಅಸಾಮಾನ್ಯರು


ಸುಧಾ ಮೂರ್ತಿ ಅವರ "ಸಾಮಾನ್ಯರಲ್ಲಿ  ಅಸಾಮಾನ್ಯರು" ಪುಸ್ತಕದ ಮೂಲ ವಿಷಯ ಏನೆಂದರೆ ಹೊರಗಿನಿಂದ ಸಾಮನ್ಯರಂತೆ ಕಂಡರೂ ಅವರಲ್ಲಡಗಿರುವ ಅಸಾಮಾನ್ಯ ಗುಣಗಳನ್ನು ಹೊರ ತರುವ ಪ್ರಯತ್ನ. ಇಲ್ಲಿ ೧೯ ವ್ಯಕ್ತಿಗಳ ಪರಿಚಯ, ಅವರ ಅಸಾಮಾನ್ಯ ಗುಣಗಳು  ಮತ್ತು ಅವರಿಗಾಗಿ ಇಟ್ಟಿರುವ ಶೀರ್ಷಿಕೆ ಎಲ್ಲವೂ ಇಷ್ಟವಾದವು. 

ಮೂಲತಃ  ಲೇಖಕರು ಹುಬ್ಬಳ್ಳಿಯವರಾಗಿದ್ದು,  ಉತ್ತರ ಕರ್ನಾಟಕದ ಸಂಸ್ಕೃತಿ, ಖಡಕ್ ಮಾತಿನ ಧಾಟಿ ಮತ್ತಿತರ ವಿಶಿಷ್ಟತೆಗಳನ್ನು ತೆಗೆದುಕೊಂಡು ಕೆಲವು ವ್ಯಕ್ತಿಗಳ ಚಿತ್ರಣ ಇಲ್ಲಿ ಮೂಡಿಸಿದ್ದಾರೆ. ನಾನು ಕೂಡ ಉತ್ತರ ಕರ್ನಾಟಕದವಳಾಗಿದ್ದರಿಂದ ಈ ಕೃತಿ ಮತ್ತಷ್ಟು ಇಷ್ಟವಾಯಿತು, ಅದಕ್ಕೆ ಕಾರಣ ನೇರ ನುಡಿ, ಹೊರಗೆ  ಕಟುವಾಗಿ ಕಂಡರೂ ಸ್ಪಷ್ಟತೆ ಎದ್ದುಕಾಣುವಂತ ಮಾತು, ಒಳಮನಸಿನಲ್ಲಿ ಪ್ರೇಮ, ಅಂತಃಕರಣ, ಪರೋಪಕಾರ, ವಾತ್ಸಲ್ಯ ತುಂಬಿದ ಮನಸುಗಳ ಚಿತ್ರಣ. 

ನನಗೆ ಎಲ್ಲರೂ ಹೇಳುತ್ತಾರೆ ಉತ್ತರ ಕರ್ನಾಟಕದ ಜನರ ಮಾತು ತುಂಬಾ ಒರಟು, ಎಂದು ಅದು ನಿಜವೇ ಆದರೂ ಹೊರಗೊಂದು ಒಳಗೊಂದು ಮಾತು ಆಡದ ನೇರ ಮಾತುಗಾರರು ಎಂಬ ಖುಷಿ ನನಗಿದೆ. ಇನ್ನು ಈ ಪುಸ್ತಕದಲ್ಲಿ ಚಿತ್ರಿತರಾಗಿರುವವರಲ್ಲಿ, ಕೆಳಮಟ್ಟದ ಆರ್ಥಿಕ ಪರಿಸ್ಥಿತಿಯಲ್ಲಿರುವವರು, ಕಡಿಮೆ ಓದಿದವರು, ಮಾಧ್ಯಮ ವರ್ಗದ ಕುಟುಂಬದವರು ಹೀಗೆ ಸಾಮಾನ್ಯರೇ ಇದ್ದಾರೆ. ಕಂಡಕ್ಟರ್, ಅಂಗಡಿ ನಡೆಸುವ, ದಾನ, ಅಸೂಯೆ, ಗುಣವಂತರು, ಸಾಧನೆಗೆ ಪ್ರಸಿದ್ಧಿಯಾದವರು ಹೀಗೆ ಹತ್ತು ಹಲವಾರು ಧನಾತ್ಮಕ ಮತ್ತು ಋಣಾತ್ಮಕ ಗುಣಗಳಿದ್ದವರ ಚಿತ್ರಣ ಇಲ್ಲಿ ಮೂಡಿದೆ. ಹಾಗೆ ಇಲ್ಲಿ ಬರುವ ಸಂಭಾಷಣೆಯ ಶೈಲಿ ಕೂಡ ಬಹಳ ಇಷ್ಟವಾಗುತ್ತದೆ. 

ಈ ಕೃತಿಯಲ್ಲಿಯೂ ಕೂಡ ಎಂದಿನಂತೆ ಕಲಿಯುವ ಅಂಶಗಳನ್ನು ಸುಧಾಮೂರ್ತಿಯವರು ಹೇಳಿದ್ದಾರೆ. ಒಳ್ಳೆಯ ಮತ್ತು ಕೆಟ್ಟ ಗುಣಗಳ ವ್ಯಕ್ತಿಗಳು ನಮ್ಮ ಸುತ್ತಮುತ್ತಲೂ ಇರುತ್ತಾರೆ. ಅವುಗಳಲ್ಲಿ ಕೆಲವೊಂದನ್ನು ತೆಗೆದುಕೊಂಡು ಋಣಾತ್ಮಕ ಅಂಶಗಳಿಂದ ದೂರಾಗಿ ಬಾಳಿದರೆ ನಮಗೂ ಮತ್ತು ನಮ್ಮ ಸುತ್ತ ಇರುವವರಿಗೂ ಅನುಕೂಲವೆಂಬುದು ನನ್ನ ಅಭಿಪ್ರಾಯ.

ಕೂಟಕ್ಕೆ ಮತ್ತೊಮ್ಮೆ ಧನ್ಯವಾದಗಳು. :) 

Monday, 30 January 2017

ಶಾಲಭಂಜಿಕೆ



"ಶಾಲಭಂಜಿಕೆ" ಕೆ.ಎನ್. ಗಣೇಶಯ್ಯನವರ ಸಣ್ಣಕೆಥೆಗಳ ಸಂಗಮ. ಇಲ್ಲಿ ಬರುವ ೮ ಕಥೆಗಳಲ್ಲಿ ಲೇಖಕರ ಶ್ರಮ ಸಂಶೋಧನೆಯ ಉತ್ಸಾಹ ಎದ್ದು ಕಾಣುತ್ತದೆ. ನನಗೆ ಈ ಪುಸ್ತಕ ಓದಿದಮೇಲೆ ಅನಿಸಿದ್ದು ನಾವು ನೋಡುವ ಎಷ್ಟೋ ಸ್ಥಳಗಳು, ವ್ಯಕ್ತಿಗಳು, ವಿಚಾರಗಳು ಸರಳವಾಗಿ ಕಂಡರೂ ಅವುಗಳ ಹಿಂದೆ ನಮಗೆ ಗೊತ್ತಿಲ್ಲದೇ ಇರುವಂತಹ ಅಥವಾ ನಿರೀಕ್ಷೆ ಮಾಡಲಾರದಂತಹ ರೋಚಕ ಸತ್ಯಗಳು ಅಡಗಿರುತ್ತವೆ ಎಂಬುದು. 

ಇಲ್ಲಿ ಬರುವ ೮ ಕಥೆಗಳ ವಸ್ತುಗಳು ಬೇರೆಬೇರೆಯಾಗಿವೆ ಜೊತೆಗೆ ಇಲ್ಲಿ ಬಂದಿರುವ ಅಂಶಗಳಲ್ಲಿ ಕೆಲವು ಅಂಶಗಳು ನಮ್ಮ ಸುತ್ತಮುತ್ತ ನಡೆಯುತ್ತಿವೆ.  ಬೆಂಗಳೂರಿನ ಇತಿಹಾಸ, ಶಿಲೆಗಳ ಕೆತ್ತನೆಯ ಹಿಂದಿನ ಉದ್ದೇಶ ಮತ್ತು ಕಥೆ, ನನ್ನನ್ನು ಯಾವಾಗಲೂ ಅಚ್ಚರಿ ಮೂಡಿಸುವ ಪಿರಮಿಡ್ಡಿನ ಇತಿಹಾಸದ ಒಂದು ಎಳೆ, ಅನೇಕ ವೈಜ್ನ್ಯಾನಿಕ, ತಾಂತ್ರಿಕ ವಿಷಯಗಳ ಮೇಲಿನ ಸಂಶೋಧನೆಯ ಶ್ರಮ ಅದಕ್ಕಾಗಿ ಪಟ್ಟ ತೊಂದರೆ ಹೀಗೆ ಬಹಳಷ್ಟು ವಿಷಯಗಳು ಇಲ್ಲಿ ಇವೆ, ಎಲ್ಲವನ್ನು ಕಥೆಯ ರೂಪದಲ್ಲಿ ಬರೆಯುವುದು ಕಷ್ಟ ಅದರಲ್ಲಿ ಗಣೇಶಯ್ಯನವರು ಯಶಸ್ವಿಯಾಗಿದ್ದಾರೆ. 

ಈ ಕೃತಿ ಚಿಕ್ಕದಾದರೂ ಇಲ್ಲಿ ನಾ ಕಲಿತಿದ್ದು ತಿಳಿದಿದ್ದು ಬಹಳ... ಕೆಲವರಿಗೆ  ಇತಿಹಾಸ ಓದುವುದು ನೀರಸವೆನಿಸಿದರೆ ಅದನ್ನು ಹೆಕ್ಕಿ ತೆಗೆಯಲು ಲೇಖರು ಪಟ್ಟ ಶ್ರಮ ಕೈಗೊಂಡ ಸಂಶೋಧನೆ ಎಲ್ಲವೂ ಮನಸ್ಸನ್ನು ಮುದಗೊಳಿಸುತ್ತವೆ. 

Saturday, 14 January 2017

ಚಿತಾದಂತ



ಡಾ. ಕೆ.ಎನ್.ಗಣೇಶಯ್ಯರವರು ಬರೆದ "ಚಿತಾದಂತ" ರೋಚಕ ಕಾದಂಬರಿಗಳಲ್ಲೊಂದು. ಇತಿಹಾಸದ ಎಳೆಯನ್ನು ಹಿಡಿದು ಇಂದಿನ ಕಾಲದವರೆಗೆ ನಡೆದ ಎಲ್ಲ ಅಂಶಗಳನ್ನು ಒಳಗೊಂಡಿದ್ದು, ಓದುಗರನ್ನು ಆಶ್ಚರ್ಯಚಕಿತರನ್ನಾಗಿ ಮಾಡುವುದರ ಜೊತೆಗೆ ಪ್ರತಿಯೊಂದು ಮಾಹಿತಿಗೂ ಅವರು ಕೊಟ್ಟಿರುವ ನಕ್ಷೆಗಳು, ಟಿಪ್ಪಣಿ, ಚಿತ್ರ ಮತ್ತು ಸಂಬಂಧಪಟ್ಟ ಪುಸ್ತಾಕಗಳ ಮಾಹಿತಿ ಎಲ್ಲವೂ ನಾವು ನಿಜವಾದ ಘಟನೆಗಳಲ್ಲೇ ಬದುಕುತ್ತಿದ್ದೇವೇನೋ ಎನಿಸುತ್ತದೆ. 

ಇದರಲ್ಲಿ ಅಲೆಕ್ಸಾಂಡರನು ಭಾರತದ ಮೇಲಿನ ದಾಳಿಯ ನಂತರ ಅವನ ಸಂಪತ್ತಿನ ಹುಡುಕಾಟ ಇದೆ. ಎರಡು ಸಾವಿರ ವರ್ಷಗಳ ರೋಚಕ ಇತಿಹಾಸ  ಇಲ್ಲಿದೆ. ಅಂದಿನಿಂದ ಇವತ್ತಿನ ಸ್ವತಂತ್ರ ಭಾರತದ ವರೆಗೂ ಬಂದಿರುವ ಇತಿಹಾಸದ ಚಂದ್ರಗುಪ್ತ ಮೌರ್ಯ, ಅಶೋಕ, ಚಾಣಕ್ಯ, ಕೌಟಿಲ್ಯ ಎಲ್ಲಕ್ಕಿಂತ ಮುಖ್ಯವಾಗಿ ಅಲೆಕ್ಸಾಂಡರ್ ನ ಚಿತ್ರಣ ಅತ್ಯಂತ ಆಶ್ಚರ್ಯದಿಂದ ಕೂಡಿದೆ. ಭೌಧ್ದ ಧರ್ಮದ ಬೆಳವಣಿಗೆ ಮತ್ತು ಇತರ ವಿವರ, ಮೌರ್ಯ ರಾಜ್ಯದ ವಿಷ್ಲೇಶಣೆ, ಸಿಕಂದರನ ದಂಡಯಾತ್ರೆಯ ಸಮಯದ ಭಾರತದ ಸ್ಥಿತಿ ಗತಿ ಹಾಗೂ ನಿಗೂಢ ತೇರವಾದಿಗಳ ವಿಷಯ ದೊಂದಿಗೆ ಬುದ್ಧನ ಹಲ್ಲಿನ ವಿಸ್ಮಯಕಾರಿ ಅಂಶಗಳನ್ನು ಈ ಕಾದಂಬರಿ ಒಳಗೊಂಡಿದೆ.ಎಲ್ಲಕ್ಕಿಂತ ರೋಚಕವೆಂದರೆ ಈ ಕಾದಂಬರಿಯಲ್ಲಿ ಬರುವ ಅಂದರೆ ಇಂದಿನ ವಾಸ್ತಕದಲ್ಲಿ ಚಿತ್ರಿತವಾಗಿರುವ ರಚಿತಾ ಎಂಬ ಹುಡುಗಿಯ ಮುತ್ತಾತ ಬರೆದ ಡೈರಿ, ೧೨ ಭಾಗದ ಸಿಕಂದರನ ಸಿರಿ ಎಂದು ನಾಮಾಂಕಿತಗೊಂಡ ಈ ಡೈರಿಯನ್ನು ಓದುವಾಗ ಅಬ್ಬಾ!!!! ಹೀಗೂ ಉಂಟೆ ಎನಿಸುವುದು. 

ಬುದ್ಧನ ಹಲ್ಲಿಗೂ ಅಲೆಗ್ಸಾಂಡರನ  ಸಂಪತ್ತಿಗೆ ಇರುವ ಸಂಬಂಧ,  ಪ್ರಚಲಿತವಾಗಿ ಬುದ್ಧನ ೪ ಹಲ್ಲುಗಳ ಬಗ್ಗೆ ಇರುವ ವಾದ ವಿವಾದ ಏನು, ಅಂದರೆ ಶ್ರೀಲಂಕಾ, ಜಪಾನ್, ಚೈನಾ, ಕಾಂಬೋಡಿಯಾ ಇತ್ಯಾದಿ ದೇಶಗಳಲ್ಲಿ ಇರುವ ಹಲ್ಲಿನಲ್ಲಿ ಯಾವುದು ಸುಳ್ಳು ಯಾವುದು ನಿಜ ಎನ್ನುವ ಸತ್ಯದ ಹುಡುಕಾಟ, ಅದರ ಸುತ್ತ ಹಬ್ಬಿರುವ ದಂತಕತೆಗಳು, .. ತೇರವಾದಿಗಳು ಎಂದರೆ ಯಾರು, ಅವರೆಲ್ಲಿದ್ದರು, ಈಗಲೂ ಇದ್ದಾರೆಯೇ, ಅಲೆಕ್ಸಾಂಡರ ನ ದಂಡಯಾತ್ರೆ ಮತ್ತು ಅವನು ಸಂಗ್ರಹಿಸಿದ ಖಜಾನೆ ನಿಧಿ ಭಾರತದಲ್ಲಿದೆಯೇ, ಅಬ್ಬಾ!!! ಒಂದಕ್ಕೊಂದು ಸಂಬಂಧವಿಲ್ಲವೆಂದು ಎನಿಸುವ ಅಂಶಗಳು ಹೇಗೆ ಬೆಸೆದಿವೆ ಎನ್ನುವುದು ಇಲ್ಲಿನ ಪ್ರಮುಖ ಅಂಶ. ಕುತೂಹಲ ತಡಿಯಲಾರದೆ, ಕ್ಯಾಂಡಿ ದೇವಾಲಯದ ಚಿತ್ರಗಳನ್ನು ಅಂತರ್ಜಾಲದಲ್ಲಿ ನೋಡಿದೆ, ಒಮ್ಮೆಯಾದರೂ ನೋಡಿ ಬರಬೇಕೆಂಬ ಆಸೆ ಮೂಡಿತು. ಇಲ್ಲಿ ಆ ಚಿತ್ರಗಳನ್ನು ಹಂಚಿಕೊಂಡಿದ್ದೇನೆ. 

ಈ ಕಾದಂಬರಿಯ ಶೀರ್ಷಿಕೆ ಎಷ್ಟು ವಿಭಿನ್ನವಾಗಿದೆ ಏಕೆ ಈ ಹೆಸರಿಟ್ಟಿದ್ದಾರೆ ಎನ್ನುವ ಕುತೂಹಲ ಪ್ರಥಮ ಪುಟದಿಂದ ಕೊನೆಯ ಪುಟದವರೆಗೂ ಒಂದೊಂದು ಯೋಚನೆ ಬರುವಂತೆ ಮಾಡುತ್ತದೆ. ಆದರೆ ಎಲ್ಲ ಊಹೆಗಳನ್ನು ಸುಳ್ಳುಮಾಡಿಸುವಲ್ಲಿ ಗಣೇಶಯ್ಯನವರ ಬರವಣಿಗೆ ಯಶಸ್ವಿಯಾಗಿದೆ. 

Friday, 6 January 2017

ಶವದ ಮನೆಯಾದ ಸ್ವರ್ಗ




ವಾಸುದೇವರಾವ್ ಅವರ ಷರ್ಲಾಕ್ ಹೋಮ್ಸ್ ನ ಸಾಹಸ ಕಥೆಗಳು "ಶವದ ಮನೆಯಾದ ಸ್ವರ್ಗ" (ಇಂಗ್ಲಿಷ್ ಮೂಲ : ಸರ್ ಆರ್ಥರ್ ಕಾನನ್ ಡಾಯ್ಲ್) ಅಲ್ಲಿ ಬರುವ ೫ ಕಥೆಗಳನ್ನು ಓದಿದೆ. ಇಲ್ಲಿವರೆಗೂ ಷರ್ಲಾಕ್ ಹೋಮ್ಸ್ ಬಗ್ಗೆ ಚಲನಚಿತ್ರಗಳಲ್ಲಿ ಮತ್ತು ಇಂಗ್ಲಿಷ್ ಪುಸ್ತಕಗಳಲ್ಲಿ ಕೇಳಿದ್ದೆ ಆದರೆ ಯಾವತ್ತೂ ಅಷ್ಟು ಆಳವಾಗಿ ಓದಿರಲಿಲ್ಲ. ಆದರೆ  ಈ ಪುಸ್ತಕ ಓದಿದ ಮೇಲೆ ಆತನ ಬಗ್ಗೆ ಮತ್ತಷ್ಟು ತಿಳಿಯುವ ಆಸೆಯಿಂದ ವಿವಿಧ ಪುಸ್ತಗಳ ಬಗ್ಗೆ ಹುಡುಕುತ್ತ ಅನೇಕ ರೋಚಕ ಅಂಶಗಳನ್ನು ತಿಳಿದುಕೊಂಡೆ. ಹಾಗಾಗಿ ಈ ಪುಸ್ತಕದಲ್ಲಿ ಬರುವ ಕಥೆಗಳ ಬಗ್ಗೆ ಹೇಳುವುದಕ್ಕಿಂತ ಮತ್ತಿತರ ಮೂಲಗಳಿಂದ ದೊರೆತ ಮಾಹಿತಿಗಳನ್ನು ಹಂಚಿಕೊಳ್ಳಬೇಕೆನಿಸಿದೆ. 

ಷರ್ಲಾಕ್ ಹೋಮ್ಸ್ ೧೯ ಮತ್ತು ೨೦ ನೇ ಶತಮಾನದ ನಡುವೆ ಸರ್ ಆರ್ಥರ್ ಕಾನನ್ ಡಾಯ್ಲ್ ಸೃಷ್ಟಿ ಮಾಡಿದ ಕಾಲ್ಪನಿಕ ಪಾತ್ರ.  ಷರ್ಲಾಕ್‌ ಹೋಮ್ಸ್‌ ಲಂಡನ್‌ನಲ್ಲಿ ವಾಸಿಸುತ್ತಿದ ಒಬ್ಬ " ಪತ್ತೆದಾರಿ ಸಲಹೆಗಾರ." ಈತ ಕುಶಾಗ್ರ ಮತಿ.ಪ್ರತಿಯೊಂದು ಸಂಗತಿಯನ್ನೂ ಚಾಣಾಕ್ಷತೆಯಿಂದ ಗಮನಿಸಿ,ತಾರ್ಕಿಕವಾಗಿ ಯೋಚಿಸಿ ತೀರ್ಮಾನಕ್ಕೆ ಬರುವುದರ ಮೂಲಕ ಕಷ್ಟಕರವಾದ ತನಿಖಾ ಪ್ರಕರಣಗಳನ್ನು ಪರಿಹರಿಸುತ್ತಿದ್ದ.ಸೂಕ್ಷ್ಮ ಗ್ರಹಿಕೆ ಮತ್ತು ಕುಶಲ ಚಿಂತನೆಗಾಗಿ ಖ್ಯಾತನಾಗಿದ್ದ. ಕಾನನ್‌ ಡಾಯ್ಲ್‌ ರಚಿಸಿದ ನಾಲ್ಕು ಕಾದಂಬರಿ ಮತ್ತು ಐವತ್ತಾರು ಕಿರುಕಥೆಗಳಲ್ಲಿ ಷರ್ಲಾಕ್‌ ಹೋಮ್ಸ್‌ ಪಾತ್ರವಿದೆ.1887ರ ಬೀಟನ್ಸ್‌ ಕ್ರಿಸ್ಮಸ್‌ ಆನ್ಯುಯಲ್‌ ಸಂಚಿಕೆಯಲ್ಲಿ ಒಂದು ಮತ್ತು 1890ರಲ್ಲಿ ಲಿಪಿನ್ಕಾಟ್ಸ್‌ ಮಂತ್ಲಿ ಮ್ಯಾಗಜೀನ್ ‌ನಲ್ಲಿ ಇನ್ನೊಂದು- ಹೀಗೆ ಮೊದಲ ಎರಡು ಕಥೆಗಳು (ಕಿರು ಕಾದಂಬರಿಗಳು)ಪ್ರಕಟಗೊಂಡವು. 1891ರಲ್ಲಿ ಸ್ಟ್ರ್ಯಾಂಡ್‌ ಮ್ಯಾಗಜೀನ್‌ನಲ್ಲಿ ಕಿರುಕಥೆಗಳ ಮೊದಲ ಸರಣಿಯ ಪ್ರಕಟಣೆಯೊಂದಿಗೆ ಷರ್ಲಾಕ್‌ ಹೋಮ್ಸ್‌ನ ಪಾತ್ರ ಅಪಾರ ಜನಪ್ರಿಯತೆ ಗಳಿಸಿತು. ಮುಂದಿನ ಕಿರುಗತೆಗಳ ಸರಣಿ ಮತ್ತು ಎರಡು ಕಾದಂಬರಿಗಳ ಧಾರಾವಾಹಿ 1927ರತನಕ ಹರಿದು ಬಂತು.ಈ ಕಥೆಗಳು 1875ರಿಂದ 1907ರ ವರೆಗಿನಕಾಲ ಘಟ್ಟವನ್ನು ಒಳಗೊಂಡಿದೆ. ತನಿಖೆಯ ಕೊನೆಯ ಪ್ರಕರಣ 1914ರಲ್ಲಿ ಪ್ರಕಟವಾಯಿತು. 

ಹೀಗೆ ಮಾಹಿತಿಯನ್ನು ಕಲೆಹಾಕುತಿದ್ದಾಗ ಕೆಲವು ಆಶ್ಚರ್ಯಕರ ಅಂಶಗಳು ಕಂಡವು ಅದೇ ಷರ್ಲಾಕ್ ಹೋಮ್ಸ್ ಪಾತ್ರದ ಪ್ರಭಾವ.  ಕಾನನ್ ಡಾಯ್ಲ್ ಷರ್ಲಾಕ್ ಹೋಮ್ಸ್ ಪಾತ್ರವನ್ನು ಸೃಷ್ಟಿ ಮಾಡಿದ  ಆತನ ಬುದ್ಧಿವಂತಿಕೆಯನ್ನು ಚಿತ್ರಿಸಿದ ರೀತಿ ಓದುಗರು ಅವನನ್ನು ಕಾಲ್ಪನಿಕ ವ್ಯಕ್ತಿಯೆನ್ನುವುದನ್ನು ಮರೆತು ಜೀವಂತ ವ್ಯಕ್ತಿಯೆಂದೇ ತಿಳಿಯುವಂತೆ ಮಾಡಿತಂತೆ!!!! ಕೊನೆಗೆ ಡಾಯ್ಲ್ ತನ್ನ ಪಾತ್ರಕ್ಕೆ ಅಂತ್ಯ ಕಾಣಿಸಲು ಕುಖ್ಯಾತ ಕೇಡಿಯೊಬ್ಬನ ಜೊತೆ ಕಾದಾಡುವಾಗ ಸತ್ತು ಹೋದನೆಂದು "ಷರ್ಲಾಕ್ ಹೋಮ್ಸ್ ನ ನೆನಪುಗಳು" ಎಂಬ ಕೃತಿಯಲ್ಲಿ ಚಿತ್ರಿಸಿದ. ಇದರಿಂದ ಬೇಸತ್ತ ಎಲ್ಲ ಯೂರೋಪ್, ಅಮೇರಿಕ, ಆಸ್ಟ್ರೇಲಿಯಾ ದೇಶಗಳ ಜನ ತೀವ್ರ ಪ್ರತಿಭಟನೆಯನ್ನು ಮಾಡಿದ್ದಲ್ಲದೇ, ಜನರು ತಮ್ಮ ಟೋಪಿ ಮತ್ತು ಬಟ್ಟೆಗಳಿಗೆ ಕಪ್ಪು ರಿಬ್ಬನ್ ಸಿಕ್ಕಿಸಿಕೊಂಡು ಷರ್ಲಾಕ್ ಮರಣಕಕ್ಕೆ ಸಂತಾಪ ಸೂಚಿಸಿದರಂತೆ!!!! ಇದೆಲ್ಲ ಸಾಲದಕ್ಕೆ ಓದುಗರೆಲ್ಲ ಕಥೆ ಮುಂದುವರೆಸಬೇಕೆಂದೂ ಫೋನು, ತಂತಿ ಮತ್ತು ಪತ್ರಗಳ ಮೂಲಕ ಒತ್ತಾಯಿಸಿದರು, ಅಷ್ಟು ಅಲ್ಲದೇ ಕೆಲವರಂತೂ ಬೆದರಿಕೆ ಹಾಕಿದರಂತೆ!!! ಇಷ್ಟೆಲ್ಲ ಆದಮೇಲೆ ಡಾಯ್ಲ್ ಬೇರೆ ದಾರಿ ಕಾಣದೆ ಮುಂದಿನ ಕೃತಿಯಲ್ಲಿ "ಕೇಡಿಗಳನ್ನು ಮೂರ್ಖರನ್ನಾಗಿಸಾಲು ಷರ್ಲಾಕ್ ಸತ್ತಂತೆ ನಟಿಸಿದ" ಎಂದು ಅವನನ್ನು ಬದುಕಿಸಿದರಂತೆ. ಹೀಗೆ ಷರ್ಲಾಕ್ ಬಗ್ಗೆ ಹೇಳುತ್ತಾ ಹೋದರೆ ಅಪರಿಮಿತ ರೋಚಕ ಅಂಶಗಳು ಸಿಗುತ್ತವೆ.  ಹಾಗಾಗಿ "ಶವದ ಮನೆಯಾದ ಸ್ವರ್ಗ" ದಲ್ಲಿ ಬರುವ ೫ ಕಥೆಗಳ ಬಗ್ಗೆ ಎನ್ನನು ಹೇಳದೆ ಪ್ರತಿಯೊಂದರಲ್ಲೂ ವಿಭಿನ್ನ ಮತ್ತು ಅನಿರೀಕ್ಷಿತ ತಿರುವುಗಲು ಪಡೆಯುವಂತೆ ಷರ್ಲಾಕ್  ತನಿಖೆ ನಡೆಸಿದ್ದಾನೆ  ಅದನ್ನೆಲ್ಲವನ್ನೂ ಓದಿ ಸವೆದರೆ ಚಂದ ಎನ್ನುವುದು ನನ್ನ ಭಾವನೆ. 

ಇನ್ನು ಕನ್ನಡದಲ್ಲಿ ಷೆರ್ಲಾಕ್ ಹೋಮ್ಸ್ ನ ಪತ್ತೇದಾರಿ ಸರಣಿಯ ಸಮಗ್ರ ಅನುವಾದವನ್ನು ಕನ್ನಡಕ್ಕೆ ತಂದ ವಾಸುದೇವರಾವ್ ಅವರು ಕನ್ನಡದ ಸ್ವಂತ ಕೃತಿ ಎಂಬಂತೆ ಚಿತ್ರಿಸಿದ್ದಾರೆ. ಈಗಾಗಾಲೆ ಅವರ ಅನುವಾದಿತ ಕೃತಿ "ಡ್ರಾಕುಲ" ವನ್ನು ನಾ ಓದಿದ್ದೆ, ಹಾಗಾಗಿ ಷರ್ಲಾಕ್ ಕಥೆ ಓದಿದಮೇಲೆ ಅವರ ಪ್ರತಿಭೆ ಎಂತಹ ಉನ್ನತ ಮಟ್ಟದ್ದು ಎಂದು ಮತ್ತೊಮ್ಮೆ  ಮನದಟ್ಟಾಯಿತು. 

೭ ನೇ ಜುಲೈ ೧೯೩೦ರಲ್ಲಿ ಇಂಗ್ಲೆಂಡಿನ ಕ್ರಾಸ್ಬರೋ ದಲ್ಲಿ  ಅಸುನೀಗಿದ ಡಾಯ್ಲ್ ಸೃಷ್ಟಿಸಿದ ಷರ್ಲಾಕ್ ಹೋಮ್ಸ್ ಇಂದಿಗೂ ಕಿರುಚಿತ್ರ, ಚಲನಚಿತ್ರ, ಸರಣಿ ಕಥೆ, ಬೇರೆ ಭಾಷೆಗಳಿಗೆ ಅನುವಾದ ಇತ್ಯಾದಿ ರೂಪಗಳಲ್ಲಿ ವಿಶ್ವಸಾಹಿತ್ಯದಲ್ಲಿ ಅಮರನಾಗಿದ್ದಾನೆ. 

Sunday, 1 January 2017

ಶಿಖರ ಸೂರ್ಯ


ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಚಂದ್ರಶೇಖರ ಕಂಬಾರರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಅರ್ಪಿಸುತ್ತ,  ಹುಟ್ಟುಹಬ್ಬದ ದಿನವೇ ಅವರ "ಶಿಖರ ಸೂರ್ಯ" ಕೃತಿಯ ಬಗ್ಗೆ ನನ್ನ ಅಬಿನಂಭಿಪ್ರಾಯವನ್ನು ಹಂಚಿಕೊಳ್ಳಲು ಹೆಚ್ಚು ಸಂತೋಷವಾಗುತ್ತಿದೆ. ಈ ಕೃತಿಯು 2010ರಲ್ಲಿ ಭಾರತದ ಪ್ರತಿಷ್ಠಿತ ಪ್ರಶಸ್ತಿಯಾದ 2009ರ ಠಾಕೂರ್ ಸಾಹಿತ್ಯ ಪ್ರಶಸ್ತಿಯನ್ನು ಗಳಿಸಿರುವುದು ಈ ಕಾದಂಬರಿಯ ಶ್ರೇಷ್ಠತೆಯನ್ನು ಗುರುತಿಸುತ್ತದೆ. ಈ ಕಾದಂಬರಿಯು ಅತ್ಯಂತ ರೋಮಾಂಚನಕಾರಿಯಾಗಿ ಹಲವು ತಿರುವುಗಳನ್ನು ಪಡೆಯುತ್ತ ಓದುಗರಿಗೆ ಹೊಸ ಲೋಕವೊಂದನ್ನು ತೋರಿಸುತ್ತ, ಕ್ಷಣ ಕ್ಷಣಕ್ಕೂ ವಿಸ್ಮಯವನ್ನು ಮೂಡಿಸುವ ಅದ್ಭುತವಾದ ಕಲಾಕೃತಿಯಾಗಿದೆ. ಹಾಗೆ ಈ ಪುಸ್ತಕದ ಬಗ್ಗೆ ವಿಮರ್ಶಕರು ಬರೆದಿರುವ ಸಾಲುಗಳನ್ನು ಓದಿದರೇ ಇನ್ನು ಹೆಚ್ಚು ಸಂತೋಷವಾಗುತ್ತದೆ. ಇಂತಹ ಮಹಾನ್ ಕವಿ ಇನ್ನು ನೂರಾರು ವರ್ಷ ಸಂತೋಷವಾಗಿ ಬಾಳಿ ಮತ್ತಷ್ಟು  ಶ್ರೇಷ್ಠ ಕೃತಿಗಳನ್ನು ಕನ್ನಡ  ಸಾಹಿತ್ಯಕ್ಕೆ ಅರ್ಪಿಸಿ ನನ್ನಂತ ಓದುಗರನ್ನು ಸಂತೋಷಪಡಿಸಲಿ ಎಂದು ಹಾರೈಸುತ್ತೇನೆ. 

ಇನ್ನು ಕಥೆಗೆ ಬರುವುದಾದರೆ ಶಿಖರ ಸೂರ್ಯ "ಚಕೋರಿ"ಯ ಮುಂದುವರೆದ ಭಾಗವೆನ್ನಬಹುದು ಅಥವಾ ಸ್ವತಂತ್ರ ಕಾದಂಬರಿ ಎಂದಾದರು ತಿಳಿಯಬಹುದು ಎಂದು ಲೇಖಕರು ಹೇಳಿದ್ದಾರೆ. (ಆದರೆ ನಾನು "ಚಕೋರಿ" ಓದಿಲ್ಲ ಕಾರಣ "ಶಿಖರ ಸೂರ್ಯ"ನನ್ನು ನವಕೃತಿಯಾಗೆ ಓದಿದೆ). ಇಲ್ಲಿ ಬರುವ ಶಿವಾಪುರ, ಕನಕಪುರಿ ಇತಿಹಾಸಗಳು ನಿಜಕ್ಕೂ ರಮಣೀಯವಾಗಿವೆ. ಕಥಾನಾಯಕ ಚಂದಮುತ್ತ ಜಯಸೂರ್ಯನಾಗಿ ನಂತರ ಶಿಖರ ಸೂರ್ಯನಾಗಿ ಮೆರೆದ ರೋಚಕ ಕಥೆ ಇದು. ಇದೊಂದು ಮಹಾಕಾವ್ಯ ಜೊತೆಗೆ ಬೇಗ ಓದಿ ಮುಗಿಸಲು ಅಸಾಧ್ಯವಾದ ಕೃತಿಯಾಗಿದ್ದು ಇದರ ಬಗ್ಗೆ ವಿಮರ್ಶೆ ಬರೆಯಲು ಖಂಡಿತ ನನಗೆ ಸಾಧ್ಯವಿಲ್ಲ. ಹಾಗಾಗಿ ನನಗೆ ತೋಚಿದ ಕೆಲವು ಅಂಶಗಳನ್ನು ಸರಲವಾಗಿ ಹಂಚಿಕೊಳ್ಳಲು ಪ್ರಯತ್ನಿಸಿದ್ದೇನೆ.

ಚಕೋರಿಯನ್ನು ಓದಿದವರಿಗೆ ಚಿನ್ನಮುತ್ತ ಮತ್ತು ಚಂದಮುತ್ತನ ಬಗ್ಗೆ ತಿಳಿದಿರುತ್ತದೆ ಆದರೆ ಅದನ್ನು ಓದದೇ "ಶಿಖರ ಸೂರ್ಯ"ನನ್ನು ಓದುವವರಿಗೆ ಪ್ರಸ್ತಾವನೆಯೇ ಕಥೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು.  ಬದುಕಿದ್ದಾಗಲೇ ಕಥೆಯಾಗಿ, ಲಾವಣಿಯಾಗಿ, ದೇವತೆಯಾಗಿ ಪವಾಡಗಳ ಮೆರೆದ ಚಂದಮುತ್ತನ ಭಾಗಾದಿ ಚಿನ್ನಮುತ್ತ ಶಿಖರ ಸೂರ್ಯ ಕಾದಂಬರಿಯ ನಾಯಕ ಪುರುಷ. ಇವನೂ ಕಲಾವಿದವಾಗಲು ಪ್ರಯತ್ನಿಸಿ, ಸಾಧ್ಯವಾಗದೆ ಮಲೆಯಾಳಿ ಮಂತ್ರ ತಂತ್ರಾದಿ ವಾಮಾಚಾರ ಅನುಸರಿಸಿ, ಆಗಲೂ ಸಾಧ್ಯವಾಗದೆ ಗುರುಶಾಪಕ್ಕೆ ಗುರಿಯಾಗಿ ಎರಡು ಮೂರು ವರ್ಷ ಅಲ್ಲಲ್ಲಿ ಅಲೆದಾಡಿ, ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳಲೆಂದು ಕಾಡಿನ ಕಮರಿಗೆ ಜಿಗಿದು ಸ್ಮೃತಿತಪ್ಪಿ ಬಿದ್ದವನು. ಅಂಥವನನ್ನು ಶಿವಾಪುರದ ಜಟ್ಟಿಗ ಎತ್ತಿ ತಂದು ಉಪಚರಿಸಿ ಕನಕಪುರಿಯ ಇತಿಹಾಸಕ್ಕೆ ಕಾಣಿಕೆಯಾಗಿ ಕೊಟ್ಟ. ಕಾಡಿನ ಕಮರಿಯಲ್ಲಿ ಬೇಹುಷಾರಾಗಿ (ಪ್ರಜ್ಞೆತಪ್ಪಿ) ಬಿದ್ದಿದ್ದ ಚಿನ್ನಮುತ್ತನನ್ನು ಜಟ್ಟಿಗ ದಯಮಾಡಿ ಶಿವಾಪುರಕ್ಕೆ ಎತ್ತಿಕೊಂಡು ಬಂದನಲ್ಲ, ಅಲ್ಲಿಂದ ಮುಂದೆ ಶಿಖರ ಸೂರ್ಯನ ಇತಿಹಾಸ ಕಥನ ಆರಂಭವಾಗುತ್ತದೆ.

ಶಿಖರ ಸೂರ್ಯ ಕಾದಂಬರಿಯ ನಾಯಕನಾದರೂ ವಾಸ್ತವದಲ್ಲಿ ಅವನೊಬ್ಬ ಖಳನಾಯಕ ತನ್ನ ಸ್ವಾರ್ಥಕ್ಕೆ, ಸಾಧನೆಗೆ ಯಾರನ್ನು ಬಿಡದೆ ಹಿಂಸೆ ಕೊಡುತ್ತಿದ್ದರೂ ಅದು ಅವರಿಗೆ ತಿಳಿಯದೆ ಅವರ ಪಾಲಿಗೆ ಒಳ್ಳೆಯವನಾಗೆ ಇದ್ದು ತನ್ನ ಅನುಕೂಲಕ್ಕೆ ತಕ್ಕಂತೆ ನಿರ್ವಹಿಸುವಂತ ಮಹಾನ್ ಸಮಯಸಾಧಕ. ಶಿವಾಪುರದಲ್ಲಿ ಪ್ರಾಣ ಉಳಿಸಿದ ಜಟ್ಟಿಗ ಮತ್ತು ಅವನ ಹೆಂಡತಿಯನ್ನು ತನ್ನ ಸ್ವಾರ್ಥಕ್ಕೆ ನಡೆಸಿಕೊಂಡ ರೀತಿ ನಿಜಕ್ಕೂ ನೋವುಂಟು ಮಾಡುತ್ತದೆ. ಅಲ್ಲಿಂದ ಚಂದಮುತ್ತನಾಗಿದ್ದು ಜಯಸೂರ್ಯನಾಗುತ್ತಾನೆ ಅದು ಹೇಗೆ ಏಕೆ ಎನ್ನುವ ಅಂಶ ನಿಜಕ್ಕೂ ಅಚ್ಚರಿ ಉಂಟು ಮಾಡುತ್ತದೆ. ಅಲ್ಲಿಂದ ತಪ್ಪಿಸಿಕೊಂಡು ಕನಕಪುರಿಗೆ ಬರುತ್ತಾನೆ. 

ಕನಕಪುರಿಯಲ್ಲಿ ತಾನು ವೈದ್ಯೆನೆಂದು ಪರಿಚಿತನಾಗುವ ಜಯಸೂರ್ಯ. ಇಲ್ಲಿ ಶಿಖರಸೂರ್ಯನಾಗಿ ಬದಲಾಗುತ್ತಾನೆ. ಕನಕಪುರಿಗೆ ಬಂದ ಮೊದಲು ಮಾಡಿದ ಕೆಲಸವೆಂದರೆ ಬಹಳ ದಿನಗಳಿಂದ ರೋಗದಿಂದ ನರಳುತ್ತಿದ್ದ ಕನಕಪುರಿಯ ರಾಜನನ್ನು ಒಂದೇ ದಿನದಲ್ಲಿ ಗುಣಪಡಿಸಿ ಬಹುಬೇಗನೆ ಕನಕಪುರಿಯ ಜನರ ಮನಸ್ಸನ್ನು ತನ್ನತ್ತ ಸೆಳೆಯುತ್ತಾನೆ. ನಂತರ ಕನಕಪುರಿಯ ರಾಜ್ಯವೈದ್ಯನಾಗಿ ನಿಯೋಜನೆಗೊಂಡು ಅರಮನೆಯಲ್ಲುರುವವರ ದೌರ್ಬಲ್ಯಗಳನ್ನು ಬಳಸಿಕೊಂಡು ಕನಕಪುರಿಯ ರಾಜನ ಮಗಳು ಛಾಯಾದೇವಿಯನ್ನು ವಿವಾಹವಾಗುತ್ತಾನೆ. ಅಲ್ಲಿಂದ ಶುರುವಾಗುವುದು ಅವನ ಸಂಚಿನ ಕಥೆ (ಮತ್ತಷ್ಟು ರೋಚಕ). ಕನಕಪುರಿಯ ಭಾಗದಲ್ಲಿ ಬರುವ ಮಹಾರಾಣಿ, ರಾಜ, ಪ್ರದಾನಿ ಅರ್ಥಪಾಲ, ಸೇನಾಧಿಕಾರಿ ಬಡೆಗ, ವಿದ್ಯುಲ್ಲತೆ, ಗುಣಶೀಲ, ಶಿಖರ ಸೂರ್ಯನ ಮಕ್ಕಳಾದ ರವಿ ಕೀರ್ತಿ ಮತ್ತು ಮುದ್ದು ಗೌರಿ, ಇತ್ಯಾದಿ ಪಾತ್ರಗಳ ಚಿತ್ರಣ ಒಂದಕ್ಕಿಂತ ಒಂದು ಸೊಗಸಾಗಿವೆ ಹಾಗೆ ಪ್ರತಿಯೊಂದಕ್ಕೂ ಅದರದೇ ಆದ ತೂಕವಿದೆ. 

ಶಿಖರ ಸೂರ್ಯ ಮಾಡಿದ ತನ್ನ ದುರ್ವಿದ್ಯಗಳ ಪ್ರಯೋಗವು ಅನಿರೀಕ್ಷಿತ ತಿರುವುಗಳನ್ನು ಪಡೆಯುತ್ತವೆ. ಓದುವಾಗ ಮುಂದೆ ಹೀಗಿರಬಹುದೇ ಎಂದು ಯಾರಿಗೂ ಅನಿಸಿರುವುದಿಲ್ಲ 
ಹೀಗೆ ಹೇಳುತ್ತಾ ಹೋದರೆ ಎಣಿಸಲಾರದಷ್ಟು  ಅಚ್ಚರಿಗಳನ್ನು ಹೇಳಬೇಕಾಗುತ್ತದೆ ಹಾಗಾಗಿ ಅವೆಲ್ಲವನ್ನು ಓದುಗನೇ ಓದಿ ಸವೆಯಲಿ ಎಂದು ಬಯಸುವೆ. 

ಇದರ ಮತ್ತೊಂದು ವಿಶೇಷವೆಂದರೆ ೨೦೧೨ ರ ಮೈಸೂರಿನ ರಂಗಾಯಣವು ಜ. 15 ರಿಂದ 22ರ ವರೆಗೆ ನಡೆಸಲು ಉದ್ದೇಶಿಸಿರುವ `ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಡಾ ಮೊದಲ ದಿನ ಈ ನಾಟಕ ಪ್ರದರ್ಶನಗೊಂಡಿತ್ತು ಎನ್ನುವುದು ಮತ್ತೊಂದು ಹೆಮ್ಮೆ. ಕಾಕತಾಳೀಯವೆಂಬಂತೆ ಅವರ ಜನ್ಮದಿನವಾದ ಇಂದೇ ನಾನು ಶಿಖರಸೂರ್ಯನನ್ನೂ ಓದಿ ಮುಗಿಸಿದ್ದು ಹೆಚ್ಚು ಸಂತೋಷ ತಂದಿದೆ. ಮತ್ತೊಮ್ಮೆ ಚಂದ್ರಶೇಖರ ಕಂಬಾರರಿಗೆ ಜನ್ಮದಿನದ ಶುಭಾಶಯಗಳು. 

Saturday, 10 December 2016

ಪೆರಿನಿ ತಾಂಡವ


ಕೆ ಎನ್ ಗಣೇಶಯ್ಯನವರ "ಪೆರಿನಿ ತಾಂಡವ" ೩ ನೀಳ್ಗತೆಗಳ ಕಥಾಸಂಕಲನ. ವಿಜ್ಞಾನ, ಮನೋ ವಿಜ್ಞಾನ, ಇತಿಹಾಸ, ಸಾಮಾಜಿಕ ಪಿಡುಗುಗಳು, ವಿಕಾಸವಾದದ ಚರ್ಚೆ ಇನ್ನು ಹತ್ತಾರು ವಿಷಯಗಳ ಸಂಗಮವೆಂದು ಹೇಳಬಹುದು

ಪೆರಿನಿ ಎನ್ನುವುದು ಕ್ರಿ.ಶ ೧೨ನೇ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ರೂಢಿಯಲ್ಲಿದ್ದ ಒಂದು ಶಾಸ್ತ್ರೀಯ ನೃತ್ಯರೂಪ. ಈ ನೃತ್ಯರೂಪವೇ ಇಲ್ಲಿನ ಒಂದು ಕಥೆಯಲ್ಲಿ ಮುಖ್ಯ ಅಂಶ. ಈ ನೃತ್ಯ ಹೇಗೆ ಹುಟ್ಟಿತು ಎಲ್ಲಿ ಹುಟ್ಟಿತು ಎಂಬ ಪ್ರಶ್ನೆಗಳಿಗೆ ಲೇಖಕರು ನಮ್ಮನ್ನು ಇತಿಹಾಸಕ್ಕೆ ಕರೆದುಕೊಂಡು ಹೋಗಿ ಕಾಕತೀಯರ ವಂಶದವರ ಬಗ್ಗೆ ತಿಳಿಯುವಂತೆ ಮಾಡುತ್ತಾರೆ.  ಇಲ್ಲಿ ನಮಗೆ  ಕಾಕತೀಯರ ವಾರಂಗಲ್ಲಿನಲ್ಲಿರುವ "ರಾಮಪ್ಪ ದೇವಸ್ಥಾನ" ದ ಓದುವಾಗ ಮತ್ತು ಚಿತ್ರಗಳನ್ನು ನೋಡುವಾಗ ರಾಮಪ್ಪ ದೇವಾಲಯದ ರಚನೆ ಹೊಯ್ಸಳರ ದೇಗುಲಗಳನ್ನೇ ಹೋಲುತ್ತದೆ ಎಂದು ತಿಳಿಯುತ್ತದೆ. ಹಾಗಿದ್ದರೆ ಈ ರಾಮಪ್ಪ ಯಾರು ? ಎಲ್ಲಿಯವನು ? ಹೊಯ್ಸಳರ ದೇವಾಲಯಗಳಲ್ಲಿ ವಿಷ್ಣುವನ್ನು ಕೇಂದ್ರೀಕರಿಸಿದ್ದರೆ, ಕಾಕತೀಯರಲ್ಲಿ ಶಿವ. ತಮ್ಮ ಪ್ರತಿಸ್ಪರ್ಧಿಗಳಾದ ಹೊಯ್ಸಳರ ಶೈಲಿಯಲ್ಲಿ ಈ ದೇಗುಲವನ್ನೂ ಕಾಕತೀಯರು ನಿರ್ಮಿಸಿದ್ದಾದರೂ ಏಕೆ? ಸಹಜವಾಗಿ ನೋಡುವುದಾದರೇ ಎಲ್ಲ ಕಡೆಯೂ ದೇವಾಲಯ ಕಟ್ಟಿಸಿದ ರಾಜರ ಹೆಸರೋ ಅಥವಾ ಅವರ ಮನೆತನದ ಹೆಸರನ್ನೋ ಇಟ್ಟಿರುತ್ತಾರೆ ಆದರೆ ಇಲ್ಲಿ ರಾಮಪ್ಪನ ದೇವಾಲಯವೆಂದು ಹೆಸರಿಟ್ಟಿದ್ದೇಕೆ, ಕೆರೆಗೂ ಸಹ ರಾಮಪ್ಪ ಕೆರೆ ಎನ್ನಲು ಕಾರಣ? ಇತ್ಯಾದಿ ಕುತೂಹಲ ಹುಟ್ಟಿಸುವ ಮತ್ತು ಇತಿಹಾಸದ ರೋಚಕತೆಯನ್ನು ಓದಬಯಸುವ ಅಂದರೆ ಇತಿಹಾಸ ಪ್ರಿಯರಿಗೆ ಹೆಚ್ಚು ಖುಷಿ ಕೊಡುವ ಅಂಶ ಇಲ್ಲಿದೆ. 

ಇನ್ನುಳಿದ ಕಥೆಗಳಲ್ಲಿ ಬದುಕಿನ ಸುಂದರ ಸಂಬಂಧಗಳು ಮತ್ತು ನಡೆಗಳು, ಸಮಾಜದಲ್ಲಿ ನಮ್ಮ ಸುತ್ತಮುತ್ತ ನಡೆಯುವ ಅನೇಕ ಘಟನೆಗಳಿಂದ   ಮಾನಸಿಕ ಖೇದ ಉಂಟಾಗಿ ಹೇಗೆ ನಮ್ಮ ಜೀವನದಲ್ಲಿ ತಾಂಡವ ರೂಪ ತಳೆಯುತ್ತವೆ ಎನ್ನುವುದನ್ನು ತೋರಿಸಿದ್ದಾರೆ. ಇಲ್ಲಿ ನಾವು ಪ್ರೀತಿ, ಸ್ನೇಹ, ವ್ಯಾಮೋಹ , ಆಕರ್ಷಣೆ ಇವುಗಳಲ್ಲದೆ ವೈಜ್ಞಾನಿಕ ಚರ್ಚೆಗಳು ಮತ್ತು ಅವುಗಳಿಂದಾಗುವ ಅನುಕೂಲ ಅನಾನುಕೂಲ ಎಲ್ಲವನ್ನು ಅರ್ಥ ಮಾಡಿಕೊಳ್ಳಬೇಕು. ಒಟ್ಟಿನಲ್ಲಿ ಹೇಳುವುದಾದರೆ "ಪೆರಿನಿ ತಾಂಡವ" ಇತಿಹಾಸ ಜ್ಞಾನ ಹೆಚ್ಚಿಸುವುದಲ್ಲದೆ ವಾಸ್ತವ ಬದುಕಿನಲ್ಲಿ ಜನರು ಅನುಭವಿಸುವ ಮಾನಸಿಕ ಹಿಂಸೆ, ಗೊಂದಲ, ಆತಂಕ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರವನ್ನು ಕೊಡಬಹುದು ಎಂಬುದು ನನ್ನ ಅನಿಸಿಕೆ. 

Friday, 9 December 2016

ಗಾಂಧಿ ಹತ್ಯೆ ಮತ್ತು ಗೋಡ್ಸೆ


ರವಿ ಬೆಳಗೆರೆ ಅವರ "ಗಾಂಧಿ ಹತ್ಯೆ ಮತ್ತು ಗೋಡ್ಸೆ" ಪುಸ್ತಕದ ಬಗ್ಗೆ ಏನೇ ಬರೆಯಲು ಮನಸು ಹಿಂಜರಿಯುತ್ತದೆ ಕಾರಣ ನಾವು ಗಾಂಧಿ ಮತ್ತು ಗೋಡ್ಸೆ ಅವರ ಬಗ್ಗೆ ಇರುವ ಎಷ್ಟೋ ಭಾವನೆಗಳ ಮೇಲೆ ಇದು ಸಂಚಲನ ಮೂಡಿಸುತ್ತದೆ.

ನಾವು ಗಾಂಧೀಜಿ ಅವರ ಬಗ್ಗೆ ನಂಬಿಕೊಂಡಿರುವ ಎಷ್ಟೋ ವಿಚಾರಗಳು ಒಂದೊಂದು ಕಡೆ ಸುಳ್ಳು ಎಣಿಸುವುದು ಎಷ್ಟು ನಿಜವೋ ಖಳನಾಯಕನೆಂದೇ ಭಾವಿಸುವ ಗೋಡ್ಸೆ ಬಗ್ಗೆ ಕೆಲವೊಂದು ಕಡೆ ಗೌರವ ಮೂಡಿಸುವುದು ಸತ್ಯ. ಹಾಗಾಗಿ ಈ ಪುಸ್ತಕದ ಬಗ್ಗೆ ಹೆಚ್ಚು ಬರೆಯದೆ ಎಲ್ಲರೂ ಇದನ್ನು ಓದಿನೆ ತಿಳಿಯಲಿ ಎನ್ನುವುದು ನನ್ನ ಅಭಿಪ್ರಾಯ.

ಜೊತೆಗೆ ರಾಜೀವ್ ಗಾಂಧಿ ಮತ್ತು ಇಂದಿರಾ ಗಾಂಧಿ ಹತ್ಯೆಯ ಕುರಿತಾದ ರೋಚಕ ಕಥೆಯನ್ನು (ನೈಜತೆ) ರವಿ ಬೆಳಗೆರೆಯವರು "ರಾಜ ಬೇಟೆ" ಮತ್ತು "ಇಂದಿರಾ ವಧೆ" ಎಂಬ ಎರಡು ಅಧ್ಯಾಯಗಳಲ್ಲಿ ತುಂಬಾ ಚೆನ್ನಾಗಿ ಚಿತ್ರಿಸಿದ್ದಾರೆ. ಒಟ್ಟಾಗಿ ಹೇಳುವುದಾದರೆ ಇದೊಂದು ತನಿಖೆ ಆಧಾರಿತ ಪ್ರತೀ ಪುಟವೂ ಕುತೂಹಲಕಾರಿ ಅಂಶಗಳನ್ನು ಒಳಗೊಂಡ ಪುಸ್ತಕ. ಪ್ರತಿಯೊಬ್ಬರೂ ಓದಲೇ ಬೇಕಾದ ಪುಸ್ತಕವಿದು.

ಕನ್ನಡ ಕಾದಂಬರಿ ಕೂಟಕ್ಕೆ ಮತ್ತೊಮ್ಮೆ ಧನ್ಯವಾದಗಳು.

Wednesday, 7 December 2016

ಷಾಕ್ಮೋರಾ




ಯಂಡಮೂರಿ ವೀರೇಂದ್ರನಾಥರ "ಷಾಕ್ಮೋರಾ" ಓದುವಾಗ ಆರಂಭದಲ್ಲಿ ಮಾಟ ಮಂತ್ರದ ಕಥೆಯೇ ಮುಖ್ಯವಾಗಿದೆ ಎಂದು ಭಾಸವಾದರೂ ಇದೊಂದು ವಿಜ್ಞಾನ ಮತ್ತು ಮಾನವಾತೀತ ಶಕ್ತಿಗಳ ನಡುವೆ ನಡೆಯುವ ಘರ್ಷಣೆ...  ಆರಂಭದಲ್ಲಿ "ತುಳಸೀ ದಳ" ನೆನಪಾದರೂ ಮುಂದೆ ಹೋದಂತೆ ಕುತೂಹಲವನ್ನು ಹುಟ್ಟಿಸಿ ಓದುಗರಿಗೆ ವಿಶಿಷ್ಟ ಅನುಭವವನ್ನು ಕೊಡುತ್ತದೆ. 

ಇಲ್ಲಿ ನನಗಿಷ್ಟವಾದ ಮತ್ತೊಂದು ಅಂಶವೆಂದರೆ ೨೪ ನೇ ಪುಟದಲ್ಲಿ ಬರುವ ೪ ಬಗೆಯ ವಿಮರ್ಶಕರ ಬಗ್ಗೆ ಇರುವ ಟಿಪ್ಪಣಿಗಳು. ಪುಸ್ತಕ ಬರೆಯುವವರಿಗೂ, ಓದುವವರಿಗೂ ಮತ್ತು ಪುಸ್ತಕಗಳ ಬಗ್ಗೆ ತಮ್ಮ ಅಭಿಪ್ರಾಯ ಮತ್ತು ವಿಮರ್ಶೆಗಳನ್ನು ಬರೆಯುವವರಿಗೆ ಈ ಅಂಶವು ತುಂಬಾ ಸಹಾಯ ಮಾಡುತ್ತದೆ. 

ಈ ಕಥೆಯಲ್ಲಿ  ಬರುವ ಪುಟ್ಟ ಮಗು ಆರತಿಯ ಮೇಲೆ ನಡೆಯುವ ಹಲ್ಲೆ, ಆರೋಗ್ಯದ ಏರುಪೇರು, ಅದರಿಂದ ಮನೆಯವರಿಗೆ ಆದ ನೋವು ಹಿಂಸೆ, ಇತ್ಯಾದಿಗಳ ಸುತ್ತಾ ತುಂಬಾ ವಿಭಿನ್ನವಾಗಿ ಅನ್ನುವುದಕ್ಕಿಂತ ಓದುಗರೇ ಗೊಂದಲಗೊಂಡು ಇದೇನು ನಾವಂದುಕೊಂಡದ್ದೇ ಒಂದು ಆದರೆ ಕಥೆಯಲ್ಲಿ ಮುಂದೆ ನಡೆಯುತ್ತಿರುವುದೇ ಮತ್ತೊಂದು ಎಂದು ಒದ್ದಾಡುವಂತೆ ಮಾಡುತ್ತದೆ. ಆದರೆ ಈ ಪುಸ್ತಕದ ಹೆಸರು ಮತ್ತು ಆರಂಭದ ಕಥೆ ಕೇವಲ ಕ್ಷುದ್ರವಿದ್ಯೆಯನ್ನು ಮುಖ್ಯ ಅಂಶವಾಗಿದೆಯೆಂದು ಎನಿಸಿದರೂ ಕಥೆಯ ಆಳದಲ್ಲಿ ಬೇರೆಯೇ ಅಂಶವಿದೆಯೆಂದು ಓದುಗರಿಗೆ  ಮುಂದೆ ಮುಂದೆ ತಿಳಿಯುತ್ತದೆ!!! ಅದೇನೆಂದು ಓದುಗರು ಓದಿಯೇ ತಿಳಿಯಬೇಕು... 

ಒಟ್ಟಿನಲ್ಲಿ ಇಲ್ಲಿ ಮೂಢನಂಬಿಕೆ, ಮಾಟ ಮಂತ್ರಗಳಿಗಿಂತ ಮನುಷ್ಯನ ಮುಠಾಳತನ ಮತ್ತು ವಿಜ್ಞಾನಗಳ ನಡುವಿನ ಒಂದು ವಾಗ್ವಾದವೆಂದು ನನಗನಿಸಿತು. ಕಡಿಮೆ ಪುಟಗಳ ಕೃತಿಯಾದರೂ ಅಷ್ಟೇ ವಿಭಿನ್ನ ಅನುಭವ ನೀಡಿದ್ದು ಸತ್ಯ ಹಾಗಾಗಿ ಇಂದು ಸಂಜೆ ಓದಲು ಆರಂಭಿಸಿದ ನಾನು ಈಗಾಗಲೇ ಮುಗಿಸಿದ್ದೇನೆ. ಮತ್ತೊಮ್ಮೆ ಈ ಕನ್ನಡ ಕಾದಂಬರಿ ಕೂಟಕ್ಕೆ ಧನ್ಯವಾದಗಳು. 

Monday, 5 December 2016

ಚಿಗುರಿದ ಕನಸು



ಕಾರಂತರ "ಚಿಗುರಿದ ಕನಸು" ಓದಿ ಮುಗಿಸಿದೆ... ಈಗಾಗಲೇ ಇದು ಶಿವರಾಜ್ ಕುಮಾರ ಅಭಿನಯದ ಚಲನಚಿತ್ರವಾಗಿ ಮೂಡಿ ಬಂದಿರುವುದರಿಂದಬಹಳಷ್ಟು ಜನರಿಗೆ ಇದು ತಿಳಿದೇ ಇರತ್ತದೆ ... ಆದರೂ ಸಿನಿಮಾ ಎಷ್ಟೇ ಚೆನ್ನಾಗಿದ್ದರೂ ಮೂಲ ಪುಸ್ತಕದ ಸೌಂದರ್ಯಕ್ಕೆ ಸಾಟಿ ಆಗುವುದಿಲ್ಲ. 

ಇಲ್ಲಿಯ ನಾಯಕ ಶಂಕರ ತನ್ನ ಊರು ಅಸ್ತಿತ್ವವನ್ನು ಹುಡುಕಲು ಹೋಗುತ್ತಾನೆ. ಹಾಗೇ ಹೋದವನು ಊರಲ್ಲೇ ಉಳಿದು ಹಳ್ಳಿ ಜೀವನಕ್ಕೆ ಹೊಂದಿಕೊಂಡು ಅಲ್ಲಿಯ ಜನಕ್ಕೆ ಸಹಾಯ ಮಾಡುತ್ತಾ ಹಾಗು ಕೃಷಿಯಲ್ಲಿ ಕರಗತನಾಗುತ್ತಾ ಬದುಕುತ್ತಾನೆ... !!!!!

ನಾನು ಈಗಾಗಲೇ ಸಿನಿಮಾ ನೋಡಿದ್ದರಿಂದ ಹೆಚ್ಚು ಕುತೂಹಲ ಆಗಲಿಲ್ಲ ಆದರೂ ಪುಸ್ತಕವನ್ನು ಓದಿ ಅದಕ್ಕೂ ಸಿನಿಮಾಗೂ ಇರುವ ವ್ಯತ್ಯಾಸವನ್ನು ತಿಳಿಯುವ ಆಸೆಯಿಂದ ಓದಿದೆ... ನಿಜಕ್ಕೂ ಸಿನೆಮಾಗಿಂತ ಕಾದಂಬರಿಯೇ ಹೆಚ್ಚು ಇಷ್ಟವಾಯ್ತು.!!!!

"ಇನ್ನೊಂದು ವಿಶೇಷವೆಂದರೆ ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ದೊರಕಿದ್ದು ನಿಜಕ್ಕೂ ಇದು ಹೆಮ್ಮೆಯ ವಿಚಾರ"
ನೀವೆಲ್ಲರೂ ಈ ಪುಸ್ತಕವನ್ನು ಪ್ರೀತಿಯಿಂದ ಓದಿದರೆ ಸಿನೆಮಾಗಿಂತ ಕಾದಂಬರಿಯೇ ಹೆಚ್ಚು ಹಿತವೆನಿಸುತ್ತದೆ

ಚೋಮನ ದುಡಿ




ಶಿವರಾಮ ಕಾರಂತರ "ಚೋಮನ ದುಡಿ" ಓದಿ ಮುಗಿಸಿದೆ.. ಸಂತೋಷವಾಯ್ತು 
ಅಬ್ಬಾ ಎಷ್ಟು ಚಂದವಾಗಿ ಕಣ್ಣಿಗೆ ಕಟ್ಟುವಂತೆ "ಚೋಮ"ನ ಮನಸ್ಥಿತಿಯನ್ನು ಚಿತ್ರಿಸಿದ್ದಾರೆ. ಆ ಕಾಲದ ಜಾತಿ ಪದ್ಧತಿ ಸಂಪ್ರದಾಯಗಳು ಹೇಗಿದ್ದವು ಎನ್ನುವುದು ತುಂಬಾ ಚೆನ್ನಾಗಿ ವಿವರಿಸಿದ್ದಾರೆ. ಪ್ರತಿಯೊಂದು ಅಧ್ಯಾಯವೂ ಕೂಡ ಪ್ರತ್ಯೇಕ ಕಥೆಯಂತೆ ಭಾಸವಾದರೂ ಪ್ರತಿಯೊಂದರಲ್ಲೂ ಚೋಮ ಕಾಡುತ್ತಾನೆ... 
ನನಗೆ "ಬೆಳ್ಳಿ" ಪಾತ್ರ ತುಂಬಾ ಇಷ್ಟವಾಯ್ತು...

ಸಿoಗಾರೆವ್ವ ಮತ್ತು ಅರಮನೆ



"ಸಿoಗಾರೆವ್ವ ಮತ್ತು ಅರಮನೆ" ಒ0ದು ಅದ್ಭುತ ಕಾದ0ಬರಿ. ನಾನು ಮೂಲತಃ ಉತ್ತರ ಕರ್ಣಾಟಕದವಳಾದ್ದರಿ0ದ ಈ ಕಾದ0ಬರಿಯ ಕನ್ನಡ ಭಾಷೆ ಹೆಚ್ಚು ರ0ಜಿಸಿತು...

ಇಲ್ಲಿಯ ನಾಯಕಿ ಸಿ0ಗರೆವ್ವ ಹೆಸರಿಗೆ ತಕ್ಕ0ತೆ ಸು0ದರಿಯಾಗಿದ್ದರೂ ಅವಳ ಯಾತನೆ ಹುಟ್ಟಿನಿ0ದ ಸಾಯುವವರೆಗೂ ತಪ್ಪುವುದಿಲ್ಲ... 

ಹುಟ್ಟಿನಿ0ದ ಅವರ ಅಪ್ಪ, ನ0ತರ ಮದುವೆಯಾದ ಗ0ಡ, ಅವಳ ಜೀವನದಲ್ಲಿ ನಡು ನಡುವೆ ಬರುವ ವ್ಯಕ್ತಿಗಳು ಹೀಗೆ ಯಾರು ಅವಳನ್ನು ನೆಮ್ಮದಿಯಾಗಿ ಬಾಳಿಸುವುದಿಲ್ಲ.,. ಶೀನಿ0ಗಿ ಅವಳ ಜೀವ ಮತ್ತು ಜೀವನದ ಕಷ್ಟ ಸುಖಕ್ಕಾದ ಪ್ರಾಣ ಸ್ನೇಹಿತೆ... ಜೊತೆಗೆ ಈ ಕಥೆಯ ಜೀವಾಳ ಮತ್ತು ಎರಡನೆ ನಾಯಕಿಯೂ ಕೂಡ.. 
ಇದು ಸಿ0ಗಾರೆವ್ವನ ಕರುಣಾಜನಕ ಕಥೆಯಾದರೂ ಆಕೆ ಬ0ದ ಕಶ್ಟಗಳನ್ನು ಧೈರ್ಯದಿ0ದ ಎದಿರುಸುವ ಪರಿಯ ಮೆಚ್ಚಲೇಬೇಕು. ಈ ಕಥೆಯು ದುಖಾಃ0ತ್ಯ ಹೊ0ದಿದರೂ "ಸಿ0ಗಾರೆವ್ವ" ಮಾತ್ರ ಅಚ್ಚಳಿಯದೇ ನನ್ನ ಮನದಲ್ಲಿ ಉಳಿದಿದ್ದಾಳೆ..

ಈ ಕಥೆಯ ಜೀವ0ತ ನಾಯಕಿ ಶೀನಿ0ಗಿಯ ನಿರೂಪಣೆ ಇನ್ನಷ್ಟು ಇಷ್ಟವಾಗುತ್ತದೆ ..

ಇ0ತಹ ಅದ್ಭುತ ಕೃತಿ ರಚಿಸಿದ ರಾಷ್ಟ್ರಕವಿ ಶ್ರೀ ಚ0ದ್ರಶೇಖರ್ ಕ0ಬಾರರಿಗೆ ನನ್ನ ಹೃದಯಪೂರ್ವಕ ನಮನಗಳು ಹಾಗು ಇ0ತಹ ಅದ್ಭುತ ಪುಸ್ತಕಗಳ ಮಹತ್ವವನ್ನು ಹೆಚ್ಚಿಸಿ, ತಲುಪಿಸಿ ಮತ್ತು ಓದುವ ಹಸಿವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡಿದ ಎಲ್ಲರಿಗೂ ನನ್ನ ವ0ದನೆಗಳು...

ಡಾಲರ್ ಸೊಸೆ



ಬಹಳ ದಿನಗಳಿಂದ ಕಾಯುತ್ತಿದ್ದ "ಡಾಲರ್ ಸೊಸೆ" ನೆನ್ನೆ ನನ್ನ ಕೈ ಸೇರಿತು... ಅದನ್ನು ಓದಿ ಮುಗಿಸಿದ್ದು ಆಯಿತು ಜೊತೆಗೆ ಸಂತೋಷವು ಆಯಿತು... 

ಈಗಾಗಲೇ ಈ ಗುಂಪಿನ ಅನೇಕ ಪುಸ್ತಕ ಮಿತ್ರರು ಈ ಪುಸ್ತಕದ ಬಾಗ್ಗೆ ವಿಮರ್ಶೆ ಬರೆದು ಹಾಕಿರುವುದರಿಂದ ವಿಶೇಷವಾಗಿ ಹೇಳುವುದು ಏನು ಇಲ್ಲ....

ಆದರೂ ಸುಧಾ ಮೂರ್ತಿಯವರ ಈ ಕಾದಂಬರಿಯಲ್ಲೂ ಕೂಡ ಕೇವಲ ಕಾಲ್ಪನಿಕ ಕಥೆ ಅಲ್ಲದೇ ನಿಜ ಜೀವನದ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಹೇಳಿದ್ದಾರೆ... ಫಾರಿನ್ ಅಬ್ರಾಡ್ ಅಂತ ಪರಿತಪಿಸುವ ನಮ್ಮ ದೇಶದ ಕೆಲವು ಮೂರ್ಖರು ಬುದ್ಧಿ ಕಲಿಯಲೇ ಬೇಕು ಅಂತಹ ಸಂದೇಶ ಇದರಲ್ಲಿದೆ... 

ನಮ್ಮ ಸ್ವದೇಶೀ ಸುಗಂಧವ ತೆಗಳಿ ವಿದೇಶೀ ದುರ್ಗಂಧಕ್ಕೆ ಬೆರಗಾಗಿ ಬಾಯಿ ಬಿಡುವ ಜನರಿಗೆ ನಿಜವಾಗಲು ಈ ಕಾದಂಬರಿ ಪಾಠ ಕಲಿಸುತ್ತದೆ... 

ಇಲ್ಲೊಂದು ವಿಶೇಷ ಏನಂದರೆ(ಇವತ್ತಿಗೂ ಕೂಡ) ಬೆಂಗಳೂರಿನ ಜನಕ್ಕೆ ಆಮೇರಿಕಾ ಹೇಗೆ ಕನಸಿನ ಸೌಧವೋ... ನಮ್ಮ ಉತ್ತರ ಭಾರತದ ಜನ ಬೆಂಗಳುರಿನಲ್ಲಿ ನೆಲಸಿದ್ದರೆ ಅಮೆರಿಕಾದಲ್ಲಿ ಇದ್ದದ್ದಕ್ಕಿಂತ ಹೆಚ್ಚು ಗರ್ವ ಪಡುತ್ತಾರೆ ಅಂತಹ ಬೆಂಗಳೂರಿನಲ್ಲಿ ನಾನಿದ್ದೇನೆ ಎನ್ನುವುದು ನನ್ನ ಹೆಮ್ಮೆ ... 

ಅಮೇರಿಕಾ ಡಾಲರ್ ಗೂ ನಮ್ಮ ರೂಪಾಯಿಗೂ ಇರುವ ವ್ಯತ್ಯಾಸವೆಂದರೆ ಮನೆ ಊಟಕ್ಕೆ ಹೋಟೆಲ್ ಊಟಕ್ಕೆ ಇರುವ ವ್ಯತ್ಯಾಸ.. ಏಕೆಂದರೆ ದೂರದ ಅಮೇರಿಕಾ ಎರಡು ದಿನ ಚಂದ ಅನಿಸಿದ್ದರೂ ಮೂರನೇ ದಿನ ನಮ್ಮ ದೇಶವೇ ಬೇಕೆನಿಸುವುದು... 

Finallyyyyyyyy I LOVE MY INDIA.........

ಮೆಲೂಹದ ಮೃತ್ಯುಂಜಯ


"ಮೆಲೂಹದ ಮೃತ್ಯುಂಜಯ" ಅಬ್ಬಾ!!!!!!!!!! ಇದೊಂದು ಅದ್ಭುತ ಪುಸ್ತಕ... ಇದರ ಬಗ್ಗೆ ಎಷ್ಟು ಬರೆದರೂ ಎಷ್ಟು ಮೆಚ್ಚುಗೆಯ ಮಾತನ್ನು ವ್ಯಕ್ತ ಪಡಿಸಿದರೂ ಕಡಿಮೆಯೇ.. ನಿಜ ಹೇಳಬೇಕೆಂದರೆ ಇದರ ಬಗ್ಗೆ ವಿಮರ್ಶೆ ಬರೆಯುವಷ್ಟು ನಾನು ದೊಡ್ದವಳಲ್ಲ ಹಾಗಾಗಿ ನನಗೆ ಅನಿಸಿದ್ದನ್ನು ಸರಳವಾಗಿ ಹೇಳುತಿರುವೆ.

ಈ ಪುಸ್ತಕದ ಆರಂಭದ ವಿಮರ್ಶೆಗಳಲ್ಲಿ ಹೇಳಿರುವ ಹಾಗೆ ಓದುಗರಲ್ಲಿ ಕುತೂಹಲವನ್ನು ಸೃಷ್ಟಿಸಿ ಕೊನೆಯ ಪುಟದವರೆಗೂ ಎಡೆಬಿಡದೆ ಓದುವಂತೆ ಪ್ರೇರೇಪಿಸುತ್ತದೆ ಎನ್ನುವ ಮಾತು ಅಕ್ಷರಶಃ ನಿಜ. ಪುಟದಿಂದ ಪುಟಕ್ಕೆ ಕುತೂಹಲ ಹೆಚ್ಚಾಗಿ ರೋಮಾಂಚನ ನೀಡುತ್ತದೆ. ಇದು ಕೇವಲ ಪೌರಾಣಿಕ ಕಥೆಯಂತೆ ಎಲ್ಲೂ ನಮಗೆ ಭಾಸವಾಗುವುದಿಲ್ಲ.
ಈ ಪುಸ್ತಕ ಓದುವಾಗ ನನಗಾದ ಅನುಭವಗಳು... ಹೀಗಿವೆ 

೧. ನಾವು ಶಾಲೆಯಲ್ಲಿದ್ದಾಗ ಓದಿದ ಪ್ರತಿಯೊಂದು ಸಾಮಾಜಿಕ ,ಭೌಗೋಳಿಕ ,ವೈಜ್ಞ್ಯಾನಿಕ, ಐತಿಹಾಸಿಕ ಪಾಠಗಳೆಲ್ಲ ಈ ಪುಸ್ತಕ ಓದುವಾಗ ನೆನಪಾಗುತ್ತವೆ.

೨. ಸಿಂಧೂ ಬಯಲಿನ ನಾಗರೀಕತೆ, ಮಾನಸ ಸರೋವರ , ಶ್ರೀನಗರ ಕಾಶ್ಮೀರ ಹೀಗೆ ನಮ್ಮ ದೇಶದ ಅನೇಕ ಸ್ಥಳಗಳಲ್ಲದೆ ನಮ್ಮ ದೇಶದ ಅನೇಕ ನದಿಗಳ ಹೆಸರಲ್ಲದೆ ಅನೇಕ ಪರದೇಶಗಳ ಸ್ಥಳಗಳು ಇಲ್ಲಿ ಬಂದು ಹೋಗುತ್ತವೆ. ನಾನು ಇಲ್ಲಿ ಇವುಗಳ ಹೆಸರು ತೆಗೆದುಕೊಂಡ ಕಾರಣವೇನೆಂದರೆ ಪ್ರತೀ ಪುಟ ಓದುವಾಗ ಓದುಗರು ಕೂಡ ತಾವಿರುವ ಜಾಗವ ಮರೆತು ಅಲ್ಲಿಯೇ ಹೋಗುತ್ತಿದ್ದಾರೆ ಎಂದೆನಿಸಬೇಕು ಅಷ್ಟರ ಮಟ್ಟಿಗೆ ಈ ಪುಸ್ತಕ ಸೆಳೆಯುತ್ತದೆ.

೩. ಶಿವನು ನಾವಂದುಕೊಂಡ ಹಾಗೆ ದೇವರು.. ಆದರೆ ಇದರಲ್ಲಿ ಅವನ ಕಲ್ಪನೆಯೇ ಭಿನ್ನವಾಗಿದೆ.. ಶಿವ ಹೇಗೆ ಹುಟ್ಟಿದ ಬೆಳೆದ ಮುಂದೆ ಅವನು ಹೇಗೆ ಮಹಾದೇವನಾದ ಎನ್ನುವ ಸುಂದರ ಚಿತ್ರಣ ಇಲ್ಲಿ ಮೂಡಿದೆ. ಮೆಲೂಹಕ್ಕೆ ಶಿವನ ಆಗಮನ, ಅಲ್ಲಿಯ ಜನರ ರಕ್ಷಣೆ, ಅವನ ಕಲ್ಯಾಣ, ಯುದ್ಧದ ತಯಾರಿ ಹೀಗೆ ಮತ್ತೊಂದು ಮೊಗದೊಂದು ಕಣ್ಣಿಗೆ ಕಟ್ಟುವಂತೆ ಹೆಣೆದಿದ್ದಾರೆ.. ನಾವೇ ಇದನ್ನೆಲ್ಲಾ ಕಣ್ಣಾರೆ ನೋಡುತಿದ್ದೆವೇನೋ ಎಂದೆನಿಸಿದರೂ ತಪ್ಪಿಲ್ಲ.

೪. ಇನ್ನೊಂದು ಮುಖ್ಯವಾದ ಅಂಶವೆಂದರೆ ಶ್ರೀ ರಾಮನ ಕಲ್ಪನೆ ಅಷ್ಟೇ ಸುಂದರ ಸರಳ ಮತ್ತು ಉತ್ತಮ ಮೌಲ್ಯಗಳಿಂದ ಚಿತ್ರಿಸಿದ್ದಾರೆ. ಪ್ರತಿಯೊಂದು ಅಧ್ಯಾಯವು ಸಹ ಅದರದೇ ಆದ ವೈಶಿಷ್ಟ್ಯ ಹೊಂದಿದೆ. ಹೀಗೆ ಈ ಪುಸ್ತಕದ ಬಗ್ಗೆ ಎಷ್ಟು ಹೇಳಿದರೂ ಮುಗಿಯುವುದಿಲ್ಲ.

೫. ಕೊನೆಯದಾಗಿ ಹೇಳುವುದೆಂದರೆ ಮೊದಲ ಪುಟದಿಂದ ಕೊನೆಯ ಪುಟದವರೆಗೂ ಬಿಡದಂತೆ ಓದಿಸಿಕೊಂಡು ಓದುವ ಈ ಪುಸ್ತಕ ಅಂತ್ಯದಲ್ಲಿ ನಿರಾಸೆ ಮೂಡಿಸುತ್ತದೆ ಅದಕ್ಕೆ ಕಾರಣ ಈ ಪುಸ್ತಕದ ಮುಂದಿನ ಭಾಗದಲ್ಲಿ ಕಥೆ ಅಂತ್ಯವಾಗುತ್ತದೆ ಅದೇ "ನಾಗಾಗಳ ರಹಸ್ಯ" ಮತ್ತು "ವಾಯುಪುತ್ರರ ಶಪಥ". ಈ ೨ ಪುಸ್ತಕಗಳನ್ನು ಓದಿದ ಮೇಲೆಯೇ ಓದುಗರ ಕುತೂಹಲ ಕರಗತ್ತದೆ ಎನ್ನುವುದು ನನ್ನ ವಯಕ್ತಿಕ ಅಭಿಪ್ರಾಯ..

ಇಂತಹ ಅದ್ಬುತ ಪುಸ್ತಕವನ್ನು ನನ್ನ ಕೈ ಸೇರಿಸಿ ಓದಲು ಪ್ರೇರೇಪಿಸಿದ ಎಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು.

ನೇಹಲ ಕಥೆಗಳು





ನೆನ್ನೆಯ ಭಾನುವಾರವೆಲ್ಲ ಕೆ. ಎನ್. ಗಣೇಶಯ್ಯನವರ "ನೇಹಲ ಕಥೆಗಳು" ಪುಸ್ತಕದ ಜೊತೆಗೆ ಸಾಗಿತು... ನಿಜಕ್ಕೂ ಇದೊಂದು ರೋಚಕ ಪುಸ್ತಕ.... ೮ ಕಥೆಗಳನ್ನು ಒಳಗೊಂಡ ಒಂದಕ್ಕಿಂದ ಒಂದು ವಿಭಿನ್ನ ವಸ್ತುಗಳಿಂದ ಕೂಡಿದ ಪುಸ್ತಕ.

ಇಲ್ಲಿತನಕ ಓದಿದ ಕಥೆ ಪುಸ್ತಕಗಳಿಗಿಂತ ವಿಶಿಷ್ಟ ನಿರೂಪಣೆ, ಕಥೆ ಹೇಳುವ ಶೈಲಿ ಇದರಲ್ಲಿದೆ. ಹಾಗೆ ಒಮ್ಮೆ ಓದಲು ಆರಂಭಿಸಿದರೆ ಪುಟದವರೆಗೂ ಬಿಡದೆ ಸೆಳೆದುಕೊಂಡು ಹೋಗುತ್ತದೆ ಅಷ್ಟು ಅದ್ಭುತ, ರೋಚಕ ವಿಷಯಗಳು ಇದರಲ್ಲಿವೆ. ಈ ಪುಸ್ತಕ ಬರೆಯಲು ಲೇಖಕರು ಮಾಡಿದ ಸಂಶೋಧನೆ ಹೆಚ್ಚು ಮನ ಸೆಳೆಯುತ್ತದೆ. ಪ್ರತೀ ಕಥೆಯ ಕೊನೆಗೆ ಅಂತ್ಯಕ್ಕೆ ತಮಗೆ ಮಾಹಿತಿಯ ಲಿಂಕ್ ಮತ್ತು ಪುಸ್ತಕದ ಹೆಸರು ಮತ್ತು ಅದರ ಲೇಖಕರ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ, ಹೆಚ್ಚು ತಿಳಿಯಲು ಇಚ್ಚಿಸುವರು ಇದರ ಉಪಯೋಗ ಪಡೆಯಬಹುದು. ಇದರಲ್ಲಿ ಐತಿಹಾಸಿಕ, ವೈಜ್ಞಾನಿಕ, ಜ್ಯೋತಿಷ್ಯ, ಇತ್ಯಾದಿ ಕುತೂಹಲಕಾರಿ ವಿಷಯಗಳು ಇವೆ.

ಇರುವ ಒಟ್ಟು ೮ ಕಥೆಗಳಲ್ಲಿ, "ನೇಹಲ" ಮತ್ತು "ರಾಗ ಪಂಜರ" ಎಂಬ ೨ ಕಥೆಗಳು ಮನಸಿಗೆ ಹೆಚ್ಚು ಹಿಡಿಸಿದವು ಜೊತೆಗೆ ಅಷ್ಟೇ ಮಾಹಿತಿ ಮತ್ತು ರಂಜನೆ ಕೊಟ್ಟವು. ನಿಜಕ್ಕೂ ೮ ಕಥೆಗಳಲ್ಲಿ ಲೇಖಕರ ಶ್ರಮ ಮತ್ತು ಮಾಡಿದ ಸಂಶೋಧನೆ ಎದ್ದು ಕಾಣುತ್ತವೆ. ಈ ಕಥೆಗಳಲ್ಲಿ ೭೦-೮೦% ಸತ್ಯಾಂಶ ಮತ್ತು ೨೦-೩೦% ಲೇಖಕರ ಕಲ್ಪನೆಗಳಿಂದ ಕೂಡಿದೆ ಎನ್ನುವುದು ನನಗೆ ಅನಿಸಿತು ಅದಕ್ಕೆ ಕಾರಣ ಪ್ರತೀ ಕಥೆಯ ಅಂತ್ಯಕ್ಕೆ ಲೇಖಕರು ಹೇಳಿದ ಕೊನೆಯ ಮಾತು ಎಂಬ ಅಂಕಣ.

ನಿಜಕ್ಕೂ ಈ ಪುಸ್ತಕ ಓದಿದವರೆಲ್ಲರೂ ಖುಷಿ ಪಡುತ್ತಾರೆ ಎನ್ನುವದು ನನ್ನ ಅಭಿಪ್ರಾಯ. ಭಾನುವಾರದ ರಜವನ್ನು ಇಂತಹ ವಿಶೇಷ ಪುಸ್ತಕದ ಜೊತೆ ಕಳೆದದ್ದು ಮತ್ತೊಂದು ಸಂತೋಷ. ಈ ಕೂಟಕ್ಕೆ ಮತ್ತೊಮ್ಮೆ ಧನ್ಯವಾದಗಳು

ಬೆಟ್ಟದ ಜೀವ




ಶಿವರಾಮ ಕಾರಂತರ "ಬೆಟ್ಟದ ಜೀವ" ನಿಜಕ್ಕೂ ಒಂದು ಸುಂದರ ಕೃತಿ. ಇದು ಕಾರಂತರಿಗಾದ ಅನುಭವವದ ಕಥೆ. ಇಲ್ಲಿನ ವಿಶೇಷವೆಂದರೆ ಮಲೆನಾಡ ಸೊಬಗನ್ನು ಬರೀ ಕಣ್ಣಿಗೆ ಕಟ್ಟುವಂತೆ ಹೇಳಿಲ್ಲ ... ಸ್ವತಃ ನಾವೇ ಅಲ್ಲಿ ಇದ್ದೇವೇನೋ ಅನ್ನುವಷ್ಟು ಮನೋಜ್ಞವಾಗಿ ನಿಸರ್ಗ ಸೌಂದರ್ಯವನ್ನು ಚಿತ್ರಿಸಿದ್ದಾರೆ. 

ಕಾರಂತರು ಪುತ್ತೂರಿನಲ್ಲಿ ನೆಲೆಸಿದಾಗ ಕೆಲಸಕ್ಕೆಂದು ಹಳ್ಳಿ ಮಾರ್ಗವಾಗಿ ನಡೆಯುತ್ತಾ ಎಲ್ಲೋ ಹೋಗಬೇಕಾದವರು ಮತ್ತೆಲ್ಲೋ ದಾರಿ ತಪ್ಪಿ ಹೋಗುತ್ತಾರೆ ಅಲ್ಲಿ ಒಬ್ಬ ವ್ಯಕ್ತಿ ಸಿಗುತ್ತಾರೆ ಅವರೇ ದೇರಣ್ಣ. ಅವರು ಗೋಪಾಲಯ್ಯ ಅನ್ನುವರ ಮನೆಗೆ ಕರೆದು ತಂದು ಇರಲು ವ್ಯವಸ್ಥೆ ಮಾಡುತ್ತಾರೆ. ಗೋಪಾಲಯ್ಯ, ಅವರ ಮಡದಿ ಶಂಕರಮ್ಮ, ಅವರ ಸಾಕು ಮಗ ಸೊಸೆ ಮೊಮ್ಮಕ್ಕಳು ಸುತ್ತಾ ನಡೆದ ಕಾರಂತರ ಅನುಭವದ ಕಥೆಯೇ "ಬೆಟ್ಟದ ಜೀವ".

ವಯಸ್ಸಾದ ಅಪ್ಪ ಅಮ್ಮ ಮಕ್ಕಳಿಂದ ದೂರವಿದ್ದು ಪಡುವ ಯಾತನೆ ಇದರ ಮತ್ತೊಂದು ಮುಖ್ಯ ಅಂಶ. ಆ ನೋವಿನಲ್ಲಿಯೂ ಆ ತಂದೆ ತಾಯಿಗಳು ಇದ್ದದರಲ್ಲೇ ಸಂತೋಷ ಕಂಡುಕೊಂಡು ಇದ್ದೊಬ್ಬ ಮಗ ಇಂದು ಬರ್ತಾನೆ ನಾಳೆ ಬರ್ತಾನೆ ಎನ್ನುವ ಭರವಸೆಯಲ್ಲಿ ಜೀವನ ಸಾಗಿಸುತ್ತಾರೆ. ಈ ಭಾವನೆಯನ್ನು ಓದಿಯೇ ಸವಿಯಬೇಕು. ಆದರೆ ಅಪರಿಚಿತರಾಗಿ ಬಂದ ಕಾರಂತರೇ ಅವರ ಮಗನನ್ನು ಹುಡುಕಲು ಸಹಾಯ ಮಾಡುತ್ತಾರೆಂದು ಅವರೆಂದು ಅಂದುಕೊಂಡಿರಲಿಲ್ಲ.

ನನಗೆ ಅತ್ಯಂತ ಮೆಚ್ಚುಗೆಯಾದ ವಿಷಯವೆಂದರೆ ಅಪರಿಚಿತರಾಗಿ ಬಂದ ಕಾರಂತರನ್ನು ಗೋಪಾಲಯ್ಯನವರ ಕುಟುಂಬ ಎಷ್ಟು ಚೆನ್ನಾಗಿ ಅತಿಥಿ ಸತ್ಕಾರ ಮಾಡಿದ್ದಾರೆಂದರೆ ಅದನ್ನಂತೂ ಓದಿ ನನಗೆ ತುಂಬಾ ಆಶ್ಚರ್ಯವಾಯಾಯ್ತು. ಒಂದು ಕ್ಷಣ ನಾನು ಅಂತಹ ಪ್ರಕೃತಿಯ ಸವಿಯಬೇಕು ಆ ರೀತಿ ಜೀವನವ ಒಮ್ಮೆಯಾದರೂ ಅನುಭವಿಸಬೇಕೆಂಬ ಸಣ್ಣ ಆಸೆ ಮನಸ್ಸನ್ನು ಕಾಡಿದ್ದಂತೂ ನಿಜ. ನಿಜಕ್ಕೂ ಈ ಪುಸ್ತಕದಲ್ಲಿ ಅರ್ಥಮಾಡಿಕೊಳ್ಳುವ ಅಂಶಗಳು, ಅನುಭವಿಸಬೇಕಾದ ಅಂಶಗಳು ಬಹಳಷ್ಟಿವೆ. ಆ ಕುಟುಂಬದ ಮುಗ್ಧತೆ, ಕಷ್ಟಪಟ್ಟು ದುಡಿಯುವ ತವಕ, ಮತ್ತೊಬ್ಬರಿಗೆ ಉಪಕಾರ ಮಾಡುತ್ತಾ ಅದರಲ್ಲೇ ಸುಖ ಅನುಭವಿಸೋ ಅವರ ಉದಾರತೆ ನಿಜಕ್ಕೂ ರಮಣೀಯ. ಈ ಕಾದಂಬರಿ ಓದಿ ನಿಜಕ್ಕೂ ನನ್ನ ಮನತುಂಬಿ ಬಂತು.

ಈ ಕಾದಂಬರಿಯಿಂದ ನನಗೆ ಪ್ರಕೃತಿಯ ಮಡಿಲಲ್ಲಿ ಎಷ್ಟು ಸಂತೋಷವಿರುತ್ತದೆ, ನೆಮ್ಮದಿಯಿರುತ್ತದೆ, ಯಾಕಾದರೂ ನಾನು ಆ ಕಾಲದಲ್ಲಿ ಹುಟ್ಟಲಿಲ್ಲ ಎಂದು ಸಂಕಟವೂ ಆಯ್ತು ಜೊತೆಗೆ ಆಗಿನ ಕಾಲದ ಜನರ ಮನಸ್ಥಿತಿಗೂ, ಈಗಿನ ಕಾಲದ ಜನರ ಮನಸ್ಥಿತಿಗೂ ಇರುವ ವ್ಯತ್ಯಾಸ ಕಂಡು ಬಹಳ ಬೇಜಾರಾಯ್ತು. ಆದರೆ ಏನು ಮಾಡುವ ಹಾಗಿಲ್ಲ ಜೀವನ ಹೇಗೆ ಬಂದರೂ ಅದನ್ನು ನಾವಿ ಸ್ವೀಕರಿಸಲೇಬೇಕು. ನಿಜಕ್ಕೂ ಇದರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಇಂತಹ ಅದ್ಭುತ ಕೃತಿಯ ಓದಲು ಅವಕಾಶ ಕೊಟ್ಟ "ಕನ್ನಡ ಕಾದಂಬರಿ ಕೂಟ"ಕ್ಕೆ ಮತ್ತೊಮ್ಮೆ ಧನ್ಯವಾದಗಳು

ಮೂಕಜ್ಜಿಯ ಕನಸುಗಳು





ನಾ ಓದಿದ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಾದಂಬರಿ ಎಂದರೆ "ಮೂಕಜ್ಜಿಯ ಕನಸುಗಳು". ಓದಿ ನಿಜಕ್ಕೂ ಹೆಮ್ಮೆ ಅನಿಸುತ್ತಿದೆ ಕಾರಣ ಆ ಕಾದಂಬರಿಯ ನಿರೂಪಣಾ ಶೈಲಿ... ಇಲ್ಲಿವರೆಗೂ ನಾ ಓದಿದ ಅನೇಕ ಕಾದಂಬರಿಗಳಿಗಿಂತ ತುಂಬಾ ವಿಭಿನ್ನವಾಗಿದೆ ಜೊತೆಗೆ ಅವುಗಳಷ್ಟು ಸರಳವಾಗಿ ಅರ್ಥವೂ ಆಗುವುದಿಲ್ಲ. ಮನಸಿಟ್ಟು ಓದಿದರೆ ಮಾತ್ರ ತಿಳಿಯುವ ಕಥೆ.

ಕಾರಂತರು ಮುನ್ನುಡಿಯಲ್ಲಿ ಹೇಳಿರುವ ಹಾಗೆ ಇಲ್ಲಿ ಯಾರು ನಾಯಕಿ/ನಾಯಕರು ಇಲ್ಲವಾದರೂ... ನನಗೆ ಮೂಕಜ್ಜಿಯೇ ನಾಯಕಿ ಮತ್ತು ಅವರ ಮೊಮ್ಮಗ ಸುಬ್ರಾಯರೇ ನಾಯಕ ಎನಿಸಿದ್ದಂತು ಸತ್ಯ. ಕೊಲ್ಲೂರು ಮೂಕಾಂಬಿಕೆಯ ಹೆಸರನ್ನಿಟ್ಟ ಒಬ್ಬ ಹುಡುಗಿಯ ಕಥೆಯಿದು. "ಮೂಕಂಬಿಕ" ಹೆಸರು ಆಡು ಭಾಷೆಯಲ್ಲಿ "ಮೂಕಿ" ಆಗುತ್ತದೆ ನಂತರ ಹೆಸರಿಗೆ ತಕ್ಕಂತೆ ಮೌನವಾಗುತ್ತ ಕೊನೆಗೆ ೮೦ ದಾಟಿದ ಮೂಕಜ್ಜಿಯಾಗುತ್ತಾಳೆ.

ಪ್ರತೀ ಅಧ್ಯಾಯದಲ್ಲೂ ಒಂದು ವಿಶಿಷ್ಟತೆ ಇದೆ. ಆರಂಭದಲ್ಲಿ ಹೇಳುವ ಸಣ್ಣ ಕಥೆಗಳಿಗೆಲ್ಲ (ಇಲ್ಲಿ ಮೂಕಜ್ಜಿಯ ಕನಸುಗಳು) ಮುಂದೆ ಹೋದಂತೆ ಒಂದೊಂದು ಆಯಾಮ ಹೊಂದುತ್ತವೆ ಜೊತೆಗೆ ಓದುಗರಿಗೆ ಗೊಂದಲವು ಶುರುವಾಗುತ್ತದೆ. ಅದಕ್ಕೆ ನಾ ಮೊದಲೇ ಹೇಳಿದಂತೆ ಮನಸಿಟ್ಟು ಓದಿದರೆ ಮಾತ್ರ ಅರ್ಥವಾಗುತ್ತದೆ ಇದು ಕೇವಲ ನನ್ನ ಅನುಭವ ಮಾತ್ರ.
ಆ ಅಜ್ಜಿಗೆ ಗೋಚರಿಸುವ ಪ್ರತಿಯೊಂದು ಘಟನೆಗಳು ಮುಂದೆ ನಡೆಯಬಹುದಾದ ಅಥವ ಹಿಂದೆ ನಡೆದ ಘಟನೆಗಳಿಗೆ ಸಂಬಂಧ ಇರುತ್ತವೆ. ಇದನ್ನು ಅರ್ಥ ಮಾಡಿಕೊಂಡದ್ದು ಕೇವಲ ಅವಳ ಮೊಮ್ಮಗ ಸುಬ್ರಾಯ ಮಾತ್ರ. ಉಳಿದವರೆಲ್ಲರೂ ಅಜ್ಜಿಗೆ ಮರಳು ಎಂದೇ ತಿಳಿದು ಆಡಿಕೊಳ್ಳುತ್ತಾರೆ. ಹೀಗೆ ಮುಂದೆ ಓದಿದಂತೆಲ್ಲ ಮೂಕಜ್ಜಿಯ ಮೇಲೆ ನಮಗೂ ಪ್ರೀತಿ ಬೆಳೆಯುತ್ತದೆ.

ಈ ಪುಸ್ತಕದ ಮತ್ತೊಂದು ವಿಶೇಷವೆಂದರೆ ಇಲ್ಲಿ ನನಗೆ ಗೊತ್ತಿಲ್ಲದೇ ಇರುವ ಅನೇಕ ಪದಗಳು ಬಳಕೆಯಾಗಿದ್ದು ಅವನ್ನು ನಾ ತಿಳಿದು ಓದಿದ್ದು. ಕೊನೆಯದಾಗಿ ಹೇಳಬೇಕಂದರೆ ಇದನ್ನು ಓದಿದ ನಿಜಕ್ಕೂ ನನ್ನ ಜ್ಞಾನವೂ ಹೆಚ್ಚಾಯಿತು. ಖಂಡಿತ ಇದೊಂದು ಅಮೋಘ ಪುಸ್ತಕ. ಓದಿ ತುಂಬಾ ಆನಂದವಾಯಿತು. ಮತ್ತೊಮ್ಮೆ ಮಗದೊಮ್ಮೆ ಈ ಕನ್ನಡ ಕಾದಂಬರಿ ಕೂಟಕ್ಕೆ ನನ್ನ ಮನಪೂರ್ವಕ ಧನ್ಯವಾದಗಳು...

ಪರಿಧಿ




ಹೆಂಗಳೆಯರ ಮನದ ಪಡಿಯಚ್ಚು ಸುಧಾಮೂರ್ತಿಯವರ "ಪರಿಧಿ" ಕಾದಂಬರಿ. ಸಮಾಜದ ದೃಷ್ಟಿಯಲ್ಲಿ ಪರಮಸುಖಿಯಾಗಿ ಕಂಡರೂ ಒಂಟಿತನದಿಂದ ಬಳಲುತ್ತಾ ನೋವನ್ನು ಯಾರೊಂದಿಗೂ ಹೇಳಲಾಗದೇ ಮನೋರೋಗಿಯಾಗಿ ಬಳಲುವ ಕಥೆ ಇದು ಜೊತೆಗೆ ವಾಸ್ತವದ ಇನ್ನೊಂದು ರೂಪ ಈ ಪುಸ್ತಕ. ಹಣದಿಂದ ಗುಣ ಬದಲಾಗಿ ಅನುಭವಿಸುವ ಯಾತನೆ ಇದರಲ್ಲಿದೆ .
ಮೃದುಲಾ ಹೆಸರಿಗೆ ತಕ್ಕಂತೆ ಮೃದು, ಜೊತೆಗೆ ಶಾಂತ ಸ್ವಭಾವದಿಂದ ಕೂಡಿದ ಪ್ರೀತಿ ಅಂತಕರಣ ಇರುವ ಚೆಲುವೆ. ಇದ್ದಲ್ಲೇ ತೃಪ್ತಿ ಪಡುವ ವಿಶೇಷ ಗುಣವಿರುವಳು. ಬಡತನದ ಬೇಗೆಯಲ್ಲಿ ಬೆಂದು ತನ್ನದೇ ಪ್ರಯತ್ನದಿಂದ ಸರಕಾರಿ ವೃತ್ತಿ ಪಡೆದ ಡಾಕ್ಟರ್ ಸಂಜಯ್ ಆಕೆಯನ್ನು ಪ್ರೀತಿ ಮಾಡಿ ಮದುವೆಯಾಗುತ್ತಾನೆ. ಆರ್ಥಿಕವಾಗಿ ಮೃದುಲಾ ಅವನಿಂಗಿಂತಲೂ ಮೇಲಿದ್ದರೂ ಯಾವತ್ತಿಗೂ ಆಕೆ ಅಹಂಕಾರ ತೋರಿಸದೇ ಅವನ ಖಾಸಗಿ ಮತ್ತು ವೃತ್ತಿ ಜೀವನದ ಕಷ್ಟ ಸುಖಕ್ಕೆ ಸಂಗಾತಿಯಾಗಿ ಪ್ರತೀ ಕಷ್ಟದಲ್ಲೂ ಒಳ್ಳೆಯದನ್ನೇ ಹುಡುಕಿ ಸಮಾಧಾನವಾಗಿ ಬದುಕುತ್ತಾಳೆ. ಅಲ್ಲದೆ ಅವನ ಉನ್ನತ ವಿದ್ಯಾಭ್ಯಾಸ ಮಾಡಿಸಲು ತಾನೊಬ್ಬಳೇ ದುಡಿದು ಸಂಸಾರ ಸಾಗಿಸುತ್ತಾಳೆ. ಹೀಗೆ ಹೆಂಡತಿಯ ಸಹಾಯದಿಂದ ಬಹಳ ಬೇಗ ಶ್ರದ್ಧೆಯಿಂದ ಓದಿ ಸ್ವಂತ ಆಸ್ಪತ್ರೆ ತೆಗೆದು ಬಹುದೊಡ್ಡ ಶ್ರೀಮಂತನಾಗುತ್ತಾನೆ.
ಆದರೆ ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎನ್ನುವುದು ಇಲ್ಲಿ ನೆನಪಾಗುತ್ತದೆ. ಸಂಜಯ ಒಂದು ಕಾಲದಲ್ಲಿ ನಿಸ್ವಾರ್ಥ ಸೇವೆ, ಬಡವರಿಗೆ ಸಹಾಯ ಮಾಡಬೇಕು ಎಂಬ ಆದರ್ಶದಿಂದ ಬದುಕಿದ್ದವನು ಹಣ ಬಂದಕೂಡಲೇ ಸ್ವಾರ್ಥಿಯಾಗಿ ಜೀವನವೆಂದರೆ ಬರೀ ಹಣ ಗಳಿಸುವುದು ಎಂದು ತಿಳಿದು ಅಕ್ರಮವಾಗಿಯೂ ಗಳಿಸಲು ಆರಂಭಿಸುತ್ತಾನೆ. ಇದ್ಯಾವುದನ್ನು ಸಹಿಸದ ಆದರ್ಶ ಶಿಕ್ಷಕಿ ಮೃದುಲಾ ಮೊದಲ ಬಾರಿಗೆ ತಿರುಗಿ ಬೀಳುತ್ತಾಳೆ. ಇರುವ ಒಬ್ಬನೇ ಮಗನೂ ಆಕೆಯನ್ನು ಅರ್ಥ ಮಾಡಿಕೊಳ್ಳದೆ ಅಪ್ಪನ ದಾರಿಯೇ ಹಿಡಿಯುತ್ತಾಳೆ. ಕೊನೆಗೆ ತನ್ನ ಹೆಂಡತಿಯ ಸಹಾಯದಿಂದಲೇ ಮೇಲೆ ಬಂದ ಸಂಜಯ ಆಕೆಯನ್ನೇ ಕೀಳಾಗಿ ಕಾಣುತ್ತ ಮಹಾಸ್ವಾರ್ಥಿಯಾಗಿ ಬದುಕುತ್ತಾನೆ.
ಮೃದುಲಾ ಮಾತ್ರ ನಾದಿನಿ , ಅತ್ತಿಗೆ ಅಪ್ಪ ಅಮ್ಮಾ ಎಲ್ಲರಿಂದಲೂ ದೂರಾಗಿ ಗಂಡನ ಸ್ವಾರ್ಥ, ನಡವಳಿಕೆಯಿಂದ ಬೇಸತ್ತು, ಮನೋರೋಗಕ್ಕೆ ತುತ್ತಾಗಿ ಸ್ವತಃ ತಾನೇ ಅದಕ್ಕೆ ಚಿಕಿತ್ಸೆ ತೆಗೆದುಕೊಂಡು ಚೇತರಿಸಿಕೊಳ್ಳುತ್ತಾ ಅವನನ್ನು ಬಿಟ್ಟು ಹೋಗುತ್ತಾಳೆ. ಈ ಕಥೆ ಕಾದಂಬರಿಯ ಕಲ್ಪನೆಯಲ್ಲ ನಮ್ಮ ಸುತ್ತ ಮುತ್ತ ನಡೆಯುವ ಎಷ್ಟೋ ದುಡಿಯುವ ಹೆಣ್ಣುಮಕ್ಕಳ ಕಥೆಯಾಗಿದೆ. ತನ್ನ ತೌರುಮನೆಯವರಿಗೆ ಎಂದೂ ಸಹಾಯ ಮಾಡದ ಹೆಣ್ಣು ಗಂಡನಿಗಾಗಿ ಅವರ ಸಂಸಾರಕ್ಕಾಗಿ ದುಡಿದು ಎಲ್ಲರನ್ನು ಸಂತುಷ್ಟಗೊಳಿಸುವಲ್ಲೇ ಮುಕ್ಕಾಲು ಆಯುಷ್ಯವನ್ನು ಕಳೆದರೂ ಸ್ವಾರ್ಥ ಗಂಡಂದಿರು ಅವಳನ್ನು ಎಂದೂ ಪ್ರೀತಿಯಿಂದ ಕಾಣುವುದಿಲ್ಲ, ಅವಳೊಂದು ದುಡಿಯುವ ಯಂತ್ರದಂತೆ ಕಾಣುತ್ತಾರೆ ಅಂತಹ ಗಂಡಂದಿರೂ ಇದನ್ನು ಓದಿದರೆ ಖಂಡಿತ ಅವರಿಗೆ ತಮ್ಮ ಹೆಂಡತಿಯ ಬೆಲೆ ಗೊತ್ತಾದೀತು ಎನ್ನುವುದು ನನ್ನ ಅಭಿಪ್ರಾಯ.
ಸುಧಾಮ್ಮನವರು ಸದಾ ವಾಸ್ತವದ ವಿಷಯಗಳನ್ನು ಹೆಂಗಳೆಯರ ಮನಸ್ಸನ್ನು ಮುಖ್ಯವಾಗಿ ಎಳೆದು ಬರೆಯುತ್ತಾರೆ ಎನ್ನುವುದು ಮತ್ತೊಮ್ಮೆ ನನಗೆ ಖುಷಿ ತಂದಿದೆ. ಅವರಿಗೆ ನನ್ನ ತುಂಬು ಹೃದಯದ ನಮನಗಳು.