Tuesday, 18 November 2014

ನನ್ನ ಮನದ ಮಾತೆಲ್ಲ ನಿನ್ನ ದನಿಯಲ್ಲೇ ಬೆರೆತು 
ಇಂಪಾದ ಪ್ರೀತಿಯ ನಾದವಾಗಿ ಹರಿಯುತ್ತಿದೆ 
ಸಾಗರದ ಅಲೆಯೂ ಕೂಡ ನಾಚಿ ಹಿಂದೆ ಹೋಗುತಿದೆ 
ನನಗಾಗಿ ಸುರಿಯುತಿರುವ ನಿನ್ನ ಒಲವಿನ ರಭಸಕೆ 
ನಾದಗಂಗೆಯ ನಿನಾದಕೆ ಸೋತಿರುವೆ ನಾ ಇಂದು 
ಪ್ರೇಮಗಂಗೆಯ ಹರಿಸುವೆ ನಿನಗಾಗಿ ಎಂದೆಂದೂ 


Monday, 17 November 2014

ಪ್ರೀತಿ ಬೆರೆತಾಗ ಬದುಕು ಹಸಿರಂತೆ ಕಂಗೊಳಿಸಿದರೆ 
ದ್ವೇಷ ಬಂದಾಗ ಬಾಳು ಕೆಸರಂತೆ ಕೊಳೆಯುವುದು 
ತನ್ನತನವೆಂಬ ಅಹಂ ಬಿಟ್ಟು ಅನ್ಯರ ಅರಿತು ಬೆರೆತರೆ 
ಬಾಳೊಂದು ಭಾವಗೀತೆಯಂತೆ ಭಾಸವಾಗುವುದು 
ಹೃದಯದಲಿ ಕಟ್ಟಬೇಕು ನಂಬಿಕೆಯೆಂಬ ಹರಕೆ 
ಕೊನೆ ಉಸಿರಿರುವರೆಗೂ ಅದೇ ಜೀವನದ ದೊಡ್ಡ ಕಾಣಿಕೆ 

Monday, 3 November 2014

ನೈದಿಲೆಯ ನಗುವು ನೇಸರನ ನಯನವ ಸೇರಿದಾಗ 
ಶಶಿಯ ಕಿರಣಗಳು ಅರಳಿದ ಹೂಗಳ ಚುಂಬಿಸುವಾಗ 
ಕಪ್ಪು ಕಾರ್ಮೋಡ ಕದಡಿ ಇಳೆಗೆ ಸುರಿದಾಗ 
ಆಗುವ ಆನಂದ ಆಹಾ ನಿಸರ್ಗವೇ ನಿನಗೆ ಹೇಳಲು 
ಬಯಸುತ್ತಿದೆ ನನ್ನ ಮನ ಕೋಟಿ ಕೋಟಿ ನಮನ

Monday, 27 October 2014

ಮನಸಿನ ದುಗುಡವೆಲ್ಲ ಮಂಜಿನಂತೆ ಕರಗಿದೆ 
ಬಾಳಲಿ ಆಸೆಗಳು ಕಾರಂಜಿಯಂತೆ ಚಿಮ್ಮುತಿವೆ 
ಹಳೆಯ ಕಹಿನೆನಪ ಮರೆತು ಹೊಸ ಸವಿನೆನಪುಗಳ 
ಸ್ವಾಗತಕ್ಕೆ ಮನವು ಸಜ್ಜಾಗುತಿದೆ 
ಹೇಗಿದ್ದರೂ ಎಲ್ಲಿದ್ದರೂ ಹಂಬಲವೊಂದೇ  
ಸಂತಸದ ಚಿಲುಮೆ ಚಿಮ್ಮುತಿರಲಿ 
ಬಾಳಲಿ ಪ್ರೀತಿ ನಂದಾದೀಪದಂತೆ ಬೆಳಗುತಿರಲಿ 

Thursday, 16 October 2014

ಮರುಭೂಮಿಯಂತೆ ಸುಡುತ್ತಿದೆ ನನ್ನ ಮನವು ಇಂದೇಕೋ
ಪದೇ ಪದೇ ನೋವುಗಳೆಂಬ ರವಿಯ ಕಿರಣಗಳು ಬೀಳುತ್ತಿವೆ 
ಶಾಖದ ಕಿರಣಗಳು ಮನಸಿನ ಮರುಭೂಮಿಗೆ ಬಿದ್ದು ಬಿದ್ದು ನಗುತ್ತಿವೆ 
ನೋವಿನ ಅಲೆಯಿಂದ ಬಿಡಿಸಿಕೊಳ್ಳಲು ಎದ್ದು ಎದ್ದು ಸೋಲುತಿರುವೆ 
ನನ್ನ ಸೋಲಿಗೂ ಕೊನೆಯಿಲ್ಲ ನೋವಿಗೂ ಕೊನೆಯಿಲ್ಲ 
ಅಂದಮೇಲೆ ಈ ಉಸಿರೇಕೆ ನಿಲ್ಲುತ್ತಿಲ್ಲ .... ??????????

Friday, 10 October 2014

ನನ್ನ ಹೃದಯದ ಕದವ ತೆಗೆದು ಬಲಗಾಲಿಟ್ಟು ಬಂದು 
ಮನಸೆಂಬ ಮಲ್ಲಿಗೆಗೆ ಮುತ್ತೆಂಬ ಪರಿಮಳವ ಸುರಿಸಿದೆ 
ನನ್ನ ಕಣ್ಣಿನ ರೆಪ್ಪೆಯಲಿ ಒಲವಿನ ಮಳೆಯ ಹರಿಸುತ 
ನಿನ್ನ ತೋಳೆಂಬ ಹಾರದಲಿ ನನ್ನ ಶಾಶ್ವತವಾಗಿ ಬಂಧಿಸಿದೆ 
ನನ್ನ ತನು ಮನದ ಉಸಿರಲಿ ಹಸಿರಂತೆ ಬೆರೆತು 
ಬಾಳ ಜ್ಯೋತಿಯಾಗಿ ಸದಾ ಸೂರ್ಯನಂತೆ ಮಿಂಚುತಿರುವೆ

Thursday, 9 October 2014

ಮನಸಿನ ಮಾತುಗಳೆಲ್ಲ 
ಮನಸಲ್ಲೇ ಮರಣ ಹೊಂದುತ್ತಿವೆ  
ಕನಸಿನ ಕೂಸುಗಳೆಲ್ಲ 
ಕರುಳಲ್ಲೇ ಕೊನೆಯುಸಿರೆಳೆಯುತ್ತಿವೆ