Friday, 29 April 2016

ಅಪ್ಪ ನೀ ಇಂದು ಹುಟ್ಟಿದ ದಿನ 
ಕವನ ಬರೆಯಲು ಬಯಸುತಿದೆ ನನ್ನ ಮನ 
ನನ್ನ ಪ್ರಾಣಕ್ಕಿಂತ ಹೆಚ್ಚಾಗಿರುವ ನಿನಗೆ 
ಏನೆಂದು ವರ್ಣಿಸಲಿ ಎಲ್ಲಿಂದ ಬರೆಯಲಿ 
ತೋಚದೇ ಕಂಗಾಲಾಗಿ ಕೂತಿರುವೆ 
ತಪ್ಪಿದ್ದಾಗ ತಿದ್ದಿ ಅತ್ತಾಗ ಮುದ್ದಿಸಿ 
ವಾತ್ಸಲ್ಯವೆಂಬ ಅಮೃತವ ಕುಡಿಸಿ ಬೆಳೆಸಿದೆ 
ಜಗದಲ್ಲಿ ನಿನಗಿಂತ ಹೆಚ್ಚು ನನಗ್ಯಾರಿಲ್ಲ 
ನೀ ಕೊಟ್ಟ ಪ್ರೀತಿಯನು ಮತ್ತಾರೂ ಕೊಡಲೂ ಸಾದ್ಯವಿಲ್ಲ 
ನಿನ್ನ ಹುಟ್ಟಿದ ದಿನ ನನ್ನ ಪ್ರಾರ್ಥನೆಯೊಂದೆ 
ನನ್ನುಸಿರು ಇರುವರೆಗೂ ನೀ ನಗುತಿರು 
ಪ್ರತೀ ಜನ್ಮದಲ್ಲೂ ನಿನ್ನ ಮಗಳಾಗೆಂದು ಹರಸುತಿರು 

Thursday, 28 April 2016

#ಆಂಗ್ಲ_ಸಂದೇಶದ_ಅನುವಾದ 
ನನ್ನ ಮೌನ ಹೃದಯ ಹೇಳುತಿದೆ 
ನನ್ನ ಉಪಸ್ಥಿತಿ ಕೆಲವೊಬ್ಬರಿಗೆ ನೋವಾಗಬಹುದು 
ಆದರೆ ಖಂಡಿತವಾಗಿ ನಾ ಹೇಳುವೆ 
ನನ್ನ ಅನುಪಸ್ಥಿತಿ ಯಾರಿಗೂ  ನೋವು ಮಾಡದು 
ಅದಕೆ ನಾ ಸ್ವಂತ ಆಯ್ಕೆಯಿಂದ ಏಕಾಂಗಿ ಆಗಿರುವೆ 

Wednesday, 27 April 2016

ನಿನ್ನ ನಿರಾಶೆಗೊಳಿಸಿದ ವ್ಯಕ್ತಿಯನ್ನು ದೂರುವುದಕ್ಕಿಂತ 
ಅವರಿಂದ ನಿರೀಕ್ಷಿಸಿದ್ದಕ್ಕೆ ನಿನ್ನ ನೀನು ದೂರಿಕೋ 
ಕಾರಣ ಅತೀ ನಿರೀಕ್ಷೆ ಇದ್ದಲ್ಲಿ ನಿರಾಶೆ ಕಟ್ಟಿಟ್ಟ ಬುತ್ತಿ 

Tuesday, 26 April 2016

#ಮೌನಿಯ_ಕವನ 
ಬಯಸುತಿದೆ ಮಾತು ಶಾಶ್ವತ ಮೌನ 
ಆದರೂ ನೂರಾರು ಭಾವಗಳಿಂದ ತುಂಬಿದೆ ಮನ 
ಮಾತು ಮೌನವಾದಮೇಲೆ ಹೇಳಲಿ ಏನನ್ನ 
ಅದಕ್ಕೆಂದೇ ಲೇಖನಿ ಹಿಡಿದು ಗೀಚುವೆ ಕವನ 

Monday, 25 April 2016

ಓ ಸೂರ್ಯ ಏಕಯ್ಯ ಈ ಕೋಪ 
ಸಾಕು ಮಾಡು ನಿನ್ನ ತಾಪ 
ಕ್ಷಮಿಸಿ ತಣ್ಣಗಾಗು ನಮ್ಮ ಪಾಪ 
ಬಳಲಿ ಬೆಂಡಾಗಿದೆ ಈ ಭೂಮಂಡಲ 
ಶಾಂತನಾಗಿ ಹಿಂತೆಗೆದುಕೊ ನಿನ್ನ ಕೆಂಡಾಮಂಡಲ 
ಮಳೆಯ ಹನಿಯೇ ಆಗಿದೆ ಎಲ್ಲರ ಹಂಬಲ 
ಭುವಿಗೆ ಚೆಲ್ಲು ಬರಿಯ ಬೆಳಕಿನ ಕಿರಣ
ಕರುಣೆ ತೋರಿ ಬದುಕಿಸಿ ಓ ಅರುಣ 

Wednesday, 20 April 2016

ಪ್ರೀತಿಯ ಪಲ್ಲವಿಯ ಬರೆಯಲು ಕುಳಿತಿದ್ದಾಗ 
ಸ್ನೇಹದ ಕರೆಯೊಂದು ಓಡೋಡಿ ಬಂತು 
ಆ ತುಡಿತಕ್ಕೆ ಒಳಗೊಟ್ಟು ಮರೆತೇಬಿಟ್ಟೆ ಪ್ರೇಮವ 
ಇನ್ನೆಂದೂ ನೋಡಲು ಸಾದ್ಯವಿಲ್ಲ ಅಂತಹ ಸ್ನೇಹವ   
ಕಾರಣ ನಾ ಪ್ರೀತಿಸುವೆ ಸ್ನೇಹವ ಪ್ರೀತಿಗಿಂತ ಹೆಚ್ಚು 
ಅದಕೆ ಏನೋ ಸ್ನೇಹಕ್ಕೆ ನನ್ನ ಕಂಡರೆ ಅಚ್ಚುಮೆಚ್ಚು 

Monday, 18 April 2016

ನೀ ನನ್ನ ಉತ್ಸಾಹದ ಚಿಲುಮೆಯೋ ಹೃದಯದ ಜ್ಯೋತಿಯೋ 
ಆತ್ಮದ ಶಾಂತಿಯೋ ಕಣ್ಣಿನ ದೃಷ್ಟಿಯೋ ಯಾವುದೂ ನಾ ಅರಿಯೇ 
ತನು ಮನಗಳಲ್ಲಿ ಬೆರೆತಿರುವ ನಿನ್ನನ್ನು ಬಿಟ್ಟಿರಲು 
ಇದ್ಯಾವ ಪರಿಯ ಅಸಾಹಯಕತೆಯು ಬೆನ್ನತ್ತಿ ಕಾಡುತಿದೆಯೋ 
ಏನೇ ಇದ್ದರೂ ನನ್ನ ವಿಧಿ ನೀನೆ ನನ್ನ ಬಾಳಿನ ನಿಧಿ 
ನಿಷ್ಕಲ್ಮಶ ಪ್ರೇಮದಿಂದ ಪೂಜಿಸುವೆ ನಾ ನಿನ್ನ 
ಎಲ್ಲಿದ್ದರೂ ಮರೆಯದೇ ಅಪ್ಪು ನೀ ನನ್ನ ಮನವನ್ನ 
ನೈದಿಲೆಯಂತ ನಿನ್ನ ನಯನದಲ್ಲಿ ಕಾಣುವೆ ಆ ದೇವರನ್ನು 
ಇದೊಂದೇ ನಾ ಅರಿತಿರುವೆ ಮತ್ತೆಲ್ಲವ ನಾ ಮರೆತಿರುವೆ