Saturday, 19 January 2013

ಹೂವು

ಹೂವೇ ನಿನ್ನ ಬದುಕೇ ಸುಂದರ 
ಬೆಳಗಿನ ಜಾವ ಮಂಜಿನ ಹನಿಗಳಿಂದ 
ಸುಂದರವಾಗಿ ಕಾಣುವೆ 

ನಗುವಿರದ ಮುಖವು ನಿನ್ನ 
ನೋಡಿದರೆ ಸಾಕು ಕ್ಷಣಮಾತ್ರದಲ್ಲೇ 
ನಗು ಅರಳುವುದು ಮೊಗದಲ್ಲಿ 

ಹೆಣ್ಣಿನ ಮುಡಿಗೆ ಚಂದ ನೀನು  
ಪ್ರೀತಿಯ ಭಾವಕ್ಕೆ ಬಣ್ಣ ನೀನು  
ಕವಿಗಳ ಕವಿತೆಗೆ ಸ್ಪೂರ್ತಿ ನೀನು 

ದೇವರ ಶಿರಕ್ಕೂ ಮುಡಿಸುವರು ನಿನ್ನನ್ನೇ  
ಚರಣ ಕಮಲಕ್ಕೂ ಇಡುವರು ನಿನ್ನನ್ನೇ  
ಎಂತಹ ಪುಣ್ಯ ಜೀವ ನಿನ್ನದು ಹೂವೆ 

ಬೆಳಗ್ಗೆ ಉದಯಿಸಿ ಸಂಜೆ 
ಮುಳುಗುವ ನಿನ್ನ ಬದುಕು ಎಷ್ಟು 
ಸುಂದರವೋ ಅಷ್ಟೇ ಸಾರ್ಥಕ

Wednesday, 16 January 2013

ಪ್ರೀತಿ ಮತ್ತು ವಿರಹ

ನಿನ್ನ ಸನಿಹವೆಷ್ಟು ಸುಂದರ  ಗೆಳೆಯ 
ನೀ ನಗಲು ಹೂವು ಕಂಡಂತೆ  
ನೀ ನುಡಿಯಲು ಮಧುರ ಸಂಗೀತದಂತೆ 
ಬಳಿ ನೀ ಬರಲು ಮಿಂಚು ಹರಿದಂತೆ 

ನನ್ನ ಸೆಳೆಯಿತು ನಿನ್ನ ಕಣ್ಣೋಟ 
ನಿನ್ನಲ್ಲಿ ಬೆರೆಯಿತು ನನ್ನ ಉಸಿರಾಟ 
ನೀ ಸುರಿಸುವ ಒಲವಿನ ಮಳೆಗೆ 
ಪ್ರೀತಿಯಾಗಿದೆ ನನ್ನ ಹೃದಯದ ಇಳೆಗೆ  

ನಿನ್ನ ಸ್ನೇಹದ ಪರಿಯೇನು ಪ್ರೀತಿಯ ಭಾವವೇನು 
ನನ್ನ ಬಾಳಲ್ಲಿ ತಂಗಾಳಿ ಬೀಸುತಿರುವೆ  
ಕನಸಲಿ ಬಂದು ಕಾಡುತಿರುವೆ 
ಮನಸಿನ ಆಸೆಯ ಕಲಕುತಿರುವೆ 

ನಿನ್ನಲ್ಲಿ ಕಳೆದ ಸುಮಧುರ ಕ್ಷಣಗಳ 
ಮತ್ತೆ ಮತ್ತೆ ನೆನೆಯುವ ಆಸೆ ನನ್ನದು 
ಸ್ವಪ್ನದಲ್ಲಿ ಕಂಡ ನಿನ್ನ ಮಡಿಲಲ್ಲಿ 
ಮತ್ತೆ ಮತ್ತೆ ಮಲಗುವಾಸೆ ನನ್ನದು 

ನನ್ನಿಂದ ದೂರಗದಿರು ಗೆಳೆಯ  
ನಾ ಕಳೆದುಕೊಲ್ಲಲಾರೆ ನಿನ್ನ ಸನಿಹ
ಬೀಸುವ ಗಾಳಿಯಂತೆ ನೀ ಓಡಬೇಡ 
ವಿರಹದಲ್ಲಿ ನನ್ನ ಬೇಯಿಸಿ ಕೊಲ್ಲಬೇಡ  




Tuesday, 8 January 2013

ಒಲವಿನ ವ್ಯಥೆ

ಮನದ ಪ್ರೀತಿಯ ಗಮನಿಸದೆ 
ಮುಖದ ಮೇಲಿನ ಪ್ರೀತಿಗೆ ಮುಗಿಬಿದ್ದೆ  ನೀನು 

ಮನದಲ್ಲಿ ಅಡಗಿದ್ದ ಆಳ 
ಭಾವನೆಯನ್ನು ಅರಿಯದೆ 
ಮುಖದಲ್ಲಿರದ ಮಂದ 
ಭಾವವನ್ನು ಹುಡುಕುತಿರುವೆ

ಕಾದಿದ್ದೆ ನನ್ನ ಹೃದಯದಲ್ಲಿ ನಿನ್ನ ತುಂಬಿಕೊಳ್ಳಲು 
ಹೊರಟೋದೇ ಏಕೆ ನನ್ನ ತೊರೆದು ನೀನು 

ಕಾಣದ ಪ್ರೀತಿಯ ಹುಡುಕದಿರು 
ಕಾಣುವ ಪ್ರೀತಿಯ ತೊರೆಯದಿರು 
ಸಿಕ್ಕ ಪ್ರೀತಿಯ ಬಿಟ್ಟು ಸಿಗದ ಪ್ರೀತಿಯ 
ಹುಡುಕುತ್ತ ಕೊರಗದಿರು 

ಒಲವ ಸುಧೆಯ ಹರಿಸುತಿರುವೆ ನಿನಗಾಗಿ ನಾನು 
ಕಣ್ಣೀರ ಸಾಗರದಲಿ ಮುಳುಗಿಸದಿರು ನನ್ನ ನೀನು 


Wednesday, 19 December 2012

ನಗುವಿನ ಮಾಯೆ

ನಿನ್ನ ನಗುವೇ ಎಷ್ಟು  ಸುಂದರ 
ಮನಸನ್ನೆ ನೋಯಿಸಿದರು ನೀ ನಗುವೇ 
ಪ್ರೀತಿಯ ಮಳೆ ಸುರಿಸಿದರು ನೀ ನಗುವೇ 
ಏನಿದು ನಿನ್ನ ನಗುವಿನ ಮಾಯೆ..???? 

ನಿನ್ನ ತುಟಿಯಂಚಲ್ಲಿ ಒಂದು ಕಿರುನಗೆಯ 
ನಾ ಕಂಡರೆ ಸಾಕು ನನ್ನ ಮನಸು ನಲಿಯುವುದು 
ಅದರಲ್ಲಿಯ ನೋವು ಮರೆಮಾಚುವುದು 
ಏನಿದು ನಿನ್ನ ನಗುವಿನ ಮಾಯೆ..???? 

ಅರಳುತಿರುವ ಹೂವಲ್ಲಿ ಹರಿಯುತಿರುವ ನೀರಲ್ಲಿ 
ನಾ ಕಾಣಲು ಪರಿತಪಿಸುವೆ ಆ ನಿನ್ನ ನಗುವ 
ಕನಸಲ್ಲೂ ಕಾಡುತಿದೆ ಆ ಮುದ್ದಾದ ನಗು 
ಏನಿದು ನಿನ್ನ ನಗುವಿನ ಮಾಯೆ...????

ಇರುಳ ಚಂದ್ರನಲ್ಲೂ  ಕಾಣುತಿದೆ ನಿನ್ನ ಮೊಗವು 
ಆ ಚಂದ್ರನಿಗೂ ಸಾಟಿಯಾಗುತ್ತಿಲ್ಲ ನಿನ್ನ ನಗುವು
ನಿನ್ನ ನಗುವಿಗೆ ನಾನೇ ಅಭಿಮಾನಿಯಾಗಿರುವೆ 
ಏನಿದು ನಿನ್ನ ನಗುವಿನ ಮಾಯೆ....????    

Saturday, 15 December 2012

ಗೆಳೆಯನ ಅಗಲಿಕೆ

ಮನಸೇಕೋ ಚಡಪಡಿಸುತ್ತಿದೆ ಇನಿಯ 
ನೀನಿಲ್ಲವೆಂದು ನನ್ನ ಸನಿಹ 
ಕಾಣಿಸದೆ ನಿನಗೆ ಈ ಅಗಲಿಕೆಯ ನೋವ 
ತಡೆಯಲಾಗುತ್ತಿಲ್ಲ ನನಗೆ ಈ ಮನಸಿನ ಭಾರ 

ಇನ್ನೆಷ್ಟು ದಿನ ಕಾಯಲಿ ನಿನಗೆ ನಾನು 
ನಿನ್ನನ್ನು ಕನವರಿಸುತ್ತಲೇ ಜೀವನ ಸವಿಸಲೇ ನಾನು 
ಮಾತಿಲ್ಲದೆ ಮೌನವಾದರೆ ನನ್ನ ಕಂಬನಿ ನಿಲ್ಲುವುದೇ 
ಹೀಗೇಕೆ ಕೊಲ್ಲುತಿರುವೆ ನೀ ನನ್ನ 

ಭಾವನೆಗಳ ಲೋಕದಲ್ಲೇ ಬದುಕುತಿರುವೆ ನಾನು 
ನಿನ್ನ ಪ್ರತಿಸ್ಪಂದನವನ್ನು ಕಾಯುತ್ತ 
ಆದರೆ ಈ ನಿನ್ನ ಮೌನವನ್ನು ಹೇಗೆ ಸಹಿಸಲಿ 
ನಿನ್ನ ಹೃದಯಕ್ಕೆ ಅರ್ಥವಾಗುತ್ತಿಲ್ಲವೇ ನನ್ನ ವೇದನೆ 

ಬರಿದಾದ ನನ್ನ ಬಾಳಲೀ ಪ್ರೀತಿಯ ಸುಖವನ್ನು 
ನೀನೇಕೆ ತಂದೆ ಆ ಪ್ರೀತಿಯ ಆನಂದವನ್ನು ಅನುಭವಿಸುವ 
ವೇಳೆಗೆ ನೀನೇಕೆ ಮತ್ತೆ ನನ್ನಿಂದ ದೂರವಾಗುತ್ತಿರುವೆ 
ನನ್ನ ಭಾವನೆಗಳಿಗೆ ನಿನ್ನಲ್ಲಿ ಬೆಲೆಯೇ ಇಲ್ಲವೇ 

ನೀನಿಲ್ಲದ ನನ್ನ ಬಾಳು ಕಲ್ಪನೆಗೂ ಎಟುಕದು 
ಆಗದು ಗೆಳೆಯ ನೀನಿರದೇ  ನಾನು ಬಾಳಲು 
ಈಗಲೇ ನೆನಪಿಸಿಕೊ ನನ್ನ 
ನಾನು ಮಣ್ಣಲ್ಲಿ ಮಣ್ಣಾಗುವ ಮುನ್ನ 



Saturday, 8 December 2012

ಪ್ರೇಮದ ಹಾತೊರಿಕೆ

ನೀ ನಡೆವ ಹಾದಿಯ ಹೂವಿಂದ ಅಲಂಕರಿಸಿ 
ನೀ ನುಡಿವ ನುಡಿಯನ್ನು ಮುತ್ತಿಂದ ಪೋಣಿಸಿ 
ನಿನ್ನೊಲುಮೆಯ ಪ್ರೀತಿಗೆ ಭಾವಗಳ ಬಣ್ಣ ತುಂಬಿ 

ನಿನ್ನೊಡಲ ಉಸಿರಾಗಿ ಪ್ರೆಮಗಂಗೆಯನು ಹರಿಸುವೆ

ಕಂಡ ಕನಸನ್ನು ಬೆನ್ನಟ್ಟಿ ಹೋಗುವ ಬದಲು
ಕನ್ನಡಿಯ ಮುಂದೆ ನಿಂತು ಕಲ್ಪನೆಯಲ್ಲೇ ಮೈಮರೆತು
ನಿಂತ ನನ್ನ ಭಾವನೆಗಳಿಗೆ ಜೀವ ತುಂಬಿದೆ ನೀನು
ಮನಸಾರೆ ನಿಷ್ಕಲ್ಮಷವಾಗಿ ಪ್ರೀತಿಸುವೆ ನಿನ್ನ ನಾನು

ನಿನ್ನ ಒಲವ ಸವಿನೆನಪಲ್ಲಿ ಸವಿ ಸ್ವಪ್ನವ ಕಾಣುತ್ತ
ಕವಿತೆಗಳ ಗೀಚುತ್ತ ಪ್ರತಿ ದಿನ ಪ್ರತಿ ಕ್ಷಣ
ಇಂಪಾದ ಪ್ರೇಮ ನಾದವ ಹರಿಸುತಿರುವೆ
ನಿನ್ನ ಎದುರು ನೋಡುತ್ತಾ ಓ ಗೆಳೆಯ....

Monday, 3 December 2012

ಏನು ಉಡುಗೊರೆ ಕೊಡಲಿ ನಾ ನಿನಗೆ....??



ನಿನ್ನಯ ಒಲವಿಗೆ ಉಡುಗೊರೆಯಾಗಿ
ನಾನೇನು ಕೊಡಲಿ ಗೆಳೆಯ
ನನ್ನ ನೋವಿನ ಕಣ್ಣೀರನ್ನು
ನಿನ್ನ ಪ್ರೀತಿಯ ಪನ್ನೀರಲ್ಲಿ ತೇಲಿಸಿದೆ

ಕಲ್ಲಂತೆ ಇದ್ದ ನನ್ನ ಮನಸಲ್ಲಿ
ಭಾವನೆಗಳ ಜೊತೆಯಲ್ಲಿ ಕನಸನ್ನು
ತುಂಬಿ ನಿನ್ನ ಪ್ರೇಮದ ಕಾರಂಜಿಯಲ್ಲಿ
ನನ್ನ ನೆನೆಯುವಂತೆ ಮಾಡಿದೆ

ನಿನ್ನ ಪ್ರೀತಿಯ ಅಪ್ಪುಗೆಯ
ಬಂಧನದಿಂದ ನನ್ನ ಬಂಧಿಸಿ
ನಿನ್ನ ಕರಗಳಿಂದ ನನ್ನ ಕಣ್ಣೀರನ್ನು
ಕರಗಿಸಿ ಪ್ರೀತಿಯ ಮುತ್ತನ್ನು ಹರಿಸಿದೆ

ನಿನ್ನ ಪ್ರೀತಿಯ ಪರಿಯ ಏನೆಂದು
ಬಣ್ಣಿಸಲಿ ನಾನು ಪದಗಳೇ ಸಾಲದಾಗಿದೆ
ನನಗೇನು ತೋಚದೆ ಈ ಕವನವನ್ನೇ
ಉಡುಗೊರೆಯಾಗಿ ನೀಡುತಿರುವೆ

ನೂರಾರು ಬಣ್ಣದ ಕನಸನ್ನು ಒಂದೇ
ಕವಿತೆಯಲಿ ಹೇಳಲು ಸಾದ್ಯವೇ
ನಿನ್ನ ಒಲವಿನ ಧಾರೆಗೆ ಕವಿತೆಯಾಗಿ
ನಾನು ಹರಿದಿರುವೆ ಸ್ವೀಕರಿಸು ಗೆಳೆಯ