Friday, 10 October 2014

ನನ್ನ ಹೃದಯದ ಕದವ ತೆಗೆದು ಬಲಗಾಲಿಟ್ಟು ಬಂದು 
ಮನಸೆಂಬ ಮಲ್ಲಿಗೆಗೆ ಮುತ್ತೆಂಬ ಪರಿಮಳವ ಸುರಿಸಿದೆ 
ನನ್ನ ಕಣ್ಣಿನ ರೆಪ್ಪೆಯಲಿ ಒಲವಿನ ಮಳೆಯ ಹರಿಸುತ 
ನಿನ್ನ ತೋಳೆಂಬ ಹಾರದಲಿ ನನ್ನ ಶಾಶ್ವತವಾಗಿ ಬಂಧಿಸಿದೆ 
ನನ್ನ ತನು ಮನದ ಉಸಿರಲಿ ಹಸಿರಂತೆ ಬೆರೆತು 
ಬಾಳ ಜ್ಯೋತಿಯಾಗಿ ಸದಾ ಸೂರ್ಯನಂತೆ ಮಿಂಚುತಿರುವೆ

Thursday, 9 October 2014

ಮನಸಿನ ಮಾತುಗಳೆಲ್ಲ 
ಮನಸಲ್ಲೇ ಮರಣ ಹೊಂದುತ್ತಿವೆ  
ಕನಸಿನ ಕೂಸುಗಳೆಲ್ಲ 
ಕರುಳಲ್ಲೇ ಕೊನೆಯುಸಿರೆಳೆಯುತ್ತಿವೆ 

Friday, 26 September 2014

ಇರುಳ ಕನಸುಗಳೆಲ್ಲ ಹಗಲು ನನಸಾದರೆ 
ರಾತ್ರಿ ಸುರಿವ ಮಳೆಯಿಂದ ಹಗಲು ಭೂಮಿ ತಂಪಾದಂತೆ 
ಆಗಸದಲ್ಲಿ ಗುಡುಗಿನ ಆರ್ಭಟ ಅತೀಯಾದರೆ 
ನಸುಕಿನಲಿ ಬೀಸುವ ತಂಗಾಳಿ ಮನಸಿಗೆ ಹಿತವಾದಂತೆ 
ಭುವಿಯಲಿ ಮಳೆ ಸುರಿದು ನಿಂತ ತಂಪಾದ ಕ್ಷಣ 
ಮನಸಿಗೆ ಅನಿಸುವುದು ಶುರುವಾಗಿದೆ ಸುಂದರ ಸುದಿನ

Monday, 22 September 2014

ಕಣ್ಣಿಂದ ಜಾರಿದ ಹನಿಯೊಂದು ಹೇಳುತಿದೆ 
ಕೊಲ್ಲಬೇಡ ಮನವೇ ನಿನ್ನ ಸುಂದರ ಭಾವಗಳ 
ಸತ್ತಮೇಲು ಬಿಡುವುದಿಲ್ಲ ನಿನ್ನ ನೋವುಗಳ 
ಉಸಿರಾಡುವ ಗೊಂಬೆಯು ನೀನಲ್ಲ 
ನಿನ್ನ ನಂಬಿದ ಜೀವಕೆ ನೀನೆ ಜಗವೆಲ್ಲ 

Wednesday, 13 August 2014

ಮನಸಾರೆ ಮನಸಿಂದ ಮನದಾಳದಲಿರುವ ಮನಸನು 
ಮನಸಿಗಾಗಿ ಮರೆತು ಹೋಯ್ತು  ಪ್ರೀತಿ 
ಅಂದು ಹೋದ  ಆ ಮನಸು ಮತ್ತೆ ಸಿಗುವುದೋ 
ಇಲ್ಲವೋ  ಎಂದು ಕಾಡುತಿದೆ ಭೀತಿ 
ಬಾಳಿನ ಜ್ಯೋತಿಯು ನೀನಾಗಿ ಬಂದಾಗ  
ನನ್ನೆದೆಯಲ್ಲಿ ಒಲವಿನ ಚಿಲುಮೆಯು ಉಕ್ಕಿ ಹರಿಯುತಿದೆ 
ನೀ ಬಂದ ಘಳಿಗೆ ನನ್ನ ಮೊಗದಲ್ಲಿ ಬರಿ ನಗುವೇ 
ನೀ ಬಳಿಯಿದ್ದ ಸಮಯವೆಲ್ಲ ಸಂತಸದ ಹೊನಲೇ 
ಪ್ರತೀ ಕ್ಷಣ ನನ್ನ ಉಸಿರು ಹೇಳುವುದೊಂದೇ ನಾ ಹೇಗಿದ್ದರೂ 
ಎಲ್ಲಿದ್ದರೂ ನಿನಗಾಗಿ ಬಾಳಬೇಕು ನಿನ್ನ ಮುದ್ದಿನ ಮನದನ್ನೆಯಾಗಿ 

Wednesday, 6 August 2014

ಬಿತ್ತುವ ಆಸೆಯಾಗಿದೆ ಪ್ರೀತಿಯ ಸಸಿಯ 
ನನ್ನ ಹೃದಯದ ಇಳೆಯಲ್ಲಿ
ಹೇಗೆ ಬರಿಸಲಿ ಆ ಸಸಿಯ ಬೆಳೆಸುವ 
ಒಲವಿನ ಮಳೆಯ
ನನ್ನ ಪ್ರೀತಿ ತುಂಬಿದ ಕಣ್ಣಿನ ಹನಿಗಳು 
ಆಗಿವೆ ಇಂದು ಕಾರ್ಮೋಡ
ಅದು ಕರಗಿ ಮಳೆ ಸುರಿಸುವರಿಗೂ 
ದೂರಾಗದು ನನ್ನ ಮನದ ದುಗುಡ
ಬೇಗನೇ ಸುರಿ ನೀ ಸ್ವಾತಿಮುತ್ತಿನ 
ಹನಿಯಾಗಿ ಹೃದಯದ ಇಳೆಗೆ 
ಶಾಶ್ವತವಾಗಿ ಬೇರೂರಲು 
ನನ್ನ ಪ್ರೀತಿಯ ಸಸಿಗೆ